ಪ್ರವೇಶ

ಕರ್ನಾಟಕ ಚರಿತ್ರೆಯಲ್ಲಿ ಅನೇಕ ಸಣ್ಣಪುಟ್ಟ ರಾಜಮನೆತನಗಳು, ಅರಸು ಕುಲಗಳು ಆಗಿಹೋಗಿವೆ. ನಾಡಿನ ನಾನಾ ಭಾಗಗಳನ್ನು, ವಿವಿಧ ಕಾಲಘಟ್ಟಗಳಲ್ಲಿ ಪ್ರಾದೇಶಿಕವಾಗಿ ಅಳೆದ ಕಿರಿಯಕುಲ (ವಂಶ)ಗಳು ತೋರಿದ ತ್ಯಾಗ, ಸಾಹಸ, ದೇಶಪ್ರೇಮ, ಭಾಷಾಪ್ರೇಮ, ಕಲಾಪ್ರೇಮ, ಸಾಹಿತ್ಯಾಸಕ್ತಿ, ಧರ್ಮಾನುರಾಗ, ಅನ್ಯಧರ್ಮ ಸಹಿಷ್ಣುತೆ – ಮೊದಲಾದುವು ಉಪಯುಕ್ತ. ಕನ್ನಡ ಶಾಸನಗಳಲ್ಲಿ ಕಂಡುಬರುವ ನಾನಾ ವಂಶ(ಕುಲ)ಗಳನ್ನು, ಅವು ಚರಿತ್ರೆಯಲ್ಲಿ ನಿರ್ವಹಿಸಿದ ಪಾತ್ರವನ್ನು ಕುರಿತು ಕೆಲವು ಪಿಎಚ್.ಡಿ ಮಹಾಪ್ರಬಂಧಗಳನ್ನೂ, ಎಂ.ಫಿಲ್ ಪ್ರೌಢಪ್ರಬಂಧ (ಡಿಸರ್ಟೇಶನ್) ಗಳನ್ನೂ ಸಿದ್ಧಪಡಿಸಬಹುದು. ಅಷ್ಟು ವಿಪುಲವಾದ ಮಾಹಿತಿಗಳನ್ನು ಶಾಸನಗಳು ಗರ್ಭೀಕರಿಸಿವೆ. ಈ ಸಂಪ್ರಬಂಧದಲ್ಲಿ ಸಗರ (ಮಣಲೆರ) ವಂಶವನ್ನು ಕುರಿತು ವಿವೇಚಿಸಲಾಗುವುದು. ಈ ವಿವೇಚನೆಗೆ ಉಪಲಬ್ಧ ಶಾಸನ ಸಾಮಗ್ರಿಯಷ್ಟೇ ಮುಖ್ಯ ಮತ್ತು ನೇರ ಆಕರ.

ಸಗರ-ಮಣಲೆಯರ ಚಾರಿತ್ರಿಕ, ಧಾರ್ಮಿಕ, ಪ್ರಾದೇಶಿಕ, ಭೌಗೋಳಿಕ ಮತ್ತು ಸಾಂಸ್ಕೃತಿಕ ಆಯಾಮಗಳನ್ನು ಗುರುತಿಸುವುದರೊಂದಿಗೇನೆ ಅವರ ಅಧಿಕಾರ ಏರಿಳಿತ ಪಲ್ಲಟಗಳನ್ನೂ. ತೆರಿಗೆಗಳ ಪ್ರಸ್ತಾಪವನ್ನೂ ಅಲ್ಲಲ್ಲಿ ಆನುಷಂಗಿಕವಾಗಿ ಮತ್ತು ಅಧಿಕೃತವಾಗಿ ಸೂಚಿಸಲಾಗುವುದು.

ಈ ಮನೆತನದವರು ತಮ್ಮನ್ನು ಸಗರ, ಸಗರ ಮಾರ್ತ್ತಂಡ, ಮಣಲೆರ, ಮಣಲೆರಾದಿತ್ಯ – ಎಂದು ನಿರ್ದೇಶಿಸಿಕೊಂಡಿದ್ದಾರೆ. ಕ್ರಿ.ಶ. ೮-೯ ನೆಯ ಶತಮಾನದ ವೇಳೆಗಾಗಲೇನೆ ಈ ಸಗರವಂಶ ಮನ್ನಣೆ ಪಡೆದಿತ್ತು. ಮೊದಲು ಮಂಡ್ಯ ಜಿಲ್ಲೆಯ ನಾಗಮಂಗಲ, ಮಳವಳ್ಳಿ, ಮದ್ದೂರು ತಾಲ್ಲೂಕುಗಳು ಮತ್ತು ಮೈಸೂರು ಜಿಲ್ಲೆಯ ಗುಂಡ್ಲುಪೇಟೆ ಮತ್ತು ತಿರುಮಕೂಡಲು ನರಸೀಪುರ ತಾಲ್ಲೂಕು – ಈ ಪರಿಸರದಲ್ಲಿ ಮಣಲೆರರ ಅಸ್ತಿತ್ವ, ಯುದ್ಧೋತ್ಸಾಹ, ಧೈರ್ಯ, ಆಡಳಿತ, ಅಧಿಕಾರ, ದಾನಗುಣ, ಜಿನಭಕ್ತಿ ಧರ್ಮವತ್ಸಲತೆ ಮೊದಲಾದ ಗುಣಗಳು ಪ್ರಕಟವಾಗಿವೆ. ಇದು ಕರ್ನಾಟಕದ ಚರಿತ್ರೆಯಲ್ಲಿ ಅವರು ಕ್ರಿಯಾಶೀಲರಾಗಿ ಕಾಣಿಸಿಕೊಂಡ ಮೊದಲನೆಯ ಘಟ್ಟ ಕ್ರಿ.ಶ. ಹತ್ತನೆಯ ಶತಮಾನದ ಕಡೆಯ ದಶಕದಲ್ಲಿ ಅವರು ದಕ್ಷಿಣ ಕರ್ನಾಟಕದ ಈ ಭಾಗವನ್ನು ತೊರೆದು, ಉತ್ತರ ಕರ್ನಾಟಕದ ಪುಲಿಗೆಱೆ ಮುನ್ನೂರರ ಪ್ರದೇಶವನ್ನು ಮಹಾ ಸಾಮಂತರಾಗಿಯೂ, ಮಹಾಮಂಡಲೇಶ್ವರರಾಗಿಯೂ, ರಾಷ್ಟ್ರಕೂಟಕರ ರಾಗಿಯೂ ಆಳತೊಡಗಿದ್ದು ಶಾಸನಗಳಿಂದ ತಿಳಿದು ಬರುತ್ತದೆ.

ಮಣಲೆರರ ಪ್ರಥಮ ಉಲ್ಲೇಖಗಳಲ್ಲಿ ಪ್ರಮುಖವಾದವುಗಳು ದೇವರ ಹಳ್ಳಿ, ತಗ್ಗಲೂರು, ಹೆಬ್ಬಾಳು, ವಿಜಯಪುರ, ಮುತ್ತತ್ತಿ, ತಾಯಲೂರು, ಕೂಲಿಗೆರೆ, ಕಲ್ಕುಣಿ, ಆತುಕೂರು, ಪುಲಿಗೆರೆ, ಲಕ್ಷ್ಮೇಶ್ವರ, ಶಿಗ್ಗಾಂವಿ – ಮೊದಲಾದ ಶಾಸನಗಳು, ಈ ಶಾಸನಗಳ ಆಧಾರದಿಂದ ಮಣಲೆರರ ಹುಟ್ಟು ಬೆಳವಣಿಗೆ ಆಳ್ವಿಕೆ ರಾಜಕೀಯ ವರ್ಚಸ್ಸು ಜಿನಭಕ್ತಿ ರಾಜನಿಷ್ಠೆಯ ಪಲ್ಲಟ- ಇವನ್ನು ಕ್ರಮವಾಗಿ ಗುರುತಿಸಬಹುದು. ಮಣಲೆರ ವಂಶದವರ ಮೊಟ್ಟಮೊದಲನೆಯ ದಾಖಲೆ ಕಾಣಿಸುವುದು ಎಂಟನೆಯ ಶತಮಾನದ ಎರಡು ಶಾಸನಗಳಲ್ಲಿ; ೧. ಹೆಬ್ಬಾಳು ಶಾಸನ, ೨. ದೇವರಹಳ್ಳಿ ಶಾಸನ.

ಹೆಬ್ಬಾಳು ಶಾಸನದಲ್ಲಿ ಒಂದು ಯುದ್ಧದ ಪ್ರಸ್ತಾಪ ಮಾತ್ರ ಸಿಗುತ್ತದೆ. ನೊೞ್ವಬ್ಬ (ನೊೞಂಬ/ನೊಳಂಬ) ರಾಜ್ಯಕ್ಕೆ ಸೇರಿದ ಕಾಳೆಗವೊಂದರಲ್ಲಿ ಮಣಲೆರ ಕುಣಿಙ್ಗೆಲಾಚಾರನು ಭಾಗವಹಿಸಿದ್ದನ್ನು ಈ ಹೆಬ್ಬಾಳು ಶಾಸನ ನಮೂದಿಸಿದೆ.

[ಎ.ಕ. ೭ (೧೯೭೯) ೩೬ (೩ ಮಂ ೪೫) ೮ನೆಯ ಶತಮಾನ, ಹೆಬ್ಬಾಳು (ಮಂಡ್ಯ ಜಿಲ್ಲೆ, ಮದ್ದೂರು ತಾಲ್ಲೂಕು) ಪು. ೨೭೪]. ಮಣಲೆರ ಕುಣಿಙ್ಗೆಲಾಚರ ಕೂಡಿಕೊಂಡಿವೆ. ಮಣಲೆರ ಎಂಬುದು ಒಬ್ಬ ವ್ಯಕ್ತಿಯ ಅಂಕಿತ/ರೂಢನಾಮ. ಕುಣಿಙ್ಗೆಲ ಎಂಬುದು ಆತನ ಊರಿನ ಹೆಸರು. ಈ ತೀರ್ಮಾನವನ್ನು ಬೆಂಬಲಿಸುವ ಪೂರಕ ಆಧಾರವೂ ಇನ್ನೊಂದು ಶಾಸನದಲ್ಲಿ ಸಿಗುತ್ತದೆ; ಆ ಇನ್ನೊಂದು ಶಾಸನ ಕೇವಲ ಹದಿಮೂರು ಸಾಲುಗಳಿರುವ ಒಂದು ವೀರಗಲ್ಲು – ಕಲ್ಕುಣಿಯ ಶಾಸನ. ಹತ್ತನೆಯ ಶತಮಾನದ ಕನ್ನಡ ಲಿಪಿಯಲ್ಲಿ ಬರೆದಿರುವ, ಕಲ್ಕುಣಿಯ ಆಂಜನೇಯಸ್ವಾಮಿ ದೇವಸ್ಥಾನದ ಮುಂದೆ ನಿಂತಿರುವ, ವೀರಗಲ್ಲು ಶಾಸನದ ಪಾಠ ಹೀಗಿದೆ : ಸ್ವಸ್ತಿ ಬೂತುಗಂ ನಡಪಿದಂ ಕರಿ ಮಾರೆಯ್ಯ ಮಣಲೇರನ ಕುಣಿಙ್ಗೆಲವೂರನ ಅಸಿವೊರದೊಳ್ ಎಱೆಯಙ್ಗನೊಳ್ ನೆಱಪಿದಂ | ಸ್ವಸ್ತಿ ಕುಣುಙ್ಹ ಊರಿನ ಮಣಲೇರನ ಕಾಳೆಗದೊಳ್ ಕೊನ್ತದ ನರಗನ ಮುನ್ದೆ ಎಱೆ ಯಙ್ಗಂ ನೆಱೆಪಲೆಱೆಯಙ್ಗನ ವೇಳೆಯದಲ್ಲೆಬ್ಬೆ ಬಸವಂ ತಲೆಗಡಿಯಿಸಿದಂ [ಎ.ಕ. ೭ (೭೯) ೧೪೧. ೧೦ನೆಯ ಶತಮಾನ ಕಲ್ಕುಣಿ (ಮಂಡ್ಯ ಜಿಲ್ಲೆ, ಮಳವಳ್ಳಿ ತಾಲ್ಲೂಕು) ಪು. ೪೪೧].

ಹೆಬ್ಬಾಳು ಮತ್ತು ಕಲ್ಕುಣಿ ಶಾಸನಗಳ ಸಹಾಯದಿಂದ ಕೆಲವು ತೀರ್ಮಾನಗಳನ್ನು ತಳೆಯಬಹುದು: ಅ. ಮಣಲೆರರು ಕ್ರಿ.ಶ. ಎಂಟನೆಯ ಶತಮಾನದ ವೇಳೆಗೆ ಭಟರಾಗಿ ಕಾಳೆಗದಲ್ಲಿ ಭಾಗವಹಿಸತೊಡಗಿದ್ದರು. ಆ. ನೊಳಂಬರ ರಾಜ್ಯದಲ್ಲಿ ಮಣಲೆರರು ನೊಳಂಬರ ಪರವಾಗಿ ಹೋರಾಡುತ್ತಿದ್ದರು. ಇ. ಮಣಲೆರರು ಕುಣಿ(ಣು)ಗಲು ಎಂಬ ಊರಿನ ಕಡೆಯವರೆಂದು ಗುರುತಿಸಲ್ಪಟ್ಟಿದ್ದರು. ನೊಳಂಬರು ಕ್ರಿ.ಶ. ೭೫೦ರಿಂದ ೧೦೫೦ ರವರೆಗೆ ಮೂರುನೂರು ವರ್ಷಗಳ ಕಾಲ ಆಳಿದರು. ಅವರು ಮೊದಲಿಗೆ ತಲಕಾಡು ಗಂಗರ ಸಾಮಂತರಾಗಿದ್ದರು: ಅನಂತರ ರಾಷ್ಟ್ರಕೂಟರ ಅಧೀನಕ್ಕೆ ಒಳಪಟ್ಟರು; ತರುವಾಯ ಅಂತಿಮವಾಗಿ ಚಾಳುಕ್ಯರ ಕೈಕೆಳಗೆ ಆಳ್ವಿಕೆ ನಡೆಸಿದರು. ಮಣಲೆರರೂ ಸಹ ಗಂಗರ, ರಾಷ್ಟ್ರಕೂಟರ, ಮತ್ತು ಕಟ್ಟಕಡೆಯದಾಗಿ ಚಾಳುಕ್ಯರ ಸಾಮಂತರಾಗಿದ್ದವರು, ಕಲ್ಕುಣಿಯ ಶಾಸನಕ್ಕಿಂತ ಶತಮಾನಗಳಷ್ಟು ಹಿಂದಣದಾದ ಹೆಬ್ಬಾಳು ಶಾಸನದ ಬಲದಿಂದ ಹೇಳಬಹುದಾದ ಹೊಸ ಮಾತಿದೆ. ಮಣಲೆರರು ಗಂಗರ ಅಧೀನತೆ ಬರುವ ಮೊದಲು ನೊಳಂಬರ ಕೈಕೆಳಗೆ, ನೊಳಂಬರ ಸೇನೆಯ ಅಧಿಕಾರಿಗಳಾಗಿದ್ದಂತೆ ಕಾಣುತ್ತದೆ. ಮಣಲೆರರು ನೊಳಂಬರ ಕಡೆಯಿಂದ ಗಂಗರ ಆಶ್ರಯಕ್ಕೆ ಬಂದು ಸೇರಿದ್ದು ಎಂಟನೆಯ ಶತಮಾನದಲ್ಲಿ. ಇದಕ್ಕೆ ಅಸ್ಖಲಿತವಾದ ಗಟ್ಟಿ ಆಧಾರವೆಂದರೆ ಪ್ರಾಚೀನವಾದ ದೇವರಹಳ್ಳಿಯ ಐತಿಹಾಸಿಕ ಮಹತ್ವದ ಶಾಸನ. [ಎ.ಕ. ೭ (೧೭೯) ೧೪೯ (೪ ನಾಮಂ ೮೫) ೭೭೬-೭೭ ದೇವರಹಳ್ಳಿ (ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕು) ಪು. ೧೪೪-೪೭].

ದೇವರಹಳ್ಳಿಯ ಶಾಸನ ಸಂಸ್ಕೃತ ಭಾಷೆಯಲ್ಲಿದೆ. ಇದು ಗ್ರಾಮಸ್ಥರೊಬ್ಬರ ವಶದಲ್ಲಿದ್ದ ಏಳು ತಾಮ್ರ ಶಾಸನಬದ್ಧ ಒಕ್ಕಣೆ. ಗಂಗರ ಪೃಥವೀ ಕೊಂಗುಣಿ ಮಹಾರಾಜ ಶ್ರೀ ಪುರುಷನು ಮಾನ್ಯಪುರದಲ್ಲಿ (ಮಣ್ಣೆ) ಇರುವಾಗ ನಡೆದ ಘಟನೆ ಇದರಲ್ಲಿ ನಿರೂಪಿತವಾಗಿದೆ. ದುಂಡು ನಿರ್ಗುಂದ ಯುವರಾಜನ ಮಗ ಪರಮಗೊಳ ಪೃಥ್ವೀ ನಿರ್ಗುಂದರಾಜನ ಮಡದಿ, ಸಗರ ವಂಶದ ಕುಂದಾಚ್ಚಿಯು ಈ ಶಾಸನದ ಕೇಂದ್ರ ಬಿಂದು. ಕುಂದಾಚ್ಚಿಯ ತಂದೆ ಮರುವರ್ಮ; ಈತನ ಪತ್ನಿ ಒಬ್ಬ ಪಲ್ಲವಾಧಿರಾಜನ ಮಗಳು (ಅವಳ ಹೆಸರು ಶಾಸನದಲ್ಲಿ ನಮೂದಾಗಿಲ್ಲ). ಮರುವರ್ಮನು ಸಗರ ಕುಲಜನು; ಈತನ ಕಾಲ ಸು. ಕ್ರಿ.ಶ. ೭೫೦. ಈತನ ಮಗಳು ಕುಂದಾಚ್ಚಿಯು ಶ್ರೀಪುರದಲ್ಲಿ ‘ಲೋಕ ತಿಲಕಜಿನಾಲಯ’ ವನ್ನು ಕಟ್ಟಿಸಿದಳು. ಕುಂದಾಚ್ಚಿಯ ಪತಿಯಾದ ಪರಮಗೂಳ ನಿರ್ಗುಂದರಾಜನ ವಿಜ್ಞಪ್ತಿಯಿಂದ ಗಂಗರ ಪ್ರಭು ಶ್ರೀಪುರುಷನೂ (೭೨೬-೭೭೭) ಲೋಕ – ತಿಲಕ – ಜಿನಗೃಹಕ್ಕೆ ಪೊನ್ನಳ್ಳಿಗ್ರಾಮವನ್ನು ತೆರಿಗೆ ರಹಿತವಾಗಿ ಬಿಟ್ಟುಕೊಟ್ತನ್ನು; ಇದರ ಕಾಲ ಕ್ರಿ.ಶ. ೭೭೬ – ೭೭. ದೇವರಹಳ್ಳಿಯ ಶಾಸನವು ಎಂಬತ್ತು ಸಾಲುಗಳ ಸಾಕಷ್ಟು ದೀರ್ಘವಾಗಿರುವ ಒಂದು ದೊಡ್ಡ ಶಾಸನವಾಗಿರುವುದರಿಂದ, ಪ್ರಸ್ತುತ ಸಂಪ್ರಬಂಧದ ವಿಚಾರ ಚರ್ಚೆಗೆ ಒಳಪಡುವ ಶಾಸನ ಭಾಗವನ್ನು ಮಾತ್ರ ಉದ್ಧರಿಸುತ್ತೇನೆ:

ಆತ್ಮಜನಿತ ನಯ ವಿಶೇಷ ನಿಶ್ಯೇಷಿಕೃತ ರಿಪು ಲೋಕಃ
ಲೋಕ ಹಿತಮಧುರ ಮನೋಹರ ಚರಿತಃ ಚರಿತಾರ್ಥ ತ್ರಿಕರಣ ಪ್ರವೃತ್ತಿಃ
ಪರಮಗೂಳ ಪ್ರಥಮ ನಾಮಧೇಯ ಶ್ರೀ ಪ್ರಿಥುವೀ ನಿರ್ಗ್ಗುನ್ದರಾಜೋ
ಜಾಯತಱ್ಪಲ್ಲವಾಧಿರಾಜ ಪ್ರಿಯಾತ್ಮಜಾಯಂ
ಸಗರ ಕುಲತಿಲಕಾತ್ಮರುವರ್ಮ್ಯಣೋ ಜಾತಾ ಬುನ್ದಾಚ್ಚಿ ನಾಮಧೇಯಾ

            ಭರ್ತೃಭವನ ಅಬಭೂವ ಭಾರ್ಯ್ಯಾ ತಯಾ ಸತತ ಪ್ರವೃತ್ತಿತ
ಧರ್ಮ್ಮಕಾರ್ಯ್ಯಯಾ ನಿರ್ಮ್ಮಿತಾಯ ಶ್ರೀಪುರೋತ್ತರ ದಿಶಮಲಂಕುರ್ವ್ವತೇ
ಲೋಕ ತಿಲಕ ನಾಮ್ನೇ ಜಿನಭವನಾಯ
[ಅದೇ: ಪು. ೧೪೬, ಸಾಲು ೫೫-೫೮]

ಮೇಲಿನ ಶಾಸನ ಪಾಠದ ಸಾರಾಂಶ : ದುಂಡು ನಿರ್ಗುಮ್ದ ಯುವರಾಜನ ಅಕ್ಕರೆಯ ಮಗನಾದ ಪರಮಗೊಳ ಪ್ರಿಥುವೀ ನಿರ್ಗುಂದ ರಾಜನು ತನ್ನ ರಾಜಕೀಯ ನೈಪುಣ್ಯದಿಂದ, ಯಾರನ್ನೂ ಬಿಡದ ಹಾಗೆ, ಹಗೆಗಳನ್ನೂ ಸದೆಬಡಿದನು. ಈತನ ಸನ್ನಡತೆಯೂ ಸಚ್ಚಿಂತನೆಯೂ ಲೋಕಾಕರ್ಷಕವಾಗಿತ್ತು. ಈತನ ಪಟ್ಟಮಹಿಷಿಯೇ ಕುಂದಾಚ್ಚಿ. ಈಕೆ ಸಗರಕುಲ ಸಂಜಾತೆ, ತಿಲಕನಾದ ಮರುವರ್ಮನ ಮಗಳು. ಮರುವರ್ಮನ ಮಡದಿಯು ಪಲ್ಲವಾಧಿರಾಜನ ಪ್ರೀತಿಯ ಪುತ್ರಿ. ಕುಂದಾಚ್ಚಿಯು ತನ್ನ ಗಂಡ ಪರಮಗೂಳ ನಿರ್ಗುಂದ ರಾಜನ ಅರಮನೆಯಲ್ಲಿ ಇರುವಾಗ ಧಾರ್ಮಿಕ ಕಾರ್ಯನಿರತಳಾಗಿದ್ದಳು. ಶ್ರೀಪುರದ ಉತ್ತರ ದಿಕ್ಕಿಗೆ ಶೋಭಾಯಮಾನವಾದ ಲೋಕತಿಲಕ ಜಿನಾಲಯವನ್ನು ಮಾಡಿಸಿದಳು.

ದೇವರಹಳ್ಳಿಯ ಈ ಶಾಸನ ಗಂಗಕುಲದರಸರ ಇತಿಹಾಸಕ್ಕೂ ಸಗರ ಕುಲದ ಚರಿತ್ರೆಗೂ ಕಾಯಕಲ್ಪವೆಸಗಿದಂತಿದೆ. ಕ್ರಿ.ಶ. ೭೭೬ರ ವೇಳೆಗಾಗಲೇನೆ ಮರುವರ್ಮ ನೆಂಬ ಪ್ರತಿಷ್ಠಿತ ವ್ಯಕ್ತಿ ಈ ಸಗರಚಂಶಕ್ಕೇನೆ ಭೂಷಣವೆನಿಸಿದ್ದನು. ಈತನ ಸಾಮಾಜಿಕ ಸ್ಥಾನಮಾನ ಎಷ್ಟಿತ್ತೆಂದರೆ, ಒಬ್ಬ ಪಲ್ಲವಾಧಿರಾಜನೂ ಸಹ ತನ್ನ ಮಗಳನ್ನು ಮರುವರ್ಮನಿಗೆ ಮದುವೆ ಮಾಡಿಕೊಟ್ಟಿದ್ದನು. ಅಲ್ಲದೆ ಮರುವರ್ಮನ ಮಗಳಾದ ಕುಂದಾಚ್ಚಿಯನ್ನು ಗಂಗರ ಸಾಮಂತನಾದ ಪರಮಗೂಳ ಪ್ರಿಥುವೀ ನಿರ್ಗುಂದರಾಜನು ವಿವಾಹವಾಗಿದ್ದನು. ಜತೆಗೆ ಈ ಶಾಸನ ಬೆಳುಕು ಚೆಲ್ಲುವ ಪ್ರಮುಖ ಧಾರ್ಮಿಕ ವಿಚಾರವೆಂದರೆ, ಸಗರ ಕಲುದವರು ಅಚ್ಚ ಜೈನರಾಗಿದ್ದರೆಂಬುದು. ಸಗರ ವಂಶಜರ ಪ್ರಭಾವ ವಲಯದ ವ್ಯಾಪ್ತಿ ಮತ್ತು ಸ್ವರೂಪವನ್ನು ಈ ಶಾಸನ ಚೆನ್ನಾಗಿಯೇ ಕನ್ನಡಿಸಿದೆ.

೧. ಇದೇ ಕಾಲದ, ಗಂಗ ಭೂಪ ಶ್ರೀಪುರುಷನ ಆಳ್ವಿಕೆಗೆ ಒಳಪಟ್ಟು ತಗ್ಗಲೂರು ಶಾಸನದಲ್ಲಿ ವಿನೋದಿ ಮಣಲೆರನೆಂಬುವನು ತಳಿಯೂರನ್ನು ಆಳುತ್ತಿದ್ದನೆನ್ನಲಾಗಿದೆ [ಎ.ಕ. ೩ (೧೯೭೪) ಗುಂಡ್ಲುಪೇಟೆ ೪೩ (ಎ.ಕ. ೪, ಗು.ಪೇ. ೮೭) ಸು. ೭೫೦ ತಗ್ಗಲೂರು (ಮೈಸೂರು ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕು) ಪು. ೩೮ ಸಾಲು : ೪] ಇದು ದೇವರಹಳ್ಳಿಯ ಶಾಸನದಷ್ಟೇ ಪ್ರಾಚೀನವಾದದ್ದು; ಮರುವರ್ಮ ಮತ್ತು ಈ ವಿನೋದಿ ಮಣಲೆರರು ಸಮಕಾಲೀನರು.

೨. ಇದೇ ಕಾಲದ ಮೂಡಿಗೆರೆ ೩೬ ನೆಯ ಶಾಸನದಲ್ಲಿ ಬರುವ ಸಿಂದಾ ವಿಷಯೇ ಮಣಲೇ ಆಳ್ಕೇ ತ್ರಿಶಕ – ಎಂಬ ಹೇಳಿಕೆಯನ್ನೂ ಅವಶ್ಯ ಪರಿಭಾವಿಸಬೇಕು [ಎ.ಕ.೬ ಮೂಡಿಗೆರೆ – ೩೬. ೭೫೦-೫೧. ಜಾವಳಿ (ಚಿಕ್ಕಮ/ಮೂಡ್ಗೆರೆ ತಾ) ಪು. ೧೫೨-೫೩. ಸಾಲು : ೪೨ : IWG ೧೯೮೪ : ನಂ. ೪೩ : ಪು. ೧೬೫.].

ಪ್ರಾಚೀನ ಶಾಸನಗಳು

ಮಣಲೆರರನ್ನು ಕುರಿತು ಪ್ರಸ್ತಾಪಿಸುವ ನಾಲ್ಕನೆಯ ಪ್ರಾಚೀನ ಶಾಸನವೆಂದರೆ ವಿಜಯಪುರದ್ದು. ಈ ಅತೇದಿ ಶಾಸನ ಗಂಗರ ಎಱೆಯಪ್ಪ ದೊರೆಯ ಆಳ್ವಿಕೆಗೆ (೮೪೩-೭೦), ಕ್ರಿ.ಶ. ಒಂಬತ್ತನೆಯ ಶತಮಾನಕ್ಕೆ ಸೇರಿದ್ದು :

ಸ್ವಸ್ತಿ ಶ್ರೀ ಎಱೆಯಪ್ಪೊರಾ ಪೃಥುವೀ ರಾಜ್ಯಂ
ಗೆಯೆ ಶೌಚ ಮಣಲೆಯರುಂ ನನ್ನಿಮೞಲೂರುಂ ಸನ್ತೊ
ನಮಾಳ ಕಿಱುವೆೞ್ನಗರಾ ಪನ್ನಿರ್ವ್ವರ್ಗ್ಗಂ ರಣಪಾರರಾ
ಮಣಲೆಯರಸರಾ ಸಮಾಧಿಯೆ ಸಮಾಧಿ ಇಲ್ಲಾದೆ
ಱೆ ಪೊನ್ನೆತ್ತಿಕೊಳೆ ಕೊಟ್ಟ ಒಕ್ಕಲೆ ಪೊನ್ನಿಟ್ಟು ಪುಗಿಸಿದಾರ್

[ಎ.ಕ. ೫ (೧೯೭೬) ೧೪೬ (೧೪ ತಿನ ೨೫೩) ಕ್ರಿ. ಶ. ೯ನೆಯ ಶ. ವಿಜಯಪುರ (ಮೈಸೂರು ಜಿಲ್ಲೆ, ಟಿ. ನರಸೀಪುರ ತಾಲ್ಲೂಕು) ಪು. ೫೫೪]. ಇದರ ಸಾರಾಂಶ : ರಣಪಾರ ಮತ್ತು ಮಣಲೆಯರಸರ ಅನುಮತಿಯನ್ನು ಪಡೆದು, ಶೌಚ ಮಣಲೆಯರ ಹಾಗೂ ನನ್ನಿ ಮಣಲೆಯರ ಹಾಗೂ ನನ್ನಿ ಮಱಲೂರರು ಕಿಱುವೆಟ್ ನಗರದ ಹನ್ನೆರಡು ಜನಕ್ಕೂ ಹೊನ್ನನಿತ್ತು ನೆಲದ ಒಕ್ಕಲನ್ನು ಹೊಂದಿದರು. ಇದರಲ್ಲಿ ನನ್ನಿ ಮಱೆಲೂರರ ಎಂಬುದು ನನ್ನಿಮಣಲೆಯರ ಎಂದಿರಬಹುದು. ಈ ಶಾಸನ ರಚನೆಯ ವೇಳೆಗೆ ಆಗಲೇನೆ ಈ ಮಣಲೆರರಿಗೆ ‘ಮಣಲೆಯರಸ’ ಎಂಬ ‘ಅರಸ’ ಸ್ಥಾನಕ್ಕೇರಿಸಲಾದ ಮರ್ಯಾದೆ ಸಂದಿದೆ. ಎಱೆಯಪ್ಪನೆಂದರೆ ಒಂದನೆಯ ಎಱೆಗಂಗ ನೀತಮಾರ್ಗದೊರೆ.

ಇದೇ ವಿಜಯಪುರದ, ಇದೇ ಅವಧಿಗೆ ಸೇರಿದ ಇನ್ನೊಂದು ಶಾಸನವೂ ಮಹತ್ವದ್ದಾಗಿದೆ:

            ಸ್ವಸ್ತಿ ಶ್ರೀ ಕೊಙ್ಗುಣಿ ಮುತ್ತರಸರ್ ಶಿವ
ಮಾರ ಪ್ರಿಥುವೀ ರಾಜ್ಯಂ ಕಿಯೆ ಮಣಲೆ ಅರಸ
ರ್ಕ್ಯೂಮ್ಬಿಡಿ ಕಿೞಲೆನಾಡಾಳೆ ಕುಳತ್ತೊರೊಂಪೆಡೆ
ದಿ ಕಿಱುಪೆೞ್ನಗರಾಳೆ ಕಿಱುಪೆಳ್ನ
ನ್ನಿರ್ವ್ವರ್ಕ್ಕಮ್ಪುನ್ಪುಲಮೆಲ್ಲ ಪತ್ತೊನ್ದಿ ವಿ(ಟ್ಟಾರ್)

[ಅದೇ : ೧೪೫ (೧೪, ೨೫೨) ವಿಜಯಪುರ, ೯ ಶ. ಪು. ೫೫೪. ಸಾಲು : ೧-೫; ಮೈ. ಆ. ರಿ. ೧೯೧೨. ಪು. ೩೨]. ಇದು ಎಂಟನೆಯ ಶತಮಾನಾಂತ್ಯದ ಶಾಸನವೆಂದು, ಭಾಷಾವಿಜ್ಞಾನ ದೃಷ್ಟಿಯಿಂದ ಪರಿಶೀಲಿಸಿ, ಹೇಳಬಹುದು. ಪೂರ್ವದ ಹಳೆಗನ್ನಡ ಭಾಷೆಯ ಭಾಷಿಕ ಲಕ್ಷಣಗಳು ಕಾಣುತ್ತವೆ. ಗೆಯ್(ಮಾಡು) ಧಾತುವಿನ ಮೂಲ ರೂಪವಾದ *ಕೆಯ್ – ಎಂಬ ಅಘೋಷಸ್ವನಾದಿಯಿರುವ ರೂಪಕ್ಕೆ ಸೇರಿದ ಕಿಯೆ (ಕೆಯ್-, ಕೆಯೆ-; ಗೆಯ್-, ಗೆಯೆ-: ಕೆಯ್ – ಕೆಯೆ – ಕಿಯೆ-) ಎಂಬ ಜ್ಞಾತಿರೂಪವನ್ನು ಉಳಿಸಿಕೊಂಡಿದೆ. ರಾಜ್ಯಂ ಕಿಯೆ ಎಂದಿರುವ ರೂಪವು ಮುಂದೆ ೯-೧೦ನೆಯ ಶತಮಾನದಿಂದ ರಾಜ್ಯಂಗೆಯೆ ಎಂದಾಗಿದೆ. ಕಿೞಲೆ ನಾಡಾಳೆ ಎಂಬುದು ಕೆಳಲೆ ನಾಡಾಳೆ ಎಂದು ಬೆಳವಣಿಗೆ ಪಡೆಯುತ್ತದೆ. ದ್ರಾವಿಡ ಭಾಷೆಗಳಲ್ಲಿ ಸ್ವರಸ್ವನಪಲ್ಲಟ ಪ್ರಕ್ರಿಯೆಯಲ್ಲಿ ಇ/ಎ ವ್ಯತ್ಯಾಸವೂ ಒಂದು : ಕಿಱರೆ-ಕೆಱಲೆ ಎಂಬಲ್ಲಿ ಈ ವ್ಯತ್ಯಾಸ ಅಡಗಿದೆ. ೞಕಾರ ೞಕಾರದ ಪ್ರಯೋಗದಲ್ಲಿಯೂ ಪ್ರಾಚೀನ ಕನ್ನಡದ ಪಳೆಯುಳಿಕೆಗಳು ಕಾಣುತ್ತವೆ. ಕೆ(ಕಿ) ಳಲೆನಾಡು ಎಂಬುದು ಗಂಗವಾಡಿ ೯೬೦೦೦ ದೊಳಗೆ ಸೇರಿತ್ತು. ಕುಳತ್ತೂರು : ಕೊಳತ್ತೂರು ಎಂಬಲ್ಲಿಯೂ ಉ/ಒ ಸ್ವರ ಪರಿವರ್ತನೆಯಿದೆ. ಇದಾನ್- ಇದನ್, ಅೞಿಪ್ಪೊನ್-ಅೞಿಪೊನ್ ಮುಂತಾದ ಹಿಂದಣ ಬಳಕೆ ಗಮನಿಕೆಗೆ ಅರ್ಹವಾಗಿದೆ. ಇದು ಎಂಟನೆಯ ಶತಮಾನಾಂತ್ಯದ ಗಂಗರ ಕೊಙ್ಗುಣೆ ಶ್ರೀ ಮುತ್ತರಸ ಶ್ರೀಪುರುಷನ ಮಗನಾದ ಇಮ್ಮಡಿ ಶಿವಮಾರನ (೭೮೮-೮೧೬) ಆಳ್ವಿಕೆಗೆ ಸೇರಿದ್ದು. ಇದರಲ್ಲಿ ಕೂಂಬಡಿ-ಕಿೞಲೆನಾಡನ್ನು ಆಡುತ್ತಿದ್ದ ಮಣಲೆ ಅರಸನ ಪ್ರಸ್ತಾಪವಿದೆ. ವಿಜಯಪುರದ ಎರಡೂ ಶಾಸನಗಳಲ್ಲಿ ನಿರ್ದಿಷ್ಟ ಧರ್ಮದ ಸಂಬಂಧಗಳಿಲ್ಲವೆಂದು ಮೇಲುನೋಟಕ್ಕೆ ತೋರಿದರೂ, ಒಳನೋಟಕ್ಕೆ ಜೈನಧರ್ಮದ ಸ್ಪರ್ಶ ಕಾಣುತ್ತದೆ: ‘ಮಣಲೆಯರ ಸರಾ ಸಮಾಧಿಯೆ ಸಮಾಧಿ’ ಎಂಬುದು ಸಮಾಧಿಮರಣದಿಂದ ಮುಡಿಪಿದ ಸಂಗತಿಯನ್ನು ಹೇಳುತ್ತದೆ. [InscriptionsoftheWesternGangas : (೧೯೮೪); ೮೯. ೯. ಶ. ಪು. ೨೮೦]

ಬಿ. ಎಲ್. ರೈಸ್‍ರವರು ಸಿದ್ಧಪಡಿಸಿದ ತಾಯಲೂರು ಶಾಸನದ ಮೂಲ ಕಲ್ಲು ಕಳೆದುಹೋಗಿದೆ : ಆದರೆ ಆ ಶಾಸನದ ಒಕ್ಕಣೆ ಪೂರ್ತಿ ಅಚ್ಚಾಗಿದೆ. ಅದರ ಆರಂಭದ ವಾಕ್ಯ ಮಾತ್ರ ಈ ಸಂಪ್ರಬಂಧಕ್ಕೆ ಸಂಬಂಧಪಟ್ಟಿದೆ. ಪ್ರಸ್ತುತತೆಯಿರುವ ಮೊದಲನೆಯ ಪಂಕ್ತಿ ಹೀಗಿದೆ : ಶ್ರೀಮನ್ಮಣಲಯರನ ಸನ್ಮಥ. ಅಂದರೆ ಆ ಶಾಸನೋಕ್ತ ಮಣಲೆಯರನು ಆ ಕಾಲದ ಮತ್ತು ಆ ಭಾಗದ ಸ್ಥಳಾಧಿಪತಿಯಾಗಿ ಆಳುತ್ತಿದ್ದು ಅವನ ಸಮ್ಮತಿಯಿಂದ ಶಾಸನ ಹೊರಟಿದೆ. ಇದರ ಕಾಲ ಶಕವರ್ಷ ೮೨೯: ಇದು ಮದ್ದೂರು ತಾಲ್ಲೂಕಿಗೆ ಸೇರಿದೆ [ಎ.ಕ. ೭ (೧೯೭೯) ಮದ್ದೂರು ೫೬ (೩ ಮಂ ೧೪). ೯೦೭. ತಾಯಲೂರು (ಮಂಡ್ಯಜಿಲ್ಲೆ, ಮದ್ದೂರು ತಾಲ್ಲೂಕು) ಪು. ೨೮೪-೮೫].

ಕಾಲಕ್ರಮದಲ್ಲಿ ಅಳವಡುವ ಆರನೆಯ ಶಾಸನ ಕೂಲಿಗೆರೆಯದು : ಅಲ್ಲಿಯ ಕೆರೆಯ ಏರಿಯ ಮೇಲಿರುವ ಕಲ್ಲಿನ ಶಾಸನದ ಒಕ್ಕಣೆ:

            ಭದ್ರಂ ಭದ್ರೇಶ್ವರಸ್ಯ ಸ್ಯಾತ್ಕುದ್ರವಾದಿ ಮದಚ್ಛಿದ:
ವರ್ಧಮಾನ ಜಿನೇನ್ದ್ರಸ್ಯ ಶಾಸನಾಯ ಭವದ್ವಿಷೆ
||
ಶಕನೃಪ ಕಾಲಾತೀತ ಸಮಸರತಂಗಳೆಣ್ಟುನೂಱ
ಮುವತ್ತೆಣ್ಟನೆಯ ವರಿಷಂ ಪ್ರವರ್ತ್ತಿಸುತ್ತಿರೆ
ಸ್ವಸ್ತಿ ಕೊಙ್ಗುಣಿವರ್ಮ್ಮಧರ್ಮ್ಮ ಮಹಾರಾಜಾಧಿರಾಜ
ಕುವಳಲಪುರವರೇಶ್ವರ ನನ್ದಗಿರಿನಾಥ ಶ್ರೀಮತ್ ನೀತಿಮಾರ್ಗ
ಪೆರ್ಮ್ಮನಡಿಗಳ ರಾಜ್ಯಮುತ್ತರೋತ್ತರ ಸಲುತ್ತಮಿರೆ ಸಕರ
ವೇಬ್ದೇ ಕುವೇಬ್ದೇ ಮಣಲೆಯಾರಂ ಕನಕಗಿರಿಯ ತೀರ್ತ್ಥದ ಮೇಗೆ
ಬಸದಿಯ ಮಾಡಿಸಿ ಅರಸರಧ್ಯಕ್ಷದೊಳ್ ಕನಕಸೇನ ಭಟಾರರ್ಗ್ಗೆ
ತಿಪ್ಪೆಯೂರೊಳಾದ ಅಟ್ಟದೆಱೆಯುಂ ಕುಱುದೆಱಿಯುಂ
ಮುಳ್ಳ ಸಾಮನ್ತದೆಱಿಯೆಲ್ಲವಮ್ಬಿಟ್ಟನಿದನಱೆದೊಂ
ಕೆಱೆಯುಮಾರಮೆಯುಮನಱಿದು ಕೊಣ್ಡೊಮ್ಮಹಾಪಾತಕನ್ ||

[ಎ.ಕ. ೭ (‘೭೯) ೧೦೦ (೩ ಮಳವಳ್ಳಿ ೩೦) ೯೧೬-೧೭. ಕೂಲಿಗೆರೆ (ಮಂಡ್ಯ ಜಿಲ್ಲೆ, ಮದ್ದೂರು ತಾಲ್ಲೂಕು) ಪು. ೩೧೩]

ಈ ಕೂಲಿಗೆರೆಯ ಶಾಸನ ಗಂಗರ ಒಡೆಯನಾದ್ ನೀತಿಮಾರ್ಗ ಪೆರ್ಮ್ಮಾನಡಿಯ (೯೦೭-೨೧) ಆಡಳಿತ ಕಾಲದ್ದು : ಈ ಇಮ್ಮಡಿ ನೀತಿಮಾರ್ಗ ಪೆರ್ಮ್ಮಾನಡಿಯು ಒಂದನೆಯ ಬೂತುಗನ (೮೭೦) ಮಗನಾದ ಎಱೆಗಂಗನೇ ಆಗಿದ್ದಾನೆ. ಕೂಲಿಗೆರೆ ಶಾಸನವು ಗಂಗರ ಸಾಮನ್ತನಾದ ಮಣಲೆಯರನು ಕನಕಗಿರಿಯ ತೀರ್ತ್ಥದಮೇಗೆ ಬಸದಿಯನ್ನು ಮಾಡಿಸಿದನು; ಕನಕಗಿರಿ – ತಿಪ್ಪೂರು ತೀರ್ಥವು ೮-೯ ನೆಯ ಶತಮಾನದ ವೇಳೆಗೆ ಕೀರ್ತಿಶಾಲಿಯಾಗಿತ್ತು. ಬಸದಿಯೊಡೆಯರಾದ ಕನಕಸೇನ ಭಟಾರರಿಗೆ ತನ್ನ ಸಾಮಂತ ತೆರಿಗೆಯ (ಅಟ್ಟದೆಱೆ ಮತ್ತು ಕುಱುದೆಱೆಗಳೂ ಸೇರಿರುವ) ಆದಾಯಗಳನ್ನು ಬಿಟ್ಟುಕೊಟ್ಟನು. ಈ ವಿನಾಯಿತಿ ತೀರ್ಪಿಗೆ ಅಧ್ಯಕ್ಷರಾಗಿ ಗಂಗರ ಎಱೆಯ ನೀತಿಮಾರ್ಗ ಪೆರ್ಮ್ಮಾನಡಿಯೇ ಇದ್ದುದು ಇದರ ಮಹತ್ವವನ್ನು ಮನವರಿಕೆ ಮಾಡಿಕೊಡುತ್ತದೆ. ಹಾಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿಗೆ ಬಸ್ತಿ ಅರೆ ತಿಪ್ಪೂರಿನಲ್ಲಿರುವ (ತಿಪ್ಪೂರು ತೀರ್ತ್ಥವಾದ) ಚಿಕ್ಕಬೆಟ್ಟವೇ ಈ ಕನಕಗಿರಿ. ಮೈಸೂರು ಜಿಲ್ಲೆಯ ಮಲೆಯೂರಿನಲ್ಲಿರುವ ಜೈನ ಬೆಟ್ಟಕ್ಕೂ ಕನಕಗಿರಿ ಎಂಬ ಹೆಸರಿದೆ. ಅದರ ಮೇಲೆ ಜೈನ ದೇವಾಲಯವಿದ್ದು ಪ್ರಾಚೀನ ತೀರ್ತ್ಥವಾಗಿದೆ. ರಾಯಚೂರು ಜಿಲ್ಲೆಯಲ್ಲಿಯೂ ಒಂದು ಕನಕಗಿರಿಯಿದೆ. ತಿಪ್ಪೂರು ಶಾಸನೋಕ್ತ ಮಣಲೆಯರನು ೯೧೬ ರ ವೇಳೆಗೆ ಸಾಮಂತನಾಗಿದ್ದನು. ಈತನ ಮಗನೇ ಆತಕೂರು ಶಾಸನೋಕ್ತ ಮಣಲೆಯರ. ಕಾಲೈಕ್ಯ, ಸ್ಥಳೈಕ್ಯ, ಮತೈಕ್ಯ, ಸಾಮಂತಾಧಿಕಾರ ಸಮಾನತೆ, ಗಂಗರ ಅಧೀನತ್ವ – ಇವು ಸಮಂಜಸವಾದ ಹೊಂದಾಣಿಕೆ ತೋರಿಸುತ್ತವೆ. ಆತನೂರು- ತಿಪ್ಪೂರು ತೀರ ಸಮೀಪದ ಊರುಗಳು.

ಕೂಲಿಗೆರೆ ಶಾಸನವು, ದೇವರಹಳ್ಳಿಯ ಶಾಸನದಂತೆ, ಸಗರ – ಮಣಲೆರೆ ಮನೆತನವು ನಿಷ್ಠಾವಂತ ಜೈನರೆಂದು ನಿವೇದಿಸಿದೆ. ತಿಪ್ಪೂರು ತೀರ್ತ್ಥವಾದದ್ದೂ, ವರ್ಧಿಷ್ಣುವಾಗಿ ಬೆಳಗಿದ್ದೂ ಮಣಲೆಯರ ಮತ್ತು ಗಂಗರ ಶ್ರದ್ಧಾಸಕ್ತಿಯ ಫಲ. ಸುಮಾರು ಏಳು ನೂರು ವರ್ಷಗಳವರೆಗೆ ಈ ಕ್ಷೇತ್ರ ಪ್ರಕಾಶಿತವಾಗಿತ್ತೆಂಬುದಕ್ಕೆ ಶಾಸನಗಳು ಸಾಕ್ಷಿಯಾಗಿ ನಿಂತಿವೆ [ಎ.ಕ. ೭ (‘೭೯) ೫೧, ೫೨, ೫೪, ೭೬, ೧೦೬ ಮೊದಲಾದ ಶಾಸನಗಳು]. ಕೂಲಿಗೆರೆಯ ಶಾಸನದ ತರುವಾಯ ಬರುವ ಕಲ್ಕುಣಿಯ ಶಾಸನವನ್ನು ಕುರಿತು ಮೇಲೆ ಹೆಬ್ಬಾಳು ಶಾಸನವನ್ನು ವಿಮರ್ಶಿಸುವಾಗ ಪ್ರಸ್ತಾಪಿಸಿದ್ದಾಗಿದೆ. ದೇವರಹಳ್ಳಿ, ಹೆಬ್ಬಾಳು, ವಿಜಯಪುರ, ಕೂಲಿಗೆರೆ ಕಲ್ಕುಣಿ ಶಾಸನಗಳಾದ ಮೇಲೆ ಕಾಲಕ್ರಮದಲ್ಲಿ ಬರುವುದು ಆತುಕೂರು ಶಾಸನ. ಇದು ಕರ್ನಾಟಕದ ಇತಿಹಾಸದಲ್ಲಿ ಸುಪ್ರಸಿದ್ಧವಾದ ಶಾಸನ.

ಆತನೂರು ಶಾಸನವನ್ನು, ಅದರ ಆಯಾಮಗಳನ್ನು ಚರ್ಚಿಸುವ ಪೂರ್ವದಲ್ಲಿ ಮುತ್ತತ್ತಿಯ ಶಾಸನವನ್ನು ಕುರಿತು ಕೆಲವು ಸಂಗತಿಗಳ ಚರ್ಚೆಯೊಂದಿಗೆ ವಿವರಿಸಬೇಕಾಗಿದೆ. ಶಾಸನದ ಪಾಠ ಹೀಗಿದೆ:

            ……………………………..
ನಿಬಪ್ಪಂಡಿತ ಪದಕಮಳ……..
ಕಿಕುಳ ವಳಭೀಪುರವರೇಶ್ವರ ಬಾ
ಲಾತ ಪಂಚನೇತ್ರಧ್ವಜ ವಿರಾಜಮಾನ
ಅರಿರೂಪಸಿಂಗ ನನ್ನಿಯ ಸೇಕರ ಶ್ರೀ
ಮುತ್ತತ್ತಿಯಂ ನಾಗಕುಮಾರಯ್ಯಂಗೆ ಕೊಟ್ಟ

[ಎ.ಕ. ೫ (೧೯೭೬) ತಿನ (೨ ತಿನ ೧೦೨) ೯- ೧೦ ಶ. ಮುತ್ತತ್ತಿ (ಮೈಸೂರು ಜಿಲ್ಲೆ, ತಿ.ನ. ತಾಲೂಕು) ಪು. ೪೩೯-೪೦]

ಈ ತ್ರುಟಿತ ಶಾಸನದಲ್ಲಿ, ‘ಬಾಲಾತ’ ಎಂಬುದು ‘ಬಾಲಾತ(ಪಂ)’ ಎಂದಿರಬೇಕು. ‘ಬಾಲಾತ(ಪಂ) ಪಂಚನೇತ್ರಧ್ವಜ….’ ಎಂಬುದು ಸರಿಯಾದ ಪಾಠ. ಬಾಲಾತ(ಪಂ) ಎಂಬ ಶಬ್ದಾಂತ್ಯದಲ್ಲಿಯೂ, ಪಂಚನೇತ್ರಧ್ವಜ ಎಂಬ ಶಬ್ದಾದಿಯಿಂದಾಗಿ ಒಂದು ‘ಪಂ’ ಬಿಟ್ಟುಹೋಗಿದೆ; ಇದಕ್ಕೆ ಸದೃಶಾಕ್ಷರಲೋಪವೆಂದು ಹೆಸರು. ಇದನ್ನು ಸರಿಪಡಿಸಿ ಕೊಂಡರೆ ಶಾಸನ ಪಾಠ ಅಕ್ಲಿಷ್ಟವಾಗಿ, ಅರ್ಥ ಪ್ರತೀತವಾಗುತ್ತದೆ: “ವಳಭೀಪುರ ವರೇಶ್ವರನೂ, ಬಾಲಸೂರ್ಯ ಪ್ರಕಾಶ ಮಾನನೂ (ಬಾಲಾತಪಂ), ಪಂಚನೇತ್ರಧ್ವಜ ವಿರಾಜ ಮಾನನೂ, ಹಗೆಗಳಿಗೆ ಸಿಂಹನೂ, ಸತ್ಯವಂತರ ಮುಡಿಯೂ ಆದ…….. ಎಂಬಾತನು ಮುತ್ತತ್ತಿಯನ್ನು ನಾಗಕುಮಾರನಿಗೆ ಕೊಟ್ಟನು” ಎಂಬುದು ಈ ಶಾಸನದ ಅನ್ವಯ.

ಪಂಚನೇತ್ರ ಮತ್ತು ಪಂಚನೇತ್ರ ಧ್ವಜ ಎಂಬೆರಡು ಶಬ್ದಗಳು ಕನ್ನಡ ಸಾಹಿತ್ಯದಲ್ಲಿ ಅಪರೂಪದ ವಿಶಿಷ್ಟ ಪ್ರಯೋಗಗಳು. ಈ ಎರಡೂ ಶಬ್ದಗಳು ಕನ್ನಡ ಸಾಹಿತ್ಯ ಪರಿಷತ್ತಿನ ಬೃಹತ್ ಕನ್ನಡ ನಿಘಂಟಿನಲ್ಲಿ (ಸಂಪುಟ : ಎರಡು) ದಾಖಲಾಗಿಲ್ಲ. ಪ್ರಾಯಃ ೨೧ನೆಯ ಶತಮಾನದಲ್ಲಿ ಮರು ಮುದ್ರಣವಾಗುವಾಗ ಈ ಎರಡು ಹೊಸ ಶಬ್ದಗಳನ್ನು ಮುಖ್ಯ ಉಲ್ಲೇಖವಾಗಿ ಸೇರಿಸಬೇಕು, ಮತ್ತು ಮುತ್ತತ್ತಿ ಶಾಸನದ ಪ್ರಯೋಗಗಳನ್ನು ಸೇರಿಸಬೇಕು. ಪಂಚನೇತ್ರ ಎಂದರೆ ಸಿಂಹ, ಕೇಸರಿ ಎಂದರ್ಥ. ಪಂಚನೇತ್ರಧ್ವಜ ಎಂದರೆ ಸಿಂಹಧ್ವಜ, ಕೇಸರಿ ಕೇತು ಎಂದರ್ಥ.

ಮುತ್ತತ್ತಿಯ ಶಾಸನೋಕ್ತ ಪ್ರಧಾನ ವ್ಯಕ್ತಿಯ ಮಣಲೆರನೇ ಎಂಬುದನ್ನು ಅಂತರಬಾಹ್ಯ ಪ್ರಾಮಾಣ್ಯಗಳಿಂದ ಸ್ಥಾಪಿಸಬಹುದು. ವಳಭೀಪುರವರೇಶ್ವರ ಎಂಬ ಪ್ರಯೋಗಾಧಾರದ ಬಲದಿಂದ, ಈ ಶಾಸನ ಮಣಲೆಯರ ವಂಶಜನೊಬ್ಬನನ್ನು ಸುಟ್ಟಿಸಿ ತೋರುತ್ತದೆಂದು ಸೀತಾರಾಮ ಜಾಗೀರ್‌ದಾರ್ ಊಹಿಸಿರುವುದು ಸರಿಯಾಗಿದೆ. (ಕೆಳಲೆ ಹೈಹಯರು, ‘ಗುಲಗಂಜಿ’; ಐದನೆಯ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಪುಟ (೧೯೯೩) : ಪು. ೯೯-೧೦೧; (ಸಂ) ನೀ. ಗಿರಿಗೌಡ) ಆದರೆ ಅದಕ್ಕಿಂತಲೂ ಬಲಿಷ್ಠವಾದ ಸಾಕ್ಷಿ ಪುರಾವೆಗಳು ಉಪಷ್ಟಂಬಕವಾಗಿ ನಿಂತು, ಈ ತೀರ್ಮಾನವನ್ನು ಹುರಿಗೊಳಿಸುವ ಮಾತುಗಳು ‘ಪಂಚನೇತ್ರಧ್ವಜ ವಿರಾಜಮಾನ’ ಎಂಬ ಪ್ರಯೋಗ. ಸಗರ-ಮಣಲೆರ ಕುಲಜರನ್ನು ‘ಕೇಸರಿ ಕೇತು’ [ಸೌ.ಇ.ಇ. ೨೦.೪೭. ೧೦೭೪ ಲಕ್ಷ್ಮೇಶ್ವರ (ಧಾರವಾಡ ಜಿಲ್ಲೆ ಶಿರಹಟ್ಟಿ ತಾಲ್ಲೂಕು) ಪು. ೫೪. ಸಾಲು : ೧೫] ಎಂದೂ, ‘ಸಿಂಹಲಾಂಛನ’ ಎಂದೂ (ಅದೇ : ಸಾಲು ೨೧) ಶಾಸನಗಳಲ್ಲಿ ನಮೂದಿಸಲಾಗಿದೆ. ಮುತ್ತತ್ತಿಯ ಶಾಸನದಲ್ಲಿ ಜೈನಸ್ಪರ್ಶವಿದೆ: ನಿಬ್ಬಪ್ಪ(ರ್ನಂ)ಡಿತ ಪದಕಮಳ, ನಾಅಕುಮಾರಯ್ಯಂಗೆ ಎಂಬೆರಡು ಪ್ರಯೋಗಗಳು ಈ ಆಲೋಚನೆಗೆ ಜೀವತುಂಬಿ ಪುಷ್ಟಿ ನೀಡುತ್ತವೆ. ಮುತ್ತತ್ತಿಯ ಶಾಸನದ ತರುವಾಯ್ ಆತುಕೂರ ಶಾಸನವನ್ನು ಪರಿಶೀಲಿಸಬಹುದು.

ಮಣಲೆರ ವಂಶವನ್ನು ಸಗರವಂಶ ಎಂಬ ಇನ್ನೊಂದು ಪರ್ಯಾಯ ಹೆಸರಿನಿಂದ ಮೊಟ್ಟಮೊದಲನೆಯದಾಗಿ ಕಳೆದಿರುವುದು, ಕ್ರಿ.ಶ. ೭೭೬ರ ದೇವರಹಳ್ಳಿ ಶಾಸನದಲ್ಲಿಯೇ. ಅದರ ತರುವಾಯದ ನಾಲ್ಕು ಪ್ರಾಚೀನ ಶಾಸನಗಳಲ್ಲಿ ಸಗರಕುಲ – ಸಗರವಂಶ ಎಂಬ ಪ್ರಯೋಗ ಕಾಣುವುದಿಲ್ಲ. ಆದರೆ ಆತುಕೂರು ಶಾಸನದಲ್ಲಿ ಇವೆರಡೂ ಮಾತುಗಳು ಸ್ಪಷ್ಟವಾಗಿ ಬಂದಿವೆ.

ಆತುಕೂರು ಶಾಸನ

ಗಂಗರ ಪೆರ್ಮಾನಡಿ ಬೂತುಗನು (ಬುತುಗ ೨೦) ರಾಷ್ಟ್ರಕೂಟರ ಮುಮ್ಮಡಿ ಕೃಷ್ಣ (ಕನ್ನರದೇವ)ನ (೯೩೮-೬೧) ಮಹಾಮಂಡಲೇಶ್ವರನಾಗಿ ಆಳುತ್ತಿದ್ದನು. ಬೂತುಗನ ಕೈಕೆಳಗಿನ ಮಣಲೆರನನ್ನು ಆತುಕೂರು ಶಾಸನದಲ್ಲಿ ‘ಸಗರವಂಶವಳಭೀಪುರವರೇಶ್ವರ’ ಎಂಬ ಪ್ರಶಸ್ತಿ ಸಹಿತ ಪರಿಚಯಿಸಲಾಗಿದೆ. ಈ ವಳ(ಲ)ಭೀಪುರವೆಂಬುದು ಮಧ್ಯಭಾರತದ ನರ್ಮದಾ ಮತ್ತು ರೇವಾನದೀ ತೀರದ ಪ್ರಾಚೀನ ನಗರ; ಸಗರರು ಉತ್ತರದಿಂದ ದಕ್ಷಿಣಕ್ಕೆ ಸರಿದು ಬಂದ ವಲಸೆಗಾರರು. ಸಗರ ವಂಶಜರು ೭-೮ನೆಯ ಶತಮಾನದ ವೇಳೆಗೆ ಕನ್ನಡ ನಾಡಿನ ಮುಖ್ಯ ಪ್ರವಾಹದಲ್ಲಿ ಮಿಳಿತವಾಗಿದ್ದರು.

ಆಗಲೇ ಹೇಳಿರುವಂತೆ, ಕರ್ನಾಟಕದ ಶಾಸನಗಳ ಚರಿತ್ರೆಯಲ್ಲಿ ಹೆಸರುವಾಸಿ ಯಾಗಿರುವ ಆತಕೂರು ಶಾಸನವು ಮಣಲೆರನ ಸಾಹಸಗಾಥೆ. ಮಣಲೆರನ ಸೂಚನೆ ಯಂತೆ, ಪ್ರಾಯಃ ರತ್ನತ್ರಯರಲ್ಲಿ ಒಬ್ಬನೂ, ಜಿನಸಮಯ ದೀಪಕರಲ್ಲಿ ಒಬ್ಬನೂ ಆದ ಪೊನ್ನಕವಿಯು ಈ ಶಾಸನವನ್ನು ರಚಿಸಿರಬೇಕೆಂದು ಭಾವಿಸಲಾಗಿದೆ; ಈ ಅಂಶವು ಪ್ರಸ್ತುತ ಶಾಸನದ ಮಹತ್ವವನ್ನು ಇನ್ನಷ್ಟು ಹೆಚ್ಚಿಸಿದೆ. ರಾಷ್ಟ್ರಕೂಟರಿಗೂ ಚೋಳರಿಗೂ ನಡೆದ ಹಲವು ಯುದ್ಧಗಳಲ್ಲಿ, ತಕ್ಕೊಳದಲ್ಲಿ ಜರುಗಿದ ಕಾಳೆಗವು ಒಂದು ಐತೀರ್ಪಿನ ದೊಡ್ಡಯುದ್ಧ. ಕ್ರಿ.ಶ. ೯೪೯-೫೦ ರಲ್ಲಿ ನಡೆದ ಈ ಮಹಾಸಮರದಲ್ಲಿ ‘ಚೋೞರಕೋಟೆ’ ಯೆಂಬ ಸಿಂಧುರವನ್ನು (ಆನೆ), ಸಗರ ತ್ರಿಣೇತ್ರ (ಮುಕ್ಕಣ್ಣ) ನಾದ ಮಣಲೆರನ ಆನೆಯ ಶಿರಾಗ್ರ – ನೆತ್ತಿ ಬಿರಿಯುವಂತೆ ಪೊಯಿದು ಕೊಂದನು. ಈ ಶೂರತ್ವದಿಂದಾಗಿ ಮಣಲೆರನು ಕದನೈಕ ಶೂದ್ರಕನೆನಿಸಿದನು.

ತಕ್ಕೊಲ ಕಾಳೆಗದಲ್ಲಿ ಮೂವಡಿಚೋಳ ರಾಜಾದಿತ್ಯನನ್ನು ಕೊಂದವನು, ರಟ್ಟರ ಚಕ್ರವರ್ತಿಯಾದ ಮುಮ್ಮಡಿ ಕೃಷ್ಣನೊ, ಅಥವಾ ಸಾಮಂತ ಇಮ್ಮಡಿ ಬೂತುಗಯ್ಯನೋ, ಇಲ್ಲವೇ ಬೂತುಗನ ಕೈಕೆಳಗಿನ ಅಧಿಕಾರ (ಆತನಾಳು) ಸಗರ ಕುಲದ ಮಣಲೆರನೂ ಎಂಬ ಬಗ್ಗೆ ಚರ್ಚೆ ನಡೆದಿದೆ. ರಾಜಾದಿತ್ಯನನ್ನು ಕೊಂದವನು ಬೂತುಗನೆಂದೂ, ರಾಜಾದಿತ್ಯನ ಆನೆಯನ್ನು ಕೊಂದವನು ಮಣಲೆರನೆಂದೂ ಒಂದು ಸಾರ್ವತ್ರಿಕ ಅಭಿಪ್ರಾಯವಿದೆ. ಮಣಲೆರನು ತನ್ನ ಬೂತುಗನಿಂದ ಕಾಳಿಯೆಂಬ ಒಂದು ಬೇಟೆಯ ನಾಯಿಯನ್ನು ಬೇಡಿ ಪಡೆದನೆಂದು ಜೆ.ಎಫ್. ಫ್ಲೀಟರೂ (ಎ.ಕ.೩. ೩೫) ಅರ್ಥೈಸಿದ್ದಾರೆ. ಆದರೆ ಆತುಕೂರು ಶಾಸನ ಪಾಠವನ್ನು ಮನನ ಮಾಡಿದರೆ, ಮೂವಡಿ ಚೋಳ ರಾಜಾದಿತ್ಯನೊಂದಿಗೆ ಯುದ್ಧಮಾಡಿ ಅವನನ್ನು ಕೊಂದವನು ಕಚ್ಚೆಗೆ ಕೃಷ್ಣರಾಜನೆನ್ನಬಹುದು. ಅಲ್ಲದೆ ಪೆರ್ಮಾಡಿ ಬೂತುಗನಂಕಕಾಱನಾದ ಮಣಲೆರನು ಕಾಳಿಯನ್ನು ಕೋರಿ ಪಡೆದದ್ದೂ ಸಹ ಚಕ್ರವರ್ತಿ ಕೃಷ್ಣ (ಕನ್ನರ)ನಿಂದಲೇ ಎಂದೂ ಸ್ಪಷ್ಟವಾಗುತ್ತದೆ. ಎಪಿಗ್ರಾಫಿಯ ಕರ್ನಾಟಕದ ಏಳನೆಯ ಸಂಪುಟವನ್ನು ಪರಿಷ್ಕರಿಸಿ ಪ್ರಕಟಿಸಿದ (೧೯೭೯) ಸಂಪಾದಕರು, ಆತಕೂರಿನ ಶಾಸನಕ್ಕೆ ಟಿಪ್ಪಣಿಸುವಾಗ, ಮಣಲೆರನು ತನ್ನ ಸಾಹಸಕ್ಕಾಗಿ ನಾಯಿ ಕಾಳಿಯನ್ನು ಬೂತುಗನಿಂದ ಬೇಡಿ ಪಡೆದನೆಂದು ಹೇಳಿದ್ದಾರೆ (ಪು. ೨೭೬), : ನಿಜ. ಆದರೆ ಈ ಅಭಿಪ್ರಾಯಕ್ಕೆ ಪೀಠಿಕೆಯಲಿ ತಕ್ಕ ಬೇರೆ ತಿದ್ದುಪಡಿಯನ್ನು ಸೂಚಿಸಿ ಉಪಕರಿಸಿದ್ದಾರೆ (ಪು. ೧-೧:)-

“ಶಾಸನ ಪಾಠದ ವಿಶ್ಲೇಷಣೆಯಿಂದ (ಕಾಳಿನಾಯಿಯ) ಕೊಡುಗೆಯನ್ನಿತ್ತವನು ಮುಮ್ಮಡಿ ಕೃಷ್ಣನೆಂದು ಗೊತ್ತಾಗುವುದು. ಈ ಅರಸನು ತಕ್ಕೋಲದಲ್ಲಿ ಚೋಳ ಅರಸರೊಡನೆ ಯುದ್ಧಮಾಡಿ, ಅವನನ್ನು ಕೊಂದು, ವಿಜಯಶಾಲಿಯಾಗಿ ಮುನ್ನಡೆಯುತ್ತಿದ್ದನೆಂದು ಶಾಸನ ಮೊದಲು ಉಲ್ಲೇಖಿಸುತ್ತದೆ. ಅನಂತರ ಗಂಗಪ್ರಭು ಇಮ್ಮಡಿ ಭೂತುಗನ ‘ಅಳು’ ಮಣಲೆರನು ಕದನದಲ್ಲಿ ಹೋರಾಡಿ, ರಾಷ್ಟ್ರಕೂಟ ಅರಸನ ಮೆಚ್ಚುಗೆಗೆ ಪಾತ್ರನಾಗಿ, ಏನನ್ನಾದರೂ ಕೋರಿಕೊಳ್ಲಲು ಕೇಳಿಕೊಂಡಾಗ, ಅವನಿಂದ ಬೇಟೆನಾಯಿಯೊಂದನ್ನು ಬೇಡಿ ಪಡೆದುಕೊಂಡ ವಿಷಯವನ್ನು ತಿಳಿಸುತ್ತದೆ. ಶಾಸನದಲ್ಲಿ ಬೂತುಗನು ಮಣಲೆರನ ಪ್ರಭುವಾಗಿ ಮಾತ್ರ ಕಾಣಿಸಿಕೊಂಡಿದ್ದಾನೆಂಬುದು ಸ್ಪಷ್ಟ. ಆದ್ದರಿಂದ ಬೇಟೆನಾಯಿಯನ್ನು ಕೊದುಗೆಯಾಗಿ ನೀಡಿದವನು ಅರಸಕಚ್ಚೆಗ ಕೃಷ್ಣರಾಜನೇ (ಮುಮ್ಮಡಿ ಕೃಷ್ಣ) ಹೊರತು ಇಮ್ಮಡಿ ಬೂತುಗನಲ್ಲ. ಆದ್ದರಿಂದ ಈ ಸಂಪುಟ (ಸಂಪುಟ ೭) ೨೭೬ನೆಯ ಪುಟದಲ್ಲಿ ಕೊಟ್ಟಿರುವ ಶಾಸನದ ಪರಿಚಯ ಟಿಪ್ಪಣಿಯನ್ನು ಹೀಗೆ ಓದಿಕೊಳ್ಳಬಹುದಾಗಿದೆ.

The record States that while the Rastrakuta King Kannaradeva, also referred to as kachchega Krishnaraja, was on the victorious march after killing Muvadi-chola in the battle of Takkola. Manalera of the Sagara family, a subordinate (ankakara) of permanadi Butuga, the Ganga, bearing the title Valabhipuravareshvara, prayed for and got from the king a hound Kali as a token of appreciation of the valour displayed by him in the battle. (ibid).”

ಈಗ ಹಾಲಿ ಈ ವೀರಗಲ್ಲು ಶಾಸನವನ್ನು, ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನ ವಸ್ತುಸಂಗ್ರಹಾಲಯದಲ್ಲಿ ತಂದಿಡಲಾಗಿದೆ. ಮೇಲೆ ಚರ್ಚಿಸಲಾದ ಚಾರಿತ್ರಿಕ ಸಂಗತಿಯಿರುವ ಶಾಸನದ ಒಕ್ಕಣೆ ಹೀಗಿದೆ:

೭. ಸ್ವಸ್ತಿ ಸಕಳಲೋಕ ಪರಿತಾಪಾಪಹತ ಪ್ರಭಾವಾವತರಿತ ಗಙ್ಗಪ್ರವಾಹೋದಾರ ಸಗರವಂಶ ವ

೮. ಳಭೀಪುರವರೇಶ್ವರನುದಾರ ಭಗೀರಥನಿಱೆವಬೆಡಙ್ಗ ಸಗರ ತ್ರಿಣೇತ್ರಂ ಸೆಣಸೆ ಮೂಗರಿವೊಂ

೯. ಕದನೈಕ ಸೂದ್ರಕಂ ಬುತುಗನಙ್ಕಕಾಱ ಶ್ರೀಮತ್ ಮಣಲೆರಙ್ಗ ಅನುವರದೊಳ್ ಮೆಚ್ಚಿ ಬೇಡಿಕೊಳ್ಳೆನ್ದೊ

೧೦. ಡೆ ದಯೆಯ ಮೆಱೆವೊಳೆಮ್ಬ ಕಾಳಿಯಂ ದಯೆಗೆಯ್ಯನ್ದು ಕೊಣ್ಡಾನಾ ನಾಯ ಕೆಱಲೆನಾಡ ಬೆಳತೂರ ಪಡು

೧೧. ವಣದೆಸೆಯ ಮೊಱಡಿಯೊಳ್ ಪಿರಿಯ ಪನ್ದಿಗೆ ವಿಟ್ಟೊಡೆ ಪನ್ದಿಯುಂ ನಾಯುಮೊಡಸತ್ತುವದರ್ಕ್ಕೆ

೧೨. ಯಾತುಕೂರೊಳ್ ಚಲ್ಲೇಶ್ವರದ ಮುನ್ದೆ ಕಲ್ಲನ್ನಡಸಿ ಪಿರಿಯ ಕೆಱೆಯ ಕೆಱೆಗೆ ಮಱ್ತೆ ಕಾಲಙ್ಗಳೊಳಿರ್ಕ್ಕಣ್ಡುಗಂ……

[ಎ.ಕ. ೭ (೧೯೭೯) ಮದ್ದೂರು ೪೨. ಕ್ರಿ. ಶ. ೯೪೯-೫೦. ಆತಕೂರು (ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕು) ಪು. ೨೭೬-೭೭] Inscriptions of the Western Gangas (1984). No. 135. 949-50 A.D.

ಕಾಳಿ ಎಂಬುದು ಬಹು ಸಾಹಸಿಯಾದ ಹೆಣ್ಣುನಾಯಿ; ದಯೆಯ ಮೆಱೆವೊಳ್ – ಎಂಬ ವಿಶೇಷಣವೂ, ಅದರ ಮುಂದಿನ ಹಂದಿಯೊಡನೆ ಹೋರಾಡಿ ಸತ್ತ ವರ್ಣನೆಯೂ ಗಮನಿಕೆಗೆ ತಕ್ಕುದಾಗಿದೆ. ಲೋಕನೆಂಬ ಹೆಸರಿನ ನಾಯಿ ೭೫ ಹಂದಿಗಳನ್ನೂ ಧಱಗನೆಂಬ ನಾಯಿ ೨೬ ಹಂದಿಗಳನ್ನೂ ಕೊಂದ ದಾಖಲೆಯ ಶಾಸನದಲ್ಲಿದೆ [ಎ.ಕ. ೧೦ ಮುಳಬಾ. ೮೫. ಸು. ೯೭೫]. ಮಣಲೆರನು ಬೇರೆ ಏನನ್ನೂ ಬೇಡದೆ ಈ ಒಂದು ನಾಯಿಯನ್ನೇ ಬಯಸಿದ್ದು ಅದರ ವಿಶೇಷ ಗುಣ ಸಾಮರ್ಥ್ಯವನ್ನು ಗಮನಿಸಿಯೇ ಎಂದು ತಿಳಿಯಬಹುದು. ಹಂದಿಯೊಂದರ ಮೇಲೆ ಈ ಕಾಳಿ ನಾಯಿಯನ್ನು ಛೂ ಬಿಡಬೇಕಾದ ಅನಿವಾರ್ಯ ಪ್ರಸಂಗ ಏನು ಒದಗಿ ಬಂದಿತೆಂಬುದನ್ನು ಶಾಸನ ದಾಖಲಿಸಿಲ್ಲ. ಪ್ರಾಯಃ ಒಕ್ಕಲ ಮಕ್ಕಳ ಹೊಲಗದ್ದೆ ಬೆಳೆಯನ್ನು ತಿಂದು ತುಳಿದು ಹಾಳು ಮಾಡುತ್ತಿದ್ದ ಕಾಡು ಹಂದಿಯ ಮೇಲೆ ಕಾಳಿ ನಾಯಿಯನ್ನು ಬಿಟ್ಟಿರಬಹುದು. ಹಂದಿಯ ಕಾಳಗದಲ್ಲಿ ಹೋರಾಡಿ, ಹಂದಿಯನ್ನೂ ಕೊಂದು ತಾನೂ ಸತ್ತ ಕಾಳಿನಾಯಿಗೆ ಮಣಲೆರನು ಮಾಡಿದ ಮರಣೋತ್ತರ ಕ್ರಿಯೆಯು, ವೀರನೊಬ್ಬನ ವೀರಮರಣಕ್ಕೆ ಮಾಡುವ ಉತ್ತರ ಕ್ರಿಯಾದಿ ಶವಸಂಸ್ಕಾರಕ್ಕೆ ಸದೃಶವಾಗಿದೆ. ನಾಯಿಯ ನೆನಪಿಗೆ ನೆಲಹೊಲ ಬಿಟ್ಟುಕೊಟ್ಟಿರುವುದು ಮತ್ತು ಅದರ ಶಾಪಾಶಯ ಇದಿಷ್ಟೂ ಮಣಲೆರನ ಗುಣ ಸ್ವಭಾವವನ್ನು ಬಿಂಬಿಸುವ ರನ್ನಗನ್ನಡಿಯಾಗಿದೆ. ಉದಾರತೆ, ಅನುಕಂಪ, ಇನ್ನೊಂದು ಜೀವಕ್ಕೆ (ಅದು ಪ್ರಾಣಿಯೇ ಆದರೂ) ತೋರುವ ಗೌರವ ಕೃತಜ್ಞತೆಗಳು – ಈ ಭಾವನೆಗಳು ಮಣಲೆರನ ವ್ಯಕ್ತಿತ್ವಕ್ಕೆ ಶೋಭೆ ತಂದಿವೆ. ಜೈನ ಸಂಸ್ಕಾರದತ್ತವಾದ ಪ್ರಾಣಿದಯೆಗಿಂತ ಇಲ್ಲಿ ಮಣಲೆರನು ಕಾಳಿನಾಯಿಯ ವಿಚಾರದಲ್ಲಿ ನಡೆದುಕೊಂಡ ರೀತಿಗೆ ಪ್ರೇರಣೆಯಾಗಿರುವುದು, ಆ ನಾಯಿ ಚಕ್ರವರ್ತಿಯ ಕೊಡುಗೆಯಾಗಿ ಬಂದದ್ದು ಎಂಬ ಭಾವನೆ. ತನ್ನ ಸಾಮಂತಿಕೆಯ ಕೆಳಲೆ ನಾಡಿನಲ್ಲಿದ್ದ ಬೆಳತೂರ ಪಡುವಣ ದೆಸೆಯ ಮೊರಡಿಯಲ್ಲಿ ಹಂದಿಯ ಮೇಲೆ ಕಾಳಿಯನ್ನೂ ಛೂ ಬಿಟ್ಟನು. ಈ ಬೆಳತೂರು ಎಂಬುದು ಈಗಿನ ಕೊಕ್ಕರೆ ಬೆಳ್ಳೂರು.

ಮಣಲೆರನ ವಿಚಾರದಲ್ಲಿ, ಮೇಲಿನ ವಿವರಣೆಗಿಂತ ಭಿನ್ನವೂ ಪೂರಕವೂ ಮತ್ತು ಚರಿತ್ರೆಗೆ ಮುಖ್ಯವೂ ಆದ ಮತ್ತೊಂದು ಬೀರಸಿರಿಯೆಂದರೆ, ಆತನು ತಕ್ಕೊಳ ಕಾಳೆಗದಲ್ಲಿ ಮೆರೆದ ಸಾಟಿಯಿಲ್ಲದ ಸಾಹಸ. ಶಾಸನಕವಿ (ಪೊನ್ನನು?) ಇದನ್ನು ಬಹು ಪ್ರಭಾವಶಾಲಿಯಾಗಿ, ಕಾವ್ಯಮಯವಾಗಿ, ಕಣ್ಣಿಗೆ ಕಟ್ಟುವಂತೆ ಕಡೆದು ನಿಲ್ಲಿಸಿದ್ದಾನೆ. ಎರಡು ಚಂಪಕಮಾಲಾ ವೃತ್ತಗಳಲ್ಲಿ :

ಉಱದಿದಿರಾನ್ತ ಚೋೞ ಚತುರಙ್ಗ ಬಲಙ್ಗಳನಟ್ಟಿಮುಟ್ಟಿತ
ಳ್ತಿಱೆವೆಡೆಗಿರ್ವ್ವರಪ್ಪೊಡಮಿದಿರ್ಚ್ಚುವಗಣ್ಡರನಾಮ್ವೆವೆನ್ದ್ಪುಪೊ
ಟ್ಟಿಳಿಸುವ ಬೀರರರಂ ನೆಱೆಯೆ ಕಾಣೆಮೆ ಚೋೞನೆ ಸಕ್ಕಿಯಾಗೆ ತ
ಳ್ತಿಱೆದುದನಾಮೆ ಕಣ್ಡೆವೆನೆ ಮೆಚ್ಚದೊರಾರ್ಸ್ಸಗರ ತ್ರಿಣೇತ್ರನಂ
||

            ನರಪತಿ ಬೆನ್ನೊಳಿಱ್ದೊನಿದಿರಾನ್ತುದು ವೈರಿಸಮೂಹಮಿಲ್ಲಿಮ
ಚ್ಛರಿಸುವರೆಲ್ಲರುಂ ಸೆರಗುವಾೞ್ದಪೊರಿನ್ನಿರೆನೆನ್ದು ಸಿಙ್ಗದ
ನ್ತಿರೆ ಹರಿಬೀರಲಕ್ಷ್ಮಿ ನೆರವಾಗಿರೆ ಚೋೞನ ಕೋಟೆಯೆಮ್ಬ ಸಿ
ನ್ದುರನ ಶಿರಾಗ್ರಮಂ ಬಿರಿಯೆ ಪೊಯಿದಂ ಕದನೈಕ ಸೂದ್ರಕಂ
||[ಎ.ಇ. ೨ ಪು. ೧೭೧-೭೨ : ಎ.ಕ. ೭ (೧೯೭೯) ಮದ್ದೂರು, ೪೨. ೯೪೯-೫೦]

ಗಂಗರ ಮಹಾಮಂಡಲೇಶ್ವರನಾದ ಇಮ್ಮಡಿ ಬೂತುಗನು ‘ಮಣಲೆರಂ ತನ್ನ ಮುನ್ದೆ ನಿನ್ದಿಱೆದುದರ್ಕ್ಕೆ ಮೆಚ್ಚಿ ಆತಕೂರ್ಪ್ಪನ್ನೆರಡುಂ ಬೆಳ್ವೊಲದ ಕಾದಿಯೂರುಮಂ ಬಾಳ್ಗಚ್ಚು ಗೊಟ್ಟಂ’ [ಎ.ಕ. ೩-೧ (ಹಳೆಯ ಆವೃತ್ತಿ) ಮಂಡ್ಯ ೧೪೧ ಪು. ೧೩೬] ಬೂತುಗನಿಂದ ನೆತ್ತರು ಕೊಡುಗೆಯನ್ನು ಪಡೆದ ಧೀರನಾದ ಮಣಲೆರನ ಹೆಸರು, ಅಂದಿನಿಂದ ಮತ್ತು ಆತನಿಂದ, ಸಗರವಂಶದ ಪರ್ಯಾಯ ಹೆಸರಾಗಿ ಮೊದಲಿಂದ ಇದ್ದುದಕ್ಕಿಂತ ಮತ್ತಷ್ಟು ಜನಮನ್ನಣೆ ಪಡೆಯಿತು. ಈ ವಂಶದ ಆರಂಭದಿಂದಲೂ ಮಣಲೆರ ಎಂಬ ಹೆಸರು ಪ್ರಚಲಿತವಾಗಿತ್ತೆಂಬುದು ದಿಟ; ಆದರೆ ಆತುಕೂರು ಮಣಲೆರನಿಂದ ಅದು ಉಜ್ವಲತರವಾಯಿತು.

ಈ ಹಂತದಲ್ಲಿಯೇ ಚರ್ಚಿಸಬೇಕಾದ ಹಲವು ಸಂಗತಿಗಳಿವೆ. ಮಣಲೆರನಿಗೆ ಬಾಳ್ಗಚ್ಚುವಾಗಿ, ಯುದ್ಧದಲ್ಲಿ ತೋರಿದ ಪರಾಕ್ರಮಕ್ಕಾಗಿ ಯುದ್ಧಾಂತ್ಯದಲ್ಲಿ ಆತನ ಕತ್ತಿಯನ್ನು ತೊಳೆದು ಕೊಟ್ಟ ಮಾನ್ಯಗಳು ಎರಡು: ೧. ಆತುಕೂರು ೨. ಬೆಳ್ವೊಲದ ಕಾದಿಯೂರು. ಜತೆಗೆ ಮನಲೆರನಿಗೆ ಇದ್ದ ನಾನಾ ಪ್ರಶಸ್ತಿಗಳ ಚಾರಿತ್ರಿಕ ಮಹತ್ವವನ್ನು ಪರಿಶೀಲಿಸಬಹುದು. ಆತುಕೂರು ಇರುವುದು ಹಳೆಯ ಮೈಸೂರು ಪ್ರದೇಶದಲ್ಲಿ, ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನಲ್ಲಿ (ಈ ಶಾಸನ ದೊರೆತ ಎಡೆ). ಬೆಳ್ವೊಲದ ಪ್ರದೇಶವಿರುವುದು ಉತ್ತರ ಕರ್ನಾಟಕದಲ್ಲಿ : ಬೆಳ್ವೊಲ ಮುನ್ನೂರು ಮತ್ತು ಪುಲಿಗೆರೆ ಮುನ್ನೂರು ಸೇರಿ ಆಗುವ ಎರಡು ಅಱುನೂಱರ ಪ್ರದೇಶ ಚರಿತ್ರಕಾರರಿಗೆ ಚಿರಪರಿಚಿತ [ಎ.ಇ. ೧೨, ೩೩೧. ೯೨೯ : ಕ.ಇ. ೧-೨೪ ೧೧೪೮. : ಸೌ.ಇ.ಇ. ೧೧, ೨. ೨೦೪].

ಹತ್ತನೆಯ ಶತಮಾನದ ತರುವಾಯ ಈ ಮಣಲೆರ ಕುಲದವರ ಕರ್ಮಭೂಮಿಯೆಲ್ಲ ಪುರಿಗೆರೆಯ ಪರಿಸರವೆಂಬುದು ಶಾಸನಗಳಿಂದ ತಿಳಿದು ಬರುವ ಸಂಗತಿ. ಮುಖ್ಯವಾದ ವಿಚಾರವೆಂದರೆ ಆತುಕೂರು ಶಾಸನೋಕ್ತ ಮಣಲೆರನಿಗೆ ಬೆಳ್ವೊಲ ಭಾಗದ ಊರೊಂದನ್ನು ಮಾನ್ಯವಾಗಿ ಬೂತುಗನ ಕೊಡಲು ಆತನಿಗೆ ಇದ್ದ ಅಧಿಕಾರವ್ಯಾಪ್ತಿಯ ಔಚಿತ್ಯ. ಆತಕೂರು ಶಾಸನದಲ್ಲಿಯೇ (ಸಾಲು : ೨೦-೨೧) ಬರುವ ವಿವರ ಮನನೀಯವಾಗಿದೆ: ಸ್ವಸ್ತಿಶ್ರೀ ಎಱೆಯಪ್ಪನ ಮಗಂ ರಾಚಮಲ್ಲನಂ ಬೂತುಗಂ ಕಾದಿಕೊನ್ದು ತೊಮ್ಬುತ್ತಱು ಸಾಸಿರಮುಮಂ ಆಳುತ್ತಿರೆ ಕನ್ನರದೇವಂ ಚೋಱನಂ ಕಾದುವನ್ದು ಬೂತುಗಂ ರಾಜಾದಿತ್ಯನಂ ಬಿಸುಗೆಯೆ ಕಳನಾಗಿ ಸುರಿಗಿಱೆದು ಕಾದಿಕೊನ್ದು ಬನವಸೆ ಪನ್ನಿರ್ಚ್ಛಾಸಿರಮುಂ ಬೆಳ್ವೊಲ ಮೂನೂಱುಂ ಪುರಿಗೆಱೆ ಮೂನೂಱಂ ಕಿಸುಕಾಡೆೞ್ಪತ್ತುಂ ಬಾಗಿನಾಡೆಱ್ಪತ್ತುವಂ ಬೂತುಗಙ್ಗೆ ಕನ್ನರದೇವಂ ಮೆಚ್ಚುಗೊಟ್ಟಂ || ಈ ವಿಶಿಷ್ಟ ಘಟನೆ ಮತ್ತು ಶಬ್ದ ಪ್ರಯೋಗವನ್ನು ಪುನರಭಿನಯಿಸಿರುವ ಇನ್ನೊಂದೇ ಒಂದು ಶಾಸನ ಪ್ರಯೋಗವಿದೆ: ಕಾಳೆಗದೊಳಣ್ನ ವಸಯ್ಯ ಬಿಸುಗೆ ಕಳನಾಗಿ ಸುರಿಗಿಱೆದು ಕಾದಿಸತ್ತನಾತನ ಮಗಂ ಬೂತುಗಙ್ಗೆ ನೆಱೆಲಗೆಯ ಕಲ್ನಾಡುಕೊಟ್ಟ ಚನ್ದ್ರಾರ್ಕ್ಕ ತಾರಂಬರಂ : [ಎ.ಕ. ೧೫ (೧೯೪೩) ೨೩೭. ಆತೇದಿ (ಸು. ೯೬೫) ನೇರಲಿಗೆ (ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕು) ಪು. ೩೮].

ಆತಕೂರು ಶಾಸನದ ಈ ವಿವರಣೆಯಿಂದ ಸ್ಪಷ್ಟವಾಗಿ ತಿಳಿದು ಬರುವಂತೆ, ಬೂತುಗನು, ವಾರಿಗೆಯಲ್ಲಿ ತನ್ನ ಸೋದರನಾದ ರಾಚಮಲ್ಲನನ್ನು ಕೊಂದು, ಗಂಗವಾಡಿ ೯೬೦೦೦ ಪ್ರದೇಶವನ್ನು ಆಳುತ್ತಿದ್ದನು. ಕನ್ನರದೇವನು (ಕೃಷ್ಣ ೩) ಚೋಱರ ರಾಜಾದಿತ್ಯನನ್ನು ಕೊಲ್ಲಲು ತೋರಿದ ಅಸಾಮಾನ್ಯ ಸಾಹಸದಿಂದ ಸಂಪ್ರೀತನಾದನು. ಬನವಸೆ ೧೨೦೦೦, ಬೆಳ್ವೊಲ ೩೦೦, ಪುರಿಗೆಱೆ ೩೦೦, ಕಿಸುಕಾಡು – ೭೦, ಬಾಗಿನಾಡು – ೭೦ ಇವನ್ನು ಕನ್ನರದೇವನು ಬೂತುಗನಿಗೆ ನೀಡಿದನು. ಆತಕೂರು ಶಾಸನದ ಕಾಲ ಕ್ರಿ. ಶ. ೯೪೯-೫೦. ಅಂದರೆ ಈ ಅವಧಿಯಲ್ಲಿ ಕನ್ನರನು ಮೇಲೆ ಹೆಸರಿಸಿದ ಪ್ರದೇಶಗಳನ್ನು ಬೂತುಗನಿಗೆ ಇತ್ತನೆಂದಾಯಿತು.

ಆದರೆ ಕನ್ನರದೇವನ ಬಾವನೂ, ನನ್ನಿಯಗಂಗನೂ ಆದ ಮಹಾಮಾಂಡಲಿಕ ಬೂತಯ್ಯ ಪೆರ್ಮಾಡಿಯು ಗಂಗವಾಡಿ, ಬೆಳ್ವೊಲ, ಪುಲಿಗೆಱೆ ಪ್ರಾಂತ್ಯಗಳನ್ನು ಕ್ರಿ.ಶ. ೯೪೨ ರ ವೇಳೆಗಾಗಲೇ ಆಳುತ್ತಿದ್ದುದಾಗಿ ಶಾಸನಗಳಿಂದಲೇ ತಿಳಿದು ಬರುತ್ತದೆ. [ಸೌ.ಇ.ಇ. ೧೧-೧, ೩೬-೯೪೨. ರೋಣ (ಧಾರವಾಡ ಜಿಲ್ಲೆ) : ಅದೇ, ೩೭.೯೪೬ ಕುರ್ತ್ತಕೋಟಿ (ಕರುತ್ತಕುಂಟೆ, ಧಾರವಾಡ ಜಿಲ್ಲೆ, ಗದಗ ತಾಲ್ಲೂಕು) : ಅದೇ, ೩೮, ೯೫೦. ನರೇಗಲ್ (ಧಾರವಾಡ ಜಿಲ್ಲೆ, ರೋಣ ತಾಲ್ಲೂಕು)]. ಬೂತುಗನು ಕ್ರಿ. ಶ. ೯೪೨-೪೬ ರ ವೇಳೆಗಾಗಲೇ ಮೇಲ್ಕಂಡ ಪ್ರದೇಶಗಳನ್ನು ಆಳುತ್ತಿದ್ದದನ್ನು ತಿಳಿಸುವ ಶಾಸನಗಳಿವೆ. ಹೀಗಿರುವಾಗ ಈಗ ಮತ್ತೆ ಅದೇ ಆತಕೂರು ಶಾಸನವು ಕನ್ನರದೇವನು ಕ್ರಿ.ಶ. ೯೫೦ರಲ್ಲಿ ಅದೇ ಭಾಗಗಳನ್ನು ಬೂತುಗನಿಗೆ ನೀಡಿದನೆಂದು ಹೇಳುತ್ತಿರುವುದು ವಿರೋಧಾಭಾಸವೆನಿಸಬಹುದು. ಅಲ್ಲದೆ ಹೆಬ್ಬಾಳದ ಶಾಸನಾಧಾರದಿಂದ ಖಚಿತವಾಗುವಂತೆ, ಬೂತುಗನು ಈ ಎಲ್ಲ ಪ್ರಾಂತ್ಯಗಳನ್ನು ಕನ್ನರದೇವನ ಸೋದರಿಯಾದ ರೇವಕೆ (ರೇವಕ ನಿಮ್ಮಡಿ)ಯನ್ನು ಮದುವೆಯಾದಾಗ ಬಳವಳಿಯಾಗಿ ಪಡೆದನು [ಎ.ಇ. ೪, ಪು. ೩೫೦ ಹೆಬ್ಬಾಳ]. ಈ ಮದುವೆಯು ಬಹುಶಃ ಕ್ರಿ.ಶ. ೯೪೦ ರ ಸುಮಾರಿಗೆ ನಡೆದಿರುವಂತೆ ತೋರುತ್ತದೆ. ರೋಣ, ಹೆಬ್ಬಾಳದ ಶಾಸನಗಳಲ್ಲದೆ ಗಾವರವಾಡದ ಶಾಸನವೂ ಬೂತುಗನನ್ನು ಕೃಷ್ಣರಾಜನ ಬಾವನೆಂದು ನಮೂದಿಸೆದೆ:

ಶ್ರೀ ವಸುಧೇಶನ ಭಾವಂ
ರೇವಕನಿರ್ಮ್ಮಡಿಯ ವಲ್ಲಭಂ ಭೂತುಗನಾ
ತ್ಮಾವಗತ ಸಕಳಶಾಸ್ತ್ರನಿ
ಳಾವಿಶ್ರುತ ಕೀರ್ತ್ತಿಗಂಗಮಣ್ಡಲನಾಥಂ
||

[ಎ.ಇ. ೧೫, ೨೩. ೧೦೭೧-೭೨ ಗಾವರವಾಡ (ಧಾರವಾಡ ಜಿಲ್ಲೆ ಗದಗ ತಾಲ್ಲೂಕು) ಪು. ೩೩೭-೪೮]. ಆದ್ದರಿಂದ ಬೂತುಗನು ಕ್ರಿ.ಶ. ೯೪೦ ರಿಂದ ೯೪೬ ರವರೆಗೂ ಮೇಲೆ ಉಲ್ಲೇಖಿಸಿದ ಪ್ರಾಂತಗಳನ್ನು ಅಬಾಧಿತವಾಗಿ ಆಳುತ್ತಿದ್ದನು. ಆದರೆ ಕ್ರಿ. ಶ. ೯೪೬ ರಿಂದ ೯೪೯ರ ನಡುವಣ ನಾಲ್ಕು ವರ್ಷದ ಅವಧಿಯಲ್ಲಿ ಈ ಪ್ರದೇಶಗಳ ಒಡೆತನವನ್ನು ಬೂತುಗನಿಂದ ಕಸಿದು ಕೆಳಕ್ಕೆ ತಳ್ಳಲಾಯಿತು, ಭೂತುಹನಿಂದ ಆ ಭಾಗಗಳನ್ನು ಕಿತ್ತುಕೊಂಡು ಆಳುತ್ತಿದ್ದವನು ರಾಚಮಲ್ಲ ೩. ಬೂತುಗನು ನನ್ನಿಯಗಂಗ ೧ ರಾಜನ ಮೊಮ್ಮಗ, ಇಮ್ಮಡಿ ಪೃಥ್ವೀಪತಿಯ ಮಗ. ಇಮ್ಮಡಿ ರಾಚಮಲ್ಲನು ನೀತಿಮಾರ್ಗ ಎಱೆಗಂಗ ೧ ರಾಜನ ಮಗ. ಹೀಗಾಗಿ ವಾರಿಗೆಯಲ್ಲಿ ಇವರು ಅಣ್ಣತಮ್ಮಂದಿರೂ ಹೌದು. ಚಕ್ರವರ್ತಿ ಕನ್ನರದೇವನು ತನ್ನ ಬಾವ ಬೂತುಗನಿಗೆ ಆ ಕೈಜಾರಿಹೋದ ಭಾಗಗಳ ಒಡೆತನವನ್ನು ಮತ್ತೆ ಪಡೆದುಕೊಡಲು ನೆರವಿಗೆ ನಿಂತನು, ಬೂತುಗನು ರಾಚಮಲ್ಲನನ್ನು ಕೊಲ್ಲುವ ಯುದ್ಧದಲ್ಲಿ ಸೈನ್ಯದ ಸಹಾಯವನ್ನೂ ನೀಡಿದನು. [ಎ.ಇ. ೫. Deoliplates. ೯೪೦ ಕ್ರಿ.ಶ. ಪು. ೧೮೦] ರಾಚಮಲ್ಲ || ರಾಜನನ್ನು ಬೂತುಗನು ಕ್ರಿ.ಶ. ೯೪೮-೪೯ ರ ಸುಮಾರಿನಲ್ಲಿ ಕೊಂದನೆಂದು ಹೇಳಬಹುದು. ಅದರಿಂದ ಬೂತುಗನ ಹಾದಿ ಸುಗಮವಾಗಿ ಕನ್ನರದೇವನು ಎರಡನೆಯ ಬಾರಿಗೆ ಅಧಿಕೃತವಾಗಿ ೯೫೦ರಲ್ಲಿ ಮೇಲ್ಕಂಡ ಪ್ರದೇಶಗಳ ಒಡೆತನವನ್ನು ಬೂತುಗನಿಗೆ ಪುನರ್ ನವೀಕರಿಸಿದನು, ಅಂದರೆ ಬೂತುಗನು, ತನ್ನಿಂದ ೯೪೬-೯೪೯ ರ ಅವಧಿಯಲ್ಲಿ ತಪ್ಪಿಹೋಗಿದ್ದ ತನ್ನವೇ ಆಗಿದ್ದ ಭಾಗಗಳನ್ನು ಪುನಃ ಪಡೆದನು. ಈ ಸಂತೋಷಾಧಿಕ್ಯವೂ, ಮಣಲೆರನ ಸಾಹಸಾಧಿಕ್ಯವೂ ಸೇರಿದ ಒಸಗೆಯ ಗಳಿಗೆಯಲ್ಲಿ, ಬೂತುಗನು ಮಣಲೆರನಿಗೆ ಆತುಕೂರು ಮತ್ತು ಬೆಳ್ವೊಲದ ಕಾದಿಯೂರು ಗ್ರಾಮಗಳನ್ನು ನಿದಿದನೆಂಬ ಐತಿಹಾಸಿಕ ಹಿನ್ನಲೆಯನ್ನೂ ಮನಗಾಣಬೇಕು. ಆತುಕೂರು ಇತ್ತ ಗಂಗವಾಡಿಯ ಪ್ರದೇಶದಲ್ಲೂ, ಕಾದಿಯೂರು ಆತ ಬೆಳ್ವೊಲದ ಪ್ರದೇಶದಲ್ಲೂ ಇದ್ದುರೂ. ಈ ಎರಡೂ ಭಾಗವು ಆಗ ಜೈನಧರ್ಮದ ಆಡುಂಬೊಲವಾಗಿತ್ತು.

ಆತುಕೂರು ಶಾಸನದಲ್ಲಿ ಮಣಲೆರನಿಗೆ ಹಲವು ಪ್ರಶಸ್ತಿಗಳನ್ನು ಹೇಳಲಾಗಿದೆ ಉದಾರ ಭಗೀರಥ, ಇಱೆವ ಬೆಡಂಗ, ಸಗರ ತ್ರಿಣೇತ್ರ, ಸೆಣಸೆ ಮೂಗರಿವೊಂ…. ಕದನೈಕ ಸೂದ್ರಕ, ಬೂತುಗನಂಕ ಕಾಱ, ಗಂಗ ಪ್ರವಾಹೋದಾರ ಇತ್ಯಾದಿ. ಈ ಬಿರುದುಗಳು ಮಣಲೆರನ ವ್ಯಕ್ತಿತ್ವವನ್ನು ಪ್ರಕಾಶಿಸಿವೆ. ಗಂಗರ ಜತೆಗೆ ಆತನಿಗಿದ್ದ ಆತ್ಮೀಯತೆಯನ್ನೂ ಯುದ್ಧಗಳಲ್ಲಿನ ನೈಪುಣ್ಯವನ್ನೂ, ವೈರಿಗಳ ಪಾಲಿಗೆ ಭಯಂಕರನೂ, ಬೂತಗನಿಗೆ ವಿಧೇಯನೂ ಆಗಿದ್ದುದನ್ನು ಈ ಬಿರುದು ಬಾವಲಿಗಳು ಸಾರುತ್ತವೆ. ಸಗರ ತ್ರಿಣೇತ್ರ – ಎಂಬ ಬಿರುದು, ಈತನ ಸಗರವಂಶದಲ್ಲಿಯೇ ಅತಿ ಪ್ರಮುಖನೆಂಬುದನ್ನು ನಿಲ್ಲಿಸುವ ಮಾತು ಇಱಿವಬೆಡಂಗ ಎಂಬ ಪ್ರಶಸ್ತಿಯು ಚಾಳುಕ್ಯರ ತೈಲಪನ ಮಗನಾದ ಸತ್ಯಾಶ್ರಯನಿಗೆ ಅನ್ವಯಗೊಂಡು ಆತನು ಇಱಿವ ಬೆಡಂಗ ಸತ್ಯಾಶ್ರಯನೆಂದೇ ಚರಿತ್ರೆಯಲ್ಲೂ ಕಾವ್ಯಗಳಲ್ಲೂ ಪ್ರಸಿದ್ಧನಾಗಿದ್ದಾನೆ. [ಬಾ.ಕ.ಇ. ೧೯೩೮. ಇಂಡಿ ೫೯. ಕ್ರಿ.ಶ. ೯೮೬ : ರನ್ನ, ಸಾಹಸಭೀಮವಿಜಯ ೧-೧೪: ಸೌ.ಇ.ಇ. ೧೧-೧. ೪೮. ಕ್ರಿ.ಶ. ೧೦೦೨ ಗದಗ ] ಇಱಿವ ಕನ್ನರ [ಎ.ಕ. ೧೧, ಚಿತ್ರದುರ್ಗ. ೪೯.೯೪೨] ಇಱಿವ ನೊೞಂಬ [ಎ.ಕ ೯(ಸೌ), ಹೊಸಕೋಟೆ ೨೦೭.೯೦೦ : ಮೈ.ಆ.ರಿ. ೧೯೩೨, ೪೮.೯೬೦] ಇಱೆವರ್ತಿಗಂಡ ಮೊದಲಾದ ಬಿರುದುಗಳ ಗುಂಪಿಗೆ ಸೇರಿದ್ದು ಇಱೆವ ಬೆಡಂಗ ಎಂಬುದು. ಈ ಬಿರುದು ಸತ್ಯಾಶ್ರಯನಿಗಂತಲೂ ಮೊಟ್ಟಮೊದಲು ಪ್ರಯೋಗವಾಗಿರುವುದು ಮಣಲೆರನಿಗೇ ಎಂಬುದು ಗಮನಾರ್ಹವಾಗಿದೆ. ಗಂಗರು ಮತ್ತು ರಾಷ್ಟ್ರಕೂಟರನ್ನು ಗೆದ್ದ ತೈಲಪ- ಸತ್ಯಾಶ್ರಯರು, ತಾವು ಸೋಲಿಸಿದವರ ಬಿರುದು ಬಾವಲಿಗಳನ್ನು ತಮ್ಮ ಪ್ರಶಸ್ತಿ ಹಾರದಲ್ಲಿ ಪೋಣಿಸಿಕೊಂಡರು.

ಕದನೈಕ ಸೂದ್ರಕ ಎಂಬ ಬಿರುದೂ ಸಹ ಇಷ್ಟೇ ಪ್ರಾಮುಖ್ಯ ಪಡೆದಿದೆ; ಇಱೆವಬೆಡಂಗದಂತೆಯೇ ಇದೂ ಸಹ ಯುದ್ಧವೀರನ ಪರಾಕ್ರಮಕ್ಕೆ ಕೆತ್ತಿದ ಪ್ರಶಸ್ತಿಯಾಗಿದೆ. ಕದನ ತ್ರಿಣೇತ್ರ [ಸೌ.ಇ.ಇ. ೨೦. ೫೫. ೧೦೮೨. ಲಕ್ಷ್ಮೇಶ್ವರ], ಕದನ ಮಹೇಶ್ವರ [ಅದೇ: ೪೭.೧೦೭೪ ಲಕ್ಷ್ಮೇಶ್ವರ], ಕದನ ಮಾರ್ತಾಂಡ [ಅದೇ : ೪೧.೧೦೬೮. ಬನವಾಸಿ (ಉ.ಕ., ಸಿರಸಿ ತಾ)] ಎಂಬವೆಲ್ಲ ಕದನೈಕ ಸೂದ್ರಕ ಗುಂಪಿನ ಪ್ರಶಸ್ತಿಗಳು. ಮಣಲೆರನಿಗೆ ಇಂಥ ಪ್ರಶಸ್ತಿ ಮಾಲಿಕೆಯನ್ನು ತೊಡಿಸಿರುವುದರಿಂದ ಆತನಿಗೆ ಇದ್ದ ಸಾಮಾಜಿಕ ಪುರಸ್ಕಾರವೂ ಧ್ವನಿತವಾಗುತ್ತದೆ. ಮೇಲ್ಕಂಡ ‘ಕದನ – ತ್ರಿಣೇತ್ರ’ ಮತ್ತು ‘ಕದನ – ಮಹೇಶ್ವರ’ ಎಂಬ ಸಮನಾರ್ಥಕ ಪ್ರಶಸ್ತಿಗಳೂ ಸಹ ಮಣಲೆರ ವಂಶದ ಇಮ್ಮಡಿ ಜಯಕೇಸಿಗೆ ಮುಂದೆ ಅನ್ವಯಿಸಿ ಹೇಳಿರುವುದು ಕೂಡ ಸ್ವಾರಸ್ಯವಾಗಿದೆ.

ಪುಲಿಗೆರೆಗೆ ಪಯಣ

ಬೂತುಗನು ಮಣಲೆರನಿಗೆ ಬೆಳ್ವೊಲ ಪ್ರದೇಶದ ಕಾದಿಯೂರನ್ನು ನೀಡಿದ್ದರಿಂದ ಮಣಲೆರನ ಕುಟುಂಬ ಪರಿವಾರ ಸಮಸ್ತವೂ ತನ್ನ ವಾಸವನ್ನು ಅಲ್ಲಿಗೆ ಸ್ಥಳಾಂತರಿಸಿತು. ಅಲ್ಲಿಂದ ಮುಂದೆ ಮತ್ತೆ ಮಣಲೆರ ವಂಶದ ಪ್ರಸ್ತಾಪ ಮಳವಳ್ಳಿ, ಮದ್ದೂರು ಪ್ರದೇಶದಲ್ಲಿ ಕಂಡು ಬರುವುದಿಲ್ಲ. ಒಮ್ಬತ್ತನೆಯ ಶತಮಾನದ ಉತ್ತರಾರ್ಧದಿಂದ ಆಚೆಗಿನ, ಕ್ರಿ.ಶ. ೯೫೦ ರ ಅನಂತರದ ಶಾಸನಗಳು, ಈ ಕುಲವನ್ನು ಕುರಿತು ಪ್ರಸ್ತಾಪಿಸುವ ದಾಖಲೆಗಳು ಪುಲಿಗೆರೆ ಮತ್ತು ಬೆಳ್ವೊಲ ಪ್ರದೇಶಕ್ಕೆ ಸೇರಿವೆ. ಸಗರವಂಶದವರಿಗೆ ಸಂಬಂಧಿಸಿದ ಅನಂತರದ ಮತ್ತು ಹೆಚ್ಚಿನ ಸಂಖ್ಯೆಯ ಶಾಸನಗಳು ಸಿಗುವುದು ಪಶ್ಚಿಮ ಚಾಳುಕ್ಯರ ಅವಧಿಯಲ್ಲಿ. ಮಣಲೆರ ಮನೆತನದವರು ಗಂಗರು, ರಾಷ್ಟ್ರಕೂಟರ ತರುವಾಯ, ಅವರಿಗೆ ತೋರುತ್ತಿದ್ದ ರಾಜ ನಿಷ್ಠೆಯನ್ನು ಚಾಳುಕ್ಯರಿಗೆ ತೋರಲು ಪ್ರಾರಂಭಿಸಿದ್ದು, ಈ ಹೊಸ ರಾಜಾಶ್ರಯಕ್ಕೆ ಅವರು ಕುದುರಿಕೊಂಡದನ್ನು ದೃಢಪಡಿಸುತ್ತದೆ. ಗಂಗವಂಶ ಮತ್ತು ರಾಷ್ಟ್ರಕೂಟ ರಾಜ್ಯಗಳು ಇತಿಹಾಸದಲ್ಲಿ ವಿಲೀನವಾದ ಮೇಲೆ, ಅದಕ್ಕೆ ಇತಿಶ್ರೀ ಹಾಡುತ್ತ ತನ್ನ ಧ್ವಜವನ್ನು ಹಾರಾಡಿಸಿ ಚಾಳುಕ್ಯ ಸತ್ಯಾಶ್ರಯಕುಲ ತಿಲಕ ತೈಲಪನ ಮತ್ತು ಆತನ ಮಗನ ಆಶ್ರಯದಲ್ಲಿ, ಅಳಿದುಳಿದ ಗಂಗರ, -ರಟ್ಟರ ನಿಷ್ಠ ಅಧಿಕಾರಿಗಳೆಲ್ಲ ಸೇರಿಕೊಂಡರು. ಶಂಕರಗಂಡ, ರನ್ನ, ಮಣಲೆರರು- ಇವರೆಲ್ಲ ಜೈನರಾಗಿದ್ದುದಕ್ಕೆ ಶಾಸನ ಮತ್ತು ಕಾವ್ಯಗಳ ಆಧಾರಗಳಿವೆ.

ಮಣಲೆರರು ತಲೆಬಾಗಿದ ಈ ಹೊಸ ಆಶ್ರಯದಲ್ಲಿ ಮೊದಲನೆಯ ಸಗರ ಕುಲದ ಅಧಿಕಾರಿಯಾಗಿ ಕಾಣಿಸುವುದು ಮಣಲೇರ ಗಾಡಿಗ ಎಂಬ ನಾಳ್ಗಾವುಂಡನೆಂದು ತಿಳಿಯಲಾಗಿತ್ತು. ಆ ಶಾಸನದ ಪಾಠ:

            ಪುರಿಗೆಱೆ ಮೂನೂಱುವಂ ಕುಪ್ಪೆಯರಸರಾಳೆ
ಮಣಲೆರ ಗಾಡಿಗ ನಾೞ್ಗೂಮುಣ್ಡುಗೆಯ್ಯೆ
ಕರ್ಗ್ಗಾಮುಣ್ಡರ ಕಲ್ಲಮನೂರ್ಗ್ಗಾ ಮುಣ್ಡುಗೆಯ್ಯೆ
(ಮೂನೂ)ಱಱ ಕಳ್ಳವಳ್ಳ ಪೆನ್ದಮನಾಳುತ್ತ
ಮಿಱ್ದು ಕುಪ್ಪೆಯರಸರರ್ಗ್ಗೆ ಬಿನ್ನಹಂಗೆಯ್ದು
ಸಿದ್ದಾಮೆಯ ಕಳ್ಳವಳ್ಳದೆರೆಯೆಂ ಶ್ರೀ ಕಲ್ನೆಱೆತಿ
ಭಟಾರಿಗೆ ಕೊಟ್ಟನ್ [ಎ.ಇ. ೩೫
, ೧೦. ಪು. ೮೫-೮೮]

ಅಮೋಘವರ್ಷನ ಸಾಮಂತ ಕುಪ್ಪರಸನು ಪುರಿಗೆಱೆ-೩೦೦, ಮಣಲೆರೆ ಗಾಡಿ ಗನು ಪುರಿಗೆಱೆಯ ನಾಱ್ಗಾಮುಂಡನ, ಕರ್ಗಾಮುಂಡರ ಕಲ್ಲಮನು ಊರ್ಗಾಮಣ್ಡು, ಪೆಂದಮನ್ ಎಂಬಾತ ಕಳ್ಳವಳ್ಳ ತೆರಿಗಾಧಿಕಾರಿ- ಇವರು ಪ್ರಸ್ತಾಪಗೊಂಡಿದ್ದಾರೆ. ಈ ಶಾಸನೋಕ್ತ ಅಮೋಘವರ್ಷನು ರಾಷ್ಟ್ರಕೂಟರ ಕಟ್ಟಕಡೆಯ ನಾಲ್ಕನೆಯ ಅಮೋಘ ವರ್ಷ ಕರ್ಕ (೯೭೨-೭೩) ಎಂಬುದು ಎನ್. ಲಕ್ಷ್ಮೀನಾರಾಯಣರಾವ್ ಅಭಿಪ್ರಾಯ. (ಸೌ.ಇ.ಇ.೧೧.೨. ಪಿ.ವಿ.). ಆದರೆ ಜಿ. ಎಸ್. ಗಾಯಿ ಈತ ಮೊದಲನೆಯ ಅಮೋಘವರ್ಷ (೮೧೪-೭೮) ಎಂದಿದ್ದಾರೆ (ಎ.ಇ. ೩೫, ೧೦ ಪು. ೮೫-೮೮) ಇಲ್ಲಿನ ಕುಪ್ಪೆಯನ್ (ಕುಪ್ಪೆಯರಸರ್, ಕುಪ್ಪೆಯರಸ) ಎಂಬಾತ ಮಂತ್ರವಾಡಿ ವಿಭಾಗದ ಅಧಿಕಾರಿ ಯಾದವ ವಂಶೋದ್ಭವ ರಣ (ಮೂರ್ಖ) ಧವಳ ಷಟ್ಗುಣಾಳಂಕಾರ ಆಹಾವಾದಿತ್ಯ ಶ್ರೀಮತ್ ಕುಪ್ಪೆಯರಸರ್ ಪುರಿಗೆಱೆ ನಾಡನಾಳುತ್ತಿರೆ ಎಂಬ ಪ್ರಸ್ತಾಪ ಎರಡು ಶಾಸನಗಳಲ್ಲಿದೆ [ಸೌ.ಇ.ಇ. ೧೧-೧, ೨. ೮೬೫. ಮೇವುಂಡಿ (ಧಾಜಿ / ಮುಂಡರಗಿ ತಾ): ಅದೇ, ೧೨.೮೬೭-೬೮. ಸೊರಟೂರು ಧಾಜಿ / ಗದಗ ತಾ)]; ಶಿಗ್ಗಾಂವಿ ಶಾಸನದಲ್ಲೂ ಕುಪ್ಪೆಯರಸನ ಹೆಸರಿದೆ.

ಮಣಲೆರ ಎಂಬುದು ವಂಶ (ಸಗರಕುಲ ಎಂಬ ಹೆಸರು ರಾಷ್ಟ್ರಕೂಟ ಮತ್ತು ಚಾಳುಕ್ಯರ ಕಾಲದಲ್ಲಿ ಪ್ರಚಲಿತವಾಯಿತು). ಗಾಡಿಗ ಎಂಬುದು ಈ ಮಣಲೆರ ವಂಶದ ವ್ಯಕ್ತಿಯ ಹೆಸರು (ಅಂಕಿತನಾಮ). ಈ ಮಣಲೆರ ಗಾಡಿಗನು ಉಲಿಗೆಱೆ ೩೦೦ ರ ನಾಱ್ಗಾಮುಂಡನಾಗಿದ್ದು ಈತನ ಕಾಲ ಕ್ರಿ.ಶ. ೯೭೨ ಎಂದು ಎನ್. ಲಕ್ಷ್ಮೀನಾರಾಯಣ ರಾವ್, ೮೬೫ ಎಂದು ಜಿ. ಎಸ್. ಗಾಯಿ ಸೂಚಿಸಿದ್ದಾರೆ. [Shiggaon Inscriptions of Amoghavarsha, I. ಎ.ಇ.ಇ. ೩೫, ೧೦ ಪು. ೮೫-೮೮]. ಗಾಯಿ ಅವರು ಕೊಡುವ ಮಣಲೆರರ ವಂಶವೃಕ್ಷ ಹೀಗಿದೆ : ಮಣಲೆರಗಾಡಿಗ ಸು. ೮೬೫-ಮಣಲೆರ ಕ್ರಿ. ಶ. ೯೪೯ – ಮಾರಸಿಂಹ|, ಕ್ರಿ.ಶ. ೯೭೨- ಜಯಕೇಸಿನ್ ೧, ೧೦೩೮ – ಇಂದ್ರಕೇಸಿನ್ ೧, ೧೦೫೮, ೧೦೬೦ – ಚಂಡಿಕಬ್ಬೆ ಇಂದ್ರಕೇಸಿಯ ಇಬ್ಬರು ಮಗಂದಿರಾದ ಇಮ್ಮಡಿ ಜಯಕೇಸಿನ್ (೧೦೬೦, ೧೦೭೪, ೧೦೭೭, ೧೦೮೨) ಮತ್ತು ಇಮ್ಮಡಿ ಮಾರಸಿಂಹರು. ಇಮ್ಮಡಿ ಮಾರಸಿಂಹನ ಮಗ ಇಮ್ಮಡಿ ಇಂದ್ರಕೇಸಿ. ಇಮ್ಮಡಿ ಜಯಕೇಸಿಯ ಹಿರಿಯ ಮಗನ ಹೆಸರು ಅಜ್ಞಾತವಾಗಿ ಉಳಿದಿದೆ; ಕಿರಿಯ ಮಗನಾದ ವಜ್ರದಂತನು ಕದಂಬ ಕುಲಜೆಯಾದ ಮಾದಲದೇವಿಯನ್ನು ಮದುವೆಯಾಗಿದ್ದನು. ವಜ್ರದಂತ ಮಾದಲದೇವಿಯರ ಮಗನೇ ಮುಮ್ಮಡಿ ಜಯಕೇಸಿ (೧೧೨೮, ೧೧೩೮, ೧೧೪೭, ೧೧೫೩). ಈ ವಂಶಪೀಳಿಗೆಯಲ್ಲಿ ಮರು ಹೊಂದಾಣಿಕೆಯನ್ನು ನಾನು ಈ ಸಂಪ್ರಬಂಧದ ಕಟ್ಟಕಡೆಯಲ್ಲಿ ಕೊಟ್ಟಿದ್ದೇನೆ. ಶಿಗ್ಗಾಂವಿಯ ಅತೇದಿ ಶಾಸನದ ಪ್ರಕಾರ ಮಣಲೇರ ಗಾಡಿದನು ನಾಳ್ಗಾವುಂಡನಾಗಿದ್ದುದು ಸ್ಪಷ್ಟ : ಆಗ ಕುಪ್ಪೆಯರಸರೆಂಬುವನು ಪುಲಿಗೆರೆ ಮನ್ನೂರನ್ನು ಆಳುತ್ತಿದ್ದನು [ಕ.ಇ. ೧, ೧೩. ಸು. ೮೬೬ (ಪು.) ಶಿಗ್ಗಾಂವಿ. ಪು. ೧೫] ಶಿಗ್ಗಾಂವಿ ಶಾಸನೋಕ್ತ ಅಮೋಘವರ್ಷನು ನಾಲ್ಕನೆಯ ಅಮೋಘವರ್ಷನಾದ ಕರ್ಕ್ಕನೆಂಬುದಾಗಿ ಹತ್ತನೆಯ ಶತಮಾನದ ಶಾಸನ ಲಿಪಿಯ ಆಧಾರದಿಂದ ಖಚಿತಪಡಿಸಲಾಗಿದೆ. ಆದ್ದರಿಂದ ಪುಲಿಗೆರೆಯ ಅತೇದಿ ಶಾಸನದ ಕಾಲವನ್ನು ಸುಮಾರು ಕ್ರಿ.ಶ. ೮೬೬ ಎಂದು ಮೊದಲು ಭಾವಿಸಲಾಗಿದ್ದುದು ಸರಿಯಲ್ಲ; ಅಂತರ ಬಾಹ್ಯ ಪ್ರಮಾಣಗಳಿಂದ ಅದು ಹತ್ತನೆಯ ಶತಮಾನದ ಉತ್ತರಾರ್ಧಕ್ಕೆ ಸೇರಿದ್ದೆಂದು ತಿಳಿಯಬಹುದು. ಈಗಾಗಲೇ ಈ ಸಂಪ್ರಬಂಧದಲ್ಲಿ ಸೂಚಿಸಿರುವಂತೆ, ಮಣಲೆರ ವಂಶಜರು ಪುಲಿಗೆರೆ ಮತ್ತು ಬೆಳ್ವೊಲ ಪ್ರದೇಶಕ್ಕೆ, ಮಳವಳ್ಳಿ- ಮದ್ದೂರು – ಕುಣಿಂಗಲು ಕಡೆಯಿಂದ, ಸ್ಥಳಾಂತರಿಸಿದ್ದೇ ೯೫೦ರ ತರುವಾಯ. ಅದರಿಂದ ಶಿಗ್ಗಾಂವಿ ಮತ್ತು ಪುಲಿಗೆರೆ ಶಾಸನೋಕ್ತ ಮಣಲೆರ ಕುಲಜನು ಕ್ರಿ.ಶ. ೯೭೦ ರ ತರುವಾಯದವನೆಂದು ತೀರ್ಮಾನಿಸಬಹುದು [ಕ.ಇ. ೧, ೧೪ ೧೯೩೯-೪೦, ತೇದಿ? ಪುಲಿಗೆರೆ (ಧಾರವಾಡ ಜಿಲ್ಲೆ, ಶಿರಹಟ್ಟಿ ತಾಲ್ಲೂಕು) : ಬಾ. ಕ. ನಂ. ೪೨ of ೧೯೪೩-೪೪, ಶಿಗ್ಗಾಂವಿ (ಧಾರವಾಡ ಜಿಲ್ಲೆ ಶಿಗ್ಗಾಂವಿ ತಾಲ್ಲೂಕು)].

ಗದಗ, ಕುಯಿಬಾಳ, ಪ್ರಿನ್ಸ್ ಆಫ್ ವೇಲ್ಸ್ ಸಂಗ್ರಹಾಲಯ ಈ ಮೂರೂ ಸ್ಥಳಗಳ ಶಾಸನಗಳಲ್ಲಿ ಸಿಗುವ, ಮಣಲೆರರ ಅನ್ವಯಕ್ಕೆ ಸೇರಿದ ಮೂವರು ಮಹಾಸಾಮಂತರ ವಿಚಾರ ಶಿಗ್ಗಾಂವಿಯ ಶಾಸನದಲ್ಲೂ ಸಿಗುತ್ತದೆ. [ಕ.ಇ. ೧, ೧೪ ಪು. ೩೦]. ಗದಗದ ಶಾಸನವು ಚಾಳುಕ್ಯರ ಆರನೆಯ ವಿಕ್ರಮಾದಿತ್ಯನ ಆಳ್ವಿಕೆಗೆ ಸೇರಿದ್ದು, ಇದರಲ್ಲಿ ಸಗರಕುಲದ ಮೂರು ತಲೆಮೊರೆಯ ಪೀಳಿಗೆಯನ್ನು ಪರಿಚಯಿಸಿದೆ: ಇಂದ್ರಕೇಸಿ|, ಇವನ ಮಗ ಮಾರಸಿಂಘ, ಇವನ ಮಗ ಇಂದ್ರಕೇಸಿ ೨ (ಸೌ.ಇ.ಇ. ೧೧-೨, ೨೦೧ ತೇದಿ.? ಪು. ೨೫೬] ಇದರಿಂದಾಗಿ ಮಹಾಸಾಮಂತ ಒಂದನೆಯ ಇಂದ್ರಕೇಸಿಯೂ, ಕುಯಿಬಾಳ ಶಾಸನೋಕ್ತನಾದ ಇಂದ್ರಕೇಸಿಯೂ ಅಭಿನ್ನರೆಂಬುದು ಸ್ಥಾಪಿತವಾಗುವ ವಿಷಯ. ಮುಂಬಯಿಯ ಪ್ರಿನ್ಸ್ ಆಫ್ ವೇಲ್ಸ್ ಮೂಸಿಯಮ್ಮಿನ ಮತ್ತು ಗದಗದ ಶಾಸನಗಳ ಆಧಾರಗಳನ್ನು ಹಿಡಿದು ಒಂದನೆಯ ಇಂದ್ರಕೇಸಿಗೆ ಮಾರಸಿಂಘ (ಹ) ಮತ್ತು (ಇಮ್ಮಡಿ) ಜಯಕೇಸಿ – ಎಂಬ ಇಬ್ಬರು ಮಗಂದಿರೆಂದು ತಿಳಿದು ಬರುತ್ತದೆ. ಇದರಿಂದಾಗಿ ಮಾರಸಿಂಘ ಮತ್ತು ಜಯಕೇಸಿ ಎಂಬುವರು ಇಬ್ಬರು ಬೇರೆಯವರಾಗಿರದೆ ಒಬ್ಬನೇ ವ್ಯಕ್ತಿಯ ಎರಡು ಹೆಸರಿರಬೇಕೆಂಬ ಹಿಂದಿನ ತಿಳಿವಳಿಕೆ ಸರಿಯಲ್ಲವೆಂದೂ, ಇವರಿಬ್ಬರೂ ಪ್ರತ್ಯೇಕರು ಮತ್ತು ಸಹೋದರರು ಎಂದು ಖಚಿತವಾಗುತ್ತವೆ. ಹೆಬ್ಬಾಳು, ಕೂಲಿಗೆರೆ, ಆತುಕೂರು, ವಿಜಯಪುರ, ತಾಯಲೂರು ತಗ್ಗಲೂರು ಮೊದಲಾದ ಶಾಸನಗಳಲ್ಲಿ ಆವರ್ತನಗೊಳ್ಳುವ ಮಣಲೆಯರ ಎಂಬ ಹೆಸರು, ಹತ್ತನೆಯ ಶತಮಾನದ ತರುವಾಯ ಮರೆಯಾಗಿ, ಆಯಾ ವ್ಯಕ್ತಿಗೆ ಇಟ್ಟ ಅಂಕಿತನಾಮದಿಂದ ಕೂಡಿದ ಹೆಸರುಗಳು ಕಾಣಿಸುತ್ತವೆ.

ಮಣಲೆರ ಗಾಡಿಗನ [ಕ.ಎ.೧, ನಂ. ೧೪] ತರುವಾಯ, ಚಾಳುಕ್ಯರ ಆಶ್ರಯದಲ್ಲಿ ಅಭ್ಯುದಯ ಪರಂಪರೆಯನ್ನು ಗಳಿಸಿದ ಪ್ರಮುಖನೆಂದರೆ ಇಱೆವಬೆಡಂಗ ಮಾರಸಿಂಗ ದೇವ [ಎ.ಇ. ೧೬. ೨೪. ೧೦೩೮ ಪು. ೩೩೩ ಹುಲಗೂರು]. ಸಗರಕುಲದ ಅಧಿಕಾರಿಯಾದ ಇಱೆವಬೆಡಂಗ ಮಾರಸಿಂಗನು ಜಿನಭಕ್ತನಾಗಿ ಕಾಣುತ್ತಾನೆ. ಈತನ ಪ್ರಶಸ್ತಿಯನ್ನು ಕುರಿತು ಪರಿಭಾವಿಸತಕ್ಕ ಅಂಶವಿದೆ. ಮಣಲೆರ ವಂಶದಲ್ಲಿ ಆತಕೂರು ಶಾಸನೋಕ್ತನಾದ ಮಣಲೆರನಿಗೆ ಇಱೆವ ಬೆಡಂಗ ಪ್ರಶಸ್ತಿಯಿತ್ತು; ಈ ಪ್ರಶಸ್ತಿ ಮಾಲಿಕೆಯಲ್ಲಿ ಅದೇ ಪ್ರಾಚೀನ – ಪ್ರಥಮ ಪ್ರಯೋಗವೆಂದೂ, ಅನಂತರ ಚಾಳುಕ್ಯರ ತೈಲಪನ ಮಗನಾದ ಸತ್ಯಾಶ್ರಯನಿಗೆ ಅದು ಬಳಕೆಯಾಗಿದೆಯೆಂದೂ ತಿಳಿಸಿದ್ದಾಗಿದೆ. ಚಾಳುಕ್ಯ ಚಕ್ರವರ್ತಿ ಇರಿವ ಬೆಡಂಗ ಸತ್ಯಾಶ್ರಯನ ಆಶ್ರಯದಲ್ಲಿ ಪಲ್ಲವಿಸಿದ ಮಣಲೆರ ಮನೆತನದ ಈ ಮಾರಸಿಂಗನಿಗೂ, ಈತ ತೋರಿದ ರಾಜನಿಷ್ಠೆಯ ಪರಿಣಾಮವಾಗಿ ಪ್ರಾಪ್ತವಾದ ಪ್ರಶಸ್ತಿ ‘ಇಱೆವಬೆಡಂಗ’ ಸತ್ಯಾಶ್ರಯನ ಕಾಲದಿಂದ ಜಯಸಿಂಹನ ಕಾಲದವರೆಗೆ ಈತನು ಅಧಿಕಾರಿಯಾಗಿದ್ದನೆಂಬುದಕ್ಕೆ ಶಾಸನಾಧಾರವಿದೆ.

ಚಾಳುಕ್ಯರ ಇಮ್ಮಡಿ ಜಯಸಿಂಹನ (ಜಗದೇಕಮಲ್ಲ|) ರಾಜ್ಯಾಡಳಿತದಲ್ಲಿ ಪುರಿಗೆಱೆ ಮನ್ನೂರರ ನಾಳ್ಗಾವುಂಡ ಮಹಾಸಾಮಂತ್ರನೆನಿಸಿದ್ದ ಈ ಇಱೆವ ಬೆಡಂಗ ಮಾರಸಿಂಗದೇವನು ತನ್ನ ಮಣಲೆರ ಮನೆತನವನ್ನು ರಾಜಕೀಯವಾಗಿಯೂ, ಧಾರ್ಮಿಕವಾಗಿಯೂ ಮುನ್ನಡೆಸಿದನು. ಈತನ ತಾಯಿ ನಾಯಿಬ್ಬರಸಿಯು ಜೈನ ಧರ್ಮ ಸಮುದ್ಧರಣೆಯೆನಿಸಿದ್ದಳು: ‘ಭಗವದ್ ಅರ್ಹತ್ ಪರಮೇಶ್ವರ ಪರಮಭಟ್ಟಾರಕ ಪದಕಮಲ ಮಧುಕರಂ ಸಮ್ಯಕ್ತ್ವ ರತ್ನಾಕರಂ ಜಿನಧರ್ಮ ಭೂಷಣಂ’ ಆದಂಥ ಒಂದನೆಯ ಜಯಕೇಸಿಯು ‘ಪುರಿಗೆಱೆ ಮುನ್ನೂರಕ್ಕಂ ನಾಳ್ಗಾವುಂಡುಗೆಯ್ಯುತ್ತಿ’ದ್ದನು [ಎ.ಇ. ೧೬, ೨೪. ೧೦೩೮. ಹುಲಗೂರು ಪು. ೩೩೩].

ಪಶ್ಚಿಮ ಚಾಳುಕ್ಯರ ‘ತ್ರೈಳೋಕ್ಯಮಲ್ಲ ವೀರನೊಳಂಬ ಪಲ್ಲವ ಪೆರ್ಮಾನಡಿ ಜಯಸಿಂಹದೇವರ್ಪ್ಪುರಿಗೆಱೆ ಮೂನೂಱುಂ ಬೆಳ್ವಲ ಮೂನೂಱುಂ ಬನವಸೆ ಪನ್ನಿರ್ಚ್ಛಾಸಿರಮುಂ ಕನ್ದೂರ್ಸ್ಸಾಸಿರಮುಮೊಳಗಾಗಿ ಪಲವು ಭತ್ತಗ್ರಾಮಂಗಳನಾಱ್ದು ಸುಖಂ ರಾಜ್ಯಂಗೆಯ್ಯುತ್ತಿಮೆರೆ ತತ್ಪಾದ ಪದ್ಮೋಪಜೀವಿ ಪುರಿಕರ ಪುರವರರ ಪರಮೇಶ್ವರನುಜ್ವುಳ ಕೀರ್ತ್ತಿ ಸಗರ ಮಾರ್ತ್ತಣ್ಡಂ ಕೇಸರಿಕೇತು ರಾಷ್ಟ್ರಕೂಟಕ ವರನಾ(ತ್ರಿ) ಶತಕ್ಕೆ ನೆಗೞ್ದಜಯಿ ಕೇಸಿನೃಪಂ’ ಹೆಸರುವಾಸಿಯಾಗಿದ್ದನು [ಸೌ.ಇ.ಇ. ೨೦, ೫೫. ಕ್ರಿ.ಶ. ೧೦೮೨. ಲಕ್ಷ್ಮೇಶ್ವರ] ‘ತ್ರಿಶತಕ್ಕೆ ನೆಗೞ್ದ’ ಎಂದರೆ ಪುಲಿಗೆರೆ ‘ಮುನ್ನೂರಕ್ಕೆ ಪ್ರಸಿದ್ಧಿ ಹೊಂದಿದ’ ಎಂದರ್ಥ.

ಮೇಲ್ಕಂಡ ಪುಲಿಗೆರೆ ಶಾಸನೋಕ್ತನಾದ ಜಯಕೇಸಿಯು ಇಮ್ಮಡಿ ಜಯಕೇಸಿ ಯೆಂದು ತಿಳಿದು ಬರುತ್ತದೆ; ಈತನು ಒಂದನೆಯ ಇಂದ್ರಕೇಸಿಯ ತರುವಾಯ ಬಂದವನು. ಒಂದನೆಯ ಇಂದ್ರಕೇಸಿಯು ತ್ರೈಳೋಕ್ಯಮಲ್ಲ ಒಂದನೆಯ ಸೋಮೇಶ್ವರ ಚಕ್ರವರ್ತಿಯ ಮಹಾಸಾಮಂತನಾಗಿದ್ದನು [ಸೌ.ಇ.ಇ. ೨೦, ೩೮. ೧೦೫೮. ಕುಯಿಬಾಳ (ಧಾರವಾಡ ಜಿಲ್ಲೆ ಕುಂದುಗೋಳ ತಾಲ್ಲೂಕು)] ಸಿಂಹಲಾಂಛನನೂ, ಭಗವದರ್ಹತ್ಪರಮೇಶ್ವರ ಪರಮಭಟ್ಟಾರಕಪದ ಪಂಕಜ ಭ್ರಮರನೂ, ಸಮ್ಯಕ್ತ್ವ, ರತ್ನಾಕರನೂ ಮಣಲೆರ ಭೀಮನೂ ಎನಿಸಿದ, ಸಮಸ್ತ ಪ್ರಶಸ್ತಿ ಸಹಿತನಾದ ಸಮಧಿಗತ ಪಂಚಮಹಾಶಬ್ದ ಮಹಾಸಾಮಂತ ಇಂದ್ರಕೇಸಿಯರಸನು ಪುರಿಗೆಱೆ ಮೂನೂಱುಮಂ ರಾಷ್ಟ್ರಕೂಟಕನಾಗಿ, ದುಷ್ಟನಿಗ್ರಹ ವಿಶಿಷ್ಟ ಪ್ರತಿಪಾಳನ ಮಾಡುತ್ತಿದ್ದುದು ಶಾಸನೋಕ್ತವಾಗಿದೆ (ಅದೇ : ಪು. ೪೨-೪೩) ಈತನು ನಿಷ್ಠಾವಂತ ಜೈನನಾದರೂ ಶೈವಗುರುವಾದ ಲೋಕಾಭರಣ ಪಂಡಿತರ ಕಾಲುತೊಳೆದು ಜೋಗೇಶ್ವರ ದೇವರಿಗೆ ದತ್ತಿಗಳನ್ನಿತ್ತು [ಅದೇ: ಸಾಲು -೩೯-೪೧].

ಒಂದನೆಯ ಇಂದ್ರಕೇಸಿಯು ಮಡದಿ ಚಂಡಿಕಬ್ಬೆ. ಇವರಿಗೆ ಇಬ್ಬರು ಮಗಂದಿರು; (ಇಮ್ಮಡಿ) ಜಯಸಿಂಹ ಮತ್ತು (ಇಮ್ಮಡಿ) ಮಾರಸಿಂಹ. ತ್ರುಇಭುವನ ಮಲ್ಲದೇವ ಆರನೆಯ ವಿಕ್ರಮಾದಿತ್ಯನ ಆಳ್ವಿಕೆಯ ಶಾಸನವಾದ ಗದಗದ ಶಾಸನವು ಇದನ್ನು ಸ್ಪಷ್ಟವಾಗಿಸಿದೆ: ಹುಲಿಗೆಱೆನಾಡ ಮಂಡಳಿಕರೊನ್ ಸಗರಾನ್ವಯರೊಳ್ – ಪ್ರಸಿದ್ಧ ಮಂಡಳಿಕರೊಳ್- ಇಂದ್ರ ಕೇಶಿ ಮಣಲೆರಾನ್ವಯನ್- ಉತ್ತಮನ್ – ಆ ನೃಪಾತ್ಮಜಂ ಬಲಯುತ ಮಾರಸಿಂಗನೃಪನ್- ಆ ನೃಪಸೂನು ಗುಣಾಂಬುರಾಶಿ ನಿರ್ಮ್ಮಳ ಮತಿಯಿಂದ್ರಕೇಶಿ ನೃಪತಿ ಪ್ರಭು ಧಾರ್ಮಿಕ ಧರ್ಮ್ಮನನ್ದನಂ| ಸಮಯಚ್ಛಲಮೇವುದೊ ಧರ್ಮ್ಮಮನೊದವಿಪುದೆನ್ತು ೧ ಪುರಿಕರಪುರ ವರೇಶ್ವರಂ ೧ ಭುವನೈಕ ವಿಕ್ಯಾತ ೧ ಸತ್ಯರಾಧೇಯ ಶೌಚಗಾಂಗೇಯ- ಎಂಬುದಾಗಿ ವಿಸ್ತಾರವಾಗಿ ಸ್ತುತ್ಯನಾಗಿದ್ದಾನೆ. [ಸೌ.ಇ.ಇ. ೧೧-೨, ೨೦೧, ಅತೇದಿ ಗದಗ. ಪು. ೨೫೬].

ಈ ಶಾಸನದಲ್ಲಿನ ಸತ್ಯರಾಧೇಯ, ಶೌಚಗಾಂಗೇಯ ಎಂಬೆರಡು ಪ್ರಶಸ್ತಿಗಳು, ಈ ವಂಶದ ಪ್ರಾಚೀನ ಶಾಸನಗಳಲ್ಲಿ ಒಂದಾದ ವಿಜಯಪುರದ ಶಾಸನದಲ್ಲಿ ಬಳಕೆಯಾಗಿರುವ ನನ್ನಿ ಮಣಲೆಯರ – ಶೌಚಮಣಲೆಯರ ಎಂಬೆರಡು ಬಿರುದು ಗಳನ್ನು ನೆನಪಿಸುತ್ತವೆ. ಈ ಶಾಸನದ ಒಕ್ಕಣೆಯಿಂದ ಖಚಿತಗೊಳ್ಳುವಂತೆ, ಇಮ್ಮಡಿ ಇಂದ್ರಕೇಸಿಯು ಮಹಾಮಂಡಳೇಶ್ವರ ನಾಗಿದ್ದನು. ಇದು ಈ ಮಣಲೆರ ವಂಶದವರು ಪಡೆದಿದ್ದ ಅತಿ ದೊಡ್ದ ಸ್ಥಾನ ಮರ್ಯಾದೆ. ಈ ಗದಗ ಶಾಸನದ ತೇದಿ ತಿಳಿಯದೆಂದು ಶಾಸನ ಸಂಪುಟದ ಸಂಪಾದಕರು ತಿಳಿಸಿದ್ದಾರೆ; ಶಾಸನ ತುಂಬ ತ್ರುಟಿತವಾಗಿರುವುದು ದಿಟ. ಆದರೆ ಅಂತರ ಬಾಹ್ಯ ಆಧಾರಗಳನ್ನು ಅವಲಂಬಿಸಿ ಈ ಗದಗ ಶಾಸನವು ಕ್ರಿ.ಶ. ೧೧೦೦ ಎಂದು ಹೇಳಬಹುದು.

ಚಾಳುಕ್ಯರ ಭುವನೈಕಮಲ್ಲ ಇಮ್ಮಡಿ ಸೋಮೇಶ್ವರನ ಅಳ್ವಿಕೆಗೆ ಸೇರಿದ ಇನ್ನೊಂದು ಶಾಸನ ಒದಗಿಸುವ ಆಧಾರವನ್ನು ಇಲ್ಲಿಗೆ ಅನ್ವಯಿಸಿಕೊಳ್ಳಬೇಕು [ಸೌ.ಇ.ಇ.೨೦, ೪೭ ೧೦೭೪. ಲಕ್ಷ್ಮೇಶ್ವರ (ಧಾರವಾಡ ಜಿಲ್ಲೆ ಶಿರಹಟ್ಟಿ ತಾಲ್ಲೂಕು) ಪು. ೩೫-೫೫]. ಮಹಾಸಾಮಂತನಾದ ಜಯಕೇಸಿಯು ಒಂದನೆಯ ಇಂದ್ರಕೇಸಿ – ಚಂಡಿಕಬ್ಬೆಯರ ಹಿರಿಯಮಗನೆಂದೂ, ಗದಗ ಶಾಸನೋಕ್ತನಾದ ಮಾರಸಿಂಗನು ಈ ಇಮ್ಮಡಿ ಜಯಕೆಸಿಯ ತಮ್ಮನೆಂದೂ ನಿರ್ಧರಿಸಬಹುದೆಂಬ ಈ ಅಂಶವನ್ನು ಹೇಳಿದ್ದಾಗಿದೆ. ಹಾಗೆಯೇ ಈ ಶಾಸನದ ಬಹುದಾಗಿದೆ. ಇಮ್ಮಡಿ ಜಯಕೇಸಿ ಅರಸನು ತ್ರಿಭುವನಮಲ್ಲ ವಿಕ್ರಮಾಂಕದೇವನ ಮಹಾಸಾಮಂತನಾಗಿ ಇದ್ದನೆಂದು ಹೇಳಲು ಶಾಸಾನಾಧಾರವಿದೆ [ಎ.ಇ.೧೬, ೧೦೭೭. ಪು. ೩೨೯].

ಆರನೇ ವಿಕ್ರಮಾದಿತ್ಯ ಚಕ್ರವರ್ತಿಯು ಆಳುತ್ತಿದ್ದಾಗ, ಆತನ ಮಹಾಮಂಡಲೇಶ್ವರರಲ್ಲಿ ಒಬ್ಬನಾದ ಮಣಲೆರಾನ್ವಯದ (ಮುಮ್ಮಡಿ) ಜಯಕೇಸಿ ದೇವನು ಕ್ರಿ.ಶ. ೧೧೨೮ ರಲ್ಲಿ ಮತ್ತು ೧೧೩೮ ರಲ್ಲಿ ಪುರಿಗೆರೆಯನ್ನು ಆಳುತ್ತಿದ್ದನು [ಸೌ.ಇ.ಇ. ೧೫, ೯೯. ೧೦೭ ಮತ್ತು ೧೧೨೮ ಮತ್ತು ಲಕ್ಷ್ಮೇಶ್ವರ]. ಈ ಜಯಕೇಸಿಯನ್ನು ಮುಮ್ಮಡಿ ಜಯಕೇಸಿ ಎಂದು ಕರೆಯಬಹುದು. ಇಂದ್ರಕೇಸಿ ೧- ಚಂಡಿಕಬ್ಬೆಯರ ಹಿರಿಯ ಮಗನೇ ಇಮ್ಮಡಿ ಜಯಕೇಸಿ (ಕ್ರಿ.ಶ. ೧೦೩೮) ಎಂದು ಪರಿಚಯಿಸಿದ್ದಾಗಿದೆ. ಒಂದನೆಯ ಇಂದ್ರಕೆಸಿಯರಸನು ಚಾಳುಕ್ಯರ ತ್ರೈಳೋಕ್ಯಮಲ್ಲ ಸೋಮೇಶ್ವರ೧ ಚಕ್ರವರ್ತಿಯ ಅಧೀನದಲ್ಲಿ ರಾಷ್ಟ್ರಕೂಟಕನಾಗಿ ಪುಲಿಗೆರೆ ಮುನ್ನೂರನ್ನು ಆಳುತ್ತಿದ್ದನು. ಈ ಇಂದ್ರಕೇಸಿ ರಾಷ್ಟ್ರ ಕೂಟಕನ ಒಂದು ಶಾಸನವನ್ನು (ಕ್ರಿ.ಶ. ೧೦೬೦) ಮುಂಬಯಿ ಪ್ರಿನ್ಸ್ ಆಫ್ ವೇಲ್ಸ್ ಮೂಸಿಯಮ್ಮಿನಲ್ಲಿ ಸಂರಕ್ಷಿಸಲಾಗಿರುವುದನ್ನು ಪ್ರಸ್ತಾಪಿಸಿದ್ದಾಗಿದೆ; ಆ ಶಾಸನದ ಪ್ರಕಾರ ಇಂದ್ರಕೇಸಿಯು ಇಬ್ಬರು ಮಗಂದಿರಲ್ಲಿ ಒಬ್ಬನ (ಹಿರಿಯವನ) ಹೆಸರು (ಇಮ್ಮಡಿ) ಜಯಕೇಸಿ ಎಂಬುದಾಗಿಯೂ ಸ್ಪಷ್ಟವಾಗಿ ತಿಳಿದುಬಂದಿದೆ. [ASR. ೧೯೩೬-೩೭, ಪು. ೬೮ ಮತ್ತು ಕ.ಇ.೧. ನಂ. ಸು. ೧೧೦೦ ಶಿಗ್ಗಾಂವಿ (ಧಾರವಾಡ ಜಿಲ್ಲೆ) ಪು. ೩೧].

ಮುಮ್ಮಡಿ ಜಯಕೇಸಿಯು “ಸ್ವಸ್ತ್ಯನೇಕ ರಿಪುನೃಪತಿ ಶಿರಶ್ಚೇದಕ ಪ್ರಭಾವ ಪ್ರಸಿದ್ಧ ನಿಜ ವಿಜಯ ಶಾಸನ ಚಕ್ರವರ್ತ್ತಿ ಪ್ರಭಾವೋಚಿತ ರಾಜ್ಯಚಿಹ್ನಾಧಿಪತಿ ಯುಮಪ್ಪ ಶ್ರೀಮನ್ ಮಹಾಮಣ್ಡಳೇಶ್ವರಂ ಸಗರ ಮಾರ್ತ್ತಣ್ಡ ಜಯಕೇಸಿ ದೇವರ್ ಶ್ರೀ ರಾಜಧಾನಿ ಪಟ್ಟಣಂ ಪುಲಿಗೆಱಿ” ಯಿಂದ ಆಳುತ್ತಿದ್ದನು [ಸೌ.ಇ.ಇ. ೨೦, ೯೯, ೧೧೨೮. ಲಕ್ಷ್ಮೇಶ್ವರ ಪು. ೧೨೫]. ಇಮ್ಮಡಿ ಇಂದ್ರಕೇಸಿಯ ತರುವಾಯ ಮಹಾಮಂಡಲೇಶ್ವರ ನಾಗಿ ಆ ಅದಿಕಾರ ಮನ್ನಣೆಗೆ ಮತ್ತೆ ಪಾತ್ರನಾದವನು ಮುಮ್ಮಡಿ ಜಯಕೇಸಿಯೆ. ಈತನು ರಾಜಧಾನಿ ಪುಲಿಗೆರೆಯಲ್ಲಿ ಸ್ವಯಂಭು ಧಕ್ಷಿಣ ಸೋಮನಾಥ ದೇವಾಲಯಕ್ಕೆ ಸೇರಿದ ಘಳಿಗೆ (ವಿದ್ಯಾಲಯ)ಕ್ಕೆ ಭೂಮಿಯನ್ನು ದಾನವಾಗಿತ್ತು ತನ್ನ ವಿದ್ಯಾಪಕ್ಷಪಾತ ವನ್ನು ತೋರಿದ್ದಾನೆ [ಅದೇ : ಸಾಲು ೩-೭.). ಈತನನ್ನು ಇನ್ನೊಂದು ಶಾಸನದಲ್ಲಿ “ರಿಪುನೃಪತಿ ಶಿರಶ್ಚೇದಕ ಪ್ರಭಾವ ಪ್ರಸಿದ್ಧ ದಿಗ್ವಿಜಯ ಶಾಸನಂ ಚಕ್ರವರ್ತಿ ಪ್ರಭಾವೋಚಿತರಾಜ್ಯ ಚಿಹ್ನಾಧಿಪತಿ ಸಪ್ತ ಸಮುದ್ರ ದ್ವೀಪಾ (ಧಿಪತಿ) ಸೂರ್ಯ್ಯ ವಂಶಾಂಬರ ದ್ಯುಮಣಿ ಸಮ್ಯಕ್ತ್ವಚೂಡಾಮಣಿ ಕ್ಷತ್ರಿಯ ಪವಿತ್ರಃ ಕದನ ತ್ರಿಣೇತ್ರಂ ಸಗರ ಮಾರ್ತ್ತಣ್ಡಂ ಶ್ರೀಮನ್ ಮಹಾಮಣ್ಡಳೇಶ್ವರಂ’- ಎಂಬುದಾಗಿ ಪರಿಚಯಿಸಿದೆ [ಅದೇ. ೧೦೭-೧೧೩೮. ಸಾಲು : ೩೯-೪೧]. ಈತನ ಔದಾರ್ಯ, ಧರ್ಮ ನಿರಪೇಕ್ಷವಾದ ಜಾತ್ಯಾತೀತ ಧೋರಣೆ ಮೊದಲಾದ ಗುಣಗಳನ್ನು ಶಾಸನಗಳು ಕೀರ್ತಿಸಿವೆ. ಈ ಜಯಕೇಸಿ ಮಹಾಮಂಡಳೇಶ್ವರನು ಕುಂಯ್ಯಬಾಳ ಬಸದಿಗೆ ತನ್ನ ಬೀರವಣದೊಲಗೆ ವರ್ಷಕ್ಕೆ ಕೊಟ್ಟ ಪಣ ೧ ಲೆಕ್ಕದ ಮತ್ತು. ತನ್ನಾಯದಲಿ ಕೊಟ್ಟ ದಾನವನ್ನು ಶಾಸನವೊಂದು ದಾಖಲಿಸಿದೆ [ಸೌ.ಇ.ಇ. ೨೦, ೧೧೮. ೧೧೪೮. ಕುಯಿಬಾಳ್ (ಧಾರವಾಡ ಜಿಲ್ಲೆ ಕುಂದಗೊಳ ತಾಲ್ಲೂಕು) ಪು. ೧೫೬, ಸಾಲು ೭-೮.]. ಈತನನ್ನು ಜಯಕೇಸಿ, ಜಯಕೇಸಿದೇವ, ಜಯಕೇಸಿದೇವರಸ, ಜಯಕೇಸಿನ್, ಜಯಕೇಸಿನೃಪ, ಜಯಕೇಸಿಯರಸ ಮುಂತಾಗಿ ಶಾಸನಗಳು ಬಣ್ಣಿಸಿರುವುದು ಈತನ ಜನಾದರಣೆಗೆ ಸಾಕ್ಷಿ.

ಇದೇ ಸಂದರ್ಭದಲ್ಲಿ ಗಮನಿಸಬಹುದಾದ ಮತ್ತೊಂದು ಮಾಹಿತಿಯಿದೆ. ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯಲ್ಲಿ ದೊರೆತಿರುವ, ತುಂಬ ತ್ರುಟಿತವಾಗಿರುವ ಶಾಸನವೊಂದು ಚಾಳುಕ್ಯರ ವಿಕ್ರಮಾಂಕದೇವನ ೬ ಆಳ್ವಿಕೆಗೆ ಸೇರಿದ್ದಾಗಿದೆ. ಅದರಲ್ಲಿ ಸಗರವಂಶ ಎಂದಷ್ಟೇ ಕಾಣುತ್ತಿದ್ದು ಅದರ ಹಿಂದು ಮುಂದುಗಳೊಂದೂ ಕಾಣದೆ ಮುಕ್ಕಾಗಿದೆ [Inscriptions from Solapur District, No. ೭. ಪು. ೧೨ ೧೧ನೆಯ ಶ.]. ಇದರಲ್ಲಿ ಇಮ್ಮಡಿ ಜಯಕೇಸಿಯ ಮಗಂದಿರ ವಿಚಾರ ಪ್ರಸ್ತಾಪಿತವಾಗಿರುವ ಸಾಧ್ಯತೆಯಿದೆ.

ಮೇಲ್ಕಂಡ ವಿವರಗಳನ್ನು, ಆಯಾ ಶಾಸನಗಳು ಒಳಗೊಂಡಿರುವ ಮಾಹಿತಿಗಳನ್ನು ಅಳವಡಿಸಿಕೊಂಡು, ಒಂದು ವ್ಯವಸ್ಥಿತ ಸಂಯೋಜನೆಯಿಂದ ಮಣಲೆಯರ ಮನೆತನದ ಯಶೋಗಾಥೆಯನ್ನು ಪರಿಶೀಲಿಸಬಹುದು.

ಮಣಲೆರ – ಜಯಕೇಸಿ

ಸಗರವಂಶದ ರಾಜ ಪ್ರತಿಷ್ಠೆಯನ್ನೂ, ಪ್ರಸಿದ್ಧಿಯನ್ನೂ, ಸಾಮಾಜಿಕ ಘನತೆಯನ್ನೂ ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಿದವನು ಮಣಲೆರ ಎಂಬ ಹೆಸರಿನ ಪರಾಕ್ರಮಿ. [ಎ.ಇ. ೬, ಕ್ರಿ.ಶ. ೯೪೯ ಪು. ೫೪]. ಸಗರ ವಂಶಕ್ಕೆ ಈ ಮಹಾಪುರುಷನು ಎಷ್ಟು ಕೀರ್ತಿಯನ್ನು ಗಳಿಸಿಕೊಟ್ಟ ಪ್ರಮುಖನಾದನೆಂದರೆ, ಈತನ ಹೆಸರಿನಿಂದಲೇ ಈ ಸಗರ ಕುಲವನ್ನು ಕರೆಯುವ, ನಿರ್ದೇಶಿಸುವ ಪರಿಪಾಟಿಯೊಂದು ರೂಢಿಗೆ ಬಂದಿತು; ಈತನಿಗಂತಲೂ ಮೊದಲು ಇದೇ ಹೆಸರಿನವರು ಈ ವಂಶಜರು ಇದ್ದರೆಂಬುದೂ ದಿಟವೇ ಆದರೂ ಈತನು ತನಗಿಂತ ಹಿಂದಿನವರಿಗಿಂತ ಎತ್ತರಕ್ಕೇರಿದ್ದನು. ಮಣಲೆಯರು, ಮಣಲವಂಶ, ಮಣಲೆಯರ ಮನೆತನ ಸಗರ ಕುಲ, ಸಗರವಂಶ- ಇವು ಪರ್ಯಾಯ ವಾಚಿಗಳಾದವು. ವ್ಯಕ್ತಿವಾಚಕವಾಗಿಯೂ ಪರಿಣಮಿಸಿತು ಎಂಬುದು ಪರಿಭಾವನಾರ್ಹವಾಗಿದೆ.

ಸಗರವಂಶದವರು ಪಶ್ಚಿಮ ಚಾಳುಕ್ಯರ ಆಸರೆಗೆ ಬರುವ ಮೊದಲು ಗಂಗರ ನೆರಳಲ್ಲಿ ಬೇರುಬಿಟ್ಟು ಬಾಳಿದವರು. ಗಂಗರ ಸಹಾಯದಿಂದ ಈ ಸಗರ ಕುಲಜರು ಪ್ರತಿಷ್ಟಿತ ರಾಷ್ಟ್ರಕೂಟ ಚಕ್ರಾಧಿಪತ್ಯದಲ್ಲಿ ಸ್ಥಾನಮಾನಗಳನ್ನು ಗಳಿಸಿದರು. ಗಂಗರ-ರಾಷ್ಟ್ರಕೂಟರ ಸಂಯುಕ್ತ ಪೋಷಣೆಯಲ್ಲಿ ಜೀವಿಸಿದ ಸಗರರು, ಆ ಎರಡು ರಾಜ ಕುಲಗಳು ಮರೆಯಾದ ಮೇಲೆ ಪಶ್ಚಿಮ ಚಾಲುಕ್ಯರ ಕೈಕೆಳಗಿನ ಸಾಮಂತರಾದರು; ಇಲ್ಲಿಯೂ ಹಿಂದಿನ ಉನ್ನತ ಗೌರವಾದರಗಳನ್ನು ಗಳಿಸಿ ಮಾನ್ಯರಾದರು. ಸಗರವಂಶಜರು ತಮ್ಮ ಮೊದಲ ದಣಿಗಳಾದ ಗಂಗರಂತೆಯೇ ಯುದ್ಧವೀರರು ಮತ್ತು ಜೈನಧರ್ಮೀಯರು. ಜೈನಧರ್ಮ ಸಂರಕ್ಷಣೆಗೆ ಇವರ ದೇಣಿಗೆಯ ಗಣನೀಯ ಪ್ರಮಾಣದಲ್ಲಿದೆ. ಇವರ ರಾಜ್ಯ ಲಾಂಛನ ಸಿಂಹ [ಕೇಸರಿಕೇತು, ಗಜಾರಿಧ್ವಜ : ಸೌ.ಇ.ಇ. ೨೦, ೪೭ ಮತ್ತು ೫೫]; ವರ್ಧಮಾನ ಮಹಾವೀರ ತೀರ್ಥಂಕರನ ಲಾಂಛನ ‘ಸಿಂಹ’ ವೆಂಬುದನ್ನು ಗಮನಿಸಬೇಕು.

ಆತಕೂರು ಮಣಲೆರನ ತರುವಾಯದ ಕೆಲವು ಶ್ರೇಷ್ಠ ಪುರುಷರು ಈ ಸಗರಕುಲದಲ್ಲಿ ಆಗಿ ಹೋದರು. ಅವರಲ್ಲಿ ಮಣಲವಮ್ಶದ ಇಂದ್ರಕೇಶಿಯರಸನ ಮಗ ಮಹಾಸಾಮಂತ ಜಯಕೇಸಿಯರಸನು ಬೆಳ್ವೊಲದ ಪುರಿಗೆಱಿ ಮುನ್ನೂರರ ರಾಷ್ಟ್ರಕೂಟಕನಾಗಿದ್ದನು. ಪುರಿಗೆರೆ ಎಂಬುದು ಪುಲಿಗೆರೆಯ ಪರ್ಯಾಯರೂಪ; ಇದು ಆಧುನಿಕ ಲಕ್ಷ್ಮೇಶ್ವರ. ಈಗಾಗಲೇ ಪ್ರಸ್ತಾಪಿಸಿರುವ ಆತಕೂರು ಶಾಸನೋಕ್ತರಾದ ಇಮ್ಮಡಿ ಬೂತುಗ ಮತ್ತು ಮಣಲೆರರನ್ನು ಇಲ್ಲಿ ಪುನಃ ಉಲ್ಲೇಖಿಸಬೇಕಾಗಿದೆ. ತಕ್ಕೊಲದ ಕಾಳಗದಲ್ಲಿ ಗಂಗರ ಬೂತುಗನು ತೋರಿದ ಪರಾಕ್ರಮದಿಂದ ಸಂಪ್ರೀತನಾದ ರಾಷ್ಟ್ರಕೂಟ ಚಕ್ರವರ್ತಿ ೩ನೇ ಕೃಷ್ಣ (ಕನ್ನರದೇವ)ನು ಬೂತುಗನಿಗೆ ‘ಬನವಸೆ ಪನ್ನಿರ್ಚ್ಛಾಸಿರಮುಂ ಬೆಳ್ವೊಲ ಮೂನೂಱುಂ ಪುರಿಗೆಱೆ ಮೂನೂಱುಂ ಕಿಸುಕಾಡೆೞ್ಪುತ್ತುಂ ಬಾಗಿನಾಡೆೞ್ಪುತ್ತುವರಂ ಮೆಚ್ಚುಗೊಟ್ಟಮ್’ [ಎ.ಇ.೨, ಪು. ೧೭೨]; ಇದು ಕ್ರಿ.ಶ. ೯೫೦ ರ ಘಟನೆ. ಈ ವಿಜಯದ ಮತ್ತು ತನ್ನ ಅಧಿಕಾರೋನ್ನತಿಯ ಪ್ರಾಪ್ತಿ ಸ್ಮಾರಕವಾಗಿ ಬೂತುಗನಿಮ್ಮಡಿಯು ಪುಲಿಗೆರೆಯಲ್ಲಿ ಪೆರ್ಮ್ಮಾಡಿ ಬಸದಿಯನ್ನು ಮಾಡಿಸಿದನು. ಮುಂದೆ ಇದನ್ನು ಚಾಳುಕ್ಯರ ಭುವನೈಕ ಮಲ್ಲನು ಧವಳಿತ ಉತ್ತುಂಗ ತರಳತರಂಗಳುಮಾಗೆ ಮಾಡಿಸಿದನು [ಸೌ.ಇ.ಇ. ೧೧-೧, ೧೦೩. ೧೦೬೫. ಪು. ೯೯-೧೦೨: ಬಾ.ಕ.ಇ. ೧-೧, ೧೦೩. ನಂದವಾಡಿಗೆ (ಬಿಜಾಪುರ ಜಿಲ್ಲೆ, ಹನಗುಂದ ತಾಲ್ಲೂಕು)] ಮೇಲೆ ಹೇಳಿದ ಪೆರ್ಮಾಡಿ ಬಸದಿಗೆ ಮಣಲವಂಶಜ ಜಯಕೇಸಿಯರಸನು, ಆತ ಪುರಿಗೆಱೆ ಮುನ್ನೂರರ ರಾಷ್ಟ್ರಕೂಟನಾಗಿದ್ದಾಗ, ಕ್ರಿ.ಶ. ೧೦೭೪ ರಲ್ಲಿ ಭೆಟ್ಟಿ ಕೊಟ್ಟನು. ಇದಕ್ಕೆ ತನ್ನ ವಂಶದ ಮೂಲ ಪುರುಷನೆನಿಸಿದ ಮಣಲೆರನ ಸ್ಮರಣೆಯೂ ಒಂದು ಪ್ರಬಲ ಕಾರಣ. ಪೆರ್ಮಾಡಿ ಬಸದಿಯನ್ನು ಕಟ್ಟಿಸಿದ ಬೂತುಗನ ಅಂಕಕಾಱನಾಗಿ ಮಣಲೆರನು ಮಾನ್ಯವಾಗಿ ಪಡೆದನೆಂದು ಈ ಹಿಂದೆಯೇ ಹೇಳಿದ್ದಾಗಿದೆ. ಹೀಗೆ ಮಣಲೆರನನ್ನು ಬಹುವಾಗಿ ಪುರಸ್ಕರಿಸಿದ ಗಂಗರ ಬೂತುಗನು ಕಟ್ಟಿಸಿದ ಬಸದಿಯೆಂಬ ಅಭಿಮಾನವೂ ಹೆಣೆದುಕೊಂಡು ಜಯಕೇಸಿಯು ಪ್ರಥಮ ನಂದೀಶ್ವರದ ಆದಿತ್ಯವಾರದಂದು ಪೆರ್ಮಾಡಿ ಬಸದಿಯ ದರ್ಶನಕ್ಕೆ ಬಂದನು [ಸೌ.ಇ.ಇ. ೨೦, ೪೭. ೧೦೭೪ ಲಕ್ಷ್ಮೇಶ್ವರ. ಪು. ೫೩-೫೫] ಈ ಶಾಸನದ ಒಕ್ಕಣೆ ಉದ್ಧೃತವಾಗಿದೆ:

            ಪುರಿಗೆಱೆಗೆ ಬಿಜಯಂಗೆಯ್ದಲ್ಲಿಯ ಶ್ರೀ ಶಂಖತೀರ್ತ್ಥಾದ್ ಜೈನ ಮಂದಿರಂಗಳಂ
ವನ್ದನಾಭಕ್ತಿಪೂರ್ವ್ವಕಂ ನೋಡುತ್ತಂ ಬಂದು ಪೆರ್ಮಾಡಿಯ ಬಸದಿಗೆ ವನ್ದಲ್ಲಿಯ
ಮೂಲಸಂಘಾನ್ವಯದ ಬಳಾತ್ಕಾರಗಣದ ಗಣ್ದವಿಮುಕ್ತ ಭಟ್ಟಾರಕರ ಶಿಷ್ಯರ್
ತ್ರಿಭುವನಚಂದ್ರ ಪಣ್ಡಿತದೇವರಂ ಕಣ್ಡು ತ್ರಿಕರನ ಸುದ್ದಿಯಿಂ ಬನ್ದಿಸಿ ಕುಳ್ಳಿಱ್ದು

                        ಪುರಿಗೆಱೆಯೊಳ್ಪೆರ್ಮಾಡಿಯ
ಪುರವರಮಳಿದಿಱ್ದುದಂ ಗಜಾರಿಧ್ವಜನಾ
ದರದಿಂದಮೆ ನೋಡಿ ಪುನ
ರ್ಬ್ಭರಣಂ ಮಾಡಲ್ಕೆವೇಡಿ ಜಯಕೇಶಿ ನ್ರಿಪಂ
||

(ಈ ಕಂದ ಪದ್ಯ ಸೌ.ಇ.ಇ. ೨೦, ೫೫.೧೦೮೨. ಲಕ್ಷ್ಮೇಶ್ವರ. ಪು. ೬೮ ರಲ್ಲೂ ಪುನಾರಾವೃತ್ತಿಗೊಂಡಿದೆ)

                        ಸ್ಮರರೂಪಂ ಪೆರ್ಮ್ಮಾಡಿಯ
ಪುರವರದೊಳ್ ನಡೆವ ಮನ್ನೆಯದ ಕಿಱುದೆಱೆಯಂ
ಪುರದಾನಿಕೆಯುಳ್ವದೀಪಂ
ಪರಿಹಾರಂಬಿಟ್ಟು ಮಾಡಿದಂ ತತ್ಪುರಮಂ
||

ಹೀಗೆ ಸರ್ವ್ವಬಾಧಾ ಪರಿಹಾರಮಾಗೆ ದಾಯದ್ರಮ್ಮದ ಕಿಱುದೆಱೆಗಳುಮಂ ಬಿಟ್ಟು ನಡೆಯಿಸಿದ ಜಯಕೇಸಿಯ ಮತ್ತು ಅವನ ಪೂರ್ವಜರ ಜೈನಧರ್ಮಾನುರಾಗ ದೀರ್ಘವಾಗಿಯೇ ಶಾಸನೋಕ್ತವಾಗಿದೆ (ಅದೇ: ಪು. ೫೪-೫೫). ಕೂಲಿಗೆರೆ ಶಾಸನದ ಕಾಲದಿಂದಲೂ (ಕ್ರಿ.ಶ. ೯೧೬) ಮಣಲೇರ ವಂಶದವರಿಗೆ ನಾನಾ ತೆರಿಗೆಗಳನ್ನು ಅನುಭೋಗಿಸುವ ಅಧಿಕಾರ ಉದ್ದಕ್ಕೂ ಆಯಾ ಕಾಲದ ರಾಜರಿಂದ ದತ್ತವಾಗುತ್ತ ಬಂದಿದೆ.

ವಾಳುಕ್ಯ ಸಾಮ್ರಾಹ್ಯದ ಚರಿತ್ರೆಯಲ್ಲಿ ಲಕ್ಷ್ಮೇಶ್ವರದ ಈ ಶಾಸನವು ಬಹು ಮುಖ್ಯವಾದ ಹೊರಳುದಾರಿಯ ಹೊಸ್ತಿಲಲ್ಲಿ ನಿಂತ ಶಾಸನ ಮತ್ತು ಇಸವಿ ಆಗಿದೆ. ಏಕೆಂದರೆ ಕ್ರಿ.ಶ. ೧೦೭೪ರಲ್ಲಿ, ತ್ರೈಳೋಕ್ಯಮಲ್ಲ ಸೋಮೇಶ್ವರ ೧ ಚಕ್ರಿಯ ಹಿರಿಯ ಮಗನಾದ ಭುವನೈಕಮಲ್ಲ ಸೋಮೇಶ್ವರ ೨ ರಾಜನಾಗಿ ಈ ಅವಧಿಯಲ್ಲಿ ಇನ್ನೂ ಆಳುತ್ತಿದ್ದರೂ, ಅವನ ತಮ್ಮನಾದ ವಿಕ್ರಮಾಂಕ ಪೆಮ್ಮಾಡಿಯು ಈ ವೇಳೆಗೆ ಅಣ್ಣನ ಎದುರಾಳಿಯಾಗಿ ಹುರಿಗೊಂಡು ಪೂರ್ಣವಾಗಿ ತಿರುಗಿಬಿದ್ದನು ಮತ್ತು ತನ್ನ ರಾಜಶಕ್ತಿಯನ್ನು ಸಂಚಯಿಸಿ ತಾನೆ ಸ್ವತಂತ್ರನೆಂಬಂತೆ ವರ್ತಿಸತೊಡಗಿದನು. ಭುವನೈಕಮಲ್ಲನಿಗೆ ಈಗ ಬಲಗೈ ಬಂಟನಾಗಿ ಆಸರೆಯಿತ್ತು ನಿಂತಿದ್ದವನು ನೆಚ್ಚಿನ ಅಣುಗಾಳು ಲಕ್ಷ್ಮರಸ ಮಹಾಮಂಡಳೇಶ್ವರನೊಬ್ಬನೇ. ಸಗರ ಕುಲದ ಜಯಕೇಸಿ ನೃಪನು ಪುರಿಗೆರೆಯಲ್ಲಿ ಈ ಅವಧಿಯಲ್ಲಿ ರಾಷ್ಟ್ರಕೂಟಕನಾಗಿದ್ದನು. ರಾಷ್ಟ್ರಕೂಟಕ ನೆಂದರೆ ರಾಷ್ಟ್ರಿಕ ಅಥವಾ ಭೋಜಕ (ರಾಜ್ಯಪಾಲ) ಎಂದರ್ಥ [ಕನ್ನಡ ಸಾಹಿತ್ಯ ಪರಿಷತ್ತಿನ ಬೃಹತ್ ಕನ್ನಡ ನಿಘಂಟಿನಲ್ಲಿ ‘ರಾಷ್ಟ್ರಕೂಟಕ’ ಎಂಬ ಶಬ್ದವೇ ಬಿಟ್ಟು ಹೋಗಿದೆ, ಅದರ ಮರು ಮುದ್ರಣದಲ್ಲಾದರೂ ಈ ಶಬ್ದ ಮತ್ತು ಪ್ರಯೋಗ ಸೇರ್ಪಡೆಯಾಗಬೇಕು]. ಜಯಕೇಸಿಯು ರಾಷ್ಟ್ರಕೂಟನಾಗಿದ್ದಾಗ ಚಕ್ರವರ್ತಿ ಭುವನೈಕ ಮಲ್ಲ ಪಾದಪದ್ಮೋಪಜೀವಿ ಮಹಾಮಂಡಲೇಶ್ವರ ಲಕ್ಷ್ಮರಸನು ಎರಡಱು ನೂಱುಮಂ ಸುಖದಿನಾಳುತ್ತಮಿರೆ :

            ನಾನಾ ದ್ವೀಪದೊಳಗ್ರಿಮಂ ನೆಗೞ್ದ ಜಂಬೂದ್ವೀಪಮಾ ದ್ವೀಪದೊಳ್
ನಾನಾ ಕ್ಷೇತ್ರದೊಳುತ್ತಮಂ ಭರತಮಾ ಭೂಭಾಗದೊಳ್ ಕುನ್ತಳಂ
ತಾನತ್ಯೂರ್ಜ್ಜಿ ತಮ್ಮಲ್ಲಿ ಭೋಗಿಜನರಮ್ಯಂ ಬೆಳ್ವೊಲಂ ತನ್ಮುಖ
ಸ್ಥಾನಂ ಶೋಭಿಕುಮಾಗಳುಂ ಪುರಿಕರ ಶ್ರೀರಾಜಧಾನ್ಮಾಹ್ವಯಂ
||
ಪುರಿಕರ ಪುರವರ ಪರಮೇ
ಶ್ವರನುಜ್ವಳ ಕೀರ್ತ್ತಿ ಸಗರ ಮಾರ್ತ್ತಣ್ಡಂ ಕೇ
ಸರಿಕೇತು ರಾಷ್ಟ್ರಕೂಟಕ
ವರನಾ ತ್ರಿಶತಕ್ಕಮಿಂದ್ರಕೇಶಿ ನರೇಂದ್ರಂ ||

            ತತ್ಪುರಿಕರ ವಿಷಯಾಧಿಪ
ನುತ್ಪಾಟಿತವೈರಿ ನೆಗೞ್ದ ಮಣಲರ ಭೀಮಂ
ಸತ್ಪಾತ್ರದಾನ ನಿಧಿಯ
ರ್ಹತ್ಪಾದಾಬ್ಜಾಳಿಯಿಂದ್ರಕೇಶಿ ನರೇಂದ್ರಂ
||
ಆತನ ಪಿರಿಯರಸಿ ಗುಣಾ
ನ್ವಿತೆ ಪತಿವ್ರತೆ ಚರಿತ್ರವತಿ ವಿಶದಗುಣ
ಖ್ಯಾತವತಿ ಸತ್ಯವತಿ ಧಾ
ತ್ರೀ ತಳದೊಳ್ ಚಂಡಿಕಬ್ಬೆಯೆನೆ ಪೊಗಳದರಾರ್ ||

            ಅವರ್ಗ್ಗಗ್ರಸೂನು ಭಾವೋ
ದ್ಭವ ಮೂರ್ತ್ತಿ ಸುಧಾಂಶು ವಿಶದಕೀರ್ತ್ತಿ ಜಯಶ್ರೀ
ದೇವನಮಳ ಮನಲಕುಳವರ
ಕುವಳಯ ಶೀತಾಂಶು ಸಗರ ಮಾರ್ತ್ತಣ್ಡ ನ್ರಿಪಂ
||

ಸ್ವಸ್ತಿ ಸಮಧಿಗತ ಪಂಚಮಹಾಶಬ್ದ ಮಹಾಸಾಮನ್ತಂ ವಿಜಯಶ್ರೀಕಾನ್ತಂ ಮಣಲೆರಾನ್ವಯ ಪ್ರಸೂತಂ ಸಿಂಹಲಾಂಚ್ಛನ ಪ್ರಸೂತಂ ಪುರಿಕರ ಪುರವರೇಶ್ವರಂ ಕದನಮಹೇಶ್ವರಂ ಪ್ರಚಣ್ಡ ಮಣ್ಡಳಾಗ್ರಮಣ್ಡಿತ ದೋರ್ದ್ದಣ್ಡಂ ಸಗರ ಮಾರ್ತ್ತಣ್ಡಂ ಕಾಮಿನೀಕಾಮಂ ಮಣಲರ ಭೀಮಂ ತುರಗ ರೇವನ್ತಂ ಪರಬಳಕ್ರಿತಾನ್ತಂ ಸಾಹಸೋತ್ತುಂಗಂ ಮನ್ನೆಯಸಿಂಗಂ ನಾಮಾದಿ ಸಮಸ್ತ ಪ್ರಶಸ್ತಿ ಸಹಿತಂ ಶ್ರೀ ಮನ್ಮಹಾಸಾಮನ್ತಂ ಜಯಕೇಶಿಯರಸರ್ ಪುರಿಗೆಱೆ ಮೂನೂಱರ್ಕ್ಕಂ ರಾಷ್ಟ್ರಕೂಟಕನಾಗಿ ಸುಖದಿಂ ರಾಜ್ಯಂಗೆಯೆ

            ಶ್ರೀರಮಣಿಗೆ ಸಮರಜಯ
ಶ್ರೀರಮಣಿಗೆ ತಾರಹಾರಶಶಿವಿಶದಯಶ
ಶ್ರೀರಮಣಿಗೆ ಸಕಳವಚ
ಶ್ರೀರಮಣಿಗೆ ರಮಣನಲ್ತೆ ಜಯಕೇಶಿನ್ರಿಪಂ
||
ಅನ್ತೆನಿಸಿದ ಜಯಲಕ್ಷ್ಮೀ
ಕಾನ್ತಂ ದುಷ್ಟಾಶ್ವಚಯಕಿದಾನೆನ್ತನೆ ರೇ
ವನ್ತಂ ವಿದ್ವಿಟ್ ನ್ರಿಪತಿಕ್ರಿ
ತಾನ್ತಂ ಸುಖದಿನ್ದ ಮಿೞ್ದು ಜಯಕೇಶಿನ್ರಿಪಂ ||

ಮೇಲ್ಕಂಡ ಶಾಸನದ ವರ್ಣನೆಯಿಂದ ತಿಳಿದು ಬರುವ ಪ್ರಕಾರ ಸಗರವಂಶ (ಮಣಲೆರಾನ್ವಯ) ದಲ್ಲಿ ಆತುಕೂರು ಮಣಲೆರನ ತರುವಾಯ ಪ್ರಸಿದ್ಧನಾದವನು ಜಯಕೇಶಿ ನೃಪನು. ಈತನು ಇಂದ್ರಕೇಶಿ ನರೇಂದ್ರ ಮತ್ತು ಚಂಡಿಕಬ್ಬೆ ದಂಪತಿಗಳ ಹಿರಿಯ ಮಗ. ಈತನನ್ನು ಶಿಗ್ಗಾಂವಿಯ ಶಾಸನವೂ ಶ್ಲಾಘಿಸಿದೆ: ಸಗರ ವಂಶದೊಳ್ ನೆಗಱ್ದಿರ್ದ್ದನೆ ಜಯಕೇಸಿಯಾತನ ಸುತಂ ನೆಗಱ್ದೆಂದ್ರ ಕೇಸಿಯಾ(ತನ) (ಪಿರಿಯ) ತನಯಂ ಜಯಕೇಸಿಯೆನ್ದಡೆ ಪೊಗಱ್ವು……. ನಗಣ್ಡರಸಂ ಸಮಧಿಗತ ಪಂಚಮಹಾಸಬ್ದ ಮಹಾ (ರಾಷ್ಟ್ರಕೂಟಕಂ) ಮಣಲೆರಾನ್ವಯ ಪ್ರಸೂತ ಸಿಂಘ ಲಾಂಚ್ಛನ…. [ಕ.ಇ.೧, ೨೧, ಸು. ೧೧೦೦ ಶಿಗ್ಗಾಂವಿ (ಧಾರವಾಡ ಜಿಲ್ಲೆ)] ತನ್ನ ತಂದೆ ಯಂತೆ ಈತನೂ ಸಗರಕುಲಮಾರ್ತ್ತಂಡನೂ, ಮಣಲೆರವಂಶದಲ್ಲಿ ಭೀಮನೂ ಆಗಿ ದ್ದನು. ಈತನಿಗೆ ಪಂಚಮಹಾಶಬ್ದದ ಮರ್ಯಾದೆಯಿತ್ತು. ಚಾಳುಕ್ಯರ ಮಹಾಸಾಮಂತಿಕೆ ಯಿತ್ತು. ಈ ತಂದೆ ಮಕ್ಕಳು ಪುಲಿಗೆರೆ ಪುರವರಾಧೀಶ್ವರರು ಮತ್ತು ಪುಲಿಗೆರೆ – ಅಣ್ನಿಗೆರೆಯ ಪ್ರದೇಶ ಪರಿಸರವು ಇವರ ಚಟುವಟಿಕೆಗಳ ಕೇಂದ್ರವಾಗಿತ್ತು.

ಚಾಳುಕ್ಯರ ಯುವರಾಜ ಅಣ್ಣನಂಕಕಾಱ ತ್ರೈಳೋಕ್ಯಮಲ್ಲವೀರನೊಳಂಬ ಪಲ್ಲವ ಪೆರ್ಮ್ಮಾನಡಿ ಜಯಸಿಂಹದೇವನು ಪುರಿಗೆಱೆ ಮೂನೂಱುಂ ಬೆಳ್ವಲ ಮೂನೂಱುಂ ಬನವಸೆ ಪನ್ನಿರ್ಚ್ಛಾಸಿರಮುಂ ಕನ್ದೂರ್ಸಾಸಿರ ಮುಮೊಳಗಾಗಿ ಪಲವುಂ ಭತ್ತಗ್ರಾಮಂಗಳನಾಱ್ದು ಸುಖಂ ರಾಜ್ಯಂಗೆಯ್ಯುತ್ತುಮಿರೆ- ಆ ಅವಧಿಯಲ್ಲಿ ಈ ಜಯಕೇಸಿ || ನೃಪನು ರಾಷ್ಟ್ರಕೂಟನಾಗಿದ್ದನು :

            ಪುರಿಕರ ಪುರವರ ಪರಮೇ
ಶ್ವರನುಜ್ವಲಕೀರ್ತ್ತಿ ಸಗರ ಮಾರ್ತ್ತಣ್ಡಂ ಕೇ
ಸರಿಕೇತು ರಾಷ್ಟ್ರಕೂಟಕ
ವರನಾ ತ್ರಿ ಶತಕೆ ನೆಗಱ್ದ ಜಯಕೇಸಿ ನೃಪಂ
||

[ಈ ಕಂದ ಪದ್ಯ ಸೌ.ಇ.ಇ. ೨೦, ೪೭. ೧೦೭೪ ಪು. ೫೪ ಶಾಸನದಲ್ಲೂ ಪುನರಾವೃತ್ತಿಯಾಗಿದೆ] ನೆಗಱ್ದ ಇಂದ್ರಕೇಶಿ ನರೇಂದ್ರನನ್ನು, ಜಯಕೇಶಿ ನೃಪನು ತಂದೆಯನ್ನು, ‘ಅರ್ಹತ್ವಾದಾಬ್ಜಾಳಿ’ ಯೆಂದು ಪರಿಚಯಿಸಲಾಗಿದೆ. ಪುಲಿಗೆಱೆ ಪುರವರಾಧೀಶ್ವರನೆಂದು ಜಯಕೇಶಿಯರಸನನ್ನು ಇತರ ಶಾಸನಗಳು ಕರೆದಿವೆ [ಎ.ಇ. ೧೬. ಪು. ೩೩೨]. ಹುಲಗೂರು ಶಾಸನೋಕ್ತ ಮುಮ್ಮಡಿ ಜಯಕೇಸಿಯೂ ಜಿನಧರ್ಮ ಭೂಷಣನು ಮತ್ತು ಇದೇ ವಂಶದ ಒಂದೇ ಹೆಸರಿನ ವ್ಯಕ್ತಿಯಾಗಿದ್ದು ಪುರಿಗೆಱೆಗೆ ನಾಳ್ಗಾವುಂಡನಾಗಿದ್ದನು. ಈ ೩ನೇ ಜಯಕೇಶಿಯು ತನ್ನ ಅಜ್ಜ ೨ನೇ ಜಯಕೇಸಿ ರಾಷ್ಟ್ರಕೂಟನಿಗಿಂತ ಐವತ್ತು ವರ್ಷಗಳಾದ ಮೇಲೆ ಬಂದವನು; ಮತ್ತು ಈ ಮುಮ್ಮಡಿ ಜಯಕೇಶಿಯ ವೇಳೆಗೆ ಅಧಿಕಾರದ ಶ್ರೇಣಿಯಲ್ಲಿ ಹಿಂಬಡ್ತಿಯನ್ನು ಕಾಣಬಹುದು.

ಹೀಗೆ ಎಂಟನೆಯ ಶತಮಾನದ ತಗ್ಗಲೂರು, ದೇವರಹಳ್ಳಿ, ಹೆಬ್ಬಾಳು ಶಾಸನಗಳ ಮಣಲೆರರಿಂದ ಕ್ರಿ.ಶ. ೧೧೫೩ರ ಶಾಸನಗಳ ಮುಮ್ಮಡಿ ಜಯಕೇಶಿಯ ವರೆಗೆ, ಸಗರ-ಮಣಲೆರ ಕುಲದ ಮಾಹಿತಿಗಳು ಚೆಲ್ಲವರಿದಿವೆ. ಎಲ್ಲವನ್ನೂ ಬಾಚಿತಬ್ಬಿದರೆ, ಕಾಲಾನುಕ್ರಮದಲ್ಲಿ ಪೋಣಿಸಿ ನೋಡಿದರೆ, ಒಟ್ಟು ಸುಮಾರು ಐನೂರು ವರ್ಷಗಳವರೆಗೆ ಈ ವಂಶದವರು ನಾನಾ ಅಧಿಕಾರ ಶ್ರೇಣಿಯಲ್ಲಿದ್ದುದು ಸ್ಪಷ್ಟವಾಗುತ್ತದೆ; ಅಲ್ಲದೆ ಸುಮಾರು ಹದಿನೈದು ಜನ ಪ್ರಮುಖರ, ಸಗರ ಕುಲಾನ್ವಯದವರ ಆಧಾರಗಳು ಖಚಿತವಾಗಿ ತಿಳಿದು ಬರುತ್ತವೆ. ಈ ಸಗರ ಮಣಲೆರ ಮನೆತನಕ್ಕೆ ಮಂಡ್ಯ ಜಿಲ್ಲೆಯ ಮಳವಳ್ಳಿ ಮದ್ದೂರು ದೇವರಹಳ್ಳಿ ಹಾಗೂ ಮೈಸೂರು ಜಿಲ್ಲೆಯ ಗುಂಡ್ಲುಪೇಟೆ ತಿ. ನರಸೀಪುರ ಪರಿಸರವು ತಾಯ್ಮನೆಯಾಗಿ ಕಾಣುತ್ತದೆ: ಹತ್ತನೆಯ ಶತಮಾನದ ಉತ್ತರಾರ್ಧಾನಂತರದ ಕಾಲಘಟ್ಟದಲ್ಲಿ ಇವರ ಮುಖ್ಯ ನೆಲೆ ಕುಂತಳವಿಷಯದ ಬೆಳ್ವಲ ನಾಡಿನ ಪುಲಿಗೆರೆಯೆಂಬುದನ್ನು ಶಾಸನಗಳು ಸ್ಥಿತಪಡಿಸುತ್ತವೆ. ಒಂದು ಕಡ್ಡಿಯನ್ನು ಎರಡು ಸಮನಾದ ಭಾಗಗಳು ಬರುವಂತೆ ತುಂಡರಿಸಿದ ಹಾಗೆ, ಮಣಲೆರರು ಆಳಿದ ಐನೂರು ವರ್ಷಗಳಲ್ಲಿ ಅರ್ಧಭಾಗ ಹಳೆಯ ಮೈಸೂರಿನ ಭಾಗದಲ್ಲೂ ಇನ್ನರ್ಧವನ್ನು ಉತ್ತರ ಕರ್ನಾಟಕದಲ್ಲೂ ಬಾಳಿದುದು ಕಂಡುಬರುತ್ತದೆ.

ಆರಂಭದಲ್ಲಿ ನಾಳ್ಗಾವುಂಡರಾಗಿದ್ದ ಈ ಸಗರ ಮಣಲೆಯರ ಕುಲದವರು ಸಾಮಂತರಾಗಿ, ಮಹಾಸಾಮಂತರಾಗಿ, ರಾಷ್ಟ್ರಕರಾಗಿ, ಮಹಾಮಂಡಲೇಶ್ವರರಾಗಿ ಇನಿಸಿನಿಸು ಉದಿತೋದಿತರಾದುದನ್ನು ಸುಲಭವಾಗಿ ಗುರುತಿಸಬಹುದು. ಅದರಂತೆ ಇವರು ಕಟ್ಟಕಡೆಯ ಮುಮ್ಮಡಿ ಜಯಕೇಸಿಯೂ ಮತ್ತೆ ನಾಳ್ಗಾವುಂಡನಾಗಿ ವಿರಮಿಸಿದನೆಂಬುದು ಒಂದು ಯೋಗಾಯೋಗ ಸಾದೃಶ್ಯ. ಇವರು ಆರಂಭದಿಂದ ತೊಡಗಿ ಕಡೆಯತನಕ ಉದ್ದಕ್ಕೂ ಅಪ್ಪಟ ಜೈನರಾಗಿದ್ದರು; ಉಳಿದ ಅಜೈನ ಧರ್ಮಗಳನ್ನು ಗೌರವದಿಂದ ಕಾಣುತ್ತಿದ್ದರು. ಗಂಗರ ಆಶ್ರಯ ಮತ್ತು ಸಂಬಂಧವೂ ಮಣಲೆರರಿಗೆ ಪ್ರಾರಂಭದ ಹಂತದಲ್ಲಿಯೇ ಇದ್ದುದರಿಂದ ಈ ಸಗರ – ಮಣಲೆರಾನ್ವಯವು ಗಂಗರ ಕುಡಿಯೇ ಇರಬಹುದೆಂಬ ಭಾವನೆಗೆ ಇಂಬಾಗಿದೆ. ಆತಕೂರು ಶಾಸನೋಕ್ತ ಮಣಲೆರನೇ ಗಂಗರ ಮತ್ತು ರಾಷ್ಟ್ರಕೂಟರ ಜತೆಗೆ ಸ್ಥಾಪಿತವಾಗಿದ್ದ ನಂಟಗೆ ಕಡೆಯ ಕುಡಿ. ಅನಂತರ ಚಾಳುಕ್ಯರ ಮಡಿಲಿಗೆ ಬಿದ್ದ ಮಣಲೆರರಿಗೆ ಇಱೆವ ಬೆಡಂಗ ಮಾರಸಿಂಘನೇ ಮೊದಲನೆಯವನು; ಈ ಹೆಸರಿನ ಹಿನ್ನೆಲೆಯನ್ನು ಕುರಿತು ಚರ್ಚಿಸಿದ್ದಾಗಿದೆಯಾದರೂ, ಈ ಹೆಸರಿನಲ್ಲಿ ಸಾಧಿಸಿರುವ ಕುಲ ಮತ್ತು ಕೃತಜ್ಞತೆಗಳ ಸಮನ್ವಯವನ್ನೂ ಅವಶ್ಯ ಪರಿಭಾವಿಸಬೇಕು. ಇಱೆವ ಬೆಡಂಗ ಎಂಬಲ್ಲಿ ಗಂಗರನ್ನೂ ನೆನೆದು ಎರಡೂ ಕಡೆಯ ನೆನಪುಗಳನ್ನು ಕೊಂಡಿ ಹಾಕಿ ‘ಇಱೆವ ಬೆಡಂಗ ಮಾರಸಿಂಘ’ ಎನ್ನಲಾಗಿದೆ. ಚರಿತ್ರಕಾರರು ಇದನ್ನು ಪರಿಭಾವಿಸಬೇಕು.

ಉಪಲಬ್ಧ ಶಾಸನಾಧಾರಗಳ ಪ್ರಕಾರ ಮುಮ್ಮಡಿ ಜಯಕೇಸಿಯು ಮಣಲೆರ ಕುಲದ ಕಡೆಯ ಪ್ರತಿಷ್ಠಿತ ವ್ಯಕ್ತಿ. ಅನಂತರ ಈ ಕುಲ, ಇತರ ಹಲವು ಕುಲಗಳಂತೆ ಚರಿತ್ರೆಯಲ್ಲಿ ವಿಲೀನವಾಯಿತು. ಈ ಹಂತದಲ್ಲಿ ಇನ್ನೆರಡು ಶಾಸನಗಳ ಮಾಹಿತಿಯಿತ್ತ ಚರಿತ್ರಕಾರರ ಗಮನ ಸೆಳೆಯ ಬಯಸುತ್ತೇನೆ:

೧. ಚಿತ್ರದುರ್ಗ ಜಿಲ್ಲೆಯ ದಾವಣಗೆರೆ ತಾಲೂಕಿನಬೇತೂರು ಶಾಸನೋಕ್ತರಾದ ಮುನ್ನೆಯಶೆಟ್ಟಿ ಗುತ್ತರಗೌಡ ಪಾಂಡ್ಯ ದೇಶದ ಪ್ರಭುಗಳನ್ನು ಮನ್ನೆಯರು ಕುಲದವರು ಎಂದು ಹೇಳಿದೆ [ಎ.ಕ. ೧೧, ಕ್ರಿ.ಶ. ೧೨೭೧. ದಾವಣಗೆರೆ. Mysore Inscriptions]. ಇದು ಮಣಲೆಯರು ಕುಲದ ಹೆಸರಿನ ರೂಪವಾಗಿರಬಹುದೆ ಎಂಬ ವಿಚಾರವಾಗಿ ಪ್ರಾಜ್ಞ ಚರಿತ್ರಕಾರರು ಪರಿಶೀಲಿಸಿ ಹೇಳಬೇಕು.

೨. ಸಂಗೂರು ಶಾಸನದಲ್ಲಿ ‘ಸಾಗರದತ್ತಾನ್ವಯನ್ ಅಖಿಳಾಗಮ ಕೋವಿದನ್ ಆದ, ಮತ್ತು ಪುಲಿಕರ ನಗರದವನಾದ ಮುದ್ದಣ ಶ್ರೇಷ್ಠಿವರನ ಮಗನಾದ ಶಂಖದೇವನ ಹಾಗೂ ಶಂಖದೇವನ ಮಗನಾದ ಮಲ್ಲಪಧರಾಧೀಶನನ್ನು ಪರಿಚಯಿಸಿದೆ. ಬುಕ್ಕರಾಜನ ಮಗನಾದ ಇಮ್ಮಡಿ ವೀರ ಹರಿಹರನು ಚಕ್ರವರ್ತಿಯಾಗಿದ್ದಾಗ ಅವನ ಅಧೀನನಾಗಿ ಮಾಧವನು ಗೋವವನ್ನು ಆಳುತ್ತಿರುವಾಗ ಈ ಮಲ್ಲಪನು ಸೇನಾಪತಿಯಾಗಿದ್ದನು. ಮಲ್ಲಪನು ಚಂಗಪುರದ (ಸಂಗೂರು) ಪಾರ್ಶ್ವನಾಥ ಬಸದಿಯಲ್ಲಿ ಸಮಾಧಿಯಿಂದ ಮುಡಿಪಿದನು [ಸೌ.ಇ.ಇ. ೧೮, ೨೭೪. ೧೩೯೬. ಸಂಗೂರು (ಧಾರವಾಡ ಜಿಲ್ಲೆ, ಹಾವೇರಿ ತಾಲೂಕು) ಪು. ೩೫೪-೫೮] ಇಲ್ಲಿ ‘ಸಾಗರ ದತ್ತಾನ್ವಯ’ ವೆಂಬುದು ಈ ಸಗರಕುಲಮಣಲೆಯರ ಮನೆತನದ ಬೆಸುಗೆಯ ಎಂಬುದನ್ನೂ ಇತಿಹಾಸಕಾರರು ತಿಳಿಸಬೇಕು.

೩. ನರಸಿಂಹರಾಜಪುರ ಶಾಸನದಲ್ಲಿ – ‘ಮಣಲಿ ಮನೆ ಒಡೆಯೋನ್ ಕೋಶಿಕ ವಂಶನ್’ ಎಂಬ ವಾಕ್ಯವಿದೆ [Inscriptions of the Western Gangas (1984), Dr. K. V. Ramesh; No. ೭೧.೮. ಶ. ಪು. ೨೫೪]. ಇಲ್ಲಿ ಉಲ್ಲೇಖಿತವಾಗಿರುವ ಮಣಲಿ ಮನೆಗೂ ಮಣಲೆಯರಿಗೂ ಏನಾದರೂ ಸಂಬಂಧವಿದೆಯೆ ಎಂಬುದನ್ನು ಇತಿಹಾಸಕಾರರು ತಿಳಿಸಬೇಕು.

ಹೈಹಯರು – ಸಗರರು

ಈ ನೆಲೆಗೆ ತಲುಪಿದಾಗ ಮತ್ತಷ್ಟು ಮಾಹಿತಿಗಳಿಗೆ ನಾವು ಮುಗಿಬೀಳುತ್ತೇವೆ. ಸಗರ – ಮಣಲೆಯರ ಸಮಕಾಲೀನರಾಗಿ, ಸಮಾನ ಮೂಲದವರೆನಿಸಿ, ರಾಜಕೀಯ ಪ್ರಾಬಲ್ಯದಿಂದ ವಿಜೃಂಭಿಸಿದ ಇನ್ನೂ ಮೂರು ನಾಲ್ಕು ಕುಲದ ವಿಚಾರವಾಗಿ ಪರಿಷ್ಕಾರ ಮಾಡಿಕೊಳ್ಳಬೇಕಾಗಿದೆ. ಮಣಲೆಯರ (ಸಗರ) ಕುಲವೂ, ಹೇಹಕುಳವೂ (ಹೇಹಯ – ಹೈಹಯ – ಅಹಿಹಯ) ಕಳಚುರ್ಯ ಕುಲವೂ, ಚೈದ್ಯ(ಚೇದಿ) ಕುಲವೂ ಸಮಾನವೆಂಬ ಸೂಚನೆ ಇರುವುದನ್ನು ಚರಿತ್ರಕಾರರು ಅವಶ್ಯ ಪರಿಭಾವಿಸಬೇಕು. ಕುಲಚರ್ಯರು ಕುಲಭ್ರ ಮನೆತನಕ್ಕೆ ಸೇರಿದವರೆಂದೂ, ಕಲಭ್ರ ವಂಶದ ರಾಜರು ಜೈನರಿದ್ದರೆಂದೂ ಒಂದು ಅಭಿಪ್ರಾಯವಿದೆ. (ಪ್ರೊ. ರಾಮಸ್ವಾಮಿ ಐಯ್ಯಂಗಾರ್, ಸ್ಟಡೀಸ್ ಇನ್ನ ಸೌತ್ ಇಂಡಿಯನ್ ಜೈನಿಸಂ. ಪು. ೫೩-೫೬): ಆದರೆ ಕಲಭ್ರರು ಪ್ರಧಾನವಾಗಿ ತಮಿಳುನಾಡನ್ನು ಆಳಿದವರು. ‘the princes of chedi were of the Kalachuri branch of the Haihaya tribe’ ಎಂದು ಕನ್ನಿಂಗ್ ಹ್ಯಾಮ್ ತಿಳಿಸಿದ್ದಾರೆ. ಮುತ್ತತ್ತಿ ಮತ್ತು ಆತುಕೂರು ಶಾಸನಗಳಲ್ಲಿ ಮಣಲೆಯರು ತಮ್ಮನ್ನು ವಳಭೀಪುರವರೇಶ್ವರೆಂದು ಪರಿಚಯಿಸಿಕೊಂಡಿರುವರು. ವಲ (ಳ) ಭಿಯು ಒಂದು ಹೆಸರಾಂತ ವಿಶ್ವವಿದ್ಯಾನಿಲಯದ ಕೇಂದ್ರ. ವಲಭಿಯ ವಿಶ್ವವಿದ್ಯಾನಿಲಯದಲ್ಲಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ ಛಾತ್ರರು ಅಲ್ಲಿಂದ, ಆಡಳಿತಾಧಿಕಾರಿಗಳ ಹುದ್ದೆಗಳಲ್ಲಿ ನೇಮಕಗೊಳ್ಳಲು, ದೇಶದ ನಾನಾ ರಾಜರ ಆಸ್ಥಾನಗಳಿಗೂ ಆಶ್ರಯಕ್ಕೂ ಹುಡುಕಿಕೊಂಡು ಹೋಗುತ್ತಿದ್ದರೆಂದು, ಕ್ರಿ.ಶ. ೭ನೆಯ ಶತಮಾನದಲ್ಲಿ ಭಾರತಕ್ಕೆ ಬಂದಿದ್ದ ಚೀಣಾದೇಶದ ಪ್ರವಾಸಿ ಇತ್ಸಿಂಗನು ಹೇಳಿದ್ದಾನೆ. [ನಾಗೇಗೌಡ ಎಚ್. ಎಲ್. ‘ಪ್ರವಾಸಿ ಕಂಡ ಇಂಡಿಯಾ’ ಸಂಪುತ – ೧(೧೯೬೪) ಪು. ೨೯೩.] ಆದ್ದರಿಂದ ಸಗರರು ವಳಭೀಪುರವರೇಶ್ವರರರೆಂದರೆ ಈ ರೀತಿ ಅಲ್ಲಿ ರಾಜನೀತಿ ನೈಪುಣ್ಯಶಾಸ್ತ್ರ ಕಲಿತು ತರಬೇತು ಪಡೆದವರಿರಬೇಕು.

ಅಹಿಹಯರೂ (ಹೈಹಯ) ಕಲಚೂರ್ಯರೂ ಅಭಿನ್ನರೆಂಬ ಅಭಿಪ್ರಾಯವನ್ನು ಚರಿತ್ರಕಾರರು ಹೇಳುತ್ತ ಬಂದಿದ್ದಾರೆ [ಕಂದಾಡೆ ಕೃಷ್ಣಯ್ಯಂಗಾರ್, ‘ಭಾರತೀಯ ಇತಿಹಾಸ ಪ್ರವೇಶಿಕಾ’ ಭಾಗ – ೧(೧೯೩೪) ಪು. ೩೨೫] ಹೈಹಯವಂಶ, ಕಳಚುರಿ ಕುಲ, ಸಗರ (ಮಣಲೆಯರ) ಕುಲ – ಇವು ಮೂರೂ ಒಂದೇ ಬೇರಿಗೆ ಸೇರಿದವು ಆಗಿರಬಹುದು. ಗಂಗರಿಗೂ ಸಗರರಿಗೂ ಶ್ರೀಪುರುಷನ ಕಾಲದಿಂದ ಮದುವೆಯ ನಂಟೂ, ರಾಜಕೀಯ ಗಂಟೂ ನೂರಾರು ವರ್ಷಗಳವರೆಗೆ ಮುಂದುವರಿದು ಬಂದಿದೆ. ಈ ಮಧುರ ಬಾಂಧವ್ಯ ಒಮ್ಮೆಲೆ ಹೇಗೆ ಬಿಗಡಾಯಿಸಿತೆಂಬ ಪ್ರಶ್ನೆ ಉದ್ಭವಿಸುವುದು, ಗಂಗರ ರಾಜಮಲ್ಲ ೪ ರಾಜನು (೯೭೫-೮೬) ೯೭೭-೭೮ ರ ಕೊತ್ತತ್ತಿ ಶಾಸನದಲ್ಲಿ [ಎ.ಕ. ೭ (೧೯೭೯) ಮಂಡ್ಯ ೮೧ ಪು. ೨೫೦-೫೧] ಹೇಹಯ ಕುಳಾನ್ತಕನೆಂದು ಚಿತ್ರಿತನಾಗಿರುವುದರಿಂದ. ನಾಲ್ಮಡಿ ರಾಜಮಲ್ಲನು ನಿರ್ನಾಮ ಮಾಡಿದ ಹೇಹಕುಳವು ಮಣಲೆಯರ ಕುಲವೆಂದೂ, ಮದ್ದೂರು ಮಳವಳ್ಳಿ ಮತ್ತು ಆ ಸುತ್ತ ಮುತ್ತಲಿನ ಪ್ರದೇಶದಿಂದ ಪಲಾಯನ ಮಾಡಿ ಪುಲಿಗೆರೆ ಪ್ರದೇಶಕ್ಕೆ ವಲಸೆಹೋಗಲು ಈ ರಾಜಮಲ್ಲನೇ ಕಾರಣವೆಂದೂ ವ್ಯಕ್ತಪಟ್ಟಿರುವ ಸೂಚನೆಯನ್ನು ಪುನರ್ವಿಚಿಕಿತ್ಸೆಗೆ ಈಡು ಮಾಡಬೇಕು. ಈ ವಿಚಾರದಲ್ಲಿ ನಡಸಿರುವ ದೀರ್ಘ. ಆಧ್ಯಯನದಿಂದ ನನಗೆ ಮನವರಿಕೆಯಾಗಿರುವ ಮಾಹಿತಿಗಳನ್ನು ಇತಿಹಾಸಕಾರರ ಮಡಿಲಿಗೆ ಹಾಕಿ, ಈ ಬಗ್ಗೆ ಮರುಪರಿಶೀಲನೆ ಮಾಡಬೇಕೆಂದು ವಿಜ್ಞಾಪಿಸಬಯಸುತ್ತೇನೆ.

೧. ಸಗರಮಣಲೆಯರು ಅಭಿನ್ನರು ಮತ್ತು ಏಕಶಾಖೆಯವರು. ಆದರೆ ಇವರಲ್ಲಿ ಎರಡು ನಿಶ್ಚಿತ ಸ್ಪಷ್ಟ ಕವಲುಗಳಿವೆ. ಸಗರರೇ ಆಗಿರುವ ಮಣಲೆಯರದು ಒಂದು ಶಾಖೆ. ಇವರು ವಳಭೀಪುರವರೇಶ್ವರರು, ಸಿಂಹ ಧ್ವಜರು (ಕೇಸರಿಕೇತು), ಮತ್ತು ಶುದ್ಧಾಂಗವಾಗಿ ಜೈನರು. ಸ್ಪಧರ್ಮಾನುರಾಗದೊಂದಿಗೆ ಅನ್ಯಧರ್ಮ ಸಹಿಷ್ಣುತೆ ಮತ್ತು ಸಮನ್ವಯ ಧೋರಣೆ ತೋರಿದ್ದಾರೋ.

೨. ಅಹಿಹಯ (ಹೈಹಯ)ರೂ ಸಗರ ಕುಲಜರೇ. ಆದರೆ ಇವರು ಮಣಲೆಯರು ಶಾಖೆಗೆ ಸೇರಿದವರಲ್ಲ. ಮತ್ತು ಮುಖ್ಯವಾಗಿ ಅಹಿಹಯರು ಮತ್ತು ಮಾಹಿಷ್ಮತಿಯ ಮೂಲದವರು. ಮಾಹಿಷ ವಿಷಯ [ಎ.ಇ. ೪, ೬೦, ೯೪೫] ಮತ್ತು [ಮಾಹಿಷ್ಮತೀಪುರ ಆಂದ್ರಪ್ರದೇಶದ ಕನ್ನಡ ಶಾಸನಗಳು (೧೯೬೧) ಸಂಖ್ಯೆ ೩. ೧೦೬೨] ಕುರಿತ ಉಲ್ಲೇಖಗಳು ಶಾಸನದಲ್ಲಿವೆ. ಮಾಹಿಷ್ಮತೀಪುರವರೇಶ್ವರಂ ಅಹಿಹಯ ಕುಳಕಮಳ ಮಾರ್ತ್ತಣ್ಡಂ ಎಂಬ ಸ್ಪಷ್ಟ ವಿವರಣಯೇ ಶಾಸನಾಂತರ್ಗವಾಗಿ ಕೀಲಿತವಾಗಿದೆ [Kannada Inscriptions of AndhraPradesh : edAcher P.S and Desai P.B. Govt of A.P. Hyderbad, (1961) No. 3. 1062 A.D.p.257]. ಅಹಿಹಯ ಸಗರರು ಜೈನ, ಶೈವ, ವೈಷ್ಣವ ಸಮ್ಮಿಶ್ರರು; ಆದರೂ ಪ್ರಧಾನವಾಗಿ ಅಜೈನ ಪರಂಪರೆಯ ಶಾಖೆ. ಅನ್ಯಧರ್ಮ ಸಹಿಷ್ಣುತೆ ಇವರಲ್ಲಿ ಕಡಿಮೆ. ಪರಧರ್ಮ ವಿನಾಶಕ್ಕೆ ಶಸ್ತ್ರ ಸನ್ನದ್ಧರಾಗಿ ಹೊರಟವರೂ ಈ ಶಾಖೆಯಲ್ಲಿ ಇದ್ದಾರೆ ಕವಿ ನೇಮಿಚಂದ್ರನು ಈ ಅಂಶವನ್ನು ಸ್ಪಷ್ಟವಾಗಿ ಸಾರಿದ್ದಾನೆ:

            ಪರಮತ ಮತ್ತ ಹೈಹಯ ಮುಖಚ್ಯುತೆ ವಿಶ್ರುತಜೈನ ಶಾಸನಾ
ಮರಭುವನ ಪ್ರತಿಷ್ಠಿತವೃಷಾನುಭವೋಚಿತೆ ವತ್ಸಲತ್ವದಿಂ
ತೊರೆದ ಕುಚಂ ಬೊಲೊಪ್ಪುವ ಚತುರ್ವ್ವಿಧ ಭಾಷೆಯೊಳಂ ಸರಸ್ವತೀ
ಸುರಭಿನಿರಂತರಂ ಕಱೆಗೆ ಕಾಮಿತಮಂ ಕವಿರಾಜ ಮಲ್ಲನಂ
||[ನೇಮಿಚಂದ್ರ (೧೧೮೫), ನೇಮಿನಾಥ ಪುರಾಣಂ, ೧-೨೨]

೩. ಕಾಳ(ಳಾ)೦ಜ ಪುರವರೇಶ್ವರರಾದ ಕಲಚುರ್ಯರದು ಈ ಏಕಮೂಲದ ಮೂರನೆಯ ಟಿಸಿಲು, ಕಳಚೂರ್ಯರು ಜೈನ-ಶೈವ ಸಮ್ಮಿಶ್ರರು. ಇವರೂ ಮಣಲೆರ ಶಾಖೆಯಂತೆ ಧರ್ಮಸಮನ್ವಯ ದೃಷ್ಟಿಯನ್ನೂ ಪ್ರಕಟಿಸಿದ್ದಾರೆ. ಇವರದು ಮಣಲೆಯರ ಶಾಖೆಯನ್ನು ಪುಷ್ಟವೂ ದೀರ್ಘವೂ ಆಗಿರದ ಒಂದು ಅಲ್ಪಾಯು ಶಾಖೆ. ಕಳಚುರ್ಯರು ತಮ್ಮ ಆಳ್ವಿಕೆಯಲ್ಲಿ ಜೈನಧರ್ಮಕ್ಕೆ ಅಗಾಧವಾದ ಆಸರೆ ನೀಡಿದುದನ್ನು ಶಾಸನಗಳು ನಿರೂಪಿಸುತ್ತವೆ. ಕಲ್ಯಾಣದ ಚಾಳುಕ್ಯರು ಜೈನಪರವಾದ ಧೋರಣೆಯಿಂದ ಹಿಂದೆ ಸರಿದು, ತನ್ನ ಆಯುರ್ಮಾನದ ಅಂಚಿಗೆ ಸರಿಯುತ್ತ ದುರ್ಬಲವಾಗುತ್ತಿದ್ದ ಘಟ್ಟದಲ್ಲಿ, ಅದರ ಹೊಟ್ಟೆಯೊಳಗಿನಿಂದಲೇ ಕಳಚುರ್ಯ ಸಾಮ್ರಾಜ್ಯವನ್ನು ಹೊರತೆಗೆದು ಜೀವ ತುಂಬಿದ ಜೈನ ಮಹಾದಣ್ಡನಾಯಕನೇ ರೇಚಣ. ಈ ದಿಕ್ಕಿನ ಚಿಂತನೆ ಚರಿತ್ರೆಗೆ ಹೊನಲು ಬೆಳಕು ಹಾಯಿಸುವಂತಹುದು.

ಸಗರಕುಲಮೂಲದ ಮಣಲೆಯರ ಮನೆತನದ, ಮಂಡ್ಯ-ಮೈಸೂರು ಜಿಲ್ಲೆಗಳ ಕೊಡುಗೆರೆಯ ಪರಿಸರದಿಂದ ಬೆಳ್ವಲ ಮುನ್ನೂರರ ಪುಲಿಗೆರೆ ಪರಿಸರಕ್ಕೆ ಇದ್ದ ಕಾರಣವನ್ನು ನಾನು, ಆತುಕೂರು ಶಾಸನದ ವಿಶ್ಲೇಷಣೆ ಮಾಡುವಾಗ ಸೂಚಿಸಿರುವುದು ಸಮಂಜಸವೂ ಸಕಾರಣವೂ ಆಗಿದೆ. ಬೂತಗನು ಬೆಳ್ವೊಲ ಪ್ರದೇಶದ ಉಂಬಳಿ (ಮಾನ್ಯ-ಜಾಗೀರು) ನೀಡಿದ್ದರಿಂದ ಮಣಲೆಯರು ಅಲ್ಲಿಗೆ, ನಿರಾಂತಕವಾಗಿರಬಹುದೆಂದೆಣಿಸಿ, ಸರಿದರು. ಅಷ್ಟೇ ಹೊರತು, ರಾಜಮಲ್ಲನು ಹೈಹಯಾಂತಕೆನೆನಿಸಿದ್ದರಿಂದ ಅಲ್ಲ.

ಹಾಗಾದರೆ ನಾಲ್ಕನೆಯ ರಾಜಮಲ್ಲನು ಹೇಹಕುಳಾನ್ತಕನೆಂಬ ಪ್ರಶಸ್ತಿ ಪಾತ್ರನಾದದ್ದು ಹೇಗೆಂಬ ಪ್ರಶ್ನೆ ಉದ್ಭವಿಸುತ್ತದೆ. ರಾಜಮಲ್ಲನು ಸೋಲಿಸಿದ ಹೇಹಕುಳವೆಂಬುದು ಮಣಲೆರಕುಲವನ್ನಲ್ಲ; ಅದು ಅಜೈನ ಮೂಲದ ಹೇಹಯಕುಲವನ್ನು, ಎಷ್ಟೋ ಸಣ್ಣ ಪುಟ್ಟ ಶಾಸನಗಳು ಚರಿತ್ರೆಯ ಗುಹಾಂತರ ದೇವಾಲಯಗಳಿಗೆ ಹಿಡಿದ ಬೆಳಕಿನ ಮಶಾಲುಗಳು. ಅಂತಹ ಒಂದು ಸೊಡರು ಅಣ್ನಿಗೆರೆಯ ಶಾಸನ [ಸೌ.ಇ.ಇ. ೧೫.೫೯. ೧೧೮೪. ಅಣ್ನಿಗೇರಿ (ಧಾರವಾಡ ಜಿಲ್ಲೆ, ನವಲಗುಂದದ ತಾ) ಪು ೮೪-೮೫]. ಅದರಲ್ಲಿ ಗೊಗ್ಗ ‘ಸಗರಾಧಿಪ’ನನ್ನು [ಸಾಲು : ೪೫] ಪರಿಚಯಿಸಲಾಗಿದೆ. ಆತನು ‘ಸಗರದ ವೀರಗೊಗ್ಗಿ ದೇವರಸ’ನು (ಸಾಲು : ೬೩). ಈ ‘ವೀರಗೊಗ್ಗಿದೇವರಸನ ವಂಶವತಾರವನ್ನು ‘ಗಂಗಾತೀರ ಪಾರಿಯಾತ್ರ ತನ್ಮಧ್ಯದೇಶಾಧೀಶ್ವರರುಂ ಅಹಿಹಮ ವಂಶೋದ್ಭವರುಂ’ ಎಂದೂ [ಸಾಲು : ೩೪], ‘ವೀರ ಸಗರ ಚಕ್ರವರ್ತ್ತಿಯುಂ ತದನನ್ತರ ಯಿಸ್ವರ ಚರಣ ……..’ ಎಂದೂ [ಸಾಲು : ೩೬] ಪರಿಚಯಿಸಲಾಗಿದೆ. ಈ ಅಂಶವಷ್ಟೂ ಸಗರ ಮಣಲೆರರ ವಂಶ ಮೂಲಕ್ಕೆ ಹೊಂದಾಣಿಕೆಯನ್ನು ಸ್ಪಷ್ಟವಾಗಿ ಪ್ರಕಟಿಸುತ್ತದೆ.

ಅಣ್ನಿಗೆರೆಯ ಈ ಶಾಸನ ಸಾದೃಶ್ಯದೊಂದಿಗೆ ವೈದೃಶ್ಯವನ್ನೂ ಸೂಚಿಸಿದೆ. ಸಗರಮಣಲೆಯರೂ, ಸಗರ ಅಹಿಹಯರೂ ಇಬ್ಬರೂ ಸಗರರು, ಇಬ್ಬರೂ ಮಧ್ಯದೇಶಾಧೀಶ್ವರಾಗಿ ಬಂದವರು – ಇದಷ್ಟೇ ಇವರಿಬ್ಬರ ನಡುವಣ ಸಮಾನತೆ. ಆದರೆ ಉಳಿದ ವಿಷಯಗಳಲ್ಲಿ ಇವರು ಪ್ರತ್ಯೇಕರು : ‘ಗದುಗಿನ ತ್ರಿಕೂಟೇಶ್ವರ ದೇವರ್ಗ್ಗೆ ಪುರವ ಧಾರಾಪೂರ್ವ್ವಕಂ ಮಾಡುವಲ್ಲಿ ಶ್ರೀಮದ್ರಾಜಧಾನಿ ಪಟ್ಟಣ ವಣ್ನಿಗೆಱಿಯಲು ಸಕಲ ಮಾಹೇಶ್ವರ ಆಹಾರದಾನಕ್ಕೆಂದು ಸಗರದ ವೀರಗೊಗ್ಗಿ ದೇವರಸಂಗೆ ಧಾರಪೂರ್ವ್ವಕಂ ಮಾಡಿಕೊಟ್ಟರು’ [ಸಾಲು : ೬೧-೬೩]. ಸಗರ ಮಣಲೆರರು ಸಮ್ಯಕ್ವಚೂಡಾಮಣಿಗಳು, ನಿಷ್ಠಾವಂತ ಜೈನರು, ಚತುಸ್ಸಮಯ ಸಮುದ್ಧರಣರು [ಸೌ.ಇ.ಇ. ೧೧, ೨೦೧, ಸು.೧೧೦೦ ಗದಗ (ಧಾ.ಜಿ.) ಪು. ೨೫೬; ಸೌ.ಇ.ಇ. ೨೦, ೩೮.೧೦೫೮. ಕುಯಿಬಾಳ (ಧಾಜಿ ಕುಂದಗೋಳ ತಾ) ಪು. ೪೨ – ೪೩]. ಮಣಲೆರಭೀಮನೆನಿಸಿದ ಇಂದ್ರ ಕೇಸಿಯರಸನು ಸಮ್ಯಕ್ತ್ವ ರತ್ನಾಕರನೆಂದು ಶಾಸನ ಹೇಳುತ್ತದೆ. ಆದರೆ ಅಹಿಹಯ ವಂಶೋದ್ಬವ ಸಗರದ ವೀರಗೊಗ್ಗಿದೇವನು ‘ಜೈನಮ್ರಿಗಬೇಣ್ಟೆಕಾಱಂ’-

ಜಯನಮ್ರಿಗ ಬೇಣ್ಟೆಗಾರ
ಜಯಿನಾಗಮ ಧೂಮಕೇತು ಜಯಿನಕುಠಾರಂ
ಜಯಿನಫಣಿವಯಿನತೇಯಂ
ಜಯಿನಾಂತಕನೆನಿಸಿ ನೆಗಳ್ದನೀ ಗೊಗ್ಗರಸಂ
||[ಸೌ.ಇ.ಇ. ೧೫ ೫೯. ೧೧೮೪. ಅಣ್ನಿಗೆರೆ. ಪುಟ. ೫೪-೫೫]. ಗಂಗರ ರಾಜನಾದ ನಾಲ್ಕನೆಯ

ರಾಜಮಲ್ಲನು ಹೇಹಕುಳಾನ್ತಕನೆನಿಸಿ [ಎ.ಕ. ೭(೧೯೭೯) ಮಂಡ್ಯ ೮೧.೯೭೭-೭೮ ಕೊತ್ತತ್ತಿ (ಮಂಡ್ಯ ಜಿ, ತಾ) ಪು. ೨೫೦-೫೧] ಗಂಗರಿಗೂ ಅಹಿಹಯರಿಗೂ ಬದ್ಧದ್ವೇಷವಿತ್ತೆಂಬುದನ್ನು ತೋರಿಸಿದ್ದಾನೆ. ಗಂಗರು ಅಪ್ಪಟ ಜೈನರು ಮತ್ತು ಜೈನ ಮಣಲೆಯರಿಗೆ ಆಶ್ರಯದಾತರು. ಗಂಗರು ಕಟ್ಟಿಸಿದ ಮತ್ತು ಒಟ್ಟು ಜೈನತ್ವದ ನೆಲೆಗಳಾದ ಬಸದಿಗಳನ್ನು ಕುಸಿದು ಬೀಳಿಸುವ ಕೆಲಸಕ್ಕೆ ಅಹಿಹಯಸಗರರು ಹೇಸಲಿಲ್ಲ. ಅದರಿಂದಾಗಿ ಈ ಸಗರರೂ ಅಹಿಹಯರೂ ಸಮಾನರು ಎಂದು ಸಾರಾಸಗಟಾಗಿ ತೀರ್ಮಾನಿಸಲು ಬರುವುದಿಲ್ಲ. ವಾಂಶಿಕವಾಗಿಯೂ ಭೌಗೋಳಿಕವಾಗಿಯೂ ಅವರಲ್ಲಿ ಸಮಾನತೆ ಕಂಡರೂ, ಧಾರ್ಮಿಕವಾಗಿ ಭಿನ್ನರು. ಸ್ಥಾನಿಕವಾಗಿಯೂ ಅವರು ಭಿನ್ನರು; ಸಗರ ಮಣಲೆರರು ವಲ(ಳ)ಭೀಪುರವರಾಧೀಶರು, ಸಗರ ಅಹಿಹಯರು ಮಾಹಿಷ್ಮತೀ ಪುರವರಾಧೀಶರು.

ಇನ್ನು ಕಳಚುರ್ಯರು ಮತ್ತು ಸಗರ ಮಣಲೆರರು ಹೇಗೆ ಅಸಮಾನ ರೆಂಬುದನ್ನೂ ತೋರಿಸಬಯಸುತ್ತೇನೆ. ‘ಕಾಳಾಂಜರಪುರವರಾಧೀಶ್ವರಂ ಸುವರ್ಣ್ನ ವೃಷಭಧ್ವಜಂ ಡಮರುಗ ತೂರ್ಯನಿರ್ಗ್ಫೋಷಣ ಕಳಚುರ್ರ್ಯ ಕುಳಕಮಳ ಮಾರ್ತ್ತಂಡ’ [Inscriptions from Solapur District (1988); ed. Ritti S. and Anand Kumbhar; No. 12. 1069. ಭಂಡಾರಕವಟೆ (ದಕ್ಷಿಣ ಸೊಲ್ಲಾಪುರ ತಾ) ಪು. ೨೦ ಮತ್ತು ನಂ. ೮. ೧೨ ಸಿ.ಪಿ. ೧೩, lines: ೬-೭] ಎಂಬುದು ಕಳಚುರ್ಯ್ಯರ ವಾಡಿಕೆಯ ಪ್ರಶಸ್ತಿ ವಾಚನ; ಕಳಚುರ್ಯರು ಕಾಳಾ(ಳ)೦ಜ (ರ) ಪುರವರದು ಎಂಬ ಸ್ಥಳಮೂಲ ಇದರಿಂದ ಸ್ಪಷ್ಟ. ಸಗರ ಮಣಲೆರರು ವಳಭೀಪುರ ವರರು, ಸಗರ ಅಹಿಹಯರು ಮಾಹಿಷ್ಮತೀ ಪುರವರರು, ಮತ್ತು ಕಳಚುರ್ಯರು ಕಾಳಾಂಜಪುರವರರು- ಎಂಬ ನಿರೂಪಣೆಯು ಅವರ ಪ್ರತ್ಯೇಕತೆಯನ್ನು ಪ್ರಕಟಿಸುತ್ತದೆ. ಈ ಮೂರು ಶಾಖೆಗಳ ಪ್ರಸ್ಥಾನಗಳೂ, ಮನೋಧರ್ಮವೂ, ಕಾರ್ಯಾ ಚರಣೆಯೂ ಭಿನ್ನ ನೆಲೆಗಳಲ್ಲಿ ಚಲನಶೀಲವಾಗಿರುವುದನ್ನು ಶಾಸನಗಳ ಆಧಾರ ದಿಂದಲೇ ಗುರುತಿಸಬಹುದು. ಇವರಲ್ಲದೆ ಜ್ಯೋತಿಷ್ಮತಿ ಪುರವರೇಶ್ವರ ಹೈಹಯರೂ ಇದ್ದಾರೆ. ಈ ವಂಶದ ