ತೀರ್ಥ ಎಂಬ ಶಬ್ದಕ್ಕೆ ೨೦ಕ್ಕೂ ಹೆಚ್ಚು ಅರ್ಥಗಳಿವೆ. ಇದು ಸಂಸ್ಕೃತ ಶಬ್ದ. ಈ ಶಬ್ದದ ಅರ್ಥವ್ಯಾಪ್ತಿಯನ್ನು ಕುರಿತು ಚರ್ಚಿಸುವಾಗ ಮುಖ್ಯವಾಗಿ ಪುಣ್ಯಸ್ಥಳ, ಪವಿತ್ರವಾದ ಕ್ಷೇತ್ರ ಎಂಬ ಅಂಶಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. ಎಲ್ಲ ಧರ್ಮಗಳಲ್ಲೂ ತೀರ್ಥಕ್ಷೇತ್ರ, ತೀರ್ಥಯಾತ್ರೆ, ತೀರ್ಥದರ್ಶನ ಎಂಬ ಮಾತುಗಳು ಬಳಕೆಯಲ್ಲಿವೆ. ತೀರ್ಥಗಳೇ ತೀರ್ಥ ಕ್ಷೇತ್ರಗಳು, ತೀರ್ಥ ಕ್ಷೇತ್ರಗಳಿಗೆ ತೀರ್ಥ ಯಾತ್ರೆಯು ಒಂದು ಧಾರ್ಮಿಕ ಸಂಪ್ರದಾಯವಾಗಿ ಬೆಳೆದು ಬಂದಿದೆ.

ಜೈನ ಪರಂಪರೆಯಲ್ಲಿಯೂ, ಸುಮಾರು ಎರಡು ಸಾವಿರ ವರ್ಷಗಳಿಂದ, ತೀರ್ಥಯಾತ್ರೆ, ತೀರ್ಥಕ್ಷೇತ್ರ ದರ್ಶನ ವಾಡಿಕೆಯಲ್ಲಿದೆ. ಜೈನ ಪರಿಭಾಷೆಯಲ್ಲಿ ತೀರ್ಥಂಕರ ಶಬ್ದ ಮಹತ್ವದ್ದು. ತೀರ್ಥವೆಂದರೆ ಮಾರ್ಗ, ಜೈನಪಥ, ಮುನಿಮಾರ್ಗ. ತೀರ್ಥವನ್ನು, ಮಾರ್ಗವನ್ನು, ಸಂಸಾರವನ್ನು ದಾಟುವ ದಾರಿಯನ್ನು ತೋರಿದವರು ತೀರ್ಥಂಕರು. ಸನ್ಯಾಸಿ, ಸನ್ಯಾಸಿನಿ, ಶ್ರಾವಕ (ಗೃಹಸ್ಥ), ಶ್ರಾವಕಿ (ಗೃಹಿಣಿ) ಎಂಬ ಚತುರ್ವಿಧ ತೀರ್ಥಸ್ಥಾಪಕರು ತೀರ್ಥಂಕರರು. ತೀರ್ಥಂಕರರ ಬಿಂಬ – ಮೂರ್ತಿಗಳು ಇರುವ ಜಿನಮಂದಿರಗಳನ್ನೂ ತೀರ್ಥವೆಂದು ಕರೆಯಲಾಗಿದೆ. ದೇವಪೂಜೆ, ಗುರುಪಾಸ್ತಿ, ಸ್ವಾಧ್ಯಾಯ, ಸಂಯಮ, ತಪ ಮತ್ತು ದಾನ – ಈ ಆರು ಮುಖ್ಯ ಕರ್ತವ್ಯಗಳನ್ನು ಜೈನ ಶ್ರಾವಕರು ಪ್ರತಿನಿತ್ಯ ಆಚರಿಸಬೇಕು.

ತೀರ್ಥಂಕರರು ಮೋಕ್ಷ ಪಡೆದ ನೆಲ ಮೋಕ್ಷಭೂಮಿ, ನಿರ್ವಾಣ ಹೊಂದಿದ ಸ್ಥಳ ನಿರ್ವಾಣ ಭೂಮಿ. ವರ್ತಮಾನಕಾಲದ ೨೪ ತೀರ್ಥಂಕರರಲ್ಲಿ ಆದಿನಾಥರು ಅಷ್ವಾಪದ (ಕೈಲಾಸಪರ್ವತ – ಹಿಮಾಲಯ)ದಲ್ಲಿಯೂ, ನೇಮಿನಾಥರು ಊರ್ಜಯಂತ ಗಿರಿ – ಗಿರಿನಾರ್ ಪರ್ವತದಲ್ಲಿಯೂ (ಸೌರಾಷ್ಟ್ರ – ಗುಜರಾತು), ವಾಸುಪೂಜ್ಯರು ಚಂಪಾನಗರದಲ್ಲೂ (ಚಿಂಪಾಪುರಿ – ಬಿಹಾರ್), ಮಹಾವೀರರು ಪಾವಾಪೂರಿಯಲ್ಲೂ ನಿರ್ವಾಣ ಹೊಂದಿದರು. ಇನ್ನುಳಿದ ೨೦ ಜನ ತೀರ್ಥಂಕರರು ಸಮ್ಮೇದ ಶಿಖರದಲ್ಲಿ (ಪಾರಸ್‍ನಾಥ್ ಪರ್ವತ-ಬಿಹಾರ) ನಿರ್ವಾಣ ಪಡೆದರು; ಅದರಿಂದ ಸಮ್ಮದಗಿರಿ ಯನ್ನು ತೀರ್ಥರಾಜ ಎಂದು ಗೌರವಿಸಲಾಗಿದೆ: ಆಚಾರ್ಯ ಕುಂದಕುಂದರು (ಕ್ರಿ.ಶ. ೧-೨ ನೆಯ ಶತಮಾನ) ಪ್ರಾಕೃತಿದಲ್ಲಿಯೂ, ಆಚಾರ್ಯ ಪೂಜ್ಯಪಾದರು (ಕ್ರಿ.ಶ. ೬ನೆಯ ಶ) ಸಂಸ್ಕೃತದಲ್ಲೂ ರಚಿಸಿರುವ ನಿರ್ವಾಣಭಕ್ತಿ’ ಯಲ್ಲಿ ಮಾಡಿರುವ ಪ್ರಸ್ತುತ ವಿಷಯದ ವರ್ಣನೆ;

ಅಟ್ಠಾವಯಮ್ಹಿ ಉಸಹೋ ಚಂಪಾಏ ವಾಸುಪುಜ್ಜ ಜಿಣಣಾಹೋ
ಉಜ್ಜಂತೇ ಣೇಮಿಜಿಣೋ ಪಾವಾಏ ಣಿವ್ವುದೋ ಮಹಾವೀರೋ
||
ವೀಸಂತು ಜಿಣವರಿಂದಾ ಅಮರಾಸುರ ವಂದಿದಾ ಧುದ ಕಿಲೇಸಾ
ಸಮ್ಮೇದೇ ಗಿರಿಸಿಹರೇ ಣಿವ್ವಾಣಗಯಾ ಣಮೋ ತೇಸಿಂ
|| (ಪ್ರಾಕೃತ)
ಅಷ್ಟಾಪದೇ ವೃಷಭಶ್ಚಂಪಾಯಾಂ ವಾಸುಪೂಜ್ಯ ಜಿನನಾಥ :
ಊರ್ಜಯಂತೇ ನೇಮಿಜಿನಃ ಪಾವಾಯಾಂ ನಿರ್ವೃತೋ ಮಹಾವೀರಃ
||
ವಿಂಶತಿಸ್ತು ಜಿನವರೇಂದ್ರಾ ಅಮರಾಸುರ ವಂದಿತಾ ಧುತಕ್ಲೇಶಾಃ
ಸಮ್ಮೇದೇ ಗಿರಿಶಿಖರೇ ನಿರ್ವಾಣಗತಾ ನಮಸ್ತೇಭ್ಯಃ
||

ತೀರ್ಥಂಕರರಲ್ಲದ ಇತರ ಅಸಂಖ್ಯಾತ ಅರ್ಹತರು ಮೋಕ್ಷಗಾಮಿಗಳಾದ ನೆಲವನ್ನು ತೀರ್ಥಕ್ಷೇತ್ರವೆಂದು ಪರಿಗಣಿಸಿದ್ದಾರೆ. ರಾಜಾಸ್ತಾನದಲ್ಲಿರುವ ಅಬು (ಅರ್ಬುದ) ಬೆಟ್ಟ, ಗುಜರಾತಿನಲ್ಲಿರುವ ಶತ್ರುಂಜಯ ಪರ್ವತ ಮೊದಲಾದುವು; ಕೊಂಡಕುಂದೆ, ಕೊಪ್ಪಳ, ಬಂದಳಿಕೆ (ಬಂದಣಿಗೆ) ಮುಕ್ಕುಂದ, ಶ್ರವಣ ಬೆಳುಗೊಳ, ಶ್ರೀಪರ್ವತ ಹೊಂಬುಜ – ಮೊದಲಾದುದವನ್ನು ಅತಿಶಯ ಜೈನತೀರ್ಥಕ್ಷೇತ್ರಗಳೆಂದು ಮನ್ನಿಸಲಾಗಿದೆ. ಅತಿಶಯ ಕ್ಷೇತ್ರಗಳೆಂದರೆ ಮಹಾಮುನಿಗಳ ಬದುಕಿನಲ್ಲಿ ಅತಿಶಯ ಘಟನೆಗಳು, ಪವಾಡಗಳು ನಡೆದ ಎಡೆಗಳು. ಶ್ರುತಕೇವಲಿ ಭದ್ರಬಾಹು ಮುನಿಯ ಸಲ್ಲೇಖನ ವ್ರತಧಾರಣೆಯಿಂದ ಮುಡಿಪಿದ ಜಾಗವನ್ನು ಅತಿಶಯ ಕ್ಷೇತ್ರವಾಗಿದ್ದ ಶ್ರವಣಬೆಳಗೊಳವು ಬಾಹುಬಲಿ (ಗೊಮ್ಮಟ) ಮೂರ್ತಿಯಿಂದಾಗಿ ಜಗದ್ಭವ್ಯ ಮತ್ತತಿಶಯತೆಯಿಂದ ಕೀರ್ತಿಯ ತುತ್ತ ತುದಿಗೇರಿತು. ವಿಜಾಪುರದ ಸಹಸ್ರ ಫಣಿ ಪಾರ್ಶ್ವನಾಥ ಕ್ಷೇತ್ರವನ್ನು ಸಹ ಒಂದು ಅತಿಶಯ ಕ್ಷೇತ್ರವೆಂದು ಕರೆಯಲಾಗಿದೆ. ಹೊಂಬುಜವಂತೂ ಜಿನಶಾಸನದೇವಿ ಪದ್ಮಾವತೀಯಕ್ಷಿಯು ಇರುವ ದೊಡ್ಡ ಅತಿಶಯ ಕ್ಷೇತ್ರವಾಗಿದೆ.

ಹೀಗೆ ನಿರ್ವಾಣ ಭೂಮಿ, ತೀರ್ಥಕ್ಷೇತ್ರ, ಅತಿಶಯ ಕ್ಷೇತ್ರ – ಎಲ್ಲವೂ ತೀರ್ಥಗಳಾಗಿ, ಯಾತ್ರಾಸ್ಥಳಗಳಾಗಿ, ಪುಣ್ಯಸ್ಥಳಗಳಾಗಿ ಪರಿಣಮಿಸಿವೆ. ಪ್ರಸಿದ್ಧವಾದ, ಐತಿಹಾಸಿಕ ಮಹತ್ವದ ಐದು ‘ಪಂಚತೀರ್ಥ’ ಗಳಲ್ಲದೆ (ಕೈಲಾಸ, ಚಂಪಾ, ಗಿರಿನಾರ್, ಪಾವಾ, ಸಮ್ಮೇದಶಿಖರ), ಇವುಗಳಿಗೆ ಸಮೀಪವಾಗಿ ಇರುವ ಸಣ್ಣ ಹಾಗೂ ಸ್ಥಳೀಯ ‘ಪಂಚತೀರ್ಥೀ’ ಗಳೂ ಇವೆ. ಉತ್ತರ ಗುಜರಾತಿನ ಪಂಚತೀರ್ಥಿಗಳೆಂದರೆ ಚರುಪ್, ಮೇತ್ರನ, ಭಿಲ್ದಿ, ಕಂಬೊಇ, ತರಂಗ, ಸೀಮಂದರಸ್ವಾಮಿ (ಮೆಹ್ಸೆನದಲ್ಲಿದೆ), ವಲಂ, ಚನಸ್ಮ, ಗಂಭು, ಭೋಯನಿ, ಪನ್ಸರ್. ಸಂಕೇಶ್ವರದ ಪಂಚತಿರ್ಥೀಗಳೆಂದರೆ ರಥನಪುರ, ಸಮಿ, ಮುಜ್ಪುರ, ವಡಗಾಂ, ಉಪರಿಯಲು. ಇದೇ ರೀತಿ ಸೌರಾಷ್ಟ್ರ, ಮಾರ್ವರ್, ಕುರುವಾಮ್ ಅಹ್ಮದಾಬಾದು, ಕಚ್ಛ್ – ಭದ್ರೇಶ್ವರ, ಶತ್ರುಂಜಯ, ಬರೋಡ, ಗಿರಿನಾರ್ – ಇವುಗಳಿಗೆ ಸೇರಿದ ‘ಪಂಚತೀರ್ಥೀ’ ಗಳೂ ಇವೆ. ಈ ಸಣ್ಣಪುಟ್ಟ ತೀರ್ಥೀಗಳಿಗೆ ‘ಪಂಚತೀರ್ಥೀ’ ಎಂದು ಹೆಸರು ಇದ್ದರೂ, ಸಂಖ್ಯೆಯಲ್ಲಿ ಐದೇ ಇರಬೇಕೆಂಬ ಕಟ್ಟುನಿಟ್ಟಿಲ್ಲ, ಹೆಚ್ಚೂ ಇರಬಹುದು, ಇವೆ.

ತೀರ್ಥವಂದನೆ, ತೀರ್ಥಪೂಜೆ, ತೀರ್ಥಯಾತ್ರೆ – ಇವು ಬಾಹ್ಯಾಚರಣೆಗಳು, ‘ದ್ರವ್ಯಪೂಜೆ’ ಗೆ ಸೇರಿವೆ, ‘ಬಾಹ್ಯತಪ’ ಕ್ಕೆ ಸಂಬಂಧಿಸಿವೆ. ಆದರೆ ಜೈನಾಚಾರ್ಯರು ಬಾಹ್ಯಪೂಜೆಗಿಂತಲೂ ಹೆಚ್ಚಿನ ಒತ್ತು ಮತ್ತು ಮಹತ್ವವನ್ನು ಕೊಟ್ಟು ಸೈದ್ಧಾಂತಿಕವಾಗಿ ಪ್ರತಿಪಾದಿಸಿರುವುದು ‘ಭಾವಪೂಜೆ’ ಯನ್ನು. ದ್ರವ್ಯಪೂಜೆಯಿಂದ ಮಾಡುವ ದೇವಪೂಜೆಯು ಧರ್ಮ ಪ್ರಭಾವನೆಯನ್ನು ಇಮ್ಮಡಿಸುತ್ತದೆ ಮತ್ತು ಶ್ರಾವಕ ವರ್ಗವನ್ನು ಲೌಕಿಕದಿಂದ ಪಾರಮಾರ್ಥಿಕದತ್ತ ಹೊರಳಿಸುತ್ತದೆ.

ಅದರಿಂದ ವರ್ಷದ ಎಲ್ಲ ಕಾಲದಲ್ಲೂ ತೀರ್ಥಸಂದರ್ಶನ ನಡೆದಿರುತ್ತದೆ. ವಿಶೇಷ ಪೂಜೆ ಉತ್ಸವಾದಿ ಹಬ್ಬಗಳು ಇರದ ದಿನಗಳಲ್ಲೂ ತೀರ್ಥಯಾತ್ರೆ ಕೈಗೊಳ್ಳುವುದುಂಟು. ಜೈನಧರ್ಮ ಮಾನ್ಯ ಮಾಡಿದ ಪವಿತ್ರ ಹಾಗೂ ಪುಣ್ಯ ತೀರ್ಥ ಕ್ಷೇತ್ರಗಳಿಗೆ ಹತ್ತಾರು ಬಾರಿ ಯಾತ್ರೆ ಮಾಡುವುದು ಸರ್ವೆ ಸಾಮಾನ್ಯ. ಬಾಳಿನಲ್ಲಿ ಒಮ್ಮೆಯಾದರೂ ಈ ನಿರ್ವಾಣ ಭೂಮಿಗಳಿಗೆ, ಅತಿಶಯ ಕ್ಷೇತ್ರಗಳಿಗೆ ತೀರ್ಥಯಾತ್ರೆ ಕಡ್ಡಾಯ. ಪ್ರಾಚೀನ ಮತ್ತು ಮಧ್ಯಕಾಲೀನ ಸಾಹಿತ್ಯದಲ್ಲಿ ಈ ತೀರ್ಥಸ್ಥಳಗಳ ಸಂಕ್ಷಿಪ್ತ ಹಾಗೂ ವಿಸ್ತಾರವಾದ ನಾನಾ ವರ್ಣನೆಗಳಿವೆ, ಸ್ತೋತ್ರಗೀತಗಳಿವೆ, ವರ್ಣ-ಆವರ್ಣ ಚಿತ್ರಗಳಿವೆ, ಶಿಲ್ಪಗಳಿವೆ, ಓಲೆಗರಿ ಚಿತ್ರಗಳಿವೆ. ಹಾಗೆಯೇನೆ ತೀರ್ಥಯಾತ್ರೆಯ ಸ್ವರೂಪ ಫಲಗಳನ್ನು, ಮಹಿಮೆಗಲನ್ನು ಸಹ ವಿವರಿಸಲಾಗಿದೆ. ಕುಟುಂಬದ ಒಬ್ಬನೇ ವ್ಯಕ್ತಿ, ಇಡೀ ಕುಟುಂಬದವರು, ನೆರೆಹೊರೆಯವರು, ಒಂದು ಗುಂಪು-ಹೀಗೆ ಹೇಗೆ ಬೇಕಾದರೂ, ಯಾರು ಬೇಕಾದರೂ ಒಂಟಿಯಾಗಿಯೊ ಒಟ್ಟಾಗಿಯೊ ತೀರ್ಥ (ಕ್ಷೇತ್ರ) ದರ್ಶನಕ್ಕೆ ಹೋಗಬಹುದು. ತೀರ್ಥ ವಂದನಾ ಯಾತ್ರೆಯು ಒಂದು ದಿನದ್ದಾಗಬಹುದು, ಒಂದು ತಿಂಗಳು ಅಥವಾ ವರ್ಷವಾದರೂ ಆಗಬಹುದು. ಸಮೀಪದ ಸ್ಥಳಗಳಿಗೆ ಒಂದೇ ದಿನದಲ್ಲಿ ಹೋಗಿ ಹಿಂತಿರುಗಿ ಬರುವಂತಹುದು. ವಾರ್ಷಿಕವಾಗಿ ಮೂರು ದಿನಗಳ ಜಿನಾಲಯದ ದರ್ಶನಾರ್ಥ ತೀರ್ಥಯಾತ್ರೆ, ಐದು ದಿನಕ್ಕೂ ಮೀರಿದ ದೀರ್ಘಕಾಲಿಕ ಉತ್ತರ ಭಾರತದ – ದಕ್ಷಿಣ ಭಾರತದ ತೀರ್ಥಯಾತ್ರೆ ಬಹಳ ಕಾಲದಿಂದ ರೂಢಿಯಲ್ಲಿದೆ. ಜಿನಮುನಿಗಳು ಒಂದು ಸ್ಥಳದಲ್ಲಿ, ವರ್ಷಕಾಲ (ಚಾತುರ್ಮಾಸ – ಚೋಮಾಸು – ಮಳೆಗಾಲ) ಹೊರತು ಪಡಿಸಿ, ಹೆಚ್ಚುಕಾಲ ನಿಲ್ಲುವ ನಿಯಲಗಳಿಲ್ಲ. ಗ್ರಾಮೇ ಏಕರಾತ್ರ, ನಗರೇ ಪಂಚರಾತ್ರಂ, ಅಟವ್ಯಾಂ ದಶರಾತ್ರಂ ಎಂಬೀ ಪ್ರಕಾರ, ಯತಿಧರ್ಮ ಪ್ರಣೀತ ನೀತಿಗೆ ಅನುಗುಣವಾಗಿ ಸಂಚಾರದಲ್ಲಿ ಇರುವರು. ಈ ಕಾರಣದಿಂದ ನಿರ್ಗ್ರಂಥ ಸವಣರಿಗೆ ಪ್ರತ್ಯೇಕ ತೀರ್ಥಯಾತ್ರೆಯ ಅಗತ್ಯ ಬೀಳುವುದಿಲ್ಲ. ಅಲ್ಲದೆ ಜೈನ ಮುನಿಗಳು ಮತ್ತು ಆರ್ಯಿಕೆಯರನ್ನು ಜಂಗಮ ತೀರ್ಥಗಳೆಂದು ತಿಳಿಯಲಾಗಿದೆ. ಸ್ಥಾನಿಕವಾಸಿಗಳಲ್ಲೂ ತೇರಾಪಂಥಿಗಳಲ್ಲೂ ಜೈನಾಚಾರ್ಯರು ಇರುವಲ್ಲಿಗೆ ಹೋಗಿ ಬರುವುದೇ ತೀರ್ಥಯಾತ್ರೆ. ಜಿನೋಪದಿಷ್ಟ ಉಪದೇಶವಾಣಿ ಇರುವ ಆಗಮಗಳೇ ಭಾವತೀರ್ಥಗಳು, ಅವನ್ನು ಪಠಿಸಿ ಪಾರಾಯಣ ಮಾಡುವುದೇ ಭಾವಪೂಜೆ. ತೀರ್ಥಕ್ಷೇತ್ರಗಳು ದ್ರವ್ಯ ತೀರ್ಥಗಳು, ಸ್ಥಾವರ ತೀರ್ಥಗಳು, ಇವುಗಳಿಗೆ ಮಾಡುವ ಪೂಜೆ ದ್ರವ್ಯ ಪೂಜೆ.

