ಗಂಗವಂಶದ ಪ್ರತಿಷ್ಠೆಯನ್ನು ಹಲವು ಆಯಾಮಗಳಲ್ಲಿ ಹೆಚ್ಚಿಸಿದವರಲ್ಲಿ ಇಮ್ಮಡಿ ಬೂತುಗ ಮತ್ತು ಆತನ ಮಕ್ಕಳೂ ಸೇರಿದ್ದಾರೆ. ಬೂತುಗದ ಹಿರಿಯಮಗನ್ ಮರುಳದೇವ, ಹಿರಿಯಮಗಳು ಕುಂದಣಸಾಮಿದೇವಿ; ಈಕೆಯ ಹೆಸರಿನ ಇನ್ನೊಂದು ರೂಪವಾದ ಕುಂದಣಸೋಮಿದೇವಿ ಎಂಬುದೂ ಶಾಸನಗಳಲ್ಲಿ ಬಳಕೆಯಾಗಿದೆ. ಮರುಳದೇವನ ತಂಗಿಯೂ, ಇಮ್ಮಡಿ ಮಾರಸಿಂಹದೇವನ ಅಕ್ಕಳೂ ಆದ ಈ ಕುಂದಣ ಸಾ(ಸೋ) ಮಿ ದೇವಿಯ ಗಂಡನಾದ ರಾಜಾದಿತ್ಯ ರಾಜನು ಚಾಳುಕ್ಯ ಕುಲಕ್ಕೆ ಸೇರಿದವನೂ, ಜಯದತ್ತರಂಗ (ಬೂತುಗ) ನ ಸೋದರಿಯ ಮಗನೂ ಆಗಿದ್ದನು.

೧. ಕುಂದಣ ಸಾಮಿಯ ಸಮಗ್ರ ಪರಿಚಯಾತ್ಮಕ ಪಂಕ್ತಿಗಳಿರುವುದು ಕುಕ್ಕನೂರು ತಾಮ್ರಪಟದಲ್ಲಿ. ಕ್ರಿ.ಶ. ೯೬೮-೬೯ ರಲ್ಲಿ ಕುಂದಣ ಸಾಮಿಯ ಬೆಳ್ವೊಲ – ಮುನ್ನೂರು ನಾಡಿಗೆ ಸೇರಿದ ಅಡ್ಡವಿರಗೆ ಎಂಬ ಹಳ್ಳಿಯನ್ನು, ತನ್ನ ತಮ್ಮನಾದ ಗಂಗ ಕಂದರ್ಪ ಮಾರಸಿಂಹನ ಕಡೆಯಿಂದ ಪಡೆದು ದಾನವಿತ್ತಳು; ಗಂಗಕಂದರ್ಪ ಮಾರಸಿಂಹನು ಆಗ ಧವಳ ವಿಷಯವನ್ನೂ ( = ಬೆಳ್ವಲ ಮುನ್ನೂರು) ಗಂಗಪಾಡಿ ತೊಂಬತ್ತಾರು ಸಾಸಿರ ಪ್ರದೇಶವನ್ನೂ ಆಳುತ್ತಿದ್ದನು. ಕುಕ್ಕನೂರು ಶಾಸನವು ೨೩೦ ಸಾಲುಗಳ ಅತಿದೊಡ್ಡ ಶಾಸನ; ಅದರಲ್ಲಿ ೧೪೦ ರಿಂದ ೧೮೬ ಮತ್ತು ೨೦೫ ರಿಂದ ೨೧೨ ರ ವರೆಗಿನ ಸಾಲುಗಳಲ್ಲಿ ಕುಂದಣಸಾಮಿಯ ಭವ್ಯವಾದ ಚಿತ್ರಣವಿದೆ. ಆಕೆಯ ಮೈಮಾಟ, ಸಮಷ್ಟಿ ಸೌಂದರ್ಯ, ಲೌಕಿಕ ಸಾಧನೆಗಳು, ಕಲೆ ಮತ್ತು ಇತರ ಪೂರಕ ವಿದ್ಯೆಗಳಲ್ಲಿ ಆಕೆಗೆ ಇರುವ ಪರಿಶ್ರಮ, ಪಂಡಿತರಿಗೂ ಅರ್ಹರಾದವರಿಗೂ ನೀಡಿದ ಉದಾರ ಆಶ್ರಯ, ಜೈನ ಧರ್ಮದಲ್ಲಿ ಆಕೆ ಹೊಂದಿರುವ ಅಗಾಧ ನಿಷ್ಠೆ ಮತ್ತು ಜೈನ ಸಿದ್ಧಾಂತದ ಜ್ಞಾನ ಇವನ್ನು ಸವಿವರವಾಗಿ ನಿರೂಪಿಸಿರುವ ಈ ಸಾಲುಗಳು ಉದ್ದೃತ ಯೋಗ್ಯವಾಗಿವೆ; ಇವಿಷ್ಟೂ ಸಾಲುಗಳು ಸಂಸ್ಕೃತದಲ್ಲಿವೆ.

