ಪ್ರಪ್ರಾಚೀನ ಜೈನಾಗಮ ಗ್ರಂಥಗಳಲ್ಲಿ; ಜಿನಬಿಂಬಗಳ – ಜಿನಾಲಯಗಳ ಉಲ್ಲೇಖಗಳು ಅಪರೂಪ. ಜೈನಧರ್ಮದ ಪ್ರಾರಂಭದ ಘಟ್ಟಗಳಲ್ಲಿ ಬಸದಿ ಕಟ್ಟಿಸುವ, ಜಿನಮೂರ್ತಿಗಳನ್ನು ಮಾಡಿಸುವ ಪದ್ಧತಿ ಇರಲಿಲ್ಲ. ತೀರ್ಥಂಕರ ಮೂರ್ತಿಗಳನ್ನು ಮಾಡಿಸುವ, ಬಸದಿಗಳನ್ನು ಕಟ್ಟಿಸುವ ಈ ಪದ್ಧತಿಯು ಆಗಮೋತ್ತರಕಾಲೀನದಲ್ಲಿ ಬೆಳೆದ ಸಂಪ್ರದಾಯ. ರಾಜಗೃಹ ಪುರವಾರಾಧೀಶನೂ ಮಹಾಮಾಂಡಲಿಕನೂ ಆದ ಶ್ರೇಣಿಕನು ರಾಜಗೃಹದ ಒಳ – ಹೊರಗುಗಳನ್ನು ಜಿನಗೃಹಗಳಿಂದ ಆಚ್ಛಾದಿಸದನೆಂದು, ಪುನ್ನಾಟಸಂಘ ಜಿನಸೇನಾಚಾರ್ಯನು ತನ್ನ ಸಂಸ್ಕೃತ ಹರಿವಂಶಪುರಾಣದಲ್ಲಿ ಹೇಳಿದ್ದಾನೆ. ಈ ಸಂಪ್ರದಾಯವು ಮೌರ್ಯರ ಆಳಿಕೆಯ ಕಾಲದಲ್ಲಿ ಪ್ರಚಲಿತಗೊಂಡಿತು. ಕ್ರಿ.ಪೂ. ಮುನ್ನೂರರ ಆಸುಪಾಸಿನಲ್ಲಿ ಮಹಾವೀರರನ್ನು ವೈಭವೀಕರಿಸಿ ದೈವತ್ವದ ನೆಲೆಗೆ ಒಯ್ಯಲಾಯಿತು. ಇಂದಿನ ಒರಿಸ್ಸಾ ಆಗಿರುವ ಪ್ರಾಚೀನ ಕಳಿಂಗದೇಶದ ಸಾಮ್ರಾಟನಾದ ಖಾರವೇಲನು (ಕ್ರಿ.ಪೂ. ೧೫೦), ತನಗಿಂತ ಹಿಂದೆ ನಂದ ವಂಶೀಯರು ಕೊಂಡೊಯ್ದಿದ್ದ ಅನಂತನಾಥ ಜಿನನ (೧೪ ನೆಯ ತೀರ್ಥಂಕರ) ಮೂರ್ತಿಯನ್ನು ಹಿಂತಿರುಗಿ ಪಡೆಯಲು ಯುದ್ಧ ಮಾಡಿದನು; ನಂದರಾಜನೀತಂ ಕಾಲಿಂಗಜಿನಂ ಸಂನಿವೇಸಂ ….. ಚ ನಯತಿ. ಅದರಿಂದ, ನಂದರ ಆಳಿಕೆಯ ವೇಳೆಗೆ, ಕ್ರಿ.ಪೂ. ೫-೪ ನೆಯ ಶತಮಾನದಲ್ಲಿ, ಜಿನಮೂರ್ತಿ ಪೂಜೆಯ ಸಂಪ್ರದಾಯ ಪ್ರಾರಂಭವಾಯಿತು.

ಜೈನ ಆಚಾರ್ಯರು ಏಕಾಂತ ಸ್ಥಳಗಳಲ್ಲಿ, ಬೆಟ್ಟ, ಗುಹೆ, ಪೊಟರೆ, ಸ್ಮಶಾನಗಳಲ್ಲಿ ಇರುತ್ತಿದ್ದರು. ಪ್ರಾಕೃತಿಕ ಗುಹೆಗಳು ಅವರ ತಪೋಭೂಮಿಗಳು. ಮಹಾರಾಷ್ಟ್ರದ ಉಸ್ಮಾನಾಬಾದಿನ ಪೂರ್ವೋತ್ತರದಲ್ಲಿರುವ ಪರ್ವತದಲ್ಲಿ ಗುಹೆಗಳ ಸಮೂಹವೇ ಇದೆ. ಈ ಜೈನ ಗುಹೆಗಳು ಕ್ರಿ.ಪೂ. ಆರನೆಯ ಶತಮಾನಕ್ಕೆ ಸೇರಿವೆ. ಬಿಹಾರ ಪ್ರಾಂತ್ಯದ ಗೆಯೆಯ ಸಮೀಪದ ಬರಾಬರ ಮತ್ತು ನಾಗಾರ್ಜುನೀ ಗುಡ್ಡದ ಗುಹೆಗಳು ಅಶೋಕ ಮತ್ತು ಅವನ ಮೊಮ್ಮಗ ದಶರಥನಿಂದ ನಿರ್ಮಿತವಾಗಿವೆ. ಒರಿಸ್ಸಾದ ಉದಯಗಿರಿ – ಖಂಡಗಿರಿಯ (ಹಾಥೀ ಗುಫಾ) ಜೈನ ಗುಹೆಗಳು, ಕ್ರಿ.ಪೂ. ಎರಡನೆಯ ಶತಮಾನದವು. ಶ್ರವಣಬೆಳಗೊಳದ ಚಂದ್ರಗಿರಿಯ ಭದ್ರಬಾಹು ಗುಹೆಯೂ ಕ್ರಿ.ಪೂ. ಮುರನೆಯ ಶತಮಾನಕ್ಕೂ ಹಿಂದಿನದು. ತಮಿಳುನಾಡಿನ ಉತ್ತರ ಆರ್ಕಾಟ್ ಪರಿಸರದ ವೆಳ್ಳಿಮಲೈ (ವಿಜಯಾದ್ರಿ) ಸೀಯಮಂಗಳಂ, ತಿರುಮಲೈ, ತಿರುಕ್ಕೋಲ್. ಅರುಮಲೈ ಮೊದಲಾದ ಗಿರಿಧಾಮ ಗುಹೆಗಳು ಜೈನರ ತಪಸ್ಸು, ಪೂಜೆಗಳ ಪ್ರಾಚೀನ ಸ್ಥಳಗಳು. ವೆಲ್ಲಿಮಲೈ, ಸೀಯಮಂಗಳ ಗುಹಾಂತರ ಜಿನಾಲಯಗಳನ್ನು ಗಂಗರ ಇಮ್ಮಡಿ ರಾಚಮಲ್ಲನು (೮೭೦ – ೯೦೭) ಕಾಪಾಡಿ ಹೊಸತಾಗಿಸಿದನು. ಹೊಂಬುಜಶಾಸ ನೋಕ್ತ ಅರುಂಗಳಾನ್ವಕ್ಕೆ ಸೇರಿದ ವಜ್ರನಂದಿ ಆಚಾರ್ಯನು (೧೦. ಶ.) ಸೀಯಮಂಗಳ ಗಿರಿಧಾಮದ ಜೈನ ಗುಹೆಗಳ ಬಳಿ ಹೋಗಲು ನೆರವಾಗಲೆಂದು ಮೆಟ್ಟಿಲುಗಳನ್ನು ಮಾಡಿಸಿದನು. ಅದನ್ನು ಪೂಜಿಸುವ ಪರಿಪಾಟಿಯೊಂದು ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿ ಇತ್ತು. ಸಮ್ಮೇದಗಿರಿ (ಶಿಖರಜಿ : ಬಿಹಾರ್ ಪ್ರಾಂತ್ಯ), ಶ್ರವಣಬೆಳುಗೊಳ,ಕೊಪ್ಪಳ – ಮೊದಲಾದ ಸ್ಥಳಗಳಲ್ಲಿ ಪ್ರಾಚೀನ ಗುರುಗಳ ಪಾದಚಿಹ್ನೆಗಳು ಇಂದಿಗೂ ಉಳಿದು ಬಂದಿವೆ. ಇದು ಬಸದಿಗಳ ಮತ್ತು ಜಿನಮೂರ್ತಿಗಳ ರಚನೆಗೂ ಪೂರ್ವದಲ್ಲಿದ್ದ ಆರಾಧನಾ ಪದ್ಧತಿಯ ಪಳೆಯುಳಿಕೆ.

ಅನಂತರ ಬಂದದ್ದು ಗುಹೆಗಳಲ್ಲಿಯೇ ಜಿನಮೂರ್ತಿಗಳನ್ನು ನಿರ್ಮಿಸುವ ವಿಧಾನ: ಇದು ಎರಡನೆಯ ಘಟ್ಟ. ಈ ಹಂತದಲ್ಲಿ ಗುಹೆಗಳೇ ಜಿನಾಲಯಗಳಾದುವು. ಬೆಟ್ಟಗಳ ಮೇಲೆ, ನಡುವೆ, ಕೆಳಗೆ ನೈಸರ್ಗಿಕವಾಗಿ, ಸಹಜವಾಗಿ, ಆಕೃತ್ರಿಯಾಗಿ ಇದ್ದ ಗುಹೆಗಳು ಚೈತ್ಯಾಲಯಗಳಾದುವು; ಇವೇ ಅಕೃತ್ರಿಯ ಚೈತ್ಯಾಲಯಗಳು. ಎಲ್ಲೋರ, ಕಱ್ವಪ್ಪು, ಐಹೊಳೆ, ಬಾದಾಮಿ ಮೊದಲಾದೆಡೆಗಳಲ್ಲಿ ಗುಹೆಗಳು ಗುಹಾಂತರ ದೇವಾಲಯಗಳಾದವು. ಕರ್ನಾಟಕಕ್ಕೆ ಅಧಿಕೃತವಾಗಿ ಜಿನಧರ್ಮವನ್ನು ತಂದ ಧರ್ಮದೂತ ಶ್ರುತಕೇವಲಿ ಭದ್ರಬಾಹುಮುನಿ. ಕನ್ನಡನಾಡಿನಲ್ಲಿ ಸಲ್ಲೇಖನ ವಿಧಿಯಿಂದ ಮುಡಿಪಿದ ಮೊತ್ತಮೊದಲಿಗರೂ ಅವರೇ. ಕ್ರಿ.ಪೂ. ೨೯೭ ರಲ್ಲಿ, ತಮ್ಮ ೭೬ ನೆಯ ವಯಸ್ಸಿನಲ್ಲಿ, ಶ್ರುತಕೇವಲಿ ಭದ್ರಬಾಹು ಮಹಾಪುರುಷನು ಶ್ರವಣ ಬೆಳಗೊಳದ ಚಿಕ್ಕಬೆಟ್ಟದಲ್ಲಿ (ಕೞ್ವಪ್ಪು, ಕಟವಪ್ರ, ಚಂದ್ರಗಿರಿ, ಇಂದ್ರಗಿರಿ) ಸಮಾಧಿಮರಣ ಪಡೆದರು. ಅವರು ಮುಡಿಪಿದೆಡೆಯೇ ಭದ್ರಬಾಹು ಗುಹೆ. ಆ ಗುಹೆಯೊಳಗಿರುವ ಪಾದಚಿನ್ಹೆಗಳೇ ಅವರ ಸ್ಮಾರಕವಾಗಿ ಕೆತ್ತಿದ ನಿಸಿದಿಗೆ.

ಜೈನ ಪೂಜಾಸ್ಥಾನ ಮತ್ತು ಪೂಜಾಮಂದಿರಗಳ ಬೆಳವಣಿಗೆಯಲ್ಲಿ ನಿಸಿದಿಗೆಗೆ ವಿಶೇಷ ಸ್ಥಾನವಿದೆ, ಐತಿಹಾಸಿಕ ಮಹತ್ವವಿದೆ. ನಿಸಿದಿಗೆಗಳೂ ಬಸದಿಗಳಿಗೆ ದಾರಿ ತೆರೆದುವು; ನಿಸಿದಿಗಳು ಮುಂದೆ ಬಸದಿಯ ಭಾಗವಾಗಿ ಉಳಿದುವು. ಭದ್ರಬಾಹು ಮುನಿಯ ವ್ಯಕ್ತಿತ್ವ ಪ್ರಭಾವ ಮಹಿಮೆಯನ್ನು ಅವರು ತಪವೆಸಗಿದ ಗುಹೆ ಮತ್ತು ಸ್ಥಳ ಅತಿಶಯ ಕ್ಷೇತ್ರವಾಯಿತು. ಗುಹೆಗಳೇ ಬಸದಿಗಳಾದುವು; ಗುಹೆಯೊಳಗಿನ ಚೆಲುವು ಚರಿತ್ರಾರ್ಹವಾಯಿತು. ಗುಹೆಗಳಿಂದ ಬಸದಿಗಳು ಬೆಟ್ಟದ ಬಯಲಿಗೆ ಬಂದುವು, ಬೆಟ್ಟಗಳೇ ಗಟ್ಟಿ ಬಸದಿಗಳಾದುವು. ಶ್ರವಣಬೆಳಗೊಳದಲ್ಲಿ ಚಿಕ್ಕಬೆಟ್ಟಕ್ಕೆ ಬಸದಿಗಳೇ ಹೊದಿಕೆ, ದೊಡ್ಡಬೆಟ್ಟಕ್ಕೂ ಜಿನಾಲಯಗಳೇ ಕವಚ.

ಪ್ರಾರಂಭದ ಹಂತದಲ್ಲಿ ಪರ್ವತ ಗುಹೆಗಳು ಅಕೃತಿಮ ಚೈತ್ಯಾಲಯ ಗಳಾಗಿದ್ದುವು. ಜೈನಯತಿಗಳು ಜಂಗಮ ಜಿನಾಲಯವಾಗಿದ್ದರು. ಜಂಗಮ ಬಸದಿಗಳ ಜತೆಗೆ ಸ್ಥಾವರ ಬಸದಿಗಳೂ ಬಂದುವು. ಸ್ಥಾವರ ಬಸದಿಗಳ ನಿರ್ಮಾಣಕ್ಕೆ ಕಾಲಕ್ರಮದಲ್ಲಿ ನಾಂದಿ ಹಾಡಿದವರು ಗಂಗರು. ಭದ್ರಬುನಾದಿ ಕಟ್ಟಿದವರು ಆದಿ ಕದಂಬರು. ಇವರ ಸಮಕಾಲೀನರಾದ ಬದಾಮಿ ಚಾಳುಕ್ಯರು, ಅವರನ್ನು ಕೆಳಕ್ಕೆತಳ್ಳಿ ಬಂದ ರಾಷ್ಟ್ರಕೂಟರು, ಗಂಗರನ್ನೂ ರಟ್ಟರನ್ನೂ ಒಟ್ಟಿಗೆ ಸೋಲಿಸಿ ಗದ್ದುಗೆ ಹತ್ತಿದ ಕಲ್ಯಾಣಿ ಚಾಳುಕ್ಯರು, ಕಳಚುರ್ಯರು, ಹೊಯ್ಸಳರು, ಸೇವುಣರು – ಹೀಗೆ ಒಬ್ಬರಾದ ಮೇಲೆ ಒಬ್ಬರು ಬಂದರು, ಬಸದಿಗಳ ಪರಂಪರೆಗೆ ಜೀವ ತುಂಬಿದರು, ವೈಭವ ತಂದರು. ರಾಜ ಮಹಾರಾಜರಿಂದ ಹಿಡಿದು, ಎಲ್ಲ ಶ್ರೇಣಿಯ ಅಧಿಕಾರಿಗಳು ಮೊದಲುಗೊಂಡು ಸಾಮಾನ್ಯ ಪ್ರಜೆಯವರೆಗೆ ಜಿನರ ಪೂಜೆ ಮತ್ತು ಜಿನಮಂದಿರಗಳ ನಿರ್ಮಾನವು ಹೀಗೆ ಅಖಂಡವಾಗಿ ಅಧಿಕಾಧಿಕ ಸಂಖ್ಯೆಯಲ್ಲಿ ವೃದ್ಧಿಗೊಳ್ಳಲು ಇದ್ದ ಪ್ರೇರಣಗಳಲ್ಲಿ ಒಂದು:

ಯಸ್ಮಿನ್ ಜಿನೇನ್ದ್ರ ಪೂಜಾ ಪ್ರವರ್ತ್ತತೇ
ತತ್ರತತ್ರ ದೇಶ ಪರಿವೃದ್ಧಿಃ
ನಗರಾಣಾಂ ನಿರ್ಭಯತಾ ತದ್ದೇಶ
ಸ್ವಾಮಿನಾಂಚೋರ್ಜ್ಜಾ
| ನಮೋ ನಮಃ ||

[Corpus of Kannada Inscription (೧೯೮೫) ನಂ. ೨೪. ಅತೇದಿ. (ಕ್ರಿ.ಶ. ೫ ಶ.) ಹಲಸಿ. ಪು. ೯೫] [ಜಿನೇಂದ್ರರ ಪೂಜೆ ನಡೆಯುವ ದೇಶವು ವೃದ್ಧಿಸುವುದು, ನಗರಗಳು ನಿರ್ಭಯದಿಂದ ಇರುವುವು, ರಾಜನು ಊರ್ಜಿತವಾಗುವನು]

ಜಿನೇಂದ್ರ ಭವನೋದ್ದಾರಂ ಪುಸ್ತಕಂ ತಥಾ
ಸಂಘಶ್ಚತುರ್ವಿಧಶ್ಚೇತಿ ಸಂಪ್ರೋಕ್ತಂ ಕ್ಷೇತ್ರ ಸಪ್ತಕಂ
||

[ಜಿನಚೈತ್ಯಾಲಯ ಜೀರ್ಣೋದ್ದಾರ, ಜಿನಪ್ರತಿಮೆ ಮಾಡಿಸುವುದು, ಶಾಸ್ತ್ರ ಗ್ರಂಥ ಪ್ರಕಟಿಸುವುದು, ಋಷಿ ಅರ್ಜಿಕಾ ಶ್ರಾವಿಕಾ ಎಂಬ ನಾಲ್ಕು ಸಂಘಗಳಿಗೆ ಆಹಾರಾದಿ ದಾನ ಮಾಡುವುದು – ಈ ಏಳು ಕ್ಷೇತ್ರಗಳಲ್ಲಿ ಶ್ರಾವಕನು ತನ್ನ ನ್ಯಾಯರ್ಜಿತ ಸಂಪತ್ತನ್ನು ವ್ಯಯ ಮಾಡುತ್ತಾ ಆತ್ಮ ಕಲ್ಯಾಣಕ್ಕೆ ಹಾದಿಯನ್ನು ತೆರೆದುಕೊಳ್ಳಬೇಕು.]

ಜೈನ ಶ್ರಾವಕ (ಗೃಹಸ್ಥ) ರ ದಿನನಿತ್ಯದ ಧಾರ್ಮಿಕ ಪ್ರೇರಣೆ, ಆಚರಣೆಯೆಂದರೆ ಗೃಹಸ್ಥರಿಗಾಗಿ ನಿಯೋಜಿಸಿದ ಪವಿತ್ರ ಕರ್ತವ್ಯ ಪಾಲನೆ; ಅದು ಆಗಮವಾಚನ ಮತ್ತು ಶಾಸ್ತ್ರ ಶ್ರವಣ. ಅದರ ಪರಿಣಾಮ ಧರ್ಮಾನುರಾಗ ಮತ್ತು ಧರ್ಮಕಾರ್ಯಗಳಲ್ಲಿ ಆಸಕ್ತಿ. ಸ್ತ್ರೀ-ಪುರುಷ ತಾರತ್ಮ್ಯವಿಲ್ಲದೆ ಈ ಚಟುವಟಿಕೆ ಕೈಗೊಂಡರು:

ಕೆಱೆ ಬಾವಿ ಬಸದಿ ದೇಗುಲ
ಮಱವಂಟಿಗೆ ತೀರ್ತ್ಥಶತ್ರಮಾರವೆ ಮೊದಲಾ
ಗಱೆಕೆಯ ಧರ್ಮ್ಮಾದಿಗಳಂ
ನೆಱೆಮಾಡಿಸಿ ನೋಳ್ತಳೆಸಕೆ ಚಟ್ಟಲದೇವಿ
||

[ಎ.ಕ. ೭-೨, ನಗರ ೩೫.೧೦೭೭. ಹೊಂಬುಜ (ಶಿವಮೊಗ್ಗ ಜಿ. / ನಗರ ತಾ) ಪು. ೩೬೦ ಸಾಲು: ೬೪-೬೫]. ಏಕೆಂದರೆ ಎಲ್ಲದಕ್ಕೂ ಮೊದಲು ಶ್ರಾವಕರು ಧರ್ಮವನ್ನು ಚಿಂತಿಸಬೇಕೆಂಬ ಆಗಮೋಕ್ತಿಯ ಮೇಲ್ಪಂಕ್ತಿಯಿತ್ತು: ಧರ್ಮ್ಮಂ ಪ್ರಾಗೇವ ಚಿಂತೇತ್ ಎಂಬ ವಾಕ್ಯಾರ್ಥಮಂ ಭಾವಿಸಿ ತಮಗೆ ಶ್ರೇಯೋನಿಬಧನಾರ್ತ್ಥಮ್ ಉರ್ವ್ವೀತಿಳ ಮೆನಿಸಿದ ಪಂಚಬಸದಿಯಂ ಮಾರ್ಪ್ಪುದ್ಯೋಗ ಮನೆತ್ತಿಸಿಕೊಂಡಳು. [ಅದೇ : ನಗರ ೩೬. ೧೦೭೭. ಸಾಲು : ೮೯ -೯೨; ನಾಗರಾಜಯ್ಯ, ಹಂಪ.: ಸಾಂತರರು – ಒಂದು ಅಧ್ಯಯನ : ೧೯೯೭]. ಜೈನ ಸಮಾಜದ ಚತುಸ್ಸಂಘದಲ್ಲಿ ಶ್ರಾವಕ – ಶ್ರಾವಕಿಯರು ತಳೆದಿದ್ದ ಆದರ್ಶಜೀವನದ ಪರಿಕಲ್ಪನೆ ಹರಳುಗೊಂಡಿರುವ ನೂರಾರು ಶಾಸನಗಳಿವೆ. ಇದೇ ಪದ್ಯದ ಮಾದರಿಯನ್ನು ಮುಂದುವರಿಸಿದ ಇನ್ನೊಂದು ಉದಾಹರಣೆಯಿದೆ:

            ಕೆಱೆ ಬಾವಿ ಬಸದಿ ದೇಗುಲ
ಮಱವಟ್ಟಿಗೆ ಸತ್ರವೆಂಬ ಧರ್ಮ್ಮಮವಿನಿತುಂ
ನೆಱೆದವು ಮುಗುಂದ ಮೂವ
ತ್ತಱ ವಿಭು ಚಾವುಣ್ದರಾಯನಿಂದಂ ಜಗದೊಳ್
||

[ಸೌ.ಇ.ಇ. ೧೧-೨, ೧೭೭.೧೧೨೫. ಮಗದ (ಧಾರವಾಡ ಜಿ / ತಾ) ಪು. ೨೩೧ – ೩೬, ಸಾಲು : ೧೬-೧೭: ಬಾ.ಕ.ಇ. ೧-೨, ೧೭೭.೧೧೨೫. ನಾಗಾರ್ಜುನ ಪಂಡಿತ ಕವಿಯ ಶಾಸನ ಪದ್ಯ.] ಸಂದ ಸಾಂತಳಿಗೆ ನಾಡೊಳಪೂರ್ವ್ವ ಮೆನಲ್ಕೆ ದೇಗುಲಂ ಬಸದಿಯಗ್ರಹಾರಮನೆ ಮಾಡಿಸಿದಂ ಸಲೆಗೋನ ಭೂಭುಜಂ [ಎ.ಕ. ೮-೨, ಸಾಗರ. ೧೦೯ ೧೦೪ ೧೦೪೨. ಸಾಲು ೫೬.]. ಬಸದಿಗಳನ್ನುಕಟ್ಟಿಸುವುದು, ಧರ್ಮ ಕಾರ್ಯಗಳಲ್ಲಿ ಶ್ರೇಷ್ಠ ಹಾಗೂ ಶ್ಲಾಘ್ಯವೆನಿಸಿದರೆ, ಅವುಗಳನ್ನು ಹಳುಮಾಡುವುದು ಅಧರ್ಮಗಳಲ್ಲಿ ಅಧಮವಾದ ದ್ದೆನಿಸಿತು: (ಬಸದಿಯನ್ನು) ಇದನಱೆದುಣ್ಡೋನುಂ ಕೊಣ್ಡೋನುಂ ಕೆಱೆಯುಂ ಆರಮೆಯುಂ ಅಱೆದೊಂ ಪಞ್ಚ ಮಹಾಪಾತಕಂ [ಎ.ಕ. ೬ (೧೯೭೭) ಪಾಂಡವಪುರ ೧೬ (೧೧೧ ಶ್ರೀಪ ೧೪೭) ೯-೧೦ ಶ. ಕ್ಯಾತನಹಳ್ಳಿ (ಮಂಡ್ಯ ಜಿ. / ಪಾಂಡವಪುರ ತಾ. ೧೧೪).