ತೀರ್ಥಕ್ಷೇತ್ರಗಳ ದರ್ಶನಾರ್ಥಿಯು ಕೆಲವು ನಿಯಮಗಳಿಗೆ ಬದ್ಧನಾಗಿ ಯಾತ್ರೆಯ ಅವಧಿಯಲ್ಲಿ ನಡೆದುಕೊಳ್ಳಬೇಕು:

೧. ಒಪ್ಪೊತ್ತು ಹಗಲು ಆಹಾರ, ದಿನದಲ್ಲಿ ಒಂದೇ ಊಟ

೨. ನೆಲದ ಮೇಲೆ ಮಲಗುವುದು

೩. (ಬರಿ) ಕಾಲಲ್ಲಿ ನಡೆಯುವುದು

೪. (ಜೈನ) ಧರ್ಮದಲ್ಲಿ ಶ್ರದ್ಧೆ ಇರುವುದು (ಸಮ್ಯಕ್ತ್ವ)

೫. ಸಜೀವ ಹಸಿಯ ತರಕಾರಿ ತೆಗೆದುಕೊಳ್ಳದಿರುವುದು

೬. ಬ್ರಹ್ಮಚರ್ಯವನ್ನು ಪಾಲಿಸುವುದು

ಇದರ ಜತೆಗೆ ತೀರ್ಥಯಾತ್ರೆಯು ಇನ್ನಾರು ಕರ್ತವ್ಯಗಳನ್ನು ಸಹ ಪಾಲಿಸಬೇಕು: ೧. ದಾನ, ೨. ತಪ, ೩. ಉಚಿತ ವೇಷಭೂಷಣ, ೪. ಭಕ್ತಿಗೀತೆ ಅಂದರೆ ವಾದ್ಯ ನುಡಿಸುವುದು – ವಾಚಿಸುವುದು (ಗೀತ – ವಾಜಿಂತ್ರ), ೫. ಸ್ತುತಿ-ಸ್ತೋತ್ರ (ಹಾಡುವುದು) ೬. ಪ್ರೇಕ್ಷಣ – ಬಸದಿಗಳಲ್ಲಿ ಭಕ್ತಿ ಸಮರ್ಪಣ ಇವುಗಳಿಗೆ ಅತಿಚಾರಗಳ ಚೌಕಟ್ಟನ್ನು ಕೂಡ ಹೇಳಲಾಗಿದೆ.

ತೀರ್ಥಗಳಿಗೆ ಹೋಗಿ ಬರಲು ಅಪೇಕ್ಷೆಯಿದ್ದರೂ ಆರ್ಥಿಕವಾಗಿ ಅನನುಕೂಲ ಇರುವವರಿಗೆ ಸಹಾಯ ಸಿಗುವ ಸಾಧ್ಯತೆಗಳ ಒಂದು ಪರ್ಯಾಯ ವ್ಯವಸ್ಥೆಯಿದೆ. ಶ್ರೀಮಂತರಾದ ಜಿನಭಕ್ತರು ತೀರ್ಥವಂದನಾಸಕ್ತ ಶ್ರಾವಕರಿಗೆ, ಗುರುವೃಂದಕ್ಕೆ ತಗಲುವ ಸಮಸ್ತ ಪ್ರಯಾಣ ವೆಚ್ಚವನ್ನು ತಾವೇ ವಹಿಸಿಕೊಂಡು ಉಚಿತ ತೀರ್ಥಯಾತ್ರೆ ಮಾಡಿಸುವರು. ಹೀಗೆ ಧರ್ಮ ಪ್ರಭಾವನೆಯನ್ನು ಮಾಡಿದವರಿಗೆ ‘ಸಂಘಪತಿ’ ಎಂಬ ಪ್ರಶಸ್ತಿಯಿತ್ತು ಸಂಮಾನಿಸುವರು; ಸಂಘಪತಿಯ ಕುಟುಂಬದವರಿಗೆ ‘ಸಂಘ್ವಿ’ ಎಂಬ ಅಡ್ಡ ಹೆಸರಾಗುವುದು. ಇಂಥ ದಾನಿಗಳು ತೀರ್ಥಗಳಲ್ಲಿ ಮೂರ್ತಿಪ್ರತಿಷ್ಠಾಪನೆ, ಜಿನಬಂಬದಾನ ಮಾಡುವುದುಂಟು. ಜೈನ ತೀರ್ಥಕ್ಷೇತ್ರಗಳಲ್ಲಿ ಜಿನಬಿಂಬ – ಮೂರ್ತಿಗಳು ವಿಪುಲವಾದ ಸಂಖ್ಯೆಯಲ್ಲಿ ಸಿಗಲು ಈ ಧಾರ್ಮಿಕ ಆಶಯವೂ ಒಂದು ಕಾರಣ. ೧೯೩೫ ರಲ್ಲಿ ಸೇಠ್ ಮಾಣಿಕಲಾಲ್ ಭಾಯಿ ಮನಸುಖ್ ಭಾಯಿ ಎಂಬ ಶ್ರೀಮಂತನು ಅಂದಿನ ದಿನಗಳಲ್ಲಿ ಆರು ಲಕ್ಷರೂಪಾಯಿಯ ವೆಚ್ಚದಲ್ಲಿ, ಅಹಮದಾಬಾದಿನಿಂದ ಶತ್ರುಂಜಯ ಪರ್ವತಕ್ಕೆ ಉಚಿತ ತೀರ್ಥಯಾತ್ರೆ ಮಾಡಿಸಿದನು. ಆ ತೀರ್ಥಯಾತ್ರಾ ತಂಡದಲ್ಲಿ ೪೦೦ ಮುನಿಗಳು, ೭೦೦ ಆರ್ಯಿಕೆಯರು, ೧೫,೦೦೦ ಶ್ರಾವಕರು, ೧೩೦೦ ಎತ್ತಿನ ಗಾಡಿಗಳು, ೨೦೦ ದೊಡ್ದ ಬಿಡಾರಗಳು, ೯೦೦ ಚಿಕ್ಕ ಬಿಡಾರಗಳು, ೨೦೦ ಜವಾನರು – ಅಡಿಗೆಯವರು, ೨೦೦ ಕಾವಲುಗಾರರು, ೧೦೦ ಸ್ವಯಂಸೇವಕರು ಇದ್ದರೆಂದ ಮೇಲೆ ಅದರ ಅಗಾಧತೆ ಎಷ್ಟೆಂಬುದನ್ನು ಊಹಿಸಿಕೊಳ್ಳಬಹುದು. ಸಮಣ ಸಮುದಾಯ ಮತ್ತು ಶ್ರಾವಕವರ್ಗ ಸೇರಿ ಹೀಗೆ ಒಟ್ಟಿಗೆ ತೀರ್ಥವಂದನೆಗೆ ತೊಡಗುವುದು ಸಾಮುದಾಯಕ ಶೋಭೆಗೂ ವ್ಯಾಪಕ ಧರ್ಮಪ್ರಭಾವನೆಗೂ ಕಾರಣವಾಗುತ್ತದೆ.

ಕರ್ನಾಟಕದಲ್ಲಿ ಜೈನ ತೀರ್ಥಕ್ಷೇತ್ರಗಳನ್ನು ಕುರಿತು ವಿಸ್ತಾರವಾದ ಅಧ್ಯಯನ ನಡೆದಿಲ್ಲ. ಈ ಪುಟ್ಟ ಸಂಪ್ರಬಂಧದಲ್ಲಿ ಅಂಥದೊಂದು ಅಧ್ಯಯನಕ್ಕೆ ಭೂಮಿಕೆಯಾಗುವ ಸಂಕ್ಷಿಪ್ತರೂಪದ ಪ್ರಯತ್ನ ಮಾಡಿದ್ದೇನೆ; ಕನ್ನಡ ಶಾಸನಗಳಲ್ಲಿ ಸಿಗುವ ‘ತೀರ್ತ್ಥ’ ಗಳನ್ನು ಹುಡುಕಿ ತೆಗೆದು, ಅವುಗಳ ಸಂಬಂಧವಾಗಿ ಅತಿ ಸಂಗ್ರಹವಾದ ಮಾಹಿತಿಗಳನ್ನು ಕೊಟ್ಟಿದ್ದೇನೆ.

೧. ಒಂದು ನಿಸದಿ ಶಾಸನದಲ್ಲಿ ಒಬ್ಬ ‘ತೀರ್ತ್ಥದ ಗೊರವಡಿ’ ಗಳನ್ನು ಸ್ಮರಿಸಲಾಗಿದೆ [ಎ.ಕ. ೨, ೬ (೫) ಕ್ರಿ.ಶ. ೮ನೆಯ ಶ. ಪು. ೬]

೨. ತೀರ್ಥಕ್ಷೇತ್ರದಲ್ಲಿದ್ದ (ಮುಖ್ಯ) ಬಸದಿಗೆ ‘ತೀರ್ತ್ಥದ ಬಸದಿ’ ಎಂದು ಹೇಳಿದೆ [ ೧. ಸೌ ೧೧.೧೫. ೫೯೮ ೧೨ ನೆಯ ಶ. ತಮ್ಮಧಡ್ಡಿ (ಬಿಜಾಪುರ ಜಿ / ಮುದ್ದೇಬಿಹಾಳ ತಾ). ಪು. ೩೯೦] ೨. ಎ.ಕ. ೨, ೫೨೦ (೪೮೪) ಮತ್ತು ೫೨೧ (೪೮೫) ೧೧ನೆಯ ಶ. ]

೩. ಶ್ರೀಮತ್ ಪಟ್ಟಣಸ್ವಾಮಿ ನೊಕ್ಕಯ್ಯ ಸೆಟ್ಟಿಯನ್ನು ‘ಜಂಗಮತೀರ್ತ್ಥ’ ವೆಂದು ಪ್ರಶಂಸಿಸಲಾಗಿದೆ [ಎ.ಕ. ೮, ನಗರ ೫೭. ೧೦೭೭. ಹೊಂಬುಜ – (ಶಿವಮೊಗ್ಗ ಜಿ / ನಗರ ತಾ) ಪು. ೩೮೫. ಸಾಲು : ೨೨-೩೧] ನೋಡಿ : ನಾಗರಾಜಯ್ಯ, ಹಂಪ.; ಸಾಂತರರು – ಒಂದು ಅಧ್ಯಯನ, ೧೯೯೭

೪. ತೀರ್ಥಕ್ಷೇತ್ರಗಳಿಗೆ ಮಾಡುವ ವಂದನೆ ತೀರ್ಥವಂದನೆ. ಒಬ್ಬ ಶ್ರಾವಕನು ತೀರ್ಥವನ್ನು ವಂದಿಸಿದ ಸಂಗತಿಯನ್ನು ಒಂದು ಶಾಸನ ದಾಖಲಿಸಿದೆ [ಎ.ಕ. ೧೧ (೧೯೭೩) ೫(೪) ೧೦ ಶ. ಪು. ೬ ಸಾಲು : ೧-೨] ಮಲ್ಲಿಸೇನ ಭಟಾರರ ಗುಡ್ದಂ ಚಱೆಙ್ಗಯ್ಯಂ ತೀರ್ತ್ಥಮಂ ಬಂದಿಸಿದಂ.

೫. ಪ್ರಾಚೀನ ಹಾಗೂ ಈ ಭಾಗದ ಮೂಲ ತೀರ್ಥ (ಪುಣ್ಯ) ಕ್ಷೇತ್ರವೆಂಬ ಅರ್ಥದಲ್ಲಿ ‘ಆದಿತೀರ್ತ್ಥ’ ಎಂದು ಹೇಳಲಾಗಿದೆ.

ಕೆಲ್ಲಂಗೆಱಿಯ ತೀರ್ಥವನ್ನೂ [ಎ.ಕ. ೨, ೪೭೬ (೩೪೫) ೧೧೫೯. ಪು. ೨೮೯ ಸಾಲು : ೪೫] ಕೊಪಣ ತೀರ್ಥವನ್ನೂ [ಅದೇ : ೫೩೨ (೨೮೪) ೧೨ ಶ. ಜಿನನಾಥಪುರ. ಪು. ೩೨೮. ಸಾಲು : ೨೭] ಆದಿ ತೀರ್ಥವೆಂದು ಕರೆಯಲಾಗಿದೆ. ಆದಿಜಿನರಾದ ಆದಿನಾಥ ತೀರ್ಥಂಕರರನ್ನು ‘ಆದಿತೀರ್ತ್ಥ’ ವೆಂದು ಕರೆಯುವುದುಂಟು. i. ಈ ಭವಕ್ಕೆಂಟನೆಯ ಭವದೊಳ್ ಭರತದೊಳ್ ನೀನಾದಿ ತೀರ್ಥ ಪ್ರವರ್ತಕನಾದಂದೀ ಶ್ರೀಮತಿ ಪ್ರವರ್ತಕಂ ಶ್ರೇಯಾಂಸನಕ್ಕುಂ [ಪಂಪ : ಆದಿಪುರಾಣ ೫-೧೩ವ]

೨.         ಶ್ರೀಮತ್ಪವಿತ್ರಂ + ಅಕಳಕಮನನ್ತ ಕಲ್ಪಂ
ಸ್ವಾಯಂಭವಂ ಸಕಳ ಮಂಗಳಮಾದಿ ತೀರ್ತ್ಥಂ
ನಿತ್ಯೋತ್ಸವಂ ಮಣಿಮಯಂ ನಿಳಯಂ ಜಿನಾನಾಂ
ತ್ರೈಳೋಕ್ಯ ಭೂಷಣಮಹಂ ಶರಣಂ ಪ್ರಪದ್ಯೇ
||
[ಎ.ಕ. ೮-೨, ಸಾಗರ. ೧೫೯. ೧೧೫೯. ಹೆರಕೆರೆ (ಶಿವಮೊಗ್ಗ ಜಿ / ಸಾಗರ ತಾ.) ಪು. ೩೩೧-೩೩]

ಆದಿನಾಥ ತೀರ್ಥಂಕರರ ಬಸದಿ ಇದ್ದ ಸ್ಥಳವೆಂಬ ಕಾರಣಕ್ಕಾಗಿ ‘ಆದಿ ತೀರ್ಥ’ ಎಂಬ ಹೆಸರಾಯಿತೆ? ತುಂಬ ಪ್ರಾಚೀನವಾದ ತೀರ್ಥವೆಂಬ ಅರ್ಥದಲ್ಲಿ ಈ ಶಬ್ದ ಪ್ರಯೋಗವಾಯಿತೆ? ಎಂಬುದು ಚಿಂತನೀಯವಾದುದು. ಮಹಾತೀರ್ತ್ಥ’ ಎಂಬ ಇನ್ನೊಂದು ಶಬ್ದವೂ ಇರುವುದರಿಂದ ಅದು ಈ ಪದದ ಅರ್ಥ ಪ್ರತೀತಿಗೆ ಬೆಳಕು ಬೀರಬಹುದು. ಇದರ ಸಂಬಂಧವಾದ ಉಲ್ಲೇಖ : ಪ್ರಿಯದಿನ್ದಂ ಹುಳ್ಳ ಸೇನಾಪತಿ ಕೊಪಣ ಮಹಾತೀರ್ಥದೊಳ್ ಬಹು ಕನಕಮನಾ ಕ್ಷೇತ್ರಜರ್ಗಿತ್ತು [ಎ.ಕ. ೨, ೪೭೬ (೩೪೫) ೧೧೫೯. ಪು. ೨೮೯]. ಈ ಬಗ್ಗೆ ವಿವರವಾದ ಚರ್ಚೆಯನ್ನು ಮತ್ತೆ ಕೆಲ್ಲಂಗೆೞಿ ತೀರ್ತ್ಥ ಕುರಿತ ವಿವೇಚನೆಯ ಕಕ್ಷೆಯಲ್ಲಿ ನೋಡಬಹುದು.

೬. ಬಿಜಾಪುರ ಜಿಲ್ಲೆ ಬಾಗೇವಾಡಿ ತಾಲೂಕು ಇಂಗಳೇಶ್ವರ ತೀರ್ತ್ಥವೂ ಇಂಗಳೇಶ್ವರ ಬಳಿಯೂ ಜೈನ ಪರಂಪರೆಯಲ್ಲಿ ವಿಶೇಷ ಸ್ಥಾನ ಪಡೆದಿದೆ.

ಸ್ವಸ್ತಿ ಶ್ರೀಮದಿಂಗಳೇಶ್ವರದ ತೀರ್ತ್ಥದ ಬಸದಿಯಾ
ಚಾರ್ಯ್ಯರು ದೇವಚಂದ್ರ ಭಟ್ಟಾರಕ ದೇವರ
ಗುಡ್ಡ ಬಮ್ಮ ಗಾವುಣ್ಡನ ಪುತ್ರ ಭೋಗಗಾವುಣ್ದನ ನಿಷಿದಿ

[ಸೌ.ಇ.ಇ. ೨, ೧೫. ೫೯೮.೧೨ ಶ. ತಮ್ಮಧಡ್ಡಿ (ಬಿಜಾಪುರ ಜಿ/ ಮುದ್ದೇಬಿಹಾಳ ತಾ) ಪು. ೩೯೧] ಈ ಶಾಸನೋಕ್ತ ದೇವಚಂದ್ರ ಭಟ್ಟಾರಕರು, ಚಾಳುಕ್ಯ ತ್ರೈಳೋಕ್ಯಮಲ್ಲ ಒಂದನೆಯ ಸೋಮೇಶ್ವರ ಚಕ್ರಿಯ ಮಗನಾದ ‘ವಿಷ್ಣುವರ್ಧನ-ವಿಜಯಾದಿತ್ಯ- ಕೀರ್ತಿವರ್ಮ’ನ ಗುರುಗಳೆಂಬುದು ವಿಶೇಷ ಗಮನಿಕೆಗೆ ಅರ್ಹವಾದ ಚಾರಿತ್ರಿಕ ಮಹತ್ವದ ಉಲ್ಲೇಖ. [ನಾಗರಾಜಯ್ಯ, ಹಂಪ : ವಿಷ್ಣುವರ್ಧನ – ವಿಜಯಾದಿತ್ಯ – ಕೀರ್ತಿವರ್ಮ: ೧೯೯೬] ಕಲ್ಯಾಣ ಚಾಳುಕ್ಯರ ಆಳ್ವಿಕೆಯಲ್ಲಿ ಪ್ರಸಿದ್ಧ ಜೈನ ಕೇಂದ್ರ ಶಾಸನ ಹಾಗೂ ತೀರ್ಥ ಸ್ಥಳವಾಗಿದ್ದ ಇಂಗಳೇಶ್ವರ ತೀರ್ತ್ಥದ ವಿಚಾರವಾಗಿ ಇನ್ನೂ ಕೆಲವು ಮಾಹಿತಿಗಳು ಉಪಲಬ್ಧವಾಗಿವೆ. ಇಂಗಳಿಗೆಯ (ಗುಲ್ಬರ್ಗ ಜಿ / ಬಸದಿಗಳಲ್ಲಿ ಒಂದನ್ನು ವಾಳುಕ್ಯರ ಆರನೆ ವಿಕ್ರಮಾದಿತ್ಯನ ರಾಣಿ (ಕಲಚುರಿ) ಜಾಕಲದೇವಿಯು ಕ್ರಿ.ಶ. ೧೦೯೪ ರಲ್ಲಿ ಕಟ್ಟಿಸಿದಳು [ಎ.ಆರ್.ಐ.ಇ. ೧೯೬೦. ಬಿ.-೪೪೧. : ಜೆಎಸ್ಐ (೧೯೫೭). ಪು. ೨೩೬ – ೩೯. ೧೦೯೫] ಇಂಗಳೇಶ್ವರ ತೀರ್ಥ ಬಳಿ ಸಂಬಂಧವಾಗಿ ಪರಿಶೀಲಿಸಬೇಕಾದ ಶಾಸನಗಳು : ಸೌ.ಇ.ಇ. ೧೫, ೫೪೪.೧೧೬೦; ಅದೇ ೫೫೦. ೧೧೯೪.: ಅದೇ ೬೦೫. ೧೨೧೨: ಅದೇ ೬೦೬. ೧೨೧೫: ಎ.ಕ.೭, ನಾಮಂ ೭೨.೧೧೮೩ ಅಳೀಸಂದ್ರ: ಎ.ಕ.೪, ಪಿರಿಯಪಟ್ಟಣ ೧೨೫.೧೩೧೫. ರಾವಂದೂರು : ಎ.ಕ. ೧೧೧. ನಂಜನಗೂಡು ೧೩೭೨. ಹುಲ್ಲಳ್ಳಿ – ಇತ್ಯಾದಿ.

೭. ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕು ಕಂಬದಹಳ್ಳಿ ತೀರ್ತ್ಥವು ಬಿಂಡಿಗೆನವಿಲೆ ತೀರ್ತ್ಥದ ಒಂದು ಭಾಗವಾಗಿತ್ತು. ಇಲ್ಲಿ ಏಳು ಬಸದಿಗಳಿದ್ದುವು : ಅವುಗಳಲ್ಲಿ ಕೆಲವು ಪೂರ್ಣವಾಗಿ ಹಾಳಾಗಿವೆ. ಪಂಚಕೂಟ ಬಸದಿ, ಬೆಟ್ಟದ ಚಂದ್ರಪ್ಪಭಸ್ವಾಮಿ [ಎ.ಕ. (೧೯೭೯) ನಾಮಂ. ೩೭ (೧೪ ನಾಮಂ ೧೩೪) ಪು. ೨೪] ಶಾನ್ತಿನಾಥ ದೇವರ ಬಸದಿ [ಅದೇ : ನಾಮಂ. ೩೦ (೧೪ ನಾಮಂ. ೧೩೦) ಪು. ೧೯] ಮೊದಲಾದ ಮಾಹಿತಿಗಳು ಸಿಗುತ್ತವೆ. ಕಂಬದಹಳ್ಳಿ ತೀರ್ತ್ಥವು ಹಸುನೋಗೆ ಮಠಕ್ಕೆ ಪ್ರತಿಬದ್ಧವಾಗಿದ್ದಂತೆ ಒಂದು ಶಾಸನದಲ್ಲಿ [ಅದೇ : ನಾಮಂ. ೨೬ (೪ ನಾಮಂ ೨೦) ೧೧೬೮. ಕಂಬದಹಳ್ಳಿ ಪು. ೧೭ ಸಾಲು : ೨] ಜತೆಗೆ ಇದು ಚಂಗಳ್ವಾರಿಗೂ (ಚಂಗಿಕುಳ) ಆರಾಧ್ಯವೆನಿಸಿತ್ತು [ಅದೇ : ನಾಮಂ ೨೯. (೧೪ ನಾಮಂ ೧೨೯) ೧೧೭೪. ಕಂಬದಹಳ್ಳಿ ಪು. ೧೮] ಆದರೆ ಮುಂದಿನ ಶತಮಾನದಲ್ಲಿ ಕಂಬದಹಳ್ಳಿ ತೀರ್ತ್ಥಕ್ಕೆ ಎಕ್ಕೋಟಿಜಿನಾಲಯ ವೆಂದು ಮರುಹೆಸರು ದೊರೆತು, ಆ ಕಾಲ ಘಟ್ಟದ ಮತೀಯ ಸಂಘರ್ಷಗಳು ತಲುಪಿದ ನೆಲೆಯನ್ನು ತೋರಿಸುತ್ತದೆ: ಮೂಲ ಸಂಘ ದೇಸಿಗ ಗಣ ಪುಸ್ತಕಗಚ್ಛದ ಕಂಬದ ಹಳ್ಳಿಯ ತೀರ್ತ್ಥವ ಎಕ್ಕೋಟಿ ಜಿನಾಲಯವೆಂದು ಹೆಸರುಂ ಭೇರೀ ಪಂಚಮಹಾಶಬ್ದವಂ ಎಕ್ಕೋಟಿ ಮಹಾರುದ್ರರಿಳ್ದು ಕೊಟ್ಟರು ಅದನಾಗದೆಂದವಂ ಶಿವದ್ರೋಹಿ [ಅದೇ ನಾಮಂ. ೩೧ (೧೪ ನಾಮಂ ೧೩೧) ೧೩ ಶ. ಕಂಬದಹಳ್ಳಿ ಪು. ೧೯ ಸಾಲು : ೨].

