ಪೀಠಿಕೆ

ಧಾರವಾಡ ಜಿಲ್ಲೆಯ ಗದಾ ತಾಲ್ಲೂಕಿಗೆ ಸೇರಿದ ಲಕ್ಕುಂಡಿಯ ೫೨ ನೆಯ ಸಂಖ್ಯೆಯ ಶಿಲಾಶಾಸನ ಕರ್ನಾಟಕದ ಚರಿತ್ರೆಯಲ್ಲಿ ಮಹತ್ವವನ್ನು ಪಡೆದಿದೆ [ಸೌ.ಇ.ಇ. ೧೧-೧, ೫೨-೫೩. ೧೦೦೭-೦೮]. ಈ ಶಾಸನವನ್ನು ಮಹಾಕವಿ ರನ್ನನ ರಚನೆಯೆಂದು ಮಾನ್ಯ ಮಡಾಲಾಗಿದೆ. ಲಕ್ಕುಂಡಿಯ ಶಾಸನದ ಆಧಾರದಿಂದ ತೈಲಪ ಚಕ್ರವರ್ತಿಯ ಸಾಮ್ರಾಜ್ಯ ವಿಸ್ತರಣೆಗೆ ಕಾರಣರಾದ ಮತ್ತು ಆರಂಭ ಘಟ್ಟದಲ್ಲಿ ಸುಭದ್ರವಾದ ತಳಪಾಯ ಹಾಕಿಕೊಟ್ಟ ಮಹಾವೀರರ, ಮಹಾತ್ಯಾಗಿ ರಾಷ್ಟ್ರಭಕ್ತರ ವಿವರಗಳನ್ನು ತಿಳಿಯಬಹುದು. ತರ್ದವಾಡಿಯ ಮಹಾಸಾಮಂತನಾಗಿದ್ದ ತೈಲಪನು ಚಾಳುಕ್ಯ ಸಾಮ್ರಾಜ್ಯವನ್ನು ಕಟ್ಟುವ ಸಾಹಸದಲ್ಲಿ ನಿರತನಾದಾಗ, ಆತನಿಗೆ ಭುಜಾದಂಡವಾಗಿ ನಿಂತಚರಲ್ಲಿ ದಲ್ಲಪಯ್ಯ ಮತ್ತು ಮಲ್ಲಪಯ್ಯ ಹಾಗೂ ಇವರಿಬ್ಬರ ಇದಿ ಮನೆತನದ ಕಲಿಗಳು ಪ್ರಮುಖರು.

ವೆಂಗಿ ವಿಷಯದ ಕಮ್ಮೆನಾಡಿನ ಪುಂಗನೂರಿನಲ್ಲಿ ಪ್ರತಿಷ್ಠಿತವಾದ ಮನೆತನ ನಾಗಮಯ್ಯನದು, ಪುಂಗನೂರು ಪುರವರಾಧೀಶನಾದ ನಾಗಮಯ್ಯನು ದಾನಿಯಾಗಿ, ಜನಹಿತ ಕಾರುಅನಿರತನಾಗಿ, ಜ್ಞಾನಿಯಾಗಿ, ಜೈನ ಆಗಮ ಶಾಸ್ತ್ರ ನಿಪುಣನಾಗಿ ಹಿರಿಮೆ ಗಳಿಸಿದ್ದನು. ಅವನ ಮಗಂದಿರಾದ ಮಲ್ಲಪ್ಪಯ್ಯ ಪುನ್ನಮಯ್ಯರು ಶಸ್ತ್ರ-ಶಾಸ್ತ್ರ ವಿದ್ಯಾ ಕುಶಲರು. ಕೌಂಡಿನ್ಯಕುಲ ಪ್ರದೀಪನಾದ ಮಲ್ಲಪಯ್ಯನು ರಾಜ ನೀತಿ ವಿಶಾರದನಾಗಿ ಶೌರ್ಯಾವಷ್ಟಂಬದಿಂದ ತೈಲಪನ ಸಾಮ್ರಾಜ್ಯ ಲಕ್ಷ್ಮೀ ಪ್ರವರ್ಧಮಾನಕ್ಕೆ ಕಾರಣವಾಗಿದ್ದನು. ಮಲ್ಲಪ್ಪಯ್ಯನ ತಮ್ಮನಾದ ಪುನ್ನಮಯ್ಯನು ಚಾಳುಕ್ಯರ ಸೈನ್ಯಾಧಿಪತಿಯಾಗಿ, ತೈಲಪನಿಗಾಗಿ ಸಾಹಸದಿಂದ ಕಾವೇರಿ ಸರಿತ್ತೀರದಲ್ಲಿ ಹೋರಾಡುತ್ತಿರುವಾಗ ಶತ್ರುಗಳಿಂದ ಹತನಾಗಿ ಸುರಲೋಕದ ಅತಿಥಿಯಾದನು.

ಮಲ್ಲಪನ ಮಡದಿ ಜಿನಪಾದ ಪಯೋಜ ಭೃಂಗಿಯಾದ ಅಪ್ಪಕಬ್ಬೆ. ಆಕೆ ಅನೂನಗುಣ ಸಂಪನ್ನನಾದ ನಾಗಮಯ್ಯನ ಮತ್ತು ವಿನಯಮತಿ ನಾಗಿಯಬ್ಬೆಯ ಮಗಳು. ಮಲ್ಲಪ್ಪಯ್ಯನ ತಂದೆಯ ಹೆಸರೂ ನಾಗಮಯ್ಯ, ತಂದೆಗೆ ಸಮಾನರಾದ ಮಾವನ ಹೆಸರೂ ನಾಗಮಯ್ಯ. ಮಲ್ಲಪಯ್ಯ – ಅಪ್ಪಕಬ್ಬೆ ದಂಪತಿಗಳಿಗೆ ಮಕ್ಕಳು ಎಂಟು ಜನ. ಅವರಲ್ಲಿ ಮಗಂದಿರು ಐವರು, ಮಗಳುದಿರು ಮೂವರು. ಹೆಣ್ಣು ಮಕ್ಕಳಲ್ಲಿ ಅತ್ತಿಮಬ್ಬೆ – ಗುಂಡಮಬ್ಬೆ ಎಂಬ ಅಕ್ಕತಂಗಿ ಯರನ್ನು ಸಚಿವೋತ್ತಮನಪ್ಪ ದಲ್ಲಪಯ್ಯನ ಹಿರಿಯ ಮಗನಾದ ನಾಗದೇವನಿಗೆ ಕೊಟ್ತು ಮದುವೆ ಮಾಡಲಾಗಿತ್ತು.

ಅತ್ತಿಮಬ್ಬೆಯ ಮಾವನಾದ ದಲ್ಲಪಯ್ಯನು ತೈಲಪ ಚಕ್ರವರ್ತಿಗೆ ಭುಜಾದಂದವಾಗಿದ್ದನು, ದಲ್ಲಪಯ್ಯನಿಗೂ ತೈಲಪನಿಗೂ ಇದ್ದ ಮೈತ್ರಿ ಎಷ್ಟು ಮಧುರತಮವಾಗಿತ್ತೆಂದರೆ, ಅದು ಅರಸ-ಆಳು ಎಂಬ ರೀತಿಯದಾಗಿರಲಿಲ್ಲ. ಪ್ರಭುವೂ ಪ್ರಜೆಯೂ ಗಾಢವಾದ ಸ್ನೇಹದ ಬೆಸುಗೆಯಿಂದ ಪರಸ್ಪರರು ಅನ್ಯೋನ್ಯವಾಗಿದ್ದರು. ದಲ್ಲನಿಗೂ ಅಹಮಲ್ಲನಿಗೂ ಸಿಂಹಾಸನವೊಂದು ಭೇದವೇ ಉಳಿದುದೆಲ್ಲ ಸಮಾನವೆಂಬಂಥ ಸಖ್ಯ.

ಇಷ್ಟು ಹಿರಿಮೆಯುಳ್ಳ ದಲ್ಲಪನನ್ನು ಶಾಸನದಲ್ಲಿ, ಮಂಡಳ ಸಿದ್ಧಿ ಮತ್ತು ವಿವೇಕ ಬೃಹಸ್ಪತಿ ಎಂಬ ಎರಡು ವಿಶೇಷಣಗಳಿಂದ ನಿರ್ದೇಶಿಸಲಾಗಿದೆ. ಇದು ಅಲೋಚನೀಯ ವಿಷಯ. ಕ್ರಿ.ಶ. ೯೭೩-೭೪ ರಲ್ಲಿ ತೈಲಪನು ತಾನು ಸರ್ವತಂತ್ರ ಸ್ವತಂತ್ರ ಸಾಮ್ರಾಟನೆಂದು ಘೋಷಿಸಿದನು. ಇದಕ್ಕೆ ಮೊದಲು ಆತನು ರಾಷ್ಟ್ರಕೂಟರ ಮಹಾ ಸಾಮಂತನಾಗಿದ್ದನು. ದಲ್ಲಪಯ್ಯನು ತೈಲಪನಿಗೆ ಸಹಾಯಕನಾಗಿ ಸೇರಿದ್ದು ಯಾವಾಗ ಎಂಬ ಸೂಚನೆಗಳು ಸ್ಪಷ್ಟವಾಗಿ ಕಾಣುವುದಿಲ್ಲ. ತೈಲಪ-ದಲ್ಲಪರಲ್ಲಿ ಅಧಿಕಾರದ ಆಚೆಗೂ ಚಾಚಿಕೊಂಡ ಅನ್ಯೋನ್ಯತೆ ಆತ್ಮೀಯತೆಯನ್ನು ಕಂಡಾಗ, ಅವರಿಬ್ಬರೂ ಮೊದಲಿಗೆ ತರ್ದವಾಡಿಯ ಪರಿಸರದಲ್ಲಿ ಇದ್ದಾಗಿನಿಂದ ಒಂದು ಗೂಡಿರಬೇಕೆನಿಸುತ್ತದೆ. ಮಹಾ ಸಾಮಂತನಾಗಲೂ, ಅದರಲ್ಲಿ ಯಶಸ್ವಿಯಾಗಲೂ, ಸ್ವತಂತ್ರನೆಂದು ಘೋಷಿಸಿಕೊಳ್ಳಲೂ, ಮುಂದೆ ಚಕ್ರಾಧಿಪತ್ಯ ಸ್ಥಾಪನೆ – ವಿಸ್ತರಣೆಗೂ ತೈಲಪನಿಗೆ ‘ಕಳೆಯ ತತ್ವಜ್ಞಾನಿ ಮಾರ್ಗದರ್ಶಿ’ ಯಾಗಿದ್ದವನು ದಲ್ಲಪ. ದಲ್ಲಪನು ತೈಲಪನ ಚಮೂಪನಾಗಿ ಯುದ್ಧಗಳಲ್ಲಿ ಜತೆಗೆ ನಿಂತು ಭುಜಕ್ಕೆ ಭುಜಕೊಟ್ಟು ಹೋರಾಡಿದನು. ತೈಲಪನಿಗೆ ನೆಚ್ಚಿನ ನೇಹಿಗನಾದನು. ಆ ಕಾರಣಗಳಿಗಾಗಿ, ಋಣಕ್ಕಾಗ್ ತೈಲಪನು ದಲ್ಲಪನಿಗೆ ಮಂಡಳಸಿದ್ಧಿ, ವಿವೇಕ ಬೃಹಸ್ವತಿ ಎಂಬ ರಾಜ ಪ್ರಶಸ್ತಿಗಳನ್ನಿತ್ತು ಸಂಮಾನಿಸಿದನು.

ದಲಪನು ದೊರೆ ತೈಲಪನಿಗೆ ಆಡಳಿತ ನಿರ್ವಹಣೆಯಲ್ಲಿ ಸಭಾ ಸಂವಾಸನಾಗಿ ಸೂಕ್ತ ಸಕಾಲಿಕ ವಿವೇಕಯುಕ್ತ ಮಾರ್ಗದರ್ಶಕ ಆಗಿದ್ದನೆಂಬುದನ್ನು ಶಾಸನ ದಾಖಲಿಸಿದೆ. ದಲ್ಲಪನು ತೈಲಪ ಚಕ್ರವರ್ತಿಯ ಅಖಿಳ ರಾಜ್ಯಭರ ನಿರೂಪಿತ ಮಹಾ ಮಂತ್ರಾಕ್ಷ ಪಟಳಕ್ಕೆ ಅಧಿಪತಿ ಎನಿಸಿದ್ದ ಎಂಬುದು ವಿಶೇಷ ಗಮನಿಕೆ ಅರ್ಹವಾಗಿದೆ. ಸಮಸ್ತ ರಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ನಿರೂಪಣೆ ಆಗುತ್ತಿದ್ದ ಪ್ರಮುಖ ರಾಜತೀರ್ಪು, ರಾಜಾಜ್ಞೆಗಳ ಮೂಲ ತಾಮ್ರ ದಾಖಲೆ ಪ್ರತಿಗಳ ರಾಜ ಪತ್ರಾಗಾರಕ್ಕೆ, ರಾಜಕೋಶಕ್ಕೆ ದಲ್ಲಪನು ಮುಖ್ಯನು. ರಾಜ್ಯಾದಳಿತದಲ್ಲಿ ನ್ಯಾಯ ಸಂಬಂಧದ ದಾಖಲೆಗಳು ಇರುವ ಭಂಡಾರವೇ ಅಕ್ಷಪಟಲ. ಈ ಅಂಶವು, ತೈಲಪ ಚಕ್ರವರ್ತಿಯು ದಲ್ಲಪನಲ್ಲಿ ಇಟ್ಟಿದ್ದ ನಂಬಿಕೆಗೆ ಸಾಕ್ಷಿ ಪಟಲವೂ ಆಗಿದೆ. ದಲ್ಲಪನು ಎಷ್ಟು ಜನಪ್ರಿಯನಾಗಿದ್ದನೆಂದರೆ ಆತನ ಹೆಸರಿನ ನಾನಾ ರೂಪಗಳು ಪ್ರಚಲಿತವಾಗಿವೆ: ದಲ್ಲ, ಧಲ್ಲ, ದಲ್ಲಪ, ಧಲ್ಲಪ, ದಲ್ಲಪಯ್ಯ, ಧಲ್ಲಪಯ್ಯ.

ತೈಲಪ ಚಕ್ರಿಯು ದಲ್ಲಪನನ್ನು ಇಷ್ಟೊಂದು ಹತ್ತಿರವಾಗಿಟ್ತು ಗೌರವಿಸಲು ಇದ್ದ ಇನ್ನೊಂದು ಪ್ರಬಲವಾದ ಕಾರಣ, ದಲ್ಲಪನು ತೋರಿದ ಯುದ್ಧ ನೈಪುಣ್ಯ, ಅಹವಶೌಂಡನಾದ ದಲ್ಲಪನ ಪರಾಕ್ರಮದ ಉಗ್ಗಡಣೆಗೆ ಲಕ್ಕುಂಡಿಯ ಶಾಸನ ಅಗ್ರಾಸನ ಕೊಟ್ಟಿದೆ:

ಮಲ್ಲಾಮಲ್ಲಿಯೊಳಾನ್ತರಿ
ಮಲ್ಲರನಾಹವದೊಳೊತ್ತಿ ಗೋಳ್ಮುರಿಗೊಳ್ವೀ
ಬಲ್ಲಾಳ್ತನದಿನ್ದಾಹವ
ಮಲ್ಲಮನ ಭುಜಾದಣ್ದಮೆನಿಸಿ ಧಲ್ಲಂ ನೆಗೆಱ್ದಂ
||

            ಪೂಣರ್ದ್ದಿದಿರಾಗಿ ತಾಗಿದೊರನಾನೆಯೊಳೊಕ್ಕುವನೆಂದು ಬೆರ್ಚ್ಚಿಕೊಂ
ಕಣಮೞ್ದಿಯಿಕ್ಕೆ ಬೆಂಗಿ ಬೆಱಗಾಗೆ ತಿವುಳ್ಳೆಲನಳ್ಕೆ ಮಾಳವ
ಮಣಿಯಂ ಪೊದಳ್ದುದಿರ್ಕ್ಕೆಲದ ಮುಂದಣ ಪಿಂದಣ ಮಣ್ಡಲಕ್ಕೆ ಭೀ
ಷಣಮತಿರೌದ್ರಮದ್ಭುತಮಗುರ್ವ್ವಿನೆ ತೇಜದಳುರ್ಕ್ಕೆ ಧಲ್ಲನ
||

            ಧಲ್ಲಂಗಂ ನೆಗೆೞ್ದಾಹವ
ಮಲ್ಲಂಗಂ ಭೇದಮುಂಟೆ ವಿಭವದೊಳದನೇ
ನೆಲ್ಲರುಮರಿಯರೆ ಧರಣೀ
ವಲ್ಲಭ ಸಿಂಹಾಸನೈಕ ಭೇದಮೆ ಭೇದಂ
||

ಮೇಲಿನ ಮೂರು ಪದ್ಯಗಳನ್ನು ತೈಲಪನನ್ನೂ, ಚಾಲುಕ್ಯ ಸಾಮ್ರಾಜ್ಯದ ಇತಿಹಾಸವನ್ನೂ ಕುರಿತು ಬರೆಯುವ ಚರಿತ್ರಕಾರರು ಅವಶ್ಯ ಗಮನಿಸಬೇಕು. ಗಂಗರ ಸೇನಾನಿ ಸಚಿವ ಚಾವುಂಡರಾಯನು ಕೈಗೊಂಡ ಹಲವು ಯುದ್ಧಗಳಲ್ಲಿ ‘ಅಲ್ಲ’ ಎಂಬುವನ ವಿರುದ್ಧ ಹೂಡಿದ ಯುದ್ಧವೂ ಒಂದು. ಈ ‘ಅಲ್ಲ’ ನನ್ನು ಜೆ. ಎಫ್. ಫ್ಲೀಟರ್ ಸರಿಯಾಗಿ ಗುರುತಿಸಲು ಆಗಿರಲಿಲ್ಲ. ರೈಸರು ಈ ಹೆಸರಿನ ರೂಪ ಕುರಿತು ‘ದಲ್ಲ’ ಎಂದಿದ್ದಾರೆ. ಹೀಗಾಗಿ ದಲ್ಲನು ತೈಲಪನ ಪರವಾಗಿ ರಾಷ್ಟ್ರಕೂಟರ ಮತ್ತು ಗಂಗರ ವಿರುದ್ಧ ಯುದ್ಧವೆಸಗಿದ್ದಕ್ಕೆ ಅನ್ಯಾನ್ಯ ಆಧಾರ ಉಂಟು [ಎ.ಇ. V.p. ೧೭೦. note ೨ : ಎ.ಕ. ೨ (೧೯೭೩) ಪೀಠಿಕೆ, ಪು. ೩].

ಪಂಪಯ್ಯನ ಪ್ರವೇಶ

ಈ ರೀತಿ ನಾಡಿನಲ್ಲಿ ಗಣ್ಯನಾಗಿದ್ದ ದಲ್ಲಪನ ಮಗನಾದ ನಾಗದೇವನು ತನ್ನ ತಂದೆಯಂತೆಯೇ ಮಹಾಪರಾಕ್ರಮಿಯಾಗಿದ್ದನು. ತೈಲಪ ಚಕ್ರವರ್ತಿ ಈ ನಾಗದೇವನ ಸಾಹಸವನ್ನು ಮನಗಂಡು ಅವನನ್ನು ತನ್ನ ಸೈನ್ಯಕ್ಕೆ ಸೇನಾಧಿಪತಿಯನ್ನಾಗಿ ನೇಮಿಸಿ ದನು. ನಾಗದೇವನು ಅನೇಕ ಸಂಗ್ರಾಮಗಳಲ್ಲಿ ಭಾಗವಹಿಸಿ ಚಾಳುಕ್ಯ ಸಾಮ್ರಾಜ್ಯಕ್ಕೆ ಸುಭದ್ರವಾದ ಅಡಿಪಾಯ ಹಾಕಿದನು. ತೈಲಪನ ಆಡಳಿತ ನಿಷ್ಕಂಟಕವಾಗುವಂತೆ ಹಗೆಗಳೊಂದಿಗೆ ನಾಗದೇವನು ನಡೆಸಿದ ಚರಿತ್ರಾರ್ಹ ಸಮರಗಳನ್ನು ಶಾಸನ ಕಂಡಿರಿಸಿದೆ. ಅಹವದಕ್ಷತೆಯಿಂದ ಸೆಣಸುತ್ತ ರಣ ಭೂಮಿಯಲ್ಲೇ, ತನ್ನ ಚಿಕ್ಕ ಮಾವ ಪುನ್ನಮಯ್ಯನಂತೆ ಹತನಾದ. ನಾಗದೇವ-ಅತ್ತಿಮಬ್ಬೆಯರ ಮಗನಾದ ಅಣ್ಣಿಗ ದೇವನೂ ತನ್ನ ತಂದೆ ತಾತಂದಿರಂತೆಯೇ ಅಹವರಂಗವನ್ನೆರಿದ. ಅಹವ ದುರ್ಜಯನೆನಿಸಿ ಸಾಹಸವನ್ನು ದಕ್ಷತೆಯನ್ನೂ ರಾಷ್ಟ್ರಪ್ರೇಮವನ್ನೂ ಪ್ರಕಟಿಸಿದ. ಈ ಅಣ್ಣಿಗದೇವನನ್ನು ಮೆಚ್ಚಿದ ತೈಲಪನೂ, ತೈಲಪನ ಮಗನಾದ ಇರಿವ ಬೆಡಂಗ ಸತ್ಯಾಶ್ರಯನೂ ಅನೇಕ ಪ್ರಶಸ್ತಿಗಳ ಮಾಲೆ ತೊಡಿಸಿದರು; ಚಕ್ರವರ್ತಿ ಸನ್ಮಾನ ಮಾಡಿ ಗೌರವಿಸಿದರು. ಚಾಳುಕ್ಯ ಚಕ್ರವರ್ತಿಯ ಸೈನ್ಯಾಧೀಶನಾದ ಅಣ್ನಿಗ ದೇವನಿಗೆ ಪಡೆವಳ ತೈಲಪ, ಆಳ್ದನ ಚಕ್ರಂ, ನನ್ನಿ ನಾರಾಯಣ, ಕರ್ಪೂರ ವರ್ಷ, ಗುಣಮೇರು, ಆಯುಧಾಚಾರ್ಯ, ಪತಿಮೆಚ್ಚೆ, ಗಂಡ, ಚತುರ ಚತುರಾನನ – ಎಂಬ ರಾಜಬಿರುದು ಗಳನ್ನು ಇತ್ತುದಕ್ಕೆ ಶಾಸನಾಧಾರವಿದೆ.

ಅಣ್ನಿಗದೇವನನ್ನು ಲಕ್ಕುಂಡಿಯ ಶಾಸನದಲ್ಲಿ ಶ್ರೀಮತ್ ಪಡೆವಳ – ತೈಲಪಯ್ಯ ಎಂದು ಪರಿಚಯಿಸಲಾಗಿದೆ. ಈತನನ್ನು ಮಾಸವಾಡಿ ನೂಱನಾಲ್ವತ್ತು ಪ್ರದೇಶಕ್ಕೆ ಬೀಳುವೃತ್ತಿಯಿಂದ ಆಳುವಂತೆ ನೇಮಿಸಲಾಯಿತು. ಬೀಳವೃತ್ತಿ ಮತ್ತು ಅಣುಗವೃತ್ತಿಯನ್ನು ರಾಜರು ತಮ್ಮ ಮಕ್ಕಳಿಗೆ, ಯುವರಾಕರಿಗೆ ಮಾತ್ರ ಕೊಡುವ ಅಧಿಕಾರ ಗೌರವ. ಅಪರೂಪಕ್ಕೊಮ್ಮೆ ರಾಜರು ತಮ್ಮ ಆಪ್ತರೂ ಬಹುಸರ್ಮಥರೂ ಆದಂಥ ನಿಷ್ಠಾವಂತ ಮೇಧಾವಿಗಳಿಗೆ ಈ ವೃತ್ತಿ ಪ್ರತಿಪತ್ತಿಯನ್ನಿತ್ತು ತಮ್ಮ ವಿಶ್ವಾಸವನ್ನು ಸಾರ್ವಜನಿಕವಾಗಿ ಪ್ರಕಟಿಸುತ್ತಿದ್ದರು. ಅಣ್ನಿಗದೇವನಿಗೆ ಈ ನಂಬಿಕೆಯ ವಿಶಿಷ್ಟ ಗೌರವ ಸಂದಿತ್ತು ಎಂಬುದು ಗಮನಾರ್ಹ. ಹೀಗೆ ಅಣ್ನಿಗದೇವನ ಮೇಲೆ ಚಕ್ರವರ್ತಿಯ ವಾತ್ಸಲ್ಯವು ವರ್ಷಿತವಾಗಲು ಮುಖ್ಯ ಕಾರಣ, ಈ ಮನೆತನದಲ್ಲಿ ಹೆಪ್ಪುಗಟ್ಟಿದ್ದ ದೇಶಪ್ರೇಮ ಮತ್ತು ರಾಜನಿಷ್ಠೆ. ಅಣ್ನಿಗದೇವನ ತಾಯಿಯ ಮತ್ತು ತಂದೆಯ ಎರಡೂ ಮನೆತನಗಳಲ್ಲಿ ಪ್ರಭುಶಕ್ತಿ ಕೆನೆಕಟ್ಟಿತ್ತು. ಮಲ್ಲಪಯ್ಯನ ಕುಟುಂಬದಲ್ಲಿ ಈ ರಾಜಭಕ್ತಿಯ ಪರಾಕಾಷ್ಠ ಸ್ಥಿತಿಯಾಗಿ, ಆತ ತನ್ನ ಒಬ್ಬ ಮಗನಿಗೆ ತೈಲಪನ ಬಿರುದುಗಳಲ್ಲಿ ಒಂದಾದ ‘ಅಹವಮಲ್ಲ’ ಎಂಬುದನ್ನೆ ಹೆಸರಾಗಿಟ್ಟು, ನಾಮಕರಣ ಮಾಡಿ ಆ ಪರಂಪರೆಯನ್ನು ಉದ್ಘಾಟಿಸಿದನು. ಆತನ ಒಡಹುಟ್ಟಿದ ತಮ್ಮನಾದ ಪುನ್ನಮಯ್ಯನು ಅರಾತಿ ಸೇನೆಯಿಂದ ರಣಭೂಮಿಯಲ್ಲೇ ಹತನಾದ ದುರ್ಘಟನೆ ನಡೆದಿದ್ದರೂ, ತಾನೂ ಮಗಂದಿರೂ ಅಳಿಯನೂ ಮೊಮ್ಮಗನೂ ಅಹವಾಗಣದಲ್ಲಿಯೇ ಆಯುಸ್ಸು ಸಮೆಸಿದರು; ರಾಷ್ಟ್ರರಕ್ಷಣೆಗೇ ಅರ್ಪಿತ ಬುದ್ಧಿಯುಳ್ಳವರಾದರು.

ಅಣ್ನಿಗದೇವನನ್ನು, ಆತನ ತಂದೆಯ ನಿಧನಾನಂತರ, ಮಾಸವಾಡಿ ೧೪೦ ಕಂಪಣ ವಿಭಾಗಕ್ಕೆ ಬೀಳವೃತ್ತಿಯಿಂದ ಆಳುವಂತೆ ನೇಮಿಸಲಾಯಿತೆಂಬುದು ಸರಿಯೆ. ಆದರೆ ಬಹು ವಿಸ್ತಾರವಾದ ಚಾಳುಕ್ಯ ಸಾಮ್ರಾಜ್ಯದಲ್ಲಿ, ಬೇರೆ ಎಲ್ಲಾ ಭಾಗಗಳನ್ನು ಬಿಟ್ಟು, ಮಾಸವಾಡಿ ಪ್ರದೇಶಕ್ಕೇ ನೇಮಿಸಿದ್ದು ಏಕೆ? ಅಣ್ನಿಗನ ತಾತ ಮುತ್ತಾತಂದಿರು ಆಳಿ ಬಾಳಿ ಉಚ್ಛ್ರಾಯಕ್ಕೆರಿದ ವೆಂಗಿ ವಿಷಯವೂ ಕಮ್ಮೆನಾಡೊ ಪುಂಗನೂರೊ ಆಗ ಬಹುದಿತ್ತಲ್ಲವೆ? ನೆಲೆವೀಡು ಮಳಖೇಡದ ನೆರೆಹೊರೆಯಲ್ಲೆ ಒಂದು ಪ್ರದೇಶವನ್ನು ಕೊಡಬಹುದಿತ್ತು ಅಲ್ಲವೆ? ಇಂತಹ ಕೆಲವು ಸಂಶಯಗಳು ಪ್ರಶ್ನೆಗಳಾಗಿ ಎದುರು ನಿಲ್ಲುತ್ತವೆ. ಈ ಸವಾಲುಗಳಿಗೆ ಚರಿತ್ರೆಯ ಒದಲಿನಲ್ಲಿಯೇ ನಿಂತು ಉತ್ತರಗಳನ್ನು ಕಂಡುಕೊಳ್ಳಬೇಕಾಗಿದೆ.

ಅಣ್ನಿಗದೇವನಿಗೆ ತಾಯಿಯ ಕಡೆಯಿಂದ ಇದ್ದ ಅಜ್ಜಪ್ಪಜ್ಜರೆಲ್ಲಾ ವೆಂಗಿ ಮಂಡಲದ ಕಡೆಯವರೆಂಬುದು ನನ್ನಿ. ಆದರೆ ಅವನಿಗೆ ತಂದೆಯ ಕಡೆಯಿಂದ ಇದ್ದ ತಾತಂದಿರು ಯಾವ ಕಡೆಯ ಸ್ಥಳಮೂಲದವರು ಎಂಬುದು ಚಿಂತನೀಯವಾಗಿದೆ. ಈ ದಿಕ್ಕಿನ ಜಿಜ್ಞಾಸೆಗೆ ತೊಡಗಿದಾಗ ಕೆಲವು ಬೆಳಕಿನ ಕಿರಣಗಳು ಬೀಳುತ್ತವೆ. ಅಣ್ನಿಗ ದೇವನ ತಂದೆಯಾದ ನಾಗದೇವನನ್ನು ಲಕ್ಕುಂಡಿಯ ಶಾಸನವು ‘ವಾಜಿಕುಳತಿಳಕ’ ನೆಂದಿದೆ. ಹಾಗೆಯೇ ಇನ್ನೊಂದೆಡೆಯಲ್ಲಿ ಆತನನ್ನು ‘ಮಹೀದೇವಕುಳ ಗಾನ ಗಭಸ್ತಿಮಾಳಿ’ ಎಂದು ವಿಶೇಷಣಿಸಿದೆ. ಮಹೀದೇವ ಎಂದರೆ ಭೂಸರ (ಬ್ರಾಹ್ಮಣ)ರು ಎಂದರ್ಥ. ಅವರು ಜೈನ ಬ್ರಾಹ್ಮಣರಾಗಿದ್ದರು: ವಾಜಿಕುಳವು ಜೈನ ಬ್ರಾಹ್ಮಣ ಕುಲವಾಗಿತ್ತು.

ದಲ್ಲಪಯ್ಯನ ಬೀಗರಾದ ಮಲ್ಲಪ್ಪಯನ ಮನೆತನವೂ ಇದೇ ರೀತಿ ಜೈನ ಬ್ರಾಹ್ಮಣ ವಂಶವಾಗಿತ್ತು. ಮಲ್ಲಪಯ್ಯ-ಪುನ್ನಮಯ್ಯ ಒಡಹುಟ್ಟುಗರು. ಇವರ ತಂದೆಯಾದ ನಾಗಮಯ್ಯನನ್ನು ಪೊನ್ನಕವಿ ತನ್ನ ಶಾಂತಿಪುರಾಣಂ ಕಾವ್ಯದಲ್ಲಿ ಹೀಗೆ ಪರಿಚಯಿಸಿದ್ದಾನೆ :

ಅತಿವಿಖ್ಯಾತಿಯ ಕಮ್ಮೆನಾಡನುದಾತ್ತಂ ಕಾವನೀವಂ ದ್ವಿಜೋ
ನ್ನತ ವಿದ್ಯಾನಿಧಿಗಳ್ಗನೂನನುಪಮಾತೀತ ಧೈರ್ಯಂ ಬಹು
ಶ್ರುತನಾಜ್ಞಾನಿಧಿ ಯಾಜ್ಞವಲ್ಕ್ಯ ಸದೃಶಂ ಕೌಂಡಿನ್ಯಗೋತ್ರಂ ನಿರಾ
ಕೃತದೋಷಸ್ಥಿತಿ ನಾಗಮಯ್ಯನನಘಂ ಶ್ರೀ ಭೂಮಿದೇವೋತ್ತಮಂ
|| (೧-೪೪)

ಪೊನ್ನನ ತರುವಾಯ ಈ ದೊಡ್ಡ ಕುಟುಂಬವನ್ನು ಪರಿಚಯಿಸುವ ಪರಂಪರೆಯನ್ನು ಮುಂದುವರಿಸಿದವನು ರನ್ನಕವಿ. ರನ್ನನು ಅಜಿತ ಪುರಾಣ ಕಾವ್ಯದಲ್ಲಿ ಮಲ್ಲಪನನ್ನು ಕೌಂಡಿನ್ಯ ಕುಲ ಪ್ರದೀಪನೆಂದೂ (೧-೨೮), ಕೌಂಡಿನ್ಯ ಗೋತ್ರ ಮಂಡನ ಎಂದೂ (೧-೩೫) ತಿಳಿಸಿದ್ದಾನೆ. ಪೊನ್ನಕವಿ ಮುಂದುವರಿದು ಮಲ್ಲಪ – ಪುನ್ನಮರನ್ನು ‘ಭೂಮಿ ದೇವತನಯರ್’ (೧-೪೬) ಎಂದಿದ್ದಾನೆ. ಮಲ್ಲಪನನ್ನು ಬಭ್ರುವರಾಹ ಮಿಹಿರ ಶೌನಕ ಸುನಂದ ಗಾರ್ಗ್ಯ – ಇವರಿಗೆ ಸಮಾನನೆಂದಿದ್ದಾನೆ (೧-೪೭); ಅಲ್ಲದೆ

ಈ ನೆಲದೊಳ್ ಮಲ್ಲಪನ ಸ
ಮಾನರ್ ನರರೀಗಳಿಲ್ಲ ಮುನ್ನುಳ್ಳೊಡೆ ಕಾ
ನೀನಂ ದಧೀಚಿ ವೃಷ
ಸೇನಂ ಯಮತನಕ್ಕುಮಲ್ಲದೊನಲ್ಲಂ
|| (೧-೪೯)

ಎಂದು ಪರಿಚಯಿಸಿದ್ದಾನೆ. ಬಭ್ರು ವರಾಹಮಿಹಿರ ಶೌನಕ ಸುನಂದ ಗಾರ್ಗ್ಯರು ಯಾರು ಜೈನರಲ್ಲ; ಕರ್ಣ ದಧೀಚಿ ಶಿಬಿ ವೃಷಭೇನ ಧರ್ಮಜ – ಇವರೂ ಅಜೈನರು, ಪೌರಾಣಿಕರು. ಈ ಹೋಲಿಕೆಯಲ್ಲಿ ಮತ್ತು ೧-೪೪ ರಲ್ಲಿರುವ ಯಾಜ್ಞವಲ್ಕ್ಯರೊಂದಿಗೆ ಸಾದೃಶ್ಯ ಕಲ್ಪಿಸಿರುವುದಿಲ್ಲ ಬ್ರಾಹ್ಮಣ್ಯಪರವಾದ ವೈದಿಕ ವಿವರಣೆಯಿದೆ. ಇದರಿಂದ ಇವರು ನಾಗಮಯ್ಯನಿಗಿಂತ ಒಂದೆರಡು ತಲೆಮಾರು ಹಿಂದೆಯಷ್ಟೇ ಬ್ರಾಹ್ಮಣತ್ವದಿಂದ ಜೈನತ್ವಕ್ಕೆ ಸರಿದಂತೆ, ಮತಾಂತರ ಮಾಡಿದಂತೆ ಕಾಣುತ್ತದೆ. ಈ ಚರ್ಚೆಯನ್ನು ಮತ್ತೆ ಕೈಗೆತ್ತಿಕೊಳ್ಳಬಹುದು.

ಈ ಹಿನ್ನೆಲೆಯಲ್ಲಿ ಚರ್ಚಿಸಬೇಕಾದ ಮುಖ್ಯ ವಿಷಯವೆಂದರೆ, ದಲ್ಲಪಯ್ಯನ ಮನೆತನದ ಮೂಲ ಸ್ಥಳ ಯಾವುದೆಂಬುದು. ಈ ಪ್ರಶ್ನೆಯ ಗಂಟನ್ನು ಬಿಡಿಸಲು ಬೇಕಾದ ಸುಳಿವು ರೋಣದ ಒಂದು ಶಾಸನದಲ್ಲಿ ಸಿಗುತ್ತದೆ. ರಾಷ್ಟ್ರಕೂಟ ಚಕ್ರವರ್ತಿ ಕನ್ನರ ದೇವನ (ಕೃಷ್ಣ ೩) ಭಾವನೂ, ಮಹಾಮಂಡಲಿಕನೂ ಆದ ಇಮ್ಮಡಿ ಬೂತಗ ಪೆರ್ಮಾಡಿಯು ಗಂಗವಾಡಿ ೯೬,೦೦೦ ಬೆಳ್ವೊಲ – ೩೦೦ ಮತ್ತು ಪುಲಿಗೆರೆ ೩೦೦ ಪ್ರದೇಶವನ್ನು ಆಳುತ್ತಿದ್ದನು. ಆಗ ಭತಾಯ (ಕಪ್ಪ)ವನ್ನು ಕೊಡಲೊಲ್ಲದ ಪಂಪಯ್ಯ ಎಂಬಾತನನ್ನು ರೋಣದಲ್ಲಿ ಎದುರಿಸಿ ಭೂತಯ್ಯನು ಕೊಂದನು. ಮಹಾಮಾಣ್ಡಲಿಕ ಬೂತಾರ್ಯ (ಬೂತಯ – ಬೂತಗ) ನಿಗೆ ತಾನೊಂದು ಅಕ್ಷತೆಯನಪ್ಪಂದಮೀಯೆನೆನ್ದು ತಱೆಸನ್ದ ಮಾನ್ಯ ಪಂಪಯ್ಯನು ವಾಜಿಕುಳಕ್ಕೆ ಮತ್ತು ಕೌಂಡಿಲ್ಯ ಗೋತ್ರಕ್ಕೆ ಸೇರಿದವನೆಂಬುದು ಮುಖ್ಯವಾಗಿ ಪರಿಶೀಲಿಸಬೇಕಾದ್ದು.

ತಱೆಸಂದೆಮ್ಮೊಡೆ ರೋಣಮಂ ಕಿಡಿಸಿ ತಾ ಬೂತಾರ್ಯ ಪೆರ್ಮ್ಮಾಡಿ (ನಿ)
ರ್ವ್ವಱಿಸುತ್ತಿಱ್ದೊಡೆ ತನ್ನನನ್ದಿಱೆದು ಮೇ
ಣ್ನಿಱೆ ಕಾದು (ತ್ತಸಿ) ವೆತ್ತು ಸತ್ತನಧಿಕಂ ಪಂಪಯ್ಯನುದ್ದಾಮ ಸದ್
ಗುಱುಕಂ ವಾಜಿಕುಳೋದಯಂ ಬುಧನುತಂ ಕೊನ್ಡಿಲ್ಲ್ಯ ಗೋತ್ರೋನ್ನತಮ್
||

            ಧರೆಯೆಲ್ಲಂ ಪೊಗೞ್ವ
ನ್ತಿರೆ ಪುರಿಗೆಱೆಯೊಳಗುರ್ತು ರೋಣಮಂ ಕಾದ
ಮರೇಶ್ವರ ಪುರಮನೆಯ್ದಿ ಪೆ
ಸರಿಂ ಕೀರ್ತ್ತಿಶ್ರೀಪತಾಕನಭಿನುತಂ ಪಂಪಯ್ಯಂ
||
[ಸೌ.ಇ.ಇ. ೧೧-೧, ೩೬ ಕ್ರಿ.ಶ. ೯೪೨, ರೋಣ (ಧಾರವಾಡ ಜಿಲ್ಲೆ) ಪುಟ.೨೨]

ರೋಣದ ಶಾಸನದಲ್ಲಿ ಪ್ರಸ್ತಾಪಿತನಾಗಿರುವ ಸಾಹಸಿ, ಪ್ರತಿಭಟನಕಾರ ಮತ್ತು ಬೂತುಗನೊಂದಿಗೆ ಸೆಣಸಿ ಸತ್ತ ಪಂಪಯ್ಯನು ವಾಜಿಕುಳೋದಯನೂ, ಕೌಂಡಿನ್ಯ ಗೋತ್ರದ ಉನ್ನತನೂ ಆಗಿದ್ದನೆಂಬುದು ಪ್ರಸ್ತುತ ಚರ್ಚೆಗೆ ಜೀವ ತುಂಬಿದೆ. ಈ ಶಾಸನದ ಕಾಲ ಕ್ರಿ.ಶ. ೯೪೨. ಪಂಪಯ್ಯನು ದಲ್ಲಪಯ್ಯನ ತಂದೆಯೂ, ಹಿರಿಯ ಸೋದರನೊ ಆಗಿರುವ ಸಾಧ್ಯತೆಯನ್ನು ಸುಲಭವಾಗಿ ತಳ್ಳಿಹಾಕಲು ಬರುವುದಿಲ್ಲ : ಪ್ರಾಯಃ ತಂದೆಯೇ ಆಗಿರುವ ಸಂಭವವಿದೆ. ತನ್ನ ತಂದೆ ಅಥವಾ ಸೋದರ ಪಂಪಯ್ಯನಂತೆ, ಯುದ್ಧ ನಿಪುಣನೂ ಸಾಹಸಿಯೂ ಆಗಿದ್ದ ದಲ್ಲಪನನ್ನು ತೈಲಪನು ತನ್ನವನನ್ನಾಗಿಸಿಕೊಂಡನು. ರಾಷ್ಟ್ರಕೂಟರ ಕನ್ನರದೇವನ ಮಹಾಸಾಮಂತನಾಗಿ ಕ್ರಿ.ಶ. ೯೬೫ ರಲ್ಲಿ ತರ್ದವಾಡಿಯನ್ನು ಆಳುತ್ತಿದ್ದಾಗ ತೈಲಪನು, ಈ ದಲ್ಲಪನನ್ನು ಗುರುತಿಸಿ ತನ್ನೊಂದಿಗೆ ಸೇರಿಸಿಕೊಂಡಿರುವುದು ಸಾಧ್ಯವಿದೆ. ಅಲ್ಲಿಂದ ಮುಂದೆ ತೈಲಪನು ಚಕ್ರವರ್ತಿಯಾದಾಗ ದಲ್ಲಪನು, ತನ್ನ ಬಂಧು ಪಂಪಯ್ಯನನ್ನು ಹಿಂದೆ ಕೊಂದಿದ್ದ ಗಂಗ ದೊರೆಗಳ ಮೇಲೆ ಸೇಡಿಗಾಗಿ ಹಾತೊರೆದು ನುಗ್ಗಿ ಬಂದಾಗ, ಚಾವುಂಡರಾಯನೊಂದಿಗೆ ಕದನ ಮಾಡಿದನು. ಚಾವುಂಡರಾಯನಿಗೂ ಪ್ರತೀಕಾರವಿತ್ತು : ತನ್ನ ದೊರೆ ಬೂತುಗನ ಮೇಲೆ ಕತ್ತಿ ಹಿರಿದ ಪಂಪಯ್ಯನ ರಕ್ತ ಸಂಬಂಧಿಯ ಮೇಲೆ ಹಗೆ. ಈ ಕಾರ್ಯ ಕಾರಣ ಸಂಬಂಧದ ಸರಪಳಿಯನ್ನು ಹಿಡಿದಾಗ (ಅಲ್ಲ) ದಲ್ಲ ಮತ್ತು ಚಾವುಂಡರಾಯರು ಯುದ್ಧದಲ್ಲಿ ಯಾಕೆ ಮುಖಾಮುಖಿಯಾಗಿ ನಿಂತರು ಎಂಬುದು ನಿಚ್ಚಳವಾಗುತ್ತದೆ. ಒಬ್ಬ ಪಂಪಯ್ಯನು, ಗೊಟ್ಟೆಗಳಿ ಭಾಗವನ್ನು ರಾಷ್ಟ್ರಕೂಟ ಚಕ್ರವರ್ತಿಯಾದ ಮುಮ್ಮಡಿ ಕೃಷ್ಣನು (೯೩೯-೬೭) ಆಳುತ್ತಿರುವಾಗ, ನೋಡಿಕೊಳ್ಳುತ್ತಿದ್ದನೆಂದು ಒಂದು ಶಾಸನದಿಂದ ತಿಳಿದುಬರುತ್ತದೆ : ಕಾಲ, ಸು. ೯೪೦

೧. ಸ್ವಸ್ತಿ ಕನ್ನರದೇವ ರಾಜ್ಯ ಡ[೦]

೨. ಗೆಯ್ಯೆಯಾ ಬನವಸಿ

೩. ದೇಸಮ [ನಾೞುತ್ತಿ] ರೆಗ

೪. [ರ್ವ್ವಿ] ನ್ದರ (ನಾ) ಳೆ ಗೊಟ್ಟೆಗ

೫. ಳಿಯ ಪಂಪಯ್ಯ (ನಾ) ಳೆ

೬. [ನಾ] ಗವರ್ಮ್ಮಂ [೦] ನಾೞ್ಗಾವೊಣ್ಡು

೭. ಗೆಯ್ಯೆಬ (ಸದಿ) ಗೆ ಪದಿನ

೮. ಯ್ದು ಮತ್ತಕೆಯೂಮೆರ (ಡು)

೯. ಗಾಣಮು(೦) ನಡೆದು ಮಾ

೧೦. [ದೆ] ಯ್ಯಿಂಬೆಯ ಮಗಳ ಮಾ

೧೧. ಗ ಕಣ್ಡಮ್ಮನವರ ಪೆಸರನೆ

೧೨. ಱೆ ಸಲ್ಪರಸಿ ನಿಱೆಸಿದ

೧೩. ಧರ್ಮ್ಮ ಈದನೞ್ದರವರ

[ಸೌ.ಇ.ಇ. ೧೮, ೩೨. ಅತೇದಿ. ನಿಟಪಳ್ಳಿ (ಧಾರವಾಡ ಜಿಲ್ಲೆ, ರಾಣಿಬೆನ್ನೂರು ತಾಲ್ಲೂಕು) ಪು. ೨೦. ಈ ಶಾಸನದ ಏಳನೆಯ ಪಾದದಲ್ಲಿರುವ ಬಳರಿಗೆ, ಎಂಬುದು ‘ಭಟಾರಿ’ ಎಂಬ (ದೇವತೆಯ) ಹೆಸರಿನ ತಪ್ಪು ಪ್ರಯೋಗ ವಿರಬಹುದೆಂದು ಸಂಪುಟದ ಸಂಪಾದಕರು ಊಹಿಸಿದ್ದಾರೆ. ನಾನು ಅದು ‘ಬಸದಿಗೆ’ ಎಂದಿರಬಹುದೆಂದು ಊಹಿಸಿದ್ದೇನೆ] ಈ ಪಂಪಯ್ಯನಿಗೆ ಸಂಬಂಧಿಸಿದ ಇನ್ನೂ ಒಂದು ಶಾಸನ ದೊರೆತಿದೆಯೆಂದು ತಿಳಿದು ಬಂದಿದೆ.

ದಲ್ಲಪ ಮತ್ತು ಪಂಪಯ್ಯ ಒಂದೇ ವಂಶದ ಕುಡಿಗಳೆಂಬ ಈ ಸಮೀಕರಣವನ್ನು ದೃಢಪಡಿಸುವ ಸಾಧಕಾಂಶಗಳನ್ನು, ಅಂತರ ಬಾಹ್ಯ ಪ್ರಮಾಣಗಳನ್ನು ಸಂಚಯಿಸಿ ಹೀಗೆ ಹರಳುಗೊಳಿಸಿ ಹೇಳಬಹುದು:

೧. ಇಬ್ಬರೂ ವಾಜಿಕುಳಕ್ಕೆ ಸೇರಿದ ಐತಿಹಾಸಿಕ ವ್ಯಕ್ತಿಗಳು

೨. ಇಬ್ಬರೂ ಕೌಂಡಿನ್ಯ ಗೋತ್ರ ಮಂಡನರು

೩. ಇಬ್ಬರ ನಡುವೆ ಇರುವ ಕಾಲದ ಅಂತರವೂ ಕಾಲೈಕ್ಯಕ್ಕೆ ಅನುಗುಣವಾಗಿದೆ.

೪. ಸ್ಥಳೈತ್ಯವೂ ಸಮರ್ಪಕವಾಗಿದೆ.

೫. ದಲ್ಲಪಯ್ಯ – ಪಂಪಯ್ಯನ ಎಂಬ ನಾಮ ಸಾದೃಶ್ಯವೂ ಕಂಡು ಬರುತ್ತದೆ.

೬. ದಲ್ಲಪ – ಚಾವುಂಡರಾಯನ ನಡುವೆ ನಡೆದ ಪ್ರತೀಕಾರ ಯುದ್ಧ ಸಕಾರಣವಾಗಿ ಸ್ಥಾಪಿತವಾಗುತ್ತದೆ.

ಮೇಲಿನ ಆರು ಕಾರಣಗಳ ಜತೆಗೆ ಏಳನೆಯ ಅಂಶ ಇನ್ನೊಂದು ಇದೆ.

ಅತ್ತಿಮಬ್ಬೆಯ ಮಗನಾದ ಅಣ್ನಿಗದೇವನನ್ನು ಮಾಸವಾಡಿ – ೧೪೦ರ ಪ್ರದೇಶವನ್ನೇ ಆಳಳು ಚಾಳುಕ್ಯ ಚಕ್ರವರ್ತಿಗಳು ಏಕೆ ನಿಯೋಜಿಸಿದರು ಎಂಬುದಕ್ಕೆ ಸಮರ್ಪಕವಾದ ಉತ್ತರ ಇಲ್ಲಿದೆ. ಅಣ್ನಿಗದೇವನ ಪೂರ್ವಜರು, ತಂದೆಯ ಕಡೆಯ ಹಿರಿಯರು ಈ ಫಿರ್ಕಾದವರು. ಪ್ರಾಯಃ ಲಕ್ಕುಂಡಿಯೇ ಅವರ ಮೂಲಸ್ಥಳ. ಆದ್ದರಿಂದ ಅಣ್ನಿಗೆ ದೇವನ ಅಧಿಕಾರ ಉತ್ತರೋತ್ತರ ಪ್ರದೇಶದತ್ತ ದಾಂಗುಡಿ ಯಿಡದೆ, ದಕ್ಷಣೋತ್ತರಕ್ಕೆ ಇಳಿದುಬಂದದ್ದು ಅವರು ಇಲ್ಲಿನ ಮೂಲನಿವಾಸಿಗರೆಂಬ ಕಾರಣಕ್ಕಾಗಿ. ಹೀಗಾಗಿ ಮೇಲೆ ಪ್ರತಿಪಾದಿಸಿದ ಏಳು ಬಾಧಕವಾಗಿರುವ ಒಂದು ಕಾರಣವನ್ನೂ ಮುಂದಿಡಬೇಕು : ದಲ್ಲಪನನ್ನು ಪರಿಚಯಿಸುವಾಗ ಪಂಪಯ್ಯನ ಹೆಸರು ಬಂದಿಲ್ಲ ಎಂಬುದು. ಆದರೆ ಇದು ತಳ್ಳಿಹಾಕಬಹುದಾದ ತೆಳ್ಳನೆಯ ಎಳೆಯಾಗಿದೆ.

ಕಾಳಿಮಯ್ಯ ದಂಡನಾಯಕ

ತೈಲಪನು ಚಕ್ರವರ್ತಿಯಾಗಿ ಘೋಷಿಸಿಕೊಂಡು ಚಾಳುಕ್ಯ ಸಾಮ್ರಾಜ್ಯವನ್ನು ಮತ್ತೆ ಪುನರುಜ್ಜೀವಿಸಿದನು. ತೈಲಪನು ತನ್ನ ರಾಜಧಾನಿಯಾಗಿ ಆರಿಸಿಕೊಂಡಿದ್ದು, ತಾನು ಸೋಲಿಸಿದ ರಾಷ್ಟ್ರಕೂಟರ ನೆಲೆವೀಡಾಗಿದ್ದ ಮಾನ್ಯಖೇಟವನ್ನೇ. ಪರಮಾರರ ಸೀಯಕ ಹರ್ಷನು ದಾಳಿಯಿಟ್ಟು ಸುಟ್ಟು ಲೂಟಿ ಮಾಡಿಹೋಗಿದ್ದ ಮಾನ್ಯಖೇಟಕ್ಕೆ ಮತ್ತೆ ಮರುಹುಟ್ಟನ್ನು ಕೊಟ್ಟವನು ತೈಲಪ. ತನ್ನ ಎಡಗೈ ಆಗಿ, ಅಂತರಂಗಕ್ಕೆ ಹತ್ತಿರವಾದ ಉನ್ನತ ಅಧಿಕಾರಿಗಳನ್ನಾಗಿ ತೈಲಪನು ಆರಿಸಿಕೊಂಡಿದ್ದು ದಲ್ಲಪ ಮತ್ತು ಮಲ್ಲಪರನ್ನು. ಇತ್ತ ಲಕ್ಕುಂಡಿಯ ಕಡೆಯಿಂದ ದಲ್ಲಪನೂ, ಅತ್ತ ಪುಂಗನೂರಿನಿಂದ ಮಲ್ಲಪನೂ ಬಂದು ತೈಲಪನ ರಾಜಧಾನಿ ಮಳಖೇಡದಲ್ಲಿ ನೆಲೆಸಿದರು. ತೈಲಪ ಚಕ್ರವರ್ತಿ ಸೂಚನೆ – ಸಾಕ್ಷಿಯಾಗಿ ದಲ್ಲಪ -ಮಲ್ಲಪರು ಬೀಗರಾದರು. ಅತ್ತಿಮಬ್ಬೆ – ನಾಗದೇವ ದಂಪತಿಗಳಾದರು. ವಾಜಿಕುಳವು ಕೌಂಡಿನ್ಯ ಗೊತ್ರವೂ ಬೆಸೆದುಕೊಂಡವು.

ಕ್ರಿ.ಶ. ೯-೧೦ ನೆಯ ಶತಮಾನ ಜೈನ ಸಮಾಜಕ್ಕೆ ಶುಕ್ರದೆಸೆಯ ಹೊಂಗಾಲ. ರಾಷ್ಟ್ರಕೂಟ ಚಕ್ರವರ್ತಿಗಳೂ, ಗಂಗಕುಲದ ರಾಜರೂ ಜೈನಧರ್ಮದ ಪಾಲಕರು. ಜಿನಸೇನರು, ಗುಣಭದ್ರರು, ಜಿನಚಂದ್ರರು, ಅಜಿತಸೇನರು – ಮೊದಲಾದ ಮಹಾನ್ ಜೈನ ಆಚಾರ್ಯರು ರಾಷ್ಟ್ರವ್ಯಾಪ್ತಿ ಪ್ರಭಾವಿಗಳಾಗಿದ್ದರು. ಚಕ್ರವರ್ತಿಗಳೂ ರಾಜ ಗುರುಗಳೂ ಮಹಾ ಸಾಮಂತ, ಮಹಾಮಂಡಲೇಶ್ವರ, ಮಹಾ ದಂಡನಾಯಕರೂ ಪ್ರಜೆಗಳೂ ಜಿನಧರ್ಮ ವತ್ಸಲರಾಗಿದ್ದರು. ರಾಷ್ಟ್ರಕೂಟ ಸಾಮ್ರಾಜ್ಯದ ಮತ್ತು ದಕ್ಷಿಣ ಭಾರತದ ಮೂರನೆಯ ಒಂದಂಶದಷ್ಟು ಪ್ರಜಾಕೋಟಿ ಜೈನಧರ್ಮೀಯರಿಂದ ಕೂಡಿತ್ತು. ಗಾಢವಾದ ವರ್ಚಸ್ಸಿನ ಜೈನ ಪರಿಸರದಲ್ಲಿ ನೂರಾರು ಪ್ರತಿಷ್ಠಿತ ಬ್ರಾಹ್ಮಮ ಮನೆತನಗಳು ಜೈನ ಧರ್ಮಕ್ಕೆ ಮತಾಂತರಗೊಂಡರು. ಪಂಪನ ತಂದೆ ಭೀಮಪ್ಪಯ್ಯ, ಪಂಪನ ತಾಯಿಯ ತಂದೆ (ತಾತ) ಜೋಯಿಸಸಿಂಘ, ಅತ್ತಿಮಬ್ಬೆಯ ತಾತನಾದ ನಾಗಮಯ್ಯನ ಹಿರಿಯರು, ಅತ್ತಿಮಬ್ಬೆಯ ಮಾವ ದಲ್ಲಪಯ್ಯನ ಮನೆತನ, ಪ್ರಾಕೃತಕವಿ ಪುಷ್ಪದಂತನ ಹಿರಿಯರು – ಹೀಗೆ ಹಲವು ಪ್ರತಿಭೆಗಳು ಸಮವಸರಣ ಸೇರಿದುವು. ದಿವ್ಯಧ್ವನಿಗೆ ಓಗೊಟ್ಟುವು.

ವಾಜಿಕುಳ ಹತ್ತನೆಯ ಶತಮಾನದ ಚಾಳುಕ್ಯ ರಾಜ್ಯದಲ್ಲಿ ಒಂದು ಪ್ರತಿಷ್ಠಿತ ಮನೆತನವಾಗಿ ಪ್ರತಿಷ್ಠಾಪಿತವಾಯಿತು. ಪಂಪಯ್ಯ, ದಲ್ಲಪಯ್ಯ, ನಾಗದೇವ, ಅಣ್ನಿಗದೇವ- ಈ ನಾಲ್ಕು ತಲೆಮಾರಿನವರು, ರಕ್ತ ಸಂಬಂಧದವರು, ಒಬ್ಬರಾದ ಮೇಲೆ ಒಬ್ಬರು ಸೈನ್ಯದಲ್ಲಿ ಪ್ರಮುಖರೆನಿಸಿದರು. ಇವರ ತರುವಾಯವೂ ಈ ವಂಶದ ಕುಡಿಗಳು ಕಾಣಿಸಿಕೊಂಡಿರುವುದನ್ನು ಸಹ ಈ ಸಂಪ್ರಬಂಧದ ಕಕ್ಷೆಯಲ್ಲಿ ಚರ್ಚಿಸ ಬಹುದಾಗಿದೆ. ಕರ್ನಾಟಕದ ಶಾಸನಗಳಲ್ಲಿ, ಕಾವ್ಯಗಳಲ್ಲಿ ವಾಜಿಕುಳ ಮತ್ಯು ಆ ಕುಲಕ್ಕೆ ಸೇರಿದ ಪ್ರಮುಖರ ಕೆಲವು ಪ್ರಸ್ತಾಪಗಳಿವೆ. ಅವುಗಳನ್ನು ಕಾಲಾನುಕ್ರಮಣಿಕೆಯಿಂದ ವಿವೇಚಿಸಬಹುದು.

೧. ದಲ್ಲಪ-ನಾಗದೇವ-ಅಣ್ನಿಗದೇವ ಇವರ ತರುವಾಯ ವಾಜಿಕುಳದ ಮತ್ತು ಇವರ ಮನೆತನದವನೇ ಆದ ಕಾಳಿಮಯ್ಯ ದಂಡನಾಯಕನು ಕಂಡುಬರುತ್ತಾನೆ. ಭುವನೈಕಮಲ್ಲ ಇಮ್ಮಡಿ ಸೋಮೇಶ್ವರನ ಕಾಲದ ಇಬ್ಬರು ಪ್ರಮುಖ ಮಹಾಮಣ್ಡಳೇಶ್ವರರು ಲಕ್ಷ್ಮರಸ ಮತ್ತು ಕಾಳಿಮಯ್ಯ. ಇವರಿಬ್ಬರಲ್ಲಿ ಕಾಳಿಮಯ್ಯನು ಚಾಳುಕ್ಯ ಸಾಮ್ರಾಜ್ಯದ ಉತ್ತರಕ್ಕೂ, ಲಕ್ಷ್ಮನೃಪನು ದಕ್ಷಿಣ ಭಾಗಕ್ಕೂ ತಮ್ಮ ಆಡಳಿತ ನಿವಹಣೆ ಮಾಡಿರುವುದು ಗಮನಾರ್ಹ. ಕಾಳಿಮಯ್ಯನು ಜಿನಭಕ್ತವಾಗಿ ತನ್ನ ವಂಶದ ಹಿರಿಯರಂತೆ ಜಿನಗೃಹವನು ಕಟ್ಟಿಸಿದನು. ಅವನನ್ನು ಕುರಿತು ಮಹಾ ರಾಷ್ಟ್ರದ ನಾಂದೇಡು ಜಿಲ್ಲೆಯ ದೇಗಲೂರು ತಾಲ್ಲೂಕಿನ ತಡಕಲ್ಲು ಗ್ರಾಮದ ಶಾಸನ ಅರಿಚಯ ಮಾಹಿತಿಯನ್ನು ಒದಗಿಸಿದೆ:

            (ಭದ್ರಂ) ಭೂಯ (ತಾ) ಜ್ಜಿನೇಂದ್ರಾ (ಣಾಂ) (ಶಾಸನಾಯಾ) ಘನಾ (ಶಿನೇ)
ಕುತೀರ್ತ್ತ (ಧ್ವಾನ್ತಸಂಘಾ) ತ ಪ್ರತಿಭಿನ್ನಘನ (ಭಾನವೇ)
||
(ಸ್ವಸ್ತಿ) ಸಮಸ್ತಭುವನಾಶ್ರಯ ಶ್ರೀ | ಪೃಥಿವೀ ವಲ್ಲಭ ಮಹಾರಾಜಾಧಿರಾಜ
ಪರಮೇಶ್ವರ ಪರಮಭಟ್ಟಾರಕಂ ಸತ್ಯಾಶ್ರ | ಯಕುತಿಳಕ ಚಾಳುಕ್ಯಾಭರಣಂ
ಶ್ರೀಮದ್ಭು| ವನೈಕಮಲ್ಲದೇವರ ವಿಜಯರಾಜ್ಯಮುತ್ತ | ರೋತ್ತರಾಭಿವೃದ್ಧಿ
ಪ್ರವರ್ದ್ಧಮಾನಮಾಚಂದ್ರಾರ್ಕ್ಕ| ತಾರಂ ಸಲುತ್ತಮಿರೆ ತತ್ಪಾದ ಪದ್ಮೋಪಜೀವಿ
ಸಮಧಿಗತ ಪಂಚಮಹಾಶಬ್ದ ಮಹಾಮ | ಣ್ಡಳೇಶ್ವರನಮವತೀಪುರವರೇ
ಶ್ವರಂ | ಸಂಗ್ರಾಮರಾಮಂ ಭುಜಬಳಭೀಮಂ ನೆರೆವೊಡೆ | ಗಣ್ಡಂ
ವೈರಿಭೇರುಣ್ಡಂ ನಿಗಳಂಕಮಲ್ಲಂ ಕೀರ್ತ್ತಿ | ಗೆ ನಲ್ಲ ಕಟಕದ ಗೋವಂ
ಭಂಟರ ಬಾವಂ ಬಿ | ರುದತ್ರಿನೇತ್ರಂ ಪರಾನಾರೀಪುತ್ರಂ ಸಾಹ |
ಸೋತ್ತುಂಗನಣನಸಿಂಗ ನಾಮಾದಿ | ಸಮಸ್ತ ಪ್ರಶಸ್ತಿ ಸಹಿ | ತಂ
ಶ್ರೀಮನ್ಮಹಾಮಂಡಳೇಶ್ವರಂ ಕಕ್ಕ | . . . . . . . . .|
ಕರಗುಡ್ಡ ಸಮಸ್ತ ರಾಜ್ಜಭರನಿರೂ | ಪಿತ ಮಹಾಮಾತೃ ಪದವೀ ವಿರಾ |
ಜಮಾನ ಮಾನೋನ್ನತ ಪ್ರಭುಮಂತ್ರೋ | ತ್ಸಾಹ ಶಕ್ತಿತ್ರಯ ಸಂಪನ್ನಂ ಸುಜನ
ಪ್ರಸನ್ನಂ ಬನ್ಧುಜನಚಿತ್ತಾಮಣಿ  ವಾಜಿಕುಳಾಂ | ಬರದ್ಯುಮಣಿ…..
ಸಿಂಗನಾಮಾದಿ ಸಮಸ್ತ ಪ್ರಶಸ್ತಿ ಸಹಿತಂ | ಶ್ರೀಮದ್ದಂಡನಾಯಕಂ ಕಾಳಿಮಯ್ಯಂ
ಕರಡಲ್ಲೊಳ್ಮಾಡಿಸಿದ ನಿಗಳಂಕಮಲ್ಲ | ಜಿನಾಲಯಕ್ಕೆ ಶಕವರ್ಷ ೯೯೩ ನೆಯ
ಸಾಧಾರನ ಸಂವತ್ಸರದ ಪುಷ್ಯ ಬಹುಳ | ಪಂಚಮಿ ೫ ಶುಕ್ರವಾರ
ದನ್ದಿನುತ್ತರಾಯಣ | ಸಂಕ್ರಾನ್ತಿ ಪರ್ವ್ವ ನಿಮಿತ್ತದಿಂ ಧಾರಾ| ಪೂರ್ವ್ವಕಂ
ಮಾಡಿ ದೇಯಿಗಾವೆಯ ತಡಕ | ಲ್ಲೆಡೆವೊಲದರೆಡೂರ ಪ್ರಜೆಗಳ
ಸನ್ಮತದಿಂ| ಬಿಟ್ಟ ಕರಿಯನೆಲಂ ಮಾವನ ಸಿಂಗಂ ಕೋಲ | ಮತ್ತರೈ
ವತ್ತಂಕದೊಳಂ ಮತ್ತರು ೫೦ | ಆಣಲಿಗೆಯೂರ ಮುಂದಣ ಪೊಲ
ಮೇರೆಯ ಪಳ್ಳದ ತಡಿಯಲು ಬಾಯಿಗಾವೆಯ ಪೊಲದಲು ಬಿಟ್ಟ
ಪೂವಿನ ತೋಂಟ ಆ ಕೋಲ ಮತ್ತರು ೧ ತಡಕಲ್ಲ ಪ್ರಭು | ದಣ್ಡನಾಯಕಂ
ನಾಗವರ್ಮ್ಮಯ್ಯನುಮಲ್ಲಿಯ | ಮಹಾಜನಮುಮೂರಿಂ ಮೂಡಲು ನಾಗೇ
ಶ್ವರದೇವರ ತೋತದಿಂ ಬಡಗಲುಪಳ್ಳದ ತಡಿಯಲ್ಕೊಟ್ಟ ಪೂವಿನ
ತೋಂಟಂ ಮತ್ತರು ೧ ಘಾಣ ೧
[Incsriptions from Nanded District : No. 8, 1071, pp. 18-20 lines [1-46]

ತಡಕಲ್ಲು ಶಾಸನವನ್ನು ಇಷ್ಟು ದೀರ್ಘವಾಗಿ ಉದಾಹರಿಸಿಸುದಕ್ಕೆ ಕಾರಣವೂ ಔಚಿತ್ಯವೂ ಉಂಟು. ಕಾಳಿಮಯ್ಯನು ವಾಜಿವಂಶದ ಮೇಲಾಳು : ವಾಜಿಕುಳಾಂಬರ ದ್ಯುಮಣಿ (ವಾಜಿಕುಲವೆಂಬ ಆಕಾಶವನ್ನು ಬೆಳಗುವ ಸೂರ್ಯನು). ದಲ್ಲಪನ ಮಗ ನಾಗದೇವನನ್ನು ಲಕ್ಕುಂಡಿಯ ಶಾಸನ ವಾಜಿಕುಳತಿಳಕನುಂ ತೇಜೋ ಭಾಸ್ಕರನುಂ ಎಂದಿರುವುದನ್ನು ನೆನೆಯಬಹುದು [ಸೌ.ಇ.ಇ.೧೧-೧, ೫೨.೧೦೦೭, ಸಾಲು ೧೩].

ಕಾಳಿಮಯ್ಯನು ವಾಜಿಕುಳದವನು; ಅತ್ತಿಮಬ್ಬೆಯ ಮಗನಾದ ಮೇಲೆ ಕಾಣುವ ಮತ್ತೊಬ್ಬ ಈ ವಾಜಿವಂಶದ ಮಹಾಮಾತ್ಯನೂ ಆಗಿದ್ದಾನೆ. ಅತ್ತಿಮಬ್ಬೆ ಲಕ್ಕುಂಡಿಯಲ್ಲಿ ಜಿನಾಲಯ ಕಟ್ಟಿಸಿದಂತೆ, ಕಾಳಿಮಯ್ಯನು ಕರಡಕಲ್ ಎಂಬಲ್ಲಿ ಜಿನಾಲಯ ಕಟ್ಟಿಸಿದನು; ಅದಕ್ಕೆ ‘ನಿಗಳಂಕಮಲ್ಲ ಜಿನಾಲಯ’ ಎಂಬ ಹೆಸರಾಯಿತು. ಕಾಳಿಮಯ್ಯನು ಅಣ್ನಿಗದೇವಿವಿಗೆ ಏನಾಗಬೇಕು ಎಂಬುದು ಪರಿಶೀಲನಾರ್ಹ. ಅಣ್ನಿಗದೇವನು ಅಪುತ್ರಕ ಮತ್ತು ಅವಿವಾಹಿತನೆಂದು ತೋರುತ್ತದೆ. ಅಜಿತ ಪುರಾಣದಲ್ಲಿ, ಲಕ್ಕುಂಡಿಯ ಶಾಸನದಲ್ಲಿ ಆತನ ದಾಂಪತ್ಯ- ಸಂತಾನ ಕುರಿತು ಪ್ರಸ್ತಾಪಗಳಲ್ಲಿ. ನಾಗದೇವನಿಗೆ ಅಣ್ನಿಗನು ಪಿರಿಯಮಗಂ- ಅಗ್ರಸುತಂ ಆಗಿದ್ದನೆಂದು ಶಾಸನ ಮತ್ತು ಕಾವ್ಯದಿಂದ ತಿಳಿದುಬರುತ್ತದೆ. ಹಾಗಾದರೆ ನಾಗದೇವನಿಗೆ ಕಿರಿಯ ಮಗನೂ ಒಬ್ಬನಿದ್ದನೆಂದು ಭಾವಿಸಬಹುದು. ಅದೇ ರೀತಿಯಲ್ಲಿ ದಲ್ಲಪನಿಗೂ ನಾಗ – ದೇವನು ಪಿರಿಯಮಗನೆಂದು, ಅದೇ ಲಕ್ಕುಂಡಿಯ ಶಾಸನದಲ್ಲಿದೆ. ಕಾಳಿಮಯ್ಯನು ದಲ್ಲಪನಿಗಿದ್ದಕಿರಿಯ ಮಗನ ಮಗನೊ, ಇಲ್ಲವೇ ನಾಗದೇವನ ಕಿರಿಯ ಮಗನೊ, ಆಗಿರಬಹುದು.

ತಡಕಲ್ಲು ಶಾಸನದಲ್ಲಿ ಇಪ್ಪತ್ತನೆಯ ಸಾಲು ಸಂಪೂರ್ಣವಾಗಿ ನಶಿಸಿ ಹೋಗಿರುವುದರಿಂದ ಒಂದು ಸಂಶಯಕ್ಕೆಡೆಯಾಗಿದೆ. ಈ ಶಾಸನದ ಪಂಕ್ತಿಯಿಂದ ಇಪ್ಪತ್ತನೆಯ ಪಂಕ್ತಿಯವರೆಗೆ ಬರುವ ವಿವರಣೆಯಷ್ಟೂ ಒಬ್ಬ ಮಹಾಮಂಡಳೇಶ್ವರನಿಗೆ ಸಂಬಂಧಪಟ್ಟಿದ್ದು. ಇಪ್ಪತ್ತೊಂದನೆಯ ಪಾದದಿಂದ ಮುಂದಕ್ಕೆ ೪೧ ನೆಯ ಪಾದದವರೆಗೆ ಇರುವ ವರ್ಣನೆ ಮಾತ್ರ ಕಾಳಿಮಯ್ಯ ದಂಡನಾಯಕನದಿರಬಹುದು. ಈ ಸಂಶಯವನ್ನು ಕಳಚಬಹುದಾಗಿದ್ದ ಕೊಂಡಿಯಾದ ೨೦ ನೆಯ ಸಾಲು ಅಳಿಸಿ ಹೋಗಿದೆ. ವಾಜಿವಂಶಜರಂತೆ ಕಾಳಿಮಯ್ಯನೂ ಚಾಳುಕ್ಯರ ದಂಡನಾಯಕನಾಗಿರುವುದು ಕೂಡ ವಿಶೇಷ ಗಮನಿಕೆಗೆ ತಕ್ಕುದಾಗಿದೆ.

ಮೇಲಿನ ಶಾಸನದಲ್ಲಿ ಅಲಿಸಿಹೋಗಿರುವ ಸಾಲಿನಲ್ಲಿ, ಕಳಚಿ ಹೋಗಿರುವ ಕೊಂಡಿಯನ್ನು ಕೂಡಿಸಿ ಸರಿಪಡಿಸಲು ಬೇಕಾದ ಮಾಹಿತಿ ಮತ್ತೊಂದು ಶಾಸನದಲ್ಲಿ ಉಪಲಬ್ಧವಿದೆ. ಅದೇ ನಾಂದೇಡ್ ಜಿಲ್ಲಾ ಶಾಸನ ಸಂಪುಟದಲ್ಲಿರುವ ಎಕ್ಲಾರಾ ಗ್ರಾಮದ ಶಾಸನದಲ್ಲಿ ಹೀಗಿದೆ:

೧೨ ತ್ರೈಳೋಕ್ಯಮಲ್ಲದೇವರ ಮಹಾ ಸಾಮನ್ತ ಅಮರಾವತೀ ಪುರವ

೧೩ ರೇಶ್ವರ ಸಮರಂ ಮಹೇಶ್ವರಂ

೧೪ …. ಕಾಮಂ ಭುಜಬಳ ಭೀಮಂ

೧೫ ವೈರಿಭೇರುಣ್ಡ ನಿಗಳಂಕ ಮಲ್ಲಂ

೧೬ ಕಟಕದ ಗೋವಂ ಅಣ್ನನ ಸಿಂಗಂ

೧೭ ಶ್ರೀಮತ್ಯ್ರೆಳೋಕ್ಯಮಲ್ಲದೇವ

೧೮ ರ ಪಾದಪಂಕಜ ಭ್ರಮರ ನಾ

೧೯ ಮಾದಿ ಸಮಸ್ತ ಪ್ರಶಸ್ತಿ ಸಹಿತ ಶ್ರೀ

೨೦ ಮನ್ಮಹಾ ಸಾಮನ್ತಂ ಕರ್ಕ್ಕಪರ

೨೧ ಸ ಸಕವರ್ಷ ೯೮೮ನೆಯ ಪ

೨೨ ರಾಭವ ಸಂವತ್ಸರ . . . .

[Inscriptions from Nanded District :(1968). No.6.1066 ಎಕ್ಲಾರ (ನಾಂದೇಡ್ ಜಿ. ಮುಖೇಡ್ ತಾ.) ಪು. ೧೫] ಇದೇ ಶಾಸನ ಸಂಕಲನ ಸಂಪುಟ ದಲ್ಲಿರುವ ಕರಡಿಕಲ್ ಶಾಸನದಲ್ಲೂ ಸಹ ‘ಶ್ರೀಮನ್ಮಹಾಮಂಡಳೇಶ್ವರ ಕರ್ಕ್ಕರಸರು’ ಎಂದಿದೆ. [ಅದೇ : ನಂ. ೧೦.೧೦೭೯ (ನಾಂದೇಡ್ ಜಿಲ್ಲೆ ದೇಗಲೂರು ತಾಲ್ಲೂಕು)]

ಆದ್ದರಿಂದ ತಡಕಲ್ಲು ನಂ. ೮ನೆಯ ಶಾಸನದಲ್ಲಿ ಪ್ರಸ್ತಾಪಿತವಾಗಿರುವ ಕಾಳಿಮಯ್ಯನು ದಂಡನಾಯಕನೇ ಹೊರತು ಮಹಾಮಂಡಲೇಶ್ವನಲ್ಲ. ಆಗ ಅಮರಾವತೀ ಪುರವರೇಶ್ವರನೂ ಮಹಾಮಂಡಲೇಶ್ವರನೂ ಆಗಿದ್ದವನು ಕರ್ಕ್ಕಪರಸ ಅಮರಾವತೀ ಪುರವೆಂಬುದು ಪ್ರಾಯಃ ನಾಂದೇಡ್ ಜಿಲ್ಲೆಯ ದೇಗಲೂರೇ ಇರಬೇಕು; ದೇಗಲೂರು ಎಂಬುದರ ಸಂಸ್ಕೃತಿಕರಣಗೊಳಿಸಿದ ರೂಪ ಅಮರಾವತಿಪುರ – ಎಂದು ನನಗೆ ತೋರುತ್ತದೆ. ದೇಗುಲಗಳ ಊರು ದೇಗಲೂರು; ‘ದೇಗುಲ’ ಶಬ್ದವು ಸಂಸ್ಕೃತದ ‘ದೇವಕುಲ’ ದ ತದ್ಭವರೂಪ. ಸಂಸ್ಕೃತ ಮೂಲದಿಂದ ಬಂದು ‘ದೇಗಲೂರು’ ಎಂದು ಕನ್ನಡೀಕರಣಗೊಂಡ ರೂಪವೇ ಮತ್ತೆ ಅದರ ಶಭಾರ್ಥನ್ನು ಅನುಸರಿಸಿ, ‘ಅಮರಾವತೀಪುತ’ ಎಂದು ಸಂಸ್ಕೃತೀಕರಣ ಗೊಂಡಿರುವುದು ವಿಚಿತ್ರವಾದ ಅಥವಾ ಅಸಾಧ್ಯವಾದ ಬೆಳವಣಿಗೆಯೇನಲ್ಲ.

ಈ ಮಹಾಮಂಡಲೇಶ್ವರನ ಅಧಿಕಾರ ವ್ಯಾಪ್ತಿಯಲ್ಲಿ ದಂಡನಾಯಕ ನಾಗಿದ್ದವನು ವಾಜಿಕುಳಾಂಬರದ್ಯುಮಣಿ (ವಾಜಿವಂಶದ ಸೂರ್ಯ) ಕಾಳಿಮಯ್ಯ. ಈತನು ಅಲ್ಲಿಗೆ ಮಹಾಮಾತ್ಯಪದವಿಯಿಂದ ವಿರಾಜಮಾನನೂ ಆಗಿದ್ದನು. ಬಂಧುಜನ ಚಿಂತಾಮಣಿ ಎನಿಸಿದ ಕಾಳಿಮಯ್ಯನು ಕರಡಕಲ್ (ಕರಡಿಕಲ್) ಕರಡಿಕಲ್ ಗ್ರಾಮದಲ್ಲಿ ಬಸದಿಯನ್ನು ಕಟ್ಟಿಸಿ, ಅದಕ್ಕೆ ಆ ಭಾಗದ ಆಗಿನ ಮಹಾಮಂಡಳೇಶ್ವನಾದ ಕರ್ಕಪರಸನಿಗೆ ಇದ್ದ ‘ನಿಗಳಂಕಮಲ್ಲ’ ಬಿರುದಿನಿಂದ ‘ನಿಗಳಂಕ ಮಲ್ಲ ಜಿನಾಲಯ’ ವೆಂದು ನಾಮಕರಣ ಮಾಡಿದನು: ಇದು ಕ್ರಿ.ಶ. ೧೦೭೧ರಲ್ಲಿ ನಡೆದ ಕಾರ್ಯ.

ನಾಂದೇಡು ಜಿಲ್ಲೆಯಲ್ಲಿ ಹಾಳುಬಿದ್ದಿರುವ ಜೈನ ಅವಶೇಷಗಳು ವಿಪುಲವಾಗಿ ಸಿಗುತ್ತವೆ, ಉದಾಹರಣೆಗೆ ಕಂಧಾರ್ (ಖಂಧಾರ್, ಕಂದಹಾರ್)

ಹುಳ್ಳ – ರೇಚಣ

ಹೊಯ್ಸಳರ ಪ್ರಸಿದ್ಧ ಅಧಿಕಾರಿ – ಭಂಡಾರಿ ಹುಳ್ಳನು ವಾಜಿವಂಶ ತಿಳಕನಾದ ಯಕ್ಷರಾಜ (ಜಕ್ಕಿರಾಜ) ನ ಮಗ ಅಂಬುದು ಗಮನಿಕೆಗೆ ತಕ್ಕುದಾಗಿದೆ :

            ಅಕಳಂಕಂ ಪಿತೃವಾಜಿವಂಶ ತಿಳಕ ಶ್ರೀಯಕ್ಷರಾಜಂ ನಿಜಾಂ
ಬಿಕೆ ಲೋಕಾಂಬಿಕೆ ಲೋಕವಂದಿತೆ ಸುಶೀಲಾವಾರೆ ದೈವಂ ದಿವೀ
ಶಕ ಕದಂಬಸ್ತುತ ಪಾದಪದ್ಮನರುಹಂ ನಾಥಂ ಯದುಕ್ಷೋಣಿ ಪಾ
ಳಕ ಚೂಡಾಮಣಿ ನಾರಸಿಂಗನೆನಲೇಂ ನೋಂಪುಳ್ಳನೋ ಹುಳ್ಳಪಂ
||

[ಎ.ಕ.೨, ೭೧(೬೪) ೧೧೬೩. ಪು.೩೦. ಶ್ರವಣಬೆಳುಗೊಳ (ಹಾಸನಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕು)[. ಇದೇ ಪದ್ಯ ಶ್ರವಣಬೆಳಗೊಳ ೪೭೬ (೩೪೫) ಶಾಸನದಲ್ಲೂ ಪುನರಾವೃತ್ತಿ ಆಗಿದೆ. ಅಲ್ಲದೆ ಇನ್ನೊಂದು ಶಾಸನದಲ್ಲಿ ಇದೇ ವಿಷಯ ಕಂದಪದ್ಯದಲ್ಲಿ ಪಡಿ ಮೂಡಿದೆ.

            ವಾಜಿಕುಳ ಕಳ್ಪಭೂಜಂ
ವಾಜಿಕುಳಂಭೋಜಲಕ್ಷ್ಮಿ ಹುಳ್ಳಚಮೂಪಂ
ವಾಜಿಕುಳತಿಳಕನೆಸದಂ
ರಾಜ ಸಭಾಯೋಗ್ಯನನುಪಮಂ ವಸುಮತಿಯೊಳು
||

[ಎ.ಕ. ೭(೧೯೭೯) ೬೩ (೪ ನಾಮಂ ೩೦) ೧೧೬೫. ಲಾಲನಕೆರೆ (ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕು) ಪು. ೪೩. ಸಾಲು : ೩೦-೩೧] ಇದೇ ರೀತಿಯಾಗಿ, ಹೊಯ್ಸಳರ ಮತ್ತೊಬ್ಬ ಅಧಿಕಾರಿಯಾದ ಪುಣಿಸಮಯ್ಯನೂ ಸಹ ವಾಜಿವಂಶಜನೆಂದು ತಿಳಿದು ಬರುತ್ತದೆ.

            ಎನೆ ನೆಗೞ್ದ ಹುಳ್ಳರಾಜಂ
ಗನುನಯದಿಂದಂಣನೆನಿಸಿ ಸೊಗಯಿಪನೆನಸುಂ
ಮನುಚರಿತ ದುರಿತದೂರಂ
ವಿನಯಪರಂ ಕಂಟಿಮಯ್ಯನನುಪಮತೇಜಂ
||
ಎರದರ್ಗ್ಗಾಸೈಸಿ ಬಂದರ್ಗ್ಗೆಡಱಡಸಿದವರ್ಗ್ಗಿಕ್ಕುಪಟ್ಟರ್ಗ್ಗೆ
ಕೆಟ್ಟರ್ಗೆ ರವಿ ಪ್ರಕ್ಯಾತಜಾತಂ ಮಗಳ್ದುದಯ್ಸಿದಂತೆತ್ತಪಂ
ಕೂಡೆ ಲೋಕೋತ್ತರಮಾಗಲು ವಾಜಿವಂಶೋತ್ತಮನಮಳ
ಗುಣಾಳಂಕ್ರಿತಂ ಧರ್ಮರತ್ನಾಕರನುದ್ಘಾಟೋಪಪಂಚಾನನನನು ಪಮತೇಜೋನಿಧಿ ಕಂಟಿಮಯ್ಯಂ|

[( ಮಹಾಸ್ರಗ್ಧರೆ : ಅಶುದ್ಧ) ಅದೇ: ಪು. ೪೩, ಸಾಲು. ೩೧ – ೩೪]

            ಜನಕನನೂನದಾನಪತಿ ವಾಜಿಕುಳೋತ್ತಮನೊಳ್ಪುವೆತ್ತ ಹೆಂ
ಪಿನಮದುಸೂದನಂ ಜನನಿ ಜಾಹ್ನವಿ ಸದುಗುಣಿ ಮುದ್ದಿಯಕ್ಕನೀ
ಮನಸಿಜ ಮರ್ದ್ದನಂ ಸುರಗಣಾರ್ಚ್ಚಿತನೀಸ್ವರನಿಷ್ಟದೆಯ್ವವೆಂ
ದನುನಯದಿಂದೆ ಬಂಣಿಪುದು ಧಾರಿಣಿ ಹೆಗ್ಗಡೆ ಕಂಟಿಮಯ್ಯನುಂ
||
(೦ಚಂಪಕ ಮಾಲೆ : ಅಶುದ್ಧ) ಅದೇ ಪು. ೪೩-೪೪ ಸಾಲು. ೩೪೦೩೬
ಅತ್ತಿಸಿದಂ ಧರಿತ್ರಿ ಹೊಗಳಲು ಮುದದಿಂ ಸಿವರಂಮ್ಯಗೇಹಮಂ
ತೆತ್ತಸಿದಂ ದಿಶಾವಳಯದೊಳು ನೆಱೆಕೀರ್ತಿಯನೊಲ್ದು ರಾಗದಿಂ
ಗುತ್ತನ ಚಾರುದತ್ತನೆಣೆಯೆಂಬುದು ಧಾರಿಣಿ ಕಂಟಿಮಯ್ಯನಂ
ಉತ್ತಮತೇಜನಂ ಸುಚಿಯನೊ (ಳ್) ಗುಣಿಯಂ ಪದಪಿಂ ನಿರಂತರಂ ||
            [(ಉತ್ಪಲ ಮಾಲೆ) ಅದೇ. ಪು. ೪೪. ಸಾಲು : ೩೮-೪೦]

ಹುಳ್ಳಮಯ್ಯನ ಕೈ ಕೆಳಗಿನ ಹೆಗ್ಗಡೆ ಕಂತಿಮಯ್ಯನು ಅನುನಯದಿಂದ ಅಂಣ ನೋಪಾದಿಯಲ್ಲಿದ್ದನು. ಹುಳ್ಲಮಯ್ಯನಂತೆ ಕಂಟಿಮಯ್ಯನೂ ವಾಜಿಕುಲಜನ್ಯನು. ವಾಜಿ ಕುಳೋತ್ತಮನಾದ ಮದುಸೂದನ (ಜಾಹ್ನವಿ) ಮಗನಾದ ಕಂಟಿಮಯ್ಯನು ಶೈವನಾಗಿದ್ದು ಶಿವಾಲಯವನ್ನು ಕಟ್ಟಿಸಿದನು. ಜಿನಭಕ್ತ ಹುಳ್ಲಮಯ್ಯನೂ ಶಿವಭಕ್ತ ಕಂಟಿಮಯ್ಯನೂ ಅಣ್ನತಮ್ಮಂದಿರಂತೆ ಬಾಳಿದರೆಂದು ಈ ಶಾಸನ ಮತೀಯ ಸೌಹಾರ್ದವನ್ನು ದಾಖಲಿಸಿದೆ.

ವರ್ಧಮಾನ ಪುರಾಣವನ್ನು ಬರೆದ ಅಚಣ್ಣ ಕವಿಯ ಪೋಷಕನೂ, ಮಹಾಮಂತ್ರಿ ಮತ್ತು ಚಮೂಪನಾಗಿ ಕೀರ್ತಿಶಾಲಿಯಾದವನೂ ಆದ, ವಸುಧೈಕ ಬಾಂಧವ ಬಿರುದಾಂಕಿತ ರೇಚರಸನು (ರೇಚಣ, ರೇಚವಿಭು, ರೇಚಿದಂಡಾದಿನಾಥ) ಕೂಡ ವಾಜಿವಂಶ ತಿಲಕನಾಗಿದ್ದನು:

            ಕುಲಮಂ ಪೇೞ್ವೊಡೆ ವಾಹಿವಂಶ ತಿಲಕಂ ಸನ್ಮಂತ್ರ ಮಂತ್ರಿತ್ವದೊಳ್
ಪಲರುಂ ಜೀಯೆನೆ ದೇವ ಮಂತ್ರಿಯೊಲವಂ ಸಲ್ಲೀಲೆಯಿಂ ತೋಱುವಂ
ಚಲದಿಂದಾಂತರನಿಕ್ಕಿಮೆಟ್ಟಿ ಪಡೆವಂ ಸತ್ಕೀರ್ತಿಯಂ ಧಾತ್ರಿಯೊಳ್
ನಲವಿಂ ರೇಚಣಮಂತ್ರಿಯಾರ್ಗಮಧಿಕಂ ಸಾಹಿತ್ಯ ವಿದ್ಯಾಧರಂ
||

[ಎ.ಕ ೫, ಅರಸೀಕೆರೆ ೬೯.೧೧೭೪] ರೇಚಣ ಚಮೂಪನ ಸಂಬಂಧವಾಗಿ ಅನೇಕ ಮಾಹಿತಿಗಳು ಉಪಲಬ್ಧವಿವೆ. ಶಾಸನಗಳಲ್ಲೂ ಕಾವ್ಯದವಲ್ಲೂ ರೇಚವಿಭುವಿನ ಘಬ ವ್ಯಕ್ತಿತ್ವ ಅರಳಿ ನಿಂತಿದೆ; ಎ.ಕ. ೭-೧. ಶಿಕಾರಿಪುರ ೧೧೯, ೧೨೩, ೧೮೫, ೧೯೭, ೨೨೫ : ಎ.ಕ. ೫, ಅರಸೀಕೆರೆ ೬೯ ಮತ್ತು ೭೭; ಆಚಣ್ಣ ಕವಿಯ ವರ್ಧಮಾನ ಪುರಾಣಂ (೧೧೯೦); ಮೈಸೂರು ಗೆಜಟಿಯರ್ ಸಂಪುಟ ೨, ಭಾಅ ೨ – ಮೊದಲಾದವನ್ನು ಅವಲೋಕಿಸುವುದು. ದೇಸಾಯಿ ಪಾಂಡುರಂಗರಾಯ, ‘ಶಾಸನ ಪರಿಚಯ’ (೧೯೫೬)- ಇದರಲ್ಲಿ ಶಾಸನ ಸಂಖ್ಯೆ ೨೨ನೆಯದು ಕೌಲೂರು ಗ್ರಾಮಕ್ಕೆ ಸೇರಿದ್ದು, ಇದರ ಕಾಲ ಸುಮಾರು ೧೧೭೭-೮೮. ಈ ಶಾಸನದಲ್ಲಿ ಕಳಚುರಿ ಚಕ್ರವರ್ತಿ ಸಂಕಮದೇವನುಮಂ ತತ್ ಪ್ರಧಾನನಪ್ಪ ವಸುಧೈಕ ಬಾಂಧವ ರೇಚಿದೇವನುಮಂ ತತ್ ಚಿತ್ತ ವೃತ್ತಿಯುಮಂ ಸಂಪೂರ್ಣ ವೃತ್ತಿಯುಮಂ ಪಡೆದು ಬಂದು ಶ್ರೀಮದನಾದಿಯಗ್ರ ಹಾರ ಕೌಱೂರ ಊರೊಡೆಯರು ಹರಿಹರ ದೇವರ್ಗ್ಗೆ ದಾನಕೊಟ್ಟುದನ್ನು ದಾಖಲಿಸಿದೆ. ಚತುರ್ಭಾಷಾ ಚಕ್ರವರ್ತಿ ಕವಿಕಂದರ್ಪನ ಈ ಶಾಸನದ ಕಾಲ ಕ್ರಿ.ಶ. ೧೧೭೭. ಕೌಲೂರು / ಕೌಱೂರು -ಎಂಬ ಊರು ಈಗಿನ ಕೊಪ್ಪಳ ತಾಲ್ಲೂಕಿನ ದೊಡ್ಡ ಗ್ರಾಮ; ಇದು ಬನ್ನಿಕೊಪ್ಪ ರೈಲ್ವೆ ನಿಲ್ದಾಣದಿಂದ ಹದಿನೈದು ಕಿಮೀ ಅಂತರದಲ್ಲಿದೆ. ಕೌರೂರು ಗಚ್ಛ ಕುರಿತು ‘ಕವಿವರ ಕಾಮಧೇನು ಅತ್ತಿಮಬ್ಬೆ’ (೧೯೯೬) ಪುಸ್ತಕದಲ್ಲಿ ಚರ್ಚಿಸಿದ್ದೇನೆ [ಪು. ೪೯]. ‘ವಸುಧೈಕ ಬಾಂಧವ ರೇಚಣ ದಂಡಾಧಿನಾಥ’ – ಎಂಬ ಲೇಖನದಲ್ಲಿ ಸಮಗ್ರ ಮಾಹಿತಿಯ ವಿವೇಚನೆಯಿದೆ [ನಾಗರಜಯ್ಯ, ಹಂಪ. : ‘ಬೆಳ್ಳಿಬಾಗಿನ’, (ಸಂ) ಡಿ. ಲಿಂಗಯ್ಯ : ೧೯೯೪ : ಪು. ೯೧-೯೯].

ಹುಳ್ಳನು ಲೋಕಾಂಬಿಕೆಯ ಮಗ, ರೇಚಣನು ನಾಗಾಂಬಿಕೆಯ ಮಗ [ಎ.ಕ. ೭, ಶಿಕಾರಿಪುರ ೧೯೭, ೧೧೮೦ ಸಾಲು : ೩೬]. ತೈಲಪನಿಗೂ ಚಾಳುಕ್ಯ ಕುಲಕ್ಕೂ ದಲ್ಲಪನು ಇದ್ದಂತೆ, ಬಿಜ್ಜಳ – ಆಹವಮಲ್ಲರಿಗೂ ಕಳಚೂರ್ಯರಿಗೂ ಈ ರೇಚಣನು ಆಧಾರಸ್ತಂಭವೆನಿಸಿದ್ದನು. ಈ ರೇಚಣನ ವಾರಿತ್ರಿಕ ಸ್ಥಾನಮಾನ ಕುರಿತ ನಿರ್ದೇಶನ ಸಮರ್ಪಕವಾಗಿ ನಡೆದಿಲ್ಲ. ರೇಚರಸನು ಕಳಚೂರ್ಯರ (ಮೂಲತಃ ಕಾಳಾಂಜ ಪುರವರೇಶ್ವರರ) ಆಹವಮಲ್ಲನ (೧೧೮೦-೮೩) ಮಹಾಪ್ರಧಾನನೂ ಬಾಹತ್ತರ ನಿಯೋಗಾಧಿಪತಿಯೂ ದಂಡಾಧಿನಾಥನೂ ಆಗಿದ್ದುದು ಮಾತ್ರವಲ್ಲದೆ, ಅದಕ್ಕೂ ಮೊದಲಿನಿಂದ ಆ ಮನೆತನದ ಆಳ್ವಿಕೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದನು. ಇಮ್ಮಡಿ ಬಿಜ್ಜಳನಿಗೆ (೧೧೬೨-೬೭) ಸಪ್ತಾಂಗ ಸಂಪತ್ತಿಯನ್ನು ಕ್ರಮದಿಂದ ಪಡೆದುಕೊಟ್ಟವನೇ ರೇಚಣ ದಂಡನಾಯಕ. ಬಿಜ್ಜಳನನ್ನು ಚಕ್ರವರ್ತಿಯೆನಿಸಿ ಸಿಂಹಾಸನದಲ್ಲಿ ಕೂಡಿಸಿದ್ದಲ್ಲದೆ, ಆತನ ಆರೂ ಜನ ಮಕ್ಕಳ ಮಾಣಿಕ್ಯವಾಗಿ ನಿಂತು ಧೈರ್ಯದಿಂದ ಮಾರ್ಗದರ್ಶನ ಮಾಡಿದವನೂ ರೇಚಣನೇ. ವಜ್ರದೇವನು ಆಳದಿದ್ದರೂ, ಸೋವಿದೇವ (೧೧೬೭-೭೬), ಮಲ್ಲಿಕಾರ್ಜುನ (೧೧೭೬), ಸಂಕಮ (೧೧೭೬-೮೦) ಮತ್ತು ಆಹವಮಲ್ಲರ (೧೧೮೩-೮೩) ರಾಜ್ಯಾಡಳಿತಲ್ಲಿ ರೇಚಣನೇ ಪ್ರಮುಖನಾಗಿದ್ದನು. ಸಿಂಘಣನ (೧೧೮೩-೮೪) ಆಳ್ವಿಕೆಯ ಕಾಲ ಮುಗಿದೊಡನೆ ರೇಚಣನು ಕಲಚೂರಿಗಳ ಆಸ್ಥಾನ ತೊರೆದು, ಅವರನ್ನು ಗೆದ್ದ ಹೊಯ್ಸಳರ ವೀರಬಲ್ಲಾಳ (೧೧೭೩-೧೨೨೦) ರಾಜನಲ್ಲಿ ಮಹಾಮಂತ್ರಿಯಾದನು.

ಅಂಗಜೋಪಮ, ಆರ್ಥಿಕ ಕಲ್ಪತರು, ಪುಣ್ಯಾಕರ, ಭೋಗಪುರಂದರ, ಭೀಕರ ವೈರಿವಿದಾರಣ ಕೇಸರಿ, ಮಿಕ್ಕ, ಸುದಾನಿ, ಸತ್ಕಳಾಢ್ಯ, ಜಿನೇಂದ್ರಮತಾಬ್ಜಭಾನು, ಸಾಹಿತ್ಯ ವಿದ್ಯಾಧರ, ಚಾರಿತ್ರ ರತ್ನಾಕರ, ಲೋಕೈಕ ಕಳ್ವದ್ರುಮ ಎಂಬಿತ್ಯಾದಿ ಹತ್ತಾರು ಬಿರುದು ಬಾವಲಿಗಳು ರೇಚಣನಿಗೆ ಇದ್ದುವು. ಈ ಪ್ರಶಸ್ತಿಗಳನ್ನೆಲ್ಲ ಹಿಂದೆ ಹಾಕಿ ಮುಂದೆ ನಿಂತದ್ದು ವಸುಧೈಕ ಬಾಂಧವ. ಆಚಣ್ಣಕವಿಗೆ ಆಶ್ರಯ ನೀಡಿ ರೇಚಣನು ವರ್ಧಮಾನ ಪುರಾಣವನ್ನು ಬರೆಸಿದನು. ಅಲ್ಲದೆ ರೇಚಣನು ಅರಸೀಕೆರೆಯಲ್ಲಿ ಸಹಸ್ರಕೂಟ ಜಿನಾಲಯವನ್ನು ಕಟ್ಟಿಸಿದನು. [ಎ.ಕ.೫, ಅರಸೀಕೆರೆ ೭೭]. ಜಿನನಾಥಪುರ ದಲ್ಲಿ ಶಾಂತಿ ನಾಥ ಜಿನನ ಬಿಂಬವನ್ನು ಮಾಡಿಸಿದನು. [ಎ.ಕ. ೧೧(೧೯೭೩) ೫೨೬ (೩೮೦) ೧೨ ಶ. ಲಕ್ಕುಂಡಿ (ಧಾರವಾಡ ಜಿಲ್ಲೆ, ಗದಗ ತಾಲ್ಲೂಕು) ಪು. ೩೭೪ : ಬಾ.ಕ.ಐ. ೩೪ ೧೯೨೬-೨೭; ಎಆರ್‌ಎಸ್‍ಐಇ ೧೯೨೬-೨೭, APP. I. No.34] ಲಕ್ಕುಂಡಿಯ ವಸುಧೈಕ ಜಿನಾಲಯವನ್ನು ಈ ರೇಚಣನೇ ಕಟ್ಟಿಸಿದನೆಂದು ಅಂತರ ಬಾಹ್ಯ ಪ್ರಮಾಣಗಳಿಂದ ಖಚಿತಪಡಿಸಬಹುದು.

ಕಾಳಿಮಯ್ಯನೂ, ಯಕ್ಷರಾಜನೂ, ಹುಳ್ಳನೂ, ರೇಚಣನೂ ಅತ್ತಿಮಬ್ಬೆಯ ಬಂಧುಗಳೆನ್ನಬಹುದು. ಧಲ್ಲಪನಿಗಿದ್ದ ಕಿರಿಯಮಗನ ಮತ್ತು ನಾಗದೇವನಿಗಿದ್ದ ಕಿರಿಯ ಮಗನ ಸಂತಾನಶ್ರೀಯ ಪರಂಪರೆಗೆ ಸೇರಿದವರು ಕಾಳಿಮಯ್ಯ, ಹುಳ್ಳ, ರೇಚಣರು. ಇವರೆಲ್ಲರೂ ದಲ್ಲಪ, ನಾಗದೇವ, ಅಣ್ನಿಗದೇವನಂತೆಯೇ ಸೇನಾಧಿಪತಿಗಳು. ಅಣ್ನಿಗದೇವನ ತರುವಾಯ ಕಾಳಿಮಯ್ಯನವರೆಗೆ ವಾಜಿವಂಶದವರು ಚಾಳುಕ್ಯರ ಆಶ್ರಯವನ್ನು ತೊರೆಯಲಿಲ್ಲ. ವಿಕ್ರಮಾದಿತ್ಯ ೬ ಚಕ್ರಿಯ ಆಡಳಿತಾನಂತರ ಚಾಳುಕ್ಯರ ಒಲವು ಶೈವ ಪರವಾಯಿತು. ಆಗ ಜೈನಪರವಾದ ವಾಜಿವಂಶದವರು ಅನ್ಯಾನ್ಯ ರಾಜಾಶ್ರಯಕ್ಕೆ ವಲಸೆ ಹೊರಟರು. ಯಕ್ಷರಾಜನು ಅದಷ್ಟೇ ಉದಯೋನ್ಮುಖವಾಗುತ್ತಿದ್ದ ಹೊಯ್ಸಳರ ಆಸರೆಗೆ ಬಂದನು. ತನ್ನ ವಾಜಿವಂಶದ ತೌರೂರಾದ ಲಕ್ಕುಂಡಿಯಲ್ಲಿ ವಸುಧೈಕ ಜಿನಾಲಯ ಮಾಡಿಸಿದ ರೇಚಣನು ಕಳಚೂರ್ಯರಿಗೆ ನಿಷ್ಠೆ ಪರಾಕ್ರಮಗಳಿಂದ ಸೇವೆಗೈದನು; ಅನಂತರ ತನ್ನ ಬಂಧುವಾದ ಹುಳ್ಳನ ಸಲಹೆ ಸಹಾಯಗಳಿಂದ ಹೊಯ್ಸಳರನ್ನು ಸೇರಿದನು.

ಮಲ್ಲಪ – ಪುನ್ನಮಯ್ಯ, ಅತ್ತಿಮಬ್ಬೆಯರ ಆದರ್ಶ – ಪರಂಪರೆಯನ್ನು ಮುಂದು ವರಿಸಿ ರೇಚಣನು ಜಿನಗೃಹ ಕಟ್ಟಿಸಿ ಜೈನಪುರಾಣವನ್ನು ಬರೆಸಿದನು.

‘ಧರ್ಮನಾಥ ಪುರಾಣ’ ವೆಂಬ ಜೈನ ಚಂಪೂ ಕಾವ್ಯವನ್ನು ರಚಿಸಿರುವ ಮಧುರ ಕವಿ (೧೩೮೫) ಸಹ ವಾಜಿ ವಂಶಕ್ಕೆ ಸೇರಿದವನು; ಭಾರದ್ವಾಜ ಗೋತ್ರದವನು. ಮಧುರನು ತನ್ನನ್ನು ‘ಭಾರತೀ ಮಾನಸ ಕೇಳಿ ರಾಜಹಂಸಂ ನೆಗೞ್ದನವನಿಯೊಳ್ ವಾಜಿ ವಂಶಾವತಂಸಂ’ ಎಂದು ಪರಿಚಯಿಸಿಕೊಂಡಿದ್ದಾನೆ. [ಧರ್ಮನಾಥ ಪುರಾಣಂ, ೧-೭೯: (ಸಂ) ಯಂ.ಸಿ. ಪದ್ಮನಾಭಶರ್ಮ, ಜಿ. ಬ್ರಹ್ಮಪ್ಪ (೧೯೫೫) ಪು. ೧೨]. ಆಚಣ್ಣ ಕವಿಯೂ ಸಹ ಭಾರದ್ವಾಜ ಗೋತ್ರ ಸಂಜಾತನೆಂಬುದು ನೆನಪಾಗುತ್ತದೆ. [ಭಾರದ್ವಾಜ ಪವಿತ್ರಗೋತ್ರ ತಿಳಕಂ : ವರ್ಧಮಾನ ಪುರಾಣಂ, ೧-೨೪ : (ಸಂ.) ತ.ಸು. ಶಾಮರಾಯ, ಪ. ನಾಗರಾಜಯ್ಯ (೧೯೭೫) ಪು. ೬.]

ಅಜೈನ ವಾಜಿವಂಶ

ಇದುವರೆಗಿನ ವಾಜಿವಂಶಜರ ಇತಿವೃತ್ತವನ್ನು ಗಮನಿಸಿ ಈ ಕುಲವು ಶುದ್ಧಾಂಗವಾಗಿ ಒಂದು ಜೈನಮನೆತನವೆಂದು ತೀರ್ಮಾನಿಸುವುದಕೆ ಮನಸ್ಸು ಮೂಡುವುದು ಸಹಜ. ಆದರೆ ಶಾಸನಗಲಲ್ಲಿ, ಜೈನೇತರ ಮಹಾಪುರುಷರು ಹಲವರು ಈ ವಾಜಿವಂಶ ಸಂಜಾತರೆಂಬ ವಿವರಗಳೂ ಇವೆ. ಇವುಗಳಲ್ಲಿ ಕೆಲವು ಅಜೈನ ವಾಜಿವಂಶ ತಿಳಕರನ್ನು ಪರಿಚಯಿಸುತ್ತೇನೆ.

ಈ ಸಂಪ್ರಬಂಧದಲ್ಲಿ ಈಗಾಗಲೇ ಪ್ರಸ್ತಾಪಿಸಲಾದ ರೋಣಶಾಸನೋಕ್ತನಾದ ಪಂಪಯ್ಯನನ್ನು ಕುರಿತು ವಿವೇಚಿಸುವಾಗ, ಆತನು ಜೈನ ಶಾಖೆಗೆ ಮತ್ತು ದಲ್ಲಪನ ಪೀಳಿಗೆಗೆ ಆದಿಪುರುಷ ಇರಬಹುದೆಂಬ ಸಂದೇಹದ ನೆಲೆಯ ಮಾತುಗಳನ್ನು ಬಳಸಲಾಗಿದೆ. ಏಕೆಂದರೆ ಆತನ ಜಾತಿ-ಧರ್ಮ ಸಂಬಂಧವಾದ ಸೂಚನೆಗಳು ಖಚಿತವಾಗಿಲ್ಲ. ಜೈನ ಶಾಖೆಯ ವಾಜಿವಂಶ ಇರುವಂತೆಯೇ ಶೈವಶಾಖೆಯ ವಾಜಿವಂಶವೂ ಶಾಸನೋಕ್ತವಾಗಿದೆ. ಅವುಗಳಲ್ಲಿ ಪ್ರಾಚೀನವಾದದ್ದು ಮಹಾರಾಷ್ಟ್ರದ ನಾಂದೇಡು ಜಿಲ್ಲೆಯ ದೇಗಲೂರು ತಾಲ್ಲೂಕಿಗೆ ಸೇರಿದ ತಡಕಲ್ಲು ಶಾಸನ. ಸಕ್ಕರೆಗೆ – ೮೦ ರೂಳಗಣ ತಡಕಲ್ಲು ಗ್ರಾಮವನ್ನು ಕ್ರಿ.ಶ. ೧೦೪೯ ರಲ್ಲಿ ಚಾಳುಕ್ಯ ಚಕ್ರವರ್ತಿ ತ್ರೈಳೋಕ್ಯಮಲ್ಲನು ತನ್ನ ಸೇನಾಧಿಪತಿ ದಂಡನಾಯಕ ನಾಗವರ್ಮಯ್ಯನಿಗೆ ವಿವಾಹ ಮಾಡಿ ಧಾರಾಪೂರ್ವಕವಾಗಿ ದಾನ ಕೊಟ್ಟನು. ಆ ನಾಗವರ್ಮಯ್ಯನ ಹಿರಿಯರು ಪ್ರಖ್ಯಾತರು.ಆ ಮಹಾನುಭಾವರ ವಂಶಾವತಾರವೆಂತೆಂದೊಡೆ:

            ಸರಸೀರುಹೋದರನುದರಾಂ
ಬುರುಹದೊಳೊಗೆದಜನ ಕುಲದೊಳೆಗೆದರ್ ವಿಶ್ವಂ
ಭರೆಗೆ ವಶಿಷ್ಠರ್ ಮೈತ್ರಾ
ವರುಣರ್ ಕೌಂಡಿಣ್ಯರೆಂಬ ಮುನಿಗಣ ಮುಖ್ಯರ್
|| ೭ ||

            ಅವರೊಳ್ಕೌಂಡಿಣ್ಯಗೋತ್ರ ಪ್ರಭವರವನಿಪಾಳಾರ್ಚ್ಚಿತರ್ವ್ವೇದವೇದಾಂ
ಗವಿದರ್ಪ್ರಾರಬ್ಧಹೋಮಾನಳಜ ಬಹಳಧೂಮಾವೃತಾಶಾಂತರಾಳ
ಪ್ರಸರ್ಸ್ವಾಧ್ಯಾಯಶೀಳರ್ಸ್ಸಲೆ ಪಲರವನೀಖ್ಯಾತ ತದ್ವಾಜಿವಂಶಾ
ರ್ಣ್ನವದೊಳ್ ಶೀತಾಂಶುವೋಲ್ಪುಟ್ಟಿದನಭಿನುತನದಿತ್ಯನಾದಿತ್ಯತೇಜಂ
|| ೮ ||

            ಶ್ರೀಗಂ ರಾಜ್ಯವಿಭೂತಿಗ ನೆಲೆಯೆನಿಪ್ಪಾತ್ಮೀಯ ಮಾಣಿಕ್ಯ ಭಾಂ
ಣ್ಡಾಗಾರಂ ಮೊದಲಾಗೆ ಮಿಕ್ಕ ಬೆಸನಂ ತ್ರೈಳೋಕ್ಯಮಲ್ಲಂ ಜಯ
ಶ್ರೀಗೇಹಂ ಕುಡೆ ಪೆತ್ತ ಶೌಚಗುಣಿದಕ್ಷಂ ಸ್ವಾಮಿಭಕ್ತಂ ಯತ
ಶ್ರೀಗಾವಾಸಮೆನಲ್ಕೆ ಸಂದ ನರರಾರ್ ಶ್ರೀ ನಾಗವರ್ಮ್ಮಂಬರಂ
|| ೧೨ ||

            ಎನಗೀತಂ ಯುದ್ಧದೊಳ್ ದಕ್ಷಿಣವಿಜಯಭುಜಾದಣ್ಡಮೆಂದರ್ಕ್ಕಱೆಂದಾ
ಳ್ದನೃಪಂ ತ್ರೈಳೋಕ್ಯಮಲ್ಲಂ ಕುಡೆ ಚಮರರುಹಚ್ಛತ್ರತೂರ್ಯ್ಯವಳೀ ನಿ
ಸ್ವನ ನಾನಾ ಕೇತನಾಳಂಕೃತಮನಸಮದಣ್ಡಾಧಿ ನಾಥತ್ವಮಂ ಪೆ
ತ್ತನಜೇಯಂ ನಾಗವರ್ಮ್ಮಂ ಸ್ಫುರದಸಿದಳಿತೋಗ್ರಾಸುಹಿರ್ನ್ನಗವರ್ಮ್ಮಂ
|| ೧೩ ||

[ಈ ಶಾಸನದ ಒಕ್ಕಣೆಯ ನಿರೂಪಣೆಯಲ್ಲಿ ಉದ್ದಕ್ಕೂ ಲಕ್ಕುಂಡಿಯ ಶಾಸನದ ಪಾಠವನ್ನೂ, ದಲ್ಲಪ-ನಾಗದೇವರೊಂದಿಗೆ ಸಮೀಕರಣ ಧ್ವನಿ ಇರುವುದನ್ನೂ ತೌಲನಿಕ ಅಧ್ಯಯನದಿಂದ ಮನಗಾಣಬಹುದು. ದಲ್ಲಪನು ತನ್ನ ಬಲ್ಲಾಳ್ತನದಿಂದ ಅಹವಮಲ್ಲ (ತೈಲಪ) ನ ಭುಜಾದಂಡನೆನಿಸಿದ್ದನು; ಈ ನಾಗವರ್ಮನು ತ್ರೈಳೋಕ್ಯಮಲ್ಲನ ವಿಜಯಭುಜಾ ದಂಡವೆನಿಸಿದ್ದಾನೆ.]

ಕೌಂಡಿಣ್ಯಗೋತ್ರ ಪ್ರಭಾವದವರು ವಾಜಿವಂಶಾರ್ಣವದಲ್ಲಿ ಹುಟ್ಟಿದರು. ಆದಿತ್ಯನೂ, ಆತನ ಮಗ ಗೋವಿಂದನೂ, ಆತನ ಸೂನು ನಾಗಾದಿತ್ಯನೂ, ಆತನ ಅನುಜರಾದ ಕಾಳಿದಾಸ, ನಾರಾಯಣ, ಅಯ್ಚಪಾರ್ಯರೂ ಖ್ಯಾತನಾಮರು. ಇವರಲ್ಲಿ ನಾರಾಯಣ ಮತ್ತು ಸಾಯಿಕಬ್ಬೆ ದಂಪತಿಗಳಿಗೆ ನಾಗವರ್ಮ ಮತ್ತು ಮಾದಿರಾಜರು ಮಗಂದಿರು. ದಕ್ಷನೂ ಸ್ವಾಮಿಭಕ್ತನೂ ಅಜೇಯನೂ ಆದ ನಾಗವರ್ಮನು ಚಾಳುಕ್ಯ ದಂಡಾಧೀನಾಥನಾಗಿ ಯುದ್ಧಗಳಲ್ಲಿ ತ್ರೈಳೋಕ್ಯಮಲ್ಲನಿಗೆ ದಕ್ಷಿಣ ವಿಜಯ ಭುಜಾದಂಡವೆನಿಸಿದ್ದನು. ವಾಜಿ ವಂಶಾಂಬರ ಹಿಮಕಿರಣನಾದ ನಾಗವರ್ಮನು ಭೃತ ಚಿಂತಾಮಣಿಯಾಗಿದ್ದನು. ಈತನ ಮಗ ನಾರಾಯಣ ೨ ವಾಜಿ ಕುಳತಿಳಕನಾದ ನಾಗವರ್ಮನು, ಮಹಾಪ್ರಚಣ್ಡ ದಣ್ಣನಾಯಕನಾಗಿದ್ದುಲ್ಲದೆ, ಮಹಾಸಾಮಾನ್ತಾಧಿ ಪತಿಯೂ ಆಗಿದ್ದನು. ಈತನು ಕಾಳಾಮುಖ ಶೈವರುಗಳಾದ ಶ್ರೀವಾಗೇಶ್ವರ ಪಂಡಿತರ ಭಕ್ತನಾಗಿದ್ದನು. ತ್ರ್ಯಳೋಕ್ಯಮಲ್ಲ ಒಂದನೆಯ ಸೋಮೇಶ್ವರ ಚಕ್ರವರ್ತಿಗೆ ನಾಗವರ್ಮ್ಮನು ಸವಲಕ್ಕೆ (ಸಪಾದಲಕ್ಷ ಕ್ಷಿತಿಪ್ರದೇಶ ೧ ೧/೪ ಲಕ್ಷ ಹಳ್ಲಿಗಳ ವಲಯ) ಮತ್ತು ಸೇವಣದೇಶಗಳನ್ನು ಸ್ವಾಧೀನಪಡಿಸಿಕೊಟ್ಟನು. ನಾಗವರ್ಮನು ತನ್ನ ತಂದೆಗೆ ನಾರಾಯಣ ದೇವರನ್ನೂ, ತಾಯಿಗೆ ಅಆದಿತ್ಯ ದೇವರನ್ನೂ, ಕಿಱೆಯಯ್ಯನಿಗೆ (ಚಿಕ್ಕಪ್ಪ) ಆಯ್ಚೇಶ್ವರ ದೇವರನ್ನೂ, ತನ್ನ ಹೆಸರಲ್ಲಿ ನಾಗೇಶ್ವರ ದೇವರನ್ನೂ, ತನ್ನ ಹೆಂಡತಿಯ ಹೆಸರಲ್ಲಿ ಸರಸ್ವತಿ ಮಂಟಪವನ್ನೂ, ಮಗನಿಗೆ ನಾಗೇಶ್ವರ ದೇವರನ್ನೂ, ತಂಗಿಗೆ ಮಲ್ಲಿಕಾರ್ಜುನ ದೇವರನ್ನೂ, ಬೇರೆ ಬೇರೆ ದೇವಾಲಯಗಳನ್ನೂ ಮಾಡಿಸಿದನು. ಈತನ ಸಾಹಸವನ್ನು ಶಾಸನ ತುಂಬ ಪರಿಣಾಮಕಾರಿಯಾಗಿ ಕಂಡರಿಸಿದೆ. ಮಾದರಿಗಾಗಿ ಮೂರು ಪದ್ಯಗಳನ್ನು ಉದಾಹರಿಸುತ್ತೇನೆ :

            ಕರಮಿದಸಾಧ್ಯವೆಂಬ ಕೊಳನಂ ಭುಜಗರ್ಬ್ಬದೆ ಕೊಂಡನುಗ್ರಸಂ
ಗರಜಯಿ ನಾಗವರ್ಮ್ಮವಿಭು ಸಾಧಿಸಿದಂ ಸವಲಕ್ಕೆ ವಿಂದ್ಯಮಂ
ಪರಿವರಿದೆಯ್ದಿ ವಿಂಧ್ಯಪತಿಮಲ್ಲನನಾಜಿಯೊಳಾಂತು ಕೊಂದನಾ
ರ್ದ್ದುರಿಪಿದನೊಂದೆ ಕೊಳ್ಳಿಯೊಳೆ ಸೇವುಣದೇಶಮನೇಂ ಪ್ರತಾಪಿಯೋ
|| ೧೪ ||

            ಬಗೆದೊಂ ಪೆಳದೊಡೇನು ವೈರಿನೃಪಸರ್ಬ್ಬಸ್ವಂಗಳಂ ತಂದು ಚ
ಕ್ರಿಗೆ ಗೊಟ್ಟಂಕದ ನಾಗವರ್ಮ್ಮನಳವಂ ಬೆಟ್ಟಾದವೇಂ ಬೊನ್ನರಾ
ಶಿಗಳೇಂ ಪೇಳವೇ ರತ್ನಭೂಷಣಂಗಳ್ ಪೇಳವೇ ವಾಜಿರಾ
ಜಿಗಳೇಂ ಪೇಳವೇ ಗಂಧಸಿಂಧುರಘಟಾನೀಕಂಗಳೇಂ ಪೇಳವೇ
|| ೧೬ ||

            ಮನಮೊಲ್ದಾರ್ಗ್ಗೀಯನಾರಿಂ ಪೊಗಳಿಸನವನೀ ಮಂಡನಂ ವೀರಲಕ್ಷ್ಮೀ
ಸ್ತನಹಾರಂ ವಾಜಿ ವಂಶಾಂಬರ ಹಿಮಕಿರಣಂ ಸತ್ಯರಾಧೇಯನೌದಾ
ರ್ಯ್ಯನಿಧಾನಂ ಭೃತ್ಯ ಚಿಂತಾಮಣಿಯೆನಿಸಿದ ಪೆಂಪಿಂ ಯಶಃ ಶ್ರೀನದೀನ
ರ್ತ್ತನ ನಾನಾ ನಾಟ್ಯರಂಗೀಕೃತ ವಿಬುಧಯಶಃ ಪ್ರಾಂಗಣಂ ನಾಗವರ್ಮ್ಮಂ
|| ೧೭ ||

[Inscriptions from Nanded District, No. 3. 1047, Tadkhel, Deglur Taluk, pp. 5-11] ನಾಗದೇವನು ವಾಜಿಕುಳಕ್ಕೆ ಹೊಳೆಯುವ ಸೂರ್ಯ (ತೇಹೋಭಾಸ್ಕರ) ಆಗಿದ್ದನು. ಈ ನಾಗವರ್ಮನು ವಾಜಿವಂಶಾಂಬರಕ್ಕೆ ಚಂದ್ರನಾಗಿದ್ದನು: ಆತ ನನ್ನಿಮರಾರ್ಣವನು, ಈತ ಸತ್ಯ ರಾಧೇಯನು : ಇಬ್ಬರೂ ಮಹಾಶೂರರು.

ಅದೇ ನಾಂದೇಡು ಜಿಲ್ಲೆಯ ದೇಗಲೂರು ತಾಲ್ಲೂಕು ಬಿಮರಾ ಗ್ರಾಮದ ಶಾಸನದಲ್ಲಿ ಮತ್ತೊಂದು ಈ ವಾಜಿ ವಂಶಕ್ಕೆ ಸೇರಿದ ಕುಟುಂಬದ ಚಿತ್ರಣವಿದೆ. ತಡಕಲ್ಲು ಶಾಸನದಂತೆಯೇ ಈ ಬಿಮರಾದ ಶಾಸನದಲ್ಲೂ ಆರಂಭದಲ್ಲಿ ಚಾಳುಕ್ಯರ ವಂಶವೃಕ್ಷವನ್ನು ಕೊಟ್ತಿದೆ. ಅನಂತರ ಚಾಳುಕ್ಯಾಭರಣ ತ್ರಿಭುವನಮಲ್ಲದೇವ ಆರನೆಯ ವಿಕ್ರಮಾದಿತ್ಯನ ಆಳ್ವಿಕೆಯ ಕಟ್ಟ ಕಡೆಯ ಘಟ್ಟದಲ್ಲಿ ಇದ್ದ ವಾಜಿವಂಶದ ಕುಟುಂಬವನ್ನು ಪರಿಚಯಿಸಿದೆ. ಆ ಕಾಲದ ರೇವಣಯ್ಯನ ಮಗ, ವಾಜಿಕುಳಾಖಂಕಾರ ಮಧುಸೂಧನಭಟ್ಟ ಮತ್ತು ಗೋವಿಂದ ಕಬ್ಬೆಯರ ಮಗನಾದ ರೇವಣಯ್ಯನಾಯ್ಕನು ಉತ್ಕೃಷ್ಟ ವಾಜಿ ವಂಶೋದಯಾಚಳಕ್ಕೆ ದ್ಯುಮಣಿಯೆನಿಸಿದನು. ರೇವಣಯ್ಯನಾಯ್ಕನು ವಚಶ್ರೀವಧು ತೊಟ್ಟ ಮುದ್ರಿಕೆಯ ಪಕ್ಕದ ಕೇವಣದಂತೆ ಇದ್ದನು. ಈತನು ಪ್ರಭು ತ್ವದ ಕಲ್ಲಕುಂಬರಿ ಗ್ರಾಮದಲ್ಲಿ ಚಂದ್ರಶೇಖರನಾದ ಈಶ್ವರನನ್ನು ಪ್ರತಿಷ್ಠಿಸಿದನು.

ರೇವಣಯ್ಯನಾಯ್ಕ ಮತ್ತು ನಾಲಿಕಬ್ಬೆ ದಂಪತಿಗಳಿಗೆ ದೇವಪಾರ್ಯ, ಮಧುಸೂದನ, ನಾಗರಾಜ, ರಾಮದೇವ, ಗೋವಿಂದ ಎಂಬ ಅಯ್ವರು ಮಗಂದಿರು.

            ಅವರೊಳಗೆ ನಾಗರಾಜಂ
ನವೀನಮನಿವೆನಿಸಿ ಧರ್ಮ್ಮಪರನೆನಿಸಿ ಬುಧಾ
ರ್ಣವ ಚಂದ್ರನೆನಿಸಿ ವಾಜಿ
ಪ್ರವರೋತ್ತಮನೆನಿಸಿ ಧನ್ಯನೆನಿಸಿದನಲ್ತೆ                                             
|| ೨೯ ||

            ರೂಢಿಗೆ ಸಂದ ಶರ್ಮ್ಮಮೆನೆ ತನ್ನೆಯ ತಂದೆ ಚಿರ ಪ್ರತಿಷ್ಠೆಯಂ
ಮಾಡಿದ ರೇವನೇಶ್ವರ ನಿವಾಸಮನೊಪ್ಪಿರೆ ಮಾಡಿ ಕೂಡೆ ನಾ
ಡಾಡಿಗಳುಂಬಮಾದುದೆನೆ ಪೆರ್ಮ್ಮೆಯನಾರ್ಜ್ಜಸಿ ವಾಜಿ ವಂಶದ
ಚ್ಚಾಡುವಿನಂ ಜಸಂಬಡೆದನೆಂಬುದು ಧಾರಿಣಿ ನಾಗರಾಜನ (೦)    
 || ೩೨ ||

ಹೀಗೆ- ‘ವಾಜಿವಂಶ ಪ್ರಯುಕ್ತಾಶ್ರಯವಾದ ಖ್ಯಾತಿ ತನ್ನೊಳ್ ನಿಲೆ ಇಳಾ ಭಾಗದೊಳ್ ನೆಗಳ್ದ ನಾಗರಾಜ’ ನು ಮಾಡಿಸಿದ ರೇವಣೇಶ್ವರ ದೇವಾಲಯಕ್ಕೆ ನೃಪಾಂಗನೆ ಸುಗ್ಗಲ ದೇವಿಯ ಕ್ರಿ.ಶ. ೧೧೨೨-೨೩ ರಲ್ಲಿ ೧೫ ಮತ್ತರು ನೆಲವಿತ್ತಳು, ಅಮರಾವತೀ ಪುರವರೇಶ್ವರ ಮಹಾಮಂಡಳೇಶ್ವರ ಎಱೆಯಮರಸನು ನಾಗರಹಾಳ ಗ್ರಾಮವನ್ನು ಸರ್ವ್ವನಮಶ್ಯಮಾಗಿ ಬಿಟ್ಟನು.

[Inscriptions of Nanded District, No. 2,1122-23. Bimara, Deglur Taluk, pp. 38-45].

ಮೇಲ್ಕಂಡ ವಾಜಿ ವಂಶಜರು ಚಾಳುಕ್ಯ ಚಕ್ರಚರ್ತಿಗಳಲ್ಲಿ ಅಧಿಕಾರಿಗಳಾಗಿದ್ದ ವರು, ತಮ್ಮ ರಾಜನಿಷ್ಠೆ ಹಾಗೂ ಕ್ಷಾತ್ರೋಚಿತ ಯುದ್ಧ ನೈಪುಣ್ಯ ತೋರಿ ದೇಶ ಭಕ್ತಿಯನ್ನು ಪ್ರಕಟಿಸಿದವರು. ಇವರಲ್ಲದೆ ಇನ್ನೂ ಕೆಲವು ವಾಜಿ ವಂಶಜರು ಕಂಡು ಬರುತ್ತಾರೆ. ಅರಸೀಕೆರೆಯ ೭೧ನೆಯ ಶಾಸನವನ್ನು ಬರೆದಿರುವ ದೇವಪಾರ್ಯನೆಂಬುವನು ಲೋಕಸ್ತುತಿಗೆ ಪಾತ್ರವಾದ ವಾಜಿವಂಶಕ್ಕೆ ಸೇರಿದವನೆಂದು ತಿಳಿದುಬರುತ್ತದೆ:

            ಭುವನನುತ ವಾಜಿವಂಶೋ
ದ್ಭವಕರ ವಿಭು ಸೋಮನಾಥ ಪುತ್ರಂ ಪೇೞ್ದಂ
ಕವಿರಾಜಂ ಕಾಶ್ಯಪಗೋ
ತ್ರವರ್ಧನಂ ದೇವಪಾರ್ಯನೀ ಶಾಸನಮಂ
||

[ಎ.ಕ. ೫, ೭೧.೧೧೭೪. ಅರಸೀಕೆರೆ]. ಈತನು ತನ್ನನ್ನು ಕವಿರಾಜನೆಂದು ಕರೆದು ಕೊಂಡಿರುವವನಾದರೂ ಈತನ ಕಾವ್ಯಗಳ ವಿಚಾರ ಏನೇನೂ ತಿಳಿಯದು.

ಕಡೂರು ಶಾಸನದ ಕವಿ ನಾಗದೇವನು ತನ್ನನ್ನು ವಾಜಿ ವಂಶದ ಕಾಶ್ಯಪಗೋತ್ರ ವರ್ಧನನೆಂದೂ, ಹರಿಹರ – ಮಾಯಿದೇವಿಗಳ ಪುತ್ರನೆಂದೂ ನಿವೇದಿಸಿಕೊಂಡಿದ್ದಾನೆ:

            ಹರಿಹರ ಮಾಯಿದೇವಿಗಳ ಪುತ್ರನನಿಂದಿತ ವಾಜಿವಂಶ ಶೇ
ಖರನಕಳಂಕಕೀರ್ತಿ ಕಲಿಕಾಲ ಬೃಹಸ್ಪತಿ ಸೋಮನಾಥ ಶಂ
ಕರನನುಜಂ ಬುಧರ್ ಪೋಗಱೀ ನಿರ್ಮಿಸಿದಂ ಕವಿನಾಗದೇವನೀ
ಸ್ಥಿರತರಮಪ್ಪ ಶಾಸನಮನುತ್ತಮ ಕಾಶ್ಯಪಗೋತ್ರ ವರ್ಧನಂ
||

[ಎ.ಕ.೬, ಕಡೂರು ೯೫ ಕ್ರಿ.ಶ. ೧೨೨೪ : ಕರ್ಣಾಟಕ ಕವಿಚರಿತೆ, ಸಂಪುಟ-೧ (೧೯೬೩) ಪು. ೪೦೦.] ನಾಗದೇವಕವಿ ಶೈವಾಸ್ಮಾರ್ತನೆಂದು ತೋರುತ್ತದೆ.

ಇದೇ ರೀತಿ ಇನ್ನೂ ವಾಜಿ ವಂಶೋಲ್ಲೇಖಗಳನ್ನು ಉದಾಹರಿಸಬಹುದು

೧. ಕ್ರಿ.ಶ. ೧೦೭೯ ರಲ್ಲಿ ಮಾಚಿರಾಜ (ಮಾಚಿ ಪ್ರಭು) ನೆಂಬ ದಂಡಾಧಿಕಾರಿ ವಾಜಿ ವಂಶ ಖ್ಯಾತನಾಗಿದ್ದನು.

೨. ಬ್ರಹ್ಮವಂಶೋದ್ಭವನುಂ ವಾಜಿಕುಳಾಂಬರರಾಜ ಚಲದಂಕರಾಮನು ಶ್ರೀಮಾನ್ ನಾಳ್ಪ್ರಭು ದುಗ್ಗತಿಯರೊಡೆಯ ಬ್ರಹ್ಮ ದೇವಯ್ಯ ನಾಕಯರು [ಸೌ.ಇ.ಇ. ೯-೧, ೨೧೫.೧೧೨೬. ದುಗ್ಗವತ್ತಿ. (ಬಳ್ಳಾರಿಜಿ. / ಹರಪನಹಳ್ಳಿ ತಾ.) ಪು. ೨೧೮].

೩. ಶ್ರೀಮನ್ ಮಹಾ ಪ್ರಧಾನಂ ರಾಯದಂಡಾಧಿಕಾರಿ ಚವುಡಿ ಸೆಟ್ಟಿಯರ ಶ್ರೀಕರಣ ವಾಜಿವಂಸಲಲಾಮ ಹಗರಟ್ಟಗೆಯ ಹರಿಯಣ್ನಂಗಳ ಮಗಂ ಸಿರಿಪಯ್ಯನು ಧರ್ಮಕಥಾಸಂಗವ ಮಾಡಿದ ಸಂಗತಿ ಶಾಸನದಲ್ಲಿದೆ [ಸೌ.ಇ.ಇ. ೧೫, ೧೮೮.೧೨೫೧. ಸಾಲವಾಡಿಗಿ (ಬಿಜಾಪುರ ಜಿ / ಬಾಗೇವಾಡಿತಾ) ಪು. ೨೩೧. ಸಾಲು : ೨೫ – ೨೮]

೪. ಹೊಯ್ಸಳ ಇಮ್ಮಾಡಿ ವೀರನರಸಿಂಹನಲ್ಲಿ ಮಹಾಪ್ರಧಾನನೂ ದಂಡನಾಯಕನೂ ಆಗಿದ್ದ ಶೈವ ಬ್ರಾಹ್ಮಣ ಅಮಿತಯ್ಯನ ಪ್ರಶಸ್ತಿ ಸಹಿತ ಪರಿಚಯ ಶಾಸನೋಕ್ತವಾಗಿದೆ: ಮಹಾಪ್ರಚಂಡ ದಂಡನಾಥ ಲಕ್ಷ್ಮೀಧರದೇವ ವೀರಲಕ್ಷ್ಮೀ ವಿಳಾಸಾವಾಸ ಪ್ರಧಾನ ಕರಿಕಳಭ ಯೂಥನಾಥ ಶ್ರೀಮದಮರೇಶ್ವರದೇವರ ಕೀರ್ತ್ತಿನರ್ತ್ತಕೀ ನರ್ತ್ತನ ವಿಶಾಳ ರಂಗ ಸಕಳಕುಳ ರಾಜಿತ ವಾಜಿವಂಶಚೂಡಾಮಣಿ ವಾಮರಾಜ ಪ್ರಿಯ ತನೂಜಾತ ರೂಪು ರೇಖೆ ಧಾಪನೆ ಬಯ್ಸಿಕೆ ತೊಡೆ ಮಡಕಯ್ದನಿಯೆಂಬ ಚದಾಯತಿಕೆ ಗಾಯತಿಕೆ ವಡೆದಾರೂಢ ವಿದ್ಯಾವಿಳಾಸ ………. [ಸೌ.ಇ.ಇ. ೯-೧, ೩೪೩.೧೨೨೬. ಬೆಣ್ಗಿಕಲ್ಲು (ಬಳ್ಳಾರಿಜಿ / ಕೂಡ್ಲಿಗಿ ತಾ) ಪು. ೩೬೨-೬೪]

ತೀರ್ಮಾನಗಳು

ವಾಜಿ ವಂಶದ ಪ್ರಸ್ತಾಪ ಹಲವು ಶಾಸನಗಳಲ್ಲಿದೆ, ಕಾವ್ಯಗಳಲ್ಲಿದೆ, ಕಾವ್ಯಗಳಲ್ಲಿದೆ, ಇವೆಲ್ಲ ಒಂದೇ ಕಾಲಘಟ್ಟದ ಚೌಕಟ್ಟಿಗೆ ನಿಲ್ಲುವುದಿಲ್ಲ. ಇವುಗಳ ಪರಸ್ಪರ ಸಂಬಂಧ ಸ್ಥೂಲವಾಗಿ ತಿಳಿದುಬರುತ್ತದೆ. ಸೂಕ್ಷ್ಮವಾದ ಅಧ್ಯಯನಕ್ಕೆ ಇಳಿದಾಗ ಕೆಲವು ಕಡೆ ಸ್ಪಷ್ಟವಾಗುವುದಿಲ್ಲ. ಈ ವಾಜಿ ವಂಶದಲ್ಲಿ ಕೌಂಡಿನುಅಗೋತ್ರ, ಕಾಶ್ಯಪಗೋತ್ರ, ಭಾರದ್ವಾಜಗೋತ್ರ, ಮಾಂಧಾತಗೋತ್ರ – ಎಂಬ ಗೋತ್ರಗಳ ಉಲ್ಲೇಖಗಳಿವೆ. ವಾಜಿ ವಂಶೇತರ ವಂಶಗಳಲ್ಲೀಯೂ ಈ ಗೋತ್ರಗಳಿದ್ದುವು. ಜನ್ನ ಕವಿ ತಾನು ಕಮ್ಮೆ ವಂಶದ ಕಾಶ್ಯಪ ಗೋತ್ರದವನೆಂದು ಹೇಳಿಕೊಂಡಿದ್ದಾನೆ. [ಅನಂತನಾಥ ಪುರಾಣಂ, ೧-೫೨: (ಸಂ) ಬಿ.ಬಿ. ಮಹೀಶವಾಡಿ (೧೯೭೫) ಪು. ೧೨.] ಈ ಸಂಪ್ರಬಂಧದ ಪ್ರಾರಂಭದಲ್ಲಿ ವಾಜಿ ವಂಶದೊಳಗೆ ಲೋಕ ವಿಖ್ಯಾತರಾದ ಜೈನ ಮತಾವಲಂಗಳನ್ನು ಪರಿಚಯಿಸಿದೆ; ಇದರ ಉತ್ತರಾರ್ಧದಲ್ಲಿ ಬ್ರಾಹ್ಮಣ -ಶೈವ ಮತಾವಲಂಬಿಗಳನ್ನು ಪರಿಚಯಿಸಿದೆ. ಬ್ರಾಹ್ಮಣ ಕವಿಗಳಲ್ಲಿ ಒಬ್ಬನೆಂದು ಭಾವಿಸ ಲಾಗಿರುವ ಚಂದ್ರರಾಜನು (ಸು. ೧೦೨೫) ವಾಜಿ ಗೋತ್ರಕ್ಕೆ ಸೇರಿದವನು. ಮದನ ತಿಲಕವೆಂಬ ಕಾವ್ಯದಲ್ಲಿ ಚಂದ್ರರಾಜನು ತನ್ನನ್ನು ವಿಪ್ರಕುಲಲಾಮನೆಂದೂ ದ್ವಿಜಾಂಭೋಧಿರಾಜನೆಂದೂ, ಮನಮುನೀಂದ್ರಾಚಾರ ನೆಂದೂ ಪರಿಚಯಿಸಿ ಕೊಂಡಿದ್ದಾನೆ.

ಶಾಸನಗಳ ಸಹಾಯದಿಂದ ಉಪಲಬ್ಧವಾಗಿರುವ ಇದುವರೆಗಿನ ವಿವರಗಳನ್ನು ಹರಳುಗೊಳಿಸಿ ಕೆಲವು ತೀರ್ಮಾನಗಳಿಗೆ ತಲಪಬಹುದು.

೧. ವಾಜಿವಂಶವು ಮೂಲಯಃ ಶೈವ ಸ್ಮಾರ್ತ ಜಾತಿಯಾಗಿದೆ.

೨. ಹತ್ತನೆಯ ಶತಮಾನದ ಆರಂಭದಿಂದ ವಾಜಿ ವಂಶದ ದಾಖಲೆಗಳು ದೊರೆಯುತ್ತವೆ.

೩. ವಾಜಿ ವಂಶದ ಮೂಲ ಸೆಲೆ, ತಲಕಾವೇರಿ ರೋಣದ ಪರಿಸರವೆಂದು ತಿಳಿಯಬಹುದು.

೪. ವೆಂಗಿ ಮಂಡಲ, ಗಂಗವಾಡಿ, ಸಾಂತಳಿಗೆ, ಮಾನ್ಯಖೇಟ, ಮಾಸವಾಡಿ, ರೋಣ, ನಾಂದೇಡು ಜಿಲ್ಲೆ – ಹೀಗೆ ಒಂದು ವಿಶಾಲ ಭೌಗೋಳಿಕ ಹರಹಿನಲ್ಲಿ ವಾಜಿವ್ಚಂಶದ ಚಿಗುರು ಪಲ್ಲವಿಸಿ ದಾಂಗುಡಿಯಿಟ್ಟಿದೆ.

೫. ರಾಷ್ಟ್ರಕೂಟರು, ಚಾಳುಕ್ಯರು, ಕಲಚುರ್ಯರು, ಹೊಯ್ಸಳರು ಮತ್ತು ವಿಜಯನಗರ ಸಾಮ್ರಾಜ್ಯಗಳವರೆಗೆ ವಾಜಿವಂಶದ ರಾಜಕೀಯ ಪಾತ್ರ ಕಂಡು ಬರುತ್ತದೆ.

೬. ವಾಜಿ ವಂಶದ ಅನೇಕ ಗಣ್ಯಪುರುಷರ ಧಾರ್ಮಿಕ ಚಟುವಟಿಕೆಯೊಂದಿಗೆ ಅವರಿಗಿದ್ದ ಸಾಮಾಜಿಕ ಸ್ಥಾನಮಾನದ ಸ್ವರೂಪವೂ ತಿಳಿದು ಬರುತ್ತದೆ.

೭. ವಾಜಿ ವಂಶಜರು ಅನೇಕ ದೇವಾಲಯ ಕಟ್ಟಿಸಿದ್ದಾರೆ.

೮. ವಾಜಿ ವಂಶದಲ್ಲಿ ಚಮೂಪತಿಗಳೂ, ಮಂತ್ರಿಗಳೂ, ಭಂಡಾರಿಗಳೂ, ಬಾಹತ್ತರನಿಯೋಗ ಅಧಿಪತಿಗಳೂ ಕಂಡು ಬರುತ್ತಾರೆ. ಮತ್ತು ಅವರೆಲ್ಲ ರಣರಂಗದಲ್ಲಿ ಮಹಾ ಸಾಹಸ ವೀರಕಲಿಗಳು; ವಾಜಿವಂಶಜರು ಸಾಮಂತ ಅಥವಾ ಮಾಡಲಿಕರಾಗಿ ರಾಜ್ಯ ಆಳಲಿಲ್ಲ.

೯. ವಾಜಿ ವಂಶದವರು ಘನ ವಿದ್ವಾಂಸರೂ ಹೌದು. ಅವರ ಕಲಾಪ್ರೇಮ ಮತ್ತು ಸಾಹಿತ್ಯ ಪ್ರೇಮವನ್ನು ನಿರೂಪಿಸುವ ದಾಖಲೆಗಳಿವೆ. ಅತ್ತಿಮಬ್ಬೆಯ ಎರಡೂ ಕಡೆಯ ಮನೆತನ ಕವಿಗಳಿಗೂ, ಪಂಡಿತವರಿಗೂ ತವರು ಮನೆಯಾಗಿತ್ತು.

೧೦. ವಾಜಿ ವಂಶದ ಮಧುರ ಕವಿಯಂತೂ ಕನ್ನಡದ ಒಬ್ಬ ಮಹತ್ವದ ಕವಿಯಾಗಿ ಕಾವ್ಯ, ಶಾಸನ ಮತ್ತು ಗೊಮ್ಮಟ ಸ್ತುತಿ ಅಷ್ಟಕವನ್ನು ಬರೆದಿದ್ದಾನೆ; ಕನ್ನಡ ಸಾಹಿತ್ಯದಲ್ಲಿ ಗಣ್ಯಾನಾಗಿದ್ದಾನೆ.

೧೧. ವಾಜಿ ವಂಶದಲ್ಲಿ ಕಾಶ್ಯಪ ಗೋತ್ರ, ಕೌಂಡಿನ್ಯಗೋತ್ರ, ಭಾರದ್ಚಾಜ ಗೋತ್ರ, ಹಾರೀತ ಗೋತ್ರ, ಸಾಂಖ್ಯಾಯನ ಗೋತ್ರ ಮತ್ತು ಮಾಧಾಂತ ಗೋತ್ರ – ಎಂಬ ಆರು ಗೋತ್ರಗಳಿದ್ದುವು. ಇವುಗಳಲ್ಲಿ ಪ್ರಸಾರದ ದೃಷ್ಟಿಯಿಂದ ಕೌಂಡಿನ್ಯಗೋತ್ರದವರು ವ್ಯಾಪಕವಾಗಿ ಕಾಣುತ್ತಾರೆ. ಕೌಂಡಿನ್ಯ ಗೋತ್ರದ ಪ್ರಾಚೀನತಮ ಉಲ್ಲೇಖನವು ಬನವಾಸಿಯ ಕದಂಬರ ಶಿವಸ್ಕಂದವರ್ಮನ, ಕ್ರಿ.ಶ. ೩-೪ ನೆಯ ಶತಮಾನದ, ಮಳವಳ್ಳಿ (ಪ್ರಾಕೃತ) ಶಾಸನದಲ್ಲಿಯೇ ಸಿಗುತ್ತದೆ. [Corpus of Kadamba Inscriptions (1985). No. 1.3.4 C.A.D. pp.3-7] ಹೊಯ್ಸಳ ರಾಜ್ಯದ ಪ್ರಸಿದ್ಧ ಸೇನಾನಿಗಳಾದ ಗಂಗರಾಜ (ಎ.ಕ.೧೧. ೮೨ (೭೩) ೧೧೧೮ ಪು. ೬೪) ಬೊಪ್ಪದೇವ ಪು. ೩೫೫. ಎ.ಕ. ೯ (೧೯೯೦) ೩೮೯ (೫ ಬೇ. ೧೨೪) ೧೧೩೩ ಬಸ್ತಿಹಳ್ಳಿ (ಹಾಜಿ) ಬೇ. (ಅದೇ : ೫೩೨ (೩೮೪) ೧೨ ಶ.ಪು. ೩೨೭) ಏಚಿರಾಜ (ಅದೇ:) ಡಾಕರಸ ಮತ್ತು ನಾಕಣದಂಡನಾಯಕ, ಮಱೆಯಾನೆ ದಂಡನಾಯಕ, ಭರತಿಮಯ್ಯ ದಂಡನಾಯಕ [ಎ.ಕ. ೭(೧೯೭೯) ನಾನಂ ೭೨ (೪ ನಾಮಂ ೩೨) ೧೦೪೮-೧೧೦೩ ಮತ್ತು ೧೧೮೨-೮೩ ಮತ್ತು ಅಳೀಸಂದ್ರ (ಮಂಡ್ಯ ಜಿಲ್ಲೆ / ನಾಮಂತಾ) ಪು. ೫೬-೫೭] ಇವರೆಲ್ಲ ಕೌಂಡಿನ್ಯ ಗೋತ್ರಜರು. ಪ್ರಯಾಗ ಮತ್ತು ಕೌಶಾಂಬಿ (ಕೌಸಮದ) ಹತ್ತಿರ ಇರುವ ಪಭೋಸಾ ಎಂಬಲ್ಲಿನ ಎರಡು ಗುಹೆಗಳಲ್ಲಿ ಕ್ರಿ.ಪೂ. ಎರಡನೆಯ ಶತಮಾನದ ಲಿಪಿಯ ಲೇಖವಿದೆ; ಈ ಶಾಸನದಲ್ಲಿ ‘ಅಹಿಚ್ಛತ್ರದ ಆಷಾಢಸೇನನು ಕಾಶ್ಯಪೀಯ ಅರ್ಹಂತನಿಗಾಗಿ ಈ ಗುಹೆಗಳನ್ನು ದಾನಮಾಜಿದನು’ – ಎಂದಿದೆ. ವರ್ಧಮಾನ ಮಾಹಾವೀರನು ಕಾಶ್ಯಪಗೋತ್ರದವ ನಾಗಿದ್ದನು. ಮಹಾವೀರನ ಶಿಷ್ಯ ಪರಂಪರೆಯ ಮುನಿಗಳು ಕಾಶ್ಯಪೀಯ ಅರ್ಹಂತರು [ಡಾ. ಹೀರಾ ಲಾಲ್ ಜೈನ್: ೧೯೭೧ : ೩೮೨]. ಮಹಾವಿರನ ತಂದೆ ಸಿದ್ಧಾರ್ಥನು ಕಾಶ್ಯಪಗೋತ್ರೀಯನು ಮತ್ತು ತಾಯಿ ಪ್ರಿಯಕಾರಿಣಿಯು ವಾಸಿಷ್ಠ ಗೋತ್ರದವಳು, ಈಕೆ ಚೇಟಕರಾಜನ ಮಗಳು [ಡಾ. ಕಮಲಾ ಹಂಪನಾ : ಅನೇಕಾಂತವಾದ : ೧೯೮೨]:

ದುರಿತಕುಳಾಂತಕಂ ಚರಮತೀರ್ತ್ಥಕರಂ ವಿಭುವೀರನಾಥನೀ ಧರೆ ತಿಳಿವಂತು ಹೇಯಮಿದಹೆ …. ದುಸಮಸ್ತತತ್ವಮಂ ಪರಿವಿಡಿಯಿಂದೆ ಪೇಳ್ದು ಜನಮಂ ವರಮೋಕ್ಷ ಪಥಕ್ಕೆತಿರ್ದ್ದಿ ಬಿತ್ತರಿಸಿದ ಮುಕ್ತಿ ಕಾನ್ತೆಯ ಲತಾಂಗಮನಪ್ಪಿದ ನಿಂದ್ರ ವಂದಿತಂ | ಆ ನೆಗಳ್ದಂತೆ ಕಶ್ಯಪನಿನಾದುದು ಕಾಶ್ಯಪಗೋತ್ರಮೀಜನಂ ಜ್ಞಾನ ನಿಧಾನ ನಾಜೀನ ಸದ್ದುಣ ನಾಯಕರಗ್ರಿಮಾವಧಿಜ್ಞಾನಿಗಳಪ್ಪಗೌತಮ ಮುನಿ [ಎ.ಕ೮-೨ (೧೯೦೨) ಸೊರಬ. ೨೬೨.೧೦೭೫. ಕುಪ್ಪಟೂರು (ಶಿಜಿ/ಸೊರಬತಾ) ಪು. ೧೧೦. ಸಾಲು : ೩೧-೩೩]. ಈ ರೀತಿಯಲ್ಲಿ ಇಲ್ಲಿ ಬರುವ ಗೋತ್ರಗಳು ವೈದಿಕರಲ್ಲೂ, ಜೈನರಲ್ಲೂ ಪ್ರಾಚೀನ ಕಾಲದಿಂದ ಇವೆ.

೧೨. ವಾಜಿವಂಶವು ಪ್ರಧಾನವಾಗಿ ಮತ್ತು ಮೂಲತಃ ಬ್ರಾಹ್ಮಣ ಮನೆತನ. ಆದರೆ ಅದರಲ್ಲಿ ಎರಡು ಶಾಖೆಗಳಾದವು; ಒಂದು ಬ್ರಾಹ್ಮಣರಾಗಿಯೇ ಉಳಿದು ಬಂದ ಶೈವಪಂಗಡ; ಇನ್ನೊಂದು ಜೈನರಾಗಿ ಮತಾಂತರ ಮಾಡಿದ ಜೈನ ಶಾಖೆ.

೧೩. ಜೈನ ವಾಜಿವಂಶದವರೂ, ಶೈವ ವಾಜಿವಂಶದವರೂ, ಕಲ್ಯಾನ ಚಾಳುಕ್ಯ ಸಾಮ್ರಾಜ್ಯ ಪರಬಲವಾಗಿ ಉಳಿದು ಬೆಳೆಯಲು ತುಂಬ ಸಹಾಯ ಮಾಡಿದ್ದಾರೆ. ಚಾಲುಕ್ಯ ಸೇನೆಯಲ್ಲಿ ವಾಜಿಕುಲದವರು ಚಮೂಪತಿಗಳಾಗಿ ಮುಂಚೂಣಿಯಲ್ಲಿದ್ದರು.

೧೪. ವಾಜಿವಂಶದಲ್ಲಿನ ಕೌಂಡಿನ್ಯ ಗೋತ್ರದವರು ಹತ್ತನೆಯ ಶತಮಾನದ ವೇಳೆಗೇನೆ ಜೈನರಾಗಿ ಪರಿವರ್ತನೆಗೊಂಡಿದ್ದರು. ರೋಣ ಶಾಸನೋಕ್ತ ನಾದ ಪಂಪಯ್ಯನೂ ಈ ಪ್ರಕ್ರಿಯೆಯನ್ನು ಆರಂಭಿಸಿರಬಹುದು. ಪಂಪಯ್ಯನ ಹೆಸರನ್ನು ನೋಡಿದರೆ, ಕನ್ನಡದ ಆದಿಕವಿ ಪಂಪನ ನೆನಪು ಆಗುವುದು ಸಹಜ.

೧೫. ಪಂಪನ ತಂದೆ ಭೀಮಪ್ಪಯ್ಯನು ಜೈನನಾಗುವ ಮೊದಲು ಶೈವಸ್ಮಾರ್ತನಾಗಿದ್ದನು. ಪಂಪನ ಮೂಲ ಹೆಸರು ಪಂಪಯ್ಯ ಎಂದಿದ್ದಿರಬಹುದು. ಪಂಪನ ವತ್ಸ ಗೋತ್ರವೂ ಇದೇ ವಾಜಿ ವಂಶದ ಕುಡಿ ಇದ್ದಿರಬಹುದು; ಪಂಪನ ತಾತ (ತಾಯಿ ಅಬ್ಬಣಬ್ಬೆಯ ತಂದೆ) ಜೋಯಿಸಸಿಂಘನೂ ವಾಜಿವಂಶಜನೇ ಇರಬೇಕು. ಪಂಪನು ಶೈವ ಬ್ರಾಹ್ಮಣ ಮೂಲದವ ಬಾದುದರಿಂದಲೇ ವಿಕ್ರಮಾರ್ಜುನ ವಿಜಯದಲ್ಲಿ ಶಿವನನ್ನು ತನ್ಮಯತೆ ಯಿಂದ ವರ್ಣಿಸಿದ್ದಾನೆ.

೧೬. ಚಾಳುಕ್ಯರ ವಿಕ್ರಮಾದಿತ್ಯ ೬ ರಾಜನ (೧೦೭೬-೧೧೨೫) ತರುವಾಯ ಜೈನವಾಜಿಕುಲ ಶಾಖೆಗಳವರು ಒಬ್ಬೊಬ್ಬರಾಗಿ ವಲಸೆ (ಗುಳೆ) ಹೋದರು. ಅವರಿಗೆ, ಚಾಳುಕ್ಯರಲ್ಲಿ ತಮಗೆ ನೆರಳು ಸರಿಯುತ್ತಿದೆಯೆಂಬ ಅನುಭವ ಮೂಡಿದುದೇ ಈ ಒಕ್ಕಲು ಹೋಗುವಿಕೆಗೆ ಮುಖ್ಯಕಾರಣ. ಅನ್ಯಾನ್ಯ ಪ್ರಬಲ ಸುರಕ್ಷಿತ ಆಶ್ರಯಗಳನ್ನು ಅನ್ವೇಷಿಸಿದರು. ಚಾಳುಕ್ಯ ರಾಜಚ್ಛತ್ರದ ಅಡಿಯಲ್ಲೇ ಇದ್ದರೂ, ಅದರಿಂದ ಬಿಡಿಸಿಕೊಂಡು ಬಲಿಷ್ಠವಾಗಿತ್ತಿದ್ದ ಹೊಯ್ಸಳ ಕುಲದ ಮಡಿಲಿಗೆ ಬಿದ್ದ ಮೊದಲ ವಾಜಿ ಕುಲಜರು ಜಕ್ಕರಾಜ, ರೇಚಣ ಮೊದಲಾದವರು.

೧೭. ಈ ಜೈನ ವಾಜಿವಂಶವು ಕನ್ನಡ ಸಾಹಿತ್ಯಕ್ಕೂ, ಕರ್ನಾಟಕದ ವಾಸ್ತು ಶಿಲ್ಪಕ್ಕೂ, ರಾಜಕೀಯ ಇತಿಹಾಸಕ್ಕೂ ಮಾಡಿರುವ ಮಹದುಪಕಾರವು ಉಲ್ಲೇಖಾರ್ಹವಾದದ್ದು, ಅವರ ಚರಿತಾರ್ಹ ಸಾಧನೆಗಳನ್ನು ಅತಿ ಸಂಕ್ಷೇಪವಾಗಿ ಹೀಗೆ ಹೇಳಬಹುದು.

೧. ಮಲ್ಲಪಯ್ಯ – ಪುನ್ನಮಯ್ಯ ಸೋದರರು ಪೊನ್ನಕವಿಯಿಂದ ಶಾಂತಿ ಪುರಾಣ ಕಾವ್ಯವನ್ನು ಬರೆಸಿದರು.

೨. ದಾನ ಚಿಂತಾಮಣಿ, ಕವಿವರ ಕಾಮಧೇನು ಅತ್ತಿಮಬ್ಬೆಯು ತನ್ನ ತಂದೆ ಮತ್ತು ಚಿಕ್ಕಪ್ಪ ಬರೆಸಿದ ಪೊನ್ನನ ಶಾಂತಿಪುರಾಣದ ಒಂದು ಸಾವಿರ ಓಲೆಗರಿ ಪ್ರತಿಗಳನ್ನು ಮಾಡಿಸಿ ಉಚಿತವಾಗಿ ಹಂಚಿ ಶಾಸ್ತ್ರದಾನ ಮಾಡಿದಳು.

೩. ಅತ್ತಿಮಬ್ಬೆ ಮತ್ತು ಅಣ್ನಿಗದೇವ, ತಾಯಿ-ಮಗ ಸೇರಿ ರನ್ನಕವಿಗೆ ಆಶ್ರಯ ನೀಡಿ ಅಜಿತ ಪುರಾಣ ಕಾವ್ಯವನ್ನು ಬರೆಸಿದರು.

೪. ಅಣ್ನಿಗದೇವನು ರನ್ನನಿಂದ ಲಕ್ಕುಂಡಿಯ ಶಾಸನವನ್ನು ಬರೆಸಿದನು.

೫. ಅತ್ತಿಮಬ್ಬೆ ೧೫೦೧ ಜಿನಗೃಹಗಳನ್ನೂ, ೧೫೦೦ ಜಿನಬಿಂಬಗಳನ್ನೂ, ಮಂದಾಸನ ಜಯಘಂಟೆ ಮಣಿ ತೋರಣಗಳನ್ನೂ ಮಾಡಿಸಿದಳು.

೬. ಅತ್ತಿಮಬ್ಬೆಯು ಕವಿಗಳಿಗೇ ಅಲ್ಲದೆ ಕಥಕರಿಗೆ, ಗಾಯಕರಿಗೆ, ವಾದಕರಿಗೆ, ನಗ್ನರಿಗೆ, ಭಗ್ನರಿಗೆ ಅನಾರಿಗೆ, ಶಿಷ್ಟರಿಗೆ, ನಟರಿಗೆ- ಹೀಗೆ ನಾನಾ ವೃತ್ತಿಕಲಾವಿದರಿಗೆ ಉದಾರ ಆಶ್ರಯ ನೀಡಿ, ಕಲಾವಿದರ ಬಾಳಿಗೆ ಅಭಿಲಷಿತ-ಸಾನ-ವಿನೋದೆ ಎಂದೆಸಿಸಿದಳು.

೭. ಕನ್ನಡನಾಡಿನ ಪ್ರಥಮ ಅಧಿಕೃತ ವೀರವನಿತೆ ಅತ್ತಿಮಬ್ಬೆ; ಯುದ್ಧದಲ್ಲಿ ಭಾಅವಹಿಸಿ ಶತ್ರುಸೈನ್ಯವನ್ನು ಸೋಲಿಸಿ ತನ್ನ ಕಡೆಯ ಭಟರನ್ನು ಕಾಪಾಡಿದ ಸಾಹಸಿ ಅತ್ತಿಮಬ್ಬೆ.

೮. ದಲ್ಲಪಯ್ಯ, ನಾಗದೇವ, ಅಣ್ನಿಗದೇವ – ಕರ್ನಾಟಕದ ಪ್ರಸಿದ್ಧ ಚಾಳುಕ್ಯ ಚಕ್ರಾಧಿಪತ್ಯಕ್ಕೆ ಸುಸ್ಥಿರವಾದ ಅಸ್ತಿಭಾರ ಹಾಕಿದರು.

೯. ದಂಡನಾಯಕ ಕಾಳಿಮಯ್ಯನು ಜಿನಾಲಯ ಕಟ್ಟಿಸಿದನು.

೧೦. ದಣ್ಡನಾಯಕ ರೇಚಣನು ಜಿನಗೃಹಗಳನ್ನು ಕಟ್ಟಿಸಿದನು; ಆಚಣ್ಣಕವಿಗೆ ನೆರವು ನೀಡಿ ವರ್ಧಮಾನ ಪುರಾಣ ಕಾವ್ಯವನ್ನು ಬರೆಸಿದನು; ಜೈನ ಧರ್ಮಕ್ಕೆ ರೇಚಣನು ಮರುಹುಟ್ಟು ಕೊಟ್ಟನು.

೧೧. ಭಂಡಾರಿ ಹುಳ್ಳನು ಹಳೆಯ ಜಿನಾಲಾಯಗಳನ್ನು ಜೀರ್ಣೋದ್ದಾರ ಮಾಡಿದ್ದಲ್ಲದೆ ಹೊಸ ಬಸದಿಗಳನ್ನು ಕಟ್ಟಿಸಿದನು.

೧೮. ವೈದಿಕ ವಾಜಿವಂಶದವರಲ್ಲಿ ಪ್ರಮುಖರು ನೀಡಿದ ಕೊಡುಗೆಯೂ ಗಣನೀಯ ಪ್ರಮಾಣದಲ್ಲಿದೆ.

೧. ತೈಲಪ-ಇರಿವಬೆಡಂಗ ಸತ್ಯಾಶ್ರಯ ಸತ್ಯಾಶ್ರಯ ಚಕ್ರವರ್ತಿಗಳಿಗೆ ದಲ್ಲಪ, ನಾಗದೇವ, ಅಣ್ನಿಗದೇವ ನೀಡಿದ ಭುಜಬಲ ಚರಿತ್ರೆಯಲ್ಲಿ ಪ್ರಾಮುಖ್ಯಪಡೆದಿದೆ. ವೈದಿಕ ವಾಜಿಕುಲಜರಾದ ಮಾದಿರಾಜ (ಮಾಧವ) ಮತ್ತು ನಾಗವರ್ಮರು ತ್ರೈಳೋಕ್ಯಮಲ್ಲ ಸೋಮೇಶ್ವರನ ಅಧಿಕಾರಿಗಳಾಗಿ ಆನೆಬಲ-ಸಿಂಹಬಲ ನೀಡಿದರು. ನಾಗವರ್ಮನಂತೂ ಚಾಳುಕ್ಯರಾಜ್ಯ ವಿಭೂತಿಗೆ ನೆಲೆಯಾಗಿದ್ದನು :

            ಎನಗೀತಂ ಯುದ್ಧದೊಳ್ ದಕ್ಷಿಣವಿಜಯ ಭುಜಾದಣ್ಡಮಂದರ್ಕ್ಕಱೆಂದಾ
ಳ್ದನೃಪಂ ತ್ರೈಲೋಕ್ಯಮಲ್ಲಂ ಕುಡೆ ಚಮರರುಹಚ್ಚತ್ರತೊರ್ಯ್ಯಾವಳೀ ನಿ
ಸ್ವನ ನಾನಾ ಕೇತನಾಳಂಕೃತಮನಸಮ ದಣ್ಡಾಧಿನಾಥತ್ವಮಂ ಪೆ
ತ್ತನಜೇಯಂ ನಾಗವರ್ಮಂ ಸ್ಫುರದಸಿದಳಿತೋಗ್ರಾಸುಹಿರ್ನಾಗವರ್ಮ್ಮ(೦)
||

ಆ ನಾಗದೇವನು ತೈಲಪನಿಗೆ ಅನೇಕ ವಿಜಯಗಳನ್ನು ತಂದುಕೊಟ್ಟನು; ಈ ನಾಗರ್ವಮನು ತ್ರೈಳೋಕ್ಯಮಲ್ಲನಿಗೆ ನಾನಾ ಗೆಲವುಗಳ ಸರಮಾಲೆ ಹಾಕಿದನು; ಅವುಗಳಲ್ಲಿ ಸವಲಕ್ಕೆಯನ್ನು (ಪಂಪನ ಆಶ್ರಯದಾತರು ಆಳಿದ ಸಪಾದಲಕ್ಷಕ್ಷಿತಿ ಪ್ರದೇಶ) ಗೆದ್ದುದು ಪ್ರಮುಖವೆನಿಸಿದೆ.

೨. ನಾಗವರ್ಮನು ಬಂಧುಜನ ಚಿಂತಾಮಣಿ, ಈತ ತನ್ನ ತಂದೆ, ತಾಯಿ ಚಿಕ್ಕಪ್ಪ, ಮಡದಿ ಹಾಗೂ ತಂಗಿಯರ ಹೆಸರಲ್ಲಿ, ತನ್ನ ಹೆಸರಲ್ಲಿ ನಾನಾ ದೇಹುಲಗಳನ್ನು ಮಾಡಿಸಿದನು..

೩. ಇದೇ ನಾಗವರ್ಮನು ಘಳಿಗೆ ಬಾಗಿಲ್ವಾಡ ಸಂಧ್ಯಾಮಠ ಗಣಪತೀ ಭಗವತೀ ಸಪ್ತಮಾತೃಕ್ಕೆ ನಂದಿನಾಗರ – ಸಮಸ್ತ ದೇವತಾ ಪ್ರತಿಷ್ಠೆ ಮಾಡಿಸಿದನು. ಅಲ್ಲದೆ ದೇವರ ತ್ರಿಕಾಲ ಪೂಜೆ, ತಪೋಧನರ ವಿದ್ಯಾರ್ಥಿ ಮಾಣಿಗಳ ಆಹಾರದಾನಕ್ಕೆ ಪರಿವಾರದ ಜೀವಿತಕ್ಕೆ ಐವತ್ತು ಮತ್ತರು ಭೂಮಿಯಿತ್ತನು.

೪. ನಾಗರಾಜನು ರೇವಣೇಶ್ವರ ದೇವರಿಗೆ ರಾಣಿ ಸುಗ್ಗಲದೇವಿಯರಿಂದ ೧೫ ಮತ್ತರು ದಾನ ಕೊಡಿಸಿದನಲ್ಲದೆ ತಾನೂ ಅನೇಕ ಬಗೆಯ ದಾನಗಳನ್ನು ನೀಡಿದನು.

೫. ನಾಗರಾಜನ್ ತಂದೆ ರೇವಣಯ್ಯ ನಾಯಕನು ರೇವಣೇಶ್ವರ ದೇವಾಲಯವನ್ನು ಕಟ್ಟಿಸಿದನು.

ಸಮಾರೋಪ

ವಾಜಿವಂಶದ ಕೌಂಡಿನ್ಯಗೋತ್ರ ಶಾಖೆಯವರು ಜೈನರಾಗಿ ಧರ್ಮಾಂತರ ಮಾಡಿದ ಹಿನ್ನೆಲೆಯಲ್ಲಿ ಇಲ್ಲಿ ಉಲ್ಲೇಖಿಸಬೇಕಾದ ಇನ್ನೊಂದು ಮಾತಿದೆ. ಅದೆಂದರೆ ಹುಳ್ಳನೇ ಅಲ್ಲದೆ ಒಂದೇ ಮನೆತನದಲ್ಲಿ ಹುಟ್ಟಿಬೆಳೆದ ಕೆಲವು ಧೀರರು ಹೊಯ್ಸಳರ ಆಧಿಪತ್ಯದಲ್ಲಿ ಸೇನಾನಿಗಳಾಗಿ ಶೋಭಿಸಿದರು. ಹಾಗೆ ಪರಾಕ್ರಮವನ್ನು ಮೆರೆದ ನಿಷ್ಠಾವಂತ ಜೈನ ಸೇನಾಪತಿಗಳಲ್ಲಿ ಕೌಂಡಿನ್ಯ ಗೋತ್ರೋದ್ಭವರೂ ಇದ್ದಾರೆ : ‘ಇಂತು ಪೊಗಳ್ತೆಗೆ ನೆಲೆಯಾದ ಕೌಂಡಿಲ್ಯಗೋತ್ರದ ಡಾಕರಸ ದಂಡನಾಯಕನ ಏಚವೆ ದಣ್ಣಾಯಕಿತಿಯ ಮಕ್ಕಳು ನಾಕಣ ದಂಡನಾಯಕನುಂ ಮಱೆಯಾನೆ ದಂಡನಾಯ ಕನುಂ ಅವರ ಮಕ್ಕಳು ಮಾಚಣದಂಡನಾಯಕನ್ …’ ಎಂದು ಮುಂತಾಗಿ ನಾಲ್ಕೈದು ತಲೆಮಾರಿನ ತಂದೆ ಮೊಮ್ಮಗ ಮರಿಮಗ ಆದಿಯಾಗಿ ಹೊಯ್ಸಳ ದಂಡನಾಯಕರ ದೊಡ್ದ ಯಾದಿಯಿದೆ. [ಎ.ಕ. ೭(೧೯೭೯) ೭೨ (೪ ನಾಮಂ ೩೨ ೧೦೪೮, ೧೧೦೩, ೧೧೮೨-೮೩, ಅಳೀಸಂದ್ರ (ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕು ಪು. ೫೩-೬೦)]. ಪ್ರಾಯಃ ಇವರೆಲ್ಲರೂ ವಾಜಿವಂಶಜರು.

ತೈಲಪನ ಮಗನಾದ ಇರಿವಬೆಡಂಗ ಸತ್ಯಾಶ್ರಯನ ಕಾಲಕ್ಕೆ ಸೇರಿದ, ಅನಾಥ ದೇವಾಲಯವೊಂದರ ಗರ್ಭಗೃಹದಲ್ಲಿರುವ ಒಂದು ಕಂಬದ ಮೇಲಿನ ಪುಟ್ಟಶಾಸನ ದಲ್ಲಿರುವ ಒಕ್ಕಣೆ: ಅಯ್ಯನವೊಳಲು ಎಂಬ ಗ್ರಾಮದ ಹೊಲ ಮತ್ತು ಕೆರೆಯನ್ನು ವಾಜಿಕುಲದ ಕೆಸನಮಯ್ಯನಿಗೆ ಪನ್ನಸವಾಗಿ (ಸಂಸ್ಕೃತ : ಪಂಚಾಶತ್ : ತೆರಿಗೆ ವಿನಾಯಿತಿ ಭೂಮಿ) ರಾಜನ ಅಂಗರಕ್ಷಕ ಮತ್ತು ತಂತ್ರಪಾಲನಾದ ಅರಸಪಯ್ಯನು ಕೊಟ್ಟನು. ಶಾಸನ ಹಾಗೂ ದೇವಾಲಯದ ಕಾಲ, ಸ್ಥಳ, ಸಂನಿವೇಶ, ಕೊಡುಗೆ – ಇವನ್ನು ಗಮನಿಸಿದರೆ ವಾಜಿಕುಲದ ವಾಜಿಕುಲದ ಈ ಕೆಸನಮಯ್ಯನು (ಅತ್ತಿಮಬ್ಬೆಯ ಪತಿಯಾದ) ನಾಗದೇವನ ಅಥವಾ ಆತನ ಮಗನಾದ ಅಣ್ನಿಗದೇವನ ತಮ್ಮನಿದ್ದಿರ ನಹುದೆಂದೂ, ಈ ಪಾಳುದೇಗುಲ ಒಂದು ಕಾಲದ ಸುಸ್ಥಿರ ಬಸದಿಯಾಗಿದ್ದಿರ ಬಹುದೆಂದೂ ಭಾವನೆ ಮೂಡಿತ್ತದೆ; ಆದರೆ ಇಂಥ ತೀರ್ಮಾನಗಳಿಗೆ ಅಗತ್ಯವಾದ ಖಚಿತ ಆಧಾರಗಳಿಲ್ಲ [ಎಆರ್‌ಐಇ ೧೯೫೮. ನಂ ೧೦೦೭. ಪುಣ್ಯವೋಲು (ಆಂಧ್ರ : ವಾರಂಗಲ್ ಜಿಲ್ಲೆ/ ತಾ ಪು. ೪].

ತ್ರಿಭುವನಮಲ್ಲ ವಿಕ್ರಮಾದಿತ್ಯ ರಾಜನ ಆಳಿಕೆಗೆ ಸೇರಿದ ಶಾಸನವೊಂದರಲ್ಲಿ ದುರ್ಗರಾಜನೆಂಬಾತನ ಪ್ರಸ್ತಾಪ ಈ ಸಂಪ್ರಬಂಧದ ಕಷೆಗೆ ಪ್ರಸ್ತುತವಾಗಿದೆ. ವಾಜಿಕುಳ ಸಾಂಖ್ಯಾಯನ ಗೋತ್ರದ ಪಂಪರಾಜನ ಮಗ ದುರ್ಗರಾಜನು ಮೂಲಸ್ಥಾನ ದುರ್ಗೇಶ್ವರ ದೇವರಿಗೆ ‘ಮಟಕ್ಕಮಲ್ಲಿಯ ವಿದ್ಯಾದಾನಕ್ಕಂ’ ದಾನವಿತ್ತನು. ಏಚರಾಜನ ಮಗ ದುರ್ಗಸಿಂಹ, ದುರ್ಗಸಿಂಹನ ಮಗ ಪಂಪರಾಜ, ಪಂಪರಾಜನ ಮಗನು ದುರ್ಗರಾಜ [ಸೌ.ಇ.ಇ. ೯-೧, ೧೬೦, ೧೦೯೧-೯೨, ಕೊಳ್ಗಲ್ಲು (ಬಳ್ಳಾರಿ ಜಿಲ್ಲೆ. ಶಿರಗುಪ್ಪ ತಾಲ್ಲೂಕು) ಪು.೧೪೭-೪೮]. ಇನ್ನೊಂದು ಶಾಸನದಲ್ಲಿ ಸಂಧಿವಿಗ್ರಹಿ ಪದ್ಮರಸನ ಪ್ರಸ್ತಾಪವಿದೆ: ಸಕಳಕಳಾಬ್ರಹ್ಮಂ ಶಾಬ್ದಿಕ ತಿಳಕಂ ಬ್ರಹ್ಮಕವಿ ಚುಡಾಮಣಿ ವಾಜಿಕುಳ ನಭಸ್ಥಳ ರವಿ ಕೌಶಿಕ ಗೋತ್ರಂ ಪವಿತ್ರಂ ಸಂಧಿ ವಿಗ್ರಹಿ ಸಂಧಿವಿಗ್ರಹಿ ಪದ್ಮರಸಂ ಶಿವಪಾದಶೇಖರಂ [ಸೌ.ಇ.ಇ. ೯-೧, ೫೦.೧೦೦೫. ಯಲಿ ಸಿರೂರ್ (ಧಾಜಿ. / ಗದಾ ತಾ.) ಪು. ೩೭ ಸಾಲು : ೨-೩].

ಅಯ್ನೂರ್ವ್ವರು ಮಹಾಜನರ ಪ್ರಮುಖನೂ, ಹಾರೀತ ಗೋತ್ರದವನೂ ಆದ ಈಶ್ವರ ಘಳಿಸಾಸನಿಗೆ ತೈಲಪ || ರಾಜನು (೯೩೭-೯೭) ಮಣಿಗವಳ್ಳಿಯನ್ನು ನೀಡಿದನು. ಅನಂತರ ಇದೇ ಪರಂಪರೆಯಲ್ಲಿ ಬಂದ ಮಾದಿರಾಜನೂ (ಮಾಧವ) ಮಣಿಗವಳ್ಳಿಯ ಮಹಾಜನರ ಪ್ರಧಾನನಾದನು. ಮುಂದೆ ವಾಜಿಕುಲದ ಕಾಶ್ಯಪಗೋತ್ರದ ಬಸವರಸನು ಚಂದಿರಾಜ – ಚಂದ್ರಾಂಬಿಕೆಯರ ಮಗ) ಮಹೇಶ್ವರನ ಪರಮಭಕ್ತನಾಗಿದ್ದು, ಪಾಶುಪತ-ಕಾಳಾಮುಖ ಪಂಥದ ಕಲಿದೇವೇಶ್ವರ ದೇವಾಲಯವನ್ನು ಕಟ್ಟಿಸಿದನು. ಚಾಳುಕ್ಯಚಕ್ರಿ ಜಗದೇಕಮಲ್ಲನ ಅಧಿಕಾರಿಯಾದ ಬಮ್ಮಣ್ಣಯ್ಯನು ೧೧೪೨ ರಲ್ಲಿ ಈ ಕಲಿದೇವರಿಗೆ ದತ್ತಿಯಿತ್ತನು. ೧೧೬೧ ರಲ್ಲಿ. ಕಲಚುರಿ ಬಿಜ್ಜಳನು ಆಳುತ್ತಿರುವಾಗ ಬಣಂಗುಗಳು ದಾನ ನೀಡಿದರು [ಎ.ಇ. ೫, ಪು. ೯, ಮನಗೋಳಿ ೧೧೬೧]. ಈ ಮನಗೋಳಿ ಶಾಸನೋಕ್ತನಾದ ಬಸವರಸನು ಪ್ರಸಿದ್ಧ ಬಸವೇಶ್ವರನಿಗಿಂತ ಭಿನ್ನವಾದ ವ್ಯಕ್ತಿ. ಬಸವೇಶ್ವರನು (ಬಸವಣ್ಣ) ಕಮ್ಮೆಕುಲಜನೆಂಬುದು ಹರಿಹರ ಕವಿಯ ಹೇಳಿಕೆ. ಕಾಶ್ಯಪ ಕುಲದ ಬಸವಣ್ಣನ ಪ್ರಸ್ತಾಪ ಬೇರೆ ಶಾಸನಗಳಲ್ಲುಂಟು [ಎ.ಕ. ೭, ಶಿಕಾರಿಪುರ ೧೧೭.೧೧೧೮].

ವಾಜಿವಂಶಜರಲ್ಲಿ ನಾಲ್ಕು ದೊಡ್ಡ ಪ್ರತಿಷ್ಠಿತ ಕುಟುಂಬಗಳ ವಂಶವೃಕ್ಷವನ್ನು ಅನುಬಂಧವಾಗಿ ಕೊಟ್ಟಿದ್ದೇನೆ. ಆದರೆ ತೀರ ಪ್ರಮುಖರಾದ ವಾಜಿವಂಶ ಸಂಭೂತರು ಇವರು:

೧. ಪಂಪಯ್ಯ : ಕ್ರಿ.ಶ. ೯೪೨; ರೋಣ ಶಾಸನೋಕ್ತ

೨. ದಲ್ಲಪಯ್ಯ : ೯೬೫; ಲಕ್ಕುಂಡಿ ಶಾಸನೋಕ್ತ

೩. ನಾಗದೇವ : ೯೮೦; ಅತ್ತಿಮಬ್ಬೆಯ ಪತಿ

೪. ಅಣ್ನಿಗದೇವ : ೧೦೦೭; ನಾಗದೇವ ಮತ್ತು ಅತ್ತಿಮಬ್ಬೆಯರ ಮಗ

೫. ಚಂದ್ರರಾಜ : ೧೦೨೫; ಮದನ ತಿಲಕ ಕಾವ್ಯದ ಕವಿ

೬. ನಾಗವರ್ಮ : ೧೦೪೯; ತಡಕಲ್ಲು ಶಾಸನೋಕ್ತ

೭. ಕಾಳಿಮಯ್ಯ : ೧೦೭೧; ತಡಕಲ್ಲು ಶಾಸನೋಕ್ತ

೮. ಮಾಚಿರಾಜ (ಪ್ರಭುಮಾಚಿ) : ೧೦೭೯; ಎ.ಕ ೮-೨. ಸಾಗರ. ೧೦೯

೯. ನಾಗರಾಜ : ೧೧೨೩-೨೩; ಬಿಮರಾ ಶಾಸನೋಕ್ತ

೧೦. ಹುಳ್ಳಮಯ್ಯ : ೧೧೬೩ : ಶ್ರವಣಬೆಳುಗೊಳ ಶಾಸನೋಕ್ತ

೧೧. ದೇವಪಯ್ಯ : ೧೧೭೪; ಶಾಸನಕವಿ

೧೨. ರೇಚಣ (ರೇಚರಸ) : ೧೧೮೦ : ಶಾಸನೋಕ್ತ, ಕಾವ್ಯೋಕ್ತ

೧೩. ಮಧುರಕವಿ : ೧೩೮೫ : ಚಂಪೂಕವಿ, ಶಾಸನಕವಿ

ಈ ಸಂಪ್ರಂಬಂಧವನ್ನು ಮುಗಿಸುವ ಮೊದಲ ವಾಜಿವಂಶದ ನಿಷ್ಪತ್ತಿ ಮತ್ತು ಶಬ್ದಾರ್ಥ ಕುರಿತು ಪರಾಮರ್ಶಿಸಬಹುದು

೧. ಸಂಸ್ಕೃತ ಉಪಾಧ್ಯಾಯ ಎಂಬ ಶಬ್ದದ ತದ್ಭವ ರೂಪವಾಗಿ ಪ್ರಾಕೃತದ ಮೂಲಕ ಇದು ಬೆಳೆದು ಬಂದಿರಬಹುದು; ಉಪಾಧ್ಯಾಯ (ಸಂಸ್ಕೃತ) ಉಚ್ವಜ್ಝಾಯ (ಪ್ರಾಕೃತ) ಉವಜ-ಓಜ-ವಾಜ ಆಗಿದೆ. ವಾಜ ಎಂದರೆ ಉಪಾಧ್ಯಾಯ ಎಂದಷ್ಟೆ ವಾಚ್ಯಾರ್ಥವಲ್ಲ; ವಿದ್ವಾಂಸ ಬಲ್ಲಿದ ಎಂಬರ್ಥವೂ ಉಂಟು. ವಾಜರು ಇರುವ ವಂಶವೇ ವಾಜಿ ವಂಶಜ ರೆಂದು ತಿಳಿಯಬಹುದು. ಉಪಾಧ್ಯಾಯರು ಎಂಬುದು ಮೂಲಾರ್ಥದಲ್ಲಿ ವಿದ್ಯೆಯನ್ನು ಬೋಧಿಸುವವರು ಎಂದಿದ್ದರು, ಜೈನರಲ್ಲಿ ಅದು ದೇವರ ಪೂಜಾಕಾರ್ಯ ಮಾಡುವ ವೃತ್ತಿಯವರಿಗೆ ಅನ್ವಯವಾಗಿದೆ. ಉತ್ತರ ಕರ್ನಾಟಕದ ಜೈನ ಸಮಾಜದಲ್ಲಿ ಅರ್ಚಕರು (ಪೂಜಾರರು) ಎಂಬರ್ಥದಲ್ಲಿ ಉಪಾಧ್ಯೆ, ಉಪಾದ್ರಿ ಎಂದು ಬಳಸುತ್ತಾರೆ. ವಿಶ್ವವಿಖ್ಯಾತ ವಿದ್ವಾಂಸರಾದ ಡಾ || ಆ.ನೇ. ಉಪಾಧ್ಯ ಅವರೂ ಸಹ ಈ ರೀತಿ ಉಪಾಧ್ಯೆ ಮನೆತನಕ್ಕೆ ಸೇರಿದವರು. ದಕ್ಷಿಣ ಕನ್ನಡ ಜಿಲ್ಲೆಯ ಜೈನ ಸಮಾಜದಲ್ಲಿ ಅರ್ಚಕರನ್ನು ‘ಇಂದ್ರರು’ ಎಂದು ಕರೆಯುತ್ತಾರೆ. ಹಳೆಯ ಮೈಸೂರು ಭಾಗದ ಜೈನ ಸಮಾಜದಲ್ಲಿ ಪುರೀಹಿತರು ಎಂಬ ಶಬ್ದ ಉಪಯೋಗದಲ್ಲಿದೆ. ವಾಜಿವಂಶವೂ ಮೂಲತಃ ಇಂತಹ ಒಂದು ಪೂಜಾದಿಗಳಿಗೆ ನೆರವಾಗುತ್ತಿದ್ದ ಉಪಾಧ್ಯಾಯ ಮನೆತನವಿರಬಹುದು. ಆದರೂ ಈ ಬಗ್ಗೆ ಇನ್ನೂ ಚರ್ಚೆಗೆ ಅವಕಾಶವಿರುವುದರಿಂದ ಇದೇ ಕಡೆಯ ಮಾತಾಗಲಾರದು.

೨. ಇನ್ನೊಂದು ಸಂಭಾವ್ಯ ನಿಷ್ಪತ್ತಿ : ವಾಜಿ ಎಂಬುದು ಅಶ್ವ (ಕುದುರೆ) ಸಂಬಂಧವಾದ ಅರ್ಥವನ್ನೂ ಹೊಂದಿದೆ. ಕುದುರೆಗಳನ್ನು ಹೊಂದಿದ್ದು ಯುದ್ಧಗಳಲ್ಲಿ ಭಾಗವಹಿಸುವ ಮನೆತನ ಎಂಬರ್ಥದಲ್ಲಿ ‘ವಾಜಿ – ವಂಶ’ ಶಬ್ದವು ಈ ಕುಲಕ್ಕೆ ಅನ್ವಯಗೊಂಡು ಪ್ರಚಲಿತವಾಗಿದ್ದಿರಬಹುದು.

೩. ಮೇಲಿನ ಎರಡು ನಿಷ್ಪತ್ತಿಗಳಿಗಿಂತ ಹೆಚ್ಚು ಸಂಭವನೀಯವೆನಿಸುವ, ಪ್ರಾಯಃ ಸಮಂಜಸವಾದ ನಿಷ್ಪತ್ತಿ ಇನ್ನೊಂದು ಇದೆ. ವಾಜಪೇಯ (ವಾಜಸನೀಯ) ಎಂಬ ಯಜ್ಞ – ಯುಗಾದಿಗಳನ್ನು ಮಾಡಿದ ಹಿರಿಯರಿಂದ ಬಂದ ಮನೆತನವಾಗಿ ಅದು ‘ವಾಜಿಕುಲ’ ಎಂದು ಹೆಸರು ಪಡೆದಿರಬಹುದು. ಇದೇ ಸರಿಯಾದ ನಿಷ್ಪತ್ತಿ ಮೂಲವೆಂದು ಖಚಿತವಾಗಿ ಹೇಳುವುದಕ್ಕೆ ಕಾರಣವೆಂದರೆ, ಈ ವಾಜಿವಂಶದ ಪ್ರಾಚೀನ ದಾಖಲೆಗಳು ಅವರ ವೈದಿಕತ್ವ ಮತ್ತು ಯಜ್ಞಯಾಗಿದೆಗಳ ಆಚರಣೆಯನ್ನು ದೃಢಪಡಿಸುತ್ತವೆ. ವಾಜಪೇಯ ಯಾಗದ ಪ್ರಸ್ತಾಪವಂತೂ ೧೬ ನೆಯ ಶತಮಾನದವರೆಗೂ ಶಾಸನಗಳಲ್ಲಿ ಉಲ್ಲೇಖವಾಗಿವೆ:

೧. ಎ.ಕ. ೭ (೧೯೭೯) ನಾಂ ೧೩೪ (೧೪ ನಾಮಂ ೧೩೮) ೧೫೧೨ ದೊಡ್ಡಜಟಕ (ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕು) ಪು. ೧೩೩

೨. ಎ.ಕ. ೯ (೧೯೯೦) ಬೇ ೧೭೨ (೫ ಬೇ ೭೯) ೧೫೧೨ ಬೇಲೂರು (ಹಾ. ಜಿ.) ಪು. ೧೪೬.

ವಾಜಿವಂಶದ, ವಾಜಿವಂಶಜರ ಇನ್ನೂ ಹತ್ತಾರು ಶಾಸನಗಳು ಉಪಲಬ್ದವಾಗಿವೆ.

ಅವೆಲ್ಲದರ ಪ್ರಸ್ತಾಪ ಮತ್ತು ಚರ್ಚೆ ಈ ಸಂಪ್ರಬಂಧದ ಚೌಕಟ್ಟಿನ ಕಕ್ಷೆಗೆ ಮೀರಿದ್ದು ಮತ್ತು ಹೊರತು. ವಾಜಿಕುಲ ಕುಲಜರೆಲ್ಲರ ಪಟ್ಟಿ ಕೊಡುವುದು ನನ್ನ ಉದ್ದೇಶವಾಗಿಲ್ಲ. ಒಂದು ಬಗೆಯ ಅಂತರ್ಸ್ಸಂಬಂಧವಿದ್ದು ಒಂದು ನಿರ್ದಿಷ್ಟ ಆಡಳಿತ ವ್ಯಾಪ್ತಿಯಲ್ಲಿ ಹುಟ್ಟಿಬೆಳೆದು ಕರಗಿಹೋದ ಪ್ರಮುಖ ವಂಶವಾಹಿನಿಯು ನಿರಂತರ ಧಾರೆಯ ಸ್ವರೂಪವನ್ನೂ, ಕರ್ನಾಟಕದ ಸಾಹಿತ್ಯ – ಸಂಸ್ಕೃತಿಯ ಸಂದರ್ಭ ದಲ್ಲಿ ಅದರ ಸಾರ್ಥಕತೆಯ ಆಯಾಮಗಳನ್ನೂ ಈ ಸಂಪ್ರಬಂಧದಲ್ಲಿ ವಿವೇಚಿಸಿದ್ದೇನೆ.

ಕರ್ನಾಟಕದ ಚರಿತ್ರೆಯಲ್ಲಿ ಈ ಬಗೆಯ ಸಣ್ಣಪುಟ್ಟ ವಂಶಗಳು ಕೂಡ ಹೇಗೆ ಗಣನೀಯ ಪಾತ್ರವನ್ನು ನಿರ್ವಹಿಸಿವೆ ಎಂಬುದು ಇನ್ನಷ್ಟು ವಿಸ್ತಾರವಾದ ಅಧ್ಯಯನಕ್ಕೆ ದಾರಿ ತೆರೆಯುತ್ತದೆಂಬುದಕ್ಕೆ ಇದೊಂದು ತೋರುಬೆರಳು.