೨. ಕುಂದಣ ಸಾ(ಸೋ)ಮಿ ದೇವಿಯು ಮಾಣಿಕ್ಯ ಜಿನರ ಒಂದು ಕಂಚಿನ ವಿಗ್ರಹವನ್ನು ಮಾಡಿಸಿದಳು. ಇಲ್ಲಿ ಮಾಣಿಕ್ಯಜಿನರೆಂದರೆ ಆದಿತೀರ್ಥಂಕರರಾದ ವೃಷಭನಾಥರು. ಕಾಯೋತ್ಸರ್ಗದಲ್ಲಿರುವ ಈ ಜಿನ ಬಿಂಬವು ಯೋಗಾಯೋಗದಿಂದ ಉಪಲಬ್ಧವಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಳ್ಲು ಗ್ರಾಮದ ಕಾಫಿ ತೋಟವೊಂದರ ನೆಲದಲ್ಲಿ ದೊರೆತ ಈ ಪ್ರಾಚೀನ ಜಿನ ಬಿಂಬವು ಈಗ ಹಾಲಿ ಶ್ರವಣಬೆಳಗೊಳದ ಜೈನ ಮಠದಲ್ಲಿದೆ. ಈ ಜಿನಬಿಂಬದ ಪೀಠದ ಮೇಲೆ ನಾಲ್ಕು ಸಾಲಿನ ಒಂದು ಪುಟ್ಟ ಸಂಸ್ಕೃತ ಬರೆಹವಿದೆ; ಕಡೆಯಸಾಲಿನ ಮಕ್ಕಾಲು ಒಕ್ಕಣೆಯಷ್ಟು ಮಾತ್ರ ಹಳೆಗನ್ನಡದಲ್ಲಿದೆ. ಇವೆರಡನ್ನೂ ಮುಂದೆಕೊಟ್ಟಿದೆ:

ಕುನ್ದಣಸಾಮಿಯವರ್ಣನೆ ಇರುವ ಶಾಸನ ಪಂಕ್ತಿಗಳು

೧೪೦ ………..ರತ್ನಕಳಶಃಸ ತು ಸತ್ಯ

೧೪೧ ವಾಕ್ಯ ಕೊಙ್ಗಣಿ ವರ್ಮ್ಮಧರ್ಮ್ಮ ಮಹಾರಾಜಾಧಿರಾಜ ಪರಮೇಶ್ವರ ಶ್ರೀಮಾರ ಸಿಂಹದೇವ ಪ್ರಥಮ ನಾಮಧೇಯಃ ಗಙ್ಗಕ

೧೪೨ ನ್ದರ್ಪ್ಪಃ || ಅಪಿ ಚ || ಗಂಗಾನ್ವವಾಯೋದಯಶೈಳ ಭಾನೋಃ ಶ್ರೀ ಪದ್ಮಿನೀ ಕಾಮವಿಕಾಸ ಹೇತೋಃ ತ ಸ್ಯಾಗ್ರಜಾ ಕುನ್ದ

೧೪೩ ಣಸಾಮಿರಾಸೀತ್ಕುಚ್ಛದಚ್ಛಾಯಗುಣೀ ಪ್ರಸೂತಿಃ || ನೇತ್ರಾನನ್ದಕರೋವಿಧುರ್ದ್ಧೃ ತರಿಪುಧ್ವಾನ್ತಸ್ಸಹ ಪ್ರದ್ಯುತಿಃ ಸ್ವಸ್ತ್ರ್ರೀಯೋ

೧೪೪ ಜಯದುತ್ತರಙ್ಗ ನೃಪತೇ ಸ್ಸೋನ್ವರ್ತ್ಥನಾಮೋನ್ನತಃ ರಾಜಾದಿತ್ಯ ಮಹೀಪತಿ ಪತಿರಭೂದ್ಯಸ್ಯಾಶ್ಚಾಳಿಕ್ಯಾನ್ವಯ

೧೪೫ ಕ್ಷೀರಾಂಭೋ ನಿಧಿಸಂಭವ ಕ್ಷಿತಿಭುಜಾಮುತ್ತಂಸ ಭೂಷಾಮಣಿಃ || ಯಸ್ಯಾ ವಿಪಕ್ಷ ವನಿತಾವದನಾರವಿನ್ದ ಚನ್ದ್ರದ್ಯ

೧೪೬ ತೇಶ್ಚರಿಕಜನ್ಮ ಭುವೋ ಬಭೂವ | ಮೂರ್ತಿರ್ಮ್ಮನೋಜ ನವಚಂಪಕ ಚಾಪ ಯಷ್ಟಿ ಕೀರ್ತಿಶ್ಚ ದಿಗ್ಯುವತಿ ನೂತನ ಹಾರ

