೧. ಕರ್ನಾಟಕದ ಬೇರೆ ಬೇರೆ ಭಾಗಗಳನ್ನು, ದೊಡ್ಡ ಮಹಾರಾಜರ ಮಾಂಡಲೀಕ-ಸಾಮಂತರಾಗಿ ಅಧೀನದಲ್ಲಿ ಇದ್ದು ಕೊಂಡು, ಆಳಿದ ಚಿಕ್ಕ ಪುಟ್ಟ ಅರಸುಕುಲಗಳೂ, ಕುಟುಂಬ ಮನೆತನಗಳೂ ಹಲವಾರಿವೆ. ಕೆಲವು ವಂಶಗಳಂತೂ ಸಾಕಷ್ಟು ಹೆಸರು ವಾಸಿಯಾಗಿವೆ. ಅಂತಹ ಗಣ್ಯ ಮನೆತನಗಳಲ್ಲಿ ‘ಸಾಂತಳಿಗೆ ಸಾಸಿರ’ ವನ್ನು ಆಳಿದ ಸಾಂತರರು ಕೂಡ ಸೇರಿದ್ದಾರೆ.

೨. ಶಾಸನಗಳಲ್ಲಿ ಸಾಂತರ ಕುಲಜರಿಗೆ ಎರಡು ಹೆಸರುಗಳು ಉದ್ದಕ್ಕೂ ಅನ್ವಯವಾಗಿವೆ: ೧. ಮಹೋಗ್ರವಂಶ / ಉಗ್ರವಂಶ, ೨ ಸಾಂತರ ಕುಲ. ಇವುಗಳಲ್ಲಿ ಮಹೋಗ್ರವಂಶವನ್ನು ಕುರಿತು ಸಂಗತಿಗಳತ್ತ ಚರಿತ್ರೆಕಾರರ ಹಾಗೂ ಸಂಶೋಧಕರ ಗಮನ ಸೆಳೆಯುವುದು ಈ ಪುಟ್ಟ ಟಿಪ್ಪಣದ ಆಶಯ.

೩. ಸಮಧಿಗತ ಪಂಚಮಹಾಶಬ್ದಮಾಹಾಮಂಡಳೇಶ್ವರನುತ್ತರ ಮಧುರಾಧೀಶ್ವರಂ ಪಟ್ಟಿಪೊಂಬುರ್ಚ್ಚು ಪುರವರೇಶ್ವರಂ ಮಹೋಗ್ರವಂಶಂ ಲಲಾಮಂ. ಪದ್ಮಾವತೀ ಲಬ್ಧವರ ಪ್ರಸಾದಾಸಾದಿತ ವಿಪುಳ ತುಳಾಪುರುಷ ಮಹಾದಾನ ಹಿರಣ್ಯಗರ್ಬ್ಭತ್ರಯಾಧಿಕದಾನ ವಾನರಧ್ವಜ ಮೃಗರಾಜ ಲಾಂಛನ ವಿರಾಜಿತಾನ್ವ ಯೋತ್ಪನ್ನಂ ಬಹುಕಳಾಸಂಪನ್ನಂ ಸಾನ್ತರ ಕುಳ ಕುಮುದಿನೀ ಶಶಾಂಕ ಮಯೂಖಾಂಕುರಂ ರಿಪು ಮಾಂಡಳಿಕ ಪತಂಗ ದೀಪಾಂಕುರಂ

ತೊಂಡ ಮಂಡಳಿಕ ಕುಳಾಚಳ ವಜ್ರದಂಡಂ ಬಿರುದಭೇರುಂಡಂ
ಕಂದುಕಾಚಾರ್ಯ್ಯಂ ಕೀರ್ತಿನಾರಾಯಣ ಸೌರ್ಯ್ಯಪಾರಾಯಣಂ
ಜಿನಪಾದಾರಾಧಕಂ ಪರಬಳ ಸಾಧಕಂ ಸಾನ್ತರಾಧಿತ್ಯಂ
ಸಕಳಜನಸ್ತುತ್ಯಂ ನೀತಿಶಾಶ್ತ್ರಜ್ಞಂ ಬಿರುದಸರ್ಬ್ಬಜ್ಞಂ
ಶ್ರೀಮನ್ಮಹಾಮಂಡಳೇಶ್ವರಂ ನಂನಿಸಾನ್ತರದೇವ

[ಎ.ಕ. ೮-೨ ನಗರ ೩೫.೧೦೭೭ ಸಾಲು : ೩-೬]

೪. ಮೇಲೆ ಉದ್ಧರಿಸಲಾಗಿರುವ ಶಾಸನ ಪಂಕ್ತಿಗಳಲ್ಲಿ ಮಹಾಮಂಡಲೇಶ್ವರನಾದ ನನ್ನಿ ಸಾಂತರನನ್ನು ಮಹೋಗ್ರ ವಂಶಲಲಾಮನೆಂದೂ, ಸಾಂತಕ ಕುಳ ಕುಮುದಿನೀಶಶಾಂಕ ಮಯೂಖ. ಅಂಕುರನೆಂದೂ, ಸಾಂತರ ಆದಿತ್ಯನೆಂದೂ ವರ್ಣಿಸಲಾಗಿದೆ. ಇದೇ ರೀತಿ ನಗರ ೩೫ ರಿಂದ ೬೨ ರವರೆಗಿನ ಶಾಸನಗಳಲ್ಲಿ ಹತ್ತಾರು ಕಡೆ, ಸಾಂತರ ರಾಜರನ್ನು ಉಗ್ರವಂಶಲಲಾಮರೆಂದೂ, ಸಾಂತರ ಕುಲದೀಪಕರೆಂದೂ ಪರಿಚಯಸಲಾಗಿದೆ.

೫. ಒಂದು ಕುಲ (ವಂಶ, ಅನ್ವಯ, ಮನೆತನ) ದವರನ್ನು ಹೀಗೆ ಎರಡು ಭಿನ್ನ ಹೆಸರುಗಳಿಂದ ನಿರ್ದೇಶಿಸಲಾಗಿರುವುದು ಚಿಂತನೀಯವಾಗಿದೆ. ಈ ರೀತಿಯಲ್ಲಿ ಇನ್ನು ಎರಡು ವೂರು ವಂಶಗಳಿಗೆ. ಎರಡೆರಡು ಭಿನ್ನ ಮೂಲದ, ಭಿನ್ನ ಅರ್ಥದ ಹೆಸರುಗಳಿರುವುದು ಚರಿತ್ರೆಯಲ್ಲಿ ಕಂಡು ಬಂದಿದೆ. ಉದಾಹರಣೆಗೆ ಸಗರ – ಮಣಲೆಯರನ್ನು ಹೆಸರಿಸಬಹುದು [ನಾಗರಾಜಯ್ಯ ಹಂಪ; ಶಾಸನಗಳಲ್ಲಿ ಎರಡು ವಂಶಗಳು : ೧೯೯೫]

೬. ಮಹೋಗ್ರಂಥವಂಶಲಲಾಮ ಎಂದಲ್ಲದೆ, ಉಗ್ರವಂಶತಿಳಕರೆಂದೂ ಈ ಸಾಂತರಸರನ್ನು ನಿರ್ದೇಶಿಸಲಾಗಿದೆ [ಹೊಂಬುಜ ೨ (೮ ನಗರ ೩೬) ೧೦೭೭. ಸಾಲು : ೬೨-೬೩]. ಈ ಉಗ್ರವಂಶ ಮಹೋಗ್ರ – ವಂಶ ಎಂಬುದು ಉತ್ತರದ ಮಧುರೆಯ ಕಡೆಯಿಂದ ಬಂದದ್ದೆಂದು ಹೊಂಬುಜದ ಹಲವು ಶಾಸನಗಳಲ್ಲಿ ಉಕ್ತವಾಗಿದೆ. ಉಗ್ರವಂಶೋದ್ಭವ. ಮಹೋಗ್ರಾನ್ವಯ ಎಂಬ, ಶಾಸನಗಳಲ್ಲಿ ಬರುವ, ಮಾತುಗಳೆಲ್ಲ ಅದೇ ಸೂಚನೆಯನ್ನು ಒಳಗೊಂಡಿವೆ. ಈ (ಮಹಾ) ಉಗ್ರವಂಶ ಎಂಬುದು ಜೈನ ಪುರಾಣಗಳಲ್ಲೂ, ಜೈನ ಭಾರತ ಕಥೆಗಳಲ್ಲಿಯೂ ಬರುವ ಹೆಸರಾಗಿದೆ.

೭. ಮಧುರಾಪುರವು ಉಗ್ರಸೇನ ರಾಜನ ರಾಜಧಾನಿ [ಉತ್ತರ ಪುರಾಣ : ೭೦-೩೩೧] ಕನ್ನಡದಲ್ಲಿಯೂ ಕರ್ಣಪಾರ್ಯನ ನೇಮಿನಾಥ ಪುರಾಣ, ನೇಮಿ ಚಂದ್ರನ ಅರ್ಧನೇಮಿ ಪುರಾಣ, ಬಂಧುವರ್ಮನ ಹರಿವಂಶಾಭ್ಯುದಯ ಮೊದಲಾದ ಕವಿಗಳ ಕಾವ್ಯಗಳಲ್ಲಿ ಮಧುರಾಧೀಶರ, ಉಗ್ರವಂಶದ ಕಥೆಯಿದೆ. ಈ ಉಗ್ರವಂಶದ ಬೇರುಗಳು ತುಂಬ ಆಳಕ್ಕೆ ಇಳಿದಿವೆ. ಕ್ರಿ.ಪೂ. ಒಂಬತ್ತನೆಯ ಶತಮಾನದಲ್ಲಿದ್ದ, ಐತಿಹಾಸಿಕವಾಗಿ ಆಗಿ ಹೋದ ಪಾರ್ಶ್ವನಾಥ ತೀರ್ಥಂಕರರು ಉಗ್ರವಂಶದವರು ಗುಣಭದ್ರಾಚಾರ್ಯರು ಪಾರ್ಶ್ವನಾಥ ತೀರ್ಥಂಕರು ಉಗ್ರವಂಶ ಶ್ರೇಷ್ಠರೆಂದು ಕರೆದಿದ್ದಾರೆ [ಉತ್ತರ ಪುರಾಣ : ೭೩-೧೬೬]

ಜಿನದತ್ತನು, ಆತನ ಪೂರ್ವಜರೂ, ಆತನ ಸಂತತಿಯವರೂ ಪಾರ್ಶ್ವನಾಥ ಜಿನರ ಈ ಉಗ್ರವಂಶಕ್ಕೆ ಸೇರಿದವರು. ಹೊಂಬುಜದಲ್ಲಿ ಪಾರ್ಶ್ವನಾಥರ ಬಸದಿಗಳು, ವಿಗ್ರಹಗಳೂ ೭-೮ ನೆಯ ಶತಮಾನದಿಂದಲೇ ಕಾಣುವುದಕ್ಕೆ ಕಾರಣ. ಸಾಂತರರು ಪಾರ್ಶ್ವನಾಥರ ಭಕ್ತರೆಂಬುದೊಂದೇ ಅಲ್ಲ; ತಾವು ಪಾರ್ಶ್ವನಾಥರ ವಂಶಜರೆಂಬ ಗೌರವ ಅಭಿಮಾನಗಳೂ ಈ ಆಸಕ್ತಿಗೆ ಮುಖ್ಯ ಕಾರಣಗಳಾಗಿವೆ.

೮. ಸಾಂತರರ ಶಾಸನಗಳಲ್ಲಿ ಅವರು (ಮಹಾ) ಉಗ್ರವಂಶಲಲಾಮರು ಎಂಬ ಹೇಳಿಕೆಯ ಜತೆಗೆ, ಅವರು ಪದ್ಮಾವತಿದೇವೀ ಲಬ್ದವರ ಪ್ರಸಾದರು ಎಂಬ ಮಾತೂ ಸೇರಿದೆ [ಹೊಂಬುಜ ೧, ಸಾಲು: ೩; ಅದೇ, ೨/ ಸಾಲು ೧೪; ಅದೇ ೩. ಸಾಲು: ೧೦ – ೧೧ ಇತ್ಯಾದಿ] ಇದಕ್ಕೂ ಇರುವ ಪ್ರಧಾನವಾದ ಕಾರಣ. ಆಕೆ ತಮ್ಮ ವಂಶಜರೂ ತೀರ್ಥಂಕರರೂ ಆದ ಪಾರ್ಶ್ವನಾಥರ ಜಿನಶಾಸನದೇವಿ ಆದರಿಂದಲೇ ಜಿನದತ್ತನು ತನ್ನ ತಂದೆ ಸಹಕಾರನನ್ನೂ ಉತ್ತರ ಮಧುರೆಯನ್ನೂ ತೊರೆದು ಪೊಂಬುಚ್ಚಪುರಕ್ಕೆ ಬರುವಾಅ ತನ್ನೊಂದಿಗೆ ಪರ್ಮಾವತಿಯ ಮೂರ್ತಿಯನ್ನೂ ತಂದನೆಂಬ ಐತಿಹ್ಯ ಅರ್ಥಪೂರ್ಣ ವಾಗಿರುವುದು.

೯. ಉಗ್ರವಂಶಜರು ತಮ್ಮ ಕುಲದೇವತೆ ಪದ್ಮಾವತೀ ದೇವಿಯೊಂದಿಗೆ ಪೊಂಬುಚ್ಚಪುರಕ್ಕೆ ಬಂದು ನೆಲಸಿದ ಮೇಲೆ ಎರಡು ಬಗೆಯ ಸಂಕರಗಳಾದುವು. ಜಿನದತ್ತನು ಅವಿವಾಹಿತ ಯುವಕನಾಗಿ ಇಲ್ಲಿಗೆ ಬಂದನು, ಇಲ್ಲಿಯೇ ನಾಡು ಕಟ್ಟಿ ಬೀಡು ಮಾಡಿದನು. ಇಲ್ಲಿಯ ಹೆಣ್ಣನ್ನು ಮದುವೆಯಾದನು. ಹಾಗೆ ಮದುವೆಯ ಒಸಗೆಯಿಂದ ಕೂಡಿಕೊಂಡು ಬೆಸೆದ ಹೊಸಮನೆತನ ಸಾಂತರದು. ಸಾಂತರರು ಸ್ಥಳೀಯ ಕುಲದವರು.ಹೊರಗಿನಿಂದ ಬಂದ ಉಗ್ರವಂಶದವರಲ್ಲಿ ದೇಶೀಯ ಮೂಲದವರಾದ, ಪೊಂಬುಚ್ಚ ಪುರದವರಾದ ಸಾಂತರರು ಕೂಡಿಕೊಂಡು ವಿಲೀನವಾದರು. ಇದರಿಂದಾಗಿಯೇ ಶಾಸನಗಳಲ್ಲಿ ಈ ಎರಡೂ ವಂಶದ ಹೆಸರುಗಳನ್ನು ಉದ್ದಕ್ಕೂ ಬಳಸಲಾಗಿದೆ.

೧೦. ಎರಡು ವಂಶಗಳ ಮಿಲನದಂತೆಯೇ ಎರಡು ದೇವತೆಗಳ ಸಮೀಕರಣವೂ ನಡೆಯಿತು.

ಈ ಭಟಾರಿ ಪತ್ಮಾವತಿಯಬ್ಬೆಯೆಂ
ಬೋಳುತ್ತರಾ ಮಧುರೆಯಿನ್ದೊಡೆ
ನೆ ಬನ್ದು ಪೊಂಬುಱ್ವದೊಳ್ನೊಕ್ಕಿಯ
ಮರದಮೇಲೊಳ್ನೊಲೆಸಿದಳ
ನ್ದಿಂಬಱೆಯಂ ನೊಕ್ಕಿಯಬ್ಬೆಯೆಂಬ
ಪೆಸರಾದುದು [ಹೊಂಬುಜ ೧೪ (೮ ನಗರ ೪೮) ಸಾಲು : ೫೬-೬೧]

೧೧. ಉಗ್ರವಂಶದಂತೆಯೇ, ಜಿದತ್ತರಾಯನೊಂದಿಗೆ, ಉತ್ತರ ಮಧುರೆಯಿಂದ ಪದ್ಮಾವತಿಯೆಂಬ ಭಟಾರಿಯೂ (ಸಂ. ಭಟ್ಟಾರಿಕಾ) ಪೊಂಬಚ್ಚುಪುರಕ್ಕೆ ಆಗಮಿಸಿದಳು. ಇಲ್ಲಿನ ನೊ(ಲೊ)ಕ್ಕಿಯ ಮರದ ಮೇಲೆ ನೆಲಸಿದಳು, ಅಂದಿ ನಿಂದ ಆಕೆಗೆ ನೊ(ಲೊ)ಕ್ಕಿಯಬ್ಬೆಯೆಂಬ ಹೆಸರಾಯಿತು. ಈ ವಿವರಣೆಯ ಧ್ವನಿ – ಸೂಕ್ಷ್ಮಗಳನ್ನು ಹಿಡಿಯಬೇಕು. ಪದ್ಮಾವತಿ ದೇವಿಯು ಶಿಷ್ಟದೇವತೆ, ನೊ(ಲೊ)ಕ್ಕಿಯಬ್ಬೆಯು ಜನಪದರ ನೆಲವಂದಿಗರ ಬನದಮ್ಮ, ಹೊಂಬುಜವು ಇಂದಿಗೂ ಲ(ನೊ-ಲೊ)ಕ್ಕಿಗಿಡ ಗಳಿಂದ ಆವೃವಾದ ಪ್ರದೇಶ. ಹಿಂದೆ ಇನ್ನೂ ಇದರ ಬೆಳೆ ದಟ್ಟವಾಗಿದ್ದಿತು. ಇಲ್ಲಿಯ ಜನ ನೊ(ಲೊ) ಕ್ಕಿಯ ಬ್ಬೆಯನ್ನು ಕಲ್ಪ್ಸಿಕೊಂಡು ಆರಾಧಿಸುತ್ತಿದ್ದರು. ಇಲ್ಲಿಯ ಸಾಂತರರೂ ನೊಕ್ಕಿಯಬ್ಬೆಯ ಭಕ್ತರಾಗಿದ್ದರು. ಸಾಂತರರು ಉಗ್ರವಂಶದಲ್ಲಿ ಸಂಗಮಿಸಿ ದರು, ಸಾಂತರರ ನೊಕ್ಕಿಯಬ್ಬೆಯೂ ಉಗ್ರವಂಶಜರ ಪದ್ಮಾವತಿಯಲ್ಲಿ ಐಕ್ಯವಾದಳು. ಅದರಿಂದ ಪೊಂಬುವ್ವಪುರದ ಗ್ರಾಮದೇವತೆ ನೊಕ್ಕಿಯಬ್ಬೆಯು ಮಧುರಾಪುರಿಯ ಪದ್ಮಾವತಿ ದೇವಿಯೊಂದಿಗೆ ಶಿಷ್ಟದೇವತೆಯಾದಳು. ನೊಕ್ಕಿಯಬ್ಬೆಯದೇವಸ್ವವು [ಅದೇ, ಸಾಲು: ೬೮-೬೯] ಕ್ರಮೇಣ ‘ನೊಕ್ಕಿಯಬ್ಬೆಯ ಜಿನಶ್ರೀಗೇಹ’ ವಾಯಿತು [ಹೊಂಬುಜ ೧೩. (೮ ನಗರ ೪೭) ಸಾಲು : ೫೦-೫೧]

ಜಾತಿಶಂಕರ, ವರ್ಣಸಂಕರ, ದೈವಸಂಕರ ಇವು ಚರಿತ್ರೆಯಲ್ಲಿ ಹೊಸ ಅಧ್ಯಾಯಗಳಲ್ಲ. ಎಲ್ಲ ದೇಶಗಳ, ಎಲ್ಲ ಕಾಲದ ಚರಿತ್ರೆಯಲ್ಲೂ ಇದಕ್ಕೆ ನಿದರ್ಶನಗಳಿವೆ.