೧. ಶಾಸನಗಳಲ್ಲಿ ಹೆಸರಾಗಿರುವ ಚತುರ್ಥಕುಳವನ್ನು ಕುರಿತು ಸಮಾಜೊ – ಧಾರ್ಮಿಕ ಅಧ್ಯಯನ (Socio-religious) ದೃಷ್ಟಿಯಿಂದ ಕೆಲವು ಅಭಿಪ್ರಾಯೋಕ್ತಿಗಳನ್ನು ಸಮೀಕ್ಷಾ ರೂಪದಲ್ಲಿ ಮಂಡಿಸುವುದು ಈ ಹಂಸಲೇಖನ ಆಶಯ.

೧.೧.      ಬಿಟ್ಟ ಕುಳದೊಳ್ ಸಾನಂದದಿಂ ಪುಟ್ಟಿ ಸದ್ಬೋಭಾಂಬುಧಿ
ಚತುರ್ತ್ಥವಂಶತಿಳಕಂ ನಿತ್ಯೋದಯಂ ಗೋಮಿನಿ ಸ್ವಾಧೀನಂ
ಖರರೋಚಿಗಂ ಮಿಗಿಲೆನಿಸಲ್ ಕಣ್ಗೊಪ್ಪಿದಂ ರೋಚಿಗಂ
||
[ಐಎಪಿ. ವರಂಗಲ್ ೧೮, ೧೧೦೮. ಬೈರಾನಿಪಲ್ಲಿ (ಆಂಧ್ರ:ವರಂಗಲ್ಜಿ/ಜನಗಾಂವ್ ತಾ ||) ಪು. ೪೦-೪೪]

೧.೧.೧. ಅಜಂಪಾದಾಂಬುಲಂ ಬುಟ್ಟಿರಾದ್ಯಮುನವಿಪ್ರಾನ್ವಯ ಮುಖ್ಯಂಡು ಪ
ದ್ಮಜುಂಡು ನ್ವಿಪುಲ ಪಾದಮುಲು ಶುಚುಲು ಮೇಧ್ಯಸ್ಥಾನ ಜುಲುಗಾನ
ಬ್ಜಜ ಪಾದಾಬ್ಜಜುಲುಂಬವಿತ್ರುಲನಿ ನಿಸ್ಸಂದಿಗ್ಧ ಭಂಗಿನಿ ಸಮ
ಸ್ತಜನವ್ರಾತಮುಲುಂ ಚತುರ್ತ್ಥಕುಲಲನು ಶಂಕಿಂತುರಿ ದ್ಧಾರುಣಿನಿ
||

            ಅತುಲ ಚತುರ್ತ್ಥವಂಶಜುಲಯಂದತಿ ಜೀವದಯಾಪರತ್ವ ಸೂ
ನ್ರಿತ ದುರತೇತರಾ ಪ್ರಮಿತ ನಿರ್ಮ್ಮಲಬುದ್ಧಿ ಸಮೃದ್ಧಿ ಶ್ರಾವಕ
ವ್ರತಯುತಲೇ ವಿಶಿಷ್ಟುಲಗುವಾರಲು ವಂಶಮುಶಿಷ್ಟವಂಶಮೆ
ವಿತತ ಸಮಸ್ತ ಭೂಭುವನ ವಿಶ್ರುತಮಯ್ಯಂದದ ಸ್ವಯಂಬುನನು
||

ಎಂಬ ವೃತ್ತ (ತೆಲುಗು) ಪದ್ಯಗಳು ಆಂಧ್ರದ ಬೆಕ್ಕಲ್ಲು ಗ್ರಾಮದ ಹೊರಗಡೆ ಶಿವಾಲಯದ ಬಳಿ ಮುರಿದು ತುಂಡಾಗಿ ಬಿದ್ದಿರುವ ಕಲ್ಲುಕಂಬದ ಮೇಲಿವೆ. ಆ ಜಾಗದಲ್ಲಿ ಹಿಂದೆಜಿನಾಲಯಗಳನ್ನು ಮಲ್ಲಿ ರಡ್ಡಿಯು ಮಾಡಿಸಿದ್ದನು.