೧೪೭ ಯಷ್ಟಿಃ || ಚೂತಾಂಕುರ ಪ್ರಸವಪಲ್ಲವ ಮಲ್ಲಿಕಾಭಿರ್ದ್ದೇವಸ್ಯ ಪುಷ್ಪಧನುಷ್ ಪ್ರವಿಧಾಯ ಪೂಜಾಮ್ ಸೌಭಾಗ್ಯ

೧೪೮ ಮೃತ್ಪಳ ವಿಳಾಸ ವಿಳೋಚನಾಭಿರಭ್ಯರ್ತ್ತತೇ ಸ್ಮ ಕುಸಮರ್ತ್ತು ದಿನೇಷುಯ ಸ್ಯಾಃ || ಶುದ್ಧಾನ್ತ ಪ್ರಮುದಾಸು ಯೌವನ

೧೪೯ ಮದಾದುದ್ದಾಮಲೀಳಾ ಸ್ವಪಿ ಪ್ರತ್ಯುಕ್ತ ಪ್ರತಿಕಾಮಿನೀಜನಧಿಯೋ ಯಸ್ಯಾ ಸ್ಸಪತ್ನೀಮತಿಃ ಅಸೀದಾಹವದೋ

೧೫೦ ಹದ ಕ್ಷಿತಿಪತೇ ಪ್ರಾಣ ಪ್ರಿಯಾಯಾಃ ಪರಂ ವೀರಶೃರೀಯುವತೌ ಮನೋಜ ವಿಜಯ ಶ್ರೀ ನಿತ್ಯ ಚೈತ್ರಶ್ರಿಯಃ | ನಿತ್ಯಂ

೧೫೧ ಯಸ್ಯಾಂ ಸಮಜನಿ ಜಿನಸ್ನಾನ ವಾದ್ಧೌತದೂತೇ ಚೂಡಾಧಾರೇ ಜಿನಪದ ನಖ ಜ್ಯೋತಿ ಷಾಂ ಚಕ್ರವಾಳಮ್ ಸಾನ್ದ್ರೋ ನ್ಮೀಳದ್ವಿಚಕಿ

೧೫೨ ಳಮಯಾದಾಮ ಯಸ್ಯಾಶ್ಚಲೀಳಾರತ್ನಾದರ್ಶೋ ಜಿನಮುಖಭೂದ್ಪಕ್ತಿ ಭೂಷಾನ್ದಧತ್ಯಾಃ || ಅಪಿಚ || ಗದ್ಯಂ || ಶ್ರೀಮದಮರನರ

೧೫೩ ವರನಿಕರ ಮೌಳಿ ಮಾಳಾರಜಪುಂಜ ಪಿಂಜರೀ ಭೂತ ಜಿನೇನ್ದ್ರ ಚನ್ದ್ರ ಪಾದಾರಬಿನ್ದ ದ್ವನ್ದ್ವಷಟ್ಪದಾಯಮಾನಾ ಮಾನಾಗ್ರೋದಗ್ರ ಧನ

೧೫೪ ದಾನಾನನ್ದೀ ಕೃತಾನೇಕಾಶ್ರಿತ ವಿಬುಧಜನ ಹೃತ್ಪದ್ಮಾ ಪದ್ಮಾಧಿಪ ಪರಮ ಜಿನೇನ್ದ್ರ ಪ್ರಣೀತ ತತ್ತ್ವಾಮಳ ಜಳ ಪ್ರಕ್ಷಾಳಿತ ನಿಖಿ

೧೫೫ ಳ ಮನೋಮಳಾ | ಮಳಾಸ್ಪದಾನೇಕ ಕುಮತಿ ಜನಕಥಿತ ದುಸ್ತತ್ತ್ವ ಜಳ ಪ್ರಪಾತ ಸುದೂರೀಭೂತ ಚಿತ್ತಹರಿಣೀ || ಹರಿಣೀಕ್ಷ

೧೫೬ ಣ ಧವಳ ಕಮಳ ದಳ ವಿಳಾಸಾಕರ್ಣ್ಣಾಯತ ರುಚಿರ ಲೋಚನದ್ವಯ ಮಧುಕರ ವಿರಾಜಮಾನ ಮುಖಾಂಬುಜಾ | ಅಂಬು

೧೫೭ ಜಾರಿಕರನಿಕರಬಿಮಳ ವಿಪುಳಜಿನಶಾಸನ ಭವನ ಮೂಲ ಸ್ತಂಭಾಯಮಾನ ಗಙ್ಗಕುಳನ ಭಸ್ತಳಾಲಂಕಾರ

೧೫೮ ತ ಪೂರ್ಣ್ಣಚನ್ದ್ರ ಧ್ಯುತಿಃ | ಚನ್ದ್ರ ಧ್ಯುತಿ ಗಿರೀನ್ದ್ರಾಮರೇನ್ದ್ರ ಕರೀನ್ದ್ರ ಕುನ್ದಾರಬಿದ್ದ ಕುಮುದ ಸಮುದಿತಿ ವಿಶ

