೧. ಪಶ್ಚಿಮ ಗಂಗರು ತಮ್ಮ ರಾಜಧರ್ಮವನ್ನಾಗಿ ಜೈನಧರ್ಮವನ್ನು ಬಹುವಾಗಿ ಪಾಲಿಸಿದರು; ಎಲ್ಲ ರಾಜರಂತೆ ಅನ್ಯಧರ್ಮಗಳನ್ನೂ ಗೌರವಿಸಿದರು, ಗಂಗರು ದಾನಧರ್ಮ ಮಾಡಿದ ಪ್ರಮಾಣವನ್ನು, ಉಪಲಬ್ಧ ತಾಮ್ರಪಟ ಮತ್ತು ಶಿಲಾ ಶಾಸನಗಳ ಆಧಾರದಿಂದ, ನೋಡಿದರೆ ಉದ್ದಕ್ಕೂ ಬ್ರಾಹ್ಮಣರಿಗೆ ಅಧಿಕಲಾಭ ದೊರೆತಿರುವುದು ಕಂಡು ಬರುತ್ತದೆ. ವೈಯಕ್ತಿಕ ದಾನಗಳನ್ನು, ರಾಜರು ಸಾಮಂತರು ಮಾಂಡಲಿಕ- ಶ್ರೀಮಂತರು, ಕೊಟ್ಟಿರುವುದು ಬ್ರಾಹ್ಮಣರಿಗೇನೆ. ಇದು ಸಹಜ ಹಾಗೂ ನಿರೀಕ್ಷಿತ. ದಾನಗಳನ್ನು ಸ್ವೀಕರಿಸುವವರು ಬ್ರಾಹ್ಮಣರು, ಹಾಗೂ ಅವರಿಗೆ ದಾನಕೊಡುವುದು ಒಂದು ಶಿಷ್ಟ ವಿಶಿಷ್ಟ ಪದ್ಧತಿಯಾಗಿ ಪೂರ್ವಕಾಲದಿಂದಲೂ ವಾಡಿಕೆಯಲ್ಲಿದೆ. ಗಂಗರ ಆಳ್ವಿಕೆಯೂ ಈ ನಿಯಮಕ್ಕೆ ಅಪವಾದವಾಗಿಲ್ಲ.

೧.೧. ಬ್ರಾಹ್ಮಣರಿಗೆ (ಶೈವ, ವೈಷ್ಣವ) ವ್ಯಕ್ತಿಗತ ದಾನಗಳನ್ನು ಅಧಿಕ ಪ್ರಮಾಣದಲ್ಲಿ ಗಂಗರು ಕೊಟ್ಟಿದ್ದರೂ ಅವರು ಕಟ್ಟಿಸಿದ ದೇವಾಲಯಗಳ ಪ್ರಮಾಣವನ್ನು ತೌಲನಿಕವಾಗಿ ಪರಾಮರ್ಶಿಸಬೇಕು. ಅಲ್ಲದೆ ಅವರ ಒಟ್ಟು ಧೋರಣೆ, ತಲ್ಲೀನತೆಯ ಮನೋಧರ್ಮ ಇವನ್ನೂ ಪರಿಶೀಲಿಸಬೇಕು. ಈ ಹಿನ್ನಲೆಯಿಂದ ಅಧ್ಯಯನ ಸಾಮಗ್ರಿಯನ್ನು ಒಂದೆಡೆಗೆ ಸಂಚಯಿಸಿಯೇ ವಿಶ್ಲೇಷಿಸ ಬೇಕಾಗುತ್ತದೆ. ಪ್ರಸುತ ಸಂಲೇಖನದಲ್ಲಿ ಗಂಗರ ಶಾಸನಗಳಲ್ಲಿ ಜೈನ ಬಸದಿಗಳ ಸಂಬಂಧವಾದ ಸಾಮಗ್ರಿಯತ್ತ ಒಂದು ಸ್ಥೂಲ ಪಕ್ಷಿ ನೋಟ ಹರಿಸಿದ್ದೇನೆ.

೧.೧.೧. ಜೈನ ದೇವಾಲಯಗಳನ್ನು ಗಮ್ಗರ ಶಾಸನಗಳಲ್ಲಿ ಅರ್ಹದಾಯತನ, ಚೇದಿಯ, ಚೈತ್ಯ, ಚೈತ್ಯಾಲಯ, ಜಿನಭವನ, ಜಿನಾಲಯ, (ತೀರ್ತ್ಥದ) ಬಸದಿ, ವಸದಿ- ಎಂಬ ಹೆಸರುಗಳಿಂದ ನಿರ್ದೇಶಿಸಲಾಗಿದೆ. ಗಂಗರ ಶಾಸನಗಳಲ್ಲಿ ಬರುವ ಬಸದಿಗಳು, ಜೈನಗುರುಗಳು, ಗಣ – ಗಚ್ಛಗಳು, ದಾನಿಗಳು, ಬಸದಿಗಳು ಇದ್ದ ಊರುಗಳು, ಬಸದಿಗಳಿಗೆ ದತ್ತಿಯಿತ್ತ ಹೊಲ-ನೆಲ ಊರು ಎಡೆಗಳು – ಇವೆಲ್ಲದರ ಅಧ್ಯಯನ ಪಿಎಚ್, ಡಿ ಅಥವಾ ಎಂ.ಫಿಲ್ ಪ್ರೌಢ ಪ್ರಬಂಧಕ್ಕೆ ತಕ್ಕವಸ್ತು. ಈ ಹಂಸಲೇಖನದಲ್ಲಿ ಅಂತಹ ವಿಸ್ತಾರವಾದ ಅಧ್ಯಯನಕ್ಕೆ ದಾರಿತೆರೆಯುವ ಒಂದು ಹಾಸು ಇದೆ; ಉಪಲಬ್ಧ ಶಾಸನ ಸಾಮಗ್ರಿಯನ್ನು ಸಂಕ್ಷೇಪಿಸಿ, ಹರಳುಗೊಳಿಸಲಾಗಿದೆ.

೧.೨.೧. ಈ ಸಂಲೇಖನದಲ್ಲಿ ಜೈನ ಆಚಾರ್ಯರು, ಗಣ-ಗಚ್ಛ ಇತ್ಯಾದಿಗಳ ವಿವರಕ್ಕೆ ತೊಡಗಿಲ್ಲ; ಕೇವಲ ಬಸದಿಗಳ ಉಲ್ಲೇಖಗಲನ್ನು ಪ್ರಸ್ತಾಪಿಸಿ ಶಾಸನಗಳ ಆಕರವನ್ನು ಸೂಚಿಸಲಾಗುವುದು.