[ಐಎಪಿ. ವರಂಗಲ್ ೨೦, ೧೧ಶ (ಸು. ೧೦೯೦) ಬೆಕ್ಕಲ್ಲು (ಆಂಧ್ರ : ವರಗಲ್ ಜಿ / ಜನಗಾಂವ್ ತಾ) ಪು. ೪೫-೪೮]

೨.         ವಿನಯದ ಪೆಂಪಿನುನ್ನತಿಯ ಮಾನ್ತನದೊಳ್ಪಿನ ಸಚ್ಚರಿತ್ರದಾ
ರ್ಪ್ಪಿನ ನಿಜಗೋತ್ರ ರಕ್ಷಣೆಯ ಧರ್ಮದ ಪೆರ್ಮ್ಮೆಯವೊಂದನೊನ್ದುನೆ
ಟ್ಟನೆ ಮಿಗೆ ಸಚ್ಚತುರ್ತ್ಥಕುಳ ದೀಪಿಕೆ ತಾನೆನಿಸಿರ್ದ್ಧ ಚಾಮಿಯ
ಕ್ಕನೊಳಿಣೆಯಾರ್ಮ್ಮಹಾಪ್ರಭು ಶಿಖಾಮಣಿ ಚಟ್ಟನ ಪುಣ್ಯ ಕಾನ್ತೆಯೊಳ್
||
[ಸೌ.ಇ.ಇ. ೧೮, ೦೧೫೧.೧೧೪೮೦ ನೀರಲಗಿ (ಧಾಜಿ / ಹಾವೇರಿ) ಪು. ೨೦೨]

೨.೧       ವಿನುತ ಜಿನಧರ್ಮ್ಮವಾರ್ಮ್ಮಂ
ಜಿನಮುನಿಗಳ್ ತನಗೆ ಪರಮಗುರುಗಳೆನಲ್ ಸ
ಜ್ಜನನುತ ಚತುರ್ತ್ಥಕುಳವ
ಣ್ಡನನಾದಂ ವಿಬಯನಿಧಿ ಮಹಾಪ್ರಭುದಡಿಗಂ
||
[ಅದೇ, ಪು. ೨೦೦ ಸಾಲು : ೧೭]

೩.         ಹೀಗೆ ಶಾಸನಗಳಲ್ಲಿ ‘ಚತುರ್ಥಕುಲ’ ವನ್ನು ಕುರಿತು ಕೆಲವು ಉಲ್ಲೇಖಗಳು ಸಿಗುತ್ತವೆ. ಈ ಕುಲ ಯಾವುದು, ಯಾವ ಮೂಲದ್ದು, ಯಾವ ಕಾಲದ್ದು – ಎಂಬುದು ಪರಿಶೀಲನಯೋಗ್ಯವಾಗಿದೆ.

೩.೧ ಚತುರ್ಥಕುಲ ಎಂಬುದು ಜೈನ ಸಮಾಜದಲ್ಲಿ ಇರುವ ಒಳಜಾತಿಗಳಲ್ಲಿ ಒಂದು. ಚತುರ್ಥರು, ಬೋಗಾರರು, ಸಾದರು ಪಂಚಮರು, ವೈಶ್ಯರು ಎಂಬ ಕುಲಗಳು ಜೈನರಲ್ಲಿವೆ. ಉತ್ತರ ಕರ್ನಾಟಕದಲ್ಲಿ, ವಿಶೇಷವಾಗಿ ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಈ ಜೈನ ಜಾತಿಗಳು ಪ್ರಬಲವಾಗಿ ಪ್ರಚಾರದಲ್ಲಿವೆ. ನಿಘಂಟಿನ ಶಬ್ದಾರ್ಥದ ಪ್ರಕಾರ, ‘ಚತುರ್ಥ’ ಎಂದರೆ ನಾಲ್ಕನೆಯ ಜಾತಿ, ಶೂದ್ರ ಎಂದು ಅರ್ಥ ಸೂಚನೆಯಿದೆ. ಆದರೆ ಅಂದರೊಂದಿಗೇನೆ ಜೈನರಲ್ಲಿ ಒಂದು ಪಂಗಡ, ಜಾತಿ ಎಂಬರ್ಥವನ್ನೂ, ಈ ಮೇಲ್ಕಂಡ ಪ್ರಾಚೀನ ಶಾಸನಗಳ ಪ್ರಯೋಗವನ್ನು ಕೊಡಬೇಕು.

೩.೧.೧   ಜೈನ ಸಮಾಜದಲ್ಲಿ ಪಾತ್ರೆ ವ್ಯಾಪರ ಪ್ರಧಾನವಾಗಿರುವವರನ್ನು ‘ಬೋಗಾರ ಕುಲದವರು’ ಎಂದು ಕರೆಯುವರು. ಮುಖ್ಯವಾಗಿ ಕೃಷಿಯನ್ನು ಅವಲಂಭಿಸಿರುವವರನ್ನು ‘ಚತುರ್ಥರು’ ಎನ್ನುವರು. ವರ್ತಕರಷ್ಟೇ ಆಗಿರುವವರು ವೈಶ್ಯರು ಮತ್ತು ಪಂಚಮರು.

೩.೨. ಈ ಒಳಪಂಗಡಗಳಲ್ಲಿ, ಜೈನ ಸಮಾಜದವರೇ ಆದರೂ, ಕೊಡುವುದು ತೆಗೆದುಕೊಳ್ಳುವುದು ಮತ್ತು ಮದುವೆ ಭೋಜನಾದಿ ವ್ಯವಹಾರಗಳಲ್ಲಿ ಈಗ ಅಷ್ಟಾಗಿ ಪ್ರತ್ಯೇಕತೆ ಕಾಣದಿದ್ದರೂ, ಹಿಂದೆ ಬೆರೆಯುತ್ತಿರಲಿಲ್ಲ. ಆದರೆ ಈ ಸಾಮಾಜಿಕ ವರ್ಗ ಪ್ರಭೇದವು ಧಾರ್ಮಿಕ ವಲಯದಲ್ಲಿ ತನ್ನ ನೆರಳು ಬೀರಿರಲಿಲ್ಲ.

೪. ಚತುರ್ಥಕುಲಕ್ಕೆ ತುಂಬ ಸ್ಥಾನಮಾನ ಘನತೆಗಳನ್ನು ಕ್ರಿ.ಶ. ಹನ್ನೊಂದನೆಯ ಶತಮಾನದಲ್ಲಿಯೇ ತಂದುಕೊಟ್ಟ ಮಹಾಪುರುಷನೆಂದರೆ ನೇರಿಲಗೆಯ ದಡಿಗ ಎಂಬ ಪ್ರಭಾವಶಾಲಿ. ಚಾಳುಕ್ಯ ತ್ರೈಳೋಕ್ಯಮಲ್ಲದೇವನು (೧೦೪೨-೬೮) ಈ ಚತುರ್ಥಕುಲದ ದಡಿಗನನ್ನು ಸನ್ಮಾನಿಸಿದ್ದನು.

೪.೧. ಈ ದಡಿಗನ (ಹೆಂ. ರೇವಕಬ್ಬೆ) ಮಗನಾದ ಎಱಕನನ್ನು ಬಣಂಜು ಕುಳಕ್ಕೆ ಬಿಣ್ಪು ಎಂದು ಶಾಸನ [ಅದೇ, ಪು. ೨೦೧ ಸಾಲು: ೨೧] ಹೇಳಿದೆ. ಆದರಿಂದ ಜೈನ ಚತುರ್ಥಕುಲವನ್ನು ಬಣಂಜುಕುಳ ಎಂದೂ ಕರೆಯುತ್ತಿದ್ದರೆಂದು ತಿಳಿದು ಬರುತ್ತದೆ. ಜೈನ ಸಮಾಜದಲ್ಲಿ ಬಣಜಿಗರನ್ನು ಅನ್ಯ ಶಾಸನಗಳಲ್ಲೂ ಉಲ್ಲೇಖಿಸಿದೆ.