ಈ ರೀತಿಯಲ್ಲಿ ಜೈನ ಸಮಾಜದಲ್ಲಿಯೂ, ಹಿಂದೂಗಳಲ್ಲಿ ಇರುವಂತೆ ತಮ್ಮ ಧರ್ಮದ ದೇವಾಲಯಗಳನ್ನು ಕಟ್ಟಿಸುವ ಧಾರ್ಮಿಕ ಪ್ರೇರಣೆ ಬಲವಾಗಿ ಬೇರೂರಿತು, ತತ್ಪರಿಣಾಮವಾಗಿ ಅವರವರ ಶಕ್ತಿ – ಭಕ್ತಿಗಳಿಗೆ ಅನುಗುಣವಾಗಿ ಬಸದಿಗಳನ್ನು ನಿರ್ಮಿಸಿದರು. ಹೆಂಗಸರು – ಗಂಡಸರೆಂಬ ಲಿಂಗಭೇದವಿಲ್ಲದೆ, ರಾಜ – ಪ್ರಜೆ ತಾರತಮ್ಯವಿರದೆ, ಅಧಿಕಾರಿ – ವರ್ತಕರೆಂಬ ವ್ಯತ್ಯಾಸಗಳಿಲ್ಲದೆ ಬಸದಿ ಕಟ್ಟಿಸಿದರು. ಕೆಲವರು ಒಂದೋ ಎರಡೋ ಬಸದಿಗಳನ್ನು ಮಾಡಿಸಿದರೆ, ಕೆಲವರು ನೂರಾರು ಬಸದಿ ಕಟ್ಟಿಸಿದರು. ಇದುವರೆಗೆ ತಿಳಿದು ಬಂದಿರುವ ಪ್ರಕಾರ, ಅತ್ಯಂತ ಹೆಚ್ಚಿನ ಬಸದಿಗಳನ್ನು ನಿರ್ಮಿಸಿದ ಮುರಿಯಲಾಗದ ದಾಖಲೆ ಇರುವುದು ಅತ್ತಿಮಬ್ಬೆಯ ಹೆಸರಲ್ಲಿ :

            ಆ ಸತಿ ಮುಮ್ಮಾಡಿಸಿದಾ
ಸಾಸಿರದಯ್ನೂಱು ಬಸದಿಗಿದು ಕಳಶಮೆನ ಲ್ಭಾಸುರಮಾಯ್ತು ಜಿನೇಂದ್ರಾ
ವಾಸಂ ತೊಳಗುವ ಸುವರ್ಣ್ನ ಕಳಶೋನ್ನತಿಯಿಂ
||

[ಸೌ.ಇ.ಇ. ೧೧-೧೫೨.೧೦೦೭. ಲಕ್ಕುಂಡಿ (ಧಾರವಾಡ ಜಿ/ಗದಗ ತಾ) ಪು. ೩೯-೪೩] ದಾನ ಚಿಂತಾಮಣಿ ಅತ್ತಿಮಬ್ಬೆಯು ೧೫೦೧ ಬಸದಿಗಳನ್ನು ಮಾಡಿಸಿದ್ದು ಊಹಾತೀತ ಅದ್ಬುತ ಸಾಧನೆ. ಅದು ಉತ್ಪ್ರೇಕ್ಷೆಯಲ್ಲ ಎಂಬುದಕ್ಕೆ ಅನ್ಯಾನ್ಯ ಪುರಾವೆಗಳಿವೆ. [ನಾಗರಾಜಯ್ಯ, ಹಂಪ. : ಕವಿವರ ಕಾಮಧೇನು ಅತ್ತಿಮಬ್ಬೆ : ೧೯೯೬]. ಮರಿಯಾನೆ ದಂಡನಾಥನ ತಮ್ಮನಾದ ಭರತಮಯ್ಯ ದಂಡನಾಯಕನು ಅತ್ತಿಮಬ್ಬೆಯ ಆದರ್ಶಗಳನ್ನು ಮುನ್ನಡೆಸಿದನು:

ಗಂಗವಾಡಿ ನಾಡೊಳಲ್ಲಿಗಲ್ಲಿಗೆಲ್ಲಿ ನೋರ್ಪಡಂ

            ಪ್ರಕಟಯಶೋವಿಭುವೆಣ್ಬ
ತ್ತು ಕನ್ನೆವಸದಿಗಳನೊಸೆದು ಜೀರ್ಣೋದ್ದಾರ
ಪ್ರಕರಮನಿನ್ನೂ ಱನಲೌ
ಕಿಕ ಧೃತಿ ಮಾಡಿಸಿದನೆಸೆಯೆ ಭರತ ಚಮೂಪಂ
||

[ಎ.ಕ. ೨, ೩೭೩ (೨೬೭) ೧೨ ಶ.ಪು. ೨೪೦ ಸಾಲು : ೧೦-೧೪] ಇದೇ ಪರಂಪರೆಯಲ್ಲಿ, ಹೊಯ್ಸಳರ ಮಹಾವೀರ ದಂಡನಾಯಕ ಗಂಗಚಮೂಪನ ಚಾರಿತ್ರಿಕ ಮಹತ್ಸಾಧನೆ ಗಳ ವೀರ ಶಾಸನಗಳಿರುವಂತೆ, ಧಾರ್ಮಿಕ ವಿಕ್ರಮಗಳ ಚಾಗದ ಕಂಬಗಲನ್ನೂ ನಿರ್ಮಿಸಲಾಗಿದೆ:

            ಮತ್ತಿನ ಮಾತವನ್ತಿರಲಿ ಜೀರ್ಣ್ನ ಜಿನಾಲಯ ಕೋಟಿಯಂ ಕ್ರಮಂ
ಬೆತ್ತಿರೆ ಮುಂನಿನಂತೆ ಪಲ ಮಾರ್ಗದೊಳಂ ನೆಱೆ ಮಾಡಿಸುತ್ತವ
ತ್ಯುತ್ತಮ ಪಾತ್ರ ದಾನದೊದವಂ ಮೆಱೆವುತ್ತಿರೆ ಗಂಗವಾಡಿ ತೊಂ
ಬತ್ತಱು ಸಾಸಿರಂ ಕೊಪಣಮಾದುದು ಗಂಗಣ ದಂಡನಾಥನಿಂ
||

[ಎ.ಕ. ೯ (೧೯೯೦) ಬೇ ೩೮೯. ೧೧೩೩. ಪು. ೩೫೩ – ೫೭] ಅತ್ತಿಮಬ್ಬೆ, ಗಂಗರು ನಿರ್ಮಿಸಿದ ಹೆದ್ದಾರಿಯಲ್ಲಿ ಹೊರಟು, ಚಾಳುಕ್ಯ ಸಾಮ್ರಾಜ್ಯದಲ್ಲಿ ಧ್ರುವತಾರೆಯಾದಳು, ಆ ಮಾರ್ಗದಲ್ಲಿ ಕ್ರಮಿಸಿದ ಗಂಗರಾಜನಂತೆಯೇ ಹೊಯ್ಸಳರ ಹುಳ್ಳ ದಂಡಾಧಿಪನೂ ಬಸದಿಗಳನ್ನು ಕಟ್ಟಿಸಿದ ಅಗ್ರಜರ ಸಾಲಿನಲ್ಲಿ ಎದ್ದು ಕಾಣುತ್ತಾನೆ:

            ಆ ಕೆಲ್ಲಂಗೆಱಿಯಾದಿ ತೀರ್ತ್ಥಮದು ಮುನ್ನಂ ಗಂಗರಿಂ ನಿರ್ಮಿತಂ
ಲೋಕ ಪ್ರಸ್ತುತಮಾಯ್ತು ಕಾಲವಶದಿಂ ನಾಮಾವಶೇಷಂ ಬಳಿ
ಕ್ಕಾ ಕಲ್ಪಸ್ಥಿರಮಾಗೆ ಮಾಡಿಸಿದನೀ ಭಾಸ್ವಜ್ಜಿನಾಗಾರಮಂ
ಶ್ರೀಕಾನ್ತಂ ತಲದಿನ್ದಮೆಯ್ದೆ ಕಳಸಂ ಶ್ರೀಹುಳ್ಳದಂಡಾಧಿಪಂ
||

[ಎ.ಕ. ೨ (೧೯೭೩) ೪೭೬ (೩೪೫) ೧೧೫೯. ಪು. ೨೮೯.] ಬೆಳ್ಳಿಯ ಬೆಟ್ಟಂಗಳ ನಿೞೆಪ ಜೈನ ನಿಳಯಂಗಳಂ ಮಾಡಿಸಿದ ರಟ್ಟರ ಮೇರು ಶಂಕರ ಗಂಡನು ‘ಜಯಧೀರ’ ಬಿರುದಾಂಕಿತನು. ಈತನು ನೇರಿಲ, ರೇವುಂಡಿ (ನಲ್ಗೊಂಡ ಜಿಲ್ಲೆ; ತುಮ್ಮೆಲಗುಡೆಂ ಆಂಧ್ರ,) ಕೊಪಣಾಚಲ – ಮೊದಲಾದ ಸ್ಥಳಗಳಲ್ಲಿ ಬಸದಿಗಳನ್ನು ಕಟ್ಟಿಸಿದನು. [ಎಪಿಜಿಎಆರಿ ೧೯೬೫, ಬಿ-೨೭೯, ಕ್ರಿ.ಶ. ೯೬೪. ಎ.ಆರ್.ಐ.ಇ ೧೯೭೩ – ೭೪, ಬಿ-೧೯: ಐ.ಎ.ಪಿ. ವರಂಗಲ್. ೩.೯೬೦.: ಎ.ಆರ್.ಐ.ಇ. ೧೯೬೧ – ೬೨. ಬಿ-೯೩.೧೦೬೭.]

ಪೆರ್ಗ್ಗಡೆ ನೊಕ್ಕಯ್ಯನು ಮಂಡಲಿ ಸಾಸಿರದ ಮತ್ತು ಸಾಂತಳಿಗೆ ಸಾಸಿರದ ವ್ಯಾಪ್ತಿಯೊಳಗೆ ಬರುವ ತಟ್ಟಿಕೆರೆ, ಹರಿಗೆ, ನೆಲ್ಲವತ್ತಿ (ಇಂದಿನ ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾ. ನ್ಯಾಮತಿ) ಮುಂತಾದ ಕಡೆಗಳಲ್ಲಿ ಒಟ್ಟು ಆರು ಬಸದಿಗಳನ್ನು ಮಾಡಸಿದನು [ಎ.ಕ. ೭. ಶೀಮೊಗ್ಗ ೧೦.೧೦೮೫]. ಕದಂಬಕುಲ ಕೀರ್ತಿದೇವನ ಆಗ್ರಮಹಿಷಿ ಮಾಳಲದೇವಿಯು ಕುಪ್ಪಟೂರಲ್ಲಿ (ಶಿವಮೊಗ್ಗ ಜಿ. ಸೊರಬ ತಾ.) ಮಾಡಿಸಿದ ಬ್ರಹ್ಮಜಿನಾಲಯ (ಪಾರ್ಶ್ವನಾಥ ಜಿನಾಲಯ) ವಂತೂ ಅತ್ತಿಮಬ್ಬೆ ಕಟ್ಟಿಸಿದ ಬ್ರಹ್ಮಜಿನಾಲಯದಂತೆ ಕೀರ್ತಿಶಾಲಿಯಾದುದು [ಎ.ಕ. ೮-೨. ಸೊರಬ. ೨೬೨. ೧೦೭೭]. ಕನಕಿಯಬ್ಬರಸಿಯು ಬಸದಿ ಇಲ್ಲದೆಡೆ ಬಸದಿಗಳನ್ನು ಕಟ್ಟಿಸಿದಳು, ರಿಷಿಮುನಿ ಆರ್ಜಿಕೆಯರ ಆಹಾರ ದಾನಕ್ಕೆ ದಾನಮಾಡಿದಳು [ಅದೇ : ಸೊರಬ. ೨೩೩, ೧೧೩೯].

ಆಂಧ್ರದಲ್ಲಿಯೂ ಇದೇ ಹುರುಪಿನಿಂದ, ಧರ್ಮವತ್ಸಲತೆಯಿಂದ ನೂರಾರು ಬಸದಿಗಳು ನಿರ್ಮಾಣವಾದುವು. ಅವುಗಳಲ್ಲಿ ಕನ್ನಡಿಗರು ಕಟ್ಟಿಸಿದ ಕೆಲವು ಬಸದಿಗಳನ್ನು ಹೆಸರಿಸುತ್ತೇನೆ (ಅಧ್ಯಯನಕ್ಕೆ ಅನುಕೂಲವಾಗುವಂತೆ ಅಕಾರಾದಿಯಾಗಿ ಕೊಡುತ್ತೇನೆ) ಅಕ್ಕಬಸದಿ [ಎ.ಆರ್.ಐ.ಇ., ೧೯೬೧-೬೨. ಬಿ.-೯೨: ಎ.ಪಿ.ಜಿ.ಎ.ಎಸ್. ೩, ಎನ್‍ಜಿ ೪೩, ೪೫, ೧೧೨೫]. ಕಟಕಾಭರಣಜಿನಾಲಯ [ಎ.ಇ. ೯, ೬. ಪು. ೪೭]. ಕದಲಾಲಯ ಬಸದಿ [ಐ.ಎ.ಪಿ. ವರಂಗಲ್ ೨೨. ೧೧೧೭] ಕಮ್ಮರಚೇಡು ಜಿನಾಲಯ, ಕೀರ್ತಿ ವಿಳಾಸ ಶಾನ್ತಿಜಿನಾಲಯ, ಜಯಧೀರ ಜಿನಾಲಯ [ಎ.ಪಿ.ಜಿ.ಆರ್.ಇ. ೧೯೬೫. ಬಿ-೨೭೯] ತಾಡಪತ್ರಿ ಚಂದ್ರಪ್ರಭ ಬಸದಿ, ತ್ರಿಭುವನತಿಲಕ [ಸೌ.ಇ.ಇ.೬, ೭೯೮. ೧೨೦೮], ಕ್ರಿ.ಶ. ಎಂಟನೆಯ ಶತಮಾನದಷ್ಟು ಪ್ರಾಚೀನವಾದ (ವಿಜಯವಾಡದಲ್ಲಿ ಕಟ್ಟಲಾದ) ನಡುಂಬಿ ವಸತಿ [ಎ.ಆರ್. ಎಸ್.ಇ.ಐ.ಇ. ೧೯೧೬-೧೭. ಎ-೯. ಕ್ರಿ.ಶ. ೭೧೫], ಪಲ್ಲವಜಿನಾಲಯ [ಎ.ಇ. ೪೦-೨, ೧೦೮೭: ಎ.ಪಿ.ಜಿ.ಎ.ಎಸ್. ೩ ಮೆಹಬೂಬ್ ನಗರ ೫೮.ನಂ. ೩೩.೧೦೮೭] ಬಿಟ್ಟಿ ಕುಳತಿಳಕ ಜಿನಾಲಯ [ಐ.ಎ.ಪಿ. ವರಂಗಲ್. ೧೮.೧೧೦೮] ಯುದ್ಧ ಮಲ್ಲಜಿನಾಲಯ [ಐ.ಎ.ಪಿ. ಕರೀಂನಗರ. ೧೪. ೧೦೫೧], ವೀರಕಮಲ ಜಿನಾಲಯ [ಎ.ಆ. ೧.೧೦. ೧೦೮೨], ವೈದ್ಯರತ್ನಾಕರ ಜಿನಾಲಯ [ಜೆಎಸ್.ಐ. ಪು.೮] ವಿಜಯವಾಡದ [ವಿಜಯವಾಟಿಕಾ, ಬೆಜವಾಡ]. ಇನ್ನೆರಡು ಜಿನಾಲಯಗಳು [ಎ.ಇ. ೭. ಪು.೧೭೭] ಮೊದಲಾದವು ಶಾಸನಗಳಲ್ಲಿ ವರ್ಣಿತವಾಗಿವೆ. ಇವುಗಳಲ್ಲಿ ಕದಲಾಲಯ ಬಸದಿಯು, ಹನುಮಕೊಂಡ ಗುಡ್ಡದ ಪದ್ಮಾಕ್ಷಿ ದೇವಾಲಯವು ಜೈನ ಜಿನಶಾಸನಗದೇವಿಯ ಪ್ರಭಾವ ಬೀರುವ ದೇವಾಲಯ. ಜೈನ ಯಕ್ಷಿಯನ್ನು ಇಲ್ಲೀಗ ‘ದುರ್ಗಿ’ ಎಂದು, ಹಿಂದೂ ದೇವತೆಯೆಂದು ಪೂಜಿಸಲಾಗುತ್ತಿದೆ. ಸಚಿವ ಗಂಗಾಧರನು ಈ ಗುಡಿಯನ್ನು ಖಣ್ಡಸ್ಫುಟಿತ ಜೀರ್ಣೋ ದ್ಧಾರಗೊಳಿಸಿದ್ದು ದಾಖಲಾಗಿದೆ. [ಎ.ಇ. ೯, ಪು. ೨೫೭: ಜೆ.ಎ.ಎಚ್.ಆರ್.ಎಸ್. ೩೬-೧. ಪು. ೫೮-೬೨]. ಕೊಲನುಪಾಕದ ಚೇನಿಂಚೆ ಬಸದಿಯನ್ನೂ ಇಲ್ಲಿ ಉಲ್ಲೇಖಿಸಬಹುದು [ಎಆರ್‌ಐಇ ೧೯೬೧-೬೨, ಬಿ-೬೫]. ಕರ್ನಾಟಕದಲ್ಲಿ ನೂರಾರು ಜಿನಗೃಹಗಳ ನಿರ್ಮಾಣಕ್ಕೆ ಕಾರಣರಾದ ಗಂಗರು, ಆಂಧ್ರದ ಪೇರೂರಿನಿಂದ ಬಂದವರೆಂಬುದನ್ನು ಇಲ್ಲಿ ನೆನೆಯಬಹುದು. ತಮಿಳು ನಾಡಿನಲ್ಲಿ ನಡೆದಂತೆ ಆಂಧ್ರದಲ್ಲಿಯೂ ಜಿನಮಂದಿರಗಳ ನಾಶ ಹಾಗೂ ಪರಿವರ್ತನೆಯ ಕೆಲಸ ಬಹಳ ಹಿಂದೆಯೇ ನಡೆಯಿತು. ಆಂಧ್ರದಲ್ಲಿಯಂತೂ ಈ ಕೆಲಸ, ಬಸದಿಗಳ ವಿಧ್ವಂಸನ, ಎಷ್ಟು ವ್ಯವಸ್ಥಿತವಾಗಿ ಮತ್ತು ವ್ಯಾಪಕವಾಗಿ ನಡೆಯಿತೆಂದರೆ, ಇಂದು ಅಲ್ಲಿ ಜೈನರ ಕುರುಹುಗಳನ್ನು, ಹಗಲಲ್ಲಿ ಪಂಜು ಹಾಕಿಯೇ ಹುಡುಕಬೇಕು.

ತಮಿಳು ನಾಡಿನ ಧಾರ್ಮಿಕ ಚರಿತ್ರೆಯಲ್ಲೂ ಜೈನ ಮತ – ಧರ್ಮವು ಶೈವ ವೈಷ್ಣವರ ಆಕ್ರಮಣದಲ್ಲಿ ನುಚ್ಚುನೂರು ಆದದ್ದು ಶಾಸನಗಳಲ್ಲಿ ಲಿಖಿತವಾಗಿದೆ. ವೇದಬಾಹ್ಯಗಳಾದ ಜೈನ-ಬೌದ್ಧ ಧರ್ಮಗಳ ಮುನ್ನಡೆಯನ್ನು ನಿಯಂತ್ರಿಸಲೂ, ಜನಪದರನ್ನು ತನ್ನತ್ತ ಸೆಳೆಯಲೂ ವೈದಿಕ ಪರಂಪರೆಯ ಶಾಖೆಗಳು ಭಕ್ತಿಚಳುವಳಿ ಯನ್ನು ವ್ಯಾಪಕಗೊಳಿಸಿದುವು. ತೇವಾರಂ ದಿವ್ಯಪ್ರಬಂಧಂ, ಪೆರಿಯ ಪುರಾಣಂ ಮೊದಲಾದುವು ಜೈನ ವಿರೋಧಿಯೂ ಬ್ರಾಹ್ಮಣ ಪರವೂ ಆದ ನಿಲುವನ್ನು ನಿನದಿಸಿವೆ. ಜೈನರ ಆಚಾರ ವಿಚಾರಗಳನ್ನು ವಿಡಂಬಿಸಿ ಖಂಡಿಸಲಾಗಿ, ಇಡೀ ತಮಿಳು ನಾಡಿನಲ್ಲಿ ಮತೀಯ ಕಲಹಗಳಾದುವು. ಮದುರೈ, ತಿರುವೊತ್ತೊರು, ತಿರುವಾರೂರು, ತಿರುಪ್ಪಾತಿರಿಪುಲಿಯೂರು ಮೊದಲಾದ ಸ್ಥಳಗಳಲ್ಲಿ ನಡೆದ ಮತಗಾ ನಡುವಣ ಈ ಜಗಳದ ಪರಿಣಾಮವಾಗಿ ಜೈನರಮೇಲೆ ದಾಳಿಗಳಾದುವು, ಕೊಲೆಗಳೂ ಆದುವು; ಜೈನ ಬಸದಿಗಳು ಪುಡಿ ಪುಡಿಯಾದುವು ಇಲ್ಲವೇ ಪರಿವರ್ತಿತವಾದುವು.

ಅಹಿಂಸಾರಾಧಕರೂ ಅಲ್ಪಸಂಖ್ಯಾಕರೂ ಆದ ಜೈನರು ಉಗ್ರತೆಗಾಗಲೀ, ಪ್ರತೀಕಾರಕ್ಕಾಗಲೀ, ಹಿಂದೂ ದೇವಾಲಯಗಳ ನಾಶಕ್ಕಾಗಲೀ ತೊಡಗಲಿಲ್ಲ : The Jaina adherents true to their faith, had not resorted any violent means to counteract the antagonistic attitude of brahmanical followers. Instead, they assimilated many elements from brahmanism and avvommodated them suitably in their own religion. Changes had been acceped in the mode of worship and iconographic forms of the sasana devatas… The Jains resorting to conversion of Hindu temples is unheard in their religious history” [A. Ekambaranathan, Religious conflicts and conversion of Jain temples in Tamilnadu, ‘ JAINJOURNAL’, April 1994.pp. 161-68]. ಹಿಂದೂಗಳ ಹಿಂಸಾತ್ಮಕ ಆಕ್ರಮಣಗಳಿಂದ ತಮಗಾದ ನೋವು ಮತ್ತು ಆತಂಕಗಳನ್ನು ಜೈನರು ತಮ್ಮ ಕಥೆಗಳಲ್ಲಿ, ಪುರಾಣಗಳಲ್ಲಿ ತೋಡಿಕೊಂಡಿದ್ದಾರೆ.

ಶೈವಗುರು ದಂಡಿಅಡಿಗಳ್ ಎಂಬುವರು ತಿರುವಾರೂರಿನಲ್ಲಿ ಶಿವಾಲಯದ ಕೆರೆಯನ್ನು ವಿಸ್ತರಿಸುವ ನೆಪದಲ್ಲಿ ಅಲ್ಲಿದ್ದ ಜೈನ ಮನೆ ಮಠ ಮಂದಿರಗಲನ್ನು ನೆಲಸಮ ಮಾಡಿದರು. ಶಿವಮಾಹಿಮಾ ಸ್ತೋತ್ರಗಳಿಂದ ಜನಸಮಾನ್ಯರಲ್ಲಿ ಜೈನರ ವಿರುದ್ಧದ ಭಾವನೆಗಳನ್ನು ಬಿತ್ತುತ್ತ ಸಂಬಂದರ್ ತಮಿಳುನಾಡಿನ ಉದ್ದಗಲಗಳಲ್ಲಿ ಸಂಚರಿಸಿದರು. ಮದುರೈಗೆ ಬಂದಾಗ ಅಲ್ಲಿನ ರಾಜನಾದ ಕೂನಪಾಂಡ್ಯನ ಹೊಟ್ಟೆ ನೋವನ್ನು ಹೋಗಲಾಡಿಸಿದರು. ಜೈನ ಸನ್ಯಾಸಿಗಳು ಗುಣಪಡಿಸಲಾಗದ ಉದರ ಶೂಲೆಯನ್ನು ಶೈವಗುರು ಸಂಬಂಧರ್ ವಾಸಿ ಮಾಡಿದ್ದರಿಂದ, ರಾಜ ಕೂನಪಾಂಡ್ಯನು ಜೈನಧರ್ಮವನ್ನು ತೊರೆದು ಶೈವನಾಗಿ ಮತಾಂತರ ಮಾಡಿದನು. [ಇದರ ಆಧಾರದಿಂದ ಸ್ಫೂರ್ತಿಗೊಂಡು ಹುಟ್ಟಿದ ಕಟ್ಟು ಕಥೆಯೇ ಹೊಯ್ಸಳ ಬಿಟ್ಟದೇವನು, ರಾಮಾನುಜರು ತನ್ನ ಮಗಳ ಕಾಹಿಲೆಯನ್ನು ಗುಣಪಡಿಸಿದರೆಂದು, ಜೈನಧರ್ಮ ತೊರೆದು ವೈಷ್ಣವನಾದ ಎಂಬುದು. ಇದಕ್ಕೆ ಯಾವ ಶಾಸನಾಧಾರಗಳ ಬೆಂಬಲವೂ ಇಲ್ಲ].

ಜೈನಮತದಿಂದ ಶೈವಮತಕ್ಕೆ ಮತಾಂತರ ಮಾಡಿದ ಕೂಮಪಾಂಡ್ಯನು ಜೈನರಿಗೆ ಚಿತ್ರಹಿಂಸೆ ಕೊಟ್ಟನು: ಸಂಬಂಧರರ ಆದೇಶದಂತೆ ಎಂಟು ಸಾವಿರ ಜೈನ ಮುನಿಗಳಿಗೆ ಉಪದ್ರವ ಕೊಟ್ಟನು. ಮದುರೈನಲ್ಲೆ ಅಲ್ಲದೆ ಇದೇರೀತಿ ತಿರುವೋತ್ತೂರು, ಪನತಗೈ ಎಂಬಲ್ಲೂ ಧಾರ್ಮಿಕ ಕಾರಣಕ್ಕಾಗಿ ಸಂಬಂಧರ್ ಮುನಿಗಳ ಉಪದೇಶದಿಂದ ಪ್ರೇರಣೆಗೊಂಡು ಜೈನರ ಗುರು ವೃಂದವನ್ನೂ ಶ್ರಾವಕ ಸಮುದಾಯವನ್ನೂ ಹಿಂಸೆಗೆ ಗುರಿಪಡಿಸಲಾಯಿತು. ಶೂಲಕ್ಕೇರಿಸಲಾಯಿತು. ಈ ಅಟ್ಟುಳಿಯನ್ನು ಪೆರಿಯ ಪುರಾಣದಲ್ಲಿ ವರ್ಣಿಸಿದೆ [ಪೆರಿಯ ಪುರಾಣಮ್ : ದಂಡಿ ಅಡಿಗಳ್ ಪುರಾಣಮ್ ೧೫-೨೪; ಸಂಬಂಧರ್ ಪುರಾಣಮ್ ೬೦೦-೮೫೦] ದೇವಾಲಯ ಶಿಲ್ಪಗಳಲ್ಲೂ ಚಿತ್ರಗಳ ಮೂಲಕ ಜೈನರಿಗಾದ ಅಪಮಾನಕರ ಚಿತ್ರಹಿಂಸೆಗಳನ್ನು ತೋರಿಸಲಾಗಿದೆ.

ಕಾಂಚಿಯ ರಾಜನಾದ ಒಂದನೆಯ ಮಹೇಂದ್ರ ವರ್ಮನು ಅಪ್ಪಟ ಜೈನನಾಗಿದ್ದನು (ಕ್ರಿ.ಶ. ೬೦೦-೬೩೦). ಆತನ ತಂದೆ ಸಿಂಹವಿಷ್ಣುವೂ ತಾತ ಸಿಂಹವರ್ಮನೂ ಜಿನಧರ್ಮಪರಾಯಣರು. ಶೈವಾಚಾರ್ಯ ಅಪ್ಪರ್ ಅವರ ಪ್ರಭಾವದಿಂದ ಜೈನ ಧರ್ಮವನ್ನು ತೊರೆದು ಮಹೇಂದ್ರವರ್ಮನು ಶೈವನಾದನು. ಸ್ವಯಂ ಅಪ್ಪರ್ ಅವರೇ ಮೊದಲಿಗೆ ಜೈನ ಸನ್ಯಾಸಿ ಆಗಿದ್ದರು; ಅವರು ಆರಂಭದಲ್ಲಿ ತಿರುಪ್ಪಾತಿರಿ ಪುಲಿಯೊರ್ ಎಂಬಲ್ಲಿದ್ದ ಜೈನ ಮಠದ ಪಟ್ಟಾಚಾರ್ಯರೂ ಆಗಿದ್ದರು. ಕಾಲಾಂತರದಲ್ಲಿ ಜೈನಧರ್ಮವನ್ನು ತೊರೆದು ಶಿವಜ್ಞಾನಿಯಾಗಿ ಶೈವಮತಕ್ಕೆ ಮತಾಂತರಗೊಂಡರು. ಶೈವ ಅಪ್ಪರರ ವರ್ಚಸ್ಸಿನಿಂದ ಜೈನ ಮಹೇಂದ್ರವರ್ಮನು ಶೈವನಾದನು; ಮಹೇಂದ್ರ ಪಲ್ಲವ ರಾಜನು ತಾನು ಬಿಟ್ಟು ಬಂದ ಜೈನ ಧರ್ಮದ ಬಸದಿಗಳನ್ನು ಹಾಳುಗೆಡವಿದನು. ಅಲ್ಲದೆ ಜಿನಾಲಯಗಳನ್ನು ಕೆಡವಿ ಅದರ ಇಟ್ಟಿಗೆ ಕಲ್ಲುಗಳಿಂದಲೇ ತಿರುವತಿಗೈ ಎಂಬಲ್ಲಿ ಶಿವಾಲಯ ಕಟ್ಟಿಸಿದನು [ಪೆರಿಯ ಪುರಾಣಮ್ : ತಿರುನಾವುಕ್ಕರಸರ್ ಪುರಾಣಮ್, ೧೪೫-೧೪೬]

ಆದರೆ ಚರಿತ್ರಕಾರರು ಈ ಸಂಗತಿಯನ್ನು ಸಂಶಯದಿಂದ ಕಂಡಿದ್ದಾರೆ. ಮಹೇಂದ್ರ ಪಲ್ಲವ ರಾಜನು ಜೈನ ಮತವನ್ನು ತೊರೆದು ಶೈವನಾದುದನ್ನು ಇತಿಹಾಸಕಾರರು ಒಪ್ಪಿದ್ದಾರೆಯೇ ಹೊರತು, ಅನಂತರ ಆ ರಾಜನು ಜೈನರನ್ನು ಉಗ್ರತರವಾಗಿ ಶಿಕ್ಷಿಸಿ ತೊಂದರೆ ಕೊಟ್ಟುದನ್ನೂ, ಜಿನಾಲಯಗಳನ್ನು ಕೆಡವಿದ ಎಂಬುದನ್ನೂ ಅನುಮೋದಿಸಿಲ್ಲ [ಸೌ.ಇ.ಇ. ೧, ೩೩. ಪು. ೨೯]. ಕುಂಬಕೋಣಂ ಸಮಿಪದ ಪಲಯಾಡೈನಲ್ಲಿದ್ದ ಜಿನಗೃಹವನ್ನು ಅಪ್ಪರ್ ಶಿವಮಂದಿರವಾಗಿ ಮಾರ್ಪಾಡಿಸಿದರು [ಪೆರಿಯಪುರಾಣಮ್: ತಿರುನಾವುಕ್ಕರಸರ್ ಪುರಾಣಮ್, ೨೯೪-೯೫]. ಒಂಬತ್ತನೆಯ ಶತಮಾನದ ಕಳಗುಮಲೈ ಶಾಸನದ ಆಧಾರದಿಂದ ಪಲಯಾಡೈ ಜೈನ ಕೇಂದ್ರವಾಗಿತ್ತೆಂದು ತಿಳಿದು ಬರುತ್ತದೆ. [ಸೌ.ಇ.ಇ. ೫ ನಂ. ೩೨೦. ೯ನೇ ಶತಮಾನ]

ತಿರುಪ್ಪುಗಲೂರಿನ ವರ್ಧಮಾನೇಶ್ವರ ಶಿವಾಲಯವು ಮೂಲತಃ ವರ್ಧಮಾನ ಮಹಾವೀರನ ಜಿನಾಲಯ [ಮಯಿಲಿ ಸೀನಿ ವೆಂಕಟಸ್ವಾಮಿ, ‘ಜೈನಿಸಂ ಅಂಡ್ ತಮಿಳ್’, ಪು. ೧೪೦]. ವಿಲ್ಲುಪ್ಪುರಂ ಹತ್ತಿರದ ಕೂಲಿಯನೂರ್, ಮೈಲಾಪುರ ಎಂಬ ನಗರಗಳಲ್ಲಿದ್ದ ಜಿನಾಲಯಗಳನ್ನು ಮತಕಲಹದಿಂದ ನಾಶಪಡಿಸಲಾಯಿತು. [Mackenzie 0Manuscripts, No. 13:7]

ಕ್ರಿ.ಶ. ಹದಿನೈದನೆಯ ಶತಮಾನದಲ್ಲಿ ವಿಜಯನಗರದ ಪ್ರತಿನಿಧಿಯಾಗಿ ಜಿಂಜೀ ಎಂಬಲ್ಲಿಂದ ವೆಂಕಟಪತಿನಾಯಕನಿಗೆ ಜೈನ ಸಮಾಜದವರು ಹೆಣ್ಣು ಕೊಡಲು ನಿರಾಕರಿಸಿದರು. ಆತನು ಕುಪಿತನಾದನು, ಜೈನರನ್ನು ಸಂಹರಿಸತೊಡಗಿದನು. ಇದರಿಂದ ಹೆದರಿದ ಜೈನರು ಜಿಂಜೀ, ದಿಂಡಿವನಮ್ ಎಂಬ ಊರುಗಳಿಂದ ಪಲಾಯನ ಮಾಡಿದರು. ಅಲ್ಲೇ ಉಳಿದುಕೊಂಡವರು ಹಿಂದೂಗಳಾಗಿ ಮತಾಂತರಿಸಿ ದರು. ಇನ್ನು ಕೆಲವರು ಗುಪ್ತವಾಗಿ ಜೈನರಾಗಿದ್ದರು [ಮೆಕೆಂಜೀ ಮಾನುಸ್ಕೃಟ್ಟ್ಸ್, ನಂ. ೧೧:೨] ಮದಾರಸು ಮಹಾನಗರದ ನಡುವೆ ಇರುವ ಬಡಾವಣೆ ಮೈಲಾಪುರದಲ್ಲಿಯೂ ಒಂದು ಪ್ರಾಚೀನ ನೇಮಿನಾಥ ಬಸದಿಯಿತ್ತು. ಚೋಳದೇಶದ ಬ್ರಾಹ್ಮಣರು ಮೈಲಾಪುರವಾಸಿಗಳಾದ ಜೈನರನ್ನು ಮತಾಂತರ ಮಾಡಿ ಬಸದಿಗಳಲ್ಲಿ ಶಿವಲಿಂಗ ಸ್ಥಾಪಿಸಿದರು. [ಅದೇ: ನಂ. ೧೩:೨]. ಮೈಲಾಪುರದಲ್ಲಿ ನೇಮಿನಾಥ ಬಸದಿ ಇದ್ದುದಕ್ಕೆ ಶಾಸನ ಮತ್ತು ಸಾಹಿತ್ಯ ದಾಖಲೆಯ ಅನ್ಯಾನ್ಯ ಪೋಷಕ ಆಧಾರಗಳೂ ಸಹ ಉಪಲಬ್ಧವಾಗಿವೆ. [H.Hosten: ‘Antiques from Santhome and Mylapore’, P. 74: ಅವಿರೋತಿ ಆಳ್ವಾರ್, ತಿರುನೂಱ್ಹಂತಾತಿ, ಪದ್ಯ ೪ ರಿಂದ ೬೦]. ಇಲ್ಲಿದ್ದ ಶಿಲೆ ಮತ್ತು ಲೋಹದ ನೇಮಿನಾಥ ಮೂರ್ತಿಗಳನ್ನು. ಈ ಬಸದಿಯು ನಾಶವಾದಾಗ, ಚಿತ್ತಾಮೂರಿಗೂ ಎಳಂಗಾಡಿಗೂ ಸಾಗಿಸಲಾಗಿದೆ. [A, Ekambaranathan: History of Chittamur, ‘Mukkudai’ – January 197, P. 42] ತಿರುನೆಲ್ವೇಲಿಜಿಲ್ಲೆಯ ಮಲೈಯಡಿಕ್ಕುರುಚ್ಚಿ ಎಂಬ ಊರಿನಲ್ಲಿರುವ ಪಾಂಡ್ಯ ಸೇಂದನ್ ಮಾರನ್ (ಕ್ರಿ.ಶ. ೬೪೪-೯೫) ಕಾಲದ ಜೈನ ಗುಹಾಂತರ ದೇವಾಲಯವು ಶೈವದೇವಾಲಯವಾಗಿದೆ. ಜೈನಮತದಿಂದ ಶೈವಮತಕ್ಕೆ ಕೂನಪಾಂಡ್ಯನು ಮತಾಂತರ ಮಾಡಿದ್ದರ ಪರಿಣಾವಾಗಿ ಈ ಬಂಡೆ ಬಸದಿಯು ಶಿವಮಂದಿರವಾಯಿತು [A. Ghosh(ed): ‘Jainaartandaechitecture’, Vo1.11. p. 208]

ಇದೇ ಮತಿಯ ವೈಷಮ್ಯದಿಂದಾಗಿ ಮಲೈಯಹಿಕ್ಕುರಿಚ್ಚಿಗೆ ಹತ್ತಿರವಿರುವ ಚೊಕ್ಕಂಪಟ್ಟಿಯ ಜೈನ ಶಿಲಾಗುಹೆಯೂ ಏಳನೆಯ ಶತಮಾನದಲ್ಲಿ ಅಪೂರ್ಣವಾಗಿ ನಿಂತುಹೋಯಿತು.

ಕನ್ಯಾಕುಮಾರಿ ಜಿಲ್ಲೆಯ ಚಿತರಾಲ್ – ತಿರುಚ್ಚಾರಣತ್ತುಮಲೈ ಎಂಬುದು ಪ್ರಾಚೀನ ಜೈನ ಕೇಂದ್ರ. ಇಲ್ಲಿನ ನೈಸರ್ಗಿಕ ಗುಹೆಯಲ್ಲಿ ಎರಡು ಸಾಲು ಜೈನ ಮೂರ್ತಿಗಳನ್ನು ಕೊರೆಯಲಾಗಿದೆ. ಒಂದು ಸಾಲಿನಲ್ಲಿ ಹನ್ನೆರಡು ತೀರ್ಥಂಕರ ಮೂರ್ತಿಗಳೂ, ಇನ್ನೊಂದರಲ್ಲಿ ಆದಿನಾಥ ಪಾರ್ಶ್ವನಾಥ ಮಹಾವೀರ ತೀರ್ಥಂಕರ ಮತ್ತು ಅಂಬಿಕಾ ಯಕ್ಷಿಯ ಮೂರ್ತಿಗಳೂ ಇವೆ. ಗುಹೆಯೊಳಗೆ ಗೂಡುಗಳನ್ನು ಕೊರೆಯಲಾಗಿದ್ದು, ಅದರೊಳಗೆ ಪದ್ಮಾವತಿ ಯಕ್ಷಿಯ ಹಾಗೂ ಪಾರ್ಶ್ವನಾಥ ಮತ್ತು ಮಹಾವೀರ ತೀರ್ಥಂಕರರ ವಿಗ್ರಹಗಳಿವೆ. ಇಲ್ಲಿರುವ ಪದ್ಮಾವತೀ ಯಕ್ಷಿಯ ಮಹಿಮೆ ಇಂದಿಗೂ ಹಿಂದೂಗಳಲ್ಲಿ ಮುಂದುವರಿದಿದೆ. [ಆಂಧ್ರದ ಹನುಮಕೊಂಡದಲ್ಲಿ ‘ದುರ್ಗಿ’ ಹೆಸರಿನಿಂದಲೂ, ಕರ್ನಾಟಕದ ಸೌದತ್ತಿಗುಡ್ಡದಲ್ಲಿ ‘ಎಲ್ಲಮ್ಮ’ ಹೆಸರಿ ನಿಂದಲೂ ಪದ್ಮಾವತೀದೇವಿಯು ಲಕ್ಷಾಂತರ ಹಿಂದೂಗಳ ಆರಾಧನೆಯ ಮೂರ್ತಿಯಾಗಿ ರಾರಾಜಿಸುತ್ತಿದ್ದಾಳೆ]. ಕ್ರಿ.ಶ. ಒಂಬತ್ತನೆಯ ಶತಮಾನದಲ್ಲಿಯೇ ಮುತ್ತುವಾಲ ಕುರತ್ತಿಯಾರ್ ಮತ್ತು ಗುಣಂತಾಂಗಿ ಕಂತಿಯರು ಸುವರ್ಣ ಆಭರಣ ಹಾಗೂ ಇತರ ಕೊಡುಗೆಗಳನ್ನು ಪದ್ಮಾವತೀ ಜಿನಶಾಸನದೇವಿಗೆ ನೀಡಿದ್ದರು. ಕ್ರಿ.ಶ. ಹದಿಮೂರನೆಯ ಶತಮಾನದಲ್ಲಿ ಈ ಪದ್ಮಾವತಿಯಕ್ಷಿಗೆ ಸುತ್ತ ಗಾರೆಯಿಂದ ಬಂದೋಬಸ್ತುಮಾಡಿ ‘ಭಗವತೀ’ ಎಂಬ ಹಿಂದೂ ಹೆಸರುಕೊಟ್ಟು ಆ ಜೈನ ಸಮಾಜವೂ ಭಕ್ತಿಯಿಂದ ಆರಾಧಿಸುತ್ತದೆ. ಅಲ್ಲದೆ ಈ ಗುಹೆಯಲ್ಲಿರುವ ಇತರ ಯಾವ ತೀರ್ಥಂಕರ ಮೂರ್ತಿಗೂ ಮುಕ್ಕಾಗಿಲ್ಲವೆಂಬುದು ಗಮನಿಸಬೇಕಾದ ಅಂಶ. ಒಂದು ಕಡೆ ವಿಧ್ವಂಸನ ನಡೆದಿದ್ದರೆ ಅದಕ್ಕೆ ಸಮಾನಾಂತರವಾಗಿ ಇನ್ನೊಂದೆಡೆ ಸಂರಕ್ಷಣೆಯೂ ಆಗಿದೆ ಎಂಬುದಕ್ಕೆ ಇದೊಂದು ಜ್ವಲಂತ ಸಾಕ್ಷಿ.

ಕನ್ಯಾಕುಮಾರಿಯ ನಾಗರಕೋಯಿಲ್ ನಗರ ಕ್ರಿ.ಶ. ೮ ರಿಂದ ೧೬ ನೆಯ ಶತಮಾನದವರೆಗೆ ಪವಿತ್ರ ಜೈನ ಕೇಂದ್ರವಾಗಿ ಖ್ಯಾತಿ ಪಡೆದಿತ್ತು. ಇಲ್ಲಿರುವ ಈಗಿನ ಹೆಸರಾಂತ ನಾಗರಾಜ ದೇವಾಲಯವು ಹಿಂದೆ ಜೈನ ಬಸದಿಯಾಗಿದ್ದುದಕ್ಕೆ ಶಾಸನ ಹಾಗೂ ವಾಸ್ತುಶಿಲ್ಪದ ಆಧಾರಗಳಿವೆ. ಇಲ್ಲಿ ನಡುವಣ ಗುಡಿಯ ಮಂಡಪದಲ್ಲಿ ಪಾರ್ಶ್ವಜಿನ, ಮಹಾವೀರ ಮತ್ತು ಪದ್ಮಾವತಿಯರ ಸಂಕೇತಗಳಿವೆ. ಮುಖ್ಯದ್ವಾರ ದಲ್ಲಿರುವ ಐದು ಹೆಡೆಯ ಹಾವುಗಳು ಧರಣೇಂದ್ರ – ಪದ್ಮಾವತಿ ಜಿನಶಾಸನ ದೇವ- ದೇವಿಯರವು. ಇಲ್ಲಿ ಜೈನ ಅರ್ಚಕರಾಗಿದ್ದ ಕಮಲವಾಹನ ಮತ್ತು ಗುಣವೀರರಿಗೆ ತಿರುವಾಂಕೂರು ಮಹಾರಾಜನು ಪಳ್ಳಿಚ್ಚಂದಮ್ ಹೊಲವನ್ನು ನೀಡಿದ್ದಕ್ಕೆ ಶಾಸನ ದಾಖಲೆಯಿದೆ. ಕ್ರಿ.ಶ. ೧೫೮೮ ರಲ್ಲಿ ಈ ಜಿನಾಲಯದಲ್ಲಿ ಆದಿಶೇಷವನ್ನು – ತಿರುವನನಂತಾಳ್ವಾರ್ ನಾಗನನ್ನು ಸ್ಥಾಪಿಸಿ ಇಡೀ ಬಸದಿಯನ್ನು ಹಿಂದೂ ದೇವಾಲಯವನ್ನಾಗಿ ಪರಿವರ್ತಿಸಲಾಗಿದೆ.