೨. ಗಂಗರು ಬಸದಿಗಳನ್ನು ಮೊದಲು ಮರದಲ್ಲಿಯೂ, ಆಮೇಲೆ ಇಟ್ಟಿಗೆಯಲ್ಲೂ, ಆನಂತರ ಕಲ್ಲಿನಲ್ಲೂ ಕಟ್ಟಿಸಿದರು. ಮರದಲ್ಲಿ ಮಾಡಿಸಿದ ಬಸದಿಗಳಲ್ಲಿ ಕೆಲವನ್ನು ಮತ್ತೆ ಕಲ್ಲಿನಲ್ಲಿ ಕಟ್ಟಿಸಿದ ಉಲ್ಲೇಖವೂ ಶಾಸನದಲ್ಲಿದೆ [ಎ.ಕ. ೭-೧ ಶಿವಮೊ. ೪. ೧೧೨]. ಗಂಗರು ೪-೫ ನೆಯ ಶತಮಾನದಿಂದ ಮೊದಲು ಗೊಂಡು ಕಟ್ಟಿಸಿದ ಬಸದಿಗಳು ಶಾಸನೋಕ್ತವಾಗಿವೆ; ಆದರೆ ಆ ಪ್ರಾಚೀನ ಬಸದಿ ಗಳೊಂದೂ ಉಳಿದುಬಮ್ದಿಲ್ಲ.

೨.೧. (ಅರೆ) ತಿಪ್ಪೂರು, ನೊಣಮಮ್ಗಲ, ವಿಜಯನಮಂಗಲಂ (ತಮಿಳುನಾಡು / ಪೆರಿಯಾರ್‌ಜಿ./) ಮುಂತಾದ ಸ್ಥಳಗಳಲ್ಲಿ ಗಮ್ಗರು ಕಟ್ಟಿಸಿದ್ದು ಇಟ್ಟಿಗೆಯ ಬಸದಿಗಳೆಂದು ಖಚಿತವಾಗಿ ತಿಳಿದು ಬಂದಿದೆ. [Sharma, I.K.: Brick Temples of Western Gangas, `Srinidhi’ – Perspectives in Indian Archaeology, Art and culture : 1983:67-83]. ಆದರೆ ಆ ಇಟ್ಟಿಗೆ ಬಸದಿಗಳೂ ನಾಶವಾಗಿವೆ.

೩. ಗಂಗರು ತಮ್ಮ ಕುಲಗುರು ಸಿಂಹಣಂದಿಆಚಾರ್ಯರ ಆದೇಶಾನುಸಾರ ರಾಜ್ಯಕಟ್ಟಿದರು. ಕೊಂಗುಣಿವರ್ಮನು (ಸು. ೩೫೦ – ೭೦) ಶಿವಮೊಗ್ಗ ಸಮೀಪ ಮಂಡಲಿ ಸಾಸಿರ ರಾಜ್ಯವನ್ನು ಸ್ಥಾಪಿಸಿದನು, ಮಂಡಲಿಯ ಗುಡ್ದದ ಮೇಲೆ ಮರದ ಚೈತ್ಯಾಲಯವನ್ನು ಮಾಡಿಸಿದನು, ಇದೇ ಅತ್ಯಂತ ಪ್ರಾಚೀನತಮ ಹಾಗೂ ಪ್ರಥಮ ಗಂಗರ ಬಸದಿ [ಮೈ.ಆ.ರಿ. ೧೯೦೨. ಪು. ೩೦, ಪ್ಯಾರಾ ೭೦; ರೈಸ್ ಬಿ.ಎಲ್. ಮೈಸೂರು ಗ್ಯಾಸಿಟಿಯರ್, ಸಂ.೧, ೧೮೯೭, ಪು. ೩೧೧; ಎ.ಕ. ೭- ೧ (೧೯೦೨). ಶಿವಮೊ. ೪ ೧೧೨೨. ಪು. ೧೦ – ೧೫]. ಇದನ್ನು ಯ್ತ್ತರೋತ್ತರವಾಗಿ ೧೦-೧೧-೧೨ ನೆಯ ಶತಮಾನಗಳಲ್ಲಿ ಕಲ್ಲಿನಲ್ಲಿ ಕಟ್ಟಿಸಿ ಪುನರ್ಬ್ಬರನಗೊಳಿಸಲಾಯಿತು.

೪. ಮುಮ್ಮಡಿ ಮಾಧವವರ್ಮನು (೪೮೦ – ೯೫) ವೀರದೇವನ ಉಪದೇಶಾನು ಸಾರ ಮುದುಕೊತ್ತೂರ ವಿಷಯದ ಪೆರ್ಬೊಱಲಲ್ಲಿದ್ದ ಮೂಲಸಂಘದ ಅರ್ಹದಾಯತನಕ್ಕೆ ಹೊಲ, ತೋಟ, ಕುಮಾರಪುರ ಗ್ರಾಮ – ಇವನ್ನು ದತ್ತಿಯಾಗಿತ್ತನು [ಎ.ಕ.೧೦ ಮಾಲೂರು. ೭೩. ೫ ಶ.ಪು. ೨೦೮; IWG : ೧೯೮೪: ನಂ. ೧೦: ೩೪ – ೩೬] ಪೆರ್ಬೊೞಲು (ದೊಡ್ದಪಟ್ಟಣ) ಊರಲ್ಲಿದ್ದ ಈ ಬಸದಿಯನ್ನು ನಾಲ್ಕನೆಯ ಶತಮಾನದಲ್ಲಿಯೇ ಕಟ್ಟಿರಬಹುದು.

೫. ಅವಿನೀತನು (ಸು. ೪೯೫ – ೫೫೫) ತನ್ನ ಶ್ರೇಯೋಭಿವೃದ್ಧಿಗಾಗಿ ಊರನೂರ ಅರ್ಹದಾಯತನಕ್ಕೆ ಕೊರಿಕುನ್ದ ವಿಷಯದ ಚೆನ್ನೆಲ್ಕರನಿ ಹಳ್ಳಿಯನ್ನಿತ್ತನು. ನೊಣಮಂಗಲ – ಉರನೂರು ಹತ್ತಿರದ ಹಳ್ಳಿಗಳು. ಉರನೂರ ಬಸದಿಯನ್ನು ಮೂಲಸಂಘದ ಚಂದ್ರನಂದಿ ಎಂಬ ಆಚಾರ್ಯನ ಶಿಷ್ಯರು, ನಾಲ್ಕನೆಯ ಶತಮಾನದ ಸುಮಾರಿಗೆ ಮಾಡಿಸಿದ್ದರು. ಅಲ್ಲದೆ ಇದೇ ಉರನೂರಲ್ಲಿ ಚನ್ದಿ ಅಡಿಗಳು ಕಟ್ಟಿಸಿದ ಇನ್ನೊಂದು ಜಿನಾಲಯವಿತ್ತು. ಅದಕ್ಕೆ ಅವಿನೀತನು ೧/೪ ಕರ್ಷಪಣ ಭಾಗದ ದಾನಕೊಟ್ಟನು. [ಎ.ಕ. ೧೦, ಮಾಲೂರು ೭೨. ನೊಣಮಂಗಲ (ಕೋಜಿ/ಮಾಲೂರುತಾ) ಪು. ೨೦೭-೦೮; IWG ೧೯೮೪ : ನಂ. ೧೨ : ೪೦-೪೩]

