೧. ಕಲ್ಯಾಣಿ ಚಾಳುಕ್ಯರ ತ್ರಿಭುವನಮಲ್ಲ ಆರನೇ ವಿಕ್ರಮಾದಿತ್ಯ ಚಕ್ರವರ್ತಿಯು ಜಯಂತಿಪುರ ನೆಲೆವೀಡಿನಲ್ಲಿ ಬೀಡುಬಿಟ್ಟ ಸಂದರ್ಭದಲ್ಲಿ ನಡೆದ ಒಂದು ಸನ್ಮಾನ ಪ್ರಸಂಗದ ವಿಶೇಷತೆಯನ್ನು ಈ ಸರಿ ಟಿಪ್ಪಣಿಯ ಉದ್ದೇಶ.

೨. ಸಚಿವ ಅನಂತಪಾಲನ ಅಧೀನನಾದ ಗೋವಿಂದರಾಜನು ಬನವಸೆ ಪನ್ನಿರ್ಚ್ಛಾಸಿರವನ್ನು ನೋಡಿಕೊಳ್ಳುತ್ತಿದ್ದನು. ಬ್ಯಾಸಪುರ – ೧೪೦ (ಇಂದಿನ ಬಾಸೂರು) ಎಂಬ ಕಂಪಣದಲ್ಲಿನ ಕಾಗಿನೆಲೆ – ೧೨ನ್ನು ಶೋಭನಗೌಂಡನು ಆಳುತ್ತಿದ್ದನು. ಈತನ ಮಡದಿ ಮಲ್ಲಿಕವ್ವೆ, ತಮ್ಮ ಸಿಂಗ. ಈ ಸಿಂಗನಿಗೆ ಶೋಭನ ಮತ್ತು ಬರ್ಮ- ಎಂಬಿಬ್ಬರು ಮಗಂದಿರು [ಕ.ಇ.೪, ೧೦. ೧೧೨೧. ಹಿರೇಹಳ್ಳಿ (ಧಾಜಿ / ಬ್ಯಾಡಗಿ ತಾ) ಪು. ೨೫-೩೦]

            ಆ ಕಾಗೆನೆಲೆಯ ವಿಪುಳ
ಶ್ರೀ ಕಾನ್ತೆಗೆ ತಾನೆ ನೆಲೆಯೆನಿಪ್ಪಂ ವೀರ
ಶ್ರೀಕಾಂನ್ತೆಯ ಮನದಿನಿಯಂ
ಪ್ರಾಕಟದೋರ್ದಣ್ಡನೆನಿಪ ಶೋಭನಗೌಂಡಂ
||             [ಸಾಲು : ೧೭-೧೮]

(ಚಂಪಕಮಾಲಾವೃತ್ತ)
ಉದಧಿಯನಾತ್ಮ ಕೀರ್ತ್ತಿ ಪರಿವೇಷ್ಟಿಸೆ ಕುನ್ತಳ ಚಕ್ರವರ್ತ್ತಿಯೋ (ಳ್)
ವಿದಿತವೆನಲು(ಲ್ಕೆ) [ತಾನೆಪ] ಡೆದಂ ಧರೆ ಬಣ್ನಿಸಲಂಗಚಿತ್ತಮಂ
ಸದಮಳ ರಾಜ ಚಿಹ್ನವನಗುರ್ವ್ವಿನ ಹೆಮ್ಮೆಯನೊಳ್ಪುವೆತ್ತ ಚಂ
ದ್ರದ ಕೊಡೆಯಂ ಬಬಾಪ್ಪಮಮ ಶೋಭನ ಗೌಂಡನಿದೇಂ ಪ್ರಚಂಡನೋ
||   [೧೯-೨೦]

ಅವನ ಸತಿ ಭವನ ಸತಿಗಂ
ದಿವಿಜೇಂದ್ರನ ಸತಿಗವಬ್ಜನಾಭನ ಸತಿಗಂ
ಸಮನೆನಿಸಿಜೈನಧರ್ಮ್ಮಾ
ರ್ನ್ನವ ಚಂದ್ರಿಕೆ ಮಲ್ಲಿಕವ್ವೆ ಪೆಂಪಂ ತಳೆದಳು
||          [೨೧-೨೨]

ಮುಂದೆ ಇದೇ ಜೈನ ಮನೆತನದ ಶೋಭನ ಸೆಟ್ಟಿಯು ಗೊಟ್ಟೆಗಡಿ ಎಂಬ ಊರಲ್ಲಿ ಅಂಗಜೇಶ್ವರ ಶಿವಾಲಯವನ್ನು ಮಾಡಿಸಿಕೊಟ್ಟು ಧರ್ಮಸಮನ್ವಯ – ಧರ್ಮಸಹಿಷ್ಣುತೆಯನ್ನು ಸಾರಿದನು.

೩. ಪ್ರಸ್ತುತ ಈ ಶಾಸನದಲ್ಲಿ ವಿವರಿಸಬೇಕಾಗಿರುವುದು ಶೋಭನಗೌಂಡನಿಗೆ ಚಾಳುಕ್ಯ ಚಕ್ರವರ್ತಿ ನೀಡಿದ ‘ಚಂದ್ರ ಕೊಡೆ’ ಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಬೃಹತ್ ಕನ್ನಡ ನಿಘಂಟಿನಲ್ಲಿ ಕೂಡ ಈ ‘ಚಂದ್ರಕೊಡೆ’ ಎಂಬುದು ದಾಖಲಾಗಿಲ್ಲ. ಬೇರೆ ಕಾವ್ಯಗಳಾಲ್ಲಾಗಲಿ, ಶಾಸನಗಳಲ್ಲಾಗಲಿ ‘ಚಂದ್ರಕೊಡೆ’ ಯ ಪ್ರಯೋಗ ಕಂಡು ಬಂದಿಲ್ಲ. ಅಂದ ಮೇಲೆ ಹಿರೇಹಳ್ಳಿಯ ಈ ಶಾಸನ ಒಂದು ಅಪರೂಪದ ಪ್ರಯೋಗವನ್ನು ಉಳಿಸಿಕೊಟ್ಟಿದೆಯೆಂದು ಹೇಳಬೇಕು.

೪. ರಾಜಮಹಾರಾಜರಿಗೆ ಅನೇಕ ಬಗೆಯ, ಬಣ್ಣಬಣ್ಣದ, ಚಿತ್ರ ವಿಚಿತ್ರ ಅಲಂಕಾರಗಳಿಂದ ಸಜ್ಜಾದ ಕೊಡೆಗಳು ಇರುತ್ತಿದ್ದುವು. ಬೆಳ್ಗೊಡೆ (ಶ್ವೇತಚ್ಛತ್ರ), ಸೀಗುರಿ, ಮೇಘಡಂಬರ, ಮದನಾವತಾರ ಮೊದಲಾದ ಕೊಡೆಗಳನ್ನು ಶಾಸನಗಳು ಕೂಡ ಹೆಸರಿಸಿವೆ. ಇದೇ ಬಗೆಯ ಇನ್ನೊಂದು ವಿಶಿಷ್ಟ ಮರ್ಯಾದೆಯ ಕೊಡೆ ‘ಚಂದ್ರಕೊಡೆ’.

೫. ಚಂದ್ರಕೊಡೆಯ ವೈಶಿಷ್ಟ್ಯವನ್ನು ಗಮನಿಸಬೇಕು. ಈ ಶಾಸನದ ಸಂಪಾದಕರು ಚಂದ್ರಕೊಡೆಯನ್ನು ಕುರಿತು ಹೀಗೆ ಬರೆದಿದ್ದಾರೆ: (ಶೋಭನ ಗೌಂಡನು) He obtained angachitta from the emperor of Kuntala and the royal honour of holiding ‘a white umbrella’ [ibid, p, 25]. ಚಂದ್ರಕೊಡೆ ಎಂದರೆ ಕೇವಲ ಬೆಳ್ಗೊಡೆ-ಶ್ವೇತ ಚ್ಛತ್ರ (a white umbrella) ಎಂದಷ್ಟೇ ಇರಲಾರದು. (ಹುಣ್ಣಿಮೆ) ಚಂದ್ರನು ಬೆಳ್ಳಗಿರುದೇನೋ ದಿಟ. ಆದರೆ ‘ಚಂದ್ರ’ ಎಂಬ ಶಬ್ದಕ್ಕೆ ಮೂಲಾರ್ಥ ಇರುವದು’ ಹೊಳೆಯುವ ಎಂದು; ಹೊಳೆಯುವವನು ಚಂದ್ರ.

೬. ನವಿಲು (ಮಯೂರ, ಬರ್ಹಿ) ಗರಿಯ ನಡುವಣ ಕಣ್ಣಿಗೆ ‘ಚಂದ್ರ’ ಎಂದು ಕರಯಲಾಗಿದೆ : the eye on a peacock’s tail [Apte. V.S. Sanscrit – English Dictionary : 1965:202]. ಈ ಅರ್ಥವನ್ನು ಗ್ರಹಿಸಬೇಕು. ಚಂದ್ರಕೊಡೆಯೆಂದರೆ ಕೇವಲ ನವಿಲುಗರಿಯಿಂದ ಮಾಡಿದ ಕೊಡೆಯಿಲ್ಲ, ಅದು ನವಿಲುಗರಿಯ ಕಣ್ಣುಗಳಿಂದ ಮಾಡಿದ ಕೊಡೆ.

೭. “ನವಿಲುಗರಿಯ ಕಣ್ಣುಗಳಿಂದಲೂ, ರತ್ನಖಚಿತವಾದ ಚಿನ್ನದ ದಂಡ ದಿಂದಲೂ, ಬೆಳ್ಳಿಯ ಕಲಶದಿಂದಲೂ ಪರಿಶೋಭಿತವಾದದು ಪಿಂಛಚ್ಛತ್ರ; ಇದಕ್ಕೆ ಸಾಗಿರಿ, ಸಾಗರಿ (= ಸೀಗುರಿ) ಎಂಬ ಹೆಸರೂ ಉಂಟು” [ನರಸಿಂಹಾಚಾರ್, ಡಿ.ಎಲ್; ಪೀಠಿಕೆಗಳು – ಲೇಖನಗಳು : ೧೯೭೧ : ೮೮೯] ಈ ವಿವರಣೆಯ ಚಂದ್ರ ಕೊಡೆಯನ್ನು ಕೂಡ ಸರಿಯಾಗಿ ನಿರ್ದೇಶಿಸುತ್ತದೆ. ಅದರಿಂದ ಪಿಂಛಚತ್ರವೂ, ಸಾಗಿ (ಗು) ರಿ – ಸೀಗುರಿಯೂ, ಚಂದ್ರ ಕೊಡೆಯೂ ಸಮಾನವಾದ ಕೊಡೆಯನ್ನು ಕುರಿತು ಇರುವ ಮೂರು ಬೇರೆ ಬೇರೆ ಹೆಸರುಗಳೆನ್ನಬಹುದು. ಅಭಿಲಷಿತಾರ್ಥ ಚಿಂತಾಮಣಿ (ಮಾನಸೊಲ್ಲಾಸ) ಕೃತಿಯಲ್ಲಿ ಈ ಚಂದ್ರಕೊಡೆಯನ್ನು ಕುರಿತ ವಿವರಣೆ ಇದೆಯೇ ಎಂಬುದನ್ನು ಪರಿಶೀಲಿಸಬಹುದಾಗಿದೆ.

೮. ಮದನಾವತಾರವೆಂಬ ಕೊಡೆಯನ್ನು ಗಂಗರ ಬೂತುಗನ ಮಗ ಮರುಳನಿಗೂ ಮತ್ತು ರನ್ನ ಕವಿಗೂ ಕೊಟ್ಟ ವಿಚಾರ ಶಾಸನ ಮತ್ತು ಕಾವ್ಯಗಳಲ್ಲಿಯೂ ದಾಖಲಾಗಿದೆ. ಸೀಗುರಿಯನ್ನು ನೇರಿಲಗೆಯ ದಡಗನಿಗೆ ಚಾಳುಕ್ಯರ ತ್ರೈಳೋಕ್ಯ ಮಲ್ಲನು ನೀಡಿದನು. [ಸೌ.ಇ.ಇ. ೧೮, ೧೫೧.೧೧೪೮] ಹಾಗೆಯೇ ಮೇಘಡಂಬರ ವನ್ನು ಪೆರ್ಗಡೆ ನೊಕ್ಕಯ್ಯನಿಗೆ ಮಹಾಮಂಡಲೇಶ್ವರನಾದ ಭುವನಮಲ್ಲ – ಗಂಗಂ ಪೆರ್ಮಾಡಿಯು ಕೊಟ್ಟನು [ಎ.ಕ. ೭-೧, ಶಿವಮೊ.೧೦.೧೦೮೫] ರಾಜ್ಯ ಚಿಹ್ನೆಗಳ ‘ಕೊಡೆಭೋಗ’ ದ ಮರ್ಯಾದೆಗೆ ಪಾತ್ರರಾದ ಈ ನಾಲ್ವರು ಮಹನೀಯರೂ ಜೈನರಾಗಿದ್ದರೆಂಬುದು ಒಂದು ಆಕಸ್ಮಿಕ ಘಟನೆ; ಇವರು ಚಕ್ರವರ್ತಿಯ ವಿಶ್ವಾಸಕ್ಕೆ ಪಾತ್ರರಾಗುವ ವ್ಯಕ್ತಿತ್ವ ಪಡೆದಿದ್ದರು ಎಂಬುದಷ್ಟೇ ಗಮನಿಸಬೇಕಾದ ಚಾರಿತ್ರಿಕ ಸತ್ಯ.