ಚಾಳುಕ್ಯರ ಕಾಲದಲ್ಲಿ ವಿಖ್ಯಾತನಾಮರಾದ ನೂರಾರು ಜನ ಜೈನಾಚಾರ್ಯರು ಶಾಸನೋಕ್ತರಾಗಿದ್ದಾರೆ. ಇವರಲ್ಲಿ ಕೆಲವರ ವಿಚಾರವಾಗಿ, ಹಲವು ಪುಟಗಟ್ಟಲೆ ಬರೆಯುವಷ್ಟು ವಿಪುಲವಾದ ಶಾಸನ ಸಾಮಗ್ರಿ ಸಹ ಉಪಲಬ್ಧವಿದೆ : ಇದು ಒಂದು ಪೊಎಚ್‍ಡಿ ಮಹಾಪ್ರಬಂಧಕ್ಕೆ ತಕ್ಕ ಸಾಮಗ್ರಿಯೂ ಆಗಿದೆ. ವಿಸ್ತಾರವಾದ ವಿಷಯ ಸಂಪತ್ತನ್ನು ಕೇವಲ ದಿಗ್ದರ್ಶನ ರೂಪದಲ್ಲಿ ಒಂದು ಹಕ್ಕಿನೋಟವನ್ನು ಈ ಸಂಪ್ರಬಂಧದಲ್ಲಿ ಬೀರಲಾಗಿದೆ.

ಜೈನ ಮುನಿಗಳು ಬಹುಶಾಸ್ತ್ರ ವಿಶಾರದರು. ತರ್ತಶಾಸ್ತ್ರದಲ್ಲಿ ನಿಪುಣರೆಂಬುದನ್ನು ನಯಸೇನ ನಯಣಂದಿ ಮೊದಲಾದವರ ತರ್ಕನೈಪುಣ್ಯತೆಕ್ಕೆ ಒತ್ತಿಕೊಟ್ಟು ಹೇಳುವುದರ ಮೂಲಕ ಶಾಸನ ಕವಿಗಳು ಸೂಚಿಸಿದ್ದಾರೆ. ಸುಮಾರು ಎರಡು ಸಾವಿರ ವರ್ಷಗಳಿಂದ ರೂಢಿಯಲ್ಲಿರುವ ಜೈನಪರಂಪರೆಯ ವ್ಯಾಕರಣ ಶಾಖೆಯನ್ನು ಸೂರಿಗಳು ಗುರುತಿಸಿದ್ದಾರೆ. ಚಾಳುಕ್ಯರ ಕಾಲದ ಜೈನ ಮುನಿಗಳಲ್ಲೂ ಕೆಲವರು ಉನ್ನತ ಮಟ್ಟದ ವೈಯಾಕರಣರಿದ್ದರು. ಚಾಳುಕ್ಯರ ಕಾಲದ ಹಲವಾರು ಶಾಸನಗಳು ಅಂತಹ ವ್ಯಾಕರಣ ಶಾಸ್ತ್ರ ಪಾರಗರನ್ನು ಹೆಸರಿಸಿವೆ. ಕೀರ್ತಿಸಿವೆ. ಗುಣಕೀರ್ತಿ ಸಿದ್ಧಾಂತ ಭಟ್ಟಾರಕ, ತ್ರೈವಿದ್ಯಗೋವರ್ಧನ ಆದಿಯಾಗಿ ಹತ್ತಾರುಜನ ರಿಷಿ ಕಂತಿಯರ ಹೊಂದಿದ್ದ ನಾನಾ ಜ್ಞಾನ ಶಾಖೆಗಳ ಪರಿಣಸಿಯನ್ನು ಶಾಸನಕಾರರು ಸ್ಮರಿಸಿದ್ದಾರೆ.

ಜೈನಯತಿಗಳ ಚಾರಿತ್ರ್ಯವನ್ನು ಬಿಂಬಿಸುವ ಗುಣ ವಿಶೇಷಣಗಳು, ಉದಾತ್ತ ಆಚಾರ – ಇವು ಲೋಕಕ್ಕೆ ಆದರ್ಶಪ್ರಾಯವೆನಿಸಿದ್ದುವು. ಜೈನ ಆಚಾರ್ಯರ ಜನಪರ ಚಿಂತನೆಗಳನ್ನು ಹರಳುಗೊಳಿಸಿ ತೋರಿಸಿರುವ ಶಾಸನಗಳೂ ಇವೆ. ನಯಕೀರ್ತಿ ಸಿದ್ದಾಂತದೇವ ಮತ್ತು ಆತನ ಶಿಷ್ಯ ಮುನಿಗಳು, ಜನತೆಗೆ ನೀರು ಸರಿಯಾಗಿಯೂ ಸುಲಭವಾಗಿಯೂ ಸಿಗಬೇಕೆಂಬ ಇರಾದೆಯಿಂದ, ಊರಿಗೊಂದು ಕೆರೆ ಕಟ್ಟಿಸಿಕೊಂಡು ವಂತೆ ಶಿಷ್ಯರಿಗೆ ಉಪದೇಶಿಸುತ್ತಿದ್ದರು. ‘ಅವರ ಹೇಳ್ಕೆಯಿಂದ ಸಿಂಗ ಸಮುದ್ರವೆಂಬ ಕೆರೆಯನ್ನೂ ಅದಕ್ಕೊಂದು ಕಲ್ಲಿನ ತೂಬನ್ನೂ ಮಾಡಿಸಿದರೆಂದು ಒಂದು ಶಾಸನ ನಮೂದಿಸಿದೆ [ಎ.ಅಕ ೨(ರ). ೫೬೪. ಅತೇದಿ. ಬೆಕ್ಕ (ಹಾಜಿ/ಚ.ಪ.ತಾ) ಪು. ೩೪೫].

ಜೈನಸಿದ್ಧಾಂತಕ್ಕೆ ಇರುವ ಇನ್ನೊಂದು ಹೆಸರು ಸ್ಯಾದ್ವಾದ ಸಿದ್ಧಾಂತ. ಇದನ್ನು ಅನೇಕಾಂತವಾದ, ಸಪ್ತಭಂಗಿ ನ್ಯಾಯ ಎಂದೂ ಕರೆಯಾಗಿದೆ. ಇದರಲ್ಲಿ ಅಡಗಿರುವ ವಿವೇಕವೆಂದರೆ, ಅನ್ಯವ್ಯಕ್ತಿಗಳ ಮತ್ತು ಅನ್ಯಧರ್ಮಗಳ ದೃಷ್ಟಿಕೋನವನ್ನು ಸಹನೆ ಯಿಂದ ಅರಿಯುವ, ಆಲಿಸುವ, ಮನ್ನಿಸುವ, ಸಹಿಷ್ಣು ಮನೋಧರ್ಮವನ್ನು ಒಪ್ಪಿಕೊಂಡಿರುವುದು.

ಚಾಳುಕ್ಯರ ಕಾಲದ ಜೈನಾಚಾರ್ಯರೂ ಸಹ, ಪ್ರಾಚೀನ ಪರಂಪರೆಗೆ ಅನುಗುಣವಾಗಿ, ಅನ್ಯಧರ್ಮಗಳ ತತ್ವಗಳನ್ನು ಅಭ್ಯಸಿಸಿ. ಪಾಂಡಿತ್ಯಗಳಿಸಿದ್ದರು. ಪರಧರ್ಮ ಸಹಿಷ್ಣುತೆ ಅಹಿಂಸೆಯಲ್ಲಿ ಹಾಸು ಹೊಕ್ಕಾಗಿ ಸೇರಿಹೋಗಿದೆ : ಕಸವರಮೆಂಬುದು (ಬಂಗಾರ) ನೆರೆ ಸೈರಿಸಲಾರ್ಪೊಡೆ ಪರಧರ್ಮಮುಮಂ ಪರರ ವಿಚಾರಮುಮಂ ಎಂಬುದು ಜೈನನಾದ ಶ್ರೀವಿಜಯ ಕವಿಯ ಉಕ್ತಿ ಮುಕ್ತಾಫಲ, ಅದು ಅವನ ಸ್ವಧರ್ಮದತ್ತ ಚಿತ್ತ ಸಂಸ್ಕಾರದ ಒಳ್ನುಡಿ. ಇಂತಹ ಸೂತ್ರಗಳ, ಸೂಕ್ತಿಗಳ ಲಕ್ಷಣಕ್ಕೆ ಲಕ್ಷ್ಯವಾದ ಜೈನಾಚಾರ್ಯರು, ಕಲ್ಯಾಣ ಚಾಳುಕ್ಯ ಸಾಮ್ರಾಜ್ಯದ ಉದ್ದಗಲಗಳಲ್ಲಿ ವಿರಾಜಮಾನರಾಗಿದ್ದರು. ಅವರು ಹೊಂದಿದ್ದ ಸಮನ್ವಯ ಸಮ್ಯಗ್ ದೃಷ್ಟಿಯನ್ನು, ಗಂಟೆ ಬಾರಿಸಿದಂತೆ ಢಣಾಡಂಗುರವಾಗಿ ಸಾರುವ ಶಾಸನಗಳಿವೆ. ಭಾರತೀಯ ಜೀವನ ಸಂಸ್ಕೃತಿಗಳ ವಿಕಾಸಕ್ಕೆ ಈ ಸಮಣ ಸಮುದಾಯದ ವಿಶಿಷ್ಟ ಕಾಣಿಕೆಯನ್ನು ಸಾಕಲ್ಯವಾಗಿ ತೋರಿಸಲಾಗಿದೆ. ಈ ರಿಷಿ ಮುನಿ ಮಹಾಪುರುಷರ ಉದಾತ್ತಜೀವನ ಧವಳಿಮೆಯು, ಅವರು ಮಾಡಿದ ಮಹೋಜ್ವಲ ಸಾಧನೆಗಳಲ್ಲಿ ಪಾರದರ್ಶಕವಾಗಿ ಕಾಣುತ್ತದೆಯೆಂಬಂತಹ ಉತ್ಕೃಷ್ಟ ಶಾಸನಗಳು ಈ ಅವಧಿಯಲ್ಲಿ ರಚಿತವಾಗಿವೆ.

ಜೈನಾಚಾರ್ಯರು ಪಾರಲೌಕಿಕ ಚಿಂತನೆಯೊಂದಿಗೆ ಲೌಕಿಕ ಚಿಂತನೆಯನ್ನು ನಡೆಸಿದ್ದಾರೆ. ಜೈನಗುರುಮನೆಗಳಿಗೆ, ಬಸದಿಗಳಿಗೆ, ಅರಮನೆಗಳ ಹಾಗೂ ಆಡಳಿತಾಂಗದ ಸಂಪರ್ಕ ನಿಕಟವಾಗಿತ್ತು. ಪಾರ್ಶ್ವನಾಥ ತೀರ್ಥಂಕರರ ಪ್ರಭಾವವು ಬುದ್ಧ-ಮಹಾವೀರರ ಕುಟುಂಬಗಳಲ್ಲಿತ್ತು. ಮಹಾವೀರರ ನಂಟಸ್ತಿಕೆಯು ಚೇಟಕ, ಶ್ರೇಣಿಕ ಮೊದಲಾದ ಮೌರ್ಯಯ ಕಾಲದ ರಾಜಮನೆತನಗಳೊಂದಿಗೆ ಇತ್ತು. ಹೀಗೆ ಸುಮಾರು ಸಾವಿರ ವರ್ಷಗಳವೆರಗೆ, ಜೈನ ಆಚಾರ್ಯರಿಗೂ ರಾಜ ಮನೆತನಗಳಿಗೂ ಪರಸ್ಪರ ಪ್ರಭಾವ ಬೆಳೆದು ಬಂದಿದೆ. ಕನ್ನಡ ಹೇಳುತ್ತಿವೆ [ಎ.ಕ. ೭-೧ ಶಿವಮೊ. ೪. ೧೧೨, ಕಲ್ಲೂರುಗುಡ್ಡ; ಎ.ಕ. ೮ (೧೯೦೨). ೩೫. ೧೦೭೭. ಹೊಂಬುಜ (ಶಿಜಿ. ಹೊಸನಗರ ತಾ)]. ಚಾಳುಕ್ಯ ಸಾಮ್ರಾಜ್ಯವೂ ಇದೇ ಮಾದರಿಯನ್ನು ಮುಂದುವರಿಸಿತು. ಜೈನ ಮುನಿಗಳು ರಾಜಕೀಯ ಪ್ರಭಾವ ಪಡೆದಿದ್ದರು, ಚಾಳುಕ್ಯ ಚಕ್ರವರ್ತಿಗಳಿಂದಲೂ ಪೂಜಿತರಾಗಿದ್ದರು. ಈ ರಿಷಿಮುನಿಗಳಲ್ಲಿ ನಂದಿಪಂಡಿತದೇವ, ಗುಣಚಂದ್ರ ಪಂಡಿತ – ಮುಂತಾದ ಹತ್ತಾರುಜನ ಆಚಾರ್ಯರು ಅಗ್ರಗಣ್ಯರು ಅನಂತವೀರ್ಯಮುನಿಪರನ್ನೂ, ಇಂದ್ರನಂದಿ ಪಂಡಿತದೇವ ಮೊದಲಾದ ಮುನಿಪರನ್ನೂ ಶಾಸನಗಳು ವಿಶೇಷವಾಗಿಯೇ ಪ್ರಶಂಸಿಸಿವೆ. ಚಕ್ರಿಗಳಿಂದಲೇ ಅಲ್ಲದೆ ಪಟ್ಟ ಮಹಿಷಿಯರಾದಿಯಾಗಿ ಪಿರಿಯರಸಿ ಕಿರಿಯರಸಿಯರಿಂದಲೂ (ಮಹಾ) ಸಾಮಂತ (ಮಹಾ) ಮಂಡಲೇಶ, (ಮಹಾ) ದಂಡಾಧಿಪತಿ, ಮಂತ್ರಿಗಾವುಂಡ ಮುಂತಾದ ಅಧಿಕಾರ ವರ್ಗದಿಂದಲೂ ಪರಿವಾರ ಪ್ರಜೆಗಳಿಂದಲೂ ಸಮ್ಮಾನಿತರಾಗಿದ್ದರು : ಪದ್ಮನಂದಿ ಸಿದ್ಧಾಂತಿ, ಇಂದ್ರಕೀರ್ತಿ ಮುನೀಂದ್ರ ಇತ್ಯಾದಿ. ಅದಲ್ಲದೆ ಅಧಿಕಾರೇತರ ಪ್ರತಿಷ್ಠಿತ (ರಾಜ) ವರ್ತಕವರೇಣ್ಯರಿಂದಲೂ ಇವರು ಬಹುಗೌರವ ಭಾಜನರಾಗಿದ್ದರೆಂದು ಚಾಳುಕ್ಯರ ಶಾಸನಗಳು ತಿಳಿಸಿವೆ.

ಇನ್ನು ಜೈನಯತಿಗಳ ತಪಸ್ಸಿನ ವಿಚಾರ. ಅವರ ತಪದ ಮಹಿಮೆಯನ್ನೂ, ಸಾಮಾಜಿಕ ಸ್ಥಾನಮಾನಗಳಂತೆಯೇ ಚಾಳುಕ್ಯರ ಕಾಲದ ಶಾಸನಗಳು ಸವಿವರವಾಗಿ ವರ್ಣಿಸಿವೆ. ಅರ್ಹಣಂದಿ ಬೆಟ್ಟದದೇವ ಮುನಿಯ ಶಮ ದಮಾದಿ ಶಾಂತಗುಣವನ್ನು ಶಾಸನ ಎತ್ತಿ ಹಾಡಿದೆ. ದಾಮನಂದಿ ಮುನಿದು ದೃಷ್ಟಾಂತ ನೆನಪಿನಲ್ಲಿ ನಿಲ್ಲುತ್ತದೆ. ಬಸದಿಗಳ ಮುಂದಣ ಮಾನಸ್ತಂಭದ ಹಾಗೆ, ಎಷ್ಟೋ ರಿಷಿಮುನಿಕಂತಿಯರನ್ನು ಶಾಸನಕಾರರು ಪ್ರಭಾವಶಾಲಿಯಾಗಿ ಬಿಡಿಸಿದ್ದಾರೆ. ತಪೋಧನರಾದ ಈ ಋಷಿಗಳ ವ್ಯಕ್ತಿ – ವ್ಯಕ್ತಿತ್ವದ ಎರಡೂ ಪರಿಚಯ ಏಕಕಾಲದಲ್ಲಿ ಆಗುವಂತೆ ಶಾಸನಗಳು ಚಿತ್ರ ಕಡೆದು ಬಿಡಿಸಿರುವುದು ಯ್ಂಟು ಹರಿಣಂದಿದೇವ ಎಂಬ ಶ್ರಮಣನ ಚಿತ್ರಣವನ್ನು ಹೆಸರಿಸಬಹುದು.

            ‘ಕುಂತಳಾ ಪುರದೊಳು ಚೈತ್ಯಾಲಯಮಂ ಮಾಡಿ
ದೇವರ ಪೂಜಾವಿಧಾನಕ್ಕಂ ಚಾತುರ್ವರ್ಣ ಸಂಘ ಸಮುದಾಯ
ಚತುಸ್ಸಮಯದಾಹಾರ ದಾನಕ್ಕಂ’

ದತ್ತಿಯಿತ್ತುದೂ, ಅಲ್ಲಿನ ಜಿನಾಲಯನ್ನು ಸಮುದಾಯಕ್ಕೆ ಮುಖ್ಯಸ್ಥಳವಾಗಿಸಿ ದುದೂ ಶಾಸನೋಕ್ತವಾಗಿದೆ [ಎ.ಕ. ೭-೧, ಶಿವಮೊ. ೬೪. ಸು. ೧೧೧೨. ಪುರಲೇಗ್ರಾಮ. ಪು. ೬೯. ಸಾಲು : ೯೩]. ಜೈನ ಸನ್ಯಾಸಿ, ಸನ್ಯಾಸಿ, ಶ್ರಾವಕ (ಗೃಹಸ್ಥ), ಶ್ರಾವಕಿ (ಗೃಹಿಣಿ) – ಇದು ಚತುರ್ವರ್ಣ ಶ್ರಮಣ ಸಂಘದ ನಾಲ್ಕು ಅಂಗಗಳು. ಜೈನಧರ್ಮ ಪ್ರಣೀತವೂ ಜೈನಾಚಾರ್ಯ ನಿರ್ಣೀತವೂ ಆದ ಜೈನ ಸಮಾಜದ ಆಧಾರ ಸ್ತಂಭ ವಾಗಿರುವ, ನಾಲ್ಕು ಕಾಲುಗಳಿರುವ ಈ ಚತುಸ್ಸಂಘ. ಹೆಣ್ಣಿಗೆ ಸನ್ಯಾಸಾಶ್ರಮದಲ್ಲೂ, ಗೃಹಸ್ಥಾಶ್ರಮದಲ್ಲೂ ಗಂಡಸಿಗೆ ಸಮನಾದ ಸ್ಥಾನ ಕೊಡಲಾಗಿದೆ.

ಜೈನಸನ್ಯಾಸಿನಿಯರನ್ನೂ ಚಾಳುಕ್ಯ ಶಾಸನಗಳು ಕಂಡರಿಸಿವೆ; ಚಂದ್ರಮತಿ ಅವ್ವೆ, ಹುಳಿಯಬ್ಬೆ, ಅಜ್ಜಿಕೆ- ಇವರ ಚಿತ್ರ ಕಣ್ಣ ಬೊಂಬೆಯಲ್ಲಿ ನಾಟನಿಲ್ಲುತ್ತದೆ; ಇವರಲ್ಲದೆ ಸೂರಸ್ತಗಣಕ್ಕೆ ಸೇರಿದ ಅರಸ್ವಗನ್ತಿ, ಮಾಕವ್ವೆಗನ್ತಿಯರ ಪ್ರಸ್ತಾಪವೂ ಇದೆ. ಚಾಳುಕ್ಯರ ರಾಜ್ಯಭಾರ ಕಾಲದಲ್ಲಿ ಶ್ವೇತಾಂಬರ ಪಂಥದ ಶಾಸನಗಳು ಕಾಣುವುದಿಲ್ಲ : ಅವರ ಆಳಿಕೆಯಲ್ಲಿರುವುದು ಎರಡೇ ಪಂಥಗಳು : ದಿಗಂಬರ ಮತ್ತು ಯಾಪನೀಯ. ದಿಗಂಬರ ಪಂಥವೇ ಪ್ರಧಾನವಾಗಿ ಮತ್ತು ಏಕಮೇವಾದ್ವಿತೀಯವಾಗಿ ವಿಜೃಂಭಿಸಿದಂತೆ ಮೇಲು ಮೇಲಿನ ತೇಲು ನೋಟಕ್ಕೆ ತೋರಬಹುದು. ಆದರೆ ವಾಸ್ತವವಾಗಿ ಚಾಳುಕ್ಯರ ಕಾಲದಲ್ಲಿ ಅತ್ಯಂತ ಜನಪ್ರಿಯವಾಗಿದ್ದುದು ಯಾಪನೀಯ ಸಂಘ. ಈ ಕಾಲದ ಶಾಸನಗಳನ್ನು ಆಳವಾದ ಅಧ್ಯಯನ ಕೈಗೊಂಡವರಿಗೆ ಇದೇನೂ ಅಚ್ಚರಿಯಲ್ಲ. ಯಾಪನೀಯ ಸಂಘದ ಪ್ರಚಾರ-ಪ್ರಸಾರದ ಆಧಿಕ್ಯವನ್ನು ನೂರಾರು ಶಾಸನಗಳ ಆಧಾರದಿಂದ ಸ್ಥಾಪಿಸಬಹುದು. ರಾಜರಾಣಿ, ಪ್ರಭು-ಪ್ರಜೆ ಎಲ್ಲ ಸ್ತರದಲ್ಲೂ ಹೆಚ್ಚುಬಲ – ಬೆಂಬಲ ಯಾಪನೀಯ ಪಂಥಕ್ಕೆ ಲಭ್ಯವಾಗಿತ್ತು.

ಯಾಪನೀಯವು ಕರ್ನಾಟಕದ ಸಂದರ್ಭದಲ್ಲಿಯೇ ಹುಟ್ಟಿತೆಂಬ ಸೂಚನೆಗಳು ವ್ಯಕ್ತ ಪಟ್ಟಿವೆ. ಆದರೆ ಇದೇನೂ ಐತೀರ್ಪಲ್ಲ. ಯಾಪನೀಯ ಸಂಘದ ಹುಟ್ಟು ಬೆಳವಣಿಗೆ ಹರಹು ಕೊಡುಗೆ ಕುರಿತು ನನ್ನ ಸಂಶೋಧನೆಯ ಫಲಿತಗಳನ್ನು, ಹೊಸ ವಿಚಾರಗಳನ್ನು ಯಥಾವಕಾಶ ಹೇಳಲಾಗುವುದು. ಇಲ್ಲಿ ಹೇಳಬೇಕಾದ ಮಾತೆಂದರೆ, ಯಾಪನೀಯವು ಚಾಳುಕ್ಯರ ಕಾಲದಲ್ಲಿ ತನ್ನ ಶಿಖರ ಸ್ಥಿತಿಯನ್ನು ಮುಟ್ಟಿತೆಂಬುದು. ವಿರೋಧಾಭಾಸದ ಪರಾಕಾಷ್ಠೆಯೆಂದರೆ ಜನಾನು ರಾಗದ ತುಟ್ಟತುದಿಯನ್ನು ಮುಟ್ಟಿದ ಯಾಪನೀಯವು. ಶೈವ-ವೀರಶೈವರ ಹೊಡೆತಗಳಿಂದ, ತನ್ನ ಅವಸಾನವನ್ನು ಕಂಡಿದ್ದು ಕೂಡ ಇದೇ ಪ್ರಭುತ್ವದ ಇಳಿಗಾಲದಲ್ಲಿ. ಚಾಳುಕ್ಯ ಅರಸೊತ್ತಿಗೆಯೊಂದಿಗೇನೆ ಯಾಪನೀಯವೂ ಚರಿತ್ರೆಯ ವೇದಿಕೆಯಿಂದ ಕೆಳಗಿಳಿಯಿತು. ಅನಂತರವೂ ಇನ್ನೂ ಇನ್ನೂರುವರ್ಷ ಯಾಪನೀಯಕ್ಕೆ, ೧೦-೧೧-೧೨ ನೆಯ ಶತಮಾನಗಳಲ್ಲಿದ್ದ ಆತ್ಮ ದೀಪ್ತಿ, ಆತ್ಮ ಪ್ರತ್ಯಯ ಮತ್ತು ರಾಜಕೀಯ ಕುಮ್ಮಕ್ಕು ಹಿಂದಿನ ಪ್ರಮಾಣದಲ್ಲಿ ಇರಲಿಲ್ಲ ಎಂಬ ಅಂಶವೂ ಶಾಸನಗಳ ಅಧ್ಯಯನದಿಂದ ಮನವರಿಕೆಯಾಗುತ್ತದೆ.

ಇದುವರೆಗೆ ಸಾರಾಂಶರೂಪದಲ್ಲಿ ಹೇಳಿರುವ ಪೀಠಿಕೆಯನ್ನು ಸಮರ್ಥಿಸುವುದಕ್ಕೆ ಬೇಕಾದ ಕೆಲವು ಶಾಸನೋಕ್ತ ಜೈನಾಚಾರ್ಯರನ್ನು, ಈ ಚಾಳುಕ್ಯರ ಆಳಿಕೆಗೆ ಸೀಮಿತಗೊಳಿಸಿ, ಆಕಾರಾದಿಯಾಗಿ ಮುಂದೆ ಕೊಟ್ಟಿದೆ. ಶಾಸನಗಳಲ್ಲಿ ಇವರ ವ್ಯಕ್ತಿತ್ವ ವಿಚಾರಗಳು ವಿಸ್ತಾರವಾಗಿ ಸಿಗುತ್ತದೆ. ಆ ವಿವರಗಳನ್ನೂ ಅವುಗಳಿಗೆ ಇರುವ ಆಯಾಮಗಳನ್ನು, ಅನ್ಯಾನ್ಯ ಪೂರಕ ಸಾಮಗ್ರಿಯನ್ನೂ ವಿವೇಚಿಸುವುದಕ್ಕೆ ತೊಡಗಿದರೆ ಅದು ನೂರಾರು ಪುಟಗಳ ಹೊತ್ತಗೆಯೇ ಆದೀತು. ಅದರಿಂದ ತೀರ ಸಾರಸಂಗ್ರಹ ರೂಪದಲ್ಲಿ ಈ ಕಾಲದ ಅಚಾರ್ಯರ ನಾಮಾವಳಿಯನ್ನೂ, ಅವರ ಪ್ರಸ್ತಾಪ ಇರುವ ಶಾಸನ ಮಾಹಿತಿಯನ್ನೂ ಕೆಳಗೆ ಕೊಟ್ಟಿದೇನೆ:

೧. ಅಕಲಂಕಚಂದ್ರ ಭಟ್ಟಾರಕ ಮತ್ತು ಭಾನುಕೀರ್ತಿದೇವರ ಆದೇಶದಂತೆ ಕಲಿಕೆಱೆ (ಕಲ್ಕೇರಿ) ಯಲ್ಲಿ ಒಂದು ಜಿನಗೃಹದ ರಚನೆಯಾದ ವಿಷಯವನ್ನು ಅಲ್ಲಿನ ಶಾಸನ ನಿವೇದಿಸಿದೆ [ಎಆರ್‌ಎಸ್‍ಐಇ ೧೯೨೭-೨೮ ಎಪಿಪಿ ನಂ. ೫೧. ಅತೇದಿ. ಕಲ್ಕೇರಿ (ಧಾಜಿ/ಮುಂಡರಗಿ ತಾ)]. ಅಕಲಂಕ ಚಂದ್ರ ಭಟ್ಟಾರಕ ಆಚಾರ್ಯರು ಕ್ರಾನೂರು ಗಣಕ್ಕೆ ಸೇರಿದವರು. ಈ ಮುನಿಯ ಮತ್ತು ಶಾಸನದ ತೇದಿಯನ್ನು ಸು. ೧೧೪೦ ಎಂದು ತಿಳಿಯಬಹುದು.

೨. ಅಜಿತಸೇನ ಮುನಿಪತಿಯು ಹತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಬೆಳಗಿನ ಧ್ರುವನಕ್ಷತ್ರ. ಗಂಗರಿಂದಲೂ ರಾಷ್ಟ್ರಕೂಟರಿಂದಲೂ ಮತ್ತು ಅಂತಿಮವಾಗಿ ಚಾಲುಕ್ಯರಿಂದಲೂ ಪೂಜಿತರಾಗಿದ್ದರೆಂಬುದು ಇವರ ಪ್ರಭಾವೀ ವ್ಯಕ್ತಿತ್ವದ ಎತ್ತರ ಬಿತ್ತರಗಳನ್ನು ಬಿಚ್ಚಳಿಸುತ್ತದೆ. (ಚಂಪಕ ಮಾಲೆ)

            ಸುರಪತಿ ಪೂಜಿತಂ ನೃಪತಿ ಸೇವಿತಮುನ್ನತಗಂಗ ಮಂಡಲೇ
ಶ್ವರ ಮಕುಟಾರ್ಚಿತಂ ಭುವನದಿಂ ತಮಗೆಂಬ ನೆಗೞ್ತೆ ವೆತ್ತಲಂ
ಕರಿಸಿ ಜಗತ್ಪಮಿತ್ರಮೆನೆ ಸಂದುದಱೆಂದೆಮಗಿಷ್ಟ ಸಿದ್ಧಿಯಂ
ದೊರೆಕೊಳಿಸುತ್ತುಮಿರ್ಕಜಿತಸೇನ ಮುನೀಂದ್ರ ಪದಾಂಬುಜದ್ವಯಂ
||
[ಕವಿಚಕ್ರವರ್ತಿರನ್ನ, ೯೯೩, ಅಜಿತಪುರಾಣಂ, ೧-೭]
ರನ್ನಕವಿಯ ಹೇಳಿಕೆಯಲ್ಲಿ ಎರಡು ಮಡಿಕೆಗಳಿವೆ:

i. ನೃಪತಿ ಸೇವಿತಂ, ii. ಗಂಗ ಮಂಡಲೇಶ್ವರ ಮುಕುಟಾಎಚಿತಂ. ಆಗಿನ ಸಮಕಾಲಿಕ ಚಾರಿತ್ರಿಕಾಧಾರ ಪರಿಸರಗಳನ್ನು ಒಳಹೊಕ್ಕು ನೋಡಿದರೆ ಈ ಪದ್ಯಾರ್ಥಚು ಸುಬೋಧವಾಗುತ್ತದೆ. ಆಗತಾನೆ ಹೊಸದಾಗಿ ಹುಟ್ಟಿದ ಚಾಳುಕ್ಯ ಸಾಮ್ರಾಜ್ಯದ ತೈಲಪನೃಪತಿಯೂ (ನೃಪತಿ ಸೇವಿತಂ), ಆಗಷ್ಟೇ ಅಸ್ತಂಗತವಾಗುತ್ತಿದ್ದ ಗಂಗರ ಮಂಡಲದ ಮಾರಸಿಂಹನೂ (ಉನ್ನತಗಂಗ ಮಂಡಲೇಶ್ವರ ಮುಕುಟಾರ್ಚಿತಂ), ಈ ಅಜಿತ ಸೇನ ಮುನೀಂದ್ರರನ್ನು ವಂದಿಸಿ ಆರಾಧಿಸಿದ್ದಾರೆಂಬುದೇ ಪದ್ಯದ ವಾಚ್ಯಾರ್ಥ. ಹೀಗಾಗಿ ಅಜಿತಸೇನ ಮುನಿಪರು ಉಭಯರಾಜ್ಯ – ಸಾಮ್ರಾಜ್ಯ ಪುರಸ್ಕೃತರು. ಅವರು ತೈಲಪನಿರ್ಮಡಿಯ ರಾಜಗುರು, ಕವಿರನ್ನನ ಗುರು, ಗಂಗಮಾರಸಿಂಹ ಇಮ್ಮಡಿಯ ಕುಲಗುರು, ಬಂಕಾಪುರ ತೀರ್ಥದ ಆಚಾರ್ಯರು, ಚಾಮುಣ್ಡರಾಯನ ಅಧ್ಯಾತ್ಮ ಪ್ರವೃತ್ತಿಗೆ ಮಾರ್ಗದರ್ಶಕರು. ಮಾರಸಿಂಹನು ಸಲ್ಲೇಖನ ವ್ರತವನ್ನು ಅಜಿತಸೇನಮುನೀಂದ್ರರಿಂದ ಪಡೆದು ಬಂಕಾಪುರದಲ್ಲಿ ಮುಡಿಪಿದನು. ಇಷ್ಟು ಘನೋನ್ನತ ಮುನಿಯನ್ನು ಕುರಿತು ಹಲವಾರು ಶಾಸನಗಳಿವೆ [ಎ.ಇ. ೧೬, ೯.೧೦೫೩. ಮುಳ್ಗುಂದ; ಎ.ಇ. ೫, ೧೫೨, ೧೭೧, ೧೮೦ ಇತ್ಯಾದಿ; ಎ.ಕ. ೨ (ಪ.) ೩೮. ೬೭ ಇತ್ಯಾದಿ]

೩. ಅಜಿತಸೇನ ವಾದೀಭಸಿಂಹ ಮುನಿಯು ಶಬ್ಧಚತುರ್ಮುಖ, ತಾರ್ಕಿಕ ಚಕ್ರವರ್ತಿ, ಬಿರುದಾಂಕಿತ ತಪಸ್ವಿ [ಹೊಂಬುಜ ೧,೨. ೧೦೭೭]. ಕನ್ನದ ಮತ್ತು ಸಂಸ್ಕೃತ ಶಾಸನಪದ್ಯಗಳಲ್ಲಿ ಇವರ ವರ್ಚಸ್ಸನ್ನು ಪ್ರಸ್ತಾಪಿಸಿದೆ, ಅವುಗಾ ಗದ್ಯಾನುವಾದ ಸಾರಾಂಶ : ಅಜಿತಸೇನ ದೇವನು ಬ್ರಹ್ಮನೇ ಆದರೂ ಒಂದೇ ಮುಖವಿದೆಯೇ ಹೊರತು ನಾಲ್ಮೊಗನಲ್ಲ, ಗಣಪತಿಯ ಹಾಗೆ ಜಾಣನಾದರೂ ಆನೆ ಮೊಗದವನಲ್ಲ, ಸರಸ್ವತಿಯೇ ಆದರೂ ಹೆಂಗಸಲ್ಲ, ಎಲ್ಲ ಕಲೆಗಳನ್ನು ಹೊಂದಿದವನಾದರೂ ಚಂದ್ರನಲ್ಲ, ಕಾಮನನ್ನು ಸುಟ್ಟಿದ್ದರೂ ಈಶ್ವರನಲ್ಲ, ಇಂತಹ ಅಜಿತಸೇನದೇವ ಪಣ್ಡಿತನ ಚರಿತೆಯು ನಿಜಕ್ಕೂ ವಿಚಿತ್ರವೇ ಸರಿ. ಸಾಂಖ್ಯಾಗಮ ಮೋಡಗಳನ್ನು ಚದುರಿಸುವ ಬಿರುಗಾಳಿ, ಬೌದ್ಧಾಗಮವೆಂಬ ಕಡಲನು ಹೀರಿ ಬರಿದಾಗಿಸುವ ಬಡವಾನಲ, ಜೈನಾಗಮನೆಂಬ ಸಮುದ್ರವನ್ನು ಹೆಚ್ಚಿಸುವ ಚಂದ್ರ ಎಂಬುದಾಗಿ ಖ್ಯಾತನಾಮರು [ನಾಗರಾಜಯ್ಯ, ಹಂಪ : ಸಾಂತರರು – ಒಂದು ಅಧ್ಯಯನ (೧೯೯೭) : ೧೫೮ – ೫೯.]

೪. ಅಣ್ನಿಯ ಭಟ್ಟಾರಕರು ಚಾಳುಕ್ಯರ ಜಗದೇಕಮಲ್ಲ ಜಯಸಿಂಹರಾಜನ ಆಳ್ವಿಕೆಗೆ ಸೇರಿದ ಶಾಸನದಲ್ಲಿ ಶ್ಲಾಘಿತರಾಗಿದ್ದಾರೆ- ಇವರ ನಿಯಮ ಆಚಾರ ವಿಚಾರ ಸಾರಗುಣ ಜ್ಞಾನಗಳನ್ನು ಮೆಚ್ಚಲಾಗಿದೆ [ಸೌ.ಇ.ಇ. ೧೧-೧, ೬೧.೧೦೨೪. ಮರೋಳ (ಬಿಜಾಪುರ ಜಿ/ ಹುನಗುಂದ ತಾ)]

೫. ಅನಂತವೀರ್ಯ ಮುನಿಪರು, ಭೋಜನಾಂಗ ತರುವಾಗಿಹ ಗೋವರ್ದ್ಧನ ದೇವನ ಸಮೀಪದೊಳ್, ಭೂಷಣಾಂಗಂ ಪುಟ್ಟವಂತೆ ಪುಟ್ಟೆ ಸಂದ ಕೀರ್ತಿ ಸಾಮಾನ್ಯಮೇ ಎಂದು ಒಂದು ಶಾಸಾ ಅಚ್ಚರಿಗೊಂಡು ಕೇಳಿದೆ [ಸೌ.ಇ.ಇ. ೧೧-೧, ೭೮.೧೦೪೫. ಮುಗದ (ಧಾಜಿ / ತಾ)]. ಮರೋಳದ ಶಾಸನದಲ್ಲಂತೂ ಈ ಮುನಿಯ ಒಂದು ಭಾವಚಿತ್ರವೇ ಸಿಗುತ್ತದೆ : (ಮತ್ತೇಭ ವಿಕ್ರೀಡಿತ ವೃತ್ತ ಪದ್ಯ)

            ಸಕಳ ವ್ಯಾಕರಣಂ ನಿಘಂಟು ಗಣಿತಂ ವಾತ್ಸ್ಯಾಯನಂ ಜ್ಯೋತಿಷಂ
ಶಕುನಂ ಛನ್ದಮನುವು ಗಾಂಧರಮಳಂಕಾರಂ ಮಹಾಕಾವ್ಯನಾ
ಟಕಮಧ್ಯಾತ್ಮಿಕಮರ್ತ್ಥ ಶಾಸ್ತ್ರತತಿ ಸಿದ್ಧಾನ್ತ ಪ್ರಮಾಣಂಗಳೆಂ
ಬ ಕಳಾ ವಿದ್ಯೆಗನನ್ತವೀರ್ಯ್ಯ ಮುನಿಪರ್ಸ್ಸವ್ವಜ್ಞರೀ ಧಾತ್ರಿಯೊಳ್
||

[ಸೌ.ಇ.ಇ. ೧೧-೧, ೬೧.೧೦೨೪. ಮರೋಳ (ಬಿಜಾಪುರ ಜಿ / ಹುನಗುಂದ ತಾ) ಪು. ೫೦-೫೧]

ಸುಪ್ರಸಿದ್ಧವಾದ ಚತುಃವಷ್ಟಿ (೬೪) ಕಲೆಗಳಲ್ಲಿ ಮತ್ತು ೧೫ ಕಲಾವಿದ್ಯೆಗಳಲ್ಲಿ ಈ ಅನಂತವೀರ್ಯಮುನಿಪರು ಸರ್ವಜ್ಞತ್ವವನ್ನು ಪ್ರಾಪ್ತಿ ಮಾಡಿಕೊಂಡು ನಾಡಿನಲ್ಲಿ ಮನೆಮಾತಾಗಿದ್ದು ಚಾಳುಕ್ಯರಾಜ್ಯದ ಗೌರವಕ್ಕೆ ಭಾಜನರಾಗಿದ್ದರು.

೬. ಅಭಯನಂದಿ [ಎ.ಇ. ೧೫, ೨೩. ಪು. ೩೩೭. ೧೦೭೧-೭೨], ಅರುಣಹಂದಿ ಭಟ್ಟಾರಕ [ಸೌ.ಇ.ಇ. ೧೧-೧, ೧೧೩.೧೦೭೪. ಹುನಗುಂದ], ಅಷ್ಟುಪಾಸಿಮುನಿಪತಿ [ಸೌ.ಇ.ಇ. ೯-೧, ೧೧೫. ೧೦೫೪], ಅತ್ತಿಮಬ್ಬೆಯ ಕುಲಗುರುಗಳಾದ ಅರ್ಹಣನ್ದಿ ಪಂಡಿತದೇವ [ಸೌ.ಇ.ಇ. ೧೧-೧. ೫೨.೧೦೦೭. ಲಕ್ಕುಂಡಿ] ಮೊದಲಾದ ಗುರುಗಳು ನಾನಾ ಕಾರಣಗಳಿಂದ ಪ್ರಾಮುಖ್ಯಪಡೆದಿದ್ದಾರೆ [ನಾಗರಾಜಯ್ಯ, ಹಂಪ : ಕವಿವರ ಕಾಮಧೇನು ಅತ್ತಿಮಬ್ಬೆ : ೧೯೯೬]. ಮರದ ಕೆಳಗೆ, ಕಲ್ಲು ಬಂಡೆಯಮೇಲೆ (ಕಲ್ನೆಲೆ), ನೀರಿನ ನಡುವೆ ನಿಂತು ಕದಲದೆ ತಪವೆಸಗಿದವರು ಅರ್ಹನನ್ದಿ ಬೆಟ್ಟದದೇವ ಮುನಿ [ಕಜಿಶಾ : ಹಿಣಸಿಹಡಗಲಿ. ೩೮.೧೦೯೯]; ಇವರು ನಾಗಚಂದ್ರಕವಿಯ ಗುರುಗಳಾದ ಬಾಳಚಂದ್ರದೇವ ಮುನಿಪ ಸಂತಾನದಲ್ಲಿ ಬಂದ ಪ್ರಸಿದ್ಧರು [ಸೌ.ಇ.ಇ.೧೮, ೧೦೯.೧೧೧೨. ಕನ್ನವುರಿ= ಕಣ್ನೂರು (ಬಿಜಾಪುರ ಜಿ / ತಾ) ಪು. ೧೨೧; ನಾಗರಾಜಯ್ಯ, ಹಂಪ; ನಾಗಚಂದ್ರ – ಇತಿವೃತ್ತ : ೧೯೯೨].

೭. ಇಂದ್ರಕೀರ್ತಿ ಮುನೀಂದ್ರ [ಸೌ.ಇ.ಇ. ೯-೧, ೧೧೭.೧೦೫೫. ಕೋಗಳಿ (ಬಳ್ಳಾರಿ ಜಿ/)] ಇಂದ್ರನಂದಿಪಂಡಿತದೇವ [ಬಾ.ಕ.ಇ. ೧-೧, ೧೨೩. ೧೦೮೦. ಹುನಗುಂದ], ಉತ್ತರಾ ಸಂಗ ಭಟ್ಟಾರಕ [ಸೌ.ಇ.ಇ.೧೧-೧, ೧೧೩. ೧೦೭೪], ಉದಯ ಚಂದ್ರ ಸೈದ್ಧಾಂತ ದೇವ [ಎ.ಇ.೧೫, ೨೩.೧೦೭೧-೭೨] – ಇವರುಗಳು ಅಗಾಧವಾದ ಶಿಷ್ಯಸಂಪತ್ತಿನಿಂದ ಜ್ಞಾನ ನಿಧಿಗಳಾಗಿದ್ದರು.

೮. ಕನಕನನ್ದಿ ಭಟ್ಟಾರಕ [ಸೌ.ಇ.ಇ.೧೮, ೭೧.೧೦೬೬], ಕನಕಪ್ರಭ ಸಿದ್ಧಾಂತದೇವ [ಸೌ.ಇ.ಇ.೨೦, ೬೨.೧೦೯೮. ಸೌದತ್ತಿ], ಕನಕಸೇನಭಟ್ಟಾರಕ [ಎ.ಇ.೧೬.೯.೧೦೫೩. ಮುಳ್ಗುಂದ], ಕನಕಶಕ್ತಿಸಿದ್ಧಾಂತದೇವ [ಸೌ.ಇ.ಇ. ೧೫, ೫೩೦.೧೦೫೯] ಕಮಳದೇವ ಚಾರ್ಯ [ಸೌ.ಇ.ಇ.೧೫, ೧೨೮.೧೧೭೪ ಚಿಕ್ಕಹಂದಿಗೋಳ (ಧಾಜಿ / ಗದಗ ತಾ) ಪು. ೧೬೧-೬೩], ಕಮಳಭದ್ರ ದೇವ [ಹೊಂಬುಜ ೧,೨.೧೦೭೭ (ಶಿಜಿ / ಹೊಸನಗರ ತಾ], ಕೀರ್ತಿದೇವ ಮುನಿಪತಿ [ಸೌ.ಇ.ಇ. ೧೧-೧, ೬೧.೧೦೨೪ ಮರೋಳ], ಕುಮಾರಕೀರ್ತಿ ಮನೀಂದ್ರ [ಸೌ.ಇ.ಇ. ೧೧-೧, ೭೮.೧೦೪೫]- ಮೊದಲಾದ ಯತೀಶ್ವರರು ಸಕಳ ಶಾಸ್ತ್ರಕುಶಲರೂ, ಶಬ್ದಾರ್ಥತತ್ವರರೂ, ಉದ್ಯದ್ಗುಣ ಭೂಷಣರೂ ಆಗಿದ್ದರು.

೯. ಗುಣಭದ್ರ ಸಿದ್ಧಾಂತಿದೇವ [ಸೌ.ಇ.ಇ.೨೦, ೩೨.೧೦೪೫. ಕೂಯಿಬಾಲ (ಧಾಜಿ / ಕುಂದಗೋಳ ತಾ)], ಗುಣ ಕೀರ್ತಿ ಸಿದ್ಧಾಂತ ಭಟ್ಟಾರಕ [ಸೌ.ಇ.ಇ. ೧೧-೧.೬೧.೧೦೨೪] ಗಂಡವಿಮುಕ್ತ ಭಟ್ಟಾರಕ [ಎ.ಇ.೧೫.೨೩. ೧೦೭೧-೭೨], ಗೋವರ್ಧನದೇವ [ಸೌ.ಇ.ಇ.೧೧-೧, ೭೮.೧೦೪೫], ಕಂತಿಯಾದ ಚಂದ್ರಮತಿಯವ್ವೆ [ಸೌ.ಇ.ಇ.೧೮, ೧೫೧.೧೧೪೮] ಚಾರುಕೀರ್ತಿ ಪಂಡಿತ [ಸೌ.ಇ.ಇ.೧೧, ೧೪೧.೧೦೯೭], ಆಚಾರ್ಯಜಯಕೀರ್ತಿ ಸಿದ್ಧಾಂತದೇವ [ಸೌ.ಇ.ಇ. ೧೫, ೬೩೭.೧೨ಶ. ಜಾವೂರು(ಧಾಜಿ / ನವಲಗುಂದ ತಾ) ಪು. ೪೦೮], ತ್ರೆವಿದ್ಯ ಗೋವರ್ಧನ [ಸೌ.ಇ.ಇ. ೧೧-೧, ೭೮], ತ್ರಿಭುವನ ಚಂದ್ರ ಪಂಡಿತ [ಎ.ಇ.೧೫, ೨೩. ೧೦೭೧-೭೨], ತ್ರಿಭುವನ ಕೀರ್ತಿರಾವುಳ [ಎಆರ್‌ಎಸ್‍ಐಇ ೧೯೧೭. ಸಿ-೪೦. ೧೨ ಶ]- ಮೊದಲಾದವರು ತ್ರೈವಿದ್ಯ ಚಕ್ರೇಶ್ವರರೆನಿಸಿ, ವಿದ್ಯಾ ಪ್ರೌಢಿಮೆಯಿಂದ ಕೀರ್ತಿವಂತರಾಗಿದ್ದರು.

೧೦. ದಾಮನಂದಿ ಗಂಡವಿಮುಕ್ತ [ಸೌ.ಇ.ಇ. ೧೧-೧, ೭೮.೧೦೪೫], ದೇವಕೀರ್ತಿ [ಅದೇ, ೬೧.೧೦೨೪], ದೇವಚಂದ್ರರಿಷಿ [ಅದೇ, ೧೬೯.೧೧೧೯. ಐಹೊಳೆ], ದೇವಣಂದಿ ಭಟ್ಟಾರಕ [ಸೌ.ಇ.ಇ.೧೮, ೭೧-೧೦೬೬. ಮೋಟೆಬೆನ್ನೂರ], ನಂದಿಪಂಡಿತದೇವ [ಸೌ.ಇ.ಇ.೨೦, ೪೬.೧೦೭೨], ನಂದಿ ಭಟ್ಟಾರಕ [ಅದೇ, ಮತ್ತು ಅದೇ ೫೨.೧೦೭೭], ನಯಕೀರ್ತಿ ಸಿದ್ಧಾಂತದೇವ [ಸೌ.ಇ.ಇ.೧೫, ೪೭.೧೧೫೧], ನಯಸೇನ [ಎ.ಇ.೧೬, ೯.೧೦೫೩. ಮುಳ್ಗುಂದ], ನಯಸೇನಸೂರಿ [ಎ.ಇ.೧೬, ೫೫-೧೮.೧೦೫೩], ನರೇಂದ್ರ ಸೇನ [ಎ.ಇ.೧೬, ೯-ಬಿ. ೧೦೮೧], ನರೇಂದ್ರಣಂದಿ ಮುನೀಂದ್ರ [ಸೌ.ಇ.ಇ.೧೮, ನ್೭೧.೧೦೬೬], ನಾಗಸೇನ ಪಂಡಿತ [ಎ.ಇ.೧೭.೧೦.೧೦೪೭. ಅರಸಿಬೀದಿ], ನಿರವದ್ಯ ಕೀರ್ತಿ ಭಟ್ಟಾರಕ [ಸೌ.ಇ.ಇ.೧೧-೧, ೭೮. ೧೦೪೫], ನೇಮಿಚಂದ್ರ ಪಂಡಿತದೇವ [ಸೌ.ಇ.ಇ.೧೫, ೪೭.೧೧೫೧], ಪದ್ಮನಂದಿ ಸಿದ್ಧಾಂತಿದೇವ [ಸೌ.ಇ.ಇ.೯-೧, ೨೨೧], ಹಾಗೂ ಪಾರ್ಶ್ವದೇವ ಸ್ವಾಮಿ [ಸೌ.ಇ.ಇ.೧೧-೧, ೭೮.೧೦೪೫],-ಮೊದಲಾದವರು ಸಮ್ಯಕ್ತ್ವರತ್ನಾಕರರಾಗಿ ಸ್ಯಾದ್ವಾದ ಸಿದ್ಧಾಂತದ ಸಾರವನ್ನು ಸಮಾಜದಲ್ಲಿ ಬೋಧಿಸಿದರು.

೧೧. ಬಾಲಚಂದ್ರ ಸಿದ್ದಾಂತದೇವ [ಸೌ.ಇ.ಇ.೧೧-೨, ೨೦೯.೧೧೧೦], ಬಾಹುಬಲಿ ಭಟ್ಟಾರಕ [ಅದೇ, ೧೨೩.೧೦೮೦], ಬಾಳಚಂದ್ರ ಬ್ರತೀಮ್ದ್ರ [ಸೌ.ಇ.ಇ.೧೮,೧೦೯.೧೧೧೨], ಭಾನುಕೀರ್ತಿ ಸಿದ್ಧಾಂತೇಶ ೧೧೦೯-೧೧೮೫ [ಎ.ಕ. ೮-೨(೧೯೦೨) ಸೊರಬ. ೨೩೩. ಉದ್ಧರೆ. ೧೧೩೯; ಅದೇ, ಸೊರಬ ೩೪೫, ೧೧೭೧.; ಅದೇ ಸೊರಬ ೩೮೪.೧೧೭೭-೭೮; ಸೌ.ಇ.ಇ.೧೫, ೫೬೮.೧೨ ಶ], ಭಾಸ್ಕರ ನಂದಿ ಪಂಡಿತದೇವ [ಸೌ.ಇ.ಇ.೧೧-೧.೧೧೩.೧೦೭೪ ಮತ್ತು ಸೌ.ಇ.ಇ.೨೦,೫೨.೧೦೭೭], ಮಾಧವಚಂದ್ರ ಬ್ರತೀಂದ್ರ [ಸೌ.ಇ.ಇ.೧೧-೧, ೭೮.೧೦೪೫], ಮುನಿಚಂದ್ರ ತ್ರೈವಿದ್ಯ ಭಟ್ಟಾರಕ [ಸೌ.ಇ.ಇ.೧೧, ೧೪೦.೧೦೮೭. ದೋಣಿ]- ಮೊದಲಾದವರು ಜೈನ ತಪೋರಾಜ್ಯದ ಉನ್ನತಿಯನ್ನು ಲೋಕಕ್ಕೆ ಪ್ರತ್ಯಕ್ಷವಾಗಿ ತೋರಿಸಿದರು.

೧೨. ರವಿಕೀರ್ತಿ [ಸೌ.ಇ.ಇ.೧೧-೧, ೭೮.೧೦೪೫], ರಾಮಣಂದಿ [ಎ.ಕ.೮, ಸೊರಬ ೨೩೩.೧೧೩೩.; ಸೌ.ಇ.ಇ.೧೮,; ೧೮೦. ನದಿಹರಳಹಳ್ಳಿ], ರಾಮಸೇನ ಪಡಿತ [ಸಿ. ೭-೧ ೧೯೦೨ ಶಿಕಾರಿಪುರ. ೨೨೪.೧೦ ಬಳ್ಳಿಗಾವೆ] ವರ್ಧಮಾನ ಮುನೀಂದ್ರ [ಸೌ.ಇ.ಇ.೧೮, ೧೦೯.೧೧೧೨], ವಿಮುಕ್ತ ವ್ರತೀಂದ್ರರ್ [ಸೌ.ಇ.ಇ.೧೧-೧, ೬೧.೧೦೨೪], ವಾಸುಪೂಜ್ಯಮುನೀಂದ್ರ [ಸೌ.ಇ.ಇ.೧೮, ೧೮೦.೧೧೬೮.]-ಮೊದಲಾದ ರಿಷಿ ಮುನಿಗಳು, ತಮ್ಮ ಅಗಾಧ ತಿಳಿವಳಿಯಿಂದಲೂ ಉದಾತ್ತ ನಡೆವಳಿಕೆ ಯಿಂದಲೂ ಲೋಕವಂದಿತರಾದರು.

೧೩. ಶ್ರೀನಂದಿ ಪಂಡಿತ [ಸೌ.ಇ.ಇ.೨೦, ೫೨.೧೦೭೭; ಅದೇ ೧೧-೧.೧೧೩.೧೦೭೪] ಶಾಂತಿದೇವ ಶಬ್ದ ಚತುರ್ಮುಖ [ಎ.ಕ.೧೧(ಪ.). ಶ್ರಬೆ. ೭೭ (೬೭)೧೧೨೯], ಶಾಂತಿಣಂದಿ ಮುನಿಂದ್ರ [ಸೌ.ಇ.ಇ.೧೮, ೭೧.೧೦೬೬. ಮೋಟೆಬೆನ್ನೂರ], ಶಾಂತಿರಾಶಿಪಂಡಿತ [ಸೌ.ಇ.ಇ.೧೧-೧, ೧೦೦.೧೦೬೪], ಸಕಳಚಂದ್ರ ಪಂಡಿತ [ಎ.ಕ.೮, ನಗರ ೫೮.೧೦೬೨], ಸರ್ವಣಂದಿ ಭಟ್ಟಾರಕ [ಎ.ಕ.೭(೧೯೦೨ಏ ಶಿಕಾರಿಪುರ. ೧೩೬.೧೦೬೮], ಸಿದ್ಧಣಂದಿ ಪಂಡಿತದೇವ [ಸೌ.ಇ.ಇ.೧೮, ೭೧.೧೦೬೬], ಹರಿಣಂದಿ ದೇವ ಆಚಾರ್ಯ [ಅದೇ, ೧೫೧.೧೧೪೮]. ಹುಲಿಯಬ್ಬೆ ಅಜ್ಜಿಕೆ [ಸೌ.ಇ.ಇ.೧೧-೧,೧೧೧.೧೦೭೧. ಸೊರಟೂರು]- ಮೊದಲಾದ ಆಚಾರ್ಯರು ತೀರ್ಥಂಕರ ಪ್ರಣೀತ ಅಹಿಂಸಾಧರ್ಮವನ್ನೂ ಸನ್ಮತಿಸಾಹಿತ್ಯ ಸುಧೆಯನ್ನೂ ಸಮಾಜಕ್ಕೆ ಮುಟ್ಟಿಸಿದರು.

ಶಾಸನಗಳಲ್ಲಿ ಈ ರಿಷಿ ಕಂತಿಯರನ್ನು ಕುರಿತು ಉಪಲಬ್ಧವಿರುವ ಸಮೃದ್ಧ ಮಾಹಿತಿಯು ವಿದ್ವತ್ ಪೂರ್ಣವಾದ ಒಂದು ಪ್ರತ್ಯೇಕ ಸ್ವತಂತ್ರ ಉದ್ಗ್ರಂಥಕ್ಕೆ ಆಗುವಷ್ಟಿದೆ. ನಾಡಿನ ಸಾಂಸ್ಕೃತಿಕ ಧಾರ್ಮಿಕ ಪರಂಪರೆಯ ಮುಖ್ಯ ವಾಹಿನಿ ಜೀವಂತವಾಗಿ ಮುಂದೆ ಪ್ರವಹಿಸಲು ಈ ಯತಿ ಪುಂಗವರ ಕೊಡುಗೆ ದೊಡ್ಡದು.

ಶಾಸನಗಳಲ್ಲಿ ಯಕ್ಷಿ ಜ್ವಾಲಾಮಾಲಿನಿ ಮಹಿಮೆ

ಪ್ರಾಳೇಯಾಮಳಿನಾಂಗಿ ತುಂಗಮಹಿಷೇಂದ್ರಾರೂಢೆಯಾತ್ಮಾಷ್ಟದೋ
ರ್ಮಾಳಾಳಂಕೃತೆ ಚಕ್ರಶೂಲಶರ ಚಾಪೋತ್ಕೇತು ಚಂಚತ್ಕಶಾ
ಭೀಳಾಸಿಸ್ಫುಟ ಖೇಟಕಾನ್ವಿತೆ ಚಳದ್ಭಾಳಾಕ್ಷಿ ಸಂಪ್ರೀತಿಯಿಂ
ಜ್ವಾಳಾಮಳಿನಿಮಾೞ್ಕಿ ಮತ್ಕೃತಿಗೆ ನಿರ್ವಿಘ್ನೋಕ್ತಿ ನಿರ್ವಾಹಮಂ
||
-ಅಗ್ಗಲ, ೧೧೮೯, ಚಂದ್ರಪ್ರಭ ಪುರಾಣಂ, ೧-೯

ಹಿಮದಂತೆ ಪರಿಶುಭ್ರವಾದ ದೇಹವುಳ್ಳ, ಮಹಾಮಹಿಷವನ್ನು (ಕೋಣ) ಏರಿದ, ಎಂಟು ತೊಳುಗಳನ್ನುಳ್ಳ, ಚಕ್ರ ಶೂಲ ಬಾಣ ಬಿಲ್ಲು ಕೇತು ಪಾಶ ಖಡ್ಗ ಗುರಾಣಿ ಇವನ್ನು ಒಳಗೊಂಡ, ಚಂಚಲವಾದ ಹಣೆಗಣ್ಣನ್ನುಳ್ಳ ಜ್ವಾಲಾಮಾಲಿನಿದೇವಿಯು ಪರಮ ಪ್ರೇಮದಿಂದ ಕಾವ್ಯ ಕೃತಿಗೆ ಯಾವ ಅಡ್ಡಿಗಳೂ ಒದಗದಂತೆ ಮಾಡಲಿ – ಎಂಬುದಾಗಿ ಅಗ್ಗಳಕವಿಯು ಪ್ರಾರ್ಥಿಸಿದ್ದಾನೆ; ಇದು ಆಶಾಧರ (ಪ್ರತಿಷ್ಠಾಸಾರೋದ್ದಾರ, ೩-೧೬೨) ಮತ್ತು ನೇಮಿಚಂದ್ರ (ಪ್ರತಿಷ್ಠಾ ತಿಲಕ, ಪು. ೩೪೩) ಕೊಡುವ ವರ್ಣನೆಗೆ ಅನುಗುಣವಾಗಿದೆ. ಕ್ರಿ.ಶ. ಒಂದು ಮತ್ತು ಎರಡನೆಯ ಶತಮಾನದ ವೇಳೆಗೆ ಯಕ್ಷ-ಯಕ್ಷಿಯರು ಜೈನ ದೈವ ಪರಿವಾರದೊಳಗೆ ಸೇರಿ ಜಿನ ಶಾಸನದೇವತೆಗಳಾಗಿ ರೂಪುಗೊಂಡರು.

ತನಗೆ ತನೂಭವರಿಲ್ಲದೆ
ಮನದೊಳು ಚಿಂತಿಸುತಮಿರ್ದ್ದು ಪದ್ಮಪ್ರಭನಾ
ರ್ಪ್ಪಿನ ಕಣಿ ಶಾಸನ ದೇವತೆ
ಯ(ನು) ಪೂಜಿಸಿ ದಿವ್ಯ ಮಂತ್ರದಿಂ ಸಾಧಿಸಿದಂ
||

[ಎ.ಕ. ೭-೧, ಶಿವಮೊಗ್ಗ ೬೪.೧೧೧೨, ಪು.೬೬. ಸಾಲು : ೪೩]

ಹೀಗೆ ಶಾಸನದೇವತೆಗಳು ವರ ಪ್ರದಾನ ಮಾಡುವರೆಂಬ ತುಂಬ ನಂಬುಗೆ ಯೊಂದು ಸಾರ್ವತ್ರಿಕವಾಯಿತು. ಯಕ್ಷ ಯಕ್ಷಿಯರು, ಕ್ಷೇತ್ರಪಾಲರು (ಜಟ್ಟಿಂಗರಾಯ, ಯಕ್ಷಿಗರಾಯ), ವಿದ್ಯಾದೇವಿಯರು, ಶ್ರುತದೇವಿಯರು ಎಂಬಿತ್ಯಾದಿ ಪರಿಕಲ್ಪನೆಗೆ, ಕರ್ನಾಟಕದ ಸಂದರ್ಭದಲ್ಲಿ, ಜೀವ ತುಂಬಿದವರು ಯಾಪನೀಯ ಸಂಘದವರು. [KAMALA HAMPANA: Attimabbe and Chalukyas, 1995, 29-31] ಕರ್ನಾಟಕದ ಹಲವು ರಾಜಮನೆತನಗಳು ಜೈನ ಆಚಾರ್ಯರ ಅನುಗ್ರಹದಿಂದ ಸ್ಥಾಪನೆ ಗೊಂಡಿರುವ ವಿಚಾರವನ್ನು ಶಿಲಾಶಾಸನಗಳ ಆಧಾರದಿಂದ ಅರಿಯಬಹುದು. ಗಂಗರು ರಟ್ಟರು ಕದಂಬರು ಚಾಲುಕ್ಯರು ಹೊಯ್ಸಳರು ಶಿಲಾಹಾರರು ಚೆಂಗಾಳ್ವರು ಕೊಂಗಾಳ್ವರು ಚೌಟರು ಅಜಿಲರು ಬಂಗರು ಸೇವುಣರು ಬಿಳಿಗಿಯರಸರು ತೆವರ-ತೆಪ್ಪದ-ಸಾಮಂತರು ಬಾರಂಗಿ-ಸಾಮಂತರು ಚಿಕ್ಕಮಾಗಡಿ-ಸಾಮಂತರು ನಗಿರೆಯವರು, ಸಾಳುವರು ಸಾಂತರರು ಸೇನವಾರರು ಚಲ್ಲ ಕೇತನರು ಸಗರ-ಮಣಲೆಯರು ಸಿಂದರು-ಹೀಗೆ ಹಲವು ದೊಡ್ಡ-ಸಣ್ಣ ರಾಜವಂಶಗಳು ಜೈನ ಕೊಡೆಯ ಅಡಿಯಲ್ಲಿ ಹುಟ್ಟಿ ಬೆಳೆದುವು.

ಜೈನ ಆಚಾರ್ಯರ ಕೃಪೆ ಮತ್ತು ಆಶೀರ್ವಾದ ಹೊತ್ತು ಹುಟ್ಟಿದ ಈ ಕೆಲವು ರಾಜಮನೆತನಗಳಲ್ಲಿ, ಜೈನ ಯಕ್ಷರ ಪೂಜಾ ಪದ್ಧತಿಯ ಪ್ರಭಾವ ಗಾಢವಾಗಿದ್ದುದು ಕಂಡುಬರುತ್ತದೆ. ಅದರಲ್ಲಿಯೂ ವಿಶೇಷವಾಗಿ ಚಕ್ರೇಶ್ವರಿ, ಪದ್ಮಾವತೀದೇವಿ, ಚಾಮುಂಡಾ, ಕೂಷ್ಮಾಂಡಿನೀದೇವಿ ಮತ್ತು ಜ್ವಾಲಾಮಾಲಿನೀದೇವಿ – ಈ ಜಿನಶಾಸನ ದೇವತೆಗಳ ಪ್ರಭಾವ ರಾಜಕುಲಗಳಲ್ಲಿಯೂ ಇದ್ದುದಾಗಿ ಶಾಸನಗಳಿಂದಲೇ ತಿಳಿದು ಬರುತ್ತದೆ. ಪದ್ಮಾವತಿಯು ಜೈನರ ೨೩ ನೆಯ ತೀರ್ಥಂಕರರಾದ ಪಾರ್ಶ್ವನಾಥರ ಯಕ್ಷಿ, ಚಾಮುಂಡಾದೇವಿಯು ೨೧ ನೆಯ ತೀರ್ಥಂಕರರಾದ ನಮಿತೀರ್ಥಂಕರರ ಯಕ್ಷಿ, ಜ್ವಾಲಾ ಮಾಲಿನೀದೇವಿಯು ಎಂಟನೆಯ ತೀರ್ಥಂಕರರಾದ ಚಂದ್ರಪ್ರಭ ನಾಥರ ಯಕ್ಷಿ. ಗಂಗರು ಮತ್ತು ಹೊಯ್ಸಳರು ತಮ್ಮ ಸಾಮ್ರಾಜ್ಯವು ಪದ್ಮಾವತೀ ದೇವಿಯಿಂದ ಬಂದ ಹಸಾದವೆಂದು ಹೇಳಿಕೊಂಡಿದ್ದಾರೆ. ಅದರಂತೆಯೇ ಇನ್ನೂ ಕೆಲವು ಅರಸುಕುಲಗಳೂ, ಮಹಾಸಾಮಂತ ಮಹಾಮಂಡಲೇಶ್ವರರೂ ಸಹ ಜಿನಶಾಸನದೇವತೆಯಾದ ಪದ್ಮಾವತೀದೇವೀಯು ಕರುಣಿಸಿದ ವರಪ್ರಸಾದದಿಂದ ತಾವು ಸುಕಪರಂಪರೆಯನ್ನು ಪಡೆದುದಾಗಿ ಹೆಮ್ಮೆಯಿಂದ ಹೇಳಿಕೊಂಡಿವೆ. ಇದಕ್ಕೆ ಮೂರುನಾಲ್ಕು ನಿದರ್ಶನಗಳನ್ನು ಕೇವಲ ಶಾಸನಗಳಿಂದ, ಉದಾಹರಿಸುತ್ತೇನೆ:

೧. ಕೆಲವಾನು ದಿವಸದಿಂ ಪದ್ಮಾವತೀ ದೇವಿಯಂ ವಿಧಿಪೂರ್ವ್ವಕಮಾಹ್ವಾನಂಗೆಯ್ದು ವರಂಬಡೆದು ಖಳ್ಗಮುಮಂ ಸಮಸ್ತರಾಜ್ಯಮನವರ್ಗ್ಗೆಮಾಡೆ

[ಎ.ಕ. ೭-೧, ಶಿವಮೊಗ್ಗ ೪. ೧೧೨೨ ಮತ್ತು ೬೪.೧೧೧೨]

೨. ಪದ್ಮಾವತೀ ಲಬ್ಧವರ ಪ್ರಸಾದಂ ರಾಜಾಧಿರಾಜ ಪೆರ್ಮ್ಮಾಡಿ ದೇವಂ ಶ್ರೀಮಚ್ಚಾಳುಕ್ಯ ವಿಕ್ರಮ [ಎ.ಕ. ೭-೧, ಶಿಕಾರಿಪುರ.೧೧೫]

೩. ಪದುಮಾವತೀ ವರಪ್ರಸಾದ ಲಬ್ಧ ಸಿಂಹಲಾಂಚನ ವನರಾಜ [ಎ.ಕ.೮(ರ) ಆಲೂರು. ೮ (೫ ಹಾ ೪೫) ೧೦೨೫. ಕಣತೂರು. ಪು. ೪೩೮]

೪. ಏಕಾಂಗ ವೀರನಸಹಾಯ ಶೌರ್ಯ ಸಾಹಸೋತ್ತುಂಗನಯ್ಯನ ಸಿಂಗಂ ಗೇಣಿಕಾರರ ದೇವ ನೊಂದಿರಿವಾತಂ ಲೋಕ ವಿಖ್ಯಾತಂ ಸಮ್ಯಕ್ತ್ವ ರತ್ನಾಕರಂ ಪದ್ಮಾವತೀಲಬ್ಧವರ ಪ್ರಸಾದಂ ನಾಮಾದಿ ಸಮಸ್ತ ಪ್ರಶಸ್ತಿ ಸಹಿತಂ ಶ್ರೀಮನ್ ಮಹಾಸಾಮಂತಂ ಮಾರ್ತಣ್ಡಯ್ಯಂ ತಮ್ಮ ಮುತ್ತಯ್ಯಂ ಮಾಡಿಸಿದ ಬಸದಿಯಂ ಪಡಿಸಲಿಸಿ ನಾಟಕ ಶಾಲೆಯಂ ಮಾಡಿಸಿ ತನ್ನ ಕೀರ್ತಿ ಶಿಳಾ ಸ್ತಂಭಮನಾಚಂದ್ರಾರ್ಕ್ಕ ತಾರಂಬರಂ ನಿಲಿಸಿದಂ [ಸೌ.ಇ.ಇ.೧೧-೧, ೭೮.೧೦೪೫. ಮುಗದ (ಧಾಜಿ / ತಾ)]- ಹೀಗೆಯೇ ಇನ್ನೂ ಹತ್ತಾರು ಶಾಸನಗಳಲ್ಲಿ ಪದ್ಮಾವತೀ ದೇವಿಯ ಮಹಿಮೆಗೆ ಪಾತ್ರರಾದ ರಾಜರಾಣಿಯರ, ಮನೆತನಗಳ ಪ್ರಸ್ತಾಪಗಳು ಸಿಗುತ್ತವೆ [ನಾಗರಾಜಯ್ಯ, ಹಂಪ : ಸಾಂತರರು ಒಂದು ಅಧ್ಯಯನ, ೧೯೯೭, ೨೪೩-೪೪].

ಇದೇ ರೀತಿ; ಜಿನಶಾಸನ ದೇವಿಯಾದ ಜ್ವಾಲಾಮಾಲಿನೀದೇವಿಯ ಮಹಿಮೆಯೂ ಸಾಕಷ್ಟು ಪ್ರಕಟವಾಗಿದೆ. ೮-೯ನೆಯ ಶತಮಾನದ ವೇಳೆಗೆ ಜ್ವಾಲಾ ಮಾಲಿನಿಯನ್ನು ಅರಮನೆಗಳಲ್ಲೂ, ಮನೆದೇವರ ಗುಡಿಗಳಲ್ಲೂ ಪೂಜಿಸುತ್ತಿದ್ದ ರಾಜಮನ್ನೆಯರ ಉಲ್ಲೇಖಗಳು ಶಾಸನಗಳಲ್ಲಿ ಸಿಗುತ್ತವೆ. ಸಮಂತ ಭದ್ರಾಚಾರ್ಯರು (೫-೬ ಶ.) ಈ ದೇವಿಯ ಕೃಪೆಗೆ ಪಾತ್ರರಾಗಿದ್ದರೆನ್ನಲಾಗಿದೆ. ಆದಿಕವಿ ಪಂಪನು (೯೩೨)ವಿಕ್ರಮಾರ್ಜುನ ವಿಜಯದಲ್ಲಿ -ಅಗ್ನಿಕುಂಡ ಸಂಜಾತೆ ದ್ರೌಪದಿ ಜ್ವಾಳಾಮಾಳಿನಿ ಯೊಗೆವಂತೊಗೆದ ಕೃಷ್ಣೆ’ (೩-೩೨ ವ) ಎಂದು ಪ್ರಸ್ತಾಪಿಸಿದ್ದಾನೆ. ದ್ರವಿಳಗಣದ ಏಳಾಚಾರ್ಯನು (೭-೮. ಶ.). ಜ್ವಾಲಿನೀಕಲ್ಪ ಪರಂಪರೆಯನ್ನು ಪ್ರಾರಂಭಿಸಿದ್ದನು. ಪೊನ್ನಕವಿಯ (೯೬೫) ಗುರುವಾದ ಇಂದ್ರನಂದಿಯು (೮೬೦-೯೩೫) ಮಾನ್ಯಖೇಟದಲ್ಲಿ ಭೈರವ ಪದ್ಮಾವತೀಕಲ್ಪ ಮತ್ತು ಜ್ವಾಲೀನಿ ಕಲ್ಪ ಎಂಬ ಕೃತಿಗಳನ್ನು ರಚಿಸಿದ್ದನು. ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕು ಹಳೆಯ ಬೀಡು ಹತ್ತಿರವಿರುವ, ಜಾವಗಲ್ ಗ್ರಾಮದ ಚಂದ್ರನಾಥ ಬಸದಿಯು ಸುಮಾರು ಒಂಬತ್ತನೆಯ ಶತಮಾನಕ್ಕೆ ಸೇರಿದ್ದೆಂದು ತಿಳಿಯುವುದಕ್ಕೆ, ಅಲ್ಲಿನ ನಿಸಿದಿಗೆ ಶಾಸನವು ೧೦ ನೆಯ ಶ.ಕ್ಕೆ ಸೇರಿದ್ದೆಂಬ ಅಂಶ ಸಹಕಾರಿಯಾಗಿದೆ; ಈ ಹಳೆಯ ಕಾಲದ ಜಿನಾಲಯದಲ್ಲಿ ಜ್ವಾಲಾಮಾಲಿನೀ ದೇವಿಯ ಅಂಶ ಲೋಹಮೂರ್ತಿಗಳಿವೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಗೇರು ಸೊಪ್ಪ (ಭಲ್ಲಾತಕೀ ಪುರ, ಕ್ಷೇಮಪುರ) ದ ಅಧಿದೇವತೆ ಜ್ವಾಲಾಮಾಲಿನೀ ದೇವಿಯೇ ಆಗಿದ್ದಳು. [ನಾಗರಾಜಯ್ಯ. ಹಂಪ : ಯಕ್ಷ ಯಕ್ಷಿಯರು: ೧೯೭೬ : ೧೨೩-೨೪]. ಅಲ್ಲದೆ ಧಾರವಾಡ ಜಿಲ್ಲೆಯ ನವಿಲುಗುಂದದಲ್ಲಿದ್ದ, ಪ್ರಾಚೀನವಾದ ಜ್ವಾಳಾಮಳಿನೀ ದೇವಿಯ ಒಂದು ಸ್ವತಂತ್ರ ಬಸದಿಗೆ, ಇಡಿ ಜಾವೂರು ಎಂಬ ಹಳ್ಳಿಯನ್ನು ಸರ್ವನಮಶ್ಯವಾಗಿ ಬಿಟ್ಟು ಕೊಟ್ಟುದನ್ನು ತಿಳಿಸುವ ಮಹತ್ವದ ಶಾಸನವಿದೆ [ಸೌ.ಇ.ಇ.೧೫, ೬೩೭. ಸು. ೧೩ ಶ. ಜಾವೂರು. ಪು. ೪೦೮]. ಈ ಎಲ್ಲ ಹಿನ್ನೆಲೆಯಿಂದ ಜ್ವಾಲಾಮಾಲಿನಿದೇವಿಯ ಕೆಲವು ಸಂಗತಿಗಳನ್ನು ಶಾಸನಗಳ ಆಧಾರದಿಂದ ಮುಂದೆ ವಿವೇಚಿಸಲಾಗುವುದು.

ಧಾರವಾಡಜಿಲ್ಲೆಯ ಗಾವರವಾಡ ಶಾಸನವು ಅತ್ಯಂತ ಮಹತ್ವದ ಶಾಸನಗಳಲ್ಲೊಂದು. ಅದರಲ್ಲಿ ಕೆಲವು ಚಾರಿತ್ರಿಕ ದಾಖಲೆಗಳು ಪರಿಶೀಲನ ಯೋಗ್ಯವಾಗಿವೆ. ಇದೊಂದು ಸುದೀರ್ಘ ಶಾಸನ. ಇದು ಕಲ್ಯಾಣ ಚಾಳುಕ್ಯರ ಭುವನೈಕಮಲ್ಲ ಇಮ್ಮಡಿ ಸೋಮೇಶ್ವರ ಚಕ್ರವರ್ತಿಯ ಆಳ್ವಿಕೆಗೆ ಸೇರಿದ ಶಾಸನ. ಇದರಲ್ಲಿ ಮಯೂರಾವತೀಪುರದ ಒಡೆಯನೂ, ಕತ್ತಲೆಕುಲಕ್ಕೆ ಸೇರಿದವನೂ ಆದ ಒಬ್ಬ ಕಾಟರಸನನ್ನು ಪರಿಚಯಿಸಲಾಗಿದೆ. ಶ್ರವಣಬೆಳಗೊಳದ ಚಿಕ್ಕಬೆಟ್ಟದ ಮೇಲೆ ಇರುವ ಕತ್ತಲೆ ಬಸದಿಯನ್ನು ಈ ಕತ್ತಲೆ ಕುಲದ ಕಾಟರಸನೊ ಅಥವಾ ಅವನ ವಂಶಸ್ಥರೊ ಕಟ್ಟಿಸಿರಬೇಕೆಂದು ಭಾವಿಸಲು ಅವಕಾಶವಿದೆ. ಗಾವರವಾಡದ ಶಾಸನ ದೊಡ್ಡದಿರುವುದರಿಂದ ಪ್ರಸ್ತುತ ಚರ್ಚೆಯ ಕಕ್ಷೆಗೆ ಒಳಪಡುವ ಕೆಲವು ಸಾಲುಗಳನ್ನಷ್ಟೆ ಇಲ್ಲಿ ಉದಾಹರಿಸುತ್ತೇನೆ:

೧. ಸ್ವಸ್ತಿ ಸಮಧಿಗತ ಪಂಚ ಮಹಾಶಬ್ದ ಮಹಾಸಾಮನ್ತ ಭುಜಬಳೋಪಾರ್ಜ್ಜಿತ ವಿಜಯ ಲಕ್ಷ್ಮೀಕಾಂತಂ ಸಮಸ್ತಾರಿ ವಿಜಯದಕ್ಷದಕ್ಷಿಣ ದೋರ್ದಣ್ದಂ ಕತ್ತಲೆ ಕುಲ ಕಮಳ ಮಾರ್ತಣ್ಡಂ ಮಯೂರಾವತೀ ಪುರವರಾಧೀಶ್ವರಂ ಜ್ವಾಲಿನೀಲಬ್ಧವರ ಪ್ರಸಾದ ಕರ್ಪ್ಪೂರ ವರ್ಷಂ ಜಿನಧರ್ಮ್ಮ ನಿರ್ಮ್ಮಳಂ ನೆರೆ ಕಾಟಿಯಂಕಕಾರನಾಮಾದಿ ಸಮಸ್ತ ಪ್ರಸಸ್ತಿ ಸಹಿತಂ ಶ್ರೀಮನ್ ಮಹಾಸಾಮಂತ ಬೆಳ್ವಲಾಧಿಪತಿ ಭುಜಬಳ ಕಾಟರಸರುಂ [ಎ.ಇ.೧೫,೨೩.೧೦೭೧-೭೨. ಗಾವರವಾಡ – ಅಣ್ನಿಗೇರಿ. ಸಾಲು : ೪೪-೪೭].

ಈ ಶಾಸನದ ಮಹತ್ವವೆಂದರೆ ಶಾಂತಿನಾಥನೆಂಬ ಜೈನ ಕವಿಯು ಇದನ್ನು ಬರೆದಿರುವನೆಂಬುದು. ಈ ಶಾಂತಿನಾಥ ಕವಿಯು ಸುಕುಮಾರ ಚರಿತೆಯೆಂಬ ಚಂಪೂ ಕಾವ್ಯವನ್ನೂ, ಶಿಕಾರಿಪುರ ೧೩೬ ನೆಯ ಮಹತ್ವದ ಶಾಸನವನ್ನು ರಚಿಸಿ ಪ್ರಸಿದ್ಧನಾಗಿದ್ದಾನೆ [ಕಮಲಾ ಹಂಪನಾ : ಶಾಂತಿನಾಥ : ೧೯೭೨].

೨. ಇನ್ನೊಂದು ಶಾಸನ ಹನ್ನೆರಡನೆಯ ಶತಮಾನಕ್ಕೆ ಸೇರಿದ್ದಾಗಿದೆ. ಇದು ಸಹ ಧಾರವಾಡ ಜಿಲ್ಲೆಯ ಗದಗದಲ್ಲಿ ದೊರೆತಿದೆ. ಈ ಶಾಸನದ ಒಕ್ಕಣೆಯಿಂದ ಪ್ರಸ್ತುತಕ್ಕೆ ಉಚಿತವಾಗುವಷ್ಟನ್ನು ಮಾತ್ರ ಎತ್ತಿಕೊಳ್ಳಲಾಗಿದೆ:

ಸ್ವಸ್ತಿ ಸಮಧಿಗತ ಪಂಚಮಹಾಶಬ್ದಂ ಮಹಾಮಂಡಲೇಶ್ವರ ಆಸಂದಿ ಮಯೂರ ಪುರವರಾಧೀಶ್ವರ ವಿರೋಧಿ ಮಂಡಳಿಕನಗ ವಜ್ರದಂಡಂ ಸುಭಟ ಚೂಡಾಮಣಿ ವೈರಿಗಜ ಶೇಖರಿ ಸಹಜ ಮುರಾರಿ ಶ್ರೀಮಜ್ಜಿನ ಗಂಧೋದಕ ಪವಿತ್ರೀ ಕೃತೋತ್ತಮಾಂಗನ್ + ಏಕಾಂಗವೀರ ಪರನಾರೀ ದೂರ ವಿಬುಧಜನಸ್ತುತ್ಯ ಬೆಳ್ವೊಲಾ ದಿತ್ಯ ಜ್ವಾಳಿನೀದೇವೀ ಲಬ್ಧವರ ಪ್ರಸಾದಾಸಾದಿತ ಕಲಿಗಳಂ ಕಾವ ಮಹಾಮಂಡಳೇಶ್ವರಂ ರಾಯದೇವರಸರು [ಸೌ.ಇ.ಇ. ೧೫, ೨೧೪.೧೧೯೯. ಗದಾ. ಪು. ೨೫೬-೫೭]

ಈ ಎರಡು ಉದಾಹೃತ ಶಾಸನಗಳಿಂದ ತಿಳಿದು ಬರುವ ವಿಚಾರಗಳೆಂದರೆ ಯಕ್ಷಿ ಜ್ವಾಳಾಮಾಳಿನೀ ದೇವಿಯ ಬೆಳ್ವೊಲ ನಾಡಿನೊಳಗೆ ಪ್ರಸಿದ್ಧಳಾದ ದೇವತೆಯಾಗಿದ್ದಳು. ಆಕೆಯ ಅನುಗ್ರಹದಿಂದ ಕೆಲವರು ಮಹಾಮಂಡಳೇಶ್ವರರಾಗಿ ದ್ದರು. ಅವರಲ್ಲಿ ಕತ್ತಲೆಕುಲಜ ಕಾಟರಸನು ಹನ್ನೊಂದನೆಯ ಶತಮಾನದಲ್ಲಿಯೂ, ದೇವರಸನು ಹನ್ನೆರಡನೆಯ ಶತಮಾನದಲ್ಲಿಯೂ ಪ್ರಸಿದ್ಧರಾಗಿದ್ದರು.

ಬೆಳ್ವೊಲವೆಂಬ ಪ್ರದೇಶದ ವ್ಯಾಪ್ತಿ ವಿಶಾಲವಾದುದು. ಧಾರವಾಡಜಿಲ್ಲೆ ಗದಗ ತಾಲ್ಲೂಕಿನ ಇಟ್ಟಗಿಯ ಒಂದು ಶಾಸನದಲ್ಲಿ ‘ಬಹುಧರ್ಮಧೇನು ನಿವಹಕ್ಕೆ ಆಡುಂಬೊಲಂ ಬೆಳ್ವಲಂ’ ಎಂಬ ವರ್ಣನೆಯಿಂದ [ಎ.ಇ.೧೩, ೪-ಎ. ೧೧೧೨.]. ಬೆಳ್ವಲವು ವಿಖ್ಯಾತವಾದ ಕುಂತಳದೇಶದಲ್ಲಿಯೇ ಗಣ್ಯವೆನಿಸಿದ್ದ ನಾಡು. ಬೆಳ್ವಲ ವಿಷಯಕ್ಕೆ ನೆಲೆವೀಡು ಅಣ್ಣಿಗೆರೆ. ಬೆಳ್ವೊಲ ಮುನ್ನೂರು ಹಾಗೂ ಪುಲಿಗೆರೆ ಮುನ್ನೂರು ಸೇರಿ ಆದ ಎರಡರು ನೂರರ ಪ್ರದೆಶವು ಚರಿತ್ರೆಯಲ್ಲಿ ಹೆಸರಾಗಿದೆ. ಗಂಗರು. ರಟ್ಟರು, ಚಾಲುಕ್ಯರು ಈ ಭಾಗವನ್ನು ಆಳುತ್ತಿದ್ದ ಅವಧಿಯ ಉದ್ದಕ್ಕೂ, ಸುಮಾರು ಆರುನೂರು ವರ್ಷಗಲವರೆಗೆ ಸತತವಾಗಿ, ಈ ಹರವಾದ ನೆಲಹೊಲ ಬಯಲು ಅಷ್ಟೂ ಜೈನ ಕೇಂದ್ರವಾಗಿ ವಿಜೃಂಭಿಸಿತು. ಬೆಳ್ವಲ ಮುನ್ನೂರರಲ್ಲಿ ರಾಜಧಾನಿ ಪಟ್ಟನ ಅನ್ನಿಗೇರಿಯು ಬಾದಾಮಿ ಚಾಲುಕ್ಯರ ಕಾಲಕ್ಕಾಗಲೇ ಪ್ರಸಿದ್ಧವಾದ ಜೈನ ಕ್ಷೇತ್ರ ವಾಗಿತ್ತೆಂಬುದಕ್ಕೆ ಶಾಸನಗಳ ಆಧಾರವಿದೆ [ಸೌ.ಇ.ಇ.೧೧-೧, ೫.೭೫೦-೫೨. ಅಣ್ಣಿಗೆರೆ]. ಅನಂತರ ರಾಷ್ಟ್ರಕೂಟರ, ಕಲ್ಯಾಣಿ ಚಾಳುಕ್ಯರ, ಹೊಯ್ಸಳರ ಕಾಲದಲ್ಲಿಯೂ ಅಣ್ಣಿಗೆರೆಯು ಬೆಳ್ವೊಲದ ರಾಜಧಾನಿ ಮಹಾನಗರವಾಗಿಯೇ ಮುಂದುವರಿಯಿತು. ಗಂಗರ ಪೆರ್ಮಾಡಿ ಬೂತುಗನು ಇಲ್ಲಿ ಪೆರ್ಮಾಡಿ ಬಸದಿಯನ್ನು ಕಟ್ಟಿಸಿದನು ಮತ್ತು ಆ ದೇವಾಲಯವನ್ನು ಭುವನೈಕಮಲ್ಲನು ಧವಳಿತ ಉತ್ತುಂಗ ತಳತರಂಗವಾಗಿ ಮಾಡಿಸಿದನು [ಸೌ.ಇ.ಇ.೧೧-೧,೧೦೩. ನಂದವಾಡಿಗೆ.ಸು.೧೦೬೫].

ಬೆಳ್ವೊಲ ನಾಡಿನಲ್ಲಿ ಅಣ್ಣಿಗೆರೆಯಲ್ಲದೆ ಇಟಗಿ, ಕುಕನೂರು-೩೦, ಕುಂದ ಗೋಳ, ಚಂಚಲಿ, ಗದಗ, ನರಗುಂದ, ನರೇಗಲ್ಲ-೧೨, ಮುಳಗುಂದ-೧೨, ರೋಣ, ಲಕ್ಕುಂಡಿ, ಶಿರೂರ, ಹುನಗುಂದ-೩೦(ಪೊನ್ನುಗುಂದ) – ಮೊದಲಾದ ಸ್ಥಳಗಳು ಆಧಾರಸ್ತಂಭವೆನಿಸಿದ್ದುವು. ಧಾರವಾಡ ಜಿಲ್ಲೆ, ಬೆಳಗಾವಿ ಜಿಲ್ಲೆಯ ರಾಮದುರ್ಗ ಮತ್ತು ಸೌದತ್ತಿ ತಾಲ್ಲೂಕು ಭಾಗಗಳು, ಬಿಜಾಪುರ ರಾಯಚೂರು ಜಿಲ್ಲೆಯ ಯಲಬುರ್ಗಿ ತಾಲ್ಲೂಕು – ಈ ಜಿಲ್ಲೆ ತಾಲ್ಲೂಕುಗಳ ಬಹುಮಟ್ಟಿನ ಮುಖ್ಯ ಹಳ್ಳಿಗಳನ್ನು ಒಳಗೊಂಡ ಹರಹಿನ ನೆಲವೆಲ್ಲವೂ ಬೆಳ್ವಲ ಸೀಮೆಯಾಗಿ ಸೇರಿತ್ತು. ದಾನಚಿಂತಾಮಣಿ ಅತ್ತಿ ಮಬ್ಬೆಯು ಈ ಬೆಳ್ವೊಲ ನಾಡಿನ ಮಹಾನ್ ಸ್ತ್ರೀ ರತ್ನ ನಾಗವರ್ಮಮ್, ಶ್ರೀಧರ (ಜಾತಕತಿಲಕ), ನಯಸೇನ(ಧರ್ಮಾಮೃತ), ವಿಜಯಣ್ಣ (ದ್ವಾದಶಾನುಪ್ರೇಕ್ಷೆ) ಮೊದಲಾದ ಸರಸ್ವತಿಯ ವರಪುತ್ರರು ಬೆಳ್ವಲ ಪ್ರದೇಶದ ರತ್ನಗಳು ಇವುಗಳಿಂದ ನಿಚ್ಛಳವಾಗುವಂತೆ ಬೆಳ್ವಲವು ಬಸದಿಗಳು ಬೀಡಾಗಿ ಜೈನಧರ್ಮದ ಹಬ್ಬುವಿಕೆಗೆ ಇಂಬಾಗಿತ್ತು.

ಗದಗ – ಗಾವರವಾಡ ಶಾಸನಗಳ ಆಧಾರದಿಂದ ಗ್ರಹಿಸಬಹುದಾದ ಅರ್ಥ ಪ್ರತೀತಿಗೆ ಈ ಭೌಗೋಳಿಕ – ಚಾರಿತ್ರಿಕ ಹಿನ್ನೆಲೆಯನ್ನೂ ಅವಶ್ಯ ಅಳವಡಿಸಿಕೊಂಡೇ ತೀರ್ಮಾನವನ್ನು ಕೈಗೊಳ್ಳಬೇಕು. ಅಣ್ಣಿಗೆರೆ, ಮುಳುಗುಂದ, ಲಕ್ಕುಂಡಿ ಮೊದಲಾದ ಸ್ಥಳಗಳು ಸ್ಥಳಗಳು ಜೈನ ಕೇಂದ್ರ ಹಾಗೂ ತೀರ್ಥ ಸ್ಥಳಗಳಾಗಿದ್ದು ಅನೇಕ ಜಿನಗೃಹಗಳನ್ನು ಒಳಗೊಂಡು ಅಹಿಂಸೆಯ ಸಂದೇಶವನ್ನು ಬಿತ್ತರಿಸಿದುವು. ಇಲ್ಲಿನ ಚೈತ್ಯಾಲಯ ಮಂದಿರಗಳಲ್ಲಿನ ಜಿನಶಾಸನದೇವತೆಗಳ ಮೂರ್ತಿಗಳು ಪ್ರಭಾವಶಾಲಿಯಾಗಿ ಪೂಜೆ ಗೊಳ್ಳುತ್ತಿದ್ದುವು. ಲಕ್ಕುಂಡಿಯ ಬ್ರಹ್ಮ ಜಿನಾಲಯದ ಆವರಣದೊಳಗಿದ್ದ ಪದ್ಮಾವತಿ ಗುಡಿಯು ಪ್ರಸಿದ್ಧವಾಗಿತ್ತು [ಸೌ.ಇ.ಇ.೧೧, ೫೨.೧೦೦೭. ಲಕ್ಕುಂಡಿ (ಧಾಜಿ / ಗದಗ ತಾ)] ಅದರಂತೆಯೇ ಅಣ್ಣಿಗೇರಿ ಮತ್ತು ಮುಳ್ಗುಂದಗಳಲ್ಲಿ ಇದ್ದ ಬಸದಿಗಳಲ್ಲಿಯೂ ಜ್ವಾಳಾಮಾಳಿನೀ ದೇವಿಯಕ್ಷಿಯ ಗುಡಿಗಳೂ ಮೂರ್ತಿಗಳೂ ಇದ್ದಿರಬೇಕು. ಈ ಶಾಸನದೇವಿಯ ಮಹಿಮೆಯು ಮನೆಮಾತಾಗಿ ರಾಜ ಪ್ರಜೆಗಳೆಲ್ಲರ ಮೇಲೆ ತನ್ನ ಪ್ರಭಾವ ಬೀರಿದ್ದಿರಬೇಕು. ಈಗಿನ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ (ಸಿಂಹನಗದ್ದೆ – ಎನ್.ಆರ್.ಪುರ) ಕ್ಷೇತ್ರವು ಜ್ವಾಳಾ ಮಾಳಿನೀ ದೇವಿಯು ಇರುವ ದೇವಾಲಯವು ತುಂಬ ಹೆಸರುವಾಸಿಯಾಗಿದೆ; ಈ ಗುಡಿಯು ವಿರಾಜಮಾನಗೊಂಡು ಪ್ರಸಿದ್ಧಿಯನ್ನು ಪಡೆಯುವುದಕ್ಕೂ ಮೊದಲು, ಶತಮಾನಗಳ ಹಿಂದೆ, ಬೆಳ್ವಲ ನಾಡಿನಲ್ಲಿ ಈ ಜ್ವಾಳಾಮಾಳಿನಿ ದೇವಿಯ ಮಹಿಮೆಯು ಮನ್ನಣೆಹೊಂದಿತ್ತು ಎಂಬುದಕ್ಕೆ ಈ ಸಂಪ್ರಬಂಧದಲ್ಲಿ ಉದಾಹರಿಸಿರುವ ಎರಡು ಶಾಸನ ಭಾಗಗಳು ಸ್ಪಷ್ಟದಾಖಲೆಗಳು. ಮೇಲ್ಕಂಡ ಎರಡು ಶಾಸನಗಳಲ್ಲಿ ಪ್ರಸ್ತಾಪಗೊಂಡಿರುವ ‘ಮಯೂರಪುರ’ವು ಯಾವುದು ಏನು ಎತ್ತ ಎಂಬ ಬಗ್ಗೆ ಇದುವರೆಗೆ ಚರ್ಚೆಗಳಾಗಿಲ್ಲ. ಇದೇ ಮೊದಲನೆಯ ಬಾರಿಗೆ ನಾನಿಲ್ಲಿ, ಇದರ ಸಂಬಂಧವಾಗಿ ಕೆಲವು ಹೊಸಮಾಹಿತಿಗಳನ್ನು ಅಳವಡಿಸಿಕೊಂಡು, ಜಿಜ್ಞಾಸೆ ನಡಸಿದ್ದೇನೆ ಮತ್ತು ಈ ‘ಮಯೂರಪುರ’ ಎಂಬುದು ಕನ್ನಡದ ಸ್ಥಳನಾಮವಾಚಕದ ಸಂಸ್ಕೃತೀಕರಣ ಗೊಂಡಿರುವ ಶಬ್ದರೂಪವೆಂದು ತೋರಿಸಿದ್ದೇನೆ.

ಕನ್ನಡ ಶಾಸನಗಳ ಅಧ್ಯಯನ ಕಾರರಿಗೆ ನವಿಲು ಸಂಬಂಧವಾದ ಊರಿನ ಹೆಸರುಗಳು ಚಿರಪರಿಚಿತ. ಶಿವಮೊಗ್ಗ ಜಿಲ್ಲೆಯಲ್ಲಿ ಶಿಕಾರಿ ಪುರ ತಾಲ್ಲೂಕಿಗೆ ಸೇರಿದ ನವಿಲೆಯಿದೆ [ಎ.ಕ. ೭-೧, ಶಿಕಾರಿ. ೨೦.೧೦೩೨]. ಆದರೆ ಪ್ರಕೃತ ಚರ್ಚಿಸುತ್ತಿರುವ ಮಯೂರ ಪುರವು ಬೆಳ್ವೊಲ ನಾಡಿಗೆ ಸೇರಿದ್ದು, ಅದರಿಂದ ಶಿವಮೊಗ್ಗ ಜಿಲ್ಲೆಯ ನವಿಲಿಗೆ ಸಂಬಂಧಿಸಿದ್ದಲ್ಲ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನಲ್ಲೊಂದು ನವಿಲೆಯಿದೆ [ಸೌ.ಇ.ಇ.೧೧-೧.೧೦೩.೧೦೬೮]. ಆದರೆ ರಾಯಚೂರು ಜಿಲ್ಲೆಯಲ್ಲಿ ಯಲಬುರ್ಗಿ ತಾಲ್ಲೂಕು ಮಾತ್ರ ಬೆಳ್ವೊಲ ಪ್ರದೇಶಕ್ಕೆ ಒಳಪಟ್ಟಿತ್ತು, ಅದರಿಂದ ಅದೂ ಇಲ್ಲಿಗೆ ಅನ್ವಯಿಸುದು. ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆ ಸುತ್ತಮುತ್ತಲ ಪ್ರದೆಶಕ್ಕೆ ಹನ್ನೊಂದನೆಯ ಶತಮಾನದಲ್ಲಿ ‘ನವಿ(ವ)ಲೆ ನಾಡು ಪ್ರಾಂತ’ ಎಂದು ಕರೆಯಲಾಗಿದೆ [ಎ.ಕ.೩(ಪ) ೬೦.೧೦೫೭.; ಎ.ಇ.೬,೨೧೬.೧೦೫೭.;ಎ.ಕ.೬, ೧೦೩.ಸು.೯೦೦]. ಈ ಭಾಗವು ಪ್ರಾಚೀನ ಪುನ್ನಾಡಿಗೆ ರಾಜಧಾನಿಯಾಗಿತ್ತು. ಆದರೆ ಇಲ್ಲಿನ ನವಿಲೆ ನಾಡು ಪ್ರಾಂತ ಕೂಡ ಬೆಳ್ವಲ ಪ್ರದೇಶಾಂತರ್ಗತವಾಗಿರಲಿಲ್ಲವಾದ್ದರಿಂದ ಪ್ರಸ್ತುತ ವಿವೇಚನೆಯ ಕಕ್ಷೆಗೆ ಅಳವಡುವುದಿಲ್ಲ.

ಧಾರವಾಡ ಜಿಲ್ಲೆಯ ನವಿಲುಗುಂದವು ಬೆಳ್ವಲನಾಡಿಗೆ ಒಳಪಟ್ಟಿತ್ತು. ‘ನವಿಲುಗುಂದ ನಾಲ್ವತ್ತು’ ಪ್ರದೇಶವನ್ನು ಶಾಸನ ಉಲ್ಲೇಖಿಸಿದೆ [ಇ.ಆ.೧೨, ೯೭.೧೧೮೭]. ಅಲ್ಲದೆ ನವಿಲ್ಗಂದ ಪುರಂ- ಎಂಬ ಸ್ಥಳನಾಮರೂಪವೂ ಶಾಸನದಲ್ಲಿದೆ [ಸೌ.ಇ.ಇ.೧೧-೧, ೪೫.೯೮೦]. ನವಿಲ್ಗುಂದದ ಕಡೆಯ ಅಳತೆಯ ಕೋಲನ್ನು ‘ನವಿಲ್ಗುಂದ ಗೋಲು’ ಎಂದು ಶಾಸನ ನಮೂದಿಸಿದೆ [ಸೌ.ಇ.ಇ.೨೦, ೨೪೮.೧೨೨೮]. ಇದೇ ಧಾರವಾಡ ಜಿಲ್ಲೆಯ ನವಿಲೂರು ಎಂಬುದು ಬಾದಾಮಿ ಚಾಳುಕ್ಯರ ಕಾಲದಿಂದಲೂ ಏಳು-ಎಂಟನೆಯ ಶತಮಾನದಿಂದಲೂ, ಜೈನ ಕ್ಷೇತ್ರವೆಂದು ಪ್ರಸಿದ್ಧವಾಗಿದೆಯಲ್ಲದೆ ಸುಮಾರು ೧೨೯೦ ವರ್ಷಗಳಿಂದ ಈ ನವಿಲೂರು ಜೈನತೀರ್ಥಸ್ಥಳ ಕೇಂದ್ರವಾಗಿ ಬೆಳೆದು ಬಂದಿದೆಯೆಂದು ಶಾಸನಗಳು ಸಾರಿ ಹೇಳುತ್ತಿವೆ:

೧. ನವಿಲೂರ ನಾೞ್ಗಾಮುಣ್ಡರು ಬೆಳ್ಗೊಳದ ಗೋವಿಂದ ಪಾಡಿಲು
[ಎ.ಕ. ೨(ಪ.) ೩೮ (೩೫).೮೦೦]

೨. ನವಿಲೂರು ಗಣದ ಬಾಳಂಬಾ ಕನ್ತಿಯರ ಮಗಳ್ ವಿಜಕ್ಕಂ [ಎ.ಕ.೬, ಕಡೂರು ೧೫೯.೯೬೧. ಸಾಲು : ೧೨]

೩. ಸ್ವಸ್ತಿ ಶ್ರೀಮತ್ ನವಿಲೂರ್ + ಸಂಘದ ಪುಷ್ಪಸೇನಾಚಾರಿಯ ನಿಸಿಧಿಗೆ [ಎ.ಕ.೨(ಪ.). ೧೧೮. ಅತೇದಿ. ಸಾಲು : ೧]

೪. ನವಿಲೂರಾ ಸಿರಿಸಂಘ ದಾಜಿಗಣದಾ ರಾಜ್ಞೀಮತಿಗನ್ತಿಯರ್ [ಎ.ಕ೨. (ಪ.) ೧೧೨ (೯೭).೭ಶ.

೫. ನವಿಲೂರ ಸಂಘದ ಮಹಾನನ್ತಾಮತೀ ಗನ್ತಿಯಾರ್ [ಅದೇ, ೧೧೭ (೧೦೨). ೭ಶ.]

ಮೇಲಿನ ಶಾಸನ ಪ್ರಯೋಗಗಳಿಂದ ಸಾಬೀತು ಆಗುವಂತೆ, ನವಿಲೂರು ಜೈನ ಕೇಂದ್ರವಾಗಿತ್ತು. ಅಲ್ಲದೆ ನವಿಲೂರು ಎಂಬ ಹೆಸರಿನಿಂದ ಒಂದು ಜೈನ ಗಣವೂ, ಸಂಘವೂ, ಪ್ರಚಾರ ಪಡೆದುವು ಎಂಬುದು ವಿಶೇಷ ಗಮನಿಕೆಗೆ ಪಾತ್ರವಾಗುತ್ತದೆ. ಈ ಕಾರಣಗಳಿಂದ ಧಾರವಾಡ ಜಿಲ್ಲೆ-ತಾಲ್ಲೂಕಿಗೆ ಸೇರಿದ ಈ ನವಿಲೂರು ಬೆಳ್ವಲ ಪ್ರದೇಶದ ಪ್ರತಿಷ್ಠಿತ ಕಂಪಣ ಕೇಂದ್ರವಾಗಿತ್ತು. ಈ ನವಿಲೂರು ಎಂಬ ಊರಿನ ಹೆಸರನ್ನು ಸಂಸ್ಕೃತಭಾಷೆಗೆ ಅಳವಡಿಸಿ, ಸಂಸ್ಕೃತೀಕರಣಗೊಳಿಸಿ “ಮಯೂರಪುರ” ಎಂದು ಮಾಡಿದೆಯೆಂದು ಊಹಿಸುವುದು ಸಂಭಾವ್ಯವೆನ್ನಬೇಕು. ಈ ಪ್ರಮೇಯವನ್ನು (Hypothesis) ಬೆಂಬಲಿಸುವ ಸಲುವಾಗಿ ಶ್ರವಣಬೆಳುಗೊಳದ ಎರಡು ಶಾಸನಗಳು ಸಿದ್ಧವಾಗಿವೆ. ಆ ಎರಡೂ ಶಾಸನಗಳ ಸ್ವಾರಸ್ಯ ಮತ್ತು ಪ್ರಸ್ತುತ ಪ್ರಮೇಯಕ್ಕೆ ಸಹಾಯಕ ಅಂಶವೆಂದರೆ ಅವುಗಳಲ್ಲಿ ಒಂದು ಕನ್ನಡದಲ್ಲೂ, ಇನ್ನೊಂದು ಸಂಸ್ಕೃತದಲ್ಲೂ ಇರುವುದು. ಅಷ್ಟೇ ಅಲ್ಲದೆ ಒಂದರಲ್ಲೇ ಪೂರ್ವಾರ್ಧ ಕನ್ನಡದಲ್ಲೂ, ಉತ್ತರಾರ್ಧವು ಸಂಸ್ಕೃತದಲ್ಲೂ ರಚಿತವಾಗಿದೆ. ಕನ್ನಡದಲ್ಲಿ ಇರುವ ಮೊದಲಭಾಗದಲ್ಲಿ ಇದನ್ನು ನವಿಲೂರು ಸಂಘ ಎಂದೂ, ಸಂಸ್ಕೃತ ರಚನೆಯಿರುವ ಎರಡನೆಯ ಭಾಗದಲ್ಲಿ ‘ಮಯೂರ ಸಂಘ’ ಎಂದೂ ಸ್ಪಷ್ಟವಾಗಿದೆ [ಎ.ಕ.೨(ಪ.). ಶ್ರಬೆ ೧೩೨ (೧೧೪) ಮತ್ತು ಅದೇ, ೧೨೩(೧೦೮)]. ಅಲ್ಲದೆ ಇದರಲ್ಲಿ ‘ಮಯೂರ ಗ್ರಾಮಸಂಘಸ್ಯ’ ಎಂದು ಕನ್ನಡ ಅಂಕಿತ ನಾಮವನ್ನು ಸಂಸ್ಕೃತಕ್ಕೆ ಪರಿವರ್ತಿಸಿರುವುದು ನಿಚ್ಚಳವಾಗಿದೆ. ಆದ್ದರಿಂದ ‘ಮಯೂರ ಪುರ’ ಎಂಬುದು ‘ನವಿಲೂರು’ ಎಂಬ ಕನ್ನಡ ಸ್ಥಳವಾಚಿ ಮೂಲದ್ದೆಂದು ತೀರ್ಮಾನಿಸಿ, ಪ್ರಮೇಯವನ್ನು ಪಕ್ಕಾ ತೀರ್ಮಾನವಾಗಿ ಒಪ್ಪಬಹುದೆನಿಸುತ್ತದೆ.

ಆದರೆ ಈ ತೀರ್ಮಾನವನ್ನು ಆಖೈರಾಗಿ ಒಪ್ಪುವುದಕ್ಕೆ ಮೊದಲು ದೊರೆಯುವ ಇನ್ನಷ್ಟು ಸಾಮಗ್ರಿಯನ್ನೂ ಸಹ ಪರಿಶೀಲಿಸಬೇಕಾಗುತ್ತದೆ. ಏಕೆಂದರೆ ಈ ನವಿಲೂರು ಬೆಳ್ವಲದಲ್ಲೇ ಇದ್ದರೂ, ಜೈನ ಕೇಂದ್ರ ಕೂಡ ಆಗಿದ್ದರೂ, ಮಯೂರ ಗ್ರಾಮ ಸಹ ಆಗಿದ್ದರೂ, ಮಹಾಸಾಮಂತನಾದ ರಾಯದೇವರಸನೂ, ಮಹಾಮಂಡಲೇಶ್ವರ ಕಾಟರಸನೂ ಇದ್ದ ಮಯೂರಪುರವು ಇದೇನೆ ಹೌದೊ ಅಲ್ಲವೊ ಎಂದು ಪರಾಮರ್ಶಿಸಿಬೇಕಾಗಿದೆ. ಆ ರೀತಿಯ ಪರೀಕ್ಷೆಗೆ ತೊಡಗಿದಾಗ ಮೇಲಿನ ಪ್ರಮೇಯ ನಿಲ್ಲುವುದಿಲ್ಲವೆಂಬುದು ಸ್ವಾರಸ್ಯವಾದ ಬೆಳವಣಿಗೆಯಾಗಿದೆ. ಇನ್ನಷ್ಟು ಉಪಲಬ್ಧ ಶಾಸನ ಸಾಮಗ್ರಿಯಿಂದ ಅಂತಿಮವಾಗಿ ತಿಳಿದುಬರುವ ವಾಸ್ತವ ಸಂಗತಿಯೆಂದರೆ. ದೇವರಸನೂ ಕಾಟರೆಸಾದಿಗಳೂ ಇದ್ದುದು ಈ ನವಿಲೂರು – ಮಯೂರಪುರವಲ್ಲ ಎಂಬುದು.

ಕಾಟರಸ-ದೇವರಸಾದಿ ಅಧಿಕಾರಿಗಳು ಆಳಿದ್ದು ನವಿಲೂರಿನಿಂದ ಅಲ್ಲ, ನವಿಲ್ಗುಂದದಿಂದ ಎಂಬುದಾಗಿ ತಿಳಿಸುವ ಆಧಾರಗಳು ಶಾಸನಗಳಲ್ಲಿವೆ. ಈಗಿನ ನವಿಲ್ಗುಂದವೂ ಬಾದಾಮಿ ಚಾಳುಕ್ಯರ, ಗಂಗರ ಮತ್ತು ರಾಷ್ಟ್ರಕೂಟರ ಆಡಳಿತದ ಅವಧಿಯಲ್ಲಿಯೇ ಪ್ರಸಿದ್ಧ ಜೈನ ಮುಖ್ಯ ಸ್ಥಳವಾಗಿತ್ತು. ಗದಗದ ಒಂದು ಶಾಸನವು [ಬಾ.ಕ. ೧೯೨೬-೨೭.೬.೧೧೯೯] ಈ ನವಿಲ್ಗುಂದವು ಹೇಗೆ ಒಂದು ದೊಡ್ಡ ಜೈನ ಕೇಂದ್ರವಾಗಿತ್ತೆಂಬುದನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದೆ. ಆ ಶಾಸನದಿಂದ ಇಲ್ಲಿಗೆ ಅಗತ್ಯವಾಗಿ ಬೇಕಾದ ಹೃದಯಭಾಗವನ್ನು ಉದಾಹರಿಸಿ ವಿವೇಚಿಸಬಹುದು. ನವಿಲ್ಗುಂದವು ಹಲವು ಜಿನ ಭವನಗಳಿಂದ ಕೂಡಿತ್ತು.

ತೀರ್ತ್ಥಂಕರ ನಿವಾಸದೆ ಶೋಭಾಕರ ಯಕ್ಷ ಯಕ್ಷಿಣೀಗೃಹ ಪರಿಕರದೆ

            ಜ್ವಾಳಿನೀ ಸಮಗ್ರಗುಣಮಣಿ
ಮಾಳಿನೀ ಸಾಧಕ ವಿನಯ ಸುಬ್ರತಿ ಜನತಾ
ಪಾಳಿನೀ ದುರಿತಮಳಪ್ರ
ಕ್ಷಾಳಿನೀ ಸಂವಿದೆಯೆನಿಪ್ಪಳಂತಾ ಪುರದೊಳ್
||

ಎಂಬುದಾಗಿ ವರ್ಣನೆಯಿದೆ. ನವಿಲ್ಗುಂದವು ಜ್ವಾಳಾಮಾಳಿನಿಯನ್ನು ಮುಖ್ಯಸ್ಥಳ ದೇವತೆಯನ್ನಾಗಿ ಪಡೆದಿತ್ತು. ಕತ್ತಲೆಕುಲ ಎಂಬ (ಕಳ್ತಲೆಗ) ಮನೆತನಕ್ಕೆ ಸೇರಿದ ಕೆಂಚಮ್ಮ(ನ್) ಎಂಬಾತನು ಅಂತಾ ಜ್ವಾಳಿನೀ ದೇವಿಯಲ್ಲಿಗೆ ಆರಾಧಿಸಲೆಂದೆ ಬಂದು, ತನ್ನ ಭಕ್ತಿ ನಿರ್ಭರ ಪೂಜೆಯನ್ನು ಸಲ್ಲಿಸಿದನು. ನಿನ್ನಂ ಬಲುಗೊಂಡೆನ್, ಅಂದರೆ ನಿನ್ನನ್ನು ಪೂಜಿಸಿದ್ದೇನೆ- ಪೂಜೆಯನ್ನು ಎಂದು ನಿವೇದಿಸಿಕೊಂಡನು. ಇಮ್ಮಡಿ ನಾಗವರ್ಮಕೃತ ಅಭಿಧಾನ ರತ್ನಮಾಲ ಕರ್ನಾಟಕ ಟೀಕೆಯಲ್ಲಿ ಅರ್ಚಾ, ಪೂಜಾ, ಸಪರ್ಯಾ, ಉಪಹಾರ, ಬಲಿಃ ಈ ಆಯ್ದು ಪೂಜೆ ಎಂಬ ಅರ್ಥದ ಶಬ್ಧಗಳೆಂದು ತಿಳಿಸಿದ್ದಾನೆ.

ನವಿಲ್ಗುಂದದ ಜ್ವಾಳಾಮಾಳಿನೀ ದೇವಿಯು ಕೆಂಚಮನನ್ನು ಅನುಗ್ರಹಿಸಿದ ಳೆಂದೂ, ಆತನಿಗೆ ಪ್ರಸನ್ನಳಾಗಿ ವರಗಳನ್ನಿತ್ತಳೆಂದೂ, ತನ್ನ ಇಚ್ಛಿತಾರ್ಥಸಿದ್ದಿಯ ಆ ವರದಿಂದ ವಿಜಯಿಯಾದನು ಎಂದು ಶಾಸನದಾಖಲಿಸಿದೆ, ಜ್ವಾಳಮಾಳಿನೀ ದೇವಿಯಿಂದ, ಆಕೆಯ ಭಕ್ತರಾದ ಕತ್ತಲೆ ದಾಖಲಿಸಿದೆ. ಜ್ವಾಳಾಮಳಿನೀದೇವಿಯಿಂದ, ಆಕೆಯ ಭಕ್ತರಾದ ಕತ್ತಲೆ ಕುಲದರಸುಗಳ ಆಳಿಕೆಯಿಂದ ನವಿಲ್ಗುಂದವು ದೊಡ್ಡ ಹೆಸರನ್ನು ಪಡೆಯಿತು. ಶೌರ್ಯನಿಧಿಯಾದ ಕೆಂಚನು ಬೆಳ್ವೊಲ ನಾಡೆಲ್ಲವನ್ನೂ ಆಳುವ ಮಾಂಡಲಿಕನೂ ಆದನು, ಜ್ವಾಳಿನೀದೇವಿಯ ಅನುಗ್ರಹದಿಂದ-

ಇನ್ತಿವಗಿದು ಸಂಪದಮಂ
ತನಗಿತ್ತಾ ಜ್ವಾಳಿನೀ ಮಹಾದೇವಿಗೆ ಜೆ
ಲ್ವೆನಿಪಾವಾಸಮನೆತ್ತಿಸಿ
ಯನೇಕ ವೃತ್ತಿಗಳನಿತ್ತನಾ ಕೆಂಚರಸಂ ||

– ಕಳ್ತಲೆ ಕುಲಕ್ಕೆ ಸೇರಿದ ಪ್ರಚಂಡ ಮಂಡಲಿಕ ಕೆಂಚನೃಪನು ಜ್ವಾಳಿನೀದೇವಿಯ ಪರಮಭಕ್ತನು. ತನ್ನ ಕುಲದೇವತೆಯಾದ ಜ್ವಾಳಿನೀ ಮಹಾದೇವಿಗೆ ಆತನು ಒಂದು ದೇವಸ್ಥಾನವನ್ನು, ಹತ್ತನೆಯ ಶತಮಾನದಲ್ಲಿ, ತನ್ನ ನೆಲೆವೀಡು ಬೀಡೂ ಇದ್ದುದರಿಂದ, ನವಿಲ್ಗುಂದದಲ್ಲಿ ಕಟ್ಟಿಸಿದನು. ಈಗ ನನ್ನ ಸಂಶೋಧನೆಯ ಪ್ರಕಾರ ಕರ್ನಾಟಕ ದಲ್ಲಿ ಮತ್ತು ಪ್ರಾಯಃ ಇಡೀ ಭಾರತದಲ್ಲಿಯೇ, ಜ್ವಾಳಾಮಾಳಿನೀ ಶಾಸನದೇವಿಗೆ ಕಟ್ಟಿಸಿಕೊಟ್ಟ ಮೊಟ್ಟಮೊದಲನೆಯ ಸ್ವತಂತ್ರ ದೇವಾಲಯವು ಇದೇ ಆಗಿದೆ. ಅದರಿಂದ ಕೆಂಚನೃಪನು ಈ ಜ್ವಾಳಿನೀ ಮಹಾದೇವಿಗೆ ಎತ್ತಿಸಿದ (ಕಟ್ಟಿಸಿದ) ಈ ಚೆಲ್ವೆನಿಪ ಆವಾಸಕ್ಕೆ, ಸುಂದರ ಬಸದಿಗೆ, ಆತನು ಅನೇಕ ವೃತ್ತಿ (ದತ್ತಿ) ಗಳನ್ನು ಇತ್ತನೆಂಬುದನ್ನೂ ಗಮನಿಸಬೇಕು. ಈ ಕೆಂಚರಸನ ವಂಶದವನೇ ಆದ ಕಾಟರಸನು ನವಿಲ್ಗುಂದದಲ್ಲಿ ‘ತ್ರಿಭುವನ ತಿಳಕಮೆನಿಪ್ಪ ಪೆಸರಜಿನಮಂದಿರ’ ವನ್ನೂ ಮಾಡಿಸಿದನು. ಗಾವರವಾಡದ ಶಾಸನೋಕ್ತ ಕಾಟರಸನೂ, ಗದಗ ಶಾಸನೋಕ್ತ ಕೆಂಚರಸಾದ್ಯರೂ ಒಂದೇ ‘ಕತ್ತಲೆ ಕುಲ’ ವೆಂಬ ವಂಶಕ್ಕೆ ಸೇರಿದವರೆಂದು ಸಂಶೋಧನೆಯಿಂದ ಖಚಿತ ಪಡಿಸಿದ್ದೇನೆ. ಅಲ್ಲದೆ ಮುಳ್ಗುಂದದ [ಎ.ಇ.೧೬.೫೩.೧೦೫೩] ಶಾಸನದಲ್ಲಿ ಹೇಳಿರುವ ಕೆಂಚರಸನೂ ಗದಗ-ಗಾವರವಾಡ ಶಾಸನದ ಕೆಂಚನೃಪನೂ ಅಭಿನ್ನರೆಂದೇ ತಿಳಿಯ ಬೇಕು. ಇದೇ ಕುಲಕ್ಕೆ ಸೇರಿದ ಇಮ್ಮಡಿ – ರಾಯ ದೇವರಸನು ಜ್ವಾಳಿನೀದೇವೀ ಲಬ್ಧವರ ಪ್ರಸಾದಾಸಾದಿತ ಕಲಿಗಳಂ ಕಾವ ಮಹಾಮಣ್ದಳೇಶ್ವರ ನಾಗಿದ್ದನೆಂದು ಗದಗ ಶಾಸನದಲ್ಲಿದೆ(ಸಾಲು:೨೮). ಇದಲ್ಲದೆ ನವಿಲುಗುಂದ ಅನ್ವಯಕ್ಕೆ ಸೇರಿದ ಚಂದವೆ, ರೇಕವ್ವೆ, ಸಕಳನೋಂಪಿ – ಈ ಮೂರು ಉಲ್ಲೇಖಗಳಿರುವ ಹನ್ನೆರಡನೆಯ ಶತಮಾನದ ತ್ರುಟಿತ ಶಾಸನವೊಂದು ಒಂದು ಜೈನ ವಿಗ್ರಹದ ಪಾದಪೀಠದ ಮೇಲಿದೆ; ಇದು ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಪೀಠದಲ್ಲಿದೆ; ಇದನ್ನು ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ್ಲು ಗ್ರಾಮದಿಂದ ತರಲಾಗಿದೆ.

ಇದುವರೆಗಿನ ವಿವರಣಾತ್ಮಕ ಸಮೀಕ್ಷೆಯಿಂದ, ಮೊದಲಿನ ಒಂದು ಪ್ರಮೇಯವು (Hypothesis) ದಿವ್ಯ ತಿರುವನ್ನು ಪಡೆದು, ಮಯೂರಪುರವೆಂದರೆ ಧಾರವಾಡ ಜಿಲ್ಲೆಯಲ್ಲಿರುವ ಈಗಿನ ನವಿಲ್ಗುಂದವೇ ಎಂಬುದಾಗಿ ಸತ್ಯಸಂಗತಿ ಸ್ಥಾಪಿತವಾಗಿದೆ. ನವಿಲ್ಗುಂದ – ಮಯೂರಪುರವು ಕಳ್ತಲೆ-ಕತ್ತಲೆ ಕುಲದವರ ರಾಜ ಧಾನಿಯೂ ಆಗಿತ್ತು. ಈ ಅಪ್ಪಟ ಜೈನ ವಂಶದವರು ನವಿಲ್ಗುಂದ- (ಮಯೂರಪುರ) ದಲ್ಲಿ ಜಿನಾಲಯಗಳನ್ನೂ, ಜ್ವಾಳಾಮಾಲಿನೀದೇವಿಯ ದೇವಾಲಯವನ್ನೂ ಮಾಡಿಸಿದ್ದರು. ಹತ್ತನೆಯ ಶತಮಾನದ ಆರಂಭದ ವೇಳೆಗಾಗಲೆ ನಿರ್ಮಾಣವಾಗಿದ್ದ ಈ ಮಂದಿರವು ನಾಡನಲ್ಲಿ ಕೀರ್ತಿಗಳಿಸಿತ್ತು. ಈ ಪ್ರಾಚೀನ ಜ್ವಾಳಾಮಾಳನೀದೇವಿಯು ತುಂಬ ಪ್ರಸಿದ್ಧಳಾಗಿದ್ದುದಲ್ಲದೆ ಪ್ರಭಾವಶಾಲಿನಿಯೂ ಪೂಜನೀಯಳೂ ಆಗಿದ್ದಳು. ರಾಜರೂ ಸಾಮಂತರೂ ಮಹಾಮಂಡಲೇಶ್ವರರೂ ಈ ಜಿನಶಾಸನದೇವಿಯ ಭಕ್ತರಾಗಿದ್ದರು.

ಜ್ವಾಲಾಮಾಳಿನೀ ಶಾಸನದೇವಿಯ ದೇವಾಲಯ-ಬಿಂಬಾದಿಗಳು ದಕ್ಷಿಣ ಭಾರತದ ಬೇರೆ ರಾಜ್ಯಗಳಲ್ಲೂ ಇದ್ದುವೆಂದೂ ಶಾಸನಗಳಿಂದ ತಿಳಿದುಬರುತ್ತದೆ. ಈ ಲೇಖನದಲ್ಲಿ ಆಗಲೇ ಸೂಚಿಸಿರುವಂತೆ ಹೇಲಗ್ರಾಮ ಪೊನ್ನೂರಿನ (ದಕ್ಷಿಣದೇಶ ದ್ರಾವಿಡ ಗಣದ) ಹೇ(ಏ)ಲಾಚಾರ್ಯರು ನೀಲಗಿರಿ ಬೆಟ್ಟದ ಮೇಲೆ ತಪವೆಸಗಿ ಜ್ವಾಲಾಮಾಲಿನೀ ಕಲ್ಪದ ಚಾಲನೆಗೆ ಕಾರಣರಾದರೆಂಬ ಪ್ರತೀತಿಯಿದೆ [Desai, P.B., Jainismin south India (1957),pp.74,47-48]. ಕೇರಳದ ಪಾಲ್ ಘಾಟ್ ಜಿಲ್ಲೆಯ ಪರುವಶ್ಯೇರಿಯಲ್ಲಿ ಚಂದ್ರಪ್ತಭ ತೀರ್ಥಂಕರರನ್ನು ಗರ್ಭಗುಡಿಯಿಂದ ಪ್ರಾಂಗಣಕ್ಕೆ ತಂದಿಟ್ಟುಶಾಸ್ತಾ(ಅಯ್ಯಪ್ಪ)ಸ್ವಾಮಿಯೆಂದು ಪೂಜಿಸಲಾಗುತ್ತಿದೆ ಮತ್ತು ಅಲ್ಲಿಯೇ ಜ್ವಾಲಾ ಮಾಲಿನಿಯಕ್ಷಿಯ ವಿಗ್ರಹವನ್ನು ‘ಭಗವತಿ’ ಎಂದು ಕರೆದು ಪೂಜೆಮಾಡುತ್ತಿದ್ದಾರೆ [Raghava Varier, M.R., Socio-Economic Function of the Jain TemplesinKerala, ‘SAVASTISRI’, p. 174].