೬. ಮಾಧವನ ಮಗ ಕೊಂಗಣ್ಯಾಧಿರಾಜನು ಅರ್ಹದೇವಾಯತನಕ್ಕೆ ಹಲವು ಹೊಲ ತರಿಜಮೀನು ತೋಟ ನಿವೇಶನಗಳನ್ನು ಬಿಟ್ಟುಕೊಟ್ಟನು. ಐದನೆಯ ಶತಮಾನದ ಈ ಬಸದಿಯನ್ನು ಪಲ್ಲವಾಧಿರಾಜ ಸಿಂಹವಿಷ್ಣುವಿನ ತಾಯಿಯು, ತನ್ನ ಪತಿಯ ಕುಟುಂಬದ ಕೀರ್ತಿಗಾಗಿ ಕಟ್ಟಿಸಿದ್ದಳು. ಇದು ಯವನಿಕ (ಯಾಪನೀಯ) ಸಂಘದ ಬಸದಿ ಬನವಾಸಿಯ ಅದಿಕದಂಬರಂತೆಯೇ ಪ್ರಾಚೀನ ಗಂಗರೂ ಯಾಪನೀಯ ಸಂಘಕ್ಕೆ ಪ್ರೋತ್ಸಾಹ – ಪುರಸ್ಕಾರ ಕೊಟ್ಟಿದ್ದರು.

[ಮೈ.ಆ.ರಿ. ೧೯೩೮, ಪು. ೮೦-೯೦. ೫-೬ ಶ. ಹೊಸಪೇಟೆ (ಬೆಂಜಿ/) : IWG : ೧೯೮೪ : ನಂ. ೧೪ : ೪೮ – ೫೧]

೭. ಕೆಲ್ಲಿಪುಸೂರು ಚೇದಿಯ (ಚೈತ್ಯ)ವು ಕೊಡುಗೂರು ನಾಡಿನಲ್ಲಿತ್ತು; ಈ ಬಸದಿ ಯೋಜರು ಚಮ್ದ್ರಸೇನಾಚಾರ್ಯರು. ಪಲ್ಲವ ಎಳಅರಸನು (ಯುವರಾಜ), ಶಿವಮಾರ ರಾಜನ (ಮುತ್ತರಸ-ವೃದ್ಧರಾಜ) ಒಪ್ಪಿಗೆ ಪಡೆದು ಈ ಚೇದಿಯಕ್ಕೆ ವಸದಿಗಾಲು ಗ್ರಾಮವನ್ನೂ, ಎರಡು ಭತ್ತದ ಗದ್ದೆಯನ್ನೂ ತೋಟವನ್ನೂ ಮನೆಯನ್ನೂ ನಿವೇಶನವನ್ನೂ ದತ್ತಿಯಾಗಿ ಇತ್ತನು. ಗಂಜೆನಾಡಿನ ಕಣ್ಣಮ್ಮನು ಮೇಲ್ಪಾೞು, ಜಾದಿಗಾಲು, ಕೂಲಿಗಂಕೆಱೆಕ್ಕಾಲು ಎಂಬ ಮೂರು ಹಳ್ಳಿಗಳನ್ನೂ ತೋಟಗದ್ದೆ ಹೊಲಗಳನ್ನೂ ಬಿಟ್ತುಕೊಟ್ಟನು. ಮಾರಗಿಟ್ಟೆಱರ್ ಎಂಬಾತನು ಇನ್ನೊಂದು ತೋಟವನ್ನು ವಹಿಸಿಕೊಟ್ಟನು. ಬಸದಿಯದೇವರಿಗೆ ಸೇರಿದ ದನಗಳನ್ನು ಮಾರಿ ಮತ್ತೊಂದು ತೋಟವನ್ನು ಕೊಳ್ಳಲಾಯಿತು. [ಮೈ.ಆ.ರಿ. ೧೯೨೫, ಪು. ೯೦-೯೨. ೭-೮ ಶ. ಕುಲಗಾಣ (ಮೈಜಿ / ಚಾಮರಾತಾ); IWG : ೧೯೮೪: ನಂ. ೩೫ : ೩೯ ಎ.ಕ.೪ (ಪ) ಚಾಮರಾ. ೩೪೭. ೭-೮ ಶ. ಕುಲಗಾಣ ಪು. ೨೨೦-೨೪]

೯. ಶಿವಮಾರನು೧ (ಸು. ೬೬೯ – ೭೨೬) ಗಂಗವಾಡಿ, ಪಾಣಾಟ, ಪುನ್ನಾಟಗಳನ್ನು ಅಳುತ್ತಿದ್ದನು. ಕೆಲ್ಲಿಪುಸುಗೂರು ಜಿನಾಲಯಕ್ಕೆಂದು ಚಂದ್ರಸೇನಾಚಾರ್ಯರಿಗೆ ವಸದಿಕಾಲು (ವಸದಿಗಾಲು = ಬಸದಿಹಳ್ಳಿ), ಜಾತಿಕಾಲು, ಮೇಲ್ಪಾಱ, ಕೋಲಿಗಂಕೆಱೆಕ್ಕಾಲು – ಎಂಬ ನಾಲ್ಕು ಹಳ್ಳಿಗಳನ್ನೂ ಹೊಲಗದ್ದೆ ತೋಟಮನೆ ನಿವೇಶನವನ್ನೂ ಒಪ್ಪಿಸಲಾಯಿತು. [ಮೈ.ಆ.ರಿ. ೧೯೨೫, ಪು. ೯೧. ೭-೮ ಶ. ಕುಲಗಾಣ (ಮೈಜಿ/ ಚಾಮರಾತಾ); IWG : ೧೯೮೪ : ನಂ. ೩೬ : ೧೪೦ – ೪೧. ಎ.ಕ. ೪ (ಪ) ಚಾಮರಾ. ೩೪೭. ೭ – ೮. ಶ. ಕುಲಗಾಣ. ಪು. ೨೨೨]

೧೦. ಮೂಲಗಣ ನಂದಿ ಸಂಘ ಎರೆಗಿತ್ತೂರ್ಗಣ ಪುಲಿಕಲ್ಗಚ್ಛದ ಚಂದ್ರಣಂದಿಯ ಶಿಷ್ಯ ಕುಮಾರಣಂದಿಯ ಶಿಷ್ಯ ಕೀರ್ತ್ತನಂದಿ ಆಚಾರ್ಯನ ಪ್ರಿಯಾಗ್ರಶಿಷ್ಯ ವಿಮಳಚಂದ್ರ ಆಚಾರ್ಯನ ಕಾಲದಲ್ಲಿ ಶ್ರೀಪುರದಲ್ಲಿ ಕುಂದಾಚ್ಚಿಯು ಲೋಕತಿಲಕ ಎಂಬ ಹೆಸರಿನ ಜಿನಾಲಯವನ್ನು ಮಾಡಿಸಿದಳು. ಈಕೆ ನಿರ್ಗುಂದದ ಪರಮಗೂಳರಾಜನ ಮಡದಿ, ಸಗರಕುಲದ ಮರುವರ್ಮ ರಾಜನ ಮಗಳು. ಕುಂದಾಚ್ಚಿ ಕಟ್ಟಿಸಿದ ಈ ಬಸದಿಗೆ ಶ್ರೀಪುರುಷನು (೭೨೬ – ೭೭) ನಿರ್ಗುಂದ ವಿಷಯದ ಪೊನ್ನಳ್ಳಿಯನ್ನು ಒಪ್ಪಿಸಿದನು. ಅಲ್ಲದೆ ಸುತ್ತಮುತ್ತಲಿನ ಹಲವು ಹಳ್ಳಿಗಳ ಹೊಲ ತೋಟ ಮನೆ ನಿವೇಶನಗಳನ್ನು ಕೊಡಲಾಯಿತು. [ಎ.ಕ. ೪, ನಾಮಂ. ೮೫. ೭೭೬ – ೭೭. ದೇವರಹಳ್ಳಿ (ಮೈಜಿ/ನಾಮಂ ತಾ)] IWG ೧೯೮೪ : ನಂ. ೪೮ : ೧೮೨ – ೮೯]

೧೧. ಲೋಕ ತ್ರಿಣೇತ್ರ ಮಾರಸಿಂಹನ ಸೇನಾಧಿಪತಿ ಶ್ರೀವಿಜಯನು ಜಿನಭಕ್ತ. ಈತ ಹಳ್ಳಿ, ಪಟ್ಟಣ, ತೊರೆಯದಡ, ಬೆಟ್ಟಗಳ ಮೇಲೆ, ದ್ವೀಪಗಳಲ್ಲಿ ಹಾಗೂ ಕೆರೆಗಳ ಹತ್ತಿರ ಬಸದಿಗಳನ್ನು ಕಟ್ಟಿಸಿದನು. ಇವಲ್ಲವೆ ಮಣ್ಣೆಯಲ್ಲಿ (ಮಾನ್ಯನಗರ) ತುಂಗ ನಿರ್ಮಳ ಜಿನಭವನವನ್ನು ಮಾಡಿಸಿದನು; ಈ ಬಸದಿಗೆ ಮಾರಸಿಂಹರಾಜನು ಕಿಱುವಕ್ಕೂರು ಗ್ರಾಮವನ್ನು ದತ್ತಿಯಾಗಿ ಬಿಟ್ಟನು.

ಶಾಲ್ಮಲೀ ವಿಷಯದ, ಶಾಲ್ಮಲೀಗ್ರಾಮದಲ್ಲಿ ಕೊಂಡಕುಂದ ಅನ್ವಯದ ತೋರಣಾಚಾರ್ಯನ ಶಿಷ್ಯ ಪುಷ್ಪನಂದಿಯ ಶಿಷ್ಯನಾದ ಪ್ರಭಾಚಂದ್ರನಿಗಾಗಿ ಸೇನಾನಿ ಶ್ರೀವಿಜಯನು ಈ ಮಾನ್ಯಪುರಜಿನಭವನವನ್ನು ನಿರ್ಮಿಸಿದನು. ಈ ಬಸದಿಗೆ ಬೇರೆ ಬೇರೆ ಕೆರೆಗಳ ಕೆಳಗೆ ಫಲವತ್ತಾದ ಜಮೀನನ್ನು ದತ್ತಿ ಬಿಡಲಾಯಿತು.

[ಎ.ಕ. ೯, ನೆಮಂ. ೬೦. ೭೯೮. ಮಣ್ಣೆ (ಬೆಂಜಿ / ನೆಮಂತಾ) ಪು. ೪೮-೪೯; IWG ೧೯೮೪ : ನಂ. ೪೯ : ೧೯೦-೨೦೫]

೧೨. ಶ್ರೀಪುರುಷನು ಆಳುತ್ತಿರುವಾಗ, ಪಸಿಂಡಿ ಎಂಬ ಗಂಗವಂಶದ ನಾಗವರ್ಮನು ಗಂಗರಾಜನೆಂದು ಅಭಿಷಕ್ತಿನಾಗಿದ್ದನು. ಈತನೂ, ಈತನ ಸಹೋದರಿಯ ಗಂಡನೂ ಮತ್ತು ಕದಂಬ ಕುಲದವನೂ ಆದ ತುಳುಗ – ಅಡಿಯೂ ಸೇರಿ, ತಗರೆ ಜನಪದದಲ್ಲಿದ್ದ ಮಲ್ಲವಳ್ಳಿ ಎಂಬ ಊರನ್ನು ತೊಳ್ಳಗ್ರಾಮದ ಚೈತ್ಯಾಲಯಕ್ಕೆ ದತ್ತಿಯಾಗಿ ಒಪ್ಪಿಸಿದರು. ನಿರ್ಮಲ ಕೋಶಿಕವಂಶದ ಸಮ್ಯಗ್ ದರ್ಶನ ವಿಶುದ್ಧನಾದ ಮಣಲಿಮನೆ ಒಡೆಯೋನ್ ಎಂಬಾತನೂ ಈ ಚೈತ್ಯಾಲಯಕ್ಕೆ ಉಂಬಳಿ ನೀಡಿದನು. ಇದು ಶಾಂತಿಸೇನ ಅಬ್ಬೆಗಳು ಇತ್ತುದು ಮತ್ತು ಪೆರ್ಬ್ಬಾಲಿಯ ಉಂಬಳಿ – ನಮೋ ಜಿನೇಭ್ಯ: || ಎಂದು ಶಾಸನದಲ್ಲಿದೆ.

[ಮೈ.ಆ.ರಿ. ೧೯೨೦, ಪು. ೨೩. ೮ ಶ. ನರಸಿಂಹರಾಜಪುರ; IWG ೧೯೮೪ : ನಂ. ೭೧: ೨೫೩ – ೪೪]

೧೩. ಶಿವಮಾರನ (೭೮೮-೮೧೬) ಆಳಿಕೆಯಲ್ಲಿ ವಿಟ್ಟರಸ (ವಿಷ್ಣುರಾಜ)ನು ಸಿಂದನಾಡು ಎಣ್ಫಾರಸನು ತೊಳ್ಳರ್ ಊರಿನ ಚೇದಿಯಕ್ಕೆ (ಬಸದಿ) ಕರಿಮಣ್ಣಿನ ಹೊಲವನ್ನು ದತ್ತಿ ನೀಡಿದನು. ವಿಟ್ಟರಸನು ಕಾದಂಬ ರಾಜಾರ್ಹ ಮಾಧವೇಂದ್ರನ ಮಗ.

[ಮೈ.ಆ.ರಿ. ೧೯೨೦, ಪು. ೨೪. ೯ ಶ. ಸಿಂಹನಗದ್ದೆ – ನರಸಿಂಹರಾಜಪುರ; IWG: ೧೯೮೪: ನಂ. ೮೫: ೨೭೪-೭೫]

೧೪. ಶಿವಮಾರನ – ಅವರಾ ಮಾಮಗಳಾದ ವಿಜಯಶಕ್ತಿ ಅರಸನು ದೇವಿಗೆಱೆಯಾ ಕೆಳಗೆ ಆರು ಗಂಡುಗ ವೆದೆ ಮಣ್ಣುಮ್ (ಬಿತ್ತನೆಹೊಲ), ಕೊಳನುಂಶಿಯಲ್ಲಿ ಒಂದು ಪಾಳಿಯಮ್ ಮುದಮೀರಿಯ ಉಂಚಮುಂ (ಧಾನ್ಯಸಂಗ್ರಹ). ಮೂಳಿವಳ್ಳಿಯ ಚೇದಿಯ (ಚೈತ್ಯ)ಕ್ಕೆ ಬಿಟ್ಟು ಕೊಟ್ಟರ್ [IWG :೧೯೮೪: ನಂ. ೮೬, ೯ ಶ. : ೨೭೬-೭೭].

೧೫. ಶ್ರವಣಬೆಳಗೊಳದ ಚಿಕ್ಕಬೆಟ್ಟದ ಮೇಲೆ ಚಂದ್ರನಾಥ ತೀರ್ಥಂಕರ ಬಸದಿಯ ವಾಯವ್ಯದಕಡೆ ಶಿವಮಾರನು ಬಸದಿಯನ್ನು ಕಟ್ಟಿಸಿದನು [ಮೈ.ಆ.ರಿ. ೧೯೧೧, ಪು. ೩೩, ೯ ಶ; IWG : ೧೯೮೪: ನಂ. ೮೮: ೨೭೯; ಎ.ಕ. ೧೧ (ಪ) ೧೪೦ (೪೧೫) ಪು. ೮೬] ಅಲ್ಲದೆ ಶಿವಮಾರನು ಒಂದು ಬಸದಿಯನ್ನು ಕುಮ್ಮಡವಾಡದಲ್ಲೂ (ಬೆಳಗಾವಿ ಜಿ/) ಒಂದು ಕೊಯಿಲ್ ಬಸದಿಯನ್ನು ಹೆಬ್ಬಲಗುಪ್ಪೆಯಲ್ಲೂ (ಮೈಜಿ/), ಒಂದು ಚೇದಿಯನ್ನು ಮುಳಿವಲ್ಳಿಯಲ್ಲೂ ಕಟ್ಟಿಸಿದನು.

೧೬. ಸತ್ಯವಾಕ್ಯಕೊಂಗುಣಿವರ್ಮ ಪೆರ್ಮಾನಡಿ ರಾಚಮಲ್ಲನು (೮೭೦ – ೯೦೭) ಫಾಲ್ಗುಣ ಮಾಸದ ಶ್ರೀ ಪಂಚಮಿ ಹಬ್ಬದಂದು ಪೆಣ್ಣೆಗಂಡಗದ ಸತ್ಯವಾಕ್ಯ ಎಂಬ ಹೆಸರಿನ ಜಿನಾಲಯಕ್ಕೆ ಬಿಳಿಯೂರು, ಬೆದ್ದೊಱೆಗರೆಯ ಪನ್ನಿರ್ಪ್ಪಳ್ಳಿ – ಎಂಬೆರಡು ಹಳ್ಳಿಗಳನ್ನು ದತ್ತಿ ಬಿಟ್ಟನು. ಶಿವನಂದಿ ಸಿದ್ಧಾಂತಿದೇವನ ಶಿಷ್ಯ ಸರ್ವಣಂದಿ ದೇವನು ಈ ಕೊಡುಗೆಗಳನ್ನು ಪಡೆದನು.

[ಎ.ಕ. ೧, ೨.೮೮೮. ಬಿಳಿಯೂರು (ಕೊಡುಗುಜಿ / ವಿರಾಜಪೇಟೆ ತಾ); ಎ.ಕ. ೧ (ಪ), ೯೬; IWG : ೧೯೮೪:ನಂ. ೧೦೬ : ೩೨೫-೨೬].

೧೭. ಪೊಳ್ಮದ ತೇನಂದಾಕ ಗೆಳೆಯರ್ ಕಣ್ಣಮಂಗಲದಲ್ಲಿ ಒಂದು (ವ)ಬಸದಿಯನ್ನು ಕ್ರಿ.ಶ. ೯೦೨ ರಲ್ಲಿ ಮಾಡಿಸಿ ಹೊಸ ತೋಟಗಳನ್ನೂ ಭತ್ತದ ಗದ್ದೆಯನ್ನೂ ದತ್ತಿಬಿಟ್ಟರು ಉತ್ತನಿಂದಿಪುರಿಯ ಕಡಹುರ ಭಟಾರನಶಿಷ್ಯ ಮಂಡಲಭಟಾರನ ಶಿಷಿಂತಿ ಕಮುಂಗಱೆ ಕಂತಿಯರಿಗೆ ಈ ಕೊಡುಗೆಗಳನ್ನು ವಹಿಸಲಾಯಿತು.

ಸೊತ್ತಿಯೂರ ಪ್ರಮುಖ ಮದಮ್ಮಯ್ಯನ ಮಗ ಶ್ರೀವರ್ಮ್ಮಯ್ಸನು ಕೊಣ್ಣ ಮಂಗಲದಲ್ಲಿ ಇನ್ನೊಂದು ಬಸದಿ ಕಟ್ಟಿಸಿದನು; ಅದಕ್ಕೆ ಆ ಬಸದಿಯ ಹಿತ್ತಲ ಹಿಂಭಾಗದ ತೋಟವನ್ನೂ, ತೊಂಬೊಲದಲ್ಲಿ ಎಂಟು ಕೊಳಗ ಬೀಜವರಿ ಹಿಲವನ್ನೂ ಒಪ್ಪಿಸಿದನು. ಈ ಕೊಣ್ಣಮಂಗಲದ ಬಸದಿಗೆ ಎಳನೊಮ್ಮಡಿವ್ವೆಯ ಮಗನಾದ ಅಯ್ಯಪ್ಪ ನೊಮ್ಮಯ್ಯನು ತುಂಬೊಲದಲ್ಲಿ ಪಡುವಣದ ತೆಂಗಿನ ತೋಟವನ್ನೂ ನಾಲ್ಕು ಕೊಳಗ ಭತ್ತದ ಹೊಲವನ್ನೂ ದಾನಮಾಡಿದನು.

[ಎ.ಕ. ೧೦, ಕೋಲಾರ. ೯೦. ೯೦೨-೦೩. ನರ್ಸಾಪುರ (ಕೋಜಿ / ತಾ) ಪು. ೨೪-೨೫; IWG : ೧೯೮೪: ನಂ. ೧೦೭, ಪು. ೩೨೭-೩೩]

೧೮. ತನ್ನ ತಾಯಿ ಕಲ್ಲಬ್ಬಾಳು ಮಾಡಿಸಿದ ಬಸದಿಗೆ ಪೂಜಾದಿಗಳಿಗಾಗಿ ಮಾರಸಿಂಹನು (೯೬೨-೭೪) ಕೊಂಗಲ್ ನಾಡಿನ ಕಾದಲೂರನ್ನು ಸೂರಸ್ತಗಣದ ಏಳಾಚಾರ್ಯರಿಗೆ ಒಪ್ಪಿಸಿದನು. ಕಲ್ಲಬ್ಬೆಯು ಚಾಳುಕ್ಯರ ಸಿಂಹವರ್ಮ ಅರಸನ ಮಗಳು, ಜಯದತ್ತರಂಗ ಬೂತುಗ || ಅರಸನ ರಾಣಿ. ಕಲ್ಲಬ್ಬಾಳು ಮಾಡಿಸಿದ ಬಸದಿಯಲ್ಲಿ ಚಿತ್ರಗಳೂ ಇದ್ದುವು: ಸುಧಾಚಿತ್ರ ಚಿತ್ರಾದಿ ಪೂಜಾರ್ಥಂ (ಸಾಲು : ೧೫)

[ಎ.ಇ. ೩೬, ಪು. ೯೭-೧೧೦. ೯೬೨. ಕಾದಲೂರು (ಧಾಜಿ / ತಾ); ಎ.ಆರ್.ಐ.ಎಸ್.ಇ. ೧೯೩೪-೩೫. ಎ-೨೩. ೯೬೨; IWG: ೧೯೮೪: ನಂ. ೧೩೯ : ೪೩೩-೪೮]

೧೯. ಆಷಾಢ – ಕಾರ್ತಿಕ -ಫಾಲ್ಗುಣ ಮಾಸದ ನಂದೀಶ್ವರ ಹಬ್ಬದಲ್ಲಿ ಪೆಗ್ಗದೂರಿನ ಬಸದಿಗೆ, ಪೆಗ್ಗದೂರು ಮತ್ತು ಪೊಸವಾಡಗ ಹಳ್ಳಿಗಳನ್ನು ಅನಂತವೀರಯ್ಯ ನಿಗೆ ವಹಿಸಿಕೊಡಲಾಯಿತು. ಅಭ್ಯಂತರ ಸಿದ್ಧಿಯಾಗಿತ್ತ ಈ ಪೆಗ್ಗದೂರು ಬಸದಿಯ ಶಾಸನ ದಾಖಲೆಯನ್ನು ಚಂದ ನಂದಿಯಯ್ಯನು ರಚಿಸಿದನು.

[ಎ.ಕ. ೧ ೪.೯೭೮, ಪೆಗ್ಗೂರು (ಕೊಡಗು ಜಿ/ ವಿರಾಜ ಪೇಟೆ ತಾ); ಎ.ಕ ೧(ಪ) ೯೮.; IWG: ೧೯೮೪: ನಂ. ೧೪೮:೪೬೫-೬೬]

೨೦. ನನ್ನಿಯಗಂಗ ಬೂತುಗ ಪೆರ್ಮಾಡಿಯು ತನ್ನ ಆಳಿಕೆಯಲ್ಲಿನ ತಟ್ಟಿಕೆಱೆ ಬಸದಿಗೆ ಊರಿನ ಕೆರೆಯ ಕೆಳಗಿನ ತರಿಜಮೀನನ್ನು ದಾನಮಾಡಿದನು; ಆತನ ಪಟ್ಟ ಮಹಾದೇವಿಯೂ ಈ ತೀರ್ತ್ಥದ ಬಸದಿಗೆ ಕಾಣಿಕೆಯನ್ನೂ ‘ನಾಡೂರ್ಗ್ಗಳೊಳು ಪಣವಂ ಕೊಟ್ಟರ್’. ಈ ಶಾಸನದಲ್ಲಿ ಕಾಣೂರುಗಣದ ಆಚಾರ್ಯ ಪರಂಪರೆ ಯನ್ನು ಗುರುತಿಸಿ ದಾಖಲಿಸಿದೆ.

[ಮೈ.ಆ.ರಿ. ೧೯೨೩.೧೧೩.೧೦ಶ. ಈಚವಾಡಿ (ಶಿವಮೊಜಿ / ತಾ) ಪು. ೧೧೪-೧೫; IWG: ೧೯೮೪: ನಂ. ೧೫೦: ೪೬೮-೭೦]

೨೧. ಮಾಧವ ಮಹಾಧಿರಾಜನ (ಸು. ೪೦೦-೪೦) ಮತ್ತು ಕೃಷ್ಣವರ್ಮನ ಮಗ ಸಿಂಹವರ್ಮ (ಹರಿವರ್ಮ, ಸು. ೪೪೦-೬೦) ಆಳಿಕೆಯ ಶಾಸನ ವಿವರ: ಸಿಂಹವರ್ಮನ ರಾಜಪ್ರಿಯಾ ನರ್ತಕಿಯಾದ ನಂದವ್ವಾಳು ಸಮ್ಯಗ್ ದರ್ಶನ ಯುಕ್ತಳಾಗಿದ್ದಳು ಈಕೆ ಒಂದು ಅರ್ಹದಾಯತನವನ್ನು ಮಾಡಿಸಿದಳು (ಸ್ವಕೃತಾಯ); ಇದು ಮೂಲ ಸಂಘಕ್ಕೆ ಸೇರಿದ ಬಸದಿಯಾಗಿತ್ತು. ಅರಸನ ಅನುಮತಿಯಿಂದ ಈ ಬಸದಿಗೆ ಒಂದು ತೋಟವನ್ನು ನೀಡಿದಳು; ಈ ತೋಟವನ್ನು ಐನೂರು ಕಾರ್ಷಪಣವನ್ನು ಕೊಟ್ಟು ಕಾಕರಾಲಾಧಿಪತಿಯಿಂದ ಕೊಂಡಿದ್ದಳು. ನಂದವ್ವಾ ಕಲಾವಿದೆಯ ಕಾದಲನಾದ ಸಿಂಹರಾಜನೂ, ತನ್ನ ಎಂಟನೆಯ ವರ್ಷದ ಆಳಿಕೆಯಂದು, ಪೇರೂರಿನ ರಕ್ತ ತಡಾಗದ ನೀರಿಂದ ಉಳುಮೆಯಾಗುತ್ತಿದ್ದ ನೀರಾವರಿ ಭೂಮಿಯಲ್ಲಿ, ನಾಲ್ಕು ಕಂಡುಕ ಬೀಜವರಿ ಭೂಮಿಯನ್ನು ಬಿಟ್ಟುಕೊಟ್ಟನು. ಇದು ಒಂದೂವರೆ ಸಾವಿರ ವರ್ಷದಷ್ಟು ಹಿಂದಿನ ಬಸದಿ. ರಕ್ತ ತಟಾಕ ಎಂಬುದು ಕನ್ನಡದ ಕೆಂಪುಕೆರೆ ಎಂಬುದರ ಸಂಸ್ಕೃತ ರೂಪ.

[IWG: ೧೯೮೪ : ನಂ. ೧೫೫.೫ ಶ.: ೪೭೯-೮೨.ಪೇರೂರು (ತಮಿಳುನಾಡು: ಕೊಯಮತ್ತೂರು ಜಿ / ತಾ)]

೨೨. ನೊಳಂಬವಾಡಿ ೩೨,೦೦೦ ದ ಭಾಗವಾಗಿದ್ದ ಕೋಗಳಿ – ೫೦೦ ನಾಡಿನಲ್ಲಿ ಮುಖ್ಯ ಪಟ್ಟಣವಾದ ಕೋಗಳಿಯು ಜೈನ ಕೇಂದ್ರವಾಗಿ ಕೋಗಳಿತೀರ್ತ್ತ ಎನಿಸಿತ್ತು. ಇಲ್ಲಿ ಗಂಗರ ದುರ್ವಿನೀತನು (ಸು. ೪೯೫ – ೫೩೫) ಒಂದು ಬಸದಿಯನ್ನು ಕಟ್ಟಿಸಿದನು;

            ಇದು ದಿರ್ವ್ವಿನೀತನಿಂದಂ
ಮೊದಲೊಳ್ ಬಸದಿಯಿಂದ ನಾಡ ಮುತ್ತರಘಳೆಯಂ
ವಿದಿತಯಶರಿಂದ್ರ ಕೀರ್ತ್ತಿಗ
ಳುದಿತೋದಿತಮಾಗೆ ಮಾಡಿದರ್ ಕೋಗಳಿಯೊಳ್
||

ಇಂದ್ರ ಕೀರ್ತಿ ಮುನೀಂದ್ರನು ಈ ಬಸದಿಯ ಮಾಣಿಗಳ ಓದಿಗಾಗಿ ಒಂದು ದತ್ತಿಯನ್ನು ಇತ್ತನು. ಕೋಗಳಿಯು ಜೈನ ಘಟಿಕಾ ಸ್ಥಾನವಾಗಿತ್ತು.

[ಸೌ.ಇ.ಇ. ೧, ನಂ. ೧೮೯-೧೯೬; ಸೌ.ಇ.ಇ. ೯-೧, ೩೪೬, ೩೪೭. ೧೧೭೩, ೧೨೨೦; ಅದೇ, ೧೧೭, ೧೦೫೫. ಕೋಗಳಿ (ಬಳ್ಳಾಂಜಿ / ಹಡಗಲಿ ತಾ)] ಕ್ಯು.ಜೆ.ಎಂ.ಎಸ್.ಸಂ ೩೬ ಪು. ೧೨೬-೩೩]

೨೩. ಮುಷ್ಕರನು [೫೩೮-೮೬] ಬಳ್ಳಾರಿ ಜಿಲ್ಲೆಯಲ್ಲಿ ಮುಕ್ಕರ ಬಸದಿಯನ್ನು ಮಾಡಿಸಿದನು [ಇ.ಆ.೭, ೩೮. ಪು. ೧೦೧ – ೧೭]

೨೪. ಎಱೆಗಂಗ ನೀತಿಮಾರ್ಗ ಪೆರ್ಮಾನಡಿಯು (೯೦೭-೨೧) ಅರೆ ತಿಪ್ಪೂರು ತೀರ್ತ್ಥ (ಕನಕಗಿರಿತೀರ್ತ್ಥ) ದಲ್ಲಿ ಬಸದಿಗಳನ್ನು ಮಾಡಿಸಿದನು, ಮಾಡಿಸಿದವರಿಗೆ ಸಹಾಯ ಮಾಡಿದನು

[ಎ.ಕ.೭ (ಪ) ಮದ್ದುರು. ೧೦೦. ಪು. ೩೧೨]

೨೫. ತಮಿಳುನಾಡಿನ ಪೆರಿಯಾರ್ ಜಿಲ್ಲೆಯ ವಿಜಯಮಂಗಲಂ ಎಂಬ ನಗರದಲ್ಲಿ ಗಂಗರು ಮಾಡಿಸಿದ ಚಂದ್ರಪ್ರಭ ಬಸದಿಯಿದೆ. ವಿಜಯಮಂಗಲವು ಜೈನ ವೈಯಾಕರಣಿ ಪವಣಂದಿ (ನನ್ನೂಲ್ ಕರ್ತೃ) ಹುಟ್ಟಿದೂರು. ಇಲ್ಲಿನ ಈ ಚಂದ್ರಪ್ರಭ ಬಸದಿಯಲ್ಲಿ, ಸುವಿಖ್ಯಾತ ಗೊಮ್ಮಟಮೂರ್ತಿಯನ್ನು ಮಾಡಿಸಿದ ಚಾಮುಣ್ಡರಾಯನ ತಂಗಿ, ಪುಲ್ಲಬ್ಬೆಯು ಸಲ್ಲೇಖನದಿಂದ ಮುಡುಪಿದಳು; ಇಲ್ಲಿಯ ಶಿಲ್ಪದಲ್ಲಿ ಪುಲ್ಲಬ್ಬೆಯು ಪದ್ಮಾಸನಹಾಕಿ ಕೈ ಮುಗಿದು ಕುಳಿತಿರುವ ಭಂಗಿಯ ಮೂರ್ತಿಯಿದೆ.

[Sharma, I.K: Brick temples of western Gangas, srinidhi, 1983, pp. 293-98]

೨೬. ಧಾರವಾಡ ಜಿಲ್ಲೆಯ ನವಿಲ್ಗುಂದ ತಾಲ್ಲೂಕಿನ ಅಣ್ಣಿಗೇರಿ (ಅಣ್ಣಿಗೆಱೆ) ಯಲ್ಲಿ ಗಂಗರ ಬೂತುಗ. ೧೧(೯೩೮-೬೨) ಮಹಾಮಂಡಲೆಶನು ಜಿನೇಂದ್ರಮಂದಿರ ವನ್ನು ಕಟ್ಟಿಸಿದನು. ಬೂತುಗನ ರಾಷ್ಟ್ರಕೂಟರ ಮುಮ್ಮಡಿ ಕೃಷ್ಣನ ಭಾವನಾಗಿದ್ದನು:

ಶ್ರೀವಸುಧೇಶನ ಬಾವಂ
ರೇವಕನಿರ್ಮ್ಮಡಿಯ ವಲ್ಲಭಂ ಬೂತಗನಾ
ತ್ಮಾವಗತ ಸಕಳ ಶಾಸ್ತ್ರನಿ
ಳಾವಿಶ್ರುತಕೀರ್ತ್ತಿ ಗಂಗಮಣ್ಡಲನಾಥ (೦)
||

            ರೂಡಿಗೆ ರೂಡಿವೆತ್ತೆಸೆದ ಬೆಳ್ವಲದೇಶಮನಾಳ್ದ ಗಂಗಪೆ
ರ್ಮ್ಮಾಡಿಗಳಿಂದಮಣ್ಣಿಗೆಱಿ ನಾಳ್ಕೆಱಿವಟ್ಟೆನಿಸಿತ್ತು ನಾಡನಾ
ಡಾಡಿಗಳುಂಬಮೆಂಬಿನೆಗಮಾ ಬೂತುಗ ನರೇನ್ದ್ರನಿನಲ್ಲಿ ಜಿನೇಂದ್ರಮಂದಿರಂ
||
ಸಂಗಮಾಗೆ ಮಾಡಿ ತಳವ್ರಿತ್ತಿಯನಲ್ಲಿಗೆ ಮೂಡಗೇರಿಗು
ಮ್ಮುಂಗೊಳನಾದಿಯಾಗೆ ನೆಗಳ್ದಿಟ್ಟಗೆ ಗಾವರಿವಾಡಮೆಂಬ ಬಾ
ಡಂಗಳ ಶಾಸನಂ ಬೆರಸು ಸರ್ವ್ವ ನಮಸ್ಯಮಿವೆಂದು ಬಿಟ್ಟುಕೊ
ಟ್ಟಂ ಗುಣಕೀರ್ತ್ತಿ ಪಣ್ಡಿ ತರ್ಗ್ಗೆ ಭಕ್ತಿಯಿನುತ್ತಮ ದಾನಶಕ್ತಿಯಿಂ
||

[ಎ.ಕ. ೧೫, ೨೩.೧೦೭೧-೭೨. ಗಾವರವಾಡ (ಧಾಜಿ / ಗದಗ ತಾ) ಪು. ೩೩೭-೪೬. ಸಾಲು : ೧೫ – ೨೦]

೨೭. ಶ್ರೀಪುರುಷನ ಮಗ ರಣವಿಕ್ರಮನ ಮಗನಾದ ರಾಚಮಲ್ಲ ಸತ್ಯವಾಕ್ಯನು ತಮಿಳುನಾಡಿನ ವಲ್ಲಿಮಲೈನಲ್ಲಿ ಒಂದು ಬಸದಿಯನ್ನು ಕಟ್ಟಿಸಿದನು.

ಬಸದಿಗಳು ಜೈನಧರ್ಮದ ಸಂಘಟನೆಯಲ್ಲಿ ಗಣನೀಯ ಪಾತ್ರವಹಿಸಿವೆ. ಜೈನಸಮಾಜಕ್ಕೆ ಸಾಂಘಿಕ- ಸಾಂಸ್ಥಿಕ ಸ್ವರೂಪ ಕೊಡುವುದಕ್ಕೂ ಈ ಚೈತ್ಯಾಲಯಗಳು ಕಾರಣವಾದವು. ಧಾರ್ಮಿಕ ಸಾಹಿತ್ಯಕ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರ ಬಿಂದುಗಳು ಬಸದಿಗಳು. ಜೈನಚಾರ್ಯರು ಮತ್ತು ಜಿನಾಲಯಗಳು ಜೈನಧರ್ಮನಾಣ್ಯದ ಎರಡು ಮುಖಗಳು; ಪರಸ್ಪರಾವಲಂಬಿಗಳಾಗಿ ಬಸದಿಗಳೂ, ಬಸದಿಯೊಡೆಯರೂ ಪೂರಕ ಪ್ರೇರಕ ಪೋಷಕ ಆಗಿದ್ದುದನ್ನು ಗಂಗರ ಪ್ರಾಚೀನ ಶಾಸನಗಳು ಶ್ರುತ ಪಡಿಸಿವೆ. ಅವಿನಾಭಾವ ಸಂಬಂಧ ಇರುವ ಕಾರಣಕ್ಕಾಗಿ ಬಸದಿ ಮತ್ತು ಜೈನಾಚಾರ್ಯರನ್ನು ಒಟ್ಟಿಗೆ ಪರಿಗಣಿಸುವ ಪದ್ಧತಿ ರೂಢಿಗೆ ಬಂದಿದೆ. ಪ್ರಸಿದ್ಧ ಆಚಾರ್ಯಸಂಘ ಚಾತುರ್ಮಾಸಕ್ಕಾಗಿ ನಾನಾ ಬಸದಿಗಳಲ್ಲಿ ನೆಲೆನಿಂತಾಗಲಂತೂ ಜಿನಾಲಯಗಳು ಚಟುವಟಿಕೆಯು ಜನಾಲಯಗಳಾಗುತ್ತಿದ್ದುವು. ಪೂಜಾಸಂಪ್ರದಾಯದ ಉಗಮಕ್ಕೂ ಇವೇ ಜನ್ಮ ಸ್ಥಳ. ದಾನದತ್ತಿಗಳಿಂದ ಬಸದಿಗಳು ಬಾಳಿದುವು; ರಕ್ಷಿತರ ರಕ್ಷಣೆ ಇಲ್ಲದಾಗ ಸೊರಗಿದವು, ಪಾಳು ದೇಗುಲಗಳಾದುವು.

ಗಂಗ ಸಾಮ್ರಾಜ್ಯವನ್ನು ಹರಸಿ ದಾರಿ ತೋರಿದ ಕ್ರಾಣೂರ್ಗಣ – ಯಾಪನೀಯ ಸಂಘದ ಮಹಾನ್ ಆಚಾರ್ಯ ಸಿಂಹಣಂದಿ ಮುನಿಯ ಉಪದೇಶದಂತೆ ದಡಿಗ ಮಾಧವರ ಕಾಲದಿಂದ ಗಮ್ಗಮನೆತನ ಉದ್ದಕ್ಕೂ ಆದ್ಯತೆಯ ಮೇರೆಗೆ ಜೈನಧರ್ಮವನ್ನು ತಮ್ಮ ರಾಷ್ಟ್ರಧರ್ಮವಾಗಿ ಸ್ವೀಕರಿಸಿ ಪುರಸ್ಕರಿಸಿದರು. ಅವಿನೀತ, ದುರ್ವಿನೀತ, ಶಿವಮಾರ, ಶ್ರೀಪುರುಷ ಮುತ್ತರಸ, ಸೈಗೊಟ್ಟ ಶಿವಮಾರ, ದುಗ್ಗಮಾರ ಎರೆಯಪ್ಪ, ನೀತಿಮಾರ್ಗ, ಬೂತುಗ, ಮರುಳ, ಮಾರಸಿಂಹ, ರಾಚಮಲ್ಲ, ರಕ್ಕಸಗಂಗ ಪೆರ್ಮಾನಡಿ ಎಲ್ಲರೂ ನಿರಂತರವಾಗಿ ಬಸದಿಗಳನ್ನು ಕಟ್ಟಿಸಿದರು, ಮಾನಸ್ತಂಭಗಳನ್ನು ನಿಲ್ಲಿಸಿದರು, ಜೈನಾಚಾರ್ಯರಿಗೆ ಪೊಡೆಮಟ್ಟು ಪೊರೆದರು ಎಂಬುದಕ್ಕೆ ಶಾಸನಗಳ ಆಧಾರಗಳೂ ಸಾಹಿತ್ಯ ಕೃತಿಗಳ ಹೇಳಿಕೆಗಳೂ ಪರಸ್ಪರ ಪೂರಕವಾಇ ವಿಪುಲವಾದ ಮಾಹಿತಿಗಳನ್ನು ಒದಗಿಸಿವೆ. ಜೈನಸಾಹಿತ್ಯಕ್ಕೆ, ಜೈನವಾಸ್ತು ಶಿಲ್ಪಕ್ಕೆ, ಒಟ್ಟಾರೆಯಾಗಿ ಜೈನ ಪರಂಪರೆಯ ಮುಂದುವರಿಕೆಗೆ ಗಂಗರ ಕೊಡುಗೆ ಬಹಳದೊಡ್ದದು.