೮. ಕದಸತವಾದಿ ತೀರ್ತ್ಥ – ಕಳಸತವಾದಿ ತೀರ್ತ್ಥ ಕುರಿತು ಎರಡು ಶಾಸನ ಪ್ರಯೋಗಗಳು ಸಿಗುತ್ತವೆ. ಇವರೆಡು ರೂಪಗಳೂ ಒಂದೇ ಊರಿನ ಭಿನ್ನನಾಮ ರೂಪಗಳೆಂಬುದು ನಿಶ್ಚಯ. ಕಡ (ಳ) ಸತವಾದಿಯು ಶ್ರವಣ ಬೆಳುಗೊಳದ ನೆರೆಹೊರೆಯ ಗ್ರಾಮ. ಹನ್ನೊಂದನೆಯ ಶತಮಾನಕ್ಕೆ ಸೇರಿದ ಎರಡು ದಾನ ಶಾಸನಗಳಲ್ಲಿ ಈ ತೀರ್ತ್ಥದ ಪ್ರಸ್ತಾಪ ಬಂದಿದೆ.

ಅ. ಶ್ರೀ ಮದ್ದೇವಣ್ಣನ್ದಿ ಭಟ್ಟಾರಕರ ಗುಡ್ಡಿ ಮಾಳಬ್ಬೆ ಕಡಸತವಾದಿಯ ತೀರ್ತ್ಥದ ಬಸದಿಗೆ ಕೊಟ್ಟಳ್

[ಎ.ಕ. ೨, (೧೯೭೩) ೫೨೦ (೪೮೪) ೧೧ ಶ. ಪು. ೩೨೨]

ಆ. ಶ್ರೀಮತ್ ಕಣ್ನಬೆ ಕನ್ತಿಯರು ಕಳಸತವಾದಿಯ ತೀತ್ಥದಬಸದಿಗೆ ಕೊಟ್ಟರ್ [ಅದೇ : ೫೨೧ (೪೮೫) ೧೧. ಶ.] ದಾನಗಳನ್ನು ಕೊಟ್ಟ ಇಬ್ಬರೂ ಮಹಿಳೆಯರು. ಅವರಲ್ಲಿ ಒಬ್ಬಾಕೆ ಶ್ರಾವಕಿ (ಗೃಹಿಣಿ), ಇನ್ನೊಬ್ಬಾಕೆ ಆರ್ಯಿಕೆ (ಕಂತಿ, ಸನ್ಯಾಸಿನಿ), ಇಬ್ಬರೂ ದಾನಕೊಟ್ಟದ್ದು ಒಂದೊಂದು ಜಿನ ಬಿಂಬಗಳನ್ನು. ದಾನವಾಗಿ ಕೊಟ್ಟ ಪಂಚಲೋಹದ ಜಿನಬಿಂಬಗಳ ಪಾದ ಪೀಠದ ಹಿಂಬದಿಯಲ್ಲಿ ಈ ಎರಡೆರಡು ಸಾಲಿನ ಶಾಸನ ಬರೆಹದ ಒಕ್ಕಣೆಯಿದೆ. ಈ ಶಾಸನೋಕ್ತ ವ್ಯಕ್ತಿಗಳ ಇತಿವೃತ್ತವನ್ನು ಶಾಸನಗಳಲ್ಲಿ ಸಿಗುವ ಮಾಹಿತಿಯಿಂದ ಗುರುತಿಸಬಹುದೆ ಎಂದು ಪರಿಶೀಲಿಸಿದ್ದೇನೆ.

೧. ಒಬ್ಬ ಕಣ್ನಬ್ಬರಸಿಯ ಮತ್ತು ಆಕೆಯ ಮೌವರು ತಮ್ಮಂದಿರುಗಳಾದ ಚಾಮಯ್ಯ ದಮ್ಮಡಯ್ಯ ನಾಗವರ್ಮ್ಮರು ಬೆಳುಗೊಳಕ್ಕೆ ಬಂದು ದೇವರಿಗೆ ವಂದನೆ ಮಾಡಿದರೆಂದು, ಚಿಕ್ಕಬೆಟ್ಟದ ಮೇಲೆ ಲಕ್ಕಿದೊಣೆಯ ಪಶ್ಚಿಮಕ್ಕೆ, ಬಂಡೆಯ ಮೇಲೆ ಕೆತ್ತಲಾಗಿರುವ ಹತ್ತನೆಯ ಶತಮಾನದ ಶಾಸನ ಹೇಳುತ್ತದೆ. [ಅದೇ : ೨೪೧ (೪೬೬) ಪು. ೧೫೧] ನಾಮಸಾದೃಶ್ಯ ಹಾಗೂ ಕಾಲದ ಹೊಂದಾಣಿಕೆ ಅಷ್ಟರಿಂದಲೇ ಕಣ್ಣಬ್ಬರಿಸಿಯೂ ಕಣ್ನಬೆ ಕಂತಿಯೂ ಅಭಿನ್ನರೆಂದು ಸ್ಥಾಪಿಸುವದು ಕಷ್ಟ. ಅಂದರೆ ಕಣ್ನಬ್ಬರಸಿಯು ಬೆಳುಗೊಳಕ್ಕೆ ತೀರ್ತ್ಥವಂದನೆಗೆ ಬಂದು, ದೀಕ್ಷೆ ಹೊಂದಿ ಕಣ್ನಬ್ಬಕಂತಿ ಆಗಿರಬಹುದೆಂದು ಊಹಿಸಲು ಅವಕಾಶವಂತೂ ಇದೆ.

೨. ಮಾಳಬ್ಬೆ ಶ್ರಾವಕಿಯ ಗುರುಗಳಾದ ದೇವಣಂದಿ ಭಟ್ಟಾರಕರೂ (ಶ್ರಬೆ) ಚಿಕ್ಕ ಬೆಟ್ಟದ ಮೇಲಿನ ಪಾರ್ಶ್ವನಾಥ ಬಸದಿಯ ಬಲಗಡೆ ಬಂಡೆಯ ಮೇಲಿರುವ ೫೨ (೪೯) ನೆಯ ಸಂಖ್ಯೆಯ, ಹತ್ತನೆಯ ಶ.ದ ಸಾಸನೋಕ್ತ ದೇವನಂದಿ ಬಳರರೂ ಒಬ್ಬರೇ ಎಂದು ತೋರುತ್ತದೆ [ ಅದೇ : ೫೨ (೪೯) ೧೦ ಶ. ಪು. ೧೭]

ಕ(ಳ)ಡಸತವಾದಿ ತೀರ್ತ್ಥವು ೧೦ ನೆಯ ಶತಮಾನದಿಂದಲೇ ಪ್ರಸಿದ್ಧವಾಗಿರ ಬೇಕೆಂದು ಭಾವಿಸಲು ಪ್ರತಿಕೂಲವಿಲ್ಲ; ೧೧ನೆಯ ಶತಮಾನದಲ್ಲಿ ಅಲ್ಲಿಯ ತೀರ್ತ್ಥದ ಬಸದಿಗೆ ದಾನಗಳನ್ನು ಕೊಡಬೇಕಾದರೆ ಅದರ ಹಿಂದಿನಿಂದಲೂ ಅದು ಹೆಸರು ಗಳಿಸಿರಬೇಕು.

೯. ಕನಕಗಿರಿಯ ತೀರ್ತ್ಥವು ಹತ್ತನೆಯ ಶತಮಾನದ ಆರಂಭದ ವೇಳೆಗಾಗಲೇನೆ ಕೀರ್ತಿಶಾಲಿಯಾಗಿತ್ತು. ಕನಕಗಿರಿಯ ತೀರ್ತ್ಥದ ಮೇಲಿನ ಬಸದಿಯನ್ನು ಕ್ರಿ.ಶ. ೯೦೯ ರಲ್ಲಿ ಇಮ್ಮಡಿಸಲಾಯಿತೆಂದು ಹೇಳಿದೆ. ಇದರಿಂದ ಇನ್ನೂ ಹಿಂದೆಯೇ, ಪ್ರಾಯಃ ಒಂಬತ್ತನೆಯ ಶಮ್ದ ಆದಿಭಾಗದಲ್ಲಿಯೇ ಇಲ್ಲಿ ಇನ್ನೊಂದು ಬಸದಿ ಇದ್ದಿತೆಂದು ತಿಳಿಯಬಹುದು.

ಮಂಡ್ಯಜಿಲ್ಲೆ ಮದ್ದೂರು ತಾಲ್ಲೂಕು ಕೂಲಿಗೆರೆಯ ಶಾಸನವು ಈ ಕನಕಗಿರಿ ತೀರ್ತ್ಥವನ್ನೂ, ಅದರ ಆಚಾರ್ಯರನ್ನೂ, ಗಂಗರ ಆಳಿಕೆಯನ್ನು, ಮಣಲೆಯರನು ಬಸದಿಯನ್ನು ಕಟ್ಟಿಸಿದನೆಂಬುದನ್ನೂ ಸವಿವರವಾಗಿಯೇ ನಿರೂಪಿಸಿದೆ [ಎ.ಕ. ೭ (೧೯೭೯) ಮದ್ದೂರು ೧೦೦ (೧೧೧ ಮವ ೩೦) ೯೧೬ – ೧೭. ಕೂಲಿಗೆರೆ. ಪು. ೩೧೩] ಗಂಗರ ನೀತಿಮಾರ್ಗ ಪೆರ್ಮಾನಡಿಯ ಆಳಿಕೆಗೆ ಸೇರಿದ ಈ ಶಾಸನೋಕ್ತ ಮಣಲೆಯರನು ಬಸದಿಯನ್ನು ಕನಕಗಿರಿ ತೀರ್ತ್ಥದ ಮೇಗೆ ಮಾಡಿಸಿ, ‘ಅರಸರ ಅಧ್ಯಕ್ಷದೊಳ್’ (ರಾಜ ಸಮ್ಮುಖದಲ್ಲಿ) ತನಗೆ ಅಧಿಕಾರ ದತ್ತವಾಗಿ ಬಂದಿದ್ದ ಅಟ್ಟದೆರೆ, ಕುರುದೆರೆಯೂ ಸೇರಿದಂತೆ ಸಾಮಂತ ತೆರಿಗೆಗಳೆಲ್ಲವನ್ನೂ ಬಸದಿಗೆ ಬಿಟ್ಟುಕೊಟ್ಟನು. ಈ ಬಸದಿಯ ಒಡೆತನ ಇದ್ದ ಕನಕಸೇನ ಭಟಾರರಿಗೆ ಈ ತಿಪ್ಪೆಯೂರ ತೆರಿಗೆ ಸ್ವಾಮ್ಯವನ್ನು ಸಾಮಂತ ಮಣಲೆಯರನು ಬಿಟ್ಟು ಕೊಟ್ಟನು. ಗಂಗರ ಒಂದನೆಯ ಬೂತಗರಾಜನ (ಸು. ೮೭೦) ಮಗನಾದ ಅೞಿಗಂಗನೇ ಆಗ ಆಳುತ್ತಿದ್ದ ನೀತಿಮಾರ್ಗ ಪೆರ್ಮಾನಡಿ ರಾಜ (೯೦೭ – ೨೧). ಸಾಮಂತ ಮಣಲೆಯರನು ಪ್ರಸಿದ್ಧವಾದ ಸಗರಮಣಲೆಯರ ವಂಶಜನಾಗಿದ್ದನು [ನಾಗರಾಜಯ್ಯ, ಡಾ. ಹಂಪ., ‘ಶಾಸನಗಳಲ್ಲಿ ಎರಡು ವಂಶಗಳು’, ಮುಂಬಯಿ ವಿಶ್ವವಿದ್ಯಾಲಯ (೧೯೯೫) ಪು. ೩೯ ರಿಂದ ೭೬.] ಕನಕಗಿರಿ ತೀರ್ತ್ಥವು ತಿಪ್ಪೂರು ತೀರ್ತ್ಥದಲ್ಲಿ ಅಂತರ್ಗತವಾಗಿತ್ತು; ಇದರ ಮುಂದುವರಿದ ಹೆಚ್ಚಿನ ಪರಿಚಯವನ್ನು ಮತ್ತೆ ತಿಪ್ಪೂರು ತೀರ್ಥ ಕುರಿತು ಪರಿಚಯಿಸುವಾಗ ಕೈಗೆತ್ತಿಕೊಳ್ಳಲಾಗುವುದು.

೧೦. ಕಲಕೆೞಿ ತೀರ್ತ್ಥವು ಬಿಜಾಪುರ ಜಿಲ್ಲೆಯ ಸಿಂದಗಾ ತಾಲ್ಲೂಕು ಕಲ್ಕೇರಿಗೆ ಸೇರಿದುದಾಗಿದೆ : ಕಲುಕೆೞಿ ಔಕಲಕೇರಿ-ಕಲ್ಕೇರಿ ಎಂಬ ಕ್ರಮದಲ್ಲಿ ಈ ಸ್ಥಲನಾಮರೂಪದಲ್ಲಿ ಧ್ವನಿಮಾರ್ಪಾಟು ನಡೆದಿದೆ. ಯಾದವ (ಸೇಬಣ) ರಾಜ ಸಿಂಘಣನ ಇಬ್ಬರು ಪ್ಪಧಾನ ಚೂಡಾಮಣಿಗಳೆಂದರೆ, (ಚಿಕ್ಕದೇವನ ಮಕ್ಕಳಾದ) ಮಲ್ಲ (ಮಲ್ಲಿ ಸೆಟ್ಟಿ) ಮತ್ತು ಬೀಚಯ ದಂಡಾಧಿಪ ಸೋದರರು. ಬೀಚಿದೇವ ದಂಡನಾಥ ಚೂಡಾಮಣಿಯು ಸಪ್ತಾಂಗರಾಜ್ಯ ಲಕ್ಷ್ಮೀನಿವಾಸದಂತೆ ಸೆವದಕ್ಷಿಣ ರಾಯ ರಾಜಧಾನಿ ಹುಲಿಗೆಱೆಯ ನೆಲೆ ವೀಡಿನಲ್ಲು ರಾಜ್ಯವಾಳುತ್ತಿದ್ದನು.

ಹ(ಪ)ಗರಟೆಗೆ ನಾಡು ಜಂಬೂದ್ವೀಪಕ್ಕೆ ಹಣೆ, ಅದರಲ್ಲಿ ಕಲುಕೆಱಿ ಪಟ್ಟಣ ತಿಲಕವಾಗಿ ಶೋಭಿಸಿತ್ತು :

ದಮದಿರವಿದು ದಾನದ ತವರ್ಮ್ಮನೆ ಧರ್ಮ್ಮದ ಜನ್ಮಭೂಮಿ ನೀತಿಯ ನಿಜದಾಗರ ಮಹಿಯಾಗರಕುತ್ತಮ ಭಬ್ಯ ಕೋಟಿಯ ಮನ ವೆಚ್ಚುಮಚ್ಚುವೊಲನ್ನೆಂಬನ್ನೆಗಂ ಸೊಗಯಿಪ್ಪುದೀ ಧರಿತ್ರಿಯೊಳತಿ ಶೋಭೆಯಿಂ ಸೊಬಗನಾನ್ತು ಕಲುಕೆಱಿ ಎಂಬ ಪಟ್ಟಣಂ || [ಸೌ.ಇ.ಇ.೨೦, ೨೦೨.೧೨೪೪. ಕಲಕೇರಿ. ಪು. ೨೫೨. ಸಾಲು : ೪೨] ಹೀಗೆ ಕಂಗೊಳಿಸಿದ ದಿಬ್ಯ ತೀರ್ತ್ಥ ಸ್ಥಳವಾದ ಕಲುಕೆರೆಯಲ್ಲಿಗೆ ಕಲಂಅಸೇನ ಭಟ್ಟಾರಕರು ಬಂದರು. ಮೂಲಸಂಘ ಪೊಗರಿಗಚ್ಛದ ಧರ್ಮಸೇನ ತ್ರೈವಿದ್ಯ ದೇವರ ಅಗ್ರಶಿಷ್ಯ ನಿಧಾನರು ಕಮಲಸೇನ ಭಟ್ಟಾರಕ ದೇವರು. ಮಹಾಮಹಿಮವಾದ ಅವರ ಪ್ರಭಾವ ಮತ್ತು ವ್ಯಕ್ತಿತ್ವವನ್ನು ಶಾಸನಕವಿ ಕಂಡರಿಸಿದ್ದಾನೆ:

            ನಾಡೆ ಗುಣ ಬ್ರತಾಭರಣ ಸಯ್ಯಮತುಂಗ ತರಂಗದಿಂದೆ ಕೈ
ಗೂಡಿದ ಸೀಲಫೇನ ಪರಿಪಾಂಡುರ ವ್ರಿತ್ತಿಯನಾನ್ತ ಸೋಭೆಯಿಂ
ನೋಡಿ ತಪೋವಿಳಾಸವತಿಯುಂ ಸಲೆ ಭಾರತಿಯುಂ ಸದಾಜಳ
ಕ್ರೀಡೆಯನಾಡುವರ್ಕಮಳಸೇನನ ಶಾಂತರಸ ಪ್ರವಾಹದೊಳ್
||

[ಕಮಲಸೇನ ಮುನಿಯ ಶಾಂತತೆಯ ರಸ ಪ್ರವಾಹವಾಗಿತ್ತು, ಅಧಿಕವಾದ ಗುಣಗಳ ವ್ರತ (ಗುಣವ್ರತ)ವೇ ಆಭರಣವಾಗಿ, ಇಂದ್ರಿಯ ನಿಗ್ರಹವೆಂಬ ಮೇಲೆದ್ದ ಅಲೆಗಳಿಂದ ಉಂಟಾದ ಶೀಲ (ಸಚ್ಚಾರಿತ್ರ್ಯ)ವೇ ನೊರೆಯೋ ಎಂಬಂತೆ ಸ್ಫಟಿಕ ಪಾರದರ್ಶಕ ವೃತ್ತಿ (ನಡತೆ)ಯನ್ನು ಹೊಂದಿರುವುದರ ಶೋಭೆಯನ್ನು ಕಂಡ ತಪಸ್ಸೆಂಬ ವಿಳಾಸವತಿಯೂ ಭಾರತಿಯೂ ಕೂಡಿ ಸದಾ ಇಲ್ಲಿ ಜಲಕ್ರೀಡೆಯನ್ನು ಆಡುವರು. ]. ಇಂತಹ ತಪೊಧನರಾದ ಕಮಳಸೇನಭಟ್ಟಾರಕರು ದಿವ್ಯ ತೀರ್ತ್ಥಾಭಿವಂದನಾ ನಿಮಿತ್ತವಾಗಿ ವಿಹಾರಿಸುತ್ತಾ ಈ ಶೋಭಾಯಮಾನವಾದ ಕಲಕೆರೆಯ ದಿಬ್ಯತೀರ್ಥ ಸ್ಥಳಕ್ಕೆ ಆಗಮಿಸಿದರು, ಅಲ್ಲಿನ ಅಶೇಷ ಭವ್ಯಜನ ಚೂಡಾಮಣಿ, ಧರ್ಮರಕ್ಷಾಮಣಿ ಪಾಯಿಸೆಟ್ಟಿಗೆ, ತೀರ್ಥಕ ಪ್ರತಿಷ್ಠೆಯ ಚೈತ್ಯಾಲಯವನ್ನು ಸುಮುಹೂರ್ತದಲ್ಲಿ ನಿರ್ಮಿಸುವಂತೆ ಬೆಸಸಿದರು. ಕಲುಕೆರೆಯ ತೀರ್ತ್ಥದಲ್ಲಿ ನೋಂಪಿಯ ನಿಮಿತ್ತವಾಗಿ ಮಾಡಿಸಿದ ಅನಂತ ತೀರ್ಥದೇವರ ಬಸದಿಯೂ, ಮಲ್ಲಿನಾಥ ಬಸದಿಯೂ, ಮಲ್ಲಿನಾಥ ದಾನಶಾಲೆಯೂ ಹೆಸರುವಾಸಿಯಾಗಿದ್ದುವು. ಪಂಚಮಹಾಶಬ್ದದ ಮರ್ಯಾದೆ ಪಡೆದಿದ್ದುವು. ಅಸಂಖ್ಯಾತ ಜನರು, ಅಮಳ ತಪೋಧನರು ‘ಕಲುಕೆಱಿ ತೀರ್ತ್ಥ’ ವಂದನೆ ಮಾಡಿ ಪೂಜಿಸಿದರು.

೧೧. ಕೞ್ವಪ್ಪು ತೀರ್ತ್ಥವು ಕರ್ನಾಟಕವೇ ಅಲ್ಲದೆ ಇಡೀ ಭಾರತದಲ್ಲಿಯೇ ಪ್ರಾಚೀನ ತಮತೀರ್ತ್ಥಗಳಲ್ಲೊಂದು. ಕ್ರಿ.ಪೂ. ೪-೩ನೆಯ ಶ.ದ. ವೇಳೆಗೆ ಅದರಕೀರ್ತಿ ಆಸೇತು ಹಿಮಾಚಲವಾಗಿತ್ತು. ಅಖಂಡವಾಗಿ ೨ ೧/೨ ಸಾವಿರ ವರ್ಷಗಳ ಧಾರ್ಮಿಕ, ಚಾರಿತ್ರಿಕ, ಸಾಂಸ್ಕೃತಿಕ ಮಹತ್ವವನ್ನು ಗರ್ಭೀಕರಿಸಿ ಇಂದಿಗೂ ವರ್ಧಿಷ್ಣು ಕ್ಷೇತ್ರವಾಗಿರುವ ಶ್ರವಣಬೆಳುಗೊಳವೇ ಕೞ್ಟಪ್ಪು ತೀರ್ತ್ಥ. ಕೞ್ವಪ್ಪು ಎಂದರೆ ಸಾವಿನ (ಸತ್ತವರ) ಗುಡ್ಡ ಎಂದರ್ಥ; ಮೊಹೆಂಜೊದರೊ ಎಂದರೂ ಇದೇ ಅರ್ಥ. ಮರಣವನ್ನು ಮಹಾನವಮಿಯೆಂದು ನಗುತ್ತಾ ಬರಮಾಡಿಕೊಳ್ಳುವ, ಮುಡಿಪುವರ ಸಮಾಧಿಗುಡ್ಡವೇ ಕೞ್ವಪ್ಪು; ಶ್ರಬೆ. ದ ಚಿಕ್ಕಬೆಟ್ಟ. ಎಲ್ಲೆಲ್ಲಿಂದಲೊ ದೂರದ ಊರುಗಳಿಂದ ಸಮಾಧಿಗಾಗಿಯೇ ಬಂದು ಮುಡಿಪಿದ ಮುನಿಗಳ, ಹಾಗೂ ಕಂತಿಯರ ಕಥೆ ಹೇಳುತ್ತವೆ ಇಲ್ಲಿನ ನೂರಾರು ಶಾಸನಗಳು. ೧. ವ್ರತಶೀಲ ನೋಂಪಿಗುಣದಿಂದ, ಸ್ವಾಧ್ಯಾಯ ಸಂಪತ್ತಿನಿಂದ ತಪವೆಸಗಿದ ಸಸಿಮತಿ ಕಂತಿಯರು ಕವ್ವಿಪ್ಪಿನಲ್ಲಿ ನೋನ್ತು ತೀರ್ತ್ಥಗಿರಿ ಮೇಲೆ ಮುಡಿಪಿದರು, [ಎ.ಕ. ೨, (೧೯೭೩). ೮೬(೭೬) ೭ನೆಯ ಶ. ಪು. ೬೭]

೨. ಬೆಟ್ಟದ ವೊಡೆಯನ (ಒಬ್ಬ ಜೈನಯತಿಯ) ಮಗಳು (ಶಿಷ್ಯೆ) ವೈಜಬ್ಬೆ (ಅಬ್ಬೆ, ಅವ್ವೆ = ಕಂತಿ) ಎಂಬಾಕೆಯು ಕವ್ವಿಪ್ಪು ತೀರ್ತ್ಥದಲ್ಲಿ ನೋನ್ತು (= ವ್ರತಮಾಡಿ) ಮುಡಿಪಿದಳು [ಅದೇ : ೭೮ (೬೮) ೧೦ ಶ. ಪು. ೫೫]

೩. ಕಱ್ವಪ್ಪು ತೀರ್ತ್ಥವನ್ನು ವಂದಿಸಿ ತೀರ್ತ್ಥವಂದನೆ ಮಾಡಿದವರು ಹಲವರು. [ಅದೇ : ೫೨ (೪೯) .೧೦ ಶ.ಪು. ೧೭ : ಅದೇ ೪೯(೪೬) ೧೧ ಶ. ಪು. ೧೭]

೪. ಕಾಱ್ವಪ್ಪು ತೀರ್ತ್ಥ [ಅದೇ : ೧೬ (೧೪) ೮ ಶ. ಪು. ೮-೯] ಶ್ರೀ ಕಬ್ಬಪ್ಪುತೀರ್ತ್ಥ [ಅದೇ : ೧೫೬ (೧೨೭) ೧೧೧೫. ಪು. ೯೭. ಸಾಲು: ೧೫೨: ಅದೇ: ೫೬೮ (ಎ.ಕ. ೫. ಚ.ಪ. ೧೪೮) ೧೦೯೪. ಹಳೇ ಬೆಳ್ಗೊಳ. ಪು. ೩೫೧] ಎಂಬ ಬೇರೆ ಶಬ್ದರೂಪಗಳು ಶಾಸನಗಳಲ್ಲಿವೆ.

೫. ಕಱ್ವಪ್ಪುತೀರ್ತ್ಥವೆಂಬುದು ಕಱ್ವಪ್ಪು ಬೆಟ್ಟ [ಅದೇ: ೩೧ (೨೮)]; ಅಂದರೆ ಚಿಕ್ಕ ಬೆಟ್ಟ. ಇದನ್ನು ಸಂಸ್ಕೃತಿಕರಿಸಿ ಕಟವಪ್ರನಲ್ಗಿರಿ [ಅದೇ: ೧೧೩ (೯೮) ೭ ಶ.] ಕಟವಪ್ರಶೈಲ [ಅದೇ: ೮೫ (೭೫) ೭ ಶ.] ರಿಷಿಗಿರಿಶಿಲೆ [ಅದೇ: ೯೪(೮೪) ೭ ಶ.] ಎಂಬ ಅರಿಸಮಾರರೂಪವೂ ಇದೆ. ಪೆರ್ಗಱ್ವಪ್ಪು [ಅದೇ: ೩೮(೩೫) ೮ ಶ.ಪು. ೧೪. ಸಾಲು:೪] ಎಂಬ ಪ್ರಯೋಗವೂ ಸಿಗುತ್ತದೆ.

೬. ಕಱ್ವಪ್ಪು ತೀರ್ತ್ಥವು ಇಡೀ ದೇಶದಲ್ಲಿ ಎಂಥ ಪವಿತ್ರ ಕ್ಷೇತ್ರ ಎಂಬ ಜನ ಮನ್ನಣೆ ಪಡೆದಿತ್ತೆಂದರೆ, ಶಾಸನಗಳ ಅಂತ್ಯದಲ್ಲಿ ಶಾಪಾಶಯ ಪಂಕ್ತಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ: ಅಂಥದೊಂದು ಅಪರೂಪದ ಪ್ರಯೋಗವಿದೆ: ಆಯ್ತವರ್ಮ್ಮರಸರ ಮಾಡಿಸಿದೆರಡುನ್ದೇಗುಲಂ ಕೋಗಳಿಯ ಪ್ರಜೆವೆರಸಿ ಮೂಱನೆಯದೇಗುಲಂ ಇದನಱಿದೊಂ ಪ್ರಯಾಗೆಯುವಂ ಕುರುಕ್ಷೇತ್ರವುವಂ ಬಾಣಾರಸಿಯುವಂ ಕಱ್ವಪ್ಪುವಂಸಾಸಿರ ಕವಿಲೆಯುವಂ ಸಾಸಿರ್ಬ್ಬರ್ಪ್ಪಾ ರ್ವ್ವರುವಂ ಸಾಸಿರ್ಬ್ಬರ್ ರಿಷಿಯರುವನ ಱಿದ ಪಾತಕನು ಬ್ರಹ್ಮಾತಿಕಾರನು ಮಕ್ಕುಂ || [ಸೌ.ಇ.ಇ. ೯-೧, ೭೭.೯೯೨. ಕೋಗಳಿ (ಬಳ್ಳಾರಿಜಿ / ಹಡಗಲಿತಾ) ಪು. ೪೯.]

೧೨. ಕಾರ್ತಿಕಸ್ವಾಮಿ ತೀರ್ತ್ಥ:ಕೃತ್ತಿಕಾ ಪುರದ ಅಗ್ನಿರಾಜನು ತನ್ನ ಮಗಳು ಕೃತ್ತಿಕೆಯನ್ನು ಮದುವೆಯಾದನು; ಅವರಿಗೆ ಸ್ವಾಮಿಕಾರ್ತಿಕ ಎಂಬ ಮಗ ಮತ್ತು ವೀರ ಶ್ರೀ ಎಂಬ ಮಗಳು. ವೀರಶ್ರೀಯ ಪತಿ ಕೋಗಳಿಯರಾಜನಾದ ಕ್ರೌಂಚ. ಸ್ವಾಮಿಕಾರ್ತಿಕನು ದೀಕ್ಷೆ ಹೊಂದಿ ಭಿಕ್ಷೆಗೆ ಬಂದಾಗ ವೀರಶ್ರೀಯು ಮುನಿಯನ್ನು ಆಹಾರ ಸ್ವೀಕರಿಸಲು ಬೇಡಿದಳು. ಇದನ್ನು ದೂರದಿಂದ ನೋಡಿದ ಗಂಡ ಕ್ರೌಂಚನ್ನು ತಪ್ಪಾಗಿ ತಿಳಿದನು. ಕಾರ್ತ್ತಿಕ ಋಷಿಗೆ ಆಯುಧದಿಂದ ಹೊಡೆದನು. ವ್ಯಂತರ ದೇವತೆ ನವಿಲು ರೂಪದಿಂದ ಬಂದು, ಋಷಿಯನ್ನು ಎತ್ತಿಕೊಂಡು, ಕೋಗಳಿಯ ಮೂಡಣದೆಸೆಯ ಬೆಟ್ಟದ ಕೊಳದ ತಡಿಯಲ್ಲಿ ಇಳಿಸಿತು. ಋಷಿ ಅಲ್ಲಿ ಮುಡಿಪಿದರು. ತಂಗಿ ವೀರಶ್ರೀ ಅಲ್ಲೊಂದು ಬಸದಿ ಮಾಡಿಸಿದಳು. ಆ ಸ್ಥಳ ಕಾರ್ತ್ತಿಕಸ್ವಾಮಿ ತೀರ್ಥಮಾಯ್ತು [ಭ್ರಾಜಿಷ್ಣು, ‘ವಡ್ಡಾರಾಧನೆ’,(ಸಂ) ನಾಗರಾಜಯ್ಯ, ಡಾ. ಹಂಪ., ಬೆಂಗಳೂರು ವಿಶ್ವ ವಿದ್ಯಾಲಯ (೧೯೯೩)]

ಇದು ಸು. ಕ್ರಿ.ಶ. ೮೦೦ ರಲ್ಲಿ ರಚಿತವಾದ ಭ್ರಾಜಿಷ್ಣುವಿನ ‘ಆರಾಧಾನಾ ಕರ್ಣಾಟ ಟೀಕಾ’ (ವಡ್ಡಾರಾಧನೆ) ಕೃತಿಯಲ್ಲಿ ಬರುವ ನಿರೂಪಣೆ. ಈ ಕಾರ್ತಿಕ ಸ್ವಾಮಿ ತೀರ್ತ್ಥವೇ ಇಂದಿನ ಬಳ್ಳಾರಿ ಜಿಲ್ಲೆ, ಹೊಸಪೇಟೆ ತಾಲ್ಲೂಕು ಸಂಡೂರಿನ ಹತ್ತಿರವಿರುವ ಸ್ವಾಮಿ ಕಾರ್ತಿಕ ಬೆಟ್ಟ. ಇದು ಪ್ರಾಚೀನ ಜೈನ ತೀರ್ತ್ಥವಾಗಿದ್ದು ೧೨-೧೩ ನೆಯ ಶತಮಾನದಿಂದೀಚೆಗೆ ಅಜೈನ ಕ್ಷೇತ್ರವಾಗಿದೆ. ಈಗಿಲ್ಲಿ ಬಸದಿಯಿದ್ದ ಕುರುಹುಗಳೆಲ್ಲ ನಾಶವಾಗಿದೆ.

೧೩. ಕುರುಳಿಯ ತೀರ್ತ್ಥವು ೧೦-೧೧ ನೆಯ ಶತಮಾನದ ವೇಳೆಗೆ ಕೀರ್ತಿವಡೆದಿತ್ತು. ಗಂಗರು ಶಿವಮೊಗ್ಗ ಸಮೀಪ ಮಂಡಲಿ ತೀರ್ತ್ಥವನ್ನು ಸ್ಥಾಪಿಸಿದ್ದು ಕ್ರಿ.ಶ. ೪-೫ ನೆಯ ಶ. ದಲ್ಲಿ. ಅದೇ ಸರಿಸುಮಾರಿನಲ್ಲಿ ಈ ಕುರುಳಿಯ ತೀರ್ತ್ಥದಲು ಗಂಗಜಿನಾಲಯ ಮಂ ಮಾಡಿದರು. [ಎ.ಕ. ೭-೧ (೧೯೦೨) ಶೀಮೊಗ್ಗ ೬೪. ೧೦೬೭ ಮತ್ತು ೧೧೧೨. ಪುರಲೆಗ್ರಾಮ (ಶಿವಮೊಗ್ಗ ಜಿ / ತಾ) ಪು. 63-69] ಅನಂತರ ಅದೇ ಗಂಗ ವಂಶಜರು ೧೧-೧೨ ನೆಯ ಶತಮಾನದಲ್ಲೂ ನವೀಕರಿಸುತ್ತ ಪಡಿಸಲಿಸುತ್ತ ಬಂದರು. ಸತ್ಯಗಂಗದೇವನು ಎಡೆಹಳ್ಳಿಯ ನೆಲೆವೀಡಿನೊಳಗೆ ಸುಖದಿಂದ ರಾಜ್ಯವಾಳುತ್ತ ಅಲ್ಲಿ ‘ಕುರುಳಿಯ ತೀರ್ತ್ಥದಲು ಗಂಗಜಿನಾಲಯಮಂ ಮಾಡಿ’, ೧೧೩೨ ರಲ್ಲಿ ತನ್ನ ಧರ್ಮ ಗುರುಗಳಾದ ಶ್ರೀಮಾಧವಚಂದ್ರರ ಕಾಲುತೊಳೆದು ದತ್ತಿಬಿಟ್ಟನು. ಮತ್ತೆ ಮಹಾ ಮಂಡಳೇಶ್ವರ ಗಂಗಹೆರ್ಮಾಡಿ ಹಾಗೂ ಇತರರು ಅರಸರ ಸನ್ನಿಧಿಯಲ್ಲಿ ಬಾಳಚಂದ್ರದೇವರಿಗೆ ಧಾರಾಪೂರ್ವಕ ಮಾಡಿಬಿಟ್ಟರು. ಅಲ್ಲದೆ ಸನ್ನಿಧಿಯಲ್ಲಿ ಚಂದಿಮಯ್ಯನು ಕುರುಳಿಯ ತನ್ನ ಗೌಡಿಕೆಯನ್ನು ಕಲಿಯರ ಮಲ್ಲಿಸೆಟ್ಟಿ ‘ಮಾಱಂಕೊಂಡು’ ದಾನ ಮಾಡಿದನು [ಅದೇ: ಶಿವಮೊಗ್ಗ ೬೪. ಪು. ೬೯]

೧೪. ಕೆಲ್ಲಂಗೆಱಿ ತೀರ್ತ್ಥ: ಗಂಗವಾಡಿಯ ಎಲ್ಲೆಯೊಳಗಿದ್ದ ಪ್ರಾಚೀನವೂ ಪ್ರಸಿದ್ಧವೂ ಆದ ಕೆಲ್ಲಂಗೆಱಿ ತೀರ್ತ್ಥವನ್ನು ಕುರಿತು ಸಾಕಷ್ಟು ಮಾಹಿತಿಯು ಶಾಸನಗಳಲ್ಲಿ ಉಪಲಬ್ಧವಿದೆ. ಹಾಸನ ಜಿಲ್ಲೆ ಬೇಲೂರು ತಾಲ್ಲೂಕು ಹಳೆಯ ಬೀಡಿನ ಪರಿಸರವೇ ಕೆಲ್ಲಂಗೆರೆಯ ಆದಿತೀರ್ಥ. ಇದನ್ನು ಆದಿತೀರ್ಥವೆಂದು ಕರೆದಿರುವುದು ಇದರ ಪುರಾತನೆಯನ್ನೂ ಪ್ರಾಮುಖ್ಯವನ್ನೂ ಹೇಳುತ್ತದೆ. ಕೆಲ್ಲಂಗೆರೆ ತೀರ್ಥವು ಮೊದಲು (ಹಿಂದೆಯೇ) ಗಂಗರಿಂದ ನಿರ್ಮಿತವಾಗಿತ್ತು ಗಂಗರು ನಂದಗಿರಿ, ಕುವಳಾಲಪುರ, ಶ್ರೀಪುರ, ತಿಪ್ಪೂರು, ಕುರುಳಿ, ಮಂಡಳಿ, ಕೆಲ್ಲಂಗೆರೆ – ಇಲ್ಲೆಲ್ಲಾ ‘ತೀರ್ತ್ಥ’ ಗಳನ್ನು (ಬಸದಿ) ನಿರ್ಮಿಸುತ್ತ ಈ ಎಡೆಗಳನ್ನು ತೀರ್ತ್ಥವಾಗಿಸಿದ್ದರು. ಆದರೆ ಮುಂದೆ ಕಾಲವಶದಿಂದ ಕೆಲ್ಲಂಗೆರೆ ತೀರ್ಥವು ನಾಮಾವಶೇಷವಾಯಿತು. ಅದನ್ನು ಮತ್ತೆ ಹೊಸದಾಗಿಸಿದವನು ಹೊಯ್ಸಳರ ಹುಳ್ಳದಂಡಾಧಿಪನು [ಎ.ಕ. ೨, ೪೭೬ (೩೪೫) ೧೧೫೯. ಪು. ೨೮೯ – ೯೦ ಸಾಲಿ: ೪೫-೪೬] ಕೆಲ್ಲಂಗೆರೆಯಲ್ಲಿ ಹುಳ್ಳಭಂಡಾರಿಯು ಪಂಚಬಸದಿಗಳನ್ನು ಮಾಡಿಸಿದನು. [ಅದೇ] ಈ ಕೆಲ್ಲಂಗೆರೆಯನ್ನು ಹಲವರು ಹೊಗಳಿದರು [ಎ.ಕ. ೯ (೧೯೯೦) ಬೇ. ೩೮೮ (೫ ಬೇ ೧೨೩) ಕ್ರಿ.ಶ. ೯೫೪. ಬಸ್ತಿಹಳ್ಳಿ (ಹಾಸನಜಿ / ಬೇಲೂರು ತಾ) ಪು. ೩೫೨] ಇಲ್ಲಿದ್ದ ‘ತ್ರಿಕೂಟ ರತ್ನತ್ರಯ’ ಎಂಬ ಹೆಸರಿನ ಶಾಂತಿನಾಥ ದೇವರ ಬಸದಿಗೆ ಇಲ್ಲಿಯೇ ಇದ್ದ ಪಾರ್ಶ್ವದೇವರ ಬಸದಿಯು ಪ್ರತಿಬದ್ಧವಾಗಿತ್ತು. [ಅದೇ:ಬೇ ೩೨೩ (೧೫ ಬೇ ೩೪೩) ಶ. ಹಳೇ ಬೀಡು. ಪು. ೩೦೬] ಕೆಲ್ಲಂಗೆಱಿ ತೀರ್ತ್ಥದ ಚತುಃ ಸ್ಸೀಮೆಯನ್ನು ಸಹ ಶಾಸನ ತಿಳಿಸಿದೆ. [ಅದೇ:ಬೇ ೩೨೧ (೧೫ ಬೇ ೩೪೨) ೧೨೬೫. ಹಳೇಬೀಡು. ಪು. ೨೯೯]. ೧೨ ನೆಯ ಶ. ದಲ್ಲಿ ಕೆಲ್ಲಂಗೆರೆಯು ‘ಶ್ರೀ ಕೊಲ್ಲಾಪುರದ ಶ್ರೀರೂಪ ನಾರಾಯಣ ಬಸದಿಯ ಪ್ರತಿವಿದ್ಧ’ ವಾಗಿದ್ದುದನ್ನು ‘ಶ್ರೀಮನ್ಮಹಾಪ್ರಧಾನಂ ಸರ್ವಾಧಿಕಾರ ಹಿರಿಯ ಭಂಡಾರಿ ಅಭಿನವ ಗಂಗದಂಡನಾಯಕ ಶ್ರೀ ಹುಳ್ಳರಾಜಂ ಪುನರ್ಬ್ಭರಣವಂ ಮಾಡಿ’ಸಿದನು [ಎ.ಕ. ೨, ೭೧ (೬೪) ೧೧೬೩. ಪು. ೩೦. ಸಾಲು: ೧೦೭-೧೧] ಕೆಲ್ಲಂಗೆಱಿ ತೀರ್ತ್ಥವನ್ನು ಕುರಿತು ಅಧ್ಯಯನ ಸಾಮಗ್ರಿ ಸಾಕಷ್ಟಿದೆ.

೧೫. ಕೊಂಡಕುಂದೆಯ ತೀರ್ತ್ಥ : ಕಲ್ಯಾಣಿ ಚಾಳುಕ್ಯ ತ್ರಿಭುವನಮಲ್ಲ ಪೆರ್ಮಾಡಿ ವಿಕ್ರಮಾದಿತ್ಯನು (೧೦೭೬-೧೧೨೭) ಪೊಟ್ಟಲಕೆರೆಯಿಂದ ಆಳುತ್ತಿರುವಾಗ, ಮಹಾ ಮಂಡಲೇಶ್ವರ ಚೋಯಿಮಯ್ಯರಸನು ಸಿಂದವಾಡಿ ಸಾವಿರ ಪ್ರದೇಶವನ್ನು ಬೀಳವ್ರಿತ್ತಿಯಿಂದ ನೋಡಿಕೊಳ್ಳುತ್ತಿದ್ದನು. ಈ ಅವಧಿಯಲ್ಲಿ ನಾಲಿಕಬ್ಬೆ ಎಂಬ ಶ್ರಾವಕಿಯು ತನ್ನ ಭರ್ತಾರನಿಗೆ ಪರೋಕ್ಷ ವಿನಿಯಾರ್ಥವಾಗಿ ಕೊಂಡಕುಂದೆಯ ತೀರ್ಥದಲ್ಲಿ ಚಟ್ಟಜಿನಾಲಯವನ್ನು ೧೦೮೧ ರಲ್ಲಿ ಕಟ್ಟಿಸಿದಳು. ಅದಕ್ಕೆ ಮಹಾಮಂಡಲೇಶ್ವರನೂ ೩೦ ಮತ್ತರು ನೆಲವನ್ನೂ ಹೂವಿನ ತೋಟ ಮತ್ತು ಗಾಣವನ್ನೂ ಎಂಟು ಮನೆಯ ನಿವೇಶವನ್ನೂ ಬಿಟ್ಟುಕೊಟ್ಟನು [ಸೌ.ಇ.ಇ. ೯-೧, ೧೫೦.೧೦೮೧. ಕೊನಕೊಂಡ್ಲ] ನಾಲಿಕಬ್ಬೆಯ ಗಂಡನ ಹೆಸರು ಚಟ್ಟ ಎಂದಿರಬೇಕು. ಬೆರೆ ಶಾಸನಗಳಲ್ಲಿ ಅಂತಹ ಹೆಸರುಗಳಿವೆ. ಉದಾಹರಣೆಗೆ ಚಟ್ಟಗಾವುಂಡ ಎಂಬ ಹೆಸರು ನೇರಿಲಗೆಯ ಶಾಸನದಲ್ಲಿದೆ [ಸೌ.ಇ.ಇ. ೧೮, ೧೫೧.೧೧೪೮]

೧೬. ಕೊಪಣ ಮಹಾತೀರ್ತ್ಥ: ಶ್ರವಣಬೆಳುಗೊಳದಷ್ಟೇ ಪ್ರಾಚೀನ ಜೈನ ಕ್ಷೇತ್ರ ಕೊಪಣ [ಕೊಪ್ಪಳ: ರಾಯಚೂರು ಜಿಲ್ಲೆ] ಶ್ರವಣಬೆಳಗೊಳ ಚಿಕ್ಕ ಬೆಟ್ಟವನ್ನು ಕಱ್ವಪ್ಪು ತೀರ್ತ್ಥವೆಂದೂ, ಕೊಪ್ಪಳದ ಕೊಪಣಗಿರಿಯನ್ನು ಕೊಪಣ ಮಹಾತೀರ್ತ್ಥವೆಂದೂ ಕರೆದಿರುವುದರ ಹಿನ್ನೆಲೆಯನ್ನು ಅರಿಯಬೇಕು. ಕೆಲ್ಲಂಗೇಱಿ ತೀರ್ತ್ಥವನ್ನು ಆದಿತೀರ್ತ್ಥವೆಂದೂ, ಕೊಪಣದ ತೀರ್ತ್ಥವನ್ನು ಮಹಾತೀರ್ತ್ಥವೆಂದೂ ಶಾಸನಗಳು ವಿಶೇಷಣಗಳನ್ನಿತ್ತು ನಿರ್ದೆಶಿಸಿರುವುದು ಇವುಗಳ ಚಾರಿತ್ರಿಕ ಮಹತ್ವವನ್ನು ಮಹಿಮೆಯನ್ನೂ ಮಹಿಮೆಯನ್ನೂ ಪ್ರಾಚೀನತೆಯನ್ನೂ ಧ್ವನಿಸುತ್ತವೆ.

೧. ಕೊಪಣತೀರ್ತ್ಥದಲ್ಲಿ [ಎ.ಕ.೧೧ (೧೯೭೩) ೨೨೦ (೪೭೫) ೧೦ ಶ.] ಹಲವಾರು ಬಸದಿಗಳಿದ್ದುವು [JISI (೧೯೫೭) ನಂ. ೨೯. ಪು. ೩೬೦]. ಕೆಲ್ಲಂಗೆರೆ, ಬಂಕಾಪುರ ಮೊದಲಾದ ಸ್ಥಳಗಳಲ್ಲಿ ಬಸದಿಗಳನ್ನು ಜೀರ್ಣೋದ್ಧಾರಿಸಿದ ಹುಳ್ಳ ಸೇನಾಪತಿ ಕೊಪಣ ಮಹಾತೀರ್ತ್ಥದಲ್ಲಿಯೂ ದಾನಾದಿಗಳಿಂದ ‘ಲೋಕಮೆಲ್ಲಂ ಪೊಗಳೆ’ ಜಿನ ಧರ್ಮಪ್ರಭಾವನೆ ಮಾಡಿದನು [ಎ.ಕ. ೨, ೪೭೬ (೩೪೫) ೧೧೫೯. ಪು. ೨೮೯]

೨. ಏಚಿರಾಜದಂಡನಾಯಕನು ಕೊಪಣಾ(ದ್ರಿ) ತೀರ್ತ್ಥದಲ್ಲೂ ಬೆಳುಗೊಳದಲ್ಲೂ ಇತರ ಎಡೆಗಳಲ್ಲೂ ಹಲವು ಬಸದಿಗಳನ್ನು ಮಾಡಿಸಿದನು; ಕಡೆಗೆ ಆತನು ಸಂನ್ಯಸನ ವಿಧಿಯಿಂದ ಮುಡಿಪಿದನು [ಅದೇ: ೫೩೨ (೩೯೪) ೧೨ ಶ. ಜಿನನಾಥಪುರ. ಪು. ೩೨೮. ಸಾಲು: ೨೭-೨೯]

೩. ಗಂಗವಾಡಿಯು ಕೊಪಣ (ತೀರ್ತ್ಥ)ವಾಯಿತೆ ಎಂಬಂತೆ ಗಂಗಣ ದಂಡನಾಥನು ಜಿನಾಲಯಗಳಿಂದ ತುಂಬಿಸಿದನು [ಎ.ಕ. ೯(೧೯೯೦) ಬೇ ೩೮೯. ೧೧೩೩. ಪು. ೩೫೩-೫೭] ಕೊಪಣದಲ್ಲಿ ನೂರಾರು ಬಸದಿಗಳಿದ್ದುವು.

೪. ರನ್ನನೇ ಮೊದಲಾದ ಕವಿಗಳ ಕಾವ್ಯಗಳೂ, ಹತ್ತಾರು ಶಾಸನಗಳೂ ಕೊಪಣ ತೀರ್ಥವನ್ನು ಪ್ರಶಂಸಿಸಿವೆ.

೫. ಕೊಪಣ ತೀರ್ಥವು ಪ್ರಾರಂಭದಿಂದಲೂ ಯಾಪನೀಯ ಸಂಘದ ಅತ್ಯಂತ ಪ್ರಭಾವೀ ಕೇಂದ್ರವಾಗಿತ್ತು. ೧೩ನೆಯ ಶತಮಾನದ ತರುವಾಯ ಕೊಪಣದ ಜೈನ ದೇವಾಲಯಗಳನ್ನೆಲ್ಲ ಶೈವರೂ, ವೀರಶೈವರೂ ಧ್ವಂಸ ಮಾಡಿದರು.

೬. ೧೯೯೩ ರಲ್ಲಿ ಹೊಸದಾಗಿ ಸುಮಾರು ೬೦ ಜೈನ (ನಿಸದಿ) ಶಾಸನಗಳು ಕೊಪಣದಲ್ಲಿ ದೊರೆತಿವೆ. ಕೊಪಣವು ಎಷ್ಟು ದೊಡ್ಡ ಜೈನ ಕ್ಷೇತ್ರವಾಗಿತ್ತೆಂಬುದಕ್ಕೆ ಸಾಕ್ಷಿಯಾಗಿವೆ.

೧೭. ಕೋಗಳಿ ತೀರ್ತ್ಥ (ಬಳ್ಳಾರಿ ಜಿ / ಹಡಗಲಿ ತಾ): ಶಾಸನಗಳಲ್ಲಿ ‘ಕೊಗಳಿ – ೫೦೦ನಾಡು’ ಎಂಬುದು ಪ್ರಸಿದ್ಧ ಆಡಳಿತ ವಿಭಾಗ; ಪ್ರಸಿದ್ಧನಗರ; ಜೈನರ ದೊಡ್ಡಕೇಂದ್ರ, ತೀರ್ತ್ಥಸ್ಥಳ. ‘ನೊಳಂಬವಾಡಿ ಮೂವತ್ತೆರಡು ಸಾವಿರ’ ದಲ್ಲಿ ವಿಲೀನವಾಗಿದ್ದ ಕೋಗಳಿಯು ಗಂಗರು, ರಾಷ್ಟ್ರಕೂಟರು, ಚಾಳುಕ್ಯರು ಮತ್ತು ಹೊಯ್ಸಳರ ಆಡಳಿತಗಳಲ್ಲಿ ಉದ್ದಕ್ಕೂ ಜೈನರ ಸಾಂಸ್ಕೃತಿಕ ಹಿರಿಮೆಯನ್ನು ಸಾರುತ್ತ ಬಂದ ಕೋಗಳಿತೀರ್ತ್ಥವನ್ನು ಕುರಿತು ಸುಮಾರು ೨೫ ಶಾಸನಗಳಲ್ಲಿ ವಿಪುಲವಾದ ಅಂಕಿ ಅಂಶಗಳು ಸಿಗುತ್ತವೆ:

೧. ಸೌ.ಇ.ಇ. ೧, ಶಾಸನ ಸಂಖ್ಯೆ ೧೮೯, ೧೯೩, ೧೯೫, ೨೧೫, ೨೩೪, ೨೪೫, ೨೬೫, ೨೬೭, ೨೭೩

೨. ಸೌ.ಇ.ಇ. ೯-೧, ೧೧೭, ೧೪೧, ೩೬೮ ಮೊದಲಾದ ಶಾಸನಗಳು

೩. ಬಾ.ಕ.ಇ. ೧-೧, ೨೨. ಕ್ರಿ.ಶ. ೮೯೭.

೪. ಕೋಗಳಿಯು ಬಸದಿಗಳ ಆರವೆಯಾಗಿತ್ತು ಇಲ್ಲಿನ ಒಂದು ಬಸದಿಯನ್ನು ಗಂಗರ ದುರ್ವಿನೀತ ರಾಜನು ಕಟ್ಟಿಸಿದ್ದು ಅದನ್ನು ೧೦೫೫ ರಲ್ಲಿ ಇಂದ್ರಕೀರ್ತಿಮುನಿ ಖಣ್ಡ ಸ್ಪುಟಿತವಾಗಿಸಿ ಜೀರ್ಣ್ನೋದ್ಧರಿಸಿದರು. [ಸೌ.ಇ.ಇ. ೯-೧, ೧೧೭.೧೦೫೫. ಕೊಗಳಿ. ಪು. ೯೨. ಸಾಲು:೧೫-೧೬]

೫. ಒಂದು ಶಾಸನದಲ್ಲಿ ಕೋಗಳಿಯು ಹನಸೋಗೆಯ ಪ್ರತಿಬದ್ಧವಾಗಿತ್ತೆಂದು ನಮೂದಾಗಿದೆ [ಅದೇ: ೩೬೦. ಸು. ೧೨೦೦. ಸೋಗಿ (ಬಳ್ಳಾರಿ ಜಿ/ ಹಡಗಲಿ ತಾ) ಪು.೩೭೭]

೬. ಕೋಗಳಿಯ ತೀರ್ತ್ಥದ ಚೆಂನಪಾರ್ಶ್ವದೇವರಿಗೆ ಶ್ರೀಮನ್ನಾಳ್ವಪ್ರಭು ದೇವಿ ಸೆಟ್ಟಿಯರು ಅಕ್ಷಯ ಭಂಡಾರವಾಗಿ ನಿತ್ಯಾಬಿಷೇಕಕ್ಕೆ ದಾನಕೊಟ್ಟರು [ಅದೇ: ೩೪೬.೧೨೭೫ – ೭೬. ಕೋಗಳಿ. ಪು. ೩೬೯. ಸಾಲು ೪-೫]

೭. ಇನ್ನೊಂದು ಶಾಸನದಲ್ಲಿ ಇದೇ ಶ್ರೀಮನ್ನಾಳ್ವ ಪ್ರಭು ಮಹದೇವ ಸೆಟ್ಟಿಯರು ಮತ್ತು ಇತರ ೩ ಜನ ಗಂಡಸರು – ಹೆಂಗಸರು ಕೋಗಳಿಯ ತೀರ್ತ್ಥದ ಚೆಂನ ಪಾರ್ಶ್ವದೇವರಿಗೆ ನಿತ್ಯ ಅಭಿಷೇಕಕ್ಕೆ ಕೊಟ್ಟ ನೂರು ಗದ್ಯಾಣ ದಾನದ ವಿವರವಿದೆ [ಅದೇ: ೩೪೭. ೧೨೭೬. ಪು. ೩೭೦. ಸಾಲು ೧-೪೦]

೧೮. ಗೊಂಮಟದೇವರ ತೀರ್ತ್ಥ: ಶ್ರವಣ ಬೆಳ್ಗೊಳ ದೊಡ್ಡ ಬೆಟ್ಟದ ಮೇಲಿನ ಶಾಸನದಲ್ಲಿ ‘ಶ್ರೀ ಗೊಂಮಟ ದೇವರ ತೀರ್ಥ’ ಎಂದಿದೆ [ಎ.ಕ.೨, ೩೭೪ (೨೬೮) ೧೧೧೮. ಪು. ೨೪೧. ಸಾಲು ೩೨] ಕಟವಪ್ರಗಿರಿ, ಕಱ್ಪಪ್ಪು. ತೀರ್ತ್ಥ, ಕೞ್ವಪ್ಪು ತೀರ್ತ್ಥ, ಗೊಂಮಟದೇವರ ತೀರ್ತ್ಥ, ತೀರ್ಥಗಿರಿ, ಬೆಳ್ಗೊಳ ತೀರ್ತ್ಥ, ರಿಷಿಗಿರಿ – ಇವೆಲ್ಲವೂ ಶ್ರವಣಬೆಳ್ಗೊಳ (ಚಿಕ್ಕಬೆಟ್ಟ) ವನ್ನು ಸೂಚಿಸುವ ಪರ್ಯಾಯ ಶಬ್ದಗಳು.

೧೯. ತಿಪ್ಪೂರು ತೀರ್ತ್ಥ: ಮಂಡ್ಯಜಿಲ್ಲೆ ಮದ್ದೂರು ತಾಲ್ಲೂಕಿನಲ್ಲಿರುವ ಅರೆತಿಪ್ಪೂರು ಒಂದು ಪ್ರಾಚೀನವಾದ ಜೈನ ತೀರ್ತ್ಥಕ್ಷೇತ್ರ. ಕ್ರಿ.ಶ. ೯ ರಿಂದ ೧೭ನೆಯ ಶ.ದ ವರೆಗೆ ಹೆಸರುವಾಸಿಯಾದ ಈ ತೀರ್ಥಸ್ಥಳುವು ಕೆಳಲೆ ನಾಡಿಗೆ ಸೇರಿತ್ತು: ಎರಡನೆಯ ಶ್ರವಣಬೆಳುಗೊಳ ಎನಿಸಿತ್ತು:

ಎ.ಕ.೭ (೧೯೭೯) ೧೦೬ (೧೧೧ ಮವ ೪೮) ೧೭೦೦ ಹಾಗಲ ಹಳ್ಳಿ. ಪು. ೩೧೯
ಅದೇ: ೧೦೨. ೧೩೯೨ ಹಾಗಲಹಳ್ಳಿ ಪು. ೩೧೭. ಸಾಲು ೧೬
ಅದೇ: ಮದ್ದೂರು ೫೪ (೧೧೧ ಮನ ೩೧) ೧೧೧೭ ತಿಪ್ಪೂರು. ಪು. ೨೮೨ – ೮೪
ಅದೇ: ಮದ್ದೂರು ೧೧೫.೧೧೯೭. ಬೊಪ್ಪಸಂದ್ರ. ಪು. ೩೨೬. ಸಾಲು ೧೧-೧೩.
ಅದೇ: ಮದ್ದೂರು ೫೨ (ರಿ ೧೯೪೭ ರಿಂದ ೫೬-೨೦) ಸು. ೧೧೭೦. ಪು. ೨೮೧.

ಮುಂತಾದ ಹತ್ತಾರು ಶಾಸನಗಳಲ್ಲಿ ತೀರ್ತ್ಥದ ಮಹಿಮೆಯನ್ನು ಕಾಣುತ್ತೇವೆ. ಇದರ ನೆರೆಹೊರೆಯ ಹಾಗಲಹಳ್ಳಿ, ಅರುವನ ಹಳ್ಳಿಗಳಿಗೆ ಇದ್ದ ಪ್ರಾಚೀನ ಹೆಸರುಗಳು ತಿಪ್ಪೂರು ತೀರ್ಥದಹಳ್ಳಿ ಮತ್ತು ಅರುಹನ ಹಳ್ಳಿ ಎಂದು [ಅದೇ: ಮದ್ದೂರು ೮೯,೯೪ ಇತ್ಯಾದಿ ಶಾಸನಗಳು]. ಜತೆಗೆ ಈ ಸುತ್ತಲಿನ ಊರುಗಳಲ್ಲಿ ಆಸ್ತಿಯ ವಿಭಾಗ ಮಾಡಿ ಸಾಕ್ಷಿಗಳು ಹಾಕುವಾಗ ಊರ ದೈವಗಳ ಹೆಸರುಗಳನ್ನು ‘ಶ್ರೀವೀತರಾಗ ವೀತರಾಗ’ ಎಂದು ಜೈನ ತೀರ್ಥಂಕರ ಸ್ಮರಣೆಯೊಂದಿಗೆ ಹೇಳಿರುವುದು ವಿಶೇಷ ಗಮನಿಕೆಗೆ ತಕ್ಕುದಾಗಿದೆ [ಅದೇ: ಮದ್ದೂರು ೮೯ (೧೧೧ ಮವ ೨೦) ೧೩೮೮. ಪು. ೩೦೭].

ಕ್ರಿ.ಶ. ೮ನೆಯ ಶತಮಾನದಿಂದ ತಿಪ್ಪೂರು ತೀರ್ತ್ಥ ಕನಕಗಿರಿತೀರ್ತ್ಥ ಮಣಲೆಯರ ಮನೆತನದ ಕುಲದೈವವಾಗಿತ್ತು [ ನಾಗರಾಜಯ್ಯ, ಹಂಪ., ‘ಶಾಸನಗಳಲ್ಲಿ ಎರಡು ವಂಶಗಳು’ (೧೯೯೫)]. ಹೊಯ್ಸಳರಾಜ ವಿಷ್ಣುವರ್ಧನನ ಮಹಾದಂಡನಾಯಕ ಗಂಗರಾಜನು ಚೋಳರ ಅದಿಯಮನನ್ನು ಸೋಲಿಸಿದನು. ಅದಕ್ಕೆ ಪ್ರತಿಯಾಗಿ ಗಂಗರಾಜನು ಈ ತಿಪ್ಪೂರು ತೀರ್ತ್ಥದ ವೃತ್ತಿಯನ್ನು ವಿಶ್ಣುವರ್ಧನನಿಂದ ಬೇಡಿಪಡೆದನು. ಇದನ್ನು ಗಂಗರಾಜನು ಅಭಿವೃದ್ಧಿ ಪಡಿಸಿ ತನ್ನ ಗುರು “ಮೂಲ ಸಂಘ ಕ್ರಾಣೂರುಗಣ ತಿಂತ್ರಿಣಿಕಗಚ್ಛದ ಮೇಘಚಂದ್ರ ಸಿದ್ಧಾಂತ ದೇವರ ಕಾಲಂ ಕರ್ಚ್ಚಿ ಧಾರಾಪೂರ್ಬ್ಬಕಂ ಮಾಡಿ” ದತ್ತಿ ಬಿಟ್ಟು ಕೊಟ್ಟನು [ಅದೇ : ಮದ್ದೂರು ೫೪ (೧೧೧ ಮವ ೩೧) ೧೧೧೭ ತಿಪ್ಪೂರು. ಪು. ೨೮೨ – ೮೪]. ೧೨೮೪ ರಲ್ಲಿ ಹೊಯ್ಸಳ ವೀರ ನರಸಿಂಹನಿಂದ ಮಹಾಪ್ರಧಾನ ಪೆರುಮಾಳ ದಣ್ಣಾಯಕನು ತಾಮ್ರಶಾಸನ ಮೂಲಕ ‘ಬೆಟ್ಟದ ಕೋಟೆ ಬಿಲ್ಲ ಬೆಳಗುಂದ ಮತ್ತು ತಿಪ್ಪೂರು ಇನ್ತೀ ಮೂಱು ಸ್ಥಳಂಗಳನೂ ಯೆಂದೆಂದಿಂಗೆವೂ ತಾವು ವೊಡೆಯರಾಗಿ ನಡಸುವಂತಾಗಿ’ ಪಡೆದ ಮೇಲೆ ತಿಪ್ಪೂರತೀರ್ತ್ಥದ ಜೈನತ್ವದ ಕುರುಹುಗಳನ್ನು ನಾಶಪಡಿಸಲಾಯಿತು. [ಅದೇ: ನಾಮಂ ೭೩ (೪ ನಾಮಂ ೩೮) ೧೩೮೪. ಬೆಳ್ಳೂರು. ಪು. ೬೨]

೨೦. ದಾನವುಲಪಾಡು ತೀರ್ತ್ಥ [ಎ.ಆರ್.ಎಸ್.ಐ.ಇ. ೧೯೦೫-೦೬. ಪು. ೧೨೦-೨೭] ಈಗಿನ ಆಂಧ್ರ ಪ್ರದೇಶದ ಕಡಪಾಜಿಲ್ಲೆಯ ಜಮ್ಮಲಮಡುಗು ತಾಲ್ಲುಕಿಗೆ ಸೇರಿದ ಕುರುಮರ್ರಿ ದಾನವಿಲಪಾಡು ತೀರ್ತ್ಥವು, ರಾಷ್ಟ್ರಕೂಟರ ಮುಮ್ಮಡಿ ಇಂದ್ರನ ಆಳಿಕೆಯ (೯೧೪-೨೯) ವೇಳೆಗಾಗಲೇ ತೀರ್ತ್ಥವೆನಿಸಿ ಖ್ಯಾತಿಪಡೆದಿತ್ತು. ಇಂದ್ರರಾಜನು ಶಾಂತಿನಾಥ ಜಿನರಿಗೆ ಕಲ್ಲಿನ ಪೀಠ ಮಾಡಿಸಿದನು. ಸುಪ್ರಸಿದ್ಧನಾದ ಶ್ರೀವಿಜಯ ದಂಡಾಧೀಶನು ದಾನಪುಲಪಾಡು ತೀರ್ತ್ಥಕ್ಕೆ ಸೇರಿದವನು. ಇಲ್ಲಿ ಶಾಂತಿನಾಥ ಜಿನಾಲಯ ಮತ್ತು ಪಾರ್ಶ್ವನಾಥ ಜಿನಾಲಯ – ಎಂಬೆರಡು ಬಸದಿಗಳಲ್ಲದೆ ಇನ್ನೂ ಬೇರೆ ಜಿನಮಂದಿರ ಗಳಿದ್ದುವು. ದಾನವುಲಪಾಡು ಸಲ್ಲೇಖನ ಸಮಾಧಿಮರಣಗಳ ನೆಲೆಬೀಡು. ಶೂದ್ರಕ ಮತ್ತು ಹರಿವಂಶ ಮಹಾಕಾವ್ಯಗಳ ಕವಿ ಅದಿಗುಣವರ್ಮನು ರಚಿಸಿದ ಶಾಸನವೂ ಇಲ್ಲಿದೆ. [ಎ.ಇ. ೧೦, ೧೫೦.: ಐ.ಎ.ಪಿ. ಕಡಪ ೧, ೧೬೮, ೯೧೫] ಪ್ರಾಚೀನವಾದ ಪಾಳು ಬಸದಿ ಇಂದ್ರರಾಜನ ಕಾಲದ್ದು, ಪ್ರಾಯಃ ಶ್ರೀವಿಜಯ ದಂಡನಾಯಕ ಕಟ್ಟಿಸಿದ್ದು [ಸೌ.ಇ.ಇ. ೧೦, ೨೮.೯೧೮].

೨೧. ಪೊಸವೊರ ತೀರ್ತ್ಥ: ಹೊಸೂರು ತೀರ್ತ್ಥ; ಧಾರವಾಡ ಜಿಲ್ಲೆ ಗದಗ ತಾಲ್ಲೂಕು ಹಲವುಜೈನ ಕೇಂದ್ರ- ಕ್ಷೇತ್ರಗಳ ಕರ್ಮಭೂಮಿ : ಮುಳ್ಗುಂದ, ಲಕ್ಕುಂಡಿ, ಸೊರಟೂರು, ಹೊಸೂರು ಮೊದಲಾದುವನ್ನು ಹೆಸರಿಸಬಹುದು. ಸಕಲಗುನ ಸಂಪೂರ್ಣನೂ, ಕಲಿಕಾಲ ಕರ್ಣನೂ, ಅಮಳ ಚರಿತ್ರನೂ ಆದ ಆಯ್ಚ ಗಾವುಂಡನು ಪೊಸವೂರ ತೀರ್ತ್ಥದಲ್ಲಿದ್ದನು; ಅದು ನಡುನಾಡ ತೀರ್ತ್ಥವೆನಿ ಸಿತ್ತು. ಮೊರಕ ಕುಳದ ಆಯ್ಚಗಾವುಣ್ಡನ ಕುಲವಧು ಕಂಚಿಯಬ್ಬೆಯು ಸೂಂಡಿಯ ಮದನಾಗ ಸೆಟ್ಟಿಯ ಮಗಳು. ಈ ದಂಪತಿಗಳ ಮಕ್ಕಳು ಮೊರಕ ಕುಳತಿಳಕರೆನಿಸಿದ್ದರು. ಆಯ್ಚಗಾವುಂಡನು ತನ್ನ ಹೆಂಡತಿ ಕಂಚಿಕಬ್ಬೆ ಗಾವುಂಡಿಗೆ ಪರೋಕ್ಷ ವಿನಯವಾಗಿ ಬಸದಿಯನ್ನು ಪೊಸವೂರ ತೀರ್ತ್ಥದಲ್ಲಿ ಮಾಡಿಸಿದನು. ಅತನು ತನ್ನ ಹೆಂಡತಿಯ ಹೆಸರಲ್ಲಿ ಮಾಡಿಸಿದ ಹೊಸೂರ ಬಸದಿಯನ್ನು ತನ್ನ ಗುರು ನಾಗಚಂದ್ರಸಿದ್ಧಾಂತಿಯವರಿಗೆ ಕಾಲು ತೊಳೆದು ಸಮರ್ಪಿಸಿದನು; ಪೂಜೆಗಾಗಿ ಅಡಕೆ ತೋಟವನ್ನೂ ಬಿಟ್ಟು ಕೊಟ್ಟನು [ಸೌ.ಇ.ಇ.೧೦-೧, ೬೫. ೧೦೨೮. ಹೊಸೂರು. ಪು. ೫೫-೫೭]

೨೨. ಬಂಕಾಪುರ ತೀರ್ತ್ಥ: ಧಾರವಾಡ ಜಿಲ್ಲೆ ಶಿಗ್ಗಾಂವಿ ತಾಲ್ಲೂಕು ಬಂಕಾಪುರ ತೀರ್ತ್ಥವು ಪ್ರಾಚೀನವಾದ ಪವಿತ್ರ ಜೈನ ಕೇಂದ್ರ. ಮಹಾಪುರಾಣದ ಎರಡನೆಯ ಭಾಗವಾದ ಉತ್ತರ ಪುರಾಣವನ್ನು ಆಚಾರ್ಯಗುಣಭದ್ರರು ಬರೆದು ಪೂರೈಸಿದ್ದು ಇದೇ ತೀರ್ತ್ಥಸ್ಥಳದಲ್ಲಿ. ಚಲ್ಲಕೇತನ ಮನೆತನ ದವರಂತೂ ಬಂಕಾಪುರವನ್ನು ಪ್ರಭಾವೀ ಜೈನಕೇಂದ್ರವಾಗಿ ಬೆಳೆಸಿದರು. ಬಂಕೇಯನ ಮಗಲೋಕಾದಿತ್ಯನು (ಲೋಕಟೆ, ಲೋಕಡೆ, ಲೊಕಯ್ಯ) ಬನವಾಸಿ ೧೨೦೦೦ ಆಳುವಾಗ ಬಂಕಾಪುರವೇ ಪ್ರಧಾನವಾಗಿತ್ತು. ಈತನೂ ಈತನ ಮೊಮ್ಮಗ ಇಮ್ಮಡಿ ಕಲಿವಿಟ್ಟು ಮತ್ತು ಮಗ ಒಂದನೆಯ ಕಲಿವಿಟ್ಟರೂ ಬಂಕಾಪುರವನ್ನು ಜಿನವಾಡಿಯಾಇಸಿದರು. ಈ ಎಲ್ಲ ವಿಚಾರಗಳು ವಿಸ್ತಾರವಾಗಿ ಶಾಸನಗಳಲ್ಲಿ ವರ್ಣಿತವಾಗಿವೆ. ಗಂಗಚೂಡಾಮಣಿ ನೊಳಂಬಕುಳಾಂತಕ ಮಾರಸಿಂಹನು ‘ಬಂಕಾಪುರದೊಳಜಿತಸೇನ ಭಟ್ಟಾರಕರ ಶ್ರೀಪಾದಸನ್ನಿಧಿಯೊಳಾರಾಧನಾ ವಿಧಿಯಂ ಮೂಱು ದೆವಸಂ ನೋನ್ತು ಸಮಾಧಿಯಂ ಸಾಧಿಸಿದಂ’ [ಎ.ಕ. ೨, ೬೪ (೫೯) ೧೦ ಶ. ಪು. ೨೩. ಸಾಲು ೧೦೯ – ೧೧೧] ಹುಳ್ಳರಾಜ ದಂಡಾಧಿಪನು ಬಂಕಾಪುರದಲ್ಲಿ ನಿಪ್ಪಟ ಜೀರ್ಣವಾಗಿದ್ದ ಉಪ್ಪಟಾಯ್ತನ ಮಹಾ ಜಿನೇಂದ್ರಾಲಯವನ್ನು ನಿಪ್ಪೊಸತು ಮಾಡಿದನು [ಅದೇ: ೪೭೬ (೩೪೫) ೧೧೫೯. ಪು. ೨೮೯. ಸಾಲು: ೪೦ – ೪೧] ಮತ್ತೆ ಬಂಕಾಪುರದಲ್ಲಿಯೆ – [ಅದೇ: ಸಾಲು ೪೧-೪೩]

            ಕಲಿತನಮುಂ ವಿಟ್ಟತ್ವಮುಮನುಳ್ವವನಾದಿಯೊಳೊರ್ವ್ವನುರ್ವ್ವಿಯೊಳ್
ಕಲಿವಿಟನೆಂಬನಾತನ ಜಿನಾಲಯಮಂ ನೆೞಿ ಜೀರ್ಣ್ನಮಾದುದಂ
ಕಲಿಸಲೆ ದಾನದೊಳ್ಪರಮಸೌಖ್ಯರ ಮಾರತಿಯೊಳ್ವಿಟಂ ವಿನಿ
ಶ್ಚಲಮೆನಿಸಿರ್ದ್ದ ಹುಳ್ಳನದನೆತ್ತಿಸಿದಂ ರಜತಾದ್ರಿ ತುಂಗಮಂ
||

ಇತರ ಶಾಸನಗಳಲ್ಲಿ ಮುಖ್ಯವಾದುವು [ಎ.ಕ. ೭, ಶಿಕಾರಿಪುರ. ೨೧೯.೯೧೮. ಅದೇ: ಶಿಕಾರಿಪುರ ೨೨೫.೧೨೦೩-೦೪. ಪು. ೩೦೨.: ಎ.ಕ. ೮-೨, ಸೊರಬ ೨೩೩.೧೧೩೯]

೨೩. ಬಂದಳಿಕೆ ತೀರ್ಥ (ಬನ್ದನಿಕೆ, ಬಂದಣಿಕೆ, ಬಂದಳಿಗೆ, ಬಂದಣಿಗೆ): ಕರ್ನಾಟಕದ ಪ್ರಾಚೀನ ಜೈನ ತೀರ್ಥ ಕ್ಷೇತ್ರಗಳಲ್ಲಿ ಬಂದಳಿಕೆ ತೀರ್ಥವೂ ಒಂದು. ಕ್ರಿ.ಶ. ಹತ್ತನೆಯ ಶತಮಾನದ ವೇಳೆಗೆ ಇದು ಅಸ್ತಿತ್ವದಲ್ಲಿತ್ತು. ಜಕ್ಕಿಯಬ್ಬೆ ಮತ್ತು ನಾಗಾರ್ಜುನ ನಾಱ್ಗೂವುಂಡರು ನಾಗರ ಖಂಡ – ೨೦ ಆಳುತ್ತಿದ್ದರು. ನಾಗಾರ್ಜುನನು ಅತೀತನಾದನು. ಜಕ್ಕಿಯಬ್ಬೆ ಕೆಲವು ಕಾಲ ನಾಱ್ಗೂವುಂಡತನ ನಡೆಸಿದಳು. ಕಡೆಗೆ ಕ್ರಿ.ಶ. ೯೧೨ ರಲ್ಲಿ ಬಂದನಿಕೆಯ ತೀರ್ತ್ಥದಲ್ಲಿ ಮುಡಿಪಿದಳು [ಎ.ಕ.೭, ಶಿಕಾರಿಪುರ ೨೧೯. ೯೧೨. ಬಂದಲಿಕೆ. ಪು. ೨೯೮. ಸಾಲು ೨೨-೨೬] ಬಂಕರಸನ (ಬಂಕೇಯ) ಮಗನಾದ ಲೋಕಾದಿತ್ಯನು (ಲೋಕಡೆ, ಲೋಕಯ್ಯ) ಬಂದಳಿಕೆಯಲ್ಲಿ ಜಿನಾಲಯ ಮಾಡಿಸಿದನು. ಉದ್ಧರೆಯ ಕನಕ ಜಿನಾಲಯವೂ [ಎ.ಕ. ೭-೨, ಸೊರಬ. ೨೩೩.೧೧೩೯. ವುದ್ರಿ-ಉದ್ಧರೆ-ಉದ್ರಿ (ಶಿವಮೊಗ್ಗ ಜಿ/ ಸೊರಬ ತಾ) ಆನವಟ್ಟಿ ಹೋಬಳಿ. ಪು. ೯೮. ಸಾಲಿ: ೫೯] ಕುಪ್ಪಟೂರಿನ ಪಾರ್ಶ್ವನಾಥ ತೀರ್ಥಂಕರ ಬ್ರಹ್ಮಜಿನಾಲಯವೂ [ಅದೇ: ಸೊರಬ, ೨೬೨.೧೦೭೫. ಪು. ೧೧೦] ಬನ್ದಣಿಕೆಯ ತೀರ್ತ್ಥದ ಪ್ರತಿಬದ್ಧ (ಅಧೀನ) ಬಸದಿಗಳಾಗಿದ್ದವು.

ಶ್ರೀಮೂಲಸಂಘ ಕುಂದಕುಂದಾನ್ವಯ ಕಾಣೂರು ಗಣ ತಿಂತ್ರಿಣಿ (ಕ) ಚ್ಛದ ಆಚಾರ್ಯ ಪರಂಪರೆಯು ಈ ತೀರ್ಥದ ಮಹಾಮಂಡಲಾಚಾರ್ಯರಾಗಿ ಮಾರ್ಗ ದರ್ಶನ ಮಾಡಿದರು [ಎ.ಕ. ೮-೨, ಸೊರಬ ೧೪೦ (ಕ್ರಿ.ಶ. ೧೧೯೮), ೧\೨೬೨ (ಕ್ರಿ.ಶ. ೧೦೭೭), ೨೩೩ (೧೧೩೯) ೩೪೫ (೧೧೭೧) ಇತ್ಯಾದಿ ಶಾಸನಗಳು]. ರಾಮಣಂ ದಿಬ್ರತಿಪತಿ (೧೦೫೦), ಪದ್ಮನಂದಿ ಬ್ರತಿಪತಿ (೧೦೭೭), ಮುನಿಚಂದ್ರ ಸಿದ್ಧಾಂತಿದೇವ (೧೧೦೦), ಭಾನುಕೀರ್ತಿ ಸಿದ್ಧಾಂತಿದೇವ (೧೧೨೦) ಕುಲಭೂಷಣ ಬ್ರತಿತ್ರೈವಿದ್ಯ ವಿದ್ಯಾದರ (೧೧೫೦), ಸಕಳ ಚಂದ್ರಭಟ್ಟಾರಕ (೧೧೭೫) ಮೊದಲಾದ ದೊಡ್ಡ – ಸತತ ಆಚಾರ್ಯ ಪರಂಪರೆಯನ್ನು ಶಾಸನಗಳು ಸ್ತುತಿಸಿವೆ: ಅನ್ತಾ ಬಂದಿಣಿಕಾತೀರ್ತ್ಥಾದಿ ಸಕಳ ಚೈತ್ಯಾಲಯಕ್ಕಾಚಾರ್ಯ್ಯರುಂ ಮಂಡಳಾಚಾರ್ಯ್ಯರು ಮೆನಿಸಿದ ಪದ್ಮನನ್ದಿ ಸಿದ್ದಾಂತಿ [ಅದೇ : ಸೊರಬ. ೨೬೨.೧೦೭೫. ಕುಪ್ಪಟೂರು. ಸಾಲು : ೨೭-೩೧] ಮತ್ತು ಭಾನುಕೀರ್ತಿ ಸಿದ್ಧಾಂತಿ ದೇವ [ ಅದೇ: ಸಾಗರ ೧೫೯.೧೧೫೯. ಹೆರಕೆರೆ. ಪು. ೩೩೧-೩೩: ಅದೇ, ಸೊರಬ. ೨೩೩.೧೧೩೯ ಇತ್ಯಾದಿ] ಇವರು ಬಂದಣಿಕೆ ತೀರ್ಥವನ್ನು ಅತ್ಯಂತ ಜನಪ್ರಿಯವಾಗಿಸಿದರು ಮತ್ತು ರಾಜಕೀಯ ವಲಯದಲ್ಲಿ ತುಂಬ ಪ್ಪಭಾವ ಶಾಲಿಗಳಾಗಿದ್ದರು.

೨೪. ಬಿಂಡಿಗೆನವಿಲೆ ತೀರ್ತ್ಥ: ಮಂಡ್ಯಜಿಲ್ಲೆ ನಾಗಮಂಗಲ ತಾಲ್ಲೂಕಿನ ಬಿಂಡಿಗೆ ನವಿಲೆ ತೀರ್ತ್ಥವೂ ಇಲ್ಲಿನ ಪಾರ್ಶ್ವನಾಥ ಬಸದಿಯೂ ೧೧-೧೨ ನೆಯ ಶತಮಾನಗಳಲ್ಲಿ ವಿಖ್ಯಾತವಾಗಿತ್ತು [ಎ.ಕ. ೭ (೧೯೭೯) ನಾಮಂ ೨೬ (೪ ನಾಮಂ ೨೦) ೧೧೬೮. ಕಂಬದಹಳ್ಳಿ ಪಿ. ೧೭] ಮಹಾಮಂಡಳೇಶ್ವರ ಹೊಯ್ಸಳದೇವನ ಮಹಾ ಸಾಮಂರಾಧಿಪತಿ ಶ್ರೀಮನ್ಮಹಾಪ್ರಧಾನಿ ದ್ರೋಹ ಘರಟ್ಟ ಪಿರಿಯ ದಂಡನಾಯಕ ಗಂಗಾರಜನು ತಲಕಾದನ್ನು ಗೆದ್ದು ಕೊಟ್ಟಾಗ ‘ಮೆಚ್ಚಿದೆಂ ಬೇಡಿಕೊಳ್ಳೆನೆ ಶ್ರೀ ಬಿಂಡಿಗೆ ನವಿಲೆಯ ತೀರ್ತ್ಥಕ್ಕೆ ತಳವೃತ್ತಿಯಂ ಬೇಡೆ ಶ್ರೀ ವಿಷ್ಣುವರ್ದ್ಧನ ಹೊಯ್ಸಳದೇವರು ಕಾರುಣ್ಯಂಗೆಯ್ದು’ ಕೊಟ್ಟನು: ಆಗ ಗಂಗರಾಜನು ಶ್ರೀಮೂಲಸಂಘದ ದೇಸಿಗಗಣದ ಪುಸ್ಥಕ ಗಚ್ಚದ ಕೊಂಡುಕುಂದಾನ್ವಯದ ಸುಭಚಂದ್ರ ಸಿದ್ಧಾನ್ತದೇವರ ಕಾಲಂಹರ್ಚ್ಚಿಧಾರಾ ಪೂರ್ವಕಂ ಮಾಡಿ ಬಿಟ್ಟ ದತ್ತಿ. [ಅದೇ : ನಾಮಂ ೩೩. ೧೧೧೮-೧೯. ಪು. ೨೨. ಸಾಲು : ೫೧-೬೦] ಇದರ ಸಂಬಂಧವಾಗಿ ಹೆಚ್ಚಿನ ವಿವರಗಳಿಗೆ ‘ಕಂಬದಹಳ್ಳಿ ತೀರ್ಥ’ ವನ್ನೂ ಸಹ ನೋಡಬಹುದು.

೨೫. ಬೆಳ್ಗೊಳ ತೀರ್ತ್ಥ (ಕೞ್ವಪ್ಪು ತೀರ್ತ್ಥ, ಗೊಮ್ಮಟದೇವರ ತೀರ್ತ್ಥ): ಕರ್ನಾಟಕದ ಪ್ರಾಚೀನತಮ ಜೈನ ತೀರ್ತ್ಥ ಕ್ಷೇತ್ರಗಳೆಂದರೆ ಶ್ರವಣ ಬೆಳುಗೊಳ ಮತ್ತು ಕೊಪಣಾಚಲ. ಇವೆರಡೂ ಕ್ರಿ.ಪೂ. ದಿಂದಲೂ ಪ್ರಸಿದ್ಧಿ ಪಡೆದ ಎಡೆಗಳು. ಕೞ್ವಪ್ಪು ತೀರ್ತ್ಥವು ಶ್ರವಣ ಬೆಳುಗೊಳದ ಚಿಕ್ಕಬೆಟ್ಟ, ಗೊಮ್ಮಟ ದೇವರ ತೀರ್ಥವೆಂದರೆ ಅಲ್ಲಿನ ದೊಡ್ಡ ಬೆಟ್ಟ. ಬೆಳ್ಗೊಳ ತೀರ್ತ್ಥವೆಂದರೆ ಎರಡು ಬೆಟ್ಟಗಳ ಕೆಳಗಿನ ಊರು. ಭಂಡಾರಿ ಹುಳ್ಳಚಮೂಪನು. ಜಗನ್ನುತವಾದ ’ಈ ವರ ಬೆಳ್ಗುಳ ತೀರ್ತ್ಥ ದೊಳ್ ಚತುರ್ವ್ವಿಂ ಶತೀ ತೀರ್ತ್ಥ ಕೃನ್ನಿಳಯಮಂ ನೆಱಿ ಮಾಡಿಸಿದಂ ದಲ್ತಿನಿದಂ’ [ಎ.ಕ.೨, ೪೭೬ (೩೪೫) ೧೧೫೯, ಪು. ೨೯೦. ಸಾಲು : ೪೯-೫೦.] ಸಮ್ಯಕ್ವ್ತ ಚೂಡಾಮಣಿಯೂ ಆಹಾರ ಅಭಯ ಭೈಷಜ್ಯ ಶಾಸ್ತ್ರದಾನ ವಿನೋದೆಯೂ ಆದ ವಿಷ್ಣುವರ್ಧನ ಪೊಯ್ಸಳ ದೇವರ ಪಿರಿಯರಸಿ ಪಟ್ಟಮಾಹಾದೇವಿ ಶಾಂತಲದೇವಿಯು ’ಶ್ರೀ ಬೆಳ್ಗೊಳ ತೀರ್ತ್ಥದೊಳ್ ಸವತಿ ಗಂಧವಾರಣ ಜಿನಾಲಯಮಂ ಮಾಡಿಸಿ…. ಮೇಘ ಚಂದ್ರ ತ್ರೈವಿದ್ಯದೇವರ ಶಿಷ್ಯರಪ್ಪ ಪ್ರಭಾಚಂದ್ರ ಸಿದ್ಧಾನ್ತದೇವರ್ಗ್ಗೆ ಪಾದ ಪ್ರಕ್ಷಾಳನಂ ಮಾಡಿ ಸರ್ಬ್ಬ ಬಾಧಾ ಪರಿಹಾರವಾಗಿ ಬಿಟ್ಟ ಗತ್ತಿ’ ಯನ್ನು ಶಾಸನ ಸಾರುತ್ತಿದೆ [ ಅದೇ: ೧೭೬ (೧೪೩) ೧೧೨೩. ಪು. ೧೩೪-೩೫ ಸಾಲು: ೨೦೩-೦೬ ಮತ್ತು ೨೧೫-೧೭] ಈ ವಿಷಯವನ್ನು ಇನ್ನೊಂದು ಶಾಸನವೂ ಪುಷ್ಟೀಕರಿಸಿ ಸ್ಥಿರೀಕರಿಸಿದೆ [ಅದೇ: ೧೬೨ (೧೩೨) ೧೧೨೩. ಪು. ೧೦೫. ಸಾಲು: ೩೯-೪೬]. ಮಹಾನ್ ದಂಡನಾಯಕ ಗಂಗರಾಜನ ತಾಯಿ ಪೋಚಾಂಬಿಕೆಯು ‘ಬೆಳ್ಗೊಳದ ತೀರ್ತ್ಥಂ ಮೊದಲಾಗನೇಕ ತೀರ್ತ್ಥಗಳೊಳು ಪಲವುಂ ಚೈತ್ಯಾಲಯಂಗಳ ಮಾಡಿಸಿ ಮಹಾದಾನಗೆಯ್ದು’ ದನ್ನು ಒಂದು ಶಾಸನ ಮನೂದಿಸಿದೆ [ಅದೇ: ೧೩೬ (೧೧೮) ೧೧೨೦. ಪು. ೪೮. ಸಾಲು: ೨೭-೨೯].

೨೬. ಬೋಧನ ತೀರ್ತ್ಥ [ಪೋದನ ತೀರ್ತ್ಥ: ಆಂಧ್ರದ ನಿಜಾಮಾಬಾದು ಜೆಲ್ಲೆ] ರಾಷ್ಟ್ರಕೂಟರ ಮುಮ್ಮಡಿ ಇಂದ್ರನ ಆಳಿಕೆಗೂ (೯೧೪-೨೭) ಮುನ್ನ ಬೋಧನವು ಜೈನ ತೀರ್ತ್ಥ ಕ್ಷೇತ್ರವಾಗಿತ್ತು. ಜೈನ ಆಗಮ ಸಾಹಿತ್ಯದಲ್ಲೂ, ಪುರಾಣಗಳಲ್ಲೂ ಇದು ಆದಿಜಿನ ತನಯ ಬಾಹುಬಲಿಯ ರಾಜಧಾನಿಯೆಂದು, ಪೌದನಪುರವೆಂಬ ಹೆಸರಿನಿಂದ ಮಾನ್ಯತೆ ಹೊಂದಿದೆ; ಬಾಹುಬಲಿಯ ರಾಜಧಾನಿ ತಕ್ಷಶಿಲೆಯೆಂದೂ ಹೇಳಿದೆ. ಬಾಹುಬಲಿಯ ಅಣ್ಣ ಭರತನು ಇಲ್ಲಿ ಧನಸ್ಸು ಎತ್ತರದ ಬಾಹುಬಲಿ ಮೂರ್ತಿಯನ್ನು ಮಾಡಿಸಿದನೆಂದು (ಕವಿ ಬೊಪ್ಪಣ ಪಂಡಿತ ವಿರಚಿತ) ಶ್ರಾವಣ ಬೆಳುಗೊಳ ಶಾಸನದಲ್ಲಿದೆ [ಎ.ಕ.೨, ೩೩೬ (೨೩೪) ೧೨ ಶ. ಪು. ೧೮೬. ಸಾಲು: ೬-೮]

೨೭. ಮಂಡಳಿ(ಲಿ) ತೀರ್ತ್ಥ: ಶಿವಮೊಗ್ಗ ನಗರಕೆ ಸಮೀಪದಲ್ಲಿಯೇ ಆಗಿಹೋದ ಬಹುದೊಡ್ಡ ಜೈನ ತೀರ್ತ್ಥ ಕ್ಷೇತ್ರವಿಸು. ಮೂಲಸಂಘ ಕಾನೂರುಗಣ ತಿಂತ್ರಿಣಿ ಗಚ್ಛದ ಆಚಾರ್ಯಪರಂಪರೆಗೆ ಸೇರಿದ ಈ ಮಂಡಲಿ ತೀರ್ಥವು ಗಂಗರ ಕಾಲದಿಂದಲೂ ಪ್ರಸಿದ್ಧಿ ಪಡೆದಿದೆ. ಒಬ್ಬರಾದ ಮೇಲೆ ಒಬ್ಬರಂತೆ ನಿರಂತರವಾಗಿ ಸುಮಾರು ಒಂದು ಸಾವಿರ ವರ್ಷ ಮಂಡಳಿ ತೀರ್ತ್ಥವನ್ನು, ಅದರ ಹಿರಿಮೆಯನ್ನು ಗಂಗವಂಶಜರು ಮುಂದುವರೆಸಿದ್ದಾರೆ. ೧೩ ನೆಯ ಶ. ದ ತರುವಾಯ ಅದು ತನ್ನ ಗತವೈಭವವನ್ನು ಉಳಿಸಿಕೊಳ್ಳಲು ಆಗಲಿಲ್ಲ. ಗಂಗರು ನಂದಗಿರಿ ಕುವಳಾಲ ಮಂಣೆ ಶ್ರೀಪುರ ನಿರ್ಗುಂದ ಸಿವಗಂಗೆ ತೀರ್ತ್ಥಗಳನ್ನು ಜಿನವಾಡಿಯನ್ನಾಗಿಸಿದ್ದರು. ಈ ಅವಧಿಯಲ್ಲಿಯೇ ಮಂಡಳಿ ಸಾಸಿರ ಮತ್ತು ಸಾಂತಳಿಗೆ ಸಾಸಿರವನ್ನೂ ಬಸದಿಗಳ ಬೀಡನ್ನಾಗಿ ಮಾಡಿದ್ದರು. ರಾಷ್ಟ್ರಕೂಟರು ಚಾಳುಕ್ಯರಿಂದ ಸೋತರು, ಶರಣಾದರು, ಗಂಗರೂ ಸೋತರು. ಆದರೆ ಗಂಗರು ನಿರ್ನಾಮವಾಗಲಿಲ್ಲ. ಚಾಳುಕ್ಯರಲ್ಲೂ, ಅನಂತರ ಹೊಯ್ಸಳರಲ್ಲೂ ಆಸರೆ ಪಡೆದು ಉಸಿರಾಡಿದರು. ಈ ಅವಧಿಯಲ್ಲಿ ಅವರು ಇಡೀ ಶಿವಮೊಗ್ಗ, ಜಿಲ್ಲೆಯಲ್ಲಿ, ಅದರಲ್ಲಿಯೂ ಮುಖ್ಯವಾಗಿ ಸೊರಬ, ಸಾಗರ, ಹೊಸನಗರ, ತೀರ್ಥಹಳ್ಳಿ – ಈ ತಾಲ್ಲೂಕುಗಳ ಸುತ್ತ ಮುತ್ತ ವಸತಿ ಮಾಡಿದರು. ಮಂಡಲಿಸಾಸಿರ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಹಳೆಯ ಬಸದಿಗಳನ್ನು ಪುನರ್ಭರಣಿಸಿದರು, ಹೊಸ ಜಿನಮಂದಿರಗಳನ್ನು ಕಟ್ಟಿಸಿದರು.

ಕೊಪಣ, ಕಳ್ವಪ್ಪು ತೀರ್ತ್ಥಗಳಂತೆ ಮಂಡಲಿ ತೀರ್ತ್ಥದ ಮಾಹಿತಿಗಳು ಚಾರಿತ್ರಿಕ ಮಹತ್ವದಿಂದ ಕೂಡಿವೆ. ಮಂಡಲಿ ತೀರ್ತ್ಥ ಕುರಿತ ಅಧ್ಯಯನಕ್ಕೆ ಶಾಸನ ಸಂಪತ್ತಿದೆ. ಇದನ್ನು ಆಧರಿಸಿ ವಿಸ್ತಾರವಾದ ಪ್ರತ್ಯೇಕ ಅಧ್ಯಯನದ ಅಗತ್ಯವಿದೆ, ಅವಕಾಶವಿದೆ; ಇಲ್ಲಿ ಸಂಕ್ಷೇಪ ರೂಪದಲಿ ಆ ಮಾಹಿತಿ ಭಂಡಾರದತ್ತ ತೋರು ಬೆರಳನ್ನು ತಿರುಗಿಸಿದ್ದೇನೆ. ಮಂಡಲಿ ತೀರ್ತ್ಥದ ವಿಶೇಷ ವ್ಯಾಸಂಗಕ್ಕೆ ನೆರವಾಗುವ ಶಾಸನ ಸಾಮಗ್ರಿ:

೧. ಮಂಡಲಿಯ ತೀರ್ತ್ಥದ ಪಟ್ಟದ ಬಸದಿಯು ಮಂಡಲಿಯ ಬೆಟ್ಟದ ಮೇಲಿತ್ತು. ಮುನ್ನಂ ಧಡಿಗ ಮಾಧವರು ಮಾಡಿಸಿದ ಈ ಪಟ್ಟದ ಬಸದಿಯನ್ನು ತದನಂತರ ಮರವೆಸನಾಗಿ ಮಾಡಿಸಲಾಯಿತು; ಮುಂದೆ ಮತ್ತೆ ಇದನ್ನು ಕಲುವೆಸನಾಗಿ ಮಾಡಿಸಿದರು. ಗಂಗಾನ್ವಯದವರು ಪಡಿಸಲಿಸುತ್ತ ಬಂದ ಮಂಡಲಿ ತೀರ್ತ್ಥವೆಂದರೆ ವೀರಶೈವರ ಮಡಿಲಿಗೆ ಮತಾಂತರವಾಯಿತು. [ಎ.ಕ. ೭, ಶಿವಮೊಗ್ಗ. ೪.೧೧೨೨. ಪು. ೧೦-೧೫.: ಅದೇ, ಶಿವಮೊಗ್ಗ ೬. ೧೦೬೦. ಹರಕೆರೆ. ಪು. ೧೮-೧೯]

೨. ಇತರ ಪೂರಕ ಮಾಹಿತಿ ಇರುವ ಶಾಸನಗಳಿವು:
ಅದೇ: ಶಿವಮೊಗ್ಗ ೯೬, ೯೨೪, (ಅತೇದಿ)
ಶಿವಮೊಗ್ಗ ೧೦.೧೦.೧೦೮೫
೩೯.೧೧೨೨; ೫೧.೧೧೦೮; ೯೭.೧೧೧೩
ಎ.ಕ. ೮-೧, ಸೊರಬ. ೧೪೦.೧೧೯೮.
ಅದೇ: ಸೊರಬ ೨೩೩. ೧೧೩೯.

೨೮. ಮುಕ್ಕುಂದತೀರ್ತ್ಥ (ಮುಕ್ಕುಂದ, ಮುಗುಂದ, ಮುಗುದ, ಮುಗದ): ಧಾರವಾಡ ಜಿಲ್ಲೆ ಮತ್ತು ತಾಲ್ಲುಕಿಗೆ ಸೇರಿದ ಮುಕ್ಕುಂದ ತೀರ್ತ್ಥವು ಸಮ್ಯಕ್ತ್ವ ರತ್ನಾಕರ ಚೈತ್ಯಾಲಯವೂ, ಆದಿನಾಥ ಮಂದಿರವೂ ಇದ್ದ ಜೈನ ಕೇಂದ್ರ. ಸಕಲ(ಪ) ಹಲಸಿಗೆ ಪನ್ನಿರ್ಚ್ಚಸಿರದೊಳಗೆ ಮಹಾರಾಜವಾಡಿ ನಾಡೆಂಬುದು ಭೂಲಲನಾಲಪನಂ | ಅದಕ್ಕೆ ತಿಲಕಮೆನಿಪ್ಪುದು ಮುಗುದ ಮೂವತ್ತು [ಔ.ಇ.ಇ. ೧೧-೧, ೧೭೭.೧೧೨೫. ಮುಗದ. ಸಾಲು ೧೩-೧೪]. ಸಮಸ್ತಪ್ರಶಸ್ತಿ ಸಮೇತನಾದ ನಾರ್ಗಾವುಂಡ ಚಾವುಂಡನ ಮಗ ನಗದೇವ (ಪೊಲ್ಲಿಯಕ್ಕ)ನ ಮಕ್ಕಳು ಮಹಾಸಾಮಂತ ಮಾರ್ತಾಂಡ (ಗೊಜ್ಜಯಕ್ಕ) ಮತ್ತು ಚಾವುಂಡರಾಯ. ಮಾರ್ತಂಡನ ಮಗ ನಾಗ (ಕ) ರಸ ಮತ್ತು ಚಾವುಂಡರಾಯನ ಮಗ ಬಮ್ಮರಸ (ಬಮ್ಮದೇವ) -ಇವರಿಬ್ಬರೂ ಮಹಾಸಾಮಂತರು, ರಾಜಕೀಯ ಪ್ರಭಾವಿಗಳು ಮತ್ತು ಸಮ್ಯಕ್ತ್ವ ರತ್ನಾಕರರು. ಚಾವುಂಡಗಾವುಂಡನು ಮುಕುಂದ ತೀರ್ತ್ಥದಲ್ಲಿ ‘ಸಮ್ಯಕ್ತ್ವ ರತ್ನಾಕಕರ’ ಎಂಬ ಹೆಸರಿನ ಚೈತ್ಯಾಳಯವನ್ನು ಹತ್ತನೆಯ ಶತಮಾನದಲ್ಲಿ, ಸು. ಕ್ರಿ.ಶ. ೯೬೦ ರಲ್ಲಿ ಮಾಡಿಸಿದನು. ಆಗ ಅಲ್ಲಿ ‘ಪಿರಿಯ ಗೋವರ್ಧನದೇವ’ ಎಂಬ ಆಚಾರ್ಯರು ಪ್ರಧಾನರಾಗಿದ್ದರು, ಅವರು ಗಾವುಂಡನು ನೀಡಿದ ಭೂಮಿದಾನವನ್ನು ಪಡೆದರು. ಮುಂದೆ ಕ್ರಿ.ಶ. ೧೦೪೫ ರಲ್ಲಿ ಚಾವುಂಡ ಗಾವುಂಡನ ಒಬ್ಬ ಮೊಮ್ಮಗನಾದ ಮಹಾಸಾಮಂತ ಮಾರ್ತಂಡಯ್ಯನು ತನ್ನ ಮುತ್ತಯ್ಯ ಮಾಡಿಸಿದ ಬಸದಿಗೆ ಪಡಿಸಲಿಸಿದನು; ಅಷ್ಟೇ ಅಲ್ಲದೆ ನಾಟಕ ಶಾಲೆಯನ್ನು ಸಹ ಮಾಡಿಸಿ ತನ್ನ ಕೀರ್ತಿಶಿಲಾ ಸ್ತಂಭವನ್ನು ಆಚಂದ್ರಾರ್ಕತಾರಂಬರಂ ನಿಲ್ಲಿಸಿದನು [ಸೌ.ಇ.ಇ. ೧೧-೧, ೭೮. ಮುಗದ. ೧೦೪೫. ಪು. ೭೧-೭೨]. ಈ ನಾಟಕ ಶಾಲೆಯನ್ನು ನಿರ್ಮಿಸಿದ್ದು ಗಮನಿಸ ಬೇಕಾದ ಅಂಶ. ತೀರ್ಥ ಕ್ಷೇತ್ರದಲ್ಲಿ ಅಂಗರಂಗ ಸೇವೆಗಳಲ್ಲಿ ಸಂಗೀತ ನಾಟಕ ನೃತ್ಯಗಳ ಮೂಲಕ ಮಾಡುವ ಕಲಾರಾಧನೆಯೂ ಒಂದು ಪ್ರಮುಖ ಅಂಗ. ಬಸದಿಗಳಲ್ಲಿ ಧಾರ್ಮಿಕ ಆಚರಣೆ ಭಾಗವಾಗಿ ಕಲಾತ್ಮಕ ಅಭಿನಯ ಆಚರಣೆಗಳೂ ಸೇರಿದ್ದುವು. ಭಂಡಾರಿ ಹುಳ್ಳಚಮೂಪನು ಬಸದಿಯ ಸುತ್ತ ಇರುವ ಪ್ರಾಕಾರದಲ್ಲಿ ನೃತ್ಯಗೇಹ ಸಹ ಮಾಡಿಸಿದ್ದುಂಟು ಶ್ರವಣ ಬೆಳಗೊಳದಲ್ಲಿ [ಎ.ಕ.೨, ೪೭೬ (೩೪೫) ೧೧೫೯. ಪು. ೨೯೦]

೨೯. ಮುಳ್ಗುಂದ ತೀರ್ತ್ಥ: ಧಾರವಾಡ ಜಿಲೆಯಲ್ಲೇ (ಗದಗ ತಾ) ಅಲ್ಲದೆ ಇಡೀ ಕರ್ನಾಟಕದಲ್ಲಿಯೇ ಪ್ರಾಚೀನವೂ ಮಹತ್ವದೂ ಆದ ಜೈನ ತೀರ್ತ್ಥ ಕ್ಷೇತ್ರಗಳಲ್ಲಿ ಮುಳ್ಗುಂದ ತೀರ್ತ್ಥವೂ ಒಂದು (ಮುಳುಗುಂದ, ಮುಳ್ಗುಂದ, ಮುಲಗುಂದ). ಕ್ರಿ.ಶ. ೯-೧೦ ನೆಯ ಶತಮಾನದ ವೇಳೆಗಾಗಲೇ ಅದು ಜೈನಕೇಂದ್ರವಾಗಿತ್ತು. [ಎ.ಇ. ೮, ೧೯೨. ಸಾಲು: ೪]: ಚಾವುಂಡರಾಯ ಪುರಾಣಂ : ಸೌ.ಇ.ಇ. ೧೧-೧, ೪೭.೯೯೪. ಸಾಲು: ೧೧.: ಎ.ಇ. ೨೬. ೪.೯೦೬. ಎ.ಕ. ೧೧.೧೧೩.೯೯೨. ದಾವಣಗೆರೆ]. ಮುಳ್ಗುಂದವು ಚತುರ್ಯುಗದ ಪಟ್ಟಣಂ ಶ್ರೀಮದ್ರಾಜಧಾನಿ [ಸೌ.ಇ.ಇ. ೧೫, ೪೦. ಪು. ೫೨] ಎಂದೂ, ದ್ವಾಪರೆ ಮುಳುಗುಂದಂ ಕಲಿಯುಗ ರಮ್ಯಂ 1ಅನ್ತಾ ನಾಲ್ಕುಯುಗದೊಳ್ ಪ್ರಸಿದ್ಧಮಾಗಿ ನೆಗೆರ್ದ್ದಾದಿಪಟ್ಟಣ ಮುಳುಗುನ್ದ ಎಂದೂ [ಔ.ಇ.ಇ. ೧೧-೧, ೯೭.೧೦೬೨] ಶಾಸನೋಕ್ತವಾಗಿದೆ. ಮಹಾಪುರಾಣ, ನಾಗಕುಮಾರ ಕಾವ್ಯಗಳ ಖ್ಯಾತಿಯ ಮಲ್ಲಿಷೇಣ ಸೂರಿ [೧೦೫೦] ಮುಳ್ಗುಂದ ತೀರ್ಥ ಮಹಿಮೆಯನ್ನು ಸಾರಿದ್ದಾನೆ. ಮುಳ್ಗುಂದ ತೀರ್ತ್ಥದ ಬಸದಿಯನ್ನು ಸಹ ಶಾಸನ ಹೆಸರಿಸಿದೆ [ಎ.ಇ. ೧೬, ಪು. ೫೬]. ನಯಸೇನಕವಿ (೧೧೧೨) ಧರ್ಮಾಮೃತ ಕಾವ್ಯವನ್ನು ರಚಿಸಿದ್ದು ಮುಳ್ಗುಂದ ತೀರ್ತ್ಥದಲ್ಲೇ. ಮುಳ್ಗುಂದ ನಗರದಲ್ಲಿ ಜಿನೋನ್ನತ ಭವನಸಿದ್ದು ಚಂದ್ರಿಕವಾಟದ ಸೇನಾನ್ವಯ ಕುಮಾರಸೇನ ಮುನಿಯನ್ನು ಶಾಸನ ಸ್ಮರಿಸಿದೆ [ಜೆ.ಬಿ.ಬಿ.ಆರ್.ಎಸ್. ೩೦ ಸಂ. ೧೦. – ೧, ೧೮೭೪, ಕ್ರಿ.ಶ. ೯೦೨, ಪು. ೧೯೦ – ೯೧]

೩೦. ಮೈದುವೊಳಲ ದಿವ್ಯ ತೀರ್ತ್ಥ: ತುಮಕೂರು ಜಿಲ್ಲೆ ಮತ್ತು ತಾಲ್ಲೂಕಿನಲ್ಲಿರುವ ಇಂದಿನ ಮಂದರಗಿರಿ ಬಿಟ್ಟವೇ ಹಿಂದಿನ ಮೈದುವೊಳಲ ದಿವ್ಯ ತೀರ್ತ್ಥ. ಮೈದುವೊಳಲು ಎಂಬ ಪ್ರಾಚೀನ ರೂಪವು ಮೈದಾಳ ಎಂದು ಬದಲಾವಣೆ ಪಡೆದಿದೆ. ನಾಕಿಸೆಟ್ಟಿ – ನಾಗವೆ ದಂಪತಿಗಳ ಮಗ ಸಾಹಣಿ ಬಿಟ್ಟಿಗಾಂಕ. ಈ ಬಿಟ್ಟಿಗಾಂಕ ಚಂದಿಕಬ್ಬೆ (ಚಂದವೆ) ದಂಪತಿಗಳ ಮಗಳು ಮಾಚಿಯಕ್ಕ. ಈಕೆಯ ಪತಿ ಈಶ್ವರ ಚಮೂಪತಿ. ಈತನು ಮಹಾಪ್ರಧಾನ, ಸರ್ವಾಧಿಕಾರಿ ಮತ್ತು ದಂಡನಾಯಕನಾದ ಎಱೆಯಂಗಮಯ್ಯನ ಆಶ್ರಯ ದಲ್ಲಿದ್ದನು. ಮಾಚಿಯಕ್ಕ ಅನೂನಗೂಣರತ್ನ ಮಂಡನೆ ಮತ್ತು ಚಾತುರ್ವರ್ಣಸಮುದಾಯಕ್ಕೆ ಆಶ್ರಯದಾತೆ. ಈಕೆ ಹನ್ನೊಂದನೆಯ ಶತಮಾನದ ವೇಳೆಗ ಹೆಸರುವಾಸಿ ಆಗಿದ್ದ ‘ಮೈದುವೊಳಲು ದಿವ್ಯ ತೀರ್ತ್ಥ’ ದಲ್ಲಿ ಸದ್ಧರ್ಮಾಪೇಕ್ಷೆಯಿಂದ ಜಿನಮಂದಿರವನ್ನು ಮಾಡಿಸಿದಳು. ಬಸದಿ ಮಡಿಸುವದರ ಜತೆಗೆ ಬಸದಿಯ ಸಮೀಪದಲ್ಲಿ ‘ಪದ್ಮಾವತಿ ಕೆಱಿ’ ಯನ್ನೂ ಜಿನಶಾಸನ ದೇವಿಯ ಹೆಸರಲ್ಲಿ ಕಟ್ಟಿಸಿ ಆ ತೀರ್ಥದ ಬಸದಿಗೂ, ತೀರ್ತ್ಥದ ಬೆಟ್ಟಕ್ಕೂ ದಾನವಾಗಿ ಬಿಟ್ಟು ಕೊಟ್ಟಳು [ಎ.ಕ. ೧೨, ತುಂಕೂರು. ೩೮. ೧೧೬೦]. ಇಂದಿಗೂ ಆ. ಬೆಟ್ಟದ ತೀರ್ಥವೂ, ಕೆರೆಯೂ ಇದೆ; ಪದ್ಮಾವತಿಕೆರೆಯ ಹೆಸರು ಮೈದಾಳದ ಕೆರೆ ಎಂದು ರೂಢಿಯಲ್ಲಿದೆ. ಇಲ್ಲಿ ತುಮಕೂರಿನ ಜೈನ ಸಮಾಜದವರು ಪ್ರತಿವರ್ಷ ಪೂಜೆ ಉತ್ಸವಗಳನ್ನು ಏರ್ಪಡಿಸುತ್ತಾರೆ.

೩೧. ಮೈಳಾಪತೀರ್ತ್ಥ : ಬೆಳಗಾವಿಜಿಲ್ಲೆಯ ತಾಲ್ಲೂಕು ಕೇಂದ್ರದ ಸೌದತ್ತಿಯಲ್ಲಿ ಇರುವ ಎಲ್ಲಮ್ಮನ ಗುಡ್ಡವೇ ಸುಮಾರು ಮನ್ನೂರು – ನಾನ್ನೂರು ವರ್ಷಕಾಲ ಜೈನ ಪವಿತ್ರ ತೀರ್ತ್ಥ ಕ್ಷೇತ್ರವಾಗಿ ವಿಜೃಂಭಿಸಿ ಮೈಳಾಪ ತೀರ್ತ್ಥ. ಇದನ್ನು ಬ್ರಹ್ಮಶಿವಕವಿಯು ಸಮಯ ಪರೀಕ್ಷೆ ಕಾವ್ಯದಲ್ಲಿ :

ಧರೆಯೊಳ್ ಮುಟ್ಟದೆ ನೆಗೆದಂ
ತರಿಕ್ಷದೊಳ್ನೆಲಸಿ ನಿಂದ ಮೈಳಾಪ ಜಿನೇ
ಶ್ವರ ತೀರ್ತ್ಥದತಿಶಯಮನಾ
ಧರಣೀಂದ್ರಂ ಪೊಗಱಲಱೆಯನುಳಿದವರಳವೇ ||          ೨-೪೭

ಎಂಬುದಾಗಿ ಶ್ಲಾಘಿಸಿದ್ದಾನೆ. ರಟ್ಟರ ಪಟ್ಟ ಜಿನಾಲಯ ಇದ್ದದ್ದೂ ಮೈಳಾಪ ತೀರ್ತ್ಥದಲ್ಲಿಯೇ. ಜೈನ ಸನ್ಯಾಸಿಗಳಾದ ಸವಣರಿಗೆ ದತ್ತಿಯಾಗಿ ಕೊದಲಾದ ಸ್ಥಳ ಈ ‘ಸವಣದತ್ತಿ’ ಸವಣದತ್ತಿ ಎಂಬ ಈ ಶಬ್ದವು ಜನರ ಉಚ್ಚಾರಾನುಗುಣವಾಗಿ ಸಂವದತ್ತಿ – ಸೌಂದತ್ತಿ – ಸೌದತ್ತಿ ಎಂದಾಗಿದೆ. ರಾಷ್ಟ್ರಕೂಟರಾಜರಿಗೆ ಸೌದತ್ತಿಯ ಮೈಳಾಪತೀರ್ತ್ಥವು ಶತಮಾನಗಳವರೆಗೆ ಮನೆದೇವರೂ, ಮನೆದೇಗಲುವೂ ಆಗಿ ಬೆಳೆಯಿತು. ಇದು ಬೆಳ್ವೂಲ (ಧವಳ) ವಿಷಯಕ್ಕೆ ಸೇರಿತ್ತು. ಮೈಳಾಪ ತೀರ್ತ್ಥದ ಮಹಿಮೆ, ಬಸದಿಗಳು, ಆಚಾರ್ಯ ಪರಂಪರೆ, ದಾನದತ್ತಿಗಳು, ಭಕ್ತಿಯಿಂದ ಕೊದುಗೆಗಳನ್ನು ನೀಡಿದ ರಾಜ – ರಾಣಿಯರು -ಇವೆಲ್ಲ ವಿವರಗಳೂ ಶಾಸನಗಳಲ್ಲಿ ನಮೂದಾಗಿವೆ. [ಜೆ.ಬಿ.ಬಿ.ಆರ್.ಎ.ಎಸ್. ೩೦, ಸಂ. ೨ ಕ್ರಿ.ಶ. ೮೭೬, ಪಿ. ೧೯೪, ಸಾಲು ೪.: ಸೌ.ಇ.ಇ.೧೫, ೫೩೦. ೧೦೫೯. ಮೊರಬ (ಧಾಜಿ / ಮೊರಬತಾ).; ಸೌ.ಇ.ಇ. ೨೦, ೧೩.೧೩ ೮೭೫-೭೬. ಸವದತ್ತಿ: ಎ.ಇ.೬. ೫೫. ೧೦೫೩: ಸೌ.ಇ.ಇ. ೮, ೭೧. ೧೦೬೬.: ಕ.ಇ. ೬೬೮. ೧೨೦೩ ಇತ್ಯಾದಿ] ಮೈಳಾಪತೀರ್ತ್ಥವನ್ನು ಕುರಿತು ಮತ್ತು ಇನ್ನಿತರ ಪೂರಕ ಉಪಯುಕ್ತ ಮಾಹಿತಿಗಾಗಿ ‘ಮೈಳಾಪತೀರ್ತ್ಥ : ಶಾಸನಗಳ ಆಧಾರ’ ಎಂಬ ಸಂಪ್ರಬಂಧವನ್ನು ನೋಡಬಹುದು [ಹಂಪ. ನಾಗರಾಜಯ್ಯ, ‘ಸಮ್ಮಿಲನ’ (ಸಂ) ಡಾ.ಎಂ.ಎ. ಜಯಚಂದ್ರ (೧೯೯೪), ಪು. ೧೭-೨೦]

೩೧. ವೃಷಭಗಿರಿ ತೀರ್ತ್ಥ : ಕನ್ನಡ ಆದಿಕವಿ ಪಂಪನ ತಮ್ಮನಾದ ಜಿನವಲ್ಲಭನು ರಚಿಸಿದ ಗಂಗಾದರಂ ಶಾಸನ ಸುಪ್ರಸಿದ್ಧವಾಗಿದ್ದು ಅದರಲ್ಲಿಯೇ ವೃಷಭಗಿರಿ ತೀರ್ತ್ಥದ ಪ್ರಸ್ತಾಪವಿದೆ. ಈಗಿನ ಆಂದ್ರಪ್ರದೇಶದ ಕುರ್ಕ್ಯಾಲಗ್ರಾಮದ ಹತ್ತಿರ ಇರುವ ಬೊಮ್ಮಲಗುಟ್ಟವೇ ವೃಷಭಗಿರಿ : ‘ಸಬ್ಬಿನಾಡ ನಾಟ ನಡುವಣ ಧರ್ಮ್ಮಪುರದ + ಉತ್ತರ ದಿಗ್ಭಾಗದ ವೃಷಭಗಿರಿಯೆಂಬ + ಅನಾದಿ ಸಂಸಿದ್ಧ ತೀರ್ತ್ಥದ ದಕ್ಷಿಣ ದಿಶಾಭಾಗದೀ ಸಿದ್ಧ ಶಿಲೆಯೊಳ್ತಮ್ಮ ಕುಲದೈವಮಾದ್ಯನ್ತ ಜಿನಬಿಂಬಗಳುಮಂ ಚಕ್ರೇಶ್ವರಿಯುಮಂ ಪೆಱವುಂ ಜಿನ ಪ್ರತಿಮೆಗಳುಮಂ ತ್ರಿಭುವನ ತಿಲಕಮೆಂಬ ಬಸದಿಯುಮಂ ಕವಿತಾಗುಣಾರ್ಣ್ನವಮೆಂಬ ಕೆಱೆಯುಮಂ ಮದನ ವಿಳಾಸಮೆಂಬ ಮನಮುಮಂ ಮಾಡಿಸಿದಂ’ [IAP. ಕರೀಂನಗರ ೩.] ವೃಷಭಗಿರಿತೀರ್ತ್ಥವು ‘ಅನಾದಿ ಸಂಸಿದ್ಧ ತೀರ್ತ್ಥ’ ವೆಂದು ಹತ್ತನೆಯ ಶತಮಾನದ ಈ ಶಾಸನವೇ ಹೇಳಿರ ಬೇಕಾದರೆ ಅದಕ್ಕಿಂತಲೂ ೨-೩ ಶ. ಹಿಂದಿನಿಂದಲೂ ಅದು ಪ್ರಸಿದ್ಧಿ ಪಡೆದಿರಬೇಕು. ಸು.ಕ್ರಿ.ಶ. ೯೫೦ ರಲ್ಲಿ ಜಿನವಲ್ಲಭನು ಇಲ್ಲಿ ‘ತ್ರಿಭುವನ ತಿಲಕ’ ವೆಂಬ ಬಸದಿಯನ್ನೂ, ಕೆರೆ ಮತ್ತು ಆರವೆ (ಬನ – ತೋಟ) ಗಳನ್ನು ಮಾಡಿಸುವುದರ ಮೂಲಕ ಜೈನ ಶ್ರಾವಕನ ಆದರ್ಶಗಳನ್ನು ಪಾಲಿಸಿದ್ದನು. ತ್ರಿಭುವನತಿಲಕ ಬಸದಿಯು ಆದಿನಾಥ ತೀರ್ಥಂಕರ ಜಿನಚೈತ್ಯವಾಗಿತ್ತು. ಅನೇಕ ಜಿನಾಲಯ ಜಿನಬಿಂಬ ಜಿನಾಶಾಸನ ದೇವರ ಮೂರ್ತಿಗಳಿಂದ ವೃಷಭಗಿರಿ ತೀರ್ತ್ಥವು ದಕ್ಷಿಣ ವೃಷಭಾದ್ರಿಯಾಗಿ ಲೋಕಸ್ತುತಿಗೆ ಪಾತ್ರವಾಗಿತ್ತು.

೩೨. ಶ್ರೀಪರ್ವತ ತೀರ್ತ್ಥ: ಆಂಧ್ರ ಪ್ರದೇಶದ ಕರ್ನೂಲ ಜಿಲ್ಲೆಗೆ ಸೇರಿದ, ಹಾಗೂ ತುಂಗಭದ್ರಾ – ಕೃಷ್ಣಾನದಿಗಳ ಸಂಗಮಸ್ಥಾನದಲ್ಲಿ ಇರುವ ಶ್ರೀಪರ್ವತ ತೀರ್ತ್ಥವು ಪ್ರಸಿದ್ಧ ಜೈನತೀರ್ತ್ಥವೆಂದು ಸಮಯಪರೀಕ್ಷೆ ಕಾವ್ಯದಲ್ಲಿ ಬ್ರಹ್ಮಶಿವ ಕವಿ ಸ್ತುತಿಸಿದ್ದಾನೆ (೨-೫೨ಇ). ಈ ಕುರಿತು ಸಿಗುವ ಇತರ ಪೋಷಕ ಸಾಮಗ್ರಿಯನ್ನು ಸಂಚಯಿಸಬೇಕು.

೩೩. ಸಿವಗಂಗೆಯ ತೀರ್ತ್ಥ : ಬೆಂಗಳೂರು ಜಿಲ್ಲೆಯ ನೆಲಮಂಗಲ ತಾಲ್ಲೂಕಿಗೆ ಸೇರಿದ ಸಿವಗಂಗೆ ಬೆಟ್ಟಕ್ಕೂ ಪಟ್ಟಮಹಿಷಿ ಶಾಂತಲಾದೇವಿಗೂ ಇರುವ ಭಾಂಧವ್ಯದ ಬೆಸುಗೆಯ ಸ್ವರೂಪ ಚಿಂತನೀಯವಾದುದು. ಗುರುಗಳ್ ಪ್ರಭಾಚಂದ್ರ ಸಿದ್ಧಾನ್ತದೇವರೆ ಪೆತ್ತತಾಯಿಗುಣನಿಧಿ ಮಾಚಿಕಬ್ಬೆ ಪಿರಿಯಪೆರ್ಗ್ಗಡೆ ಮಾರಸಿಂಗಯ್ಯಂ ತಂದೆ ಮಾವನುಂ ಪೆರ್ಗ್ಗಡೆ ಸಿಂಗಿಮಯ್ಯಂ ಅರಸಂ ವಿಷ್ಣುವರ್ದ್ಧನನ್ರಿಪಂ ವಲ್ಲಭಂ ಜಿನನಾಥಂ ತನಗೆಂದುಮಿಷ್ಟದೆಯ್ವಂ ಅರಸಿ ಶಾನ್ತಲದೇವಿಯ ಮಹಿಮೆಯಂ ಬಣ್ನಿಸಲು ಬಕ್ಕುಮೆ ಭೂತಳದೊಳು ||

ಸಕವರ್ಷಂ ೧೦೫೧ ಮೂಱೆನೆಯ ವಿರೋಧಿ ಕ್ರಿತ್ಸಂವತ್ಸರದ ಚೈತ್ರಸುದ್ಧ ಪಂಚಮೀ ಸೋಮವಾರದಂದು ಸಿವಗಂಗೆಯ ತೀರ್ತ್ಥದಲು ಮುಡಿಪಿ ಸ್ವರ್ಗತೆಯಾದಳು [ಎ.ಕ. ೨, ೧೭೬ (೧೪೩) ೧೧೩೧. ಪು. ೧೩೧. ಸಾಲು: ೮೭. ಸಾಲು: ೮೭-೯೭]. ಸಿವಗಂಗೆಯಲ್ಲಿ ಅದಳ ಜಿನಾಲಯಂಗಳು ಇದ್ದುದನ್ನು ಶಾಸನ ಶ್ರುತ ಪಡಿಸಿದೆ [ಎ.ಕ. ೯, ನೆಮಂ, ೮೪. ೧೧೪೧. ಸಿವಗಂಗೆ]. ಅದಳವಂಶ ಶಿಖಾಮಣಿ ವಿಷ್ಣುವರ್ಧನನು ಇದನ್ನು ಮಾಡಿಸಿದನು. ಈಗ ಹಾಲಿ ಸಿವಗಂಗೆಯಲ್ಲಿ ಜೈನ ಬಸದಿಯಾಗಲಿ, ಇತರ ಜೈನ ಕುರುಹುಗಳಾಗಲಿ ಇಲ್ಲ. ಆದರೆ ಕ್ರಿ.ಶ. ಹದಿಮೂರನೆಯ ಶತಮಾನದವರೆಗೆ ಅವೆಲ್ಲ ಇದ್ದುವೆಂಬುದಕ್ಕೆ ಶಾಸನಗಳು ದಾಖಲೆಯಾಗಿವೆ. ಎಲ್ಲೋರ, ಬಾದಾಮಿಗಳಲ್ಲಿ ಇರುವಂತೆ ಸಿವಗಂಗೆಯಲ್ಲೂ (ಶೈವ, ವೈಷ್ಣವ) ಜೈನ ದೇವಾಲಯಗಳು ಇದ್ದಿರಬೇಕು. ನಂದಿ ಬೆಟ್ಟದಲ್ಲೂ ಇದೇ ರೀತಿ ಇದ್ದಿತು. ಬೆಟ್ಟದ ತುದಿಯಲ್ಲಿ ಜೈನ ಬಸದಿ ಇರುವುದು ವಾಡಿಕೆ. ನಂದಿಯಲ್ಲಿ ಕೆಳಗೆ ಹಿಂದೂ ದೇವಾಲಯ ಮೇಲೆ ಜೈನ ಬಸದಿ ಇದ್ದಿತು. ಆದರೆ ಬೆಟ್ಟದ ಮೇಲಿನ ಅತ್ಯಂತ ಪ್ರಾಚೀನ ಬಸದಿ, ಗಂಗರ ಪಟ್ಟಜಿನಾಲಯ ಹಿಂದೂ ಗುಡಿಯಾಗಿ ಬಹಳ ಹಿಂದೆಯೇ ಸು. ೧೩. ಶ. ದಲ್ಲಿ ಪರಿವರ್ತನೆಯಾಗಿ, ಅದರ ವಾಸ್ತು ಶಿಲ್ಪಗಳಲ್ಲಿ ಮಾರ್ಪಾಟುಗಳಾದವು.

ಶಾಂತಲಾದೇವಿಯು ಹೊಯ್ಸಳಸಾಮ್ರಾಜ್ಯದ ಮುಖ್ಯವಾದ ರಾಜಧಾನಿಯಾದ ದ್ವಾರಸಮುದ್ರವನ್ನೂ ಶ್ರವಣ ಬೆಳುಗೊಳ ತೀರ್ಥಕ್ಷೇತ್ರವನ್ನೂ ಬಿಟ್ಟು ಸಿವಗಂಗೆ ತೀರ್ಥದಲ್ಲಿ ಬಂದು ಸಲ್ಲೇಖನ ವ್ರತ ಸ್ವೀಕರಿಸಲು ಇದ್ದ ಐತಿಹಾಸಿಕ ಕಾರಣಗಳಾಗಲಿ, ಸಾಂಸಾರಿಕ ಒತ್ತಡಗಳಾಗಲಿ ಖಚಿತವಾಗಿ ತಿಳಿದುಬಂದಿಲ್ಲ. ಆದರೆ ಸಿವಗಂಗೆ ಮತ್ತು ಅದರ ಸುತ್ತಮುತ್ತ ಇದ್ದ ಜೈನಕ್ಷೇತ್ರಗಳ ಪ್ರಶಾಂತ ಪರಿಸರ ಹಿರಿಮೆಯನ್ನೂ ಮರೆಯುವಂತಿಲ್ಲ. ಕುಂದಾಚ್ಚಿಯು ಏಳನೆಯ ಶ. ದಲ್ಲಿ ಲೋಕತಿಲಕ ಜಿನಾಲಯ ಕಟ್ಟಿಸಿದ ಶ್ರೀಪುರ (ಶ್ರೀಗಿರಿಪುರ – ಸಿಡ್ಲಿಪುರ,) ಕೋಳಾಲ (ಕುವಲಪುರ, ಎಂಬುದು ಈ ಕೋಳಾಲವೇ ಹೊರತು ಕೋಲಾರ ಅಲ್ಲ), ನಿರ್ಗುಂದ (ನಿಡಗುಂದ) ಮಾಗಡಿ, ಕಲ್ಲೆಹ (ಕಲ್ಯ), ಹೊಸೂರು (ಹೊಸಪಟ್ಟಣ), ಮಂಣೆ – ಇವೆಲ್ಲ ಜೈನ ಕೇಂದ್ರಗಳೂ ಸಮೀಪದಲ್ಲಿ ಇದ್ದುವು. ಶಾಂತಲೆಯೇ ಕಟ್ಟಿಸಿದ, ಘನತರ ಕೂಟ ಕೋಟಿಯುತ ಪಾರ್ಶ್ವಜಿನೇಶ್ವರ ಗೇಹವು ಜಗಜನನುತಮಾಗಿ ಸಿಂದಘಟ್ಟದಲ್ಲಿ (ಕೃಷ್ಣರಾಜ ಪೇಟೆ ತಾ ||; ಮೇಲುಕೋಟೆ ಸಮೀಪ) ವಿರಾಜಮಾನವಾಗಿತ್ತು; ಪತಿಯ ಹೆಸರಿನ ಅದಳ ಜಿನಾಲಯಗಳು ಸಿವಗಂಗೆಯಲ್ಲಿ ಬರುವ ಪೂರ್ವದಿಂದಲೂ ಜೈನ ಬಸದಿ ಇಲ್ಲಿ ಕೀರ್ತಿಶಾಲಿಯಾಗಿದ್ದಿರಬೇಕು. ಅದರಿಂದ ಆಕೆ ತನ್ನ ಮರಣದ ಮಹಾನವಮಿಗೆ ಈ ಸ್ಥಳವನ್ನು ಆಯ್ಕೆ ಮಾಡಿದಂತೆ ತಿಳಿಯ ಬಹುದು.

ಹೀಗೆಯೇ ಚಿಪ್ಪಗಿರಿತೀರ್ತ್ಥ, ಪ(ಹ)ನಸೋಗೆಯ ತೀರ್ತ್ಥ, ಕೊಲ್ಲಾಪುರ ತೀರ್ತ್ಥ – ಮೊದಲಾದುವನ್ನು ಕುರಿತೂ ಶಾಸನಗಳಲ್ಲಿ ಉಲ್ಲೇಖಗಳಿವೆ.