ಪುದುಕೋಟ್ಟೈ ಬಳಿಯ ನಾರ್ತ್ತಾ ಮಲೈನಲ್ಲಿ ಇದ್ದ ಪ್ರಾಚೀನ ಜೈನ ಗುಡ್ಡದ ಗುಡಿಯನ್ನು ಕ್ರಿ.ಶ. ೧೨೨೮ ರಲ್ಲಿ ವಿಷ್ಣು ಮೂರ್ತಿಗಳನ್ನಿಟ್ಟು ವೈಷ್ಣವ ದೇವಾಲಯವನ್ನಾಗಿ ಬದಲಾಯಿಸಲಾಗದೆ. ಈಗ ಇದರ ಹೆಸರು ‘ಪದಿನೆಣ್ ಭೂಮಿ ವಿಣ್ಣಗರ್ ದೇವಾಲಯ’ – ಎಂದು. ಚಿದಂಬರನಾರ್ ಜಿಲ್ಲೆ. ಕಲುಗುಮಲೈ ಕೂಡ ವಿಖ್ಯಾತ ಜೈನ ಕೇಂದ್ರ. ಇಲ್ಲಿನ ಬೆಟ್ಟದ ಗುಹೆಯಲ್ಲಿ ಮೂರು ಸಾಲು ಜಿನಮೂರ್ತಿಗಳಿವೆ. ಪಾಂಡ್ಯರ ಆಳಿಕೆಯ ಅವಧಿಗೆ ಸೇರಿದ, ಕ್ರಿ.ಶ. ೭-೮ ನೆಯ ಶತಮಾನದ ಆದಿನಾಥ ಪಾರ್ಶ್ಚನಾಥ ಮಹಾವೀರ ಜಿನರ, ಬಾಹುಬಲಿಯ, ಅಂಬಿಕಾ ಪದ್ಮಾವತೀ ಯಕ್ಷಿಯರ ಮೂರ್ತಿಗಳಿವೆ, ಕ್ರಿ.ಶ. ೧೧-೧೩ ನೆಯ ಶತಮಾನದಿಂದ ಈಚೆಗೆ ಐಯಾನಾರ್ ಹಿಂದೂ ಗುಡಿಯಾಗಿದೆ. [A. Ekambaranathan:’ Jaina Vestiges of Kalagumalai’, pp. 52-54]

ತಮಿಳು ನಾಡು, ಕನ್ನಡ ನಾಡು ಮತ್ತು ಆಂಧ್ರಗಳಲ್ಲಿ ಜೈನ ಪ್ರಭಾವ ಮತ್ತು ಬಸದಿ ನಿರ್ಮಾಣ ಪರಂಪರೆ ವ್ಯಾಪಕವಾಗಿ ಗಟ್ಟಿಕೊಂಡು ಬೆಳೆದ ಅವಧಿಗಿಂತ ಕೊಂಚ ತಡವಾಗಿ ಕೇರಳದ ನೆಲೆಯೂರಿತು. ಕ್ರಿ.ಶ. ಎಂಟು – ಒಂಬತ್ತನೆಯ ಶತಮಾನದಿಂದ ಕೇರಳದಲ್ಲಿ ಅರ್ಹದಾಯತನದ ನಿರ್ಮಾಣ ಕಂಡುಬರುತ್ತದೆಂದು ಸೂಚಿಸಿರುವ ಎಂ.ಆರ್. ರಾಘವ ವಾರಿಯರರು ಕೆಲವು ಮಾಹಿತಿಗಳನ್ನು, ಮುಖ್ಯವಾಗಿ ಶಾಸನಗಳ ಆಧಾರದಿಂದ ಒದಗಿಸಿದ್ದಾರೆ. [M.R. Raghava Varier: Socio – Economic Functions of the Jain Temples in Kerala, ‘Svasti Sri, (1984) pp. 173-85] ತಿರುಚ್ಚಾರಣತ್ತು ಮಲೈ ಶಾಸನಾಧಾರದಿಂದ ಕೇರಳದಲ್ಲಿ ಯಕ್ಷಪೂಜೆಯ ಸಂಪ್ರದಾಯ ೮-೯ ಶತಮಾನದ ವೇಳೆಗೆ ಆರಂಭವಾಗಿತ್ತೆಂದು ಹೇಳಬಹುದು; ನೇಮಿನಾಥ ಜಿನರ ಯಕ್ಷಿ ಅಂಬಿಕಾಳ ಮೂರ್ತಿಯನ್ನು ಅಜ್ಜಣಂದಿಯು ಮಾಡಿಸಿದನು.

ಅಲ್ಲದೆ ಕಲ್ಲಿಲ್ ಎಂಬಲ್ಲಿ ಮಹಾವೀರಜಿನರ ಶಾಸನದೇವಿ ಸಿದ್ಧಾಯಿಕಾಳ ಮೂರ್ತಿಯಿದೆ. ಪಾಲ್ಘಾಟ್ ಜಿಲ್ಲೆಯ ಪರವಶ್ವೇರಿಯಲ್ಲಿ ಚಂದ್ರಪ್ರಭ ತೀರ್ಥಂಕರ ಮೂರ್ತಿಯು ಈಗ ಐಯ್ಯಪ್ಪ (ಶಾಸ್ತ) ನಾಗಿ ಪೂಜೆಗೊಳ್ಳುತ್ತಿದೆ; ಚಂದ್ರಪ್ರಭರ ಯಕ್ಷಿ ಜ್ವಾಲಾಮಾಲಿನಿಯು ‘ಭಗವತೀ’ ಎಂಬುದಾಗಿ ಪೂಜಿತಳಾಗಿದ್ದಾಳೆ. ಕೊಟ್ಟಾಯಮ್ ಜಿಲ್ಲೆಯ ನೀಲಂ ಪೆರೂರಿನಲ್ಲಿ ಪಳ್ಳಿಭಗವತಿ ಗುಡಿಯಲ್ಲಿ ವಿರಾಜಮಾನವಾಗಿರುವ ಯಕ್ಷಿಯನ್ನು ಕಾಣಬಹುದು. ಕಲ್ಲಿಲ್ ದೇವಾಲಯದಲ್ಲಿ ಇರುವ ಸಿದ್ದಾಯಿಕಾ ಜಿನ ಶಾಸನದೇವಿಯನ್ನು ಸ್ಥಳೀಯ ಹಿಂದುಗಳು ಭಗವತೀ (ದುರ್ಗಾಮಾತೆ) ಎಂದು ಪೂಜಿಸುವರು; ಕೊಚ್ಚಿನ್ ಮತ್ತು ಅಲ್ಲೆಪ್ಪೈ ಕಡೆಗಳಿಂದ ಜೈನರು ಇಂದಿಗೂ ಈ ಯಕ್ಷಿಯನ್ನು ಪೂಜಿಸುತ್ತಾರೆ. ಕೇರಳದ ಕೆಲವು ಹಿಂದೂ ದೇವಾಲಯಗಳ ಮೇಲೆ ಯಕ್ಷಾರಾಧನೆ ಪ್ರಭಾವದಿಂದ ಯಕ್ಷಿಯರ ಮೂರ್ತಿಗಳನ್ನು ಹೊರಸುತ್ತಾಲಯ – ಪ್ರಾಂಗಣದ ದೇವ ಕೋಷ್ಠದಲ್ಲಿ ಇಡಲಾಗಿದೆ; ಕೊಚ್ಚಿನ್, ಮಧ್ಯತಿರುವಾಂಕೂರು, ತಿರುವಲ್ಲ ದೇವಾಲಯಗಳಲ್ಲಿ ಇದನ್ನು ನೋಡಬಹುದು. [ಟಿ.ಎ.ಎಸ್. ಸಂ. ೧, ಪು. ೧೯೩; ಅದೇ, ಸಂ. ೨-೨, ಪು. ೧೨೫.: ಅದೇ, ಸಂ ೨-೩ ಪು. ೧೬೩]

ಕೇರಳದ ಜೈನ ದೇವಾಲಯಗಳ ಮತ್ತು ಅಲ್ಲಿ ನಡೆಯುತ್ತಿದ್ದ ಪೂಜಾ ಕ್ರಮದ ವಿವರಗಳೂ ಶಾಸನಗಳಿಂದ ತಿಳುದು ಬರುತ್ತದೆ. ತಾಳಕ್ಕಾವು (ದಕ್ಷಿಣ ವೈನಾಡು ಜಿಲ್ಲೆ) ಮತ್ತು ಕಿಣಾಲೂರು ಶಾಸನಗಳು ಕ್ರಿ.ಶ. ಒಂಬತ್ತನೆಯ ಶತಮಾನಕ್ಕೆ ಸೇರಿದ್ದು, ಬಸದಿಗಳ ದೀಪಾರಾಧನೆಗೆ ದಾನ ಪಡೆದದ್ದನ್ನು ಹೇಳುತ್ತವೆ. ವೈನಾಡಿನ – ಬಸದಿಯ ಶಾಸನವು, ದಕ್ಷಿಣಕನ್ನಡ ಜಿಲ್ಲೆಯ ಕಾರ್ಕಳದ ಜೈನ ಮುಖಂಡರು ನೀಡಿದ ದಾನವನ್ನು ತಿಳಿಸುತ್ತದೆ. ನಾಗರಕೋಯಿಲ್ ಎಂಬಲ್ಲಿ ಇದ್ದ ಜೈನ ಮಠ ಮಂದಿರಗಳಿಗೆ ೧೬ ನೆಯ ಶತಮಾನದ ಆರಂಭದಲ್ಲಿ ರಾಜನು ನೀಡಿದ ಕೊಡುಗೆಯನ್ನು ಭೂತಲವೀರ ಉದಯಮಾರ್ತಂಡವರ್ಮನ ಶಾಸನ ವಿವರಿಸಿದೆ; ಬೆಳಗ್ಗೆ ಪಾಯಸ, ಮಧ್ಯಾಹ್ನ ದೀಪ ಬೆಳಗಿಸಿ ಚರು (ನೈವೇದ್ಯ) ಅರ್ಪಿಸುವುದಲ್ಲದೆ ಮತ್ತೆ ಸಂಜೆ ಮತ್ತೆ ದೀಪ ಹಚ್ಚಿ ಪುಷ್ಪಗಂಧ ಧೂಪ ಅರ್ಚನೆ ಮಾಡಲು ದೇಣಿಗೆ ನೀಡಲಾಗಿದೆ [ಟಿ.ಎ.ಎಸ್. ೬-೧. ಪು. ೧೫೩, ೧೫೭-೫೯]. ಕಲ್ಲಿಕೋಟೆ ಜಿಲ್ಲೆಯ ಕಿಣಾಲೂರುಶಾಸನವು ಬಸದಿಯಲ್ಲಿ ಕೂತ್ತು (ಕುಣಿತ = ನೃತ್ಯ) ಏರ್ಪಾಟಿಗಾಗಿ ನಿರ್ದಿಷ್ಟ ಪ್ರಮಾಣದ ಭತ್ತವನ್ನು ಮೀಸಲಾಗಿ ಇಡಲಾಗಿತ್ತು. ಪೆರುಂಬಾವೂರಿಗೆ ನಟುವಾಂಗದ ಕೂತ್ತನ್ ಕೋಮನ್ ಎಂಬಾತನಿಗೆ ಒಂದು ಬಿಂಬವನ್ನು ಮಾಡಿಕೊಡಲು ತಿರುಚ್ಚಾರಣತ್ತು ಕುರತ್ತಿಕಲ್ ಮಾಡಿದುದನ್ನು ಕುೞುಗುಮಲೈ (ತಿರುನೆಲ್ವೇಲಿ ಜಿಲ್ಲೆ) ಶಾಸನ ತಿಳಿಸುತ್ತದೆ. ಹೀಗಾಗಿ ಕೇರಳದಲ್ಲಿಯೂ ಜೈನಧರ್ಮದ ಪ್ರಭಾವದೊಂದಿಗೆ ಜಿನ ಶಾಸನ ದೇವತೆಗಳ ಪ್ರಭಾವವೂ ಕಂಡು ಬರುತ್ತದೆ, ಆದರೆ ಹದಿನೇಳನೆಯ ಶತಮಾನದಿಂದ ಈಚೆಗೆ ಅಲ್ಲಿ ಜೈನರ ಸಂಖ್ಯೆ ಅತಿ ವಿರಳಗೊಂಡು, ವೈನಾಡಿನ ಕಲ್ಪತ್ತ ಪ್ರದೇಶದ ಕೆಲವೇ ಕುಟುಂಬಗಳಿಗೆ ಸೀಮಿತವಾಯಿತು.

ಬಸದಿಗಳ ನಿರ್ಮಾಣಪೂರ್ವದಲ್ಲಿ ಕೆಲವು ಕಾಲ ಪ್ರಚಲಿತವಾಗಿದ್ದ ಇನ್ನೊಂದು ವಾಸ್ತು (ಕಟ್ಟಡ) ನಿರ್ಮಾಣ ಪದ್ಧತಿಯನ್ನೂ ಪರಿಚಯಿಸಿಕೊಳ್ಳುವುದು ಅಗತ್ಯ. ಜೈನಾಲಯಗಳಲ್ಲಿ ಸ್ತೂಪ ನಿರ್ಮಾಣ ಪರಂಪರೆಯ ಉಲ್ಲೇಖಗಳು ಸಿಗುತ್ತವೆ. ನಿರ್ವಾಣ ಹೊಂದಿದ ತೀರ್ಥಂಕರರಿಗೆ ಸ್ತೂಪ, ಚೈತ್ಯ, ಜಿನಗೃಹಗಳನ್ನು ನಿರ್ಮಾಣ ಮಾಡುವುದನ್ನು ಅವಶ್ಯಕ ನಿರ್ಯುಕ್ತಿಯು (ಗಾಥಾ. ೪೩೫) ದಾಖಲಿಸಿದೆ. ಜಂಬೂ ದೀವ ಪಣ್ಣತ್ತಿಯಲ್ಲಿಯೂ (೨.೩೩) ನಿರ್ವಾಣ ಪಡೆದ ಜಿನರಿಗೆ ಶರೀರ ಸಂಸ್ಕಾರ, ಚೈತ್ಯ – ಸ್ತೂಪದ ನಿರ್ಮಾಣವನ್ನು ವರ್ಣಿಸಲಾಗಿದೆ. ಆವಶ್ಯಕ ಚೂರ್ಣಿ ಯಲ್ಲಿ (ಜಿನಸಾದಕೃತ), ಮುನಿಸುವ್ರತ ತೀರ್ಥಂಕರರ ನೆನಪಿಗಾಗಿ ವೈಶಾಲಿಯಲ್ಲಿ ಸ್ತೂಪ ಕಟ್ಟಲಾಯಿತೆಂದು ಹೇಳಿದೆ. ವಿವಿಧ ತೀರ್ಥ ಕಲ್ಪದಲ್ಲಿಯೂ (ಜಿನಪ್ರಭಸೂರಿ) ಮಥುರೆಯ ಸ್ತೂಪದ ಮಾಹಿತಿಯಿದೆ. ಜೈನ ಸ್ತೂಪವೊಂದರ ಭಗ್ನಾವಶೇಷ ಸಿಕ್ಕಿದೆ. ಇದರ ಉಲ್ಲೇಖವು ಕ್ರಿ.ಶ. ೧೫೭ ರಲ್ಲಿ ರಚಿತವಾದ ಮಥುರಾದ ಶಾಸನದಲ್ಲಿದೆ.

ಮಥುರೆಯಲ್ಲಿ ಸುಪಾರ್ಶ್ವ ತೀರ್ಥಂಕರ ಸ್ಮೃತಿಸ್ಮಾರಕವಾಗಿ ದೇವನಿರ್ಮಿತ ಸ್ತೂಪವಿದ್ದಿತು. ಆ ಪ್ರಾಚೀನವಾದ ಸ್ತೂಪವು ಶಿಥಿಲವಾದಾಗ ಮುಂದೆ ಪಾರ್ಶ್ವನಾಥ ತೀರ್ಥಂಕರರು ಕ್ರಿ.ಪೂ. ಒಂಬತ್ತನೆಯ ಶತಮಾನದಲ್ಲಿ ಜೀರ್ಣೋದ್ಧಾರ ಮಾಡಿದರು. ಆಮೇಲೆ ಇದೇ ಪುರಾತನ ಸ್ತೂಪವನ್ನು ಕ್ರಿ.ಶ. ಒಂದನೆಯ ಶತಮಾನದಲ್ಲಿ ಬಪ್ಪಭಟ್ಟಿಸೂರಿಯ ಪುನರ್ಬ್ಭರಣಗೊಳಿಸಿದನು. ಮಥುರೆಯ ಸ್ತೂಪವನ್ನು ಕುರಿತು ಹರಿಭದ್ರಸೂರಿಯು ಆವಶ್ಯಕ ನಿರ್ಯುಕ್ತಿ ವೃತ್ತಿಯಲ್ಲಿಯೂ, ಸೋಮದೇವಸೂರಿಯ ಯಶಸ್ತಿಲಕ ಚಂಪೂದಲ್ಲಿಯೂ ಪ್ರಸ್ತಾಪ ಬಂದಿದೆ. ಸೋಮದೇವ ಸೂರಿಯೂ ‘ಈಗಲೂ ಈ ಸ್ತೂಪವು ದೇವನಿರ್ಮಿತವೆಂಬ ಪ್ರತೀತಿಯಿದೆ’ ಎಂದಿದ್ದಾನೆ – ಆತ ಏವಾದ್ಯಾಪಿ ತತ್ ತೀರ್ಥಂ ದೇವನಿರ್ಮಿತಾಖ್ಯಾಯಾ ಪ್ರಥತೇ (ಯಶಸ್ತಿಲಕ ಚಂಪೂ, ಉಪಸಕಾಧ್ಯಯನ : ೯೨ – ೯೩). ಬಂಗಾಲದ ಪಹಾಡಪುರದಲ್ಲಿ ಸಿಕ್ಕಿರುವ ಗುಹನಂದಿ ಆಚಾರ್ಯರ, ಕ್ರಿ.ಶ. ಐದನೆಯ ಶತಮಾನದ ತಾಪ್ರಪತ್ರದಲ್ಲಿ, ಪಂಚ ಸ್ತೂಪಾನ್ವಯವನ್ನು ಹೇಳಿದೆ. ಆಚಾರ್ಯ ವೀರಸೇನರೂ, ಜಿನಸೇನರೂ ಪಂಚಸ್ತೂಪಾನ್ವಯಕ್ಕೆ ಸೇರಿದವರು. ಹರಿಷೇಣನ ಬೃಹತ್ಯಥಾಕೋಶದಲ್ಲಿ (೧೨,೧೩೨) ಐದು ಸ್ತೂಪಗಳ ಉಲ್ಲೇಖವಿದೆ. ಈ ಪಂಚಸ್ತೂಪ ಅನ್ವಯವು ಮುಂದೆ ಸೇನ ಅನ್ವಯವಾಗಿ ಪರಿವರ್ತಿತವಾಯಿತು.

ಮಥುರೆಯ ಜೀರ್ಣವಾಗಿದ್ದ ೫೧೫ ಸ್ತೂಪಗಳನ್ನು, ಅಕ್ಬರನ ಕಾಲದಲ್ಲಿ, ತೋಡರ ಮಲ್ಲನು ಜೀರ್ಣೋದ್ದರಿಸಿದನು. ಆಂಧ್ರದ ವಡ್ಡಮಾನು ಎಂಬಲ್ಲಿಯೂ ಎರಡು ಸಾವಿರ ವರ್ಷಗಳ ಹಿಂದಿನ ಜೈನ ಸ್ತೂಪವೊಂದರ ಅವಶೇಷ ಆಧಾರಗಳು ದೊರೆತಿವೆ [Kasturibai, M.: Select0Inscriptions0from0Vaddamanu, ‘ Sri Ramachandiraka’ (ed) A.V.N. Murthy, I.K. Sharma, Delhi, 1993] ಜೈನ ಸ್ತೂಪಗಳ ವಾಸ್ತರಚನೆಯನ್ನು ಡಾ. ಹೀರಾಲಾಲ್ ಜೈನ ಆಧಾರ ಸಹಿತವಾಗಿ ವರ್ಣಿಸಿದ್ದಾರೆ [ಭಾರತೀಯ ಸಂಸ್ಕೃತಿಗೆ ಜೈನಧರ್ಮದ ಕೊಡುಗೆ, ಕನ್ನಡ ಅನುವಾದ -ಮಿರ್ಜಿಅಣ್ಣಾರಾಯ (೧೯೭೧) : ಪು. ೩೭೪ – ೭೭] ಈ ಸ್ತೂಪ ಸಂಪ್ರದಾಯವು ಜೈನರಲ್ಲೂ ಬೌದ್ಧರಲ್ಲೂ ಏಕಕಾಲದಲ್ಲಿ ಪ್ರಾರಂಭವಾಗಿ ಪ್ರಚಲಿತವಾಗಿದ್ದರೂ ಕ್ರಮೇಣ ಜೈನಪರಂಪರೆಯಿಂದ ಅದು ದೂರ ಸರಿಯಿತೆನ್ನಬಹುದು [Buhler, G. : A Legend of the Jaina StupaatMathura, ಇ.ಆ. ೨೭. ಪು. ೪೯ – ೫೪ (೧೮೯೮)].

