೧. ನಾನಾ ವರ್ಣಗಳನ್ನುಳ್ಳ ಅಸಂಖ್ಯಾತ ಆತಪತ್ರಗಳ ನೆರಳಿನಲ್ಲಿ ರಾಜನಾದವನು ಸುಖವಾಗಿ, ತಂಪಾಗಿ ಇರಬೇಕಂತೆ [ನರಸಿಂಹಾಚಾರ್ : ೧೯೭೧ : ೮೮೯]. ಕನ್ನಡ ಕಾವ್ಯಗಳೂ ಶಾಸನಗಳೂ ಇಂತಹ ನಾನಾ ವರ್ಣಗಳ ಕೊಡೆ (ಆತಪತ್ರ)ಗಳಲ್ಲಿ ಕೆಲವನ್ನು ಹೆಸರಿಸಿವೆ. ಗಂಗರ ಮರುಳದೇವನಿಗೂ ಕವಿ ರನ್ನನಿಗೂ ಕೊಡಲಾದ ಮದನಾವತಾರವೆಂಬ ಹೆಸರಿನ ಕೊಡೆಯ ಅಪರೂಪತೆ – ವಿಶೇಷತೆಯನ್ನು ವಿದ್ವಾಂಸರು ಪರಿಚಯಿಸಿದ್ದಾರೆ. [ಅದೇ: ೧೯೭೧: ೮೮೭ – ೮೮]. ಹಾಗೆಯೇ ಸೀಗುರಿ ಎಂಬ ಕೊಡೆಯನ್ನು ಕುರಿತು ನಾನು ಇನ್ನೊಂದು ಸಂಲೇಖನದಲ್ಲಿ ಚರ್ಚಿಸಿದ್ದೇನೆ.

೨. ಈ ಸಂಲೇಖನದಲ್ಲಿ ‘ಮೇಘಡಂಬರ’ ಎಂಬ ಹೆಸರಿನ ಒಂದು ವಿಶಿಷ್ಟ ಕೊಡೆಯನ್ನು ಕುರಿತು, ಶಾಸನವೊಂದರ ಪ್ರಯೋಗವನ್ನು ಉಲ್ಲೇಖಿಸುತ್ತ ಪರಿಚಯಿಸುವ ಆಶಯವಿದೆ.

೩. ಚಾಳುಕ್ಯರ ತ್ರಿಭುವನ ಮಲ್ಲದೇವ ವಿಕ್ರಮಾದಿತ್ಯ ೬ ಚಕ್ರಿಯ ಆಳುತ್ತಿರುವಾಗ ಮಂಡಲಿ ಸಾಸಿರವನ್ನು ಆತನ ಮಾಂಡಲಿಕರು ನೋಡಿಕೊಳ್ಳುತ್ತಿದ್ದರು. ಮಹಾಮಂಡಲೇಶ್ವರ ತ್ರಿಭುವನಮಲ್ಲ ಗಂಗಪೆರ್ಮಾಡಿದೇವನು ಗಂಗವಾಡಿ ೯೬೦೦೦ ಮತ್ತು ಮಂಡಲಿ -೧೦೦೦ ಒಡೆಯನಾಗಿದ್ದನು. ಆತನ ಆಶ್ರಯದಲ್ಲಿ ಪೊಲೆಯಮ್ಮನ ಮಗ ನೊಕ್ಕಯ್ಯನು ಪ್ರಸಿದ್ಧನಾಗಿದ್ದನು. ನೊಕ್ಕಯ್ಯನ ಮಕ್ಕಳು ಗುಜ್ಜನ ಮತ್ತು ಜಿನದಾಸ. ಗಂಗ ಪೆರ್ಮಾಡಿ ದೇವನು ಪೆರ್ಗಡೆ ನೊಕ್ಕಯ್ಯನ ಪರೋಪಕಾರಾರ್ತ್ಥಕ್ಕಂ ವೀರಕ್ಕಂ ವಿತರಣಕ್ಕಂ ಶ್ರೀ ಗಂಗ ಪೆರ್ಮ್ಮಾಡಿ ದೇವರ್ಮ್ಮೆಚ್ಚಿರುಗಳೆ ಮೇಘಾಡಂಬರಾದಿ ರಾಜ್ಯ ಚಿಹ್ನಂಗಳ ನಿತ್ತ” ನು

[ಎ.ಕ. ೭, ಶಿವಮೊ ೧೦, ೧೦೮೫ ತಟ್ಟಿಕೆರೆ ಪು. ೨೧, ಸಾಲು ೪೯ – ೫೦]

೪. ತೞ್ ಕೊಡೆ, ಮೇಘಡಂಬರ – ಈ ಮೂರು ಆತ ಪತ್ರಗಳು [ಕರ್ಣಾಟಕ ಶಬ್ದಸಾರ ಸು. ೧೪೦೦]. ಕಾವ್ಯಗಳಲ್ಲಿ ಮೇಘಡಂಬರ ಶಬ್ದದ ಪ್ರಯೋಗಗಳು ಸಿಗುತ್ತವೆ. ಆದರೆ ಶಾಸನಗಳಲ್ಲಿ ಇದು ಅಪರೂಪ. ತಟ್ಟೆ ಕೆರೆಯ ಶಾಸನದಲ್ಲಿ ಈ ಪ್ರಯೋಗ ದಾಖಲಾಗಿದೆ.

೫. ಪೆರ್ಗಡೆ ನೊಕ್ಕಯ್ಯನಿಗೆ ಗಂಗ ಪೆರ್ಮಾಡಿ ದೇವನು ಇರುಗಳೆ (ಎರಡು ಕಹಳೆ) ಗಳನ್ನೂ ಗುಡಿ ಚಾಮರಗಳನ್ನೂ ಮೇಘಡಂಬರವನ್ನೂ ಕೊಟ್ಟನು; ಇವು ರಾಜ್ಯ ಚಿಹ್ನೆಗಳಾಗಿದ್ದುವೆಂದು ಶಾಸನ ನಮೂದಿಸಿದೆ. ರಾಜರಿಗೆ ಇರುವ ಮರ್ಯಾದೆಯ ಕರುಹುಗಳಲ್ಲಿ ಈ ಕೆಲವನ್ನು ನೊಕ್ಕಯ್ಯನಿಗೂ ಕೊಟ್ಟಿರುವುದು ಆತ ಹೊಂದಿದ್ದ ಸಾಮಾಜಿಕ ಘನ ವ್ಯಕ್ತಿತ್ವದ ಪ್ರತೀಕವೂ ಹೌದು.

೬. ಈ ಮರ್ಯಾದೆಯ ವಸ್ತುಗಳಲ್ಲಿ ಮೇಘಡಂಬರವು ಸಾಮಾನ್ಯ ಕೊಡೆಗಳ ರೀತಿಯದಾಗಿರಲಿಲ್ಲ. ‘ಬೆಳ್ಳಿಯ ದಂಡದಿಂದಲೂ ನೀಲಿ ಬಟ್ಟೆಯ ಮೇಲು ಹೊದಿಕೆಯಿಂದಲೂ ವಿಚಿತ್ರವಾದ ನಾನಾ ವರ್ಣಗಳ ವಲ್ಲರಿ (ಝಲ್ಲರಿ) ಗಳಿಂದಲೂ ಚಾಮರಗಳಿಂದಲೂ ಚಿನ್ನದ ಕಲಸದಿಂದಲೂ ಅಲಂಕೃತವಾದ ಛತ್ರಿಗೆ ಮೆಘಡಂಬರವೆಂದು ಹೆಸರು’ [ನರಸಿಂಹಚಾರ್, ಡಿ.ಎಲ್. : ೧೯೭೧: ೮೮೯]

೭. ಇಷ್ಟು ವಿಶಿಷ್ಟವಾದ ಒಂದು ಮೇಘಡಂಬರ (ಶಾಸನದಲ್ಲಿ ಮೇಘಾಡಂಬರ ಎಂದಿದೆ) ಕೊಡೆಯ ಹೆಸರನ್ನು ಕನ್ನಡದ ಶಾಸನಕಾರನೊಬ್ಬ ದಾಖಲಿಸಿ ಉಳಿಸಿಕೊಟ್ಟಿದ್ದಾನೆ. ಶಾಸನದ ಕಾಲ ೧೦೮೫. ಆಗ ಆಳುತ್ತಿದ್ದ ಚಾಳುಕ್ಯ ಚಕ್ರವರ್ತಿ ಆರನೆಯ ವಿಕ್ರಮಾದಿತ್ಯನೆಂದು ಹೇಳಿದ್ದಾಗಿದೆ; ಇದೇ ಚಾಳುಕ್ಯ ವಂಶದ ಸೋಮೇಶ್ವರನು ತನ್ನ ಅಭಿಲಷಿತಾರ್ಥ ಚಿಂತಾಮಣಿಯೆಂಬ ವಿಶ್ವಕೋಶ ಗ್ರಂಥದಲ್ಲಿ ಇಂತಹ ಹಲವು ಬಗೆಯ ವಿಶೇಷ ಹಾಗೂ ವಿಶಿಷ್ಟ ಕೊಡೆಗಳನ್ನು ಪರಿಚಯಿಸಿದ್ದಾನೆ.