೧. ಕನ್ನಡ ಮತ್ತು ತೆಲುಗು ಶಾಸನಗಳಲ್ಲಿ ಬಿಟ್ಟಕುಲ ಕುರಿತು ನಾಲ್ಕೈದು ಉಲ್ಲೇಖಗಳು ಉಪಲಬ್ಧವಾಗಿದೆ. ಆ ಉಲ್ಲೇಖಗಳನ್ನು ಆಧರಿಸಿ ಶಬ್ಧಾರ್ಥವನ್ನು ವಿವೇಚಿಸಿ, ಭಾಷಾವಿಜ್ಞಾನ ದೃಷ್ಟಿಯಿಂದ ಅದರ ನಿಷ್ಪತ್ತಿಯನ್ನು ಗುರುತಿಸುವುದಕ್ಕೆ ಈ ಪರಿಶೀಲನೆಯ ಚೌಕಟ್ಟು.

೧.೧. ಬಿಟ್ಟಕುಲವನ್ನು ಕುರಿತು ಪ್ರಸ್ತಾಪಿಸುವ ನಾಲ್ಕು ಶಾಸನಗಳು ಆಗಿನ ಕರ್ನಾಟಕದ ಹಾಗೂ ಈಗಿನ ಆಂಧ್ರ ಪ್ರದೇಶದ ವ್ಯಾಪ್ತಿಯಲ್ಲಿವೆ. ಇವುಗಳಲ್ಲಿ ಮೂರು ಶಾಸನಗಳು ಕನ್ನಡದಲ್ಲಿವೆ, ಒಂದು ಶಾಸನ ತೆಲುಗಿನಲ್ಲಿದೆ. ಈ ಶಾಸನಗಳು ರಚಿತವಾದ ಕಾಲದ ಅವಧಿ ಕ್ರಿ.ಶ. ೧೧-೧೨ ನೆಯ ಶತಮಾನದಲ್ಲಿ ಈ ಜಿಲ್ಲಾ ವಲಯದವರೆಗೂ ಕನ್ನಡ ಜನಭಾಷೆಯಾಗಿ ಬಳಕೆಯಲ್ಲಿದ್ದುದೂ, ಈ ಭಾಗವು ದ್ವಿಭಾಷಾ ಪ್ರದೇಶವಾಗಿ ಇದ್ದುದೂ (bilingualarea) ಇದರಿಂದ ಸ್ಪಷ್ಟವಾಗುತ್ತದೆ.

೨. ಸನಿಗರಂ (ಆಂಧ್ರ : ಕರೀಂನಗರ ಜಿ / ತಾ) ಗ್ರಾಮದ ಭೀಮೇಶ್ವರ ಗುಡಿಯ ಹತ್ತಿರದ ಕಲ್ಲಿನ ಮೇಲೆಕನ್ನಡ ಶಾಸನವಿದೆ. ಇದು ಕಲ್ಯಾಣಿ ಚಾಳುಕ್ಯರ ತ್ರೈಳೋಕ್ಯಮಲ್ಲ ದೇವನ (೧೦೪೨-೬೮) ಆಳಿಕೆಗೆ ಸೇರಿದ್ದು. ಇದರಲ್ಲಿ ಮಹಾಸಾಮಂತ ಕಾಕತೀಯ ಒಂದನೆಯ ಚೇತನ ಪೆರ್ಗಡೆ ವೈಜರಾಜನ ಮಗನಾದ ನಾರಣಯ್ಯನು ಸಣಗರ ಗ್ರಾಮದ ‘ದುದ್ದುಮಲ್ಲ ಜಿನಾಲಯ’ ವನ್ನು ಜೀರ್ಣೋದ್ಧರಿಸಿದ ಮಾಹಿತಿಯಿದೆ. ಸ್ಥಳೀಯರಾದ ಮುಪ್ಪಡಯ್ಯ ಮತ್ತು ಪುನ್ನಿರಡ್ಡಿ ಗಾಮುಂಡರನ್ನು ಒಡಂಬಡಿಸಿ ಒಂದು ರಾಟಣವನ್ನು ನೀಡಿದನು. ಶಾಸನವು ಚೇತನನು ‘ಶ್ರೀ ಮದ್ವಿಟ್ಟ ಕುಲಾಂಬರ ಭಾನು’ (ವಿಟ್ಟ ಕುಲವೆಂಬ ಆಕಾಶಕ್ಕೆ ಸೂರ್ಯ) ಎಂದು ನಮೂದಿಸಿದೆ.

[ಐಎಪಿ ಕರೀನಗರ ೧೪. ೧೦೫೧, ಸನಿಗರಂ (ಆಂಧ್ರ : ಕರೀಂನಗರ ಜಿ/ ತಾ.) ಪು. ೩೬-೩೮]

೩. ಬೆಕ್ಕಲ್ಲು ಗ್ರಾಮದ (ವ್ರೆಕ್ಕುಲ್ಲು ) ತೆಲುಗು ಶಾಸನದಲ್ಲಿ ವಿಷ್ಟಕುಲಮೂಲೊನು ಪುಟ್ಟಿದ ಕೆಲವರನ್ನು ಹೆಸರಿಸಿದೆ : ರೇವಿರೆಡ್ಡಿ, ಚಂಡಿರೆಡ್ಡಿ, ಪುನ್ನಿ ರಡ್ಡೆ, ಮಲ್ಲಿ ರೆಡ್ಡಿ, ರೇವಿ ರಡ್ಡಿಯನ್ನು ನಿರ್ಮಲ ಉಜ್ವಲ ಯಶಸ್ ಸಮೃದ್ಧನೆಂದೂ, ಸುಗುಣ ಸುಹೃಜ್ಜನಾಂಬುಜ – ಅಂಭೋರುಹ ಮಿತ್ರನೆಂದೂ ಅಪರಿಮಿತ ಪುಣ್ಯ ಧನಾಢ್ಯನೆಂದೂ, ವೀರಾರಿಮದ ದ್ವಿಪೇಂದ್ರನ ಖರಾಯುಧನೆಂದೂ -ಶಾಸನ ಚಿತ್ರಿಸಿದೆ. ಈ ರೇವಿರಡ್ಡಿಯ ಮಗ ಚಂಡಿರಡ್ಡಿ. ಈ ಮಲ್ಲಿರಡ್ಡಿಯು ವೆಕ್ಕಲ್ಲು ಊರಿನಲ್ಲಿ ಜಿನಾಲಯವನ್ನೂ, ತ್ರಿಕೂಟ ಬಸದಿಯನ್ನು, ಇಪ್ಪತ್ತೊಂದು ಗುಡಿಗಳ ಸಮುಚ್ಚಯವನ್ನು ಮಾಡಿಸಿದನು.

[ಐಎಪಿ. ವರಂಗಲ್ ೨೦. ೨ ಶ. (ಸು. ೧೦೯೦) ಚಿಕ್ಕಲ್ಲು (ಆಂಧ್ರ : ವಾರಂಗಲ್ಲು ಜಿ/ ಜನಗಾಂವ್ ತಾ) ಪು. ೪೫-೪೮

೩.೧ ಮಲ್ಲಿರೆಡ್ಡಿಯ ಧಾರ್ಮಿಕ ಪ್ರವೃತ್ತಿಯೊಂದಿಗೆ ಆತನ ವಾಂಶಿಕ ಚಿತ್ರಣವೂ. ಇದೇ ಶಾಸನದಲ್ಲಿದೆ:

ಶತದಳ ಹಿತಸುತ ವಿತರಣುಂಡತು
ಲಿತನುತಶಿತಯಶೋರ್ತ್ಥಿಯಮಲ ಚರಿತ್ರಂ
ಡತಿಶಯಗುಣ ಮೂಲಂಬರಗೆ ವಿಜಿತರಿ
ಪುಂಡಗು ಮಲ್ಲಿರಡ್ಡಿ ವಿಷ್ವ ಕುಲಮುಲೊನು
||
ವಿಷ್ವ ಕುಲಬಂದಿಯೆಟ್ಟಿದ ನಿನ……….

[ಅದೇ, ಪು. ೪೮]

೪. ಇದೇ ಮಲ್ಲಿರೆಡ್ಡಿಯನ್ನು ಕುರಿತು ಇನ್ನೊಂದು ಶಾಸನದಲ್ಲಿ ಮತ್ತಷ್ಟು ವಿವರಗಳು ಸಿಗುತ್ತವೆ:

ಶ್ರೀಮತು ಶ್ರಾವಕಾಭರಣ ಸತ್ಯ ರತ್ನಾಕರಂ ಸಮ್ಯಕ್ತ್ವ
ಚೂಡಾಮಣಿ ಎನಿಸಿ ನೆಗಳ್ದ ದಾ(ನ) ಪೂಜಾ ಶೀಳೋಪವಾಸ
ಮೆಂಬೀ ನಾಲ್ಕು ಪಾಸಂಗಳೊಳ್ ಸಂಪೂರ್ಣನುಮಪ್ಪ
ಸುಮತ್ತವೆನ್ತಪ್ಪನೆಂದಡೆ ಬಿಟ್ಟ ಕುಳ ತಿಳಕಾಂಭೋ
ರಾಶಿ ವಾರ್ದ್ಧಿ ವರ್ದ್ಧನ ಚಂದ್ರನುಮೆನಿಪ ಶ್ರೀಮತು
ಚಿಕ್ಕಲ್ಲ ಪುರವರಾಧೀಶ್ವರನುಮಪ್ಪ ಮಲ್ಲಿ ರಡ್ಡಿ
ತನ್ನ ಪ್ರತಿಷ್ಠೆತೆಯ್ದು…….
ಮಂದಿತ ದೇವರ ಪೂಜೆಗಕ್ಕಂ ರಿಸಿಯರಾಹರದಾನಕೆಂದು
ಸಮಕಟ್ಟಿ
ಸ್ವಸ್ತಿಯಮನಿಯಮ ಸ್ವಾಧ್ಯಾಯ ಧ್ಯಾನ ಮೌನಾನುಷ್ಠಾಣ
ಜಪ ಸಮಾಧಿಶೀಲ ಸಂಪನ್ನರಪ್ಪ
ಶ್ರೀಮತು ಗುಣಸೇನ ಪರಮಾತ್ಮಧ್ಯಾನ ದೇವರಿಗೆ
ತನ್ನ ಕುಟುಂಬ ಸಹಿತ ಕಾಲಂ ಕರ್ಚ್ಚಿ ಕೊಟ್ಟ ದತ್ತಿ ಎನ್ತೆನೆ
ಛಲಿ ಮಡುಗಿನ ಕೆಱೆಯ ಮೇಗೆ ವಾಯಲೊಂದು ಮತ್ತರು
ಗದ್ಯ ರುದ್ರ ಸಮುದ್ರದೊಳೊನ್ದು ಮತ್ತರು ಗದ್ಯ
ನೀರೋಹರಿಯೆನ್ನದೆ ಕೊಟ್ಟು ಪ್ರತಿಪಾಳಿಸಿದ ಮಂಗಳ ಮಹಾಶ್ರೀ
|

[ಐಎಪಿ. ವರಂಗಲ್. ೧೯. ಅತೇದಿ (ಸು. ೧೦೯೦) ಬೈರಾನಿಪಲ್ಲಿ (ಆಂಧ್ರ : ವಾರಂಗಲ್ಲು ಜಿ / ಜನಗಾಂವ್ ತಾ) ಪು. ೪೪-೪೫]

೫. ಬೈರಾನಿಪಲ್ಲಿಯ ಕನ್ನಡ ಶಾಸನದಲ್ಲಿಯೂ ವಿಟ್ಟಿ-ಬಿಟ್ಟ ಕುಲದ ಮಾಹಿತಿಯಿದೆ ರಾಜಧಾನಿ ಭುವನಗಿರಿಯಬ್ ದಂಡನಾಯಕ ಭೀರಮ ರಡ್ಡಿ ಮತ್ತು ಬೆಕ್ಕಲ್ಲು ಊರಿನ ಇಬ್ಬರು ಕರಣಕರು ಬಿಟ್ಟ ದಾನಗಳ ವಿವರವಿದೆ. ಇವರು ಜಿನಬಿಂಬ ಸ್ಥಾಪಿಸಿ, ಮಾವಿನ ತೋಟ, ಇಪ್ಪತ್ತು ಮತ್ತರು. ಕರಂಬ ನೆಲ ಹೊಲಾದಿಗಳನ್ನು ಬಸದಿಯ ಜೀರ್ಣೋದ್ಧಾರಕ್ಕೂ, ರಿಷಿಗಳ ಆಹಾರದಾನಕ್ಕೂ ದಾನಕೊಟ್ಟರು. ಈ ದಾನಿಗಳಲ್ಲಿ ನಂಗನೂರಿನ ಪುನ್ನಿರಡ್ಡಿ, ವೆಲ್ಲಮ ಪಟ್ಲದ ರೇವಿರಡ್ಡಿ ಇದ್ದರು. ರಡ್ಡಿ ಕುಲ ‘ವಿಟ್ಟಿ’ ವಂಶಕ್ಕೆ ಸೇರಿದ ಬೀರಮರಡ್ಡಿಯ ಸುದೀರ್ಘ ವರ್ಣನೆಯಿದೆ ಬಿಟ್ಟ ಕುಳ ತಿಳಕ ಬೆಕ್ಕಲ್ಲ ಬೀರಮರೆಡ್ಡಿ ಎಂಬ ಹೇಳಿಕೆ ಬಂದಿದೆ. ಜತೆಗೆ ಬಿಟ್ಟ ಕುಲದ ರೋಚಿಗ ಎಂಬ ವ್ಯಾಕ್ತಿಯ ಪ್ರಸ್ತಾಪವೂ ಇದೆ.

[ಐಎಪಿ ವರಂಗಲ್ ೧೮.೧೧೦೮. ಬೈರಾಪಿನಲ್ಲಿ (ಆಂಧ್ರ : ವಾರಂಗಲ್ಲು ಜಿ / ಜನಗಾಂವ್ ತಾ) ಪು. ೪೦-೪೪] ಬಿಟ್ಟಿಕುಳತಿಳಕನವೆಸರಳ
ವಟ್ಟಿರೆ ಮಾಡಿಸಿದ ತನಗೆ ಚೈತ್ಯಾಲಯಕಂ
ಬಿಟ್ಟಿಕುಲತಿಳಕಮೆನೆಪೆಸ
ರಿಟ್ಟಂ ಬೆಕ್ಕಲ್ಲ ಬೀರನಹಿತಘ ರಟ್ಟಂ ||

೬. ಈ ಶಬ್ದದ ನಿಷ್ಪತ್ತಿ ನಿರ್ವಚನ ಕುರಿತುಇ ವಿವರಣೆಯನ್ನು ಅತಿ ಸಂಗ್ರಹರೂಪದಲ್ಲಿ ಹೀಗೆ ಕೊಡಬಹುದು. ಈ ಕುಲದ ಹೆಸರಿನ ನಾಲ್ಕು (ಬಿಟ್ಟ – ಬಿಟ್ಟಿ – ವಿಷ್ಟ) ರೂಪಗಳು ಶಾಸನಗಳಲ್ಲಿವೆ. ಇವೆಲ್ಲ ರೂಪಗಳು ಸಂಸ್ಕೃತದ ‘ವಿಷ್ಟ’ ಶಬ್ದದಿಂದ ನಿಷ್ಪನ್ನವಾಗಿವೆ. ಸಂಸ್ಕೃತದ ವಿಷ್ಟಿ ಶಬ್ದವು ಪ್ರಾಕೃತದಲ್ಲಿ ವಿಟ್ಠಿ ಎಂದಾಗಿ, ಅದು ಕನ್ನಡಕ್ಕೆ ಬಂದು ವಿಟ್ಟಿ ಎಂದಾಗಿದೆ.

೬.೧ ಈ ಶಬ್ದಕ್ಕೆ ನಾನಾ ಅರ್ಥಗಳಿವೆ. ಪುಕ್ಕಟೆಯಾಗಿ ಮಾಡಿಕೊಡುವ ಕೆಲಸವೇ ‘ಬಿಟ್ಟಿ’ ಕೆಲಸ (ಪರಾ : ಮೂವಿಟ್ಟಿ) ಪುಕ್ಕಟೆ ಕೆಲಸ ಎಂಬುದು ‘ವಿಟ್ಟಿ – ಬಿಟ್ಟಿ – ಬಿಟ್ಟ’ ಶಬ್ದದ ಮುಖ್ಯಾರ್ಥ. ಆದರೆ ಪ್ರಸ್ತುತ ಪರಿಶೀಲಿಸುತ್ತಿರುವ ಬಿಟ್ಟ (ಬಿಟ್ಟಿ) ಕುಲ ಶಬ್ದಾರ್ಥದ ಹಿನ್ನೆಲೆಗೆ ಸಂಬಂಧಿಸಿದ ಅರ್ಥ ಇದಲ್ಲ.

೬.೧.೧ ವಿಟ್ಟಿ-ಬಿಟ್ಟಿ ಎಂಬ ಶಬ್ಧಕ್ಕೆ ಒಂದು ಬಗೆಯ ಸುಂಕ ಎಂಬ ಅರ್ಥವೂ ಇದೆ; ಅದೇ ಪ್ರಕೃತ ವಿವೇಚನೆಗೆ ಸಂಬಂಧಿಸಿದ ಅರ್ಥ. ಕನ್ನಡದ ಹತ್ತಾರು ಶಾಸನಗಳಲಿ ಸುಂಕ, ತೆರಿಗೆ ಎಂಬರ್ಥದಲ್ಲಿ ವಿಟ್ಟಿ-ಬಿಟ್ಟಿ ಶಬ್ಧ ಪ್ರಯೋಗವಾಗಿದೆ: ಸೌ.ಇ.ಇ. ೧೧-೧. ೧೫.೮೭೩; ಅದೇ, ೭೭. ೯೯೨; ಎ.ಕ. ೧.೫೦. ೧೩ ಶ,; ಎ.ಕ. ೧೦. ಮುಳಬಾ. ೧೪೯೬; ಎ.ಕ. ೯. ಹೊಸರೋ. ೪. ೧೫೮೧ – ಇತ್ಯಾದಿ ಶಾಸನಗಳನ್ನು ನೋಡಬಹುದು.

೬.೨ ವಿಟ್ಟಿ-ಬಿಟ್ಟಿ-ಬಿಟ್ಟ ಕುಲವೆಂದರೆ ಸುಂಕಾಧಿಕಾರಿಗಳ ವಂಶ, ತೆರಿಗೆ ವಸೂಲಿಯ ಒಂದು ಮನೆತನ ಎಂದರ್ಥ.

೬.೨ ಆಂಧ್ರದ ಮೇಲೆ ಉದಾಹರಿಸಿದ, ಕೆಲವು ಶಾಸನಗಳಲ್ಲಿ ಉಲ್ಲೇಖವಾಗಿರುವ ಈ ಬಿಟ್ಟ ಕುಲವು ಜೈನ ಮನೆ ತನವಾಗಿದ್ದು, ಬಸದಿಗಳನ್ನು ಕಟ್ಟಿಸಿ, ದಾನ ದತ್ತಿಗಳನ್ನು ನೀಡಿದ್ದು ಸಹ ಶಾಸನಗಳಲ್ಲಿ ನಮೂದಿಸಲಾಗಿದೆ. ಕಲ್ಯಾಣ ಚಾಳುಕ್ಯರ ಅಧೀನದಲ್ಲಿ ಈ ವಂಶದವರು ಅಧಿಕಾರಗಳಾಗಿದ್ದರು. ಕನ್ನಡ ಇವರು ಮನೆ ಮಾತಾಗಿತ್ತು.