೧. ಕನ್ನಡ ಶಾಸನಗಳಲ್ಲಿ ಚಾಳುಕ್ಯಮ್ ಕದಂಬಕುಲ, ಚೋಳಕುಲ, ಹೊಯ್ಸಳ, ಗಂಗವಂಶ, ರಾಷ್ಟ್ರಕೂಟ ಇಂಥ ದೊಡ್ಡ ರಾಜವಂಶಗಳಲ್ಲದೆ ಸಗರ ಮಣಲೆರಕುಲ, ಸಾದಕುಲ, ವೈಶ್ಯಕುಲ, ಮೋರಕಕುಲ, ವಾಜಿಕುಲ, ಖಚರೆಕುಲ, ಚತುರ್ಥಕುಲ – ಮೊದಲಾದ ಹತ್ತಾರು ಸಣ್ಣಪುಟ್ಟ ಮನೆತನಗಳ ವಿವರೋಲ್ಲೇಖಗಳೂ. ಸಿಗುತ್ತವೆ. ಈ ಬಗೆಯ ಚಿಕ್ಕಪುಟ್ಟ ಕುಲಗಳಲ್ಲಿ ಕತ್ತಲೆಯ ಕುಲವೂ ಒಂದು. ಈ ಕತ್ತಲೆ ಕುಲವು ಇದುವರೆಗೆ ಎಲ್ಲಿಯೂ ಪ್ರಸ್ತಾಪಿತವಾಗಿಲ್ಲ, ಚರ್ಚೆಗೆ ಒಳಗಾಗಿಲ್ಲ. ನೆಲದಮರೆಯ ನಿದಾನದಂತೆ ಕತ್ತಲೆಕುಲದ ಇತಿಹಾಸ ಶಾಸನ ನಿಕ್ಷಪ್ತದಲ್ಲಿ ಅಡಗಿ ಕುಳಿತಿದೆ. ನಾಲ್ಕೈದು ಪ್ರಮುಖ ಶಾಸನಗಳಲ್ಲಿನ ಆಧರಿಸಿ ಕತ್ತಲೆಕುಲದ ವಿಚಾರವಾಗಿ ಕೆಲವು ಚಾರಿತ್ರಿಕ ಮಾಹಿತಿತಗಳನ್ನು ಪೂರೈಸುವುದು ಈ ಹಂಪ್ರಬಂಧದ ಉದ್ದೇಶ.

೧.೧. ಕತ್ತಲೆಕುಲದ ಕರುಳ ಬಳ್ಳೆ ಇನ್ನೂರುವರ್ಷಗಳ ಉದ್ದಗಲಗಳಲ್ಲಿ ಹರಡಿಕೊಂಡಿತ್ತೆಂದು ಸಾಬೀತು ಪಡಿಸಲು ಶಾಸನಗಲ ಸಾಮಾಗ್ರಿ ದೊರೆಯುತ್ತದೆ:

೧. ಎ.ಇ.೧೫, ೨೩.೧೦೭೧-೭೨ ಗಾವರವಾಡ – ಅಣ್ಣಿಗೆಱೆ (ಧಾಜಿ/ಗದಗ ತಾ) ಪು. ೩೩೭-೪೮

೨. ಸೌ.ಇ.ಇ.೧೫, ೨೧೪.೧೧೯೯. ಗದಗ

೩. ಎ.ಇ.೧೫, ೩೪೧. ೦೧೦೭೨

೪. ಸೌ.ಇ.ಇ.೧೫, ೬೩೭. ಸು. ೧೨-೧೩ ಶ. ಜಾವೂರು (ಧಾ ಜಿ/ನವಲಗುಂದ ತಾ) ಪು. ೪೦೮

೫. ಸೌ.ಇ.ಇ.೧೧-೧, ೪೫. ೯೮೦. ಕುರಹಟ್ಟಿ (ಧಾಜಿ/ನವಲಗುಂದ ತಾ) ಪು. ೩೦ – ೩೨

೨. ‘ಕತ್ತಲೆ’ ಕುಲದ ಮೊದಲ ಹಾಗೂ ಮೂಲ ರೂಪ ‘ಕೞ್ತಲೆ’ ಕುಲ, ಅದರ ತರುವಾಯದ ರೂಪ ‘ಕರ್ತ್ತಲೆ’ ಕುಲ, ಅದರ ಬೆಳವಣಿಗೆಯ ಕಡೆಯ ರೂಪ ‘ಕತ್ತಲೆ’ ಕುಲ. ಕೞ್ತಲೆ – ಕರ್ತ್ತಲೆ – ಕತ್ತಲೆ ಎಂಬ ಮೂರೂ ರೂಪಗಳು ಮತ್ತು ಪ್ರಯೋಗಗಳು ಅವರ ವಾಂಶಿಕ ವಿವರಗಳನ್ನೊಳಗೊಂಡ ಮೇಲ್ಕಂಡ ಶಾಸನಗಳಲ್ಲಿಯೇ ಸಿಗುತ್ತವೆ.

೩. ಕತ್ತಲೆ ಕುಲದ ಸಂಬಂಧವಾಗಿ ಮೊದಲ ಮಾಹಿತಿಗಳನ್ನು ಒದಗಿಸುವ ಪ್ರಾಚೀನ ಶಾಸನವೆಂದರೆ ಕುರಹಟ್ಟಿ (ಕಾರಣಗುರಿಪಟ್ಟಿ) ಯ ಶಾಸನ. ಈ ಶಾಸನದಲ್ಲಿ [ಸೌ.ಇ.ಇ.೧೧-೧, ೪೫.೯೮೦] ರೇವನ್ತ, ಕೆಂಚ, ಸಿರಿ ಮುದ್ಧ, ಪಿರಿಯಕೋಟಿಗ ಗಾವುಣ್ಡ, ಪಿರಿಯ ಆಯ್ಚ, ತೊಣ್ಡ ಮತ್ತು ಕಾಳಿಧುರಂಧರ ಎಂಬುವರನ್ನು ಪರಿಚಯಿಸುವ ಎಂಟು ಕಂದ ಪದ್ಯಗಳೂ ಒಂದು ತ್ರುಟಿತವೃತ್ತವೂ ಇದೆ. ವ್ಯಾಖ್ಯಾನ ನಿರಪೇಕ್ಷವೂ ಸ್ವಯಂ ಪ್ರಕಾಶವೂ ಆದ ಆ ಕಂದ ಪದ್ಯಗಳನ್ನು ನೇರವಾಗಿ ಯಥಾವತ್ತಾಗಿ ಉದಾಹರಿಸಿದೆ :

ಕತ್ತಲೆ ಕುಲ ವರಿಷ್ಠರ ವಂಶಾವಳಿ ಸೌ.ಇ.ಇ. ೧೧-೧, ೪೫.೯೮೦. ಕುರಹಟ್ಟಿ (ಧಾಜಿ/ನವಲ್ಗುಂದ)

ಶ್ರೀಮದ್ರವಿಜಸ್ಫುರದುರು
ಧಾಮಂ ರೇವನ್ತನಾತನನ್ವಯದೊಳ್ಸಂ
ಗ್ರಾಮಜಯಿ ಕೆಂಚನೊಬೋನಿ
ಳಾ ಮಹಿತಂ ವೀರನರ್ಕ್ಕಸುತನಿನುದಾರ[೦]
||   [ಸಾಲು : ೧-೨]

            ಪಿಡಿದಡಸಿ ನವಿಲಕೊನ್ದಡಿ
ಗಿ[ಡೆ]ತಳ್ತಿಕ್ಕಿ ಬೇಡ ವಡೆಯಂ ಬಲ್ಲಾ
ಳ್ಪಡೆದಂ ಬೆಳ್ವಲಮಂ ನೋ
ಳ್ಪ[ಡೆ] ಮುನ್ನಂ ಬಳಿಕ್ಕೆ ನೆಲೆ ನವಿಲ್ಗುಂದಪುರಂ
||         [೨-೪]

            ಮೇರ್ತ್ತಲೆಯೆನಿಸಿದೊಂ ಕಲಿ
ತೊಱ್ತುಳಿದುಳಿದಿಕ್ಕೆ ಪರೆಯ ಭಾನೂದಯದೊ
ಳ್ಕರ್ತ್ತಲೆಯನ್ತಿರೆ ರಿಪುಗ
ಳ್ಕರ್ತ್ತಲೆ ವೆಸರಾದುದಾತನೊಕ್ಕಲ್ವೆಸರುಂ
||                [೪-೬]

            ಸಿರಿಮುದ್ಧನೆಂಬನಾತನ
ಪಿರಿಯ ಮಗಂ ನೆಗೞ್ದನತನುಭುಜವಿಕ್ರಮನೇ
ದೊರೆಯರ ಮಾತನಭುಜಬಲ
ದೊರೆಗೆ ವರಲ್ನೆಱೆಯರೇಂ ಪ್ರತಾಪಿಯೊ ಮುದ್ದಂ
||     [೬-೮]

            ಅವರನ್ವಯ ತಿಳಕಂ ಲೋ
ಕವಿಶ್ರುತಂ ಪಿರಿಯ[ಕೋ] ಟಿ ಗಾವುಣ್ಡಂ ಸಂ
ಭವಿಸಿದನಾತನ ಮಾಡಿದ
ಶಿವಗೃಹ ಮು[೦ ಜೈ] ನ ಸಾಲೆಯುಂ ಭೂವಿದಿತ
||        [೮-೧೦]

            ನಯಮಂ ಮೆಱೆವಂ ತತ್ಸುತ
ನಯನಾಯಂ ಪರನೆನಿಸಿ ನೆಗೞ್ದ ಪಿರಿಯಾಯ್ಚನನಾ
ಶ್ರಯಣೀಯನಾದನಾ ಕ್ಷ
ತ್ರಿಯಾದಿಗಂ ಸಕಳ ಸಮಯಿ [ಗಂ ಬು] ಧ ಜನಕಂ
||         [೧೦-೧೨]

            ಚಣ್ಡ ಭುಜವಿಕ್ರಮಂ ಭೂ
ಮಣ್ಡಲ ವಿಖ್ಯಾತನಾತನಿಂ ಬಳಿಕಂ ಗಾ
ವುಣ್ಡಿಗೆ ನಿನ್ದನಾಹವಂ
ಶೌಣ್ಡಂ ತೊಣ್ಡಂ ತದನ್ವವಾಯನಜೇಯಂ
||              [೧೨-೧೩]

            ಪಿರಿಯಮಗಂ ಕಾಳಿಧುರಂ
ಧರನಾತಂ ತೊಣ್ಡಿಗಂಗೆ ಮೆಚ್ಚಿಸಿದೋಂ ಕ
ನ್ನರದೇವನ ನಾಡೊಡೆಯ
ರ್ಪ್ಪರಿಣತರಾರ್ಕ್ಕನ್ದುಕ [ಕ್ಕೆ] ರೇವನ್ತನನೇಂ
||              [೧೩-೧೫]
…………ಬೆಳಗುವ ನೆಳೆಯೊಳ್ – ಬೆಳ್ವಲಾದಿತ್ಯದೇವಂ
||

ಕ್ರಿ.ಶ. ೯೮೦ ರಲ್ಲಿದ್ದ (ತೊಣ್ಡನ ಹಿರಿಯಮಗ) ಕಾಳಿಧುರಂಧರನು ತನ್ನ ರಣಸಾಹಸದಿಂದ ರಾಷ್ಟ್ರಕೂಟರ ಮುಮ್ಮಡಿಕೃಷ್ಣ (೯೩೯-೬೭) ಚಕ್ರವರ್ತಿಯನ್ನು ಸಹ ಮೆಚ್ಚಿಸಿದ್ದನು. ಈತನ ಹೆಸರು ಕಾಳಿ (ಗ) ಎಂದು ಮಾತ್ರ ಇದ್ದು, ಕಾಳಿ (ಧುರಂಧರ) ಎಂಬುದು ಬಿರುದಾಗಿರುವ ಸಾಧ್ಯತೆಯಿದೆ.

೪. ಈ ಕತ್ತಲೆ ವಂಶದ ಮೂಲ ಪುರುಷ ರೇವನ್ತ. ಈತನು ಕರ್ಣನಂತೆ ಶ್ರೇಷ್ಠ ಮನೆಯವನಾಗಿದ್ದಾನು (ರವಿಜ ಸ್ಪುರತ್ ಬದಲು ದಿವಿಜಸ್ಫುರತ್ ಎಂದೂ ಪಾಠವಿದ್ದಿರಬಹುದು). ಇವರ ವಂಶದಲ್ಲಿ ರೇವನ್ತ ನಾದಮೇಲೆ, ಕೆಂಚನ್ – ಎಂಬೋನ್ (ಪೂರ್ವದ ಹಳೆಗನ್ನಡ ಭಾಷಾಪ್ರಯೋಗ) ಉದಾರ ಚರಿತ ಹಾಗೂ ಪರಾಕ್ರಮಿ ಹುಟ್ಟಿದನು. ಈ ಕೆಂಚನು ನವಿಲುಗಳನ್ನು ಕೊಲ್ಲುತ್ತಿದ್ದ ಬೇಡರ ಪಡೆಯನ್ನು ಹತ್ತಿಕ್ಕಿ ಬೆಳ್ವಲವನ್ನು ಪಡೆದನು, ಅಲ್ಲಿಂದ ಮುಂದೆ ‘ನವಿಲುಗುಂದ ಪುರ’ ವು ಈ ಕತ್ತಲೆ ವಂಶದವರ ನೆಲೆವೀಡಾಯಿತು. ಕೆಂಚನ ದೊಡ್ಡಮಗ ಸಿರಿಮುದ್ದನಾದ ಮೇಲೆ ಅವರ ಅನ್ವಯದಲ್ಲಿ ತಿಳಕದಂತೆ ಬಂದವನು ಹಿರಿಯ ಕೋಟಿಗಾವುಣ್ಡ, ಆಮೇಲೆ ಹಿರಿಯಆಯ್ಚನೂ, ತೊಣ್ಡನೂ, ತರುವಾಯ ಕಾಳಿಧುರಂಧರನೂ ಮಿಂಚಿದರು. ಕಾಳಿಧುರಂಧರನು ರಟ್ಟರ ಮುಮ್ಮಡಿ ಕೃಷ್ಣನ ಅಚ್ಚುಮೆಚ್ಚಿನ ಕದನ ಕಲಿಯಾಗಿದ್ದನು.

೫. ಕತ್ತಲೆ ಕುಲದ ಮುಂದಾಳು – ಮೇಲಾಳುಗಳ ಪರಿಚಯ ಕ್ರಿ.ಶ. ೯೮೦ ರವರೆಗೆ ಧಾರವಾಡ ಜಿಲ್ಲೆ ಗದಗ ತಾಲ್ಲೂಕಿನ ಕುರಹಟ್ಟಿಯ ಶಾಸನದಲ್ಲಿ ಸಿಗುತ್ತದೆ; ಅಲ್ಲಿಂದ ಮುಂದಿನ ಈ ವಂಶದ ನಾಯಕರ ಚರಿತೆಯು, ಅದೇ ಜಿಲ್ಲೆ ಮತ್ತು ತಾಲ್ಲೂಕಿಗೆ ಸೇರಿದ ಗಾವರವಾಡ ಶಾಸನದಲ್ಲಿ ಸಿಗುತ್ತದೆ [ಎ.ಇ.೧೫, ೨೩.೧೦೭೧-೭೧.೦ ಪು. ೩೩೭-೪೮]:

ಸಾಲು : ೪೪ ಸ್ವಸ್ತಿ ಸಮಧಿಗತ ಪಂಚ ಮಹಾಶಬ್ದ ಮಹಾಸಾಮನ್ತ ಭುಜಬಳೋಪಾರ್ಜಿತ ವಿಜಯಲಕ್ಷ್ಮೀ ಕಾಂತಂ ಸಮಸ್ತಾರಿ ವಿಜಯ |

೪೫ ದಕ್ಷ ದಕ್ಷಿಣ ದೋರ್ದ್ದಣ್ಡಂ ಕತ್ತಲೆ ಕುಲಕಮಳ ಮಾರ್ತ್ತಣ್ಡಂ
ಮಯೂರಾವತೀ ಪುರವರಾಧೀಶ್ವರಂ ಜ್ವಾಲಿನೀಲಬ್ಧವರ ಪ್ರಸಾದ ಕ

೪೬ ರ್ಪೂರವರ್ಷಂ ಜಿನಧರ್ಮ್ಮಂ ನಿರ್ಮ್ಮಳಂ ನೆಱೆ ಕಾಟಿಯಂಕಕಾೞ
ನಾಮಾದಿ ಸಮಸ್ತ ಪ್ರಶಸ್ತಿ ಸಹಿತಂ ಶ್ರೀಮನ್ಮಹಾಸಾಮನ್ತಂ ಬೆ

೪೭ ಳ್ವಲಾಧಿಪತಿ ಭುಜಬಳ ಕಾಟರಸರು
ಜಗಮೆಲ್ಲಂ ದೇಸೆಗೆ ಕ
ಯ್ಮುಗಿಗೆಮ ಕೊಟ್ಟಱೆಯನೊನ್ದು ಕಾಗಿಣಿಯುಮನಾ
ಗಗನದೊಳಿರ್ಪ್ಪಾದಿತ್ಯಂ
ಬಗೆದುದನಿತ್ತಪನೆ ಬೆಳ್ವಲಾದಿತ್ಯನ ವೊಲು
||

೪೮ ಇನ್ತೆನಿಸಿದ ಬೆಳ್ವಲಾದಿತ್ಯಂ ಶಕವರ್ಷ ೯೯೪ ನೆ
೪೯ ಯಪರಿಧಾವಿ ಸಂವತ್ಸರದ ಪುಷ್ಯ ಶುದ್ಧ ಪಂಚಮಿ ಬ್ರಿಹಸ್ಪತಿ ವಾರದಂದಣ್ಣಿ ಗೆಱೆಯ ಗಂಗ ಪೆರ್ಮ್ಮಾಡಿಯ ಬಸ

೫೦ ದಿಯ ದಾನ ಸಾಲೆಗಲ್ಲಿಗಾಳ್ವ ಗಾವರಿವಾಡದ ತಮ್ಮ ಸಿವಟದ ಮತ್ತರ ಯ್ವತ್ತುಮನ್ – ಅಣ್ಡಿಗೆ ೞಿಯೊಳು ಕ್ರಯ ವಿಕ್ರಯ

೫೧ ದಿಂಯಲ್ಲಿಯಾಚಾರ್ಯ್ಯರು ತ್ರಿಭುವನಚಂದ್ರ ಪಂಡಿತರ ಕಾಲಂ ಕರ್ಚ್ಚಿ ಧಾರಾ ಪೂರ್ವ್ವಕಂ ಮಾಡಿ ಬಿಟ್ಟು ಕೊಟ್ಟರು |

೬. ಗಾವರವಾಡ ಶಾಸನ ಒಂದು ದೊಡ್ಡ ಶಾಸನ. ಅದರ ಆದಿಯಲ್ಲೂ, ಅಂತ್ಯದಲ್ಲೂ ಇನ್ನಷ್ಟು ಪೂರಕ ಸಾಮಗ್ರಿಯುಂಟು. ಆದರೆ ಮುಖ್ಯವಾಗಿ ಮತ್ತು ನೇರವಾಗಿ, ಕತ್ತಲೆ ಕುಲದ ಬೆಳ್ವಲಾಧಿಪತಿ ಕಾಟರಸನಿಗೆ ಸಂಬಂಧಿಸಿದ ಪಂಕ್ತಿಗಳನ್ನಷ್ಟೇ ಉಧೃತಗೊಳಿಸಿದೆ. ಬೆಳ್ವಲಾದಿತ್ಯ ಎಂದೆಸಿನಿದ ಮಹಾಸಾಮನ್ತ ಕಾಟರಸನಿಗೆ ಪಂಚಮಹಾಶಬ್ದಗಳ ಗೌರವವಿತ್ತು. ಈತನು ಕ್ರಿ.ಶ. ೧೦೭೧-೭೨ ರಲ್ಲಿ ಅಣ್ಣಿಗೆಱೆಯಲ್ಲಿದ್ದ ಪ್ರಸಿದ್ಧ ‘ಗಂಗ-ಪೆರ್ಮಾಡಿಯ ಬಸದಿ’ ಗೆ ೫೦ ಮತ್ತರು ಭೂಮಿಯನ್ನು ಅಲ್ಲಿಯ ಆಚಾರ್ಯ ತ್ರಿಭುವನ ಚಂದ್ರ ಪಂಡಿತರಿಗೆ ಕಾಲುತೊಳೆದು ಧಾರಾ ಪೂರ್ವಕವಾಗಿ ಬಿಟ್ಟುಕೊಟ್ಟನು. ಈ ಬಸದಿಯನ್ನು ಕ್ರಿ.ಶ. ೯೬೧ ರಲ್ಲಿ ಗಂಗರ ಇಮ್ಮಡಿ ಬೂತುಗನು ಕಟ್ಟಿಸಿದ್ದನು.

೭. ಹನ್ನೊಂದನೆಯ ಶತಮಾನದ ಉತ್ತರಾರ್ಧದಿಂದ ಮುಂದಕ್ಕೆ ಈ ಕತ್ತಲೆ ಕುಲವಲ್ಲರಿಯು ಮುರುಟದ ಮತ್ತೆ ಹೇಗೆ ದಾಗುಂಡಿಯಿಟ್ಟಿತೆಂಬುದಕ್ಕೆ ತಕ್ಕ ಆಧಾರಗಳನ್ನು ಮತ್ತೊಂದು ಶಾಸನ ಪೂರೈಸುತ್ತದೆ [ ಸೌ.ಇ.ಇ. ೧೫.೨೧೪. ೧೧೯೯. ಗದಗ ಪು. ೨೫೬-೫೮]. ಈ ಶಾಸನವು ಜೈನವಂಶದವರಾದ ಕತ್ತಲೆ ಕುಲದವರ ಧರ್ಮಸಮನ್ವಯ ಧೋರಣೆಗೆ ಕನ್ನಡಿ ಹಿಡಿದಿದೆ. ಹೊಯ್ಸಳರ ಇಮ್ಮಡಿ ವೀರ ಬಲ್ಲಾಳ ದೇವನ (೧೧೭೩-೧೨೨೦) ವೀರ ಪ್ರಧಾನನಾದ ಮಹಾಮಂಡಳೇಶ್ವರ ರಾಯದೇವರಸನು, ತಾನು ಜೈನನಾದರೂ, ಶೈವಧರ್ಮದ ಗುರುಗಳಿಗೆ ತೋರಿದ ಭಕ್ತಿಗೌರವಗಳು ಶ್ಲಾಘನೀಯವಾಗಿರು ವಂತೆಯೇ ಅನುಕರಣ ಯೋಗ್ಯವಾಗಿದೆ.

೭.೧ ರಾಯದೇವರಸನ ಶಾಸನದಲಿ ಆತನ ಕತ್ತಲೆ ಕುಲದಲ್ಲಿ ಆಗಿಹೋದ ಹಿರಿಯರ ಪರಿಚಯವನ್ನು ಸಾಕಷ್ಟು ಕಾವ್ಯಮಯವಾಗಿಯೂ, ವಿಸ್ತಾರವಾಗಿಯೂ ನಿರೂಪಿಸಿದೆ:

ನೇತ್ರೋತ್ಪಳನೂ ಅಮಳ ಚರಿತ್ರನೂ ಆದ ರಾಯದೇವ ವಿಭು. ತದ್ವಂ ಶಾವತಾರಮಂತೆಂದೊಡೆ

……….ಸಮ
ಸ್ತಾಮರಕುಳ ಪೂಜ್ಯಮೆನಿಸಿ ಬೆಳ್ವೊಲ ನಾಡೊಳು
ಗೋಮಹಿಷೀಧನಧಾನ್ಯಯು
ತಾಮರಪುರವಿಂತಿದೆನೆ ಜನಂ ಸೊಗಯಿಸುಗುಂ
||

            ಪರಿಗಣಿಯಿಪ (ಶ್ರಾವಕ) ಜನ
………..ಭವನದ ತೀರ್ಥಂ
ಕರನಿವಾಸದೆ ಶೋಭಾ
ಕರ ಯಕ್ಷಯಕ್ಷಿಣೀ ಗೃಹ ಪರಿಕರದ ಜಿನಾಗಮ
||

            ಜ್ವಾಳಿನೀ ಸಮಗ್ರಗುಣ ಮಣಿ
ಮಾಳಿನೀ ಸಾಧಕ ವಿನಯ ಸುಬ್ರತಿ ಜನತಾ
ಪಾಳಿನೀ ದುರುತಮಳಪ್ರ
ಕ್ಷಾಳಿನೀ ಸಂವಿದೆಯೆನಿಪ್ಪಳಂತಾ ಪುರದೊಳ್
||

            ನೆಗಳ್ದಾ ಕೆಂಚಮನೆಂಬ ಕಳ್ತಲೆಗನಂತಾ ಜ್ವಾಳಿನೀ ದೇವಿಯಲ್ಲಿ
ಮಿಗೆಯಾರಾಧಿಸಲೆಂದೆ ಬಂದೊಸೆಯಿಸಲ್ಮೆಚ್ಚಿ …..ಳ್ಗೆಸೆ
ಟ್ಟಿಗಣವಿಲ್ಲ ……… ನಿಂನಂ ಬ (ಲ) ಗೊಂಡೆನಾ
ವಗವೆನ್ನಿಷ್ಟಮನೀವುದೆಂದು ಕರುಣಕ್ಕನಮ್ನನಾಗಿ ರ್ಪ್ಪುದು(೦)
||
(ಮತ್ತೇಭ ವಿಕ್ರೀಡಿತ ವೃತ್ತ : ಛಂದಸ್ಸು ಮೂರನೆಯ ಪಾದದಲ್ಲಿ ಕೆಟ್ಟಿದೆ)
ಇಲ್ಲಿಯ ಬೇಳ್ಪರ್ಗ್ಗೆಲ್ಲಂ
ಬಲ್ಲಿದನಾನ…….ವನನೆಂನಯ ಬಲದಿಂ
ಗೆಲ್ಪೊಡೆಯನ್ನ ….ನೀತಿ
……….ನಿತ್ತ…ದೇವರಂ
||

            ಆಬರದ ಬಲದಿನಾತ್ಮ ಮ
ನೋ ಬಲದಿಂದೊಂದೆ ಮೆಯ್ಯೊಳಣ್ಮಿನೊಳಿದಿರಾ
ಳಾದಡವಗೆ …. ಯನಿಕ್ಕಿದ
ನೀ ಬಲ್ಪಿಂತಾರ್ಗ್ಗೆ ಸಲ್ವುದೆನೆ ಕೆಂಚನೃಪಂ
||
(ಮೂರನೆಯ ಪಾದದಲ್ಲಿ ದ್ವಿತೀಯಾಕ್ಷರ ಪ್ರಾಸ ತಪ್ಪಿದೆ)

            ಕುಂದದೆ (ಸೋ) ವಾ ನವಿಲಂ
ಕುಂದೆ (ನವಿಲ) ಸ್ಥಳ (ನವಿಲ) ವನ ಪೆಸರಾಗಿ ನವಿ
ಲ್ಗುಂದೆವೆಸರಾದುದಾ (ನವಿ)
(ಲ್ಗುಂದ) ಕುಂಡದೆ ಪ್ರಚಣ್ಡ ……ವೆನಿಂ
||

            ತ್ರಿಪದಿ || ನವಿಲಕ್ಕಿ ಮಾಡವನೇಱೆ ಮಂಡಲಿಕ
ನೇಸರ ನೋಂತು ಬೆಳ್ವಲ ನಾಡೆಲ್ಲವ
ನಾಳ್ದಂ ಶೌರ್ಯನಿಧಿ ಕೆಂಚ (೦)
||

            ಇನ್ತಿವಗಿದು ಸಂಪದಮಂ
ತನಗಿತ್ತಾ ಜ್ವಾಳಿನೀ ಮಹಾದೇವಿಗೆ ಚೆ
ಲ್ವೆನಿಪಾವಾಸಮನೆತ್ತಿಸಿ
ಯನೇಕ ವೃತ್ತಿಗಳನಿತ್ತನಾ ಕೆಂಚಂ
||

            ಮಿಗೆ ಕೆಂಚನ ಕುಲದೊಳು ಬ
ಲ್ಲಿಗ ಹಳ್ಳಿಗ ನಾಗ ಹುಲಿಗ …(ಕಾ)
ಟಿಗನೆನೆ ಪತಿ ಬಮ್ಮನೆ (ಯೆನೆ)         
ನೆಗಳ್ದರ್ಬ್ಬೆಳ್ವೊಲದೆ ಭೂಪ (ರ್ಕ್ಕತ್ತಲೆ) ಬಳಿಯಂ
||

            ಜನ ……………
……..ಬಳೆ ಕಾಟಿಯಣ್ನನಾ ನವಿಲ್ಗುಂದದೊಳೊ
ಳ್ಪಿನ ನಿಧಿಯೆತ್ತಿಸಿದಂ ತ್ರಿಭು
ವನತಿಳಕ ಮೆನಿಪ್ಪ ಪೆಸರ ಜಿನಮಂದಿರಮಂ
||

            ವ || ಆತ …..ನೃಪ…ಗುಣ ಸಂಪಂನಮುಮಾದ ತದು ವಂಶದೊಳ್ ||

            ಅನುಪಮ ಕೀರ್ತ್ತಿಕತ್ತಲೆಯ ವಂಶ ಶಿರೋಮಣಿ ರಾಯದೇವನಾ
ಜನಪನಸೂನು ಬೆಳ್ವೊಲದ ಮಂನೆಯರಗ್ರಣಿ ಬಮ್ಮಿದೇವನಾತನ
ತನಯ ಚತುಸ್ಸಮಯಧರ್ಮ್ಮ ಸಮುದ್ಧರಣಂ ಪರಾರ್ತ್ಥನೂ
ತನಶಿಬಿಯೆಂಬುದೀ ವಸುಧೆ ಸತ್ಯಗುಣಾಂಬುಧಿ ರಾಯದೇವನಂ
||

ಸ್ವಸ್ತಿ ಸಮಧಿಗತ ಪಂಚಮಹಾಶಬ್ದಂ ಮಹಾಮಣ್ಡಳೇಶ್ವರ ಆಸಂದಿ ಮಯೂರ ಪುರಾವರಾಧೀಶ್ವರ ವಿರೋಧಿ ಮಣ್ಡಳಿಕನಗ ವಜ್ರದಣ್ಡ ಸುಭಟ ಚೂಡಾಮಣಿ ವೈರಿಗಜಕೇಸರಿ ಸಹಜ ಮುರಾರಿ ಶ್ರೀಮಜ್ಜಿನ ಗಂಧೋದಕ ಪವಿತ್ರೀ ಕೃತೋತ್ತ ಮಾಂಗ ನೇಕಾಂಗ ವೀರ ಪರನಾರೀ ದೂರ ವಿಬುಧಹನಸ್ತುತ್ಯ ಬೆಳ್ವೊಲಾದಿತ್ಯ ಜ್ವಾಳಿನೀದೇವೀ ಲಬ್ಧವರ ಪ್ರಾಸಾದಾಸಾದಿತ ಕಲಿಗಳಂ ಕಾವ ಮಹಾಮಣ್ಡಳೇಶ್ವರಂ ರಾಯದೇವರ ಸರ್ ಬೆಳ್ವೊಲನಾಡೊಳಗಣ ಗ್ರಾಮಾನುಗ್ರಾಮಂಗಳ ಶ್ರೀವೀರ ಬಲ್ಲಾಳದೇವನ ವೀರ ಪ್ರಧಾನನಾಗಿ ಹಳ್ಳವುರದ ಕುಪ್ಪದೊಳು ಸುಖದಿನಿರ್ದ್ದು ……. ಶ್ರೀ ಸ್ವಯಂಭು ತ್ರಿಕೊಟೇಶ್ವರ ದೇವ ಸ್ಥಾನಾಚಾರ್ಯ ಶ್ರೀಮತ್ಸಿದ್ದಾಂತಿ ಚಂದ್ರಭೂಷಣ ಪಂಡಿತ ದೇವ……ಮಹಾನುಭಾವಂ ನಿದಿರ್ಗ್ಗೊಂಡು… ಪಾದಾರ್ಚ್ಚನೆಯಂ ಮಾಡಿ… ಧಾರಾ ಪೂರ್ವ್ವಕ ಸರ್ವ್ವಬಾಧಾ ಪರಿಹಾರ … ಬಿಟ್ಟ…ದಾನಂ ||

೮. ಮಹಾಮಂಡಳೇಶ್ವರ ರಾಯದೇವರಸನು ಸಹ ತನ್ನ ಕತ್ತಲೆಕುಲದ ಹಿರಿಯರು ವಂಶಪಾರಂಪರ್ಯವಾಗಿ ಪಾಲಿಸಿಕೊಂಡು ಬಂದಿದ್ದ, ಸರ್ವಧರ್ಮಗಳಿಗೂ ಸಮಾನ ಗೌರವ ತೋರುವ ಅನೇಕಾಂತ ದೃಷ್ಟಿಯನ್ನು ತಾನೂ ಅನುಸರಿಸಿದನು.

೮.೧ ಕತ್ತಲೆ ಕುಲದ ಕಂಚನೃಪನು ಗಂಗರ – ರಟ್ಟರ ಆಶ್ರಯದಲ್ಲಿ ಬಾಳುದವನು. ಕೆಂಚರಸನು ಜೈನಯಕ್ಷಿ ಜ್ವಾಳಾಮಾಳಿ ನೀ ದೇವಿಯ ಪರಮ ಭಕ್ತನಾಗಿದ್ದನು. ಈ ಜಿನಶಾಸನ ದೇವತೆಯನ್ನು ಆರಾಧಿಸಿ ವರವನ್ನು ಪಡೆದು ಯಶೋವಂತ ನಾದನು; ಪದ್ಮಾವತೀ ದೇವಿಯ ವರದಿಂದ ಪೊಂಬುಚ್ಚಪುರವರಾಧೀಶನಾದ ಜಿನದತ್ತರಾಯನು ಆ ದೇವಿಗೊಂದು ಬಸದಿಯನ್ನು ಮಾಡಿಸಿದನು. ಅದರಂತೆ ಕೆಂಚರಸನೂ ಜ್ವಾಳಮಾಳಿನೀ ದೇವಿಗೆ ನವಿಲ್ಗುಂದದಲ್ಲಿ ಒಂದು ಬಸದಿಯನ್ನು ಕಟ್ಟಿಸಿದನು.

೯. ಕೆಂಚನೃಪನ ತರುವಾಯ ಎಂಟು ತಲೆಮಾರಿನ ಹೆಸರುಗಳು ಈ ಶಾಸನದಲ್ಲಿ ಬಂದಿವೆ. ಅವರಲ್ಲಿ ಕಾಟರಸನು ನವಿಲ್ಗುಂದದಲ್ಲಿ ‘ತ್ರಿಭುವನ ತಿಳಕ’ ವೆಂಬ ಇನ್ನೊಂದು ಜಿನ ಮಂದಿರವನ್ನು ಮಾಡಿಸಿದನು; ಇದು ಬಹುಶಃ ಚಂದ್ರ ಪ್ತಭ ತೀರ್ಥಂಕರ ದೇವಾಲಯವಾಗಿರಬೇಕು.

೧೦. ಕತ್ತಲೆಕುಲದ ಮಾಂಡಲಿಕ – ಸಾಮಂತರ ವಂಶಾವಳಿಯನ್ನು, ಉಪಲಬ್ಧ ಶಾಸನಗಳಲ್ಲಿ ದೊರೆಯುವ ಮಾಹಿತಿಗಳನ್ನು ಅವಲಂಬಿಸಿ ಗುರುತಿಸಬಹುದು:

(ಕೞ್ತಲೆ _ ಕರ್ತಲೆ) ಕತ್ತಲೆ ಕುಲ ವಂಶ ವೃಕ್ಷ
ರೇವನ್ತ. ಸು. ೮೨೫
|
ಕೆಂಚ | . ಸು. ೮೫೦
|
ಸಿರಿಮುದ್ದ. ಸು. ೮೭೫
|
ಪಿರಿಯ ಕೋಟಿ ಗಾವುಂಡ, ಸು. ೯೦೦
|
ಪಿರಿಯ ಆಯ್ಚ, ಸು. ೯೨೫
|
ತೊಣ್ಡ. ಸು. ೯೫೦
|
ಕಾಳಿಧುರಂಧರ. ೯೮೦
|
ಕೆಂಚನೃಪ ||. ಸು. ೯೯೫
|
ಬಲ್ಲಿಗ
|
ಹಳ್ಳಿಗ
|
ನಾಗ
|
ಹುಲಿಗ
|
ಕಾಟಿಗ-ಕಾಟರಸ. ೧೦೭೧-೭೨
|
ಬಮ್ಮ |
|
ರಾಯದೇವ |
|
ಬಮ್ಮಿದೇವ || (ಹೆಂ. ಬಾಗಲದೇವಿ)
|
ರಾಯದೇವ ||

ಶಾಸನಗಳಲ್ಲಿರುವ ಈ ವಂಶದ ವಿವರಗಳನ್ನು ಪರಾಮರ್ಶಿಸಿದ ಮೇಲೆ ತಲಪಬಹುದಾದ ಹಾಗೂ ಕೈಗೊಳ್ಳಬಹುದಾದ ಕೆಲವು ತೀರ್ಮಾನಗಳು:

೧. ಕೞ್ತಲೆ(ಕುಲ) ಕರ್ತ್ತಲೆ (ಕುಲ), ಕತ್ತಲೆ (ಕುಲ) ಎಂಬ ಮೂರು ರೂಪಗಳೊಂದಿಗೆ ಮೂರು ಹಂತಗಳಲ್ಲಿ ಈ ಕುಲದ ಹೆಸರು ಮಾರ್ಪಾಟು ಹೊಂದಿದೆ. ಈ ಶಬ್ದರೂಪದ ಬೆಳವಣಿಗೆಯಲ್ಲಿ ವಿಜಾತೀಯ ಸಂಯುಕ್ತಾಕ್ಷರಗಳು ಸಜಾತೀಯವಾಗಿ ಸ್ವನಪರಿವರ್ತನೆ ಪಡೆದಿವೆ.

೨. ಈ ಕತ್ತಲೆವಂಶದವರು ಮಹಾ ಸಾಮಂತ ಪದವಿಗೆ ಏರಿದ್ದರು. ಸಾಮಾಜಿಕವಾಗಿ ಪ್ರತಿಷ್ಠಿತರಾಗಿದ್ದರು. ಕಾಟರಸ (ಕೋಟಿಗ – ಕಾಟಿಗ) ನು ಬೆಳ್ವಲಾಧಿಪತಿಮಹಾಸಾಂತನಾಗಿ ಪ್ರಸಿದ್ಧನಾಗಿದ್ದಾನೆ.

೩. ಕತ್ತಲೆ ಕುಲದವರು ಯುದ್ಧವೀರರು. ಈ ವಂಶದ ಕೆಲವರು ರಣ ಸಾಹಸಿಗಳಾಗಿ ಖ್ಯಾತನಾಮರಾಗಿದ್ದರು.

೪. ತಮ್ಮ ಸಾಹಸದಿಂದ ಮೊದಲು ಇವರು ಬೆಳ್ವಲವನ್ನು ಪಡೆದರು, ಬಳಿಕ ಇವರ ನೆಲೆಯು ‘ನವಿಲ್ಗುಂದಪು’ ವಾಯಿತು. ಕಾಳಿಧುರಂಧರನು ಬೆಳ್ವಲಾದಿತ್ಯ ದೇವನಿಸಿದ್ದರೆ, ಕಾಟರಸನು ಬೆಳ್ವಲಾಧಿಪತಿಯೆನಿಸಿದ್ದನು.

೫. ರೇವಂತ, ಕೆಂಚ, ಸಿರಿಮುದ್ದ, ಪಿರಿಯಕೋಟಿಗಾವುಣ್ಡ, ಪಿರಿಯಆಯ್ಚ, ತೊಣ್ಡ, ಕಾಳಿಂಧುರಂಧರ – ಇವರು ಕ್ರಮವಾಗಿ ಈ ಮನೆತನಕ್ಕೆ ಹೆಸರು ತಂದ ಮೊದಲಿಗರು. ಅನಂತರ ಎರಡನೆಯ ಹಂತದಲ್ಲಿ ಕೆಂಚನೃಪ, ಬಲ್ಲಿಗ, ಹಳ್ಳಿಗ, ನಾಗ, ಹುಲಿಗ, ಕೋಟಿಗ (ಕಾಟರಸ, ಕಾಟಿಯಂಕಕಾಱ), ಬಮ್ಮ |, ರಾಯದೇವ|, ಬಮ್ಮಿದೇವ || (ಹೆಂ. ಬಾಗಲದೇವಿ), ಹಾಗೂ ರಾಯದೇವ || – ಇವರು ಪ್ರಖ್ಯಾತರಾದರು.

೬. ಕತ್ತಲೆಕುಲದವರು ಕ್ರಿ.ಶ. ಸು. ೮೨೫ ರಿಂದ ೧೨೦೦ ರವರೆಗೆ ೩೭೫ ವರ್ಷಕಾಲ ಆಳಿದ = ಬಾಳಿದ ವಿವರಗಳು ಶಾಸನೋಕ್ತವಾಗಿವೆ.

೭. ಕತ್ತಲೆಕುಲದವರು ಮೊದಲಿಗ ರಾಷ್ಟ್ರಕೂಟರಲ್ಲಿ ಸಾಮಂತರಾಗಿದ್ದರು. ಅನಂತರ ತೈಲಪನು ಚಾಳುಕ್ಯ ಸಾಮ್ರಾಜ್ಯ ಸ್ಥಾಪಿಸುತ್ತಿದ್ದಂತೆಯೇ ತಮ್ಮ ರಾಜ ನಿಷ್ಠೆಯನ್ನು ಚಾಳುಕ್ಯರಿಗೆ ತೋರಿಸಿದರು. ಸು. ೧೫೦ ವರ್ಷ ರಾಷ್ಟ್ರಕೂಟರ ಅಧೀನರಾಗಿ, ಸು. ೨೦೦ ವರ್ಷ ಚಾಳುಕ್ಯರ ಮಾಂಡಲಿಕರಾಗಿ, ಸಾಮಂತರಾಗಿ ಕತ್ತಲೆ ಕುಲ ಆಡಳಿತ ನಡೆಸಿತು. ಆಮೇಲೆ ಹೊಯ್ಸಳರ ಸಾಮಂತರಾಗಿ ಕೆಲವು ಕಾಲ ಅಧಿಕಾರದಲ್ಲಿದ್ದರು.

೮. ಕತ್ತಲೆ ಕುಲದವರು ಪ್ರಧಾನವಾಗಿ ಜೈನಧರ್ಮೀಯರು; ಜಿನಧರ್ಮ ನಿರ್ಮಳರು.

೯. ಸಕಳ ಸಮಯಿಗಂ ಬುಧಜನಕಂ, ದೀನ ವೃದ್ಧ ದ್ವಿಜರಿಗೂ ನಟಭಟರೂ ಆಸರೆಯಾಗಿದ್ದವರು ಈ ಕತ್ತಲೆ ಕುಲದವರು. ಇದು ಅವರ ಉನ್ನತ ಉದಾರ ಚರಿತೆಯನ್ನೂ ಧರ್ಮಸಹಿಷ್ಣುತೆಯನ್ನೂ ತೋರಿಸುತ್ತದೆ. ಜೈನ ಬಸದಿಗಳನ್ನು ಮಾಡಿಸಿದಂತೆ ಶಿವಾಲಯವನ್ನೂ ಮಾಡಿಸಿದರು.

೧೦. ಕತ್ತಲೆಕುಲದವರ ಮುಖ್ಯ ಮನೆದೇವರು ಜಿನಶಾಸನದೇವಿಯಾದ ಜ್ವಾಲಾಮಾಲಿನೀ ಯಕ್ಷಿ [ನಾಗರಾಜಯ್ಯ, ಹಂಪ: ಯಕ್ಷಯಕ್ಷಿಯರು: ೧೯೭೬ : ೧೨೩ – ೨೪]. ಶೌರ್ಯನಿಧಿ ಕೆಂಚಮನು ಜ್ವಾಳಿನೀಮಹಾದೇವಿಗೆ ಒಂದು ದೇವಾಲಯವನ್ನೂ ಮಾಡಿಸಿದನು.

೧೧. ಕತ್ತಲೆ ಕುಲದವರು ಧಾರವಾಡಜಿಲ್ಲೆಯ ನವಿಲಗುಂದವನ್ನು ನೆಲೆವೀಡು ಮಾಡಿಕೊಡಿದ್ದರು. ಕಾಟರಸನು ನವಿಲ್ಗುಂದದಲ್ಲಿ ‘ತ್ರಿಭುವನ ತಿಳಕಮೆನಿಪ್ಪ ಪೆಸರ ಜಿನಮಂದಿರಮಂ’ ಮಾಡಿಸಿದನು; ಅಲ್ಲದೆ ಈತನು ಅಣ್ಣಿಗೆಱೆಯ ಗಂಗಪೆರ್ಮಾಡಿ ಬಸದಿಗೆ ೫೦ ಮತ್ತರು ಭೂದಾನ ಮಾಡಿದನು.

೧೨. ನವಿಲ್ಗುಂದ ಎಂಬ ಕನ್ನಡ ಸ್ಥಳನಾಮವನ್ನು ಸಂಸ್ಕೃತೀಕರಣಗೊಳಿಸಿ ‘ಮಯೂರ ಪುರ’ ಎಂದು ಕರೆಯಲಾಗಿದೆ. ಕತ್ತಲೆಕುಲದ ಸಾಮಂತ – ಮಾಂಡಲಿಕರನ್ನು ‘ಮಯೂರಪುರ ವರಾಧೀಶ್ವರ’ ರೆಂದು ಗುರುತಿಸಲಾಗಿದೆ. [ನಾಗರಾಜಯ್ಯ. ಹಂಪ; ಶಾಸನಗಳಲ್ಲಿ ಜ್ವಾಲಾಮಾಲಿನಿ ಮಹಿಮೆ – ‘ಸಮಂತಭದ್ರ’ (ಸಂ) ಜಯಚಂದ್ರ, ಎಂ.ಎ, ಜಿತೇಂದ್ರ ಕುಮಾರ್, ಎಸ್, : ೧೯೯೪ : ೨೩ – ೨೭]

೧೩. ಶ್ರವಣಬೆಳಗೊಳದ ಚಿಕ್ಕ ಬೆಟ್ಟದ ಮೇಲೊಂದು ಬಸದಿಯನ್ನು ಈ ಕತ್ತಲೆ ಕುಲದವರು ಕಟ್ಟಿಸಿದಂತೆ ತೋರುತ್ತದೆ [ನಾಗರಾಜಯ್ಯ, ಹಂಪ : ಸಂಶೋಧನ ವ್ಯಾಸಂಗ, (ಸಂ) ಸಂಗಮೇಶ ಸವದತ್ತಿ ಮಠ, ೧೯೯೫]

೧೪. ಕರ್ನಾಟಕದ ಚರಿತ್ರೆಯಲ್ಲಿ ಆಗಿ ಹೋದ ಸಣ್ಣಪುಟ್ಟ ಅರಸುಕುಲಗಳಲ್ಲಿ ‘ಕತ್ತಲೆ ಕುಲ’ ಕ್ಕೂ ವಿಶಿಷ್ಟವಾದ ಸ್ಥಾನವಿದೆ.

೧೫. ಕತ್ತಲೆ ಕುಲಕ್ಕೂ, ಮೋರಕಕುಲ (ಮೊರಕಕುಲ, ರಣಮೂರ್ಖ ಕುಲ) ಕ್ಕೂ ವಾಂಶಿಕ ಸಂಬಂಧವಿರುವಂತೆ ಕಾಣುತ್ತದೆ.

೧೬. ಕತ್ತಲೆ ಕುಲದವರು ರಾಷ್ಟ್ರಕೂಟಸಾಮ್ರಾಟರ ಅಧೀನದಲ್ಲಿ ಇದ್ದಾಗ ಗಂಗರ ಸಂಬಂಧ ಸ್ನೇಹವನ್ನು ಪಡೆದಿದ್ದರು; ಪ್ರಾಯ: ಸಗರ ಮಣಲೆಯರ ನೆಂಟಸ್ತಿಕೆಯೂ ಇದ್ದಿರ ಬೇಕು.

೧೭. ಕತ್ತಲೆ ಕುಲವನ್ನು ಕುರಿತು ಇನ್ನಷ್ಟು ವ್ಯಾಪಕ ಹಾಗೂ ತೌಲನಿಕ ಅಧ್ಯಯನಕ್ಕೆ ಈ ಸಂಪ್ರಂಬಂಧ ಹೆಬ್ಬಾಗಿಲು ತೆರೆದಿದೆ.