೧೫೯ ದಶಾರದಾಭ್ರವಿಭ್ರಮಚಾರುಕೀರ್ತ್ತಿಃ | ಕೀರ್ತ್ತಿ ಧ್ವಜಾಭಿವ್ಯಾಪ್ತ ವಿಪುಳೋದಧಿ ಸಮುದ್ಭಾವಿತಾವಧಿ ಸಮಧಿ

೧೬೦ ಕ ಭುವನಾನ್ತರಾಳಾ | ಭುವನಾಂತರಾಳ ಸಕಳ ಬಾಳಾಬಳಾ ಪರ್ಯ್ಯನ್ತಾನೇಕ ಜನಾನವರತಸಮಾನಾಕಾ

೧೬೧ ರ ಸಂಸ್ತೂಯಮಾನಾನೂನ ಚಾರುಚರಿತಾ | ಚಾರುಚರಿತಾಧರೀಕೃತಾಖಿಳ ಭುವನತಳ ಪ್ರಥಿತ ಸಮುಪ

೧೬೨ ಗತ ವಿಶುದ್ದೇದ್ಧನೀತಿಭೂಷಾ ವಿಶೇಷೋಪಭೂಷಿತಾಷೇಷ ದೋಷ ಗಹನ ದಹನಾಯಮಾನಾನೂನ ಮಾನವಜ್ಜನ ಲಕ್ಷ್ಯಭೂತ

೧೬೩ ಪ್ರಜಾತ ಪುರಾತನ ಪ್ರತಿವ್ರತಾ | ಪ್ರತಿವ್ರತಾ ತ್ವಾಧಿಕವಿಶದಾನೇಕಾಚಿನ್ತ್ಯ ಸಂಪದುತ್ಸಮೇತ ಸಂದ್ರತ ಶೀ ಳ ಸಂಕುಳಾಲಂಕ

೧೬೪ ತ ನಿಖಿಳ ವಿಮಳ ಲಕ್ಷಣೋಪಲಕ್ಷಿತ ಸಕಳ ಜನಾಕ್ಷಿ ಪಕ್ಷ ಪಾತ ಜನನ ಸಮರ್ತ್ಥ ಕೋಮಳಾಂಗಯಾಷ್ಟಿಃ | ಕೋಮಳಾಂ

೧೬೫ ಗಯಷ್ಟಿ ವಿಶಿಷ್ಟ ಜನಪ್ರಶಸ್ಯಮಾನಾಧಿಕಸೌಂದರ್ಯ್ಯ ಸಂಪದ್ಪ್ರಾಬಲ ವಿಮಳಾಧಿಷಣಾ ವಿಶೇಷಾ ಸಮಾನೀಕೃತ ಮದನಮಾನಸೋ

೧೬೬ ನ್ಮಾದನವರ ರೂಪ ವಿರಾಜಿತಾನೇಕಕಳಾಸ್ಪಸರತಿ ಸರಸ್ವತೀ ದೇವತಾತೀ ದುಷ್ಫ್ರಾಪ ಸಕಳ ಕಳಾಕ

೧೬೭ ಳಾಪ ಪಾರಾವಾರ ಪ್ರಾಪ್ತ್ಯವಾ ಪ್ರಾತಿ ಪ್ರಸಿದ್ಧ ವಿಶುದ್ಧೇದ್ಧ ಬಿದ್ವಜ್ಜನ ಶ್ರದ್ಧೇಯ ತೋಪಬದ್ದ ನಿರುದ್ಧಾತ್ಮೀಯ ಸಮಾನ

೧೬೮ ಪರಮಗುಣರುಚಿರಾನನೇಕ ರತ್ನಾ ರತ್ನೋಪದಾನ ಪುರಸ್ಸರಣ ಚರಣ ಸರಸೀರುಹದ್ವಯಾವನತಾನೇಕೋ

೧೬೯ ದಗ್ರೋಗ್ರ ಸಂಗ್ರಾಮರಙ್ಗಪ್ರಭಂಗುರೀಭೂತ ಪ್ರಭೂತ ಘೋರಾರಾತಿನಿಕರ ಚಾಳುಕ್ಯ ವಂಶ ಚೂಳಾಮ

೧೭೦ ಣೀಯಮಾನ ರಾಜಾದಿತ್ಯ ಭೂಪಾಳ ಮನೋವಲ್ಲಬಾ | ವಲ್ಲಭಾರಾತಿ ಭೂಪಾಳಕುಳ ಕುಳ ವಿಳಾಸಿನೀಜ

೧೭೧ ನ ವದನ ಕಮಳ ಕಳಾಪಾ ಕಳಾಪಾಯಮಾನ ಜಿನಪತಿ ಕಮಳಯುಗಳ ರೇಣು ಪವಿತ್ರೀ ಭೂ

೧೭೨ ತೋತಮಾಙ್ಗ ಗಙ್ಗ ಕನ್ದರ್ಪ್ಪಾಗ್ರಿಜನ್ಮಾ| ಜನ್ಮಾನ್ತಕಭಯ ರಾಗ ವಿರಾಗ ರೋಗಾದ್ಯನೇಕ ಘೋರ ಕರಿಮಕರ