ಬಸದಿಗಳನ್ನು ಕಟ್ಟುವ ಮಾರ್ಗವೊಂದು ರೂಢಿಗೆ ಬಮ್ದ ಮೇಲೆ ಮೊದಲಿಗೆ ಮರದ ಮತ್ತು ಮಣ್ಣಿನ ಕಟ್ಟಡಗಳೆದ್ದುವು. ಅನಂತರ ಅವನ್ನು ಕಲ್ಲಿನ ರಚನೆಗೆ ಬದಲಾಯಿಸಲಾಯಿತು. ಮರವೆಸನಾಗಿ ಮಾಡಿಸಿ ಮಣ್ಡಲಿ ಸಾಸಿರವೆಡೆದೊಱಿ ಯೆಪ್ಪತ್ತಱ ಬಸದಿಗಳಿನ್ದಪ್ಪುವ ಮಣ್ಡಲಿಯ ಪಟ್ಟದ ತೀರ್ಥದ ಬಸದಿಯಂ ಕಲುವೆಸನಾಗಿ ಮಡಿಸಿದ ಪಟ್ಟದ ಬಸದಿ [ಎ.ಕ. ೭, ಶಿವಮೊಗ್ಗ, ೪, ೧೧೨೧ – ೨೨, ಪು. ೧೦-೧೫] ಕುರಿತ ವಿವರಗಳಿವೆ. ಇದು ಗಂಗಾನ್ವಯದವರು ಮಂಡಲಿಯ ಬೆಟ್ಟದ ಕ್ರಿ.ಶ. ೪-೫ ನೆಯ ಶತಮಾನದಲ್ಲಿ ಮಾಧವ – ದಡಿಗರ ಕಾಲದಲ್ಲಿ ಮಾಡಿಸಿದ್ದ ಬಸದಿಯನ್ನು ಪಡಿಸಲಿಸುತ್ತ ಬಂದು ತದನಂತರ ಮರವೆಸನಾಗಿಯೂ, ಅಲ್ಲಿಂದ ಮುಂದೆ ಕಲುವೆಸನಾಗಿಯೂ ಮಾರ್ಪಡಿಸುತ್ತ ಬಂದ ಚಾರಿತ್ರಿಕ ಬೆಳವಣಿಗೆಯನ್ನು ತಿಳಿಸುತ್ತದೆ. ಪೆರ್ಮಾಡಿಯು ಕಟ್ಟಿಸಿದ ಕಲ್ಲ ಬಸದಿ [ಎ.ಕ. ೩. ಶ್ರೀ ಪ. ೧೪೭, ಕ್ರಿ.ಶ. ೯೦೦]. ಪಾಳಿಯಕ್ಕಳು ಮಾಡಿಸಿದ ಕಲ್ಲ ಬಸದಿ [ಎ.ಕ. ೮-೨, ನಾರ. ೪೫, ಸು. ೧೦೦೦, ಹೊಂಬುಜ, ಸಾಲು : ೭] ಮೊದಲಾದ ಶಾಸನಗಳನ್ನು ಗಮನಿಸಬಹುದು.

ಮರವಾದರೇನು, ಮಣ್ಣಾದರೆನು, ಕಲ್ಲಾದರೇನು, ಲೋಹವಾದರೆ ತಾನೆ ಏನು- ಎಲ್ಲವೂ ಸಂಸ್ಕಾರದಿಂದ, ಭಾವನಾತ್ಮಕವಾದ ಬೆಸುಗೆಯ ಸಂಬಂಧದಿಂದ, ಶಿಲ್ಪಿಯ ನಿಪುಣತೆಯ ಮಾಟದಿಂದ ದೇವರಾಗುತ್ತದೆ, ಬಸದಿಯು ಸಂಸ್ಕೃತಿಯ ಕೇಂದ್ರವಾಗುತ್ತದೆ, ಭವಿಷ್ಯದ ಬೆಳಕಾಗುತ್ತದೆ. ಅದರಂತೆ ಬಸದಿಗಳು ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತು ಕೆಲವೊಮ್ಮೆ ರಾಜಕೀಯ ಚಟುವಟಿಕೆಗಳ ಕೇಂದ್ರಗಳಾಗಿವೆ. ಬಸದಿಗಳು ಕರ್ನಾಟಕದ ಚರಿತ್ರೆಯಲ್ಲಿ ಮಹತ್ತರವಾದ ಪಾತ್ರವನ್ನು ಹೇಗೆ ನಿರ್ವಹಿಸಿವೆ ಎಂಬುದು ಸುದೀರ್ಘವಾದ, ಅಷ್ಟೇ ಬೃಹತ್ ಪ್ರಮಾಣದ ಅಧ್ಯಯನ ಬಯಸುವ ಗಂಭೀರ ವಿಷಯ. ಈ ಬಗೆಯ ಅಧ್ಯಯನ ಇರುವ ಹಲವು ಆಯಾಮಗಳಲ್ಲಿ ಕೆಲವನ್ನು ಅತಿ ಸಂಗ್ರಹವಾಗಿ ಸೂಚಿಸುತ್ತೇನೆ.

ಜಿನಧರ್ಮಾವಾಸವಾದ ಈ ಕನ್ನಡ ನಾಡಿನ ಉದ್ದಗಲಗಳಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಅಲ್ಲಲ್ಲಿ ಅನೇಕ ಜೈನ ಕೇಂದ್ರಗಳಿದ್ದು, ಅವು ಹಲವು ಬಸದಿಗಳ ನಿವಾಸವಾಗಿದ್ದುದು ದಿಟ. ಅಂಥವುಗಳಲ್ಲಿ ಕೆಲವು ಕ್ರಿ.ಪೂ. ಕ್ಕೂ ಸೇರಿದ್ದು ತುಂಬ ಪ್ರಾಚೀನ ಎಡೆಗಳಾಗಿವೆ. ಕೞ್ವಪ್ಪು (ಶ್ರವಣಬೆಳಗೊಳ), ಕೊಪಣ (ಕೊಪ್ಪಳ) ಕಿತ್ತೂರು (ಕೀರ್ತಿಪುರ), ಬನವಾಸಿ (ವೈಜಯಂತಿಪುರ), – ಇತ್ಯಾದಿ. ಇನ್ನು ಕೆಲವು ಊರುಗಳು ಕ್ರಿ.ಶ. ಆರನೆಯ ಶತಮಾನದ ವೇಳೆಗಾಗಲೇನೆ ಜೈನ ಬಸದಿಗಳ ಬೀಡುಗಳೆಂದು ಹೆಸರಾಗಿದ್ದುವು; ಎಲ್ಲೋರ, ಒಂಕುಂದ (ಒಕ್ಕುಂದ), ಕಿಸುವೊೞಲ್ (ಪಟ್ಟದಕಲ್ಲು), ಕುವಳಾಲಪುರ (ಕೋಳಾಲ), ಕೆಲ್ಲಂಗೆಱಿ, ಕೋಗಳಿ, ಗುಡ್ನಾಪುರ, ತಲವನಪುರ, ನಂದಗಿರಿ, ಪೊಂಬುೞ್ವ (ಹೊಂಬುಜ), ಪುಲಿಗೆಱೆ (ಲಕ್ಷ್ಮೇಶ್ವರ), ಬಂದಳಿಕೆ, ಬಳ್ಳಿಗಾವಿ, ಬಾದಾಮಿ, ಮಂಡಲಿತೀರ್ತ್ಥ, ಮಂಣೆ (ಮಾನ್ಯಪುರ), ಮಳ ಖೇಡ (ಮಾನ್ಯಖೇಟ), ಯರಬಳ್ಳಿ (ಬಳ್ಳಾರಿ ಜಿಲ್ಲೆ), ಶ್ರೀಪುರ (ನೆಲಮಂಗಲ ತಾ). ಸವದತ್ತಿ (ಸವಣದತ್ತಿ-ಸೌದತ್ತಿ-ಸುಗಂಧವರ್ತಿ), ಹಲಸಿ (ಪಲಸಿ – ಪಲಾಶಿಕಾ) -ಮುಂತಾದವು.

ಎಲ್ಲೋರ, ಪಟ್ಟದಕಲ್ಲು (ಕಿಸುವೊಳಲು), ಬದಾಮಿ, ಪುಲಿಗೆರೆ ನಗರಗಳನ್ನು ಬಾದಾಮಿ ಚಾಳುಕ್ಯರು ಜಿನವಿಹಾರವಾಗಿಸಿದರು. ಕುವಲಾಲಪುರ, ಕೆಲ್ಲಂಗೆರೆ, ಕೋಗಳಿ, ತಲವನಪುರ, ನಂದಗಿರಿ, ಮಣ್ಣೆ, ಮಂಡಲಿ ಮೊದಲಾದುವನ್ನು ಗಂಗರು ಜಿನಧರ್ಮಕ್ಕೆ ತೊಟ್ಟಿಲಾಗಿಸಿದರು. ಕೊಪಣ, ಪೊಟ್ಟಲಕೆರೆ, ಬಂಕೂರು, ಮಳಖೇಡ ಮೊದಲಾದ ಸ್ಥಳಗಳನ್ನು ರಾಷ್ಟ್ರಕೂಟರು ಪೋಷಿಸಿದರು. ಹೊಂಬುಜ ಪ್ರದೇಶವನ್ನು ಸಾಂತಾರರೂ, ಸವದತ್ತಿಯ ಮೈಳಾಪ ತೀರ್ತ್ಥವನ್ನು ರಟ್ಟರೂ ಅಭಿವೃದ್ಧಿ ಪಡಿಸಿದರು [ನಾಗರಾಜಯ್ಯ, ಹಂಪ; ಮೈಳಾಪತೀರ್ಥ – ಶಾಸನಗಳ ಆಧಾರ, ‘ಸಮ್ಮಿಲನ’ (೧೯೯೪) ಪು. ೧೭-೨೦] ಹಲಸಿ (ಪಲಾಶಿಕಾ) ನಗರವನ್ನು ಕೇಂದ್ರವಾಗಿಸಿದವರು ಬನವಾಸಿಯ ಆದಿಕದಂಬರು. ಹಲಸಿ-ಪಲಾಶಿಕಾ ಎಂಬ ಸ್ಥಳನಾಮದ ಅರ್ಥವು ಹಲಸಿನಮರಕ್ಕೆ ಸಂಬಂಧಿಸಿದ್ದಲ್ಲ; ಅದು ಪಲಾಶವೃಕ್ಷ, ಅಂದರೆ ಮುತ್ತುಗದಮರ ಕುರಿತ ಪ್ರದೇಶವಾಗಿದೆ. ಇಂದಿಗೂ ಮುತ್ತುಗಮರಗಳು ಇಲ್ಲಿ ಸಹಜ ಕಾಡಿನ ಬೆಳೆಸಾಗಿದೆ.

ಕದಂಬರ ಕರ್ಮಭೂಮಿ ಬನವಾಸಿ. ಜೈನರಿಗೆ ಬನವಾಸಿ ಬಹಳ ಹಿಂದಿನಿಂದ ಕೇಂದ್ರವಾಗಿತ್ತು. ಆಚಾರ್ಯ ಶಿವಾರ್ಯನು ಅಲ್ಲಿ ಜಿನರ ಪ್ರಸಾದವನ್ನು ಮಾಡಿಸಿದ್ದನು. ಕ್ರಿ.ಶ. ಮೂರನೆಯ ಶ.ದಲ್ಲಿಯೇ ಬನವಾಸಿಯಲ್ಲಿ ಚಂದ್ರಪ್ರಭ ತೀರ್ಥಂಕರ ಪ್ರಾಚೀನ ಚೈತ್ಯಾಲಯವಿತ್ತು. ಈ ಚೈತ್ಯಗೃಹದಲ್ಲಿ ಸಮಂತಭದ್ರಾಚಾರ್ಯರು ಆರಾಧನೆ ನಡೆಸಿದ್ದರು. ಅಲ್ಲದೆ ಅವರು ಈ ಚಂದ್ರಪ್ರಭನಾಥಸ್ವಾಮಿಯ ಹೆಸರಿಂದ ಚಂದ್ರಕುಲ-ಅನ್ವಯವನ್ನೂ, ಬನವಾಸಿಗಚ್ಛವನ್ನೂ ಮೊದಲು ಮಾಡಿದ್ದರು. ಪ್ರಾಚೀನ ಜೈನ ಕೃತಿಗಳಲ್ಲಿ ಬನವಾಸಿಯು ಜೈನರಿಗೆ ಮುಖ್ಯ ಸ್ಥಳವಾಗಿತ್ತು. ಜೈನ ಕವಿ ಪಂಪನು ಬನವಾಸಿಯನ್ನು ನೆನೆದಿದ್ದಾನೆ.

ಹೀಗೆ ಜೈನರ ಆಡುಂಬೊಲವಾಗಿದ್ದ ಬನವಾಸಿ ಮಂಡಲದಲ್ಲಿ ಅಂಕುರಿಸಿದ ಕದಂಬಕುಲದವರು ಸಹಜವಾಗಿಯೇ ಜೈನ ಧರ್ಮದ ಪ್ರಭಾವಕ್ಕೆ ಪಕ್ಕಾಗಿದ್ದರು. ಕಾಕುಸ್ಥವರ್ಮ (೪೦೫-೩೦), ಶಾಂತಿವರ್ಮ (೪೩೦-೫೫), ಮೃಗೇಶವರ್ಮ (೪೫೫-೮೦), ರವಿವರ್ಮ (೪೮೫-೫೧೯), ಹರಿವರ್ಮ (೫೦೯-೩೦) – ಇವರೆಲ್ಲ ಜೈನ ಮತವನ್ನು ಅನುಸರಿಸಿದರೂ ಉಳಿದ ಮತಗಳಿಗೆ ಉದಾರಿಗಳಾಗಿದ್ದರು. ಕಾಕುಸ್ಥವರ್ಮನನ್ನು ಕಾಪಾಡಿದ ಕಾರಣಕ್ಕಾಗಿ ಸೇನಾಪತಿ ಶ್ರುತಕೀರ್ತಿಗೆ ಕಾಕಸ್ಥವರ್ಮನು ಬಳೋವರವನ್ನು ದಾನವಿತ್ತನು [ಸಿ.ಕೆ.ಐ. (೧೯೮೫) ಪು.೯] ಬಳೋವರ ಕ್ಷೇತ್ರವು ಜೈನ ಮುನಿಗಳ ಇರ್ಕ್ಕೆದಾಣವೆನಿಸಿದ ಖೇಟ ಗ್ರಾಮಕ್ಕೆ ಸೇರಿತ್ತು; ಈಗಿನ ಹಲಸಿಯಲ್ಲಿರುವ ‘ಬೊಡಕ್ಕೆ ಟೆಂಬೆ’ ಎಂಬುದೇ ಬಳೋವರ. ಶ್ರುತಕೀರ್ತಿಯನ್ನು ಹಲಸಿಯ ಶಾಸನದಲ್ಲಿ ‘ಭೋಜ’ ನೆನ್ನಲಾಗಿದೆ.

ಕಾಕುಸ್ಥವರ್ಮನ ಪಲ್ಮಿಡಿ ಶಾಸನವೇ ಈಗ ಕನ್ನಡ ಭಾಷೆಯ ಉಪಲಬ್ಧ ಶಾಸನಗಳಲ್ಲಿ ಮೊಟ್ಟ ಮೊದಲನೆಯದು ಎನ್ನಲಾಗಿದೆ. ಕನ್ನಡದ ಮೊತ್ತ ಮೊದಲನೆಯ ಶಾಸನಗಳಲ್ಲಿ ಕಾಕುಸ್ಥವರ್ಮನೇ ಜೈನಚಮೂಪನೊಬ್ಬನಿಂದ ರಕ್ಷಿಸಲ್ಪಟ್ಟವನೆಂಬುದೂ, ಜೈನ ಶ್ರುತಕೀರ್ತಿಗೆ ದಾನ ನೀಡಿದ್ದೂ, ಕನ್ನಡದ ಆದಿ ಜೈನದಾನ ಶಾಸನದ ಕರ್ತೃವೆಂಬುದೂ ಐತಿಹಾಸಿಕ ಮಹತ್ವದ್ದಾಗಿದೆ. ಕಾಕುಸ್ಥವರ್ಮನ ಮೊಮ್ಮಗ ಮೃಗೇಶವರ್ಮನೂ ಸಹ, ಚಮೂಪ ಶ್ರುತಕೀರ್ತಿಯ ಮಗ ದಾಮಕೀರ್ತಿಯನ್ನು ಕ್ರಿ.ಶ. ೪೬೩ ರಲ್ಲಿ ಭೋಜಕನನ್ನಾಗಿಸಿದನು [ಸಿ.ಕೆ.ಐ. : ೧೯೮೫: ಪು. ೫೧]: ಭೋಜಕರು ಪೌರೋಹಿತ್ಯದವರೊ, ಧರ್ಮಾಧಿಕಾರಿಗಳೊ, ಹೆಗ್ಗಡೆಗಳೊ ಆಗಿರಬೇಕು. ಶ್ರುತಕೀರ್ತಿಯ ಮೊಮ್ಮಗನೂ, ದಾಮಕೀರ್ತಿಯ ಮಗನೂ ಆದ ಜಯಕೀರ್ತಿಯೂ ಮೃಗಶವರ್ಮನ ಮಗನಾದ ರವಿವರ್ಮನ ಆಶ್ರಿತನಾಗಿದ್ದನು [ಸಿ.ಕೆ.ಐ.: ೧೯೮೫: ಪು. ೯೩] ರವಿವರ್ಮನು ಪ್ರತಿವರ್ಷ ಕಾರ್ತಿಕ ಹುಣ್ಣಿಮೆಯ ಜೈನ ಅಷ್ಟಾಹ್ನಿಕ ಪರ್ವವನ್ನು ರಾಷ್ಟ್ರೀಯ ಹಬ್ಬವಾಗಿ ಆಚರಿಸಲು, ಜಿನೇಂದ್ರ ಮಹಿಮಾ ಕಾರ್ಯದಲ್ಲಿ ತೊಡಗಲು ರಾಜಾಜ್ಞೆ ಮಾಡಿದನು.

ಶ್ರುತಕೀರ್ತಿಗೆ ಕಾಕುಸ್ಥವರ್ಮನು ಕೊಟ್ಟ ದಾನವನ್ನು ಶಾಂತಿವರ್ಮ, ಮೃಗೇಶವರ್ಮ, ರವಿವರ್ಮರು ಪುನರುಜ್ಜೀವಿಸಿದರು. ಇವರ ಕಾಲದಲ್ಲಿ ಜೈನಯತಿಯಗಳದೇ ಒಂದು ಗ್ರಾಮ, ‘ಖೇಟ’ ಎಂಬುದು ಕ್ರಿ.ಶ. ೪೦೦ರ ವೇಳೆಗಾಗಲೇ ಹಲಸಿಯ ಹತ್ತಿರವೇ ಇದ್ದಿತೆಂಬುದು ಗಮನಾರ್ಹ. ಈ ಖೇಟ (ಖೇಡ) ದಿಮ್ದ ಒಂದು ಭಾಗವನ್ನು ಪಡೆದು ಕಾಕುಸ್ಥವರ್ಮನು ಹಲಸಿಯ ಜಿನಾಲಯಕ್ಕೆ, ಅದರ ಮೇಲ್ವಿಚಾರಕ ಮತ್ತು ತನ್ನ ಪ್ರಾಣರಕ್ಶಕ ದಂಡನಾಯಕ ಶ್ರುತಕೀರ್ತಿಗೆ ಕೊಟ್ಟನು. ಗುಡ್ನಾಪುರದ ಕಾಮಜಿನಾಲಯ ಮೊದಲುಗೊಂಡು ಹಲವು ಬಸದಿಗಳು ಈ ಕದಂಬರಾಜರ ಆಳ್ವಿಕೆಯ ಅವಧಿಯಲ್ಲಿ, ಕ್ರಿ.ಶ. 4-5 ನೆಯಬ್ ಶತಮಾನಗಳಲ್ಲಿ ನಿರ್ಮಾಣವಾದವು. ಕರ್ನಾಟಕದ ಬಸದಿಗಳ ಇತಿಹಾಸದಲ್ಲಿ ಈ ಬಸದಿಗಳು ಪ್ರಾಚೀನವಾಗಿದ್ದು ವಿಶೇಷ ಗಮನಿಕೆಗೆ ಅರ್ಹವಾಗಿವೆ. ಈ ಬಸದಿಗಳು, ಇವುಗಳಲ್ಲಿದ್ದ ಜೈನ ಆಚಾರ್ಯರು, ದಿಗಂಬರ ಶ್ವೇತಪಟ ಮತ್ತು ಯಾಪನೀಯ ಶಾಖೆಗಳು ಕದಂಬರ ಉದಾರ ಪೋಷಣೆ ಪಡೆದುವು. ಹಲಸಿಯ ಜಿನಾಲಯವು ಇಂದು ಕರ್ನಾಟಕದಲ್ಲಿ ಉಳಿದು ಬಂದಿರುವ ಅತ್ಯಮ್ತ ಪ್ರಾಚೀನತಮ ಬಸದಿ.

ಬಸದಿಗಳಿಗೆ ಬಳಕೆಯಾಗಿರುವ ಬೇರೆ ಬೇರೆ ಸಮಾನಾರ್ಥಕ ಶಬ್ದರೂಪಗಳು ಎಲ್ಲವೂ ಸಂಸ್ಕೃತ ಶಬ್ದಗಳೇ ಆಗಿವೆ. ಆದರೂ ‘ಕೊಯಿಲ್ ವಸದಿ’ ಎಂಬುದೊಂದು ಅಪವಾದವಾಗಿದೆ: ದುಗ್ಗಮಾರ ಕೊಯಿಲ್ವಸದಿ [ಎ.ಕ.೩ (೧೯೭೪) ಹೆ ಕೋ. ೬೩ (ಮೈ.ಆ.ರಿ. ೧೯೩೨-೫೮) ೯ ಶ. ಹೆಬ್ಬಲಗುಪ್ಪೆ (ಮೈಸೂರು ಜಿ / ಹೆಕೋ ತಾ) ಪು. ೪೬೮]. ಇದರಲ್ಲೂ ಕೊಯಿಲ್ ಎಂಬುದು (= ದೇವರಮನೆ) ದ್ರಾವಿಡ ಮೂಲದ್ದು. ವಸದಿ ಎಂಬುದು ಸಂಸ್ಕೃತದ ವಸತಿಯ ತದ್ಭವ ರೂಪ; ಇದರ ಮುಂದಿನ ಬೆಳವಣಿಗೆಯೇ ಬಸದಿ. ಜಿನಾಲಯ ಎಂಬ ಶಬ್ದದ ಬಳಕೆ ಬಹಳವಾಗಿ ಕಾಣುತ್ತದೆ [ಎ.ಕ. ೬, ಕಡೂರು ೩೬.೧೨೦೫ ಬಕ್ಕಲಗೆರೆ. : ಎ.ಕ. ೨.೫೭೩ ೧೩ ಶ. ಕಾಂತರಾಜಪುರ. : ಎ.ಕ. ೫, ಬೇ ೧೩೧. ೧೨೫೭. ಹಿರೇಹಳ್ಳಿ] ಅರ್ಹಗೇಹ [ಎ.ಕ. ೭ (೧೯೭೯) ನಾಮಂ. ೨೬ (೪ ನಾಮಂ. ೨೦) ೧೧೬೮. ಕಂಬದಹಳ್ಳಿ (ಮಂಡ್ಯ ಜಿ. / ನಾಮಂ ತಾ.)]. ಅರ್ಹತ್ ದೇವಾಯತನ [ಮೈ.ಆ.ರಿ. ೧೯೩೮, ಪು. ೮೦. ಹೊಸಕೋಟೆ (ಬೆಂಜಿ/)] ಅರ್ಹತ್ ಪರಮೇಷ್ಠಿ ಚೈತ್ಯಾಲಯ [ಎ.ಕ. ೫, ಅರಕಲಗೂಡು ೯೭.೧೦೯೫. ಸೋಮವಾರ (ಹಾಸನ ಜಿಲ್ಲೆ)]. ಚೆದಿಅ [ಎ.ಕ. ೪ (೧೯೭೫) ೩೪೭ (ರಿ ೧೯೨೫-೧೦೬) ಕುಲಗಾಣ (ಮೈಜಿ/ ಚಾಮರಾಜನಗರತ್ತಾ)]. ಚೇದಿಯ [ಇ.ಆ. ೧೧, ಪು. ೬೮, ಸು. ಕ್ರಿ.ಶ. ೫೬೦.: ಕ.ಇ.೧.೩.ಸು. ೭೫೦.: ಸೌ.ಇ.ಇ. ೧೧-೧, ೫. ಇತ್ಯಾದಿ], ಜಿನಗೇಹ [ಎ.ಕ. ೭, ಶಿ. ೧೩೬.೧೦೬೮] ಜಿನನಿಳಯ [ಅದೇ:], ಜಿನಭವನ [ಎ.ಕ. ೮-೨ (೧೯೦೨) ಸೊರಬ ೨೩೩, ೧೧೩೮. ವುದ್ರಿ (ಶಿಜಿ/ಸೊರಬತಾ)], ಜಿನಮಂದಿರ [ಅದೇ:] ತೀರ್ತ್ಥಶವಾಶಂ [ಎ.ಕ. ೭ ಶಿ. ೧೩೬. ೧೦೬೮] ವಸದಿ [ಎ.ಕ. ೭(೧೯೭೯) ನಾಮಂ ೩೨ ಮತ್ತು ೭೨] ಬಸದಿ [ಎ.ಕ. ೨(೧೯೭೩) ೧೪೦ (೪೧೫) ೯ ಶ.ಪು. ೮೬]- ಮುಂತಾದ ಸಂವಾದಿ ಅಥವಾ ಸಮಾನಾರ್ಥಕ ಪರ್ಯಾಯ ಶಬ್ದಗಳನ್ನು ಶಾಸನಕಾರರು ಬಳಸಿದ್ದಾರೆ. ಸಂಸ್ಕೃತ ಭಾಷೆಯ ಚೈತ್ಯ ಶಬ್ದವು ಪಾಳಿಯಲ್ಲಿ ಚೇತಿಯ ಎಂದೂ, ಪ್ರಾಕೃತದಲ್ಲಿ ಚೇಇಅ ಎಂದೂ ವ್ಯತ್ಯಾಸಗೊಂಡಿದೆ. ಪ್ರಾಕೃತ ರೂಪವು ಕನ್ನಡಕ್ಕೆ ಬಂದು ಚೇದಿಯ ಎಂದಾಗಿದೆ. ಕನ್ನಡ ಕಾವ್ಯಗಳಲ್ಲಿ ಇನ್ನೂ ಕೆಲವು ಶಬ್ದಗಳನ್ನು ಕವಿಗಳು ಪ್ರಯೋಗಿಸಿದ್ದಾರೆ. ಚೈತ್ಯಾಳಯ [ಪಂಪ, ಆದಿಪು. ೧೫-೧೩ ವ; ರನ್ನ, ಅಜಿಪು. ೪-೬೭ ವ] ಮತ್ತು ಚೈತ್ಯಾಲಯ – ಇವು ಕವಿಗಳಂತೆ ಶಾಸನ ಕವಿಗಳಿಗೂ ಇಷ್ಟವಾದ ಶಬ್ದ [ಎ.ಕ. ೭(೧೯೭೯) ನಾಮಂ. ೯೨, ೯೩, ೯೪.: ೧ ಎ. ೧೪.೨೭೩. ೧೦೫೪.: ಕನ್ನಡ ಇನ್ಸ್‌ಕ್ರಿಪ್ಷನ್ ಆಫ್ ಆಂಧ್ರಪ್ರದೇಶ್ (೧೯೬೧), ೭೨. ೧೦೦೮. ಸಾಲು : ೮-೧೦]. ಕ್ರಿ.ಶ. ೧-೨ ನೆಯ ಶತಮಾನದ ಕುಂದಕುಂದ ಆಚಾರ್ಯರ ‘ಬೋಧ ಪಾಹುಡ’ ವೆಂಬ ಪ್ರಾಕೃತ ಕೃತಿಯಲ್ಲಿ ಆಯತನ, ಚೈತ್ಯಗೃಹ, ಪ್ರತಿಮಾ, ದರ್ಶನ, ಬಿಂಬ, ಜಿನಮುದ್ರಾ, ಜ್ಞಾನ, ದೇವ, ತೀರ್ಥ, ಅರ್ಹತ್ ಮತ್ತು ಪ್ರವೃಜ್ಯಾ – ಎಂಬ ಈ ಹನ್ನೊಂದರ ಸ್ವರೂಪವನ್ನು ಪರಿಚಯಿಸಲಾಗಿದೆ.

ಕರ್ನಾಟಕದಲ್ಲಿ ಸುಮಾರು ಎಂಟು ಸಾವಿರಕ್ಕೂ ಹೆಚ್ಚು ಬಸದಿಗಳಿದ್ದುವು. ಅವುಗಳಲ್ಲಿ ಕೆಲವು ಮಾತ್ರ ಇಂದಿಗೂ ಉಳಿದು ಬಂದಿವೆ. ಮತದ್ವೇಷದ ದಳ್ಳುರಿಯಲ್ಲಿ ನಾಶವಾದ ಸಾವಿರಾರು ಪ್ರಾಚೀನ ಬಸದಿಗಳಲ್ಲಿ ಸುಮಾರು ಒಂದು ಸಾವಿರ ಬಸದಿಗಳ ವಿವರಗಳು ಶಾಸನಗಳಿಂದಲೇ ದೊರೆಯುತ್ತವೆ. ಅವುಗಳಲ್ಲಿ, ಕೇವಲ ದಿಗ್ದರ್ಶನಕ್ಕಾಗಿ, ಹತ್ತನೆಯ ಶತಮಾನಕ್ಕೂ ಹಿಂದೆ ಇದ್ದ ಕೆಲವು ಬಸದಿಗಳನ್ನು ಶಾಸನದ ಆಧಾರ ಸಹಿತ ಹೆಸರಿಸುತ್ತೇನೆ: ಪೆರ್ಬ್ಬೊಳಲ ಜಿನಾಲಯ [ಎ.ಕ. ೧೦, ಮಾಲೂರು ೭೩. ಕ್ರಿ.ಶ. ೩೭೦.? ಪು. ೧೭೨-೭೩] ಕಾಮಜಿನಾಲಯ [ಕ್ರಿ.ಶ. ೫ ಶ.: ಸಿ.ಕೆ.ಐ. (೧೯೮೫)] ಉರನೂರ ಅರ್ಹತ್ ಮಂದಿರ [ಎ.ಕ. ೧೦. ಮಾಲೂರು ೭೨. ಸು. ಕ್ರಿ.ಶ. ೪೨೫ ನೊಣಮಂಗಳ] ಪರಲೂರ ಚೇದಿಯ [ಸಿ.ಕೆ.ಐ. (೧೯೮೫). ೮. ಕ್ರಿ.ಶ. ೪೫೮-೫೯. ದೇವಗಿರಿ ತಾಮ್ರಪಟ. ಪು. ೨೯-೩೩. ಸಾಲು: ೯-೧೩.: ಕ. ಇ.೧, ೩.ಸು. ೭೫೦. ಅಡೂರು] ಮೇಗುಡಿ ಜಿನಮಂದಿರ ಮತ್ತು ಮೇಣ ಬಸದಿ [ಸು. ಕ್ರಿ.ಶ. ೬೫೦] ಕುಡಲೂರ ಪೂರ್ವೀಯ ಜಿನಾಲಯ [ಮೈ.ಆ.ರಿ. ೧೯೦೯, ಪು. ೧೪. ಸು. ೭-೮ನೆಯ ಶ.] ಅರ್ಹತ್ ಪರಮೇಷ್ಠಿ ಚೈತ್ಯಾಲಯ [ಸು. ೭೫೦.ನಂದಿ] ಅರ್ಹದಾಯತನ ವರ್ಧಮಾನ ಜಿನಾಲಯ [ಸಿ.ಕೆ.ಐ. (೧೯೮೫): ಕ್ರಿ.ಶ. ೬ ಶ.; ಪು. ೧೦೮] ಹೊಸಕೋಟೆ ಬಸದಿ -ಅರ್ಹತ್ ದೇವಾಯತನ ಮೈ.ಆ.ರಿ. ೧೯೩೮, ಕ್ರಿ.ಶ. ೬ ಶ. (ಸು. ೫೨೦) ಪು. ೮೦] ಶ್ರೀಪುರ ಲೋಕ ತಿಲಕ ಜಿನಾಲಯ [ಎ.ಕ. ೭, (೧೯೭೯) ನಾಮಂ. ೧೪೯.೭೭೬] ತಲವನ ನಗರ ಶ್ರೀವಿಜಯ ಜಿನಾಲಯ [ಮೈ.ಆ.ರಿ. ೧೯೨೭, ೮೦೮. ಪು. ೧೧೨] ಲೋಕಾಪುರ ಬಸದಿ [ಕ.ಐ. ೧೯೪೨ – ೪೩, ೩೧.೯ ಶ.] ಪೆಣ್ಣೆಗಡಂಗದ ಸತ್ಯವಾಕ್ಯ ಜಿನಾಲಯ ಎ.ಕ. ೧, ವೀರರಾಜಪೇಟೆ, ೯೬. ೮೮೮.] ಕೊಪ್ಪಳ ಬಸದಿ [ಎಆರ್‌ಐಇ ೧೯೫೪-೫೫. ೧೫೯.೮೯೦. ಪು. ೪೧] ಸೌದತ್ತಿ [ಜೆ.ಬಿ.ಬಿ.ಆರ್.ಎ.ಎಸ್. ೧೦ ೮೭೫. ಪು. ೧೯೪-೯೮]. ಪುಲಿಗೆರಿಯ ಶಂಖಜಿನಾಲಯ [ಸೌ೧೧. ೧೮. ೩೧೫. ೮೫೯-೬೦: ಕ೧.೧೧.೫.೮೫೯]. ಕೊಣ್ಣೂರ (ಕೊಳಲೂರ) ಬಸದಿ [ಕೆ೧. ೬.೮೬೦. ಪು. ೨೫-೩೮] ಕಮ್ಮದವಾಡಕಲ್ಬಾವಿ ಜಿನಾಲಯ [೧ಎ.೧೮.೮೦೦. ಪು. ೩೦೯-೧೩] ಕಡಬದಜಿನ ಮಂದಿರ [ಎ.ಇ.೪೧, ೮೧೨. ಪು. ೩೪೦-೪೫] ಪೆರ್ಮಾನಡಿ ಕಲ್ಲು ಬಸದಿ [ಎ.ಕ. ೪, ಪಾಂಡವಪುರ. ೧೬ ಸು. ೯೦೦. ಕ್ಯಾತನಹಳ್ಳಿ] ಮಂಣೆಯ ಸೇನಾಪತಿ ಶ್ರೀ ವಿಜಯಜಿನಾಲಯ [ಎ.ಕ. ೯ ನೆಮಂ. ೬೦.೭೯೭] ಮುಳ್ಗುಂದದ ಜಿನಮಂದಿರ [೧ ಎ. ೧೩.೯೦೩. ಪು. ೧೯೨-೯೪. ರಾಷ್ಟ್ರಕೂಟ ಕೃಷ್ಣ ೧೧] ಬಂದಳಿಕೆ ಬಸದಿ [ಮೈ.ಆ.ರಿ. ೧೯೧೧.೯೦೨. ಪು. ೩೮:ಎ.ಕ.೭ ಶಿಕಾರಿಪುರ ೨೧೯.೯೧೮. ಶಾಂತಿನಾಥ ಬಸದಿ] ಬಂಕಾಪುರ ಧೋರಜಿನಾಲಯ [ಸೌ. ೧೧. ೧೧. ೯೦೫. ಪು. ೨೦] ಕೂಲಿಗೆರೆ ಕನಕ ತೀರ್ತ್ಥದ ಬಸದಿ [ಎ.ಕ. ೭, ಮದ್ದೂರು ೧೦೦. (೧೧೧ ಮವ ೩೦) ೯೧೬-೧೭] ಸೂಡಿಯ ಬಸದಿ [ಎ.೧.೧೧೧. ೨೫.೯೩೮] ನೆರೇಗಲ್ ಬಸದಿ [ಸೌ.೧೧.೧೧.೩೮.೯೫೦] ಕಾದಲೂರು ಬಸದಿ [ಎ. ೧, ೩೬.೯೬೨. ಪು. ೯೭-೧೧೦] ಅಸುಂಡಿಜಿನಾಲಯ [ಔ. ೧೧.೧೧.೯೨೫. ಪು. ೨೦] ಯೆಡರಾವಿ ಬರ್ಮದೇವ ಮಮ್ದಿರ [ಎ.ಆರ್.ಐ. ೧೯೬೩-೬೪. ೩೫೬, ೯೭೯] ಕುಂಸಿ ಬಸದಿ [ಎ.ಕ. ೭, ಶಿ. ೧೧೪. ೯೫೦] ಪೆರ್ಗ ದೂರು ಬಸದಿ [ಎ.ಕ. ೧.ವೀರರಾಜಪೇಟೆ ೯೮.೯೭೮] ಗಂಗ ಕಂದರ್ಪಜಿನಾಲಯ [ಎ.ಆರ್.ಐ.ಇ. ೧೯೫೦-೫೧. ೧೫.೯೬೫ ಬಾಡ್ಲಿ (ಬೆಳಗಾವಿಜಿ/)] ಬೆಳವತ್ತಿ (ಬೆಳ್ಳಟ್ಟಿ) ಬಸದಿ [ಎ.ಆರ್.ಐ.ಇ. ೧೯೫೩-೫೪. ೨೦೪.೯೯೦. ಪು. ೩೮] ಇತ್ಯಾದಿ ಇನ್ನೂ ಹಲವು ಜಿನಾಲಯಗಳು. ದಾನಚಿಂತಾಮಣಿ ಅತ್ತಿಮಬ್ಬೆ ಕಟ್ಟಿಸಿದ ೧೫೦೦ ಜಿನಾಲಯಗಳೆಲ್ಲ ಹತ್ತನೆಯ ಶತಮಾನದ ಉತ್ತರಾರ್ಧದಲ್ಲಿ ನಿರ್ಮಿತವಾಗಿವೆ. ರಾಷ್ಟ್ರಕೂಟರ ಮುಮ್ಮಡಿ ಕೃಷ್ಣನ ಮಹಾಮಂಡಲೇಶ್ವರ ಗಂಗಬೂತುಗ ಪೆರ್ಮಾಡಿಯ ಮೂವರು ಮಡದಿಯರಲ್ಲಿ ದೀವಳಾಂಬಳು ಸೂಡಿಯಲ್ಲೂ (ಕ್ರಿ.ಶ, ೯೩೮), ಪದ್ಮರಸಿಯು ನರೇಗಲ್ಲಿನಲ್ಲೂ (ಕ್ರಿ. ಶ ೯೫೦), ಕಲ್ಲಬ್ಬರಸಿಯು ಕಾದಲೂರಿನಲ್ಲೂ (ಕ್ರಿ.ಶ. ೯೬೨) ಒಂದೊಂದು ಬಸದಿ ಮಾಡಿಸಿ ದತ್ತಿಗಳನ್ನಿತ್ತರೆಂಬುದು ಚರಿತ್ರಾರ್ಹ ದಾಖಲೆಯೆನಿಸಿದೆ.

ಬಸದಿಗಳ ಇರುವಿಕೆಯಿಂದಾಗಿ ಅನೇಕ ಊರುಗಳು ಜೈನತೀರ್ತ್ಥ ಸ್ಥಳಗಳಾಗಿ ಪ್ರಸಿದ್ಧಿ ಪಡೆದಿವೆ. ಇಂಥ ಹಲವು ತೀರ್ತ್ಥ ಕ್ಷೇತ್ರಗಳ ಉಲ್ಲೇಖಗಳು ಶಾಸನಗಳಲ್ಲಿವೆ. ಶಾಸನೋಕ್ತ ಜೈನ ತೀರ್ತ್ಥಗಳ ಐತಿಹಾಸಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆ ಪ್ರಭಾವ, ಸಾಧನೆ ಕುರಿತು ಪಿಎಚ್‍.ಡಿ ಮಹಾಪ್ರಬಂಧವನ್ನು ಸಿದ್ಧಪಡಿಸಬಹುದು. ನಿದರ್ಶನಾರ್ಥವಾಗಿ ಕೆಲವು ಜೈನ ತೀರ್ತ್ಥಗಳನ್ನು ಹೆಸರಿಸಬಹುದು: ಮುಂದಿನ ವಿಶೇಷ ಸಂಶೋಧನೆಗೆ ಸಹಾಯವಾಗಲೆಂದು ಆಕಾರ ಅನುಕ್ರಮಣಿಕೆಯಲ್ಲಿ ಅಳವಡಿಸಿದೆ; ಇಂಗಳೇಶ್ವರ ತೀರ್ತ್ಥ (ಸೌ.ಇ.ಇ. ೧೫, ೫೯೮. ೧೨. ಶ. ತಮ್ಮಧಡ್ಡಿ]. ಕಂಬದ ಹಳ್ಳಿ ತೀರ್ತ್ಥ [ಎ.ಕ. ೭ (ಎ) ನಾಮಂ ೨೬. (೪ ನಾಮಂ ೨೦) ೧೧೬೮], ಕಡ(ಳ)ಸತವಾದಿ ತೀರ್ತ್ಥ [ಎ.ಕ. ೪ ಮದ್ದೂರು ೧೦೦ (೩ ಮವ ೩೦) ೯೧೬ – ೧೭. ಕೂಲಿಗೆರೆ, ಪು. ೩೧೩], ಕಲ್ಲುಕೆಱೆ ತೀರ್ತ್ಥ [ಎ.ಕ. ೯ (೧೯೯೦) ಬೇ. ೩೮೮ (೫ ಬೇ ೧೨೩) ೯೫೪, ಬಸ್ತಿಹಳ್ಳಿ], ಕೊಂಡಕುಂದೆಯ ತೀರ್ತ್ಥ [ಸೌ.ಇ.ಇ. ೯-೧, ೧೫೦.೧೦೮೧. ಕೊನಕೊಂಡ್ಲ] ಕೊಪಣ ಮಹಾತೀರ್ತ್ಥ [ಎ.ಕ. ೨.೨೨೦ (೪೨೫) ೧೦ ಶ.] ಕೋಗಳಿತೀರ್ತ್ಥ [ಸೌ.ಇ.ಇ. ೯-೧, ೧೧೭. ೧೦೫೫. ಕೋಗಳಿ. ಪು.೯೨], ಗೊಂಮಟದೇವರ ತೀರ್ತ್ಥ ಎ.ಕ. ೨-೩೭೪. [ಎ.ಕ. ೭ (೧೯೭೯) (೨೬೮) [೧೧೮ ಪು. ೨೪೧], ತಿಪ್ಪೂರು ತೀರ್ತ್ಥ ಎ.ಕ. ೭ (೧೯೭೯) ಮದ್ದೂರು ೫೪. (೧೧೧ ಮವ ೩೧) ೧೧೭, ತಿಪ್ಪೂರು. ಪು. ೨೮೨-೮೪], ದಾನವುಲಪಾಡು ತೀರ್ತ್ಥ [ಎ.ಆರ್.ಎಸ್.ಐ.ಇ. ೧೯೦೫-೦೬. ಪು. ೧೨೦-೨೭] ಮತ್ತು [ಎ.ಇ. ೧೦.೧೫೦.೯೧೫.: ಐ.ಎ.ಪಿ. ಕಡಪ, ೧.೧೬೮.೯೧೫; ಸೌ.ಇ.ಇ.೧೦, ೨೮.೯೪೮], ಪೊಸವೂರ ತೀರ್ತ್ಥ [ಸೌ.ಇ.ಇ. ೧೧-೧.೬೫. ೧೦೨೮. ಹೊಸೂರು. ಪು. ೫೫-೫೭], ಬಂಕಾಪುರ ತೀರ್ತ್ಥ [ಎ.ಕ. ೨.೬೪ (೫೯) ೧೦ ಶ. ಪು. ೨೩.: ಎ.ಕ. ೭ (೧೯೦೨) ಶಿಕಾರಿಪುರ ೨೧೯.೯೧೮], ಬಂದಳಿಕೆ ತೀರ್ತ್ಥ [ಅದೇ : ಶಿಕಾರಿಪುರ ೨೧೯.೯೧೨. ಬಂದಳಿಕೆ. ಪು. ೨೯೮] ಬಿಂಡಿಗೆ ನವಿಲೆ ತೀರ್ತ್ಥ [ಎ.ಕ. ೭ (೧೯೭೯) ನಾ ಮಂ. ೨೬. (೪ ನಾ ಮಂ ೨೦) ೧೧೬೮. ಕಂಬದಹಳ್ಳಿ ಪು. ೧೭], ಬೆಳ್ಗೊಳ ತೀರ್ತ್ಥ [ಎ.ಕ. ೨. ೪೭೬ (೩೪೫) ೧೧೫೯. ಪು. ೨೯೦], ಬೋಧನ ತೀರ್ತ್ಥ [ಅದೇ: ೩೩೬ (೨೩೪) ೧೨ ಶ.ಪು. ೧೮೬], ಮಂಡಳಿ ತೀರ್ತ್ಥ [ಎ.ಕ. ೭ ಶಿ. ೪. ೧೧೨೨. ಪು. ೧೦-೧೫], ಮುಕ್ಕುಂದ ತೀರ್ತ್ಥ [ಸೌ.ಇ.ಇ. ೧೧, ೧, ೧೭೭.೧೧೨೫.,ಮುಗದ : ಅದೇ : ೭೮.೧೦೪೫. ಪು. ೭೧-೭೨], ಮುಳ್ಗುಂದ ತೀರ್ತ್ಥ [ಎ.ಕ. ೧೩, ೧೯೨.೯೦೨.: ಸೌ.ಇ.ಇ. ೧೧-೧. ೪೯.೯೯೪], ಮೈದುವೊಳಲದಿವ್ಯ ತೀರ್ತ್ಥ [ಎ.ಇ. ೧೨, ತುಂಕೂರು. ೩೮. ೧೧೬೦], ಮೈಳಾಪತೀರ್ತ್ಥ [ಜೆ.ಬಿ.ಬಿ.ಆರ್.ಎಸ್.ಟಿಟಿಟಿ, ಸಂ. ೧೦. ನಂ. ೨, ಕ್ರಿ.ಶ. ೮೭೬. ಪು. ೧೯೪.], ಮೈಳಾಪ ತೀರ್ತ್ಥ ಶಾಸನಗಳ ಆಧಾರ [ನಾಗರಾಜಯ್ಯ, ಹಂಪ., ‘ಸಮ್ಮಿಲನ’ (ಸಂ) ಜಯಚಂದ್ರ (೧೯೯೪)] ವೃಷಭಗಿರಿ ತೀರ್ತ್ಥ [ಐಎಪಿ ಕರೀಂನಗರ ೩, ಸು. ೯೫೦] ಶ್ರೀ ಪರ್ವತ ತೀರ್ತ್ಥ [ಬ್ರಹ್ಮಶಿವ, ‘ಸಮಯ ಪರೀಕ್ಷೆ’ ೨-೫೨ (ಇ)], ಸಿವಗಂಗೆಯ ತೀರ್ತ್ಥ [ಎ.ಕ. ೨, ೧೭೬ (೧೪೩) ೧೧೩೧. ಪು. ೧೩೧]. ಈ ತೀರ್ತ್ಥಗಳೆಲ್ಲ ಬಸದಿಗಳ ಹೊಂಗಳಶಗಳಿಂದ ಕಂಗೊಳಿಸುತ್ತ ಭವ್ಯರನ್ನು ತಣಿಸಿದ ಸಾಂಸ್ಕೃತಿಕ ಕೇಂದ್ರಗಳಾಗಿದ್ದುವು.

ಅನೇಕ ಬಸದಿಗಳು, ಅವು ಇರುವ ಊರು ಕೇರಿಗಳನ್ನು ಬಿಟ್ಟು ಅದಕ್ಕಿಂತಲೂ ದೂರದ ಊರಿನ, ಇನ್ನೂ ದೊಡ್ಡ ಪ್ರತಿಷ್ಠಿತ (ಪ್ರಮುಖ ಆಚಾರ್ಯರಿರುವ) ಬಸದಿಗಳ ಮೇಲ್ವಿಚಾರಣೆ ಮತ್ತು ಮಾರ್ಗದರ್ಶನಕ್ಕೆ ಒಳಪಟ್ಟಿದ್ದುವು. ಈ ಬಗೆಯ ಅಧೀನ ಬಸದಿಗಳನ್ನು ‘ಪ್ರತಿಬದ್ಧ’ ಜಿನಾಲಯಗಳು ಎನ್ನಲಾಗಿದೆ. ಶಾಸನಗಳಿಂದ ಕೆಲವು ದೃಷ್ಟಾಂತಗಳನ್ನು ಕೊಡುತ್ತೇನೆ : [ಎ.ಕ. ೭, ಶಿ. ೪.೧೧೨೧-೨೨. ಪು. ೧೦-೧೫: ಎ.ಕ. ೮-೨ (೧೯೦೨) ಸೊರಬ ೨೬೨ ೧೦೭೭ : ಅದೇ, ಸೊರಬ ೧೩೩ ೧೦೩೮-೩೯ ವುದ್ರಿ ಪು ೯೭-೯೮: ಎ.ಕ. || ೫೧೬ (೩೮೦) ೧೩ ಶ.ಪು. ೩೨೫ ಕ.ಇ. ೫ ೯೮ ೧೧೮೧ ಇತ್ಯಾದಿ] ಪ್ರತಿಬದ್ಧ ಬಸದಿಗಳಿಗಿಂತ ಭಿನ್ನವಾದ ಆಶಯದಿಂದ ಕಟ್ಟಲಾದ ಬಸದಿಗಳು ಪರೋಕ್ಷ ವಿನಯದ ಚೈತ್ಯಾಲಯಗಳು. ಗುರುಗಳೊ ಬಂಧುಗಳೊ ಆತ್ಮಿಯರೊ ಆದವರ ಮತ್ತು ಪೂಜ್ಯ ವ್ಯಕ್ತಿಗಳ ಮರಣಾನಂತರದಲ್ಲಿ ಅಂತಹವರ ನೆನಪಿಗಾಗಿ ಸಲ್ಲಿಸುವ ಗೌರವದ ಸಂಕೇತವಾಗಿ ಜಿನನಿಳಯಗಳನ್ನು ಮಾಡಿಸುವ ವಾಡಿಕೆ ಜೈನ ಸಮಾಜದಲ್ಲಿದೆ. ಪರೋಕ್ಷ ವಿನಯಾರ್ಥವಾಗಿ ಕೇವಲ ಗೌರವ ತೋರಿಸಬಹುದು. [ಎ.ಕ. ೧೨, ಗುಬ್ಬಿ ೫೭,೯೭೯], ನಿಸಿಧಿಗೆಯನ್ನು ನಿಲ್ಲಿಸಬಹುದು [ಎ.ಕ.೪ (ಪ) ಹುಣಸೂರು ೪೩ ೧೦೧೩] ಕಲ್ಲನ್ನು ನಿಲ್ಲಿಸಬಹುದು [ಎ.ಕ. ೮ (೧೯೦೨) ಸೊರಬ ೧೭೫, ೧೧೫೬] ಭೂಮಿದಾನ ಮಾಡಬಹುದು. ಪೆರ್ಗಡೆ ನೊಕ್ಕಯ್ಯನು ತನ್ನ ಹಿರಿಯಮಗ ಸತ್ತಾಗ ಪುತ್ರನ ಪರೋಕ್ಷ ವಿನಯಕ್ಕಾಗಿ ಬಸದಿ ಕಟ್ಟಿಸಿದನು [ಎ.ಕ. ೭ (ಪ) ಶಿ ೧೦ ೧೦೮೫] ಮಹಾ ಸಾಮಂತ ಗೂಳಿಯ ಬಾಚಿದೇವನು ಮಹಾ ಸೌಭಾಗ್ಯ ಶೀಲ ಸಂಪನ್ನೆಯಾದ ತನ್ನ ಮಡದಿ ಭೀಮನಾಯಕಿತಿಯರ್ಗೆ ಪರೋಕ್ಷ ವಿನಯವಾಗಿ ಭೀಮಜಿನಾಲಯಮೆನ್ದು ಬಸದಿಯಂ ಮಾಡಿಸಿಯುಂ ಭೀಮ ಸಮುದ್ರಮೆಂದು ಕಂನೆಗೆಱಿಯಂ ಕಟ್ಟಿಸಿಯು’ ಹೊಲಗದ್ದೆಗಳ ದಾನವಿತ್ತನು [ಎ.ಕ. ೧೨ ತುಂಕೂರು ೯.೧೧೫೧ ಪು ೧೩-೧೫] ಇದಕ್ಕೆ ತದ್ವಿರುದ್ಧವಾದ ನಿದರ್ಶನ ನಾಲಿಕಬ್ಬೆಯದು. ಆಕೆ ತನ್ನ ಗಂಡನ ನೆನಪಿಗೆಂದು ಪರೋಕ್ಷ ವಿನಯದಿಂದ ಕೊಂಡಕುಂದೆಯ ತೀರ್ತ್ಥದಲ್ಲಿ ಚಟ್ಟಜಿನಾಲಯವನ್ನು ಕಟ್ಟಿಸಿದಳು [ಸೌ.ಇ.ಇ. ೯-೧, ೧೫೧ ೧೦೮೧] ತಮ್ಮ ಗುರುಗಳ ಸ್ಮರಣಾರ್ಥ ಶಿಷ್ಯರು ಕಟ್ಟಿಸಿದ ಪರೋಕ್ಷ ವಿನೆಯದ ಬಸದಿಗಳೂ ಉಂಟು.

ಕರ್ನಾಟಕದಲ್ಲಿ ಬಸದಿಗಳನ್ನು ಕಟ್ಟಿಸುವ ಪರಂಪರೆಗೆ ಜೀವ ತುಂಬಿದವರು ಯಾಪನೀಯರು. ಲಭ್ಯ ಆಧಾರಗಳನ್ನು ಪರಿಶೀಲಿಸಿದರೆ, ಈಗ ಖಚಿತವಾಗಿ ತಿಳಿದು ಬಂದಿರುವ ಪ್ರಾಚೀನ ಬಸದಿಗಳಲ್ಲಿ ಅರ್ಧಕ್ಕೂ ಹೆಚ್ಚಿನ ಪ್ರಮಾಣದ ಬಸದಿಗಳು ಯಾಪನೀಯ ಸಂಘಕ್ಕೆ ಸೇರಿವೆ. ಬಸದಿಗಳಲ್ಲಿಯೂ ವಿವಿಧ ಗಣ – ಗಚ್ಛ ಮತ್ತು ಸಂಘ ಶಾಖೆಗೆ ಸೇರಿದ ಮಾಹಿತಿಗಳು ದೊರೆತಿವೆ. ಕಂಡೂರು ಗಣದ ಬಸದಿ [ಸೌ.ಇ.ಇ. ೧೫, ೫೩೯ ೧೧ ಶ. ಹುಲ್ಲೂರು ಪು. ೩೬೪] ಕಾಣೂರ್ಗಣದ ಬಸದಿ [ಎ.ಕ. ೧೨ (೧೯೭೯) ನಾಮಂ ೬೮ (ರಿ ೧೯೪೦-೩೩) ೧೧೩೨ ದಡಗ ಪು ೫೨] ಕೃಷ್ಣರಾಜನಗರ ೨೧ (೪ ಯೆ ೨೨) ಸು. ೧೧ ಶ ಚಿಕ್ಕಹನಸೋಗೆ ಪು. ೧೪] ಬಲಾತ್ಕಾರ ಗಣದಜಿನಾಲಯ [ಎ.ಕ. ೯ (೧೯೯೦) ಬೇ ೩೨೨ ೧೩ ಶ. ಪು ೩೦೩] ದ್ರವಿಳ ಸಂಘ ಪಲ್ಲವಜಿನಾಲಯ [ಎಪಿಜಿಎ‍ಎಸ್ ೧೧೧ ಎಂ.ಬಿ. ೫೮] ಬಸದಿಗಳಿಗೆ ಪ್ರತ್ಯೇಕ ಹೆಸರುಗಳೂ ಇರುತ್ತಿದ್ದವು. ಆಯಾ ಬಸದಿಯ ಮೂಲನಾಯಕರ ಹೆಸರೂ ಬಳಕೆಯಾಗುವುದು ಸಾಮಾನ್ಯ ವಾಡಿಕೆ : ಕುಂಥುನಾಥ ಚೈತ್ಯಾಲಯ [ಎ‍ಆರ್‌ಎಸ್‌ಐಇ, ೧೯೩೫-೩೬ ಬಿ. ೩೩೬ ಸು ೧೩೯೫] ಅನಂತನಾಥ ಬಸದಿ (ಅಕ್ಕಿರಾಂಪುರ ಮತ್ತು ಮೂಲ್ಕಿ), ಪಾರ್ಶ್ವನಾಥ ಬಸದಿ [ಎಆರ್‌ಎಸ್‍ಐಇ ೧೯೦೫-೦೬ ಪು ೧೨೦-೨೭: ಸೌ.ಇ.ಇ. ೧೮, ೧೦೯ ೧೧೧೨: ಎಆರ್‌ಎಸ್‍ಐಇ ೧೯೨೦ ನಂ. ೩೨೬] ನಂ. ೩೨೬] ಮಲ್ಲಿನಾಥ ಬಸದಿ [ಸೌ.ಇ.ಇ. ೧೫, ೫೪೪ ೧೧೬೦ ಬಸ್ತಿಹಳ್ಳಿ ಪು ೩೭೪] ಆದರೆ ಅನೇಕ ಬಸದಿಗಳನ್ನು ಅವುಗಳಿರುವ ಊರಿನ ಹೆಸರಿನೊಂದಿಗೆ ಕೂಡಿಸಿ ಹೇಳಲಾಗುತ್ತಿತ್ತು: ಅಗರಖೇಡ ಬಸದಿ [ಸೌ. ೨೦ ೯೧೫ ೧೨೪೮] ಅಣಂಪೂರು ಬಸದಿ, ಅಣಿಲೆವಾಡ ಬಸದಿ, ಚಾಕನಹಳ್ಳಿ ಬಸದಿ [ಎ.ಕ. ೪, ನಾಮಂ ೩೨ ೧೧೮೪] ಕೆಲ್ಲೆಂಗೆರೆ ಬಸದಿ [ಎ.ಕ. ೯ (೧೯೯೦) ಬೇ ೩೨೩ ೧೩ ಶ] ಕೂಲಿಗೆರೆ ಬಸದಿ [ಎ.ಕ. ೭ ಮದ್ದೂರು ೧೦೦ ೯೧೬ ೧೭ ಪು ೩೧೩]

ಇನ್ನೂ ಕೆಲವು ಬಸದಿಗಳಿಗೆ ಅವುಗಳನ್ನು ಕಟ್ಟಿಸಿದ ವ್ಯಕ್ತಿಗಳ ಹೆಸರನ್ನು, ಅಂಥವರ ಬಿರುದನ್ನು ಅನ್ವಯಿಸಿ ಕರೆಯಲಾಗುತ್ತಿತ್ತು: ಅದಟರಾದಿತ್ಯಜಿನಾಲಯ [ಎ.ಕ. ೮ (೧೯೮೪) ೧೩೩ ೧೦೭೯ -೮೦ ಪು ೧೮೬], ಎಱೆಗೆ ಜಿನಾಲಯ [ಎ.ಕ. ೮-೨, ಸೊರಬ ೧೪೦ ೧೧೯೮ ಪು ೬೦], ಕಟಕಾಭರಣಜಿನಾಲಯ [ಎ.ಇ. ೯ ೬ ೯೪೫ ಪು ೪೭] ಕನಕಜಿನಾಲಯ [ಎ.ಕ. ೧೧ ೪೭೬ (೩೪೫) ೧೧೫೯ ಪು ೨೮೯], ಕೇತಿಸೆಟ್ಟಿ ಬಸದಿ [ಎ.ಕ. ೮-೨, ಸೊರಬ ೧೪೦ ೧೧೯೮], ಗಂಗ ಕಂದರ್ಪ ಬ್ರಹ್ಮಜಿನಾಲಯ [ಕ.ಇ. ೧, ೨೯ ೧೨-೧೩ ಶ ಬಾಡ್ಥಿ] ಗಂಗಜಿನಾಲಯ [ಎ.ಕ. ೭-೧ (೧೯೦೨ ೧೦೬೭ ಮತ್ತು ೧೧೩೨ ಪುರಲೆಗ್ರಾಮ ಪು ೬೩-೬೯), ಗಂಗ ಪೆರ್ಮಾಡಿ ಚೈತ್ಯಾಳಯ (ಇ.ಆ. ೭, ೩೮ ಪು ೧೦೧-೦೨], ಗಿರಿಗೋಟೆಮಲ್ಲಜಿನಾಲಯ [ಎ.ಆ. ೧೧ ಪು ೯೬ ದದ್ದಲ], ಘಟಾಂತಿಕೆಯ ಬಸದಿ [ಸೌ.ಇ.ಇ. ೧೫, ೧೨೧ ೧೧೭೪ ಪು ೧೬೧-೬೩ ಎ.ಕ. ೧೧೧ ೧೪೬ ೧೩೩೬] ಚಾಳುಕ್ಯ ಕುಳತಿಳಕ ಬಸದಿ [ಎಪಿಜಿಎ‍ಎಸ್ ೧೧೧ ನಲ್ಗೊಂಡ ೪೩ ನಂ. ೪೫ ೧೧೨೫ ಕೊಲನುಪಾಕ] ಜಯಧೀರಜಿನಾಲಯ [ಎಆರ್‌ಐಇ ೧೯೬೫ ೯೬೪ ಬೆಟಗೇರಿ ಪು ೧೦] ಧೋರಜಿನಾಲಯ [ಎಆರ್‌ಐಇ ೧೯೪೨ ಇ-೧೫ ೧೦೬೦ ಚಬ್ಬಿ : ಸೌ.ಇ.ಇ. ೧೧, ೯೦೫ ಪು ೨೦] ನಿರವದ್ಯಜಿನಾಲಯ [ಎ.ಕ. ೬, ಚಿಕ್ಕಮಗಳೂರು ೭೫ ಕಡವಣಿ ಪು ೧೮೫] ಪಟ್ಟಣಸ್ವಾಮಿಜನಾಲಯ [ಎ.ಕ. ೭ (೧೯೦೨) ನಗರ ೮೫ ೧೦೬೨ ಹುಂಚ ಪು ೩೮೬] ಬೊಪ್ಪದೇವ ದಣ್ನಾಯಕ ಬಸದಿ [ಎ.ಕ. ೬ (೧೯೯೦) ಬೇ ೩೯೦ ೧೨೫೪ ಬಸ್ತಿಹಳ್ಳಿ]

ಕೆಲವೊಮ್ಮೆ ಬಸದಿಗಳಿಗೆ ಅವುಗಳ ವಾಸ್ತುಶಿಲ್ಪ ಆಕಾರವನ್ನು ಅವಲಂಬಿಸಿದ ನಾಮಕರಣ ಆಗಿರುತ್ತದೆ. ಅಭಿನವ ಶಾಂತಿನಾಥ ಬಸದಿ, ಅಬಿನವ ಶಾಂತಿನಾಥ ದೇವರ ಭವ್ಯಜಿನಾಲಯ [ಎ.ಕ. ೮ (೧೯೮೪) ಆಲೂರು ೧೭-೧೧೯೧. ಸೋಂಪುರ. ಪು. ೪೪೫)] ಅರೆಗಲ್ಲು ಬಸದಿ [ಎ.ಕ.೨, ೫೩೧.೧೧೨೦. ಜಿನನಾಥಪುರ] ಆನೆಸೆಜ್ಜೆಯ ಬಸದಿ, (೭. ಶ) ಉತ್ತುಂಗ ಚೈತ್ಯಾಲಯ [ಎ.ಕ. ೫. ಅರಸೀಕೆರೆ ೧, ಬಂದೂರು] ಪಂಚಕೂಟ ಬಸದಿ [ಎ.ಕ. ೮-೨, ನಗರ ೩೬.೧೦೭೭. ಹುಂಚ] ಎಕ್ಕೋಟಿ ಜಿನಾಲಯ [ಎ.ಕ. ೬ ಕಡೂರು ೩೬.೧೨೦೫. ಬಕ್ಕಲಗೆರೆ] ತೀರ್ತ್ಥದ ಬಸದಿ [ಎ.ಕ. ೭ (೧೯೭೯) ಮದ್ದೂರು ೧೦೦.೯೧೬-೧೭. ಕೂಲಿಗೆರೆ] ಕಲ್ಲಬಸದಿ [ಎ.ಕ ೮-೨ (೧೯೦೨) ನಗರ ೪೫.ಸು. ೧೦೦೦. ಹುಂಚ] ಚತುರ್ಮುಖ ಬಸದಿ [ಗೇರುಸೊಪ್ಪೆ ಮತ್ತು ಕಾರ್ಕಳ] ಚೌವ್ವೀಸ ತೀರ್ಥಂಕರ ಬಸದಿ [ಎ.ಕ.೨, ೪೨೨ (೩೧೩) ೧೬೪೮. ಪು. ೨೬೧] ಜ್ವಾಳಿನೀ ದೇವಿ ಬಸದಿ [ಸೌ.ಇ.ಇ. ೧೫, ೬೩೭.೧೨ ಶ. ಜಾವೂರು] ಜಿನೋನ್ನತಬಹ್ವನ [ಎ.ಇ. ೧೬. ೯.೧೦೫೩. ಮುಳ್ಗುಂದ] ತ್ರಿಕೂಟ ಜಿನಗೇಹ [ಎ.ಕ. ೭ (೧೯೭೯) ನಾಮಂ. ೬೪.೧೧೬೫. ಯಲ್ಲಾದಹಳ್ಳಿ ಪು. ೪೫-೪೯] ತ್ರಿಕೂಟ ಬಸದಿ [ಎ.ಕ. ೯ (೧೯೯೦) ೩೨೧.೧೨೬೫. ಹಳೇಬೀಡು] ತ್ರಿಭುವನತಿಲಕಬಸದಿ [ಇ.ಆ.೧೯. ೧೯೦. ೧೦೫೪. ಪೊನ್ನವಾಡ. ಪು. ೨೬೮-೭೫] ಪಂಚಕೂಟ ಬಸದಿ [ಎ.ಕ. ೮-೨, ನಗರ ೩೫-೧೦೭೭. ಹೊಂಬುಜ] ಪದ್ಮಾಕ್ಷಿ ದೇವಾಲಯ [ಎ.ಇ.೧೯, ೩೫.೧೧೧೭] ರತ್ನತ್ರಯ ಬಸದಿ [ಎಆರ್‌ಕೆಆರ್‌ಐ ೧೯೩೯-೪೦, ೮೮-೮೯. ಬಿಳಗಿ]. ಸರ್ವತೋಭದ್ರ ಚತುರ್ಮುಖ ರತ್ನತ್ರಯ ರೂಪ ತ್ರಿಭುವನ ತಿಲಕ ಜಿನ ಚೈತ್ಯಾಲಯ [ಕಾರ್ಕಾಳ; ೧೫೮೯] ಕೆಲವು ಬಸದಿಗಳಿಗೆ ಒಂದಕ್ಕಿಂತಲೂ ಹೆಚ್ಚು ಹೆಸರುಗಳುಂಟು, ಹಂಪಿಯ ಕುಂಥುನಾಥ ಜಿನಾಲಯಕ್ಕೆ ಗಾಣಿಗಿತ್ತಿ ದೇವಾಲಯವೆಂಬ ಹೆಸರಿದೆ [ ಎ.ಇ.೩. ೧೯. ೧೩೯೯.: ಸೌ.ಇ.ಇ.೧. ಪು. ೧೫೬] ಕೊಲ್ಲಾಪುರದ ತ್ರಿಭುವ ತಿಉಲಕ ಬಸದಿಗೆ ತೀರ್ತ್ಥದ ಬಸದಿ, ಚಂದ್ರನಾಥ ಬಸದಿ ಎಂದೂ ಹೆಸರುಂಟು [ಹೇರಿಳಿಗೆ – ಹೇರ್ಲೆ ಶಾಸನ. ೧೧೧೮] ಕರ್ಣಪಾರ್ಯಕವಿ (ಸು. ೧೧೪೦) ತನ್ನ ನೇಮಿನಾಥ ಪುರಾಣದಲ್ಲಿ [(ಸಂ) ನಾಗರಾಜಯ್ಯ, ಹಂಪ. ನತ್ತು ಕುಲಕರ್ಣಿ, ಆರ್.ವಿ. (೧೯೮೨): ೧೦೧೪] ತ್ರಿಭುವನ ತಿಳಕ ಎಂಬ ಹೆಸರಿನ ಕೊಲ್ಲಾಪುರ ಬಸದಿಯನ್ನು ಸ್ತುತಿಸಿದ್ದಾನೆ.

ಕೆಲವು ತೀರ್ತ್ಥದ ಬಸದಿಗಳು ಶಾಸನಗಳಲ್ಲಿ ಕೀರ್ತಿತವಾಗಿವೆ [ಎ.ಕ. ೧೨, ತುಂಕೂರು. ೩೮.೧೧೬೦. ಮಂದರಗಿರಿಬೆಟ್ಟ.: ಎ.ಕ. ೭ (ಪ) ಶಿ. ೪ ೧೧೨೨.: ಅದೇ, ಶಿ. ೬. ೧೦೬೦. ಎ.ಕ.೫ (೧೯೭೬) ಕೆ.ಆರ್. ನಗರ ೨೨,೨೪,೨೫,೨೬] ಇದೇ ರೀತಿಯಾಗಿ ಪಟ್ಟದ ಬಸದಿಗಳ ಉಲ್ಲೇಖಗಳೂ ಶಾಸನಗಳಲ್ಲಿ ಸಿಗುತ್ತವೆ [ಎ.ಕ. ೭(ಪ) ಶಿ. ೪.೧೧೨೨: ಅದೇ. ಶಿ. ೬.೧೦೬೦ ಎ.ಕ. ೮ (೧೯೮೪) ೧೩೩ (೫ ಅಗೊ ೯೯) ೧೦೭೯-೮೦] ಬಸದಿಗಳನ್ನು ಕಟ್ಟಿಸಿದ್ದು ಆದಮೇಲೆ, ಅವುಗಳಿಗೆ ಪೂಜಾದಿಕಾರ್ಯಗಳು ಯಾವ ಅಡೆತೆಡೆಯೂ ಇಲ್ಲದೆ ನಿರಾತಂಕವಾಗಿ, ನಿರಂತರವಾಗಿ ನಡೆಯಲೆಂದು ಬಯಸಿ ಹಲವು ಹೊಲಗದ್ದೆ ತೋಟ ಮನೆ ಗಾಣ ನಿವೇಶನ ಮೊದಲಾದುವನ್ನು ಅಕರವಾಗಿಸಿ (ತೆರಿಗಿ ರಹಿತಮಾಡಿ) ದಾನದತ್ತಿ ಕೊಡುತ್ತಿದ್ದರು. ಇಡೀ ಗ್ರಾಮವನ್ನೇ ದಾನವಾಗಿ ಬಿಟ್ಟುಕೊಡುತ್ತಿದ್ದುದೂ ಉಂಟು [ಎಪಿಜಿಎಎಸ್ ೩, ನಲ್ಗೋಂಡ ೪೩. ನಂ. ೪೫.೧೧೨೫. ಕೊಲನುಪಾಕ.: ಎ.ಕ. ೮ (೧೯೮೪) ೫. (೫ ಅಗೊ ೧೦೨) ೧೦ ಶ. ಪು. ೧೦೪-೦೫]

ಹೀಗೆ ಹೊಸದಾಗಿ ಮಾಡಿಸಿದ ಬಸದಿಗಳನ್ನು ತಮ್ಮ ಮನೆತನದ (ಕುಲ) ಗುರುಗಳಿಗೊ, ಆಯಾ ಭಾಗದ ಮುಖ್ಯ ಧರ್ಮ ಗುರುಗಳಿಗೊ, ಮಂಡಲಾ ಚಾರ್ಯರಿಗೊ, ಸ್ಥಾನದ ಆಚಾರ್ಯರಿಗೊ ಒಪ್ಪಿಸುವುದು ಕ್ರಮ : ಹೀಗೆ ಗುರುಗಳಿಗೆ ಅರ್ಪಿಸುವಾಗ, ಅವರ ಕಾಲು ತೊಳೆದು, ಬಸದಿಯ ಒಡೆತನ ಕಟ್ಟಿಸಿದವರಿಗೆ ಬೇಡವೆಂದು, ಮತಾಚಾರ್ಯರ ಮೇಲ್ವಿಚಾರಣೇಯಲ್ಲೇ ಅದು ನಡೆಯಬೇಕೆಂದು, ಪೂರ್ಣಾಧಿಕಾರವನ್ನು ಬಿಟ್ಟು ಧಾರೆಯೆರೆದು ಕೊಡುತ್ತಿದ್ದರು. ಈ ಬಗೆಯ ನೂರಾರು ಶಾಸನಗಳು ಇವೆ. ಒಂದು ದೃಷ್ಟಾಂತ ಕೊಡಬಹುದು: ಚಾಂಡಾಡಿ ನಾಮಧೇಯ ನೊಳಂಬಿ ಸೆಟ್ಟಿಯು ತದ್ವಲ್ಲಭೆ ದೇಮಿಕಬ್ಬೆಯುಂ ತ್ರಿಕೂಟ ಜಿನಾಲಯಮಂ ಮಾಡಿಸಿ ಶ್ರೀ ಮೂಲಸಂಘದ ದೇಸಿಗಗಣದ ಪುಸ್ತಕ ಗಚ್ಛದ ಶ್ರೀಕೊಣ್ಡಕುನ್ದಾನ್ವಯದ ಶ್ರೀ ಕುಕ್ಕುಟಾಸನ ಮಲಧಾರಿದೇವರ ಶಿಷ್ಯರಪ್ಪ ತಮ್ಮ ಗುರುಗಳು ಶ್ರೀ ಸುಭಚನ್ಡ್ರ ಸಿದ್ಧಾನ್ತದೇವರ್ಗ್ಗೆ ಕೊಟ್ಟಬಸದಿ [ಎ.ಕ. ೮-೨, ಕೃಪೇ, ೩ (೪ ಕೃಪೇ ೩) ೧೧೧೮. ಹೊಸಹೊಳಲು (ಮಂಡ್ಯ ಜಿ/ ಕೃಪೇ ತಾ) ಪು. ೪-೫]. ತಮ್ಮ ಮುತ್ತಯ್ಯಂ ಮಾಡಿಸಿದ ಬಸದಿಯಂ ಪಡಿಸಲಿಸಿ ನಾಟಕ ಶಾಲೆಯಂ ಮಾಡಿಸಿದ ಮೊಮ್ಮಕ್ಕಳೂ ಇದ್ದಾರೆ [ಸೌ.ಇ.ಇ. ೧೧-೧, ೭೮.೧೦೪೫. ಮುಗದ. ಪು. ೭೨.]

ಬಸದಿಗಳು ಜೈನ ಆರಾಧನಾ ಕೇಂದ್ರವಾಗಿರುವಂತೆ ಮುಖ್ಯ ಸಾಂಸ್ಕೃತಿಕ ಕೇಂದ್ರವೂ ಹೌದು. ನೋಂಪಿಗಳು, ಉದ್ಯಾಪನೆ, ಅನಂತ ಚತುರ್ದಶಿ, ಪಂಚಕಲ್ಯಾಣ, ನಿತ್ಯಾಭಿಷೇಕ – ಹೀಗೆ ನಿತ್ಯೋತ್ಸವ ನಡೆದೇ ಇರುತ್ತದೆ. ಒಂದು ಬಸದಿಯ ಹೆಸರೇ ನೋಂಪಿಯ ಬಸದಿ [ಸೌ.ಇ.ಇ. ೧೫, ೬೭.೧೧೮೫. ಲಕ್ಕುಂಡಿ] ಎಂದಿಡಲಾಗಿದೆ. ಜೈನರಿಷಿಗಳು, ಕಂತಿಯರು ಅವರ ಧರ್ಮವಿಹಾರ, ಕಾಲುನಡಿಗೆ ಸಂಚಾರ ಕಾಲದಲ್ಲಿ, ಚಾತುರ್ಮಾಸ (ವರ್ಷಾಕಾಲ) ದಲ್ಲಿ ಬಸದಿಗಳಲ್ಲಿ ಇಳಿದುಕೊಳ್ಳುತ್ತಿದ್ದರು. ಧರ್ಮ ಪ್ರವಚನ, ಅಗಮಗ್ರಂಥ ವಾಚನ ನಡೆಯುತ್ತಿತ್ತು. ಮರಣೋನ್ಮುಖರಾದ ಯತಿಗಳು, ಆರ್ಯಿಕೆಯರು ಸಲ್ಲೇಖನವ್ರತ ಸ್ವೀಕರಿಸುತ್ತಿದ್ದರು. ಅನೇಕ ಬಸದಿಗಳ ಆವರಣದಲ್ಲಿ ಈ ರೀತಿ ಸಮಾಧಿ ಮರಣ ಪಡೆದ ಮುನಿಗಳ. ಕಂತಿಯರ ಸಾವಿನ ಸ್ಮಾರಕವಾಗಿ ನಿಲ್ಲಿಸಿದ ನಿಸಿದಿಗಳನ್ನು ಕಾಣಬಹುದು; ಪುಲಿಗೆರೆಯ ಬಸದಿ ಮೊದಲಾದುವನ್ನು ಹೆಸರಿಸಬಹುದು. ಕಾರ್ಕಳದಲ್ಲಿ ಒಂದು ಬಸದಿಯ ಹೆಸರೇ ’ನಿಸದಿ ಬಸದಿ’ ಎಂದಿದೆ.

ಊರಿನ ಗಡಿಗಳನ್ನು, ದೇವಾಲಯಗಳಿಗೆ ಕೊದಲಾದ ದಾನಧರ್ಮಗಳ ಮೇರೆಗಳ ಗುರುತಿಸುವುದು ಇಂದಿಗೂ ಪ್ರಚಲಿತವಿರುವ ಪದ್ಧತಿ, ಅದರಂತೆ ಸೀಮಾರೇಖೆಯನ್ನು ದಾಖಲಿಸಿರುವ ಕೆಲವು ವಿವರಗಳಲ್ಲಿ ಬಸದಿಯನ್ನು ಮೇರೆಯಾಗಿ ಹೆಸರಿಸಿರುವುದು ಕಂಡುಬರುತ್ತದೆ [ಸೌ.ಇ.ಇ. ೨೦, ೭೪.೧೧೧೨. ಪು. ೯೧.: ಸೌ.ಇ.ಇ. ೧೫, ೫೯. ೧೧೮೪.: ಎ.ಕ. ೮-೨ (೧೯೦೨) ಸೊರಬ. ೧೪೦. ೧೧೯೮. ಪು. ೬೦.] ಕೊಡುಗೆಯ ಹೊಲ ಮೇರೆ ಸೀಮಾಕ್ರಮವನ್ನು ಗುರುತಿಸುವಾಗ ಜೈನಬಸದಿಗಳನ್ನೇ ಅಲ್ಲದೆ, ಜೈನ ಲಾಂಛನವಾದ ಮುಕ್ಕೊಡೆ ಕಲ್ಲುಗಳನ್ನೂ [ಜೆ‍ಎಸ್‍ಐ (೧೯೫೭) ಪು. ೧೩೫ ಅ.ಟಿ., ಕೊಪ್ಪಳ ಶಾಸನ ಸಂಖ್ಯೆ, ೨೮], ಜೈನ ಯಕ್ಷಿಯೂ ಜಿನಶಾಸನದೇವಿಯೂ ಪದ್ಮಾವತಿಯ ಕಲ್ಲನ್ನೂ [ಎ.ಇ.೧೬, ೫೬.೧೦೫೩. ಮುಳ್ಗುಂದ] ನಮೂದಿಸಿರುವುದು ವಿಶಿಷ್ಟವಾಗಿದೆ.

ಇದೇ ರೀತಿಯಾಗಿ ಈ ಅಧ್ಯಯನವನ್ನು ಮುಂದುವರಿಸಿದಾಗ ಕಂಡುಬರುವ ಇನ್ನೊಂದು ವೈಶಿಷ್ಟ್ಯವಿದೆ; ಕೆಲವು ಗ್ರಾಮಗಳಿಗೆ ಬಸದಿಯೇ ವಿಶೇಷಣವಾಗಿ ಸೇರಿದೆ. ಪಾರ್ಶ್ವನಾಥಪುರ [ಎ.ಕ. ೭, ನಾಮಂ ೬೪, ೧೧೪೫, ಯಲ್ಲಾದಹಳ್ಳಿ ಮಂಡ್ಯ ಜಿ/ ಶ್ರವಣನಹಳ್ಳಿ [ಎ.ಕ. ೬ (೧೯೭೭) ಕೃಪೇ. ೨೧.೧೧೪೦. (ಮಂಡ್ಯ ಜಿ/)] ಶ್ರವಣಪ್ಪನಿದಿಣ್ಣೆ [ಎ.ಕ. ೯, ಬೆಂಗಳೂರು ೮೨.೧೪೨೬. ಬೇಗೂರು] ಸವಣ್ಗೆಱೆ [ಸೌ.ಇ.ಇ. ೧೧.೭೮.೧೦೪೫. ಮುಗದ] ಸವಣನಕೆಱೆ [ಎ.ಕ.೮-೧ (ಪ). ೫೭. ೧೧೧೫-೧೬. ನಿದಿಗೆ ಬಸ್ತಿಯ ತಿಪ್ಪೂರು ಎ.ಕ. ೮ (೧೯೭೯) ಮದ್ದೂರು. ೫೧. ೧೪-೧೫ ಶ.] ಬಸ್ತಿಮಾದಳಿ ಗ್ರಾಮ [ಎ.ಕ. ೪ (೧೯೭೫) ಹು ೩೨ (೪ ಹು ೧೩೯) ೧೬೬೯, ತರೀಕಲ್ಲು] ಬಸ್ತಿಗದ್ದೆ [ಎ.ಕ. ೬ (೧೯೭೭) ೧೬ (೩ ಶ್ರೀಪ ೧೪೭) ೯-೧೦ಶ. ಕ್ಯಾತನಹಳ್ಳಿ. ಪು. ೧೧೩.] ಬಸ್ತಿಹಳ್ಳಿ [ಎ.ಕ. ೬. ೨೩. ೧೬೬೪. ಪು. ೨೫೧] ಸವಣನ ಬಿಳಿಲು [ಎ.ಕ. ೮-೨, ಸೊರಬ. ೨೩೩.೧೧೩೯. ವುದ್ರಿ] ಮಾಣಿಕ್ಯವೊೞಲ್ – ಬಸ್ತಿ [ಎ.ಕ. ೬ (೧೯೭೭) ೧೦೬ (೫ ಕೃಪೇ ೩೬) ೧೧೬೫. ಬಸ್ತಿ (ಮಂಡ್ಯ ಜಿ./)] ಜಿನಹಳ್ಳಿ – ಜಿನ್ನಹಳ್ಳಿ [ಎ.ಕ. ೩ (೧೯೭೪) ಪು. ೪೪೭-೪೮ (ಮೈಜಿ/)]- ಇದೇ ರೀತಿ ಬಸ್ತಿಪುರ, ದೊಡ್ಡಬಸ್ತಿ, ಚಿಕ್ಕ ಬಸ್ತಿ, ಬಸ್ತಿ ಉಲ್ಲಾಳ ಸವಣೂರು ಮೊದಲಾದ ಸ್ಥಲನಾಮಗಳನ್ನು ಗಮನಿಸಬಹುದು.

ಬಸದಿಗಳ ಅಧ್ಯಯನ ಕಕ್ಷೆಯಲ್ಲಿ ಪ್ರಸ್ತಾಪಿಸಬೇಕಾದ ಮೌಲಿಕವಾದ ಇನ್ನೊಂದು ಅಂಶವಿದೆ. ದೇವಾಲಯ ಮತ್ತು ದಾನ ಧರ್ಮಗಳನ್ನು ಅಪರಹಣಕಾರರಿಂದ ಸಂರಕ್ಷಿಸಲು ಒಂದು ಧರ್ಮಭೀತಿ ಇರಲೆಂದು ಹಿಂದಿನವರು ಆಲೋಚಿಸಿದ್ದರು. ಯಾವುದೇ ಪವಿತ್ರವಾದ ಪದಾರ್ಥವನ್ನು ಕದಿಯಬಾರದು, ಪರಭಾರೆ ಮಾಡಬಾರದು- ಎಂಬ ನೀತಿ ಸಂಹಿತಿಯಿದೆ. ಶಾಸನಗಳ ಕಟ್ಟ ಕಡೆಯಲ್ಲಿ ಬರುವ ಭಾಗವೆಂದರೆ ಶಾಪಾಶಯ. ಧರ್ಮದ ಉಲ್ಲಂಘನೆ ಮಾಡಿದವರು ಯಾವ ಬಗೆಯ ಪಾಪಕ್ಕೆ ಒಳಗಾಗುವರು ಎಂಬುದನ್ನು ಶಾಸನಾಂತ್ಯದಲ್ಲಿ ಸೂಚಿಸುತ್ತಾರೆ. ಅದರಂತೆ ಬಸದಿಗಳನ್ನು ನಾಶಪಡಿಸಿದವರು, ಜೈನಮುನಿ (ರಿಷಿ) ಗಳನ್ನು ಕೊಂದ ಪಾಪಕ್ಕೆ ಗುರಿಯಾಗುವರೆಂಬ ಮಾತುಗಳು ಕೆಲವು ಶಾಸನಗಳಲ್ಲಿವೆ. ಕೆಲವು ಉದಾಹರಣೆಗಳು:

೧. ಸ್ತೀವಧೆಯು ರಿಷಿವಧೆ [ಕ.ಇ. ೬, ೧.ಸು. ೭೯೮. ಮೇದೂರು (ಧಾಜಿ / ಹಿರೇಕೆರೂರು ತಾ) ಪು. ೨. ಸಾಲು:

೨.         ಇದನಱಿದೊಂ ಪ್ರಯಾಗೆಯುವಂ ಕುರುಕ್ಷೇತ್ರವುವಂ
ಬಾಣರಾಗಿಯುವಂ ಕೞ್ವಪ್ಪು ವಂ ಸಾಸಿರ ಕವಿಲೆಯುವಂ
ಸಾಸಿರ್ಬ್ಬರ್ಪ್ಪಾರ್ವ್ವರುವಂ ಸಾಸಿರ್ಬ್ಬರ್ ರಿಷಿಯರು
ವನೞೆದ ಪಾತಕನು ಬ್ರಹ್ಮಾತಿಕಾರನುಮಕ್ಕುಂ
||[ಸೌ.ಇ.ಇ. ೯-೧, ೭೭.೯೯೨. ಕೋಗಳಿ ಪು. ೪೯]

೩.         ಇದರಕ್ಷಿಸಿ ನೆಗೞ್ದೂಪಗೆ ಅಷ್ಟ ಸಷ್ಟಿ ತೀರ್ತ್ಥಮಿನ್ದ
ಫಲಮಕ್ಕುಂ ಸ್ವರ್ಗಾಪವರ್ಗ ಮೋಕ್ಷವ ಪಡೆಗು
[ಸೌ.ಇ.ಇ. ೯-೧, ೭೧.೯೭೨. ಬಾಗಳಿ (ಬಳ್ಳಾರಿ ಜಿ / ಹರಗನಹಳ್ಳಿ ತಾ) ಪು. ೪೪]

೪.         ದಱ ಬಿತ್ತು ವಟ್ಟವನೞೆಪಿ ಕೊಡ್ದವ
ದೇಗುಲವಂ ಬಸದಿಯುಮಂ ಕವಿಲೆಯುಮಂ
ಕಿಱೆಯುಮಂ ಬಾಣರಾಸಿಯುಮನೞೆದಂ
[ಎ.ಕ. ೪ (ಪ) ಚಾನ. ೪೦೪ (ರಿ. ೧೯೩೧-೪೩). ಕ್ರಿ.ಶ. ೯೯೩. ಸೋಮಸಮುದ್ರ (ಮೈಜಿ./ಚಾನತಾ.) ಪು. ೨೬೫

೫.         ಇದನೞೆದಂ ಮಂಗಪಟ್ಟೆಯೊಳಯ್ನೂರ್ವ್ವರು ರಿಶಿಯರನಳಿದ
ಮಹಾಪಾತಕನಕ್ಕುಂ
| ದೇಶ ಕಾಲಸ್ಥಿತಿಯಿಂ ದಾನಮಂತೞೆಸಿದೊಡೀ
ಯರ್ತ್ಥಂ ನಗರಜಿನಾಲಯದೊಡವೆ
||
[ಸೌ.ಇ.ಇ. ೧೧-೧, ೯೪.೧೦೫೯. ಹಂಬಳ (ಧಾಜಿ. / ಮುಂಡರಗಿ ತಾ.) ಪು. ೯೦]

ಜೈನ ಪರಂಪರೆಯ ಅರಿವಿಗೆ, ಪುನಾರಚನೆಗೆ ನೆರವಾಗುವ ಅಧ್ಯಯನ ಸಾಮಾಗ್ರಿಯಲ್ಲಿ ಬಸದಿಗಳಿಗೆ ವಿಶೇಷ ಆದ್ಯತೆಯಿದೆ. ಜೈನ ಪರಂಪರೆ ಗರ್ಭೀಕರಿಸಿದ ಸಾಂಸ್ಕೃತಿಕ ಅಭಿವ್ಯಕ್ತಿಯ ಪಲ್ಲಟ ಮತ್ತು ಪರಿಣಾಮಗಳನ್ನು ಗುರುತಿಸಲೂ, ಜೈನಧರ್ಮ ಸಂಬಂಧದ ವಾಗ್ವಾದಗಳ ಪರಿಚಯ ಪಡೆಯಲೂ ಬಸದಿಗಳು ಆಕರವಾಗಿವೆ. ಬಸದಿಗಳು ಗತಕಾಲದ ಇತಿಹಾಸಕ್ಕೆ, ಶ್ರುತಭಂಡಾರಕ್ಕೆ ತೆರೆದ ಮಹಾ ಬಾಗಿಲು ಬಸದಿಗಳ ಬಾಗಿಲು ತೆರೆಯುವುದೆಂದರೆ ಜ್ಞಾನಕೋಶವನ್ನು ಅನಾವರಣಗೊಳಿಸಿದಂತೆ. ಉದಾತ್ತ ಅಮರತತ್ವ ಕಿರಣಗಳನ್ನು ಜೀವಕೋಟಿಗೆ ಬೀರಿದ ಅರಿವಿನ ಅರವಂಟಿಗೆಗಳು ಬಸದಿಗಳು. ಜಿನಮಂದಿರಗಳು ವಿದ್ಯಾದಾನ ಮಂದಿರಗಳೂ ಹೌದು. ಶ್ರಾವಕವರ್ಗಕ್ಕೆ ತಕ್ಕ ಮಾರ್ಗದರ್ಶನ ಬಸದಿಗಳಲ್ಲಿ ಸಿಗುತ್ತಿತ್ತು. ಅಲ್ಲಿಗೆ ಬಂದವರಿಗೆ ಮಾನಸಿಕ ನೆಮ್ಮದಿಯಂತೂ ಇದ್ದೇ ಇದೆ. ಆತ್ಮ ಸಂತೃಪ್ತಿಯೊಂದಿಗೆ ಜ್ಞಾನಾರ್ಜನೆಗೂ ಅವಕಾಶವಿತ್ತು. ಜತೆಗೆ ಬಸದಿಗಳು ಸಾರ್ವಜನಿಕ ಹಿತದ ಸಾಂಸ್ಕೃತಿಕ ಚಟುವಟಿಕೆಗಳ ತವರುಮನೆ ಎನಿಸಿದ್ದುವು.

ಬಸದಿಗಳು ಜೈನ ಧರ್ಮದ ಸಂಘಟನೆಯಲ್ಲಿ ಗಣನೀಯ ಪಾತ್ರವನ್ನು ವಹಿಸಿವೆ ಜೈನ ಸಮಾಜಕ್ಕೆ ಸಾಂಘಿಕ – ಸಾಂಸ್ಥಿಕ ಸ್ವರೂಪವನ್ನು ಕೊದುವುದರಲ್ಲಿ ಈ ಚೈತ್ಯಾಲಯಗಳು ಪ್ರಮುಖ ಕಾರ್ಯ ನಿರ್ವಹಿಸಿವೆ. ಪ್ರಸಿದ್ಧ ಧಾರ್ಮಿಕ ಆಚಾರ್ಯರು, ಆಚಾರ್ಯಮುನಿ ಸಂಘ ಚಾತುರ್ಮಾಸಕ್ಕೆಂದು ಇಲ್ಲಿ ನೆಲೆ ನಿಂತಾಗಲಂತೂ ಬಸದಿಗಳು ಚಟುವಟಿಕೆಯ ಜೇನುಗೂಡುಗಳಾಗುತ್ತಿದ್ದವು. ಪೂಜಾ ಸಂಪ್ರದಾಯದ ಉಗಮಕ್ಕೂ ಬಸದಿಗಳೇ ಜನ್ಮಸ್ಥಳ. ದಾನದತ್ತಿಗಳಿಂದ ಬಸದಿಗಳು ಬಾಳಿದುವು. ಬೆಳೆದುವು. ಬೆಳಗಿದುವು. ರಕ್ಷಿತರ ರಕ್ಷಣೆ ಇಲ್ಲದಾಗ ಸೊರಗಿದುವು, ಪಾಳುದೇಗುಲಗಳಾದುವು, ಧರ್ಮಾಂಧರ ಮತದ ಸೇಡಿನ ದಳ್ಳುರಿಗೆ ಈಡಾದುವು. ಮತದ್ವೇಷದ ಫಲವಾಗಿ ಅನ್ಯಧರ್ಮೀಯರ ಆಕ್ರಮಣಕ್ಕೆ ತುತ್ತಾದುವು. ಅಳಿದುಳಿದು ಕೆಲವು ಜಿನಾಲಯಗಳು ಶಿವಾಲಯಗಳಾಗಿ, ವೈಷ್ಣವ ಮಂದಿರಗಳಾಗಿ, ಮಸೀದಿಗಳಾಗಿ ಪರಿವರ್ತಿತವಾದುವು. ಬಸದಿಗಳ ಇತಿಹಾಸದಲ್ಲಿಯೂ ಅನೇಕ ಏಳುಬೀಳುಗಳಿವೆ.