೧೭೩ ನಿಕರ ಭಯಂಕರಾಕಾರ ಸಂಸಾರ ನೀರಾಕರ ಪ್ರಭೀಯ ಭೂತ ನಿಖಿಲ ಭವ್ಯಜನ ಪ್ರಶಸ್ಯಸಸ್ಯಾ

೧೭೪ ಹ್ಲಾದನಕರ ಸುಧಾವೃಷ್ಟಿಃ | ಸುಧಾವೃಷ್ಟಿ ಪ್ರಕೃಷ್ಟಾನನ್ದಿ ವೇಣು ಪ್ರವೀಣ ವೀಣ ಪ್ರಕ್ವಾಣಿ

೧೭೫ ತಾತಿಶಯಿತ ಪ್ರಾಣಿಗಣ ಕರ್ಣ್ಣಾ ರಸಾಯನಾ ವಿತಥಮಿತಹಿತ ಮುಹುರಾಕಾಂಕ್ಷ್ಯ

೧೭೬ ಮಾಣ ಚತುರ ವಚನರಚನಾ| ವಚನ ರಚನಾನುರೂಪ ಕಳ್ಪಶಾಖಿ ವದನ ಲೋಭಿಮತ

೧೭೭ ಫಳ ಸಮರ್ತ್ಥ ನಾನಿತ್ಯ ಪ್ರವರ್ತ್ತಮಾನ ಯಥಾಯೋಗ್ಯತ್ತ್ವಾನು ಪ್ರಯಾತದಾನಪ್ರವೃ

೧೭೮ ತ್ತಿಃ | ದಾನ ಪ್ರವೃತ್ತಿ ಸಮನುರೂಪಹೀನ ನ್ಯಾಯಮಾರ್ಗ್ಗಾನು ಸರಣ ಸಮಾರ್ಜ್ಜಿತ ದ್ರವ್ಯಸಂಪದ್

೧೭೯ ಸಂಪತ್ಸೌನ್ದರ್ಯ್ಯ ಭಾಗ್ಯ ಸೌಭಾಗ್ಯಾದ್ಯನೇಕ ಗುಣಜನಿತಾಹಂಕಾರ ಮಹಾಗ್ರಹಾವೇಶಪರವ

೧೮೦ ಶಾಶಯಾನವಧಾರಿತ ಸಾಧ್ವಸಾಧು ಜನಮಾನಾವಮಾನ ನಿಷ್ಪಾದನ ಸುದೂರೀಭೂತ ಸಮ್ಯಗ್‍ಜ್ಞಾ

೧೮೧ ನಾ| ಸಮ್ಯಗ್ ಜ್ಞಾನಾಭಿಧಾನಾಙ್ಕುಶ ನಿರುದ್ಧಕ್ಷಣ ಕ್ಷಯಲಕ್ಷಣಾತಿದುರ್ಲ್ಲಭಾ ಅಘಪತನ ನಿ

೧೮೨ ಬನ್ಧನ ವಿಷಯಸುರವಾರಣ್ಯ ಪ್ರವೃತ್ಯುತ್ಸುಕ ಸ್ವೇನ್ದ್ರಿಯ ಮತ್ತ ಮಹಾಮಾತಙ್ಗ ಪವಿತ್ರ ಚರಿತ್ರ

೧೮೩ ಪ್ರಪಾಳಿತ ಸಕಳ ಜೀವಗಣ ಮುನಿಜನ ನಿಕರಚರಣ ರಾಜೀವ ಯುಗಲ ಭಕ್ತಿ ಪ್ರಕರ್ಷೋಪಲಬ್ಧ ಸ

೧೮೪ ರ್ವ್ವೋಪದ್ರವಶಾನ್ತಿ ಕುನ್ದಣ (ಸಾ) ಮಿಶ್ಚಿರಂ ಜೀಯಾತ್ || ಅಪಿಚ ವೃತ್ತಂ || ವೀಣಾ ಸುಗೀತಿಷು ಕಥಾಸು ಚ

೧೮೫ ದಿಗ್ವಧೂನಾಂ ದಿಕ್ಷಾಳಕೈಸ್ಸುರ ಮಹೀರುಹಮಂಜರೀವ || ಲೀಳಾವತಂಸ ಪದವೀ ಮುಪನೀಯ ಮಾನಾ

೧೮೬ ಕಳ್ಪಾಂತಮುಲ್ಲಸತು ಕುನ್ದಣಸಾಮಿ ಕೀರ್ತ್ತಿಃ ||

. . . . .

೨೦೫ (ತಸ್ಮೈ) ಕಾಲಪಾರ್ಯ್ಯ ಭಟ್ಟಾಯ ಗಙ್ಗ ಕುಳಜಳಧಿಕಳಾಪತಿಸ್ಸೌನ್ದರ್ಯ್ಯ ಧೈರ್ಯ್ಯ ಬುದ್ಧಿಸಮೃದ್ಧ್ಯ ಸಮಾನಿತರತಿರತ್ನಾಕರವಾ

೨೦೬ ಗ್ದೇವತಾ ಶರಚ್ಛನ್ದ್ರಾಂಶು ವಿಶದಾಚಲಿತ ವಿಪುಲ ಸಮ್ಯಕ್ತ್ವಾ ಊತುಗನಣುಗಿಸ್ಸಮ್ಯಕ್ತ್ವ ರುಗ್ಮಿಣೀತ್ಯಾ

೨೦೭ ದಿಯಾಥಾರ್ತ್ಥಾಮಳಾಂಕ ಮಾಳಾಭಿರನವರತಂ ಅಭಿಷ್ಟೂಯ ಮಾನಾಸಾ ಶ್ರೀಮತ್ಕುನ್ದಣಸಾಮಿಃ ಸ್ವಸ್ತಿ ಶಕ

೨೦೮ ನೃಪಕಾಳಾತೀತ ಸಂವತ್ಸರ ಶತೇಷ್ಟಷ್ಟಸು ನವತ್ಯುತ ರೇಷು ವಿಭವ ಸಂವತ್ಸರೇ ಪ್ರವರ್ತ್ತಮಾ

೨೦೯ ನೇ ಉತ್ತರಾಯಣ ಸಂಕ್ರಾನ್ತೌ ಧವಳ ವಿಷಯಾಂತರ್ವ್ವರ್ತ್ತಿಕುಕ್ಕನೂರ ನಾಮಾಗ್ರಹಾರಾದುತ್ತರ ಸ್ಯಾನ್ದಿ

೨೧೦ ಶಿ ರಾಜಪುರ ನಾಮಾಗ್ರಹಾರಾತ್ ಪಶ್ಚಿಮ ಸ್ಯಾನ್ದಿಶಿ ಅಡ್ಡವುರಗೇ ನಾಮಗ್ರಾಮಂ ಸ್ವಕೀಯಾನುಜೇ ಶ್ರೀ

೨೧೧ ಮದ್ಗಙ್ಗ ಕನ್ದರ್ಪ್ಪೇ ಧವಳ ವಿಷಯಮಖಿಳಂ ಗಙ್ಗ ಪಾಟೀಞ್ಚ ಷಣ್ಣವತಿ ಸಹಸ್ರ ಸಂಖ್ಯಾ ಪರಿಮಿತ ಮ್ಪ್ರತಿ ಪಾಳಯತಿ

೨೧೨ ತಸ್ಮಾಲ್ಲ ಬ್ದ್ವಾ ಪ್ರದಾತ್ || [IWG : ೧೯೮೪, ನಂ. ೧೫೯ : ಕ್ರಿ.ಶ. ೯೬೮ -೬೯ : ಪು. ೫೦೪-೫೦೯]

II          ೧ ತ್ವಂ ಲಕ್ಷ್ಮೀ ಸ್ಸುರಭಿಸ್ಸುಧಾ ಚಭುವನೇ
ಮಾಣಿಕ್ಯ ಮಿನ್ದ್ರುರ್ವ್ವಿಷಂ ದೇವಶ್ರೀಜಗ

            ೨ ದೇಕವೀರ ನೃಪತಿರ್ದ್ವಾಭ್ಯಾಂ ಯುವಭ್ಯಾ
ಮಭೂತ್ ಶ್ರೀ ಗಙ್ಗಾನ್ವಯ ದುಗ್ಧವಾರಿಧಿ

            ೩ ರತೀವಾಶ್ಚರ್ಯ್ಯ ಸೂತಿಸ್ತತಃ ಕೈಶ್ರೀ ಕುನ್ದಣ
ಸೋಮಿದೇವಿ ಕವಿಭಿರ್ಣ್ನೋ ವರ್ಣ್ನ್ಯ

            ೪ ಮೇತ ಚ್ಛ್ರಿಯಮ್ ೦ ಶ್ರೀಮನ್ನೊೞಂಬ
ಕುಳ್ತಾನ್ತಕರ ಶ್ರೀಮದಕ್ಕಂ.

[ಎಕ. ೯ (ಪ.) ಸಕಲೇಶಪುರ ೩೧ (೫ ಮಂಬಾ ೬೭)
೧೦ ಶ. ಬಾಳ್ಲು (ಹಾಸನಜಿ / ಸಪುತಾ) ಪು. ೫೧೯]

[ಮಾಣಿಕ್ಯ ಪ್ರಭುವೇ, ನೀನು ಐಸಿರಿಯೂ, ದೇವಲೋಕದ ಹಸು ಸುರಭಿಯೂ, ಅಮೃತವೂ, ಚಂದ್ರನೂ, ಲೋಕಪಾಲಕನೂ ಆಗಿದ್ದೀಯೆ. ನಿನ್ನ ಕೃಪೆಯಿಂದ ಜಗದೇಕವೀರ ನೃಪತಿಯೂ ಕುನ್ದಣ ಸೋಮಿದೇವಿಯೂ, ಗಂಗವಂಶವೆಂಬ ಹಾಲುಗಡಲಿನಲ್ಲಿ ದೊಡ್ಡ ಅದ್ಭುತಗಳನ್ನು ಮಾಡಲು ಸಾಧ್ಯವಾಯಿತು. ಇವರ ಹಿರಿಮೆ ಹಾಗೂ ಸಿರಿಯನ್ನು ಯಾವ ಕವಿಯೂ ಬಣ್ಣಿಸಲಾರ ಎಂಬಂತೆ ಆಗಿದೆ. ನೊೞಂಬ ಕುಲಾಂತಕ ಎಂಬ ಪ್ರಶಸ್ತಿಯನ್ನು ಪಡೆದ ಮಾರಸಿಂಹನ ಪ್ರಸಿದ್ಧ ಅಕ್ಕ ಕುನ್ದಣಸಾಮಿ]

ಮೇಲಿನ ಎರಡು ಉದ್ಧೃತಗಳಿಂದ ಸಿಗುವ ಕುಂದಣ ಸಾಮಿದೇವಿಯ ಪುಷ್ಕಳವಾದ ಜೀವನ ಚಿತ್ರಕ್ಕೆ ಪೂರಕವಾಗಿರುವ, ಆಕೆಯ ಬದುಕಿನ ಉತ್ತರಾರ್ಧ ಮತ್ತು ಸಾಮಾಪ್ತಿ ಭಾಗದ ಹೊಸ ವಿವರಣೆ ಇತ್ತೀಚೆಗೆ ನನಗೆ ದೊರೆತ ಶಾಸನ ಸಂಪತ್ತಿನಲ್ಲಿ ಸಿಕ್ಕಿದೆ. ಆ ಹೊಸ ಅಪ್ರಕಟಿತ ಶಾಸನ ಸಾಮಗ್ರಿಯು ಆಕೆಯ ಬದುಕಿನ ಅಂತ್ಯವನ್ನು ತಿಳಿಸುತ್ತದೆ. ಕೊಪ್ಪಳದಲ್ಲಿ ದೊರೆತ ಶಾಸನಗಳಲ್ಲಿ ಒಂದೆರಡು ಶಾಸನಗಳು ನೇರವಾಗಿ ಕುಂದಣ ಸಾಮಿಯ ಸಾವನ್ನು ಹೇಳಿವೆ. ಮೇಲೆ ಉದಾಹರಿಸಿದ ಎರಡೂ ಶಾಸನಗಳು ಪ್ರಕಟಿತವಾಗಿದ್ದು, ಅವೆರಡೂ ಕೂಡ ಸಂಸ್ಕೃತ ಭಾಷೆಯಲ್ಲಿವೆ. ಈಗ ನನಗೆ ದೊರೆತಿರುವ ಎರಡೂ ಶಾಸನಗಳು ಕನ್ನಡದಲ್ಲಿವೆ; ಅವುಗಳ ಪಾಠ-

I           ೧ ಶ್ರೀ ಬೂತುಗ ಪೆರ್ಮ್ಮಡಿಯ ಮಗಳ್
೨ ಕುನ್ದಣರಸಿಯರಾರಾಧನಾ ವಿಧಾನದಿಂ ರ
೩ ತ್ನತ್ರಯಮಂ ಸಾಧಿಸಿಕೊಣ್ಡು ದೇವಲೋಕಕ್ಕೆ ಪೋ
೪ ದಳ್ ಚಲದಂಕಗಾರ್ತ್ತಿ

II          ೧ ಆಗಸೆಯರ್ಕ್ಕಳೊಳ್
೨ ನೆಗೞ್ದ ಪೆಂಪಿನ ಕು
೩ ನ್ದಣ ಸೋಮಿ ದೇವಿಯುಂ
೪ ಚಂಗಲ ದೇವಿಯುಂ ಕೞೆ
೫ ಯೆ ದಾನದ ಧರ್ಮ್ಮದ
೬ ಮಾತೇ ಪೋ ಯ್ತುಂಮತ್ತಂಗ

ಇವೆರಡು ಪೊಚ್ಚ ಪೊಸ ನಿಸದಿ ಶಾಸನಗಲು ಅಸಮಗ್ರವಾಗಿವೆಯಾದರೂ ಮುಖ್ಯ ಉಪಯುಕ್ತ ವಿವರಣೆ ಒದಗಿಸುವಲ್ಲಿ ಸಫಲವಾಗಿವೆ. ಇವುಗಳಲ್ಲಿ ಮೊದಲನೆಯ ಶಾಸನ ಅತೇದಿಯದು, ಹತ್ತನೆಯ ಶತಮಾನದ್ದು; ಎರಡನೆಯ ಶಾಸನ ಕ್ರಿ.ಶ. ೧೦೦೭ ರಲ್ಲಿ ರಚಿತವಾಗಿ ಚಂಗಲದೇವಿಯು ಸುಗತಿಯನ್ನು ಸಾಧಿಸಿದ ಸಂಗತಿಯನ್ನು ಹೇಳುತ್ತ, ಆ ವೇಳೆಗಾಗಲೇ ಮರಣಿಸಿದ್ದ ಕುಂದಣಸಾಮಿಯನ್ನು ಪ್ರಸ್ತಾಪಿಸಿದೆ. ಕುಂದಣ ಸಾಮಿಯು ಆರಾಧನಾ ವಿಧಾನದಿಂದ, ಅಂದರೆ ಸಲ್ಲೇಖನಾವ್ರತವನ್ನು ಸ್ವೀಕರಿಸಿ ಆಚರಿಸಿ ಧ್ಯಾನಿಸಿ,ರತ್ನತ್ರಯವನ್ನು ಸಾಧಿಸಿಕೊಂಡು ದೇವ ಲೋಕವನ್ನು ಸೇರಿದಳು – ಎಂದು ಮೊದಲನೆಯ ಶಾಸನದಿಂದ ತಿಳಿದು ಬರುತ್ತದೆ.

ಎರಡನೆಯ ಹೊಸ (ಅಪ್ರಕಟಿತ) ಶಾಸನದಿಂದ ಆಕೆಯ (ಮತ್ತು ಚಂಗಲದೇವಿಯ) ವ್ಯಕ್ತಿತ್ವದ ಒಂದು ಮುಖ ಪರಿಚಯವಾಗುತ್ತದೆ. ಆಗಸ ಎಂಬುದು ಸಂಸ್ಕೃತ ಆಕಾಶದ ತದ್ಭವ ರೂಪ. ಆಗಸದವರು ಆಗಸೆಯರು. ಆಗಸೆ ಎಂದರೆ ಆಕಾಶದಲ್ಲಿ ಇರುವವಳು [ಆಗಸೆ ಎಂಬ ಶಬ್ದವೇ ಕನ್ನದ ನಿಘಂಟಿನಲ್ಲಿ ದಾಖಲಾಗಿಲ್ಲ] ಆಗಸದವರು ದೇವತೆಗಳು, ಅದರಿಂದ ಆಗಸೆ ಎಂದರೆ ದೇವತೆ. ಆಗಸೆ ಎಂಬುದು ಏಕವಚನ, ಸ್ತ್ರೀಲಿಂಗ, ನಾಮಪದ. ಇದಕ್ಕೆ / -ಆರ್ / ಮತ್ತು / – ಕಳ್/ ಎಂಬ ಎರಡು ಸಮಾನಾರ್ಥಕ ಬಹುವಚನ ಪ್ರತ್ಯಯಗಳು ಸೇರಿ ‘ಆಗಸೆಯರ್ಕ್ಕಳ್’ ಎಂದಾಗಿದೆ, ಆಕಾಶದಲ್ಲಿ ಇರುವ ದೇವತೆಗಳು ಎಂದರ್ಥ. ಕುನ್ದಣ ಸೋಮಿ ದೇವಿಯೂ ಅಪ್ಸರೆಯರೊಳಗೆ ಕೂಡ ಹೆಸರು ಗಳಿಸಿದ್ದಳು (- ಆಗಸೆಯರ್ಕ್ಕಳೊಳ್ ನೆಗೞ್ದ ಪೆಂಪಿನ ಕುನ್ದಣ ಸೋಮಿದೇವಿಯುಂ) ಮತ್ತು ಆಕೆಯು (ಆರಾಧನಾ ವಿಧಾನದಿಂದ) ಮುಡಿಪಿದ ಮೇಲೆ ದಾನ – ಧರ್ಮ ಎಂಬ ಮಾತು ಅವಳ ಜತೆಯಲ್ಲಿಯೇ ಹೋಯಿತು.

ಹೀಗೆ ಪರಸ್ಪರ ಪೂರಕ ನೆಲೆಯಲ್ಲಿ ಚಲಿಸುವ ಈ ನಾಲ್ಕು ಶಾಸನಗಳನ್ನು ಕ್ರೋಢೀಕರಿಸಿಟ್ಟು ನೋಡಿದಾಗ ಒಟ್ಟು ಕುನ್ದಣ ಸಾ(ಸೋ) ಮಿ ದೇವಿಯ ಪೂರ್ಣ ಚಿತ್ರವೊಂದು ಸಿಗುತ್ತದೆ. ಇಮ್ತಹ ವಿವರಣೆ ಆಕೆಯ ವೈಯಕ್ತಿಕ ಬದುಕಿನ ಮೇಲಲ್ಲದೆ ಗಂಗಮನೆತನದ ಮೇಲೂ ಬೆಳಕು ಚೆಲ್ಲುತ್ತದೆಂಬ ಸಾಂಸ್ಕೃತಿಕ – ರಾಜಕೀಯ ಕಾರಣಗಳನ್ನು ಗಮನಿಸಿ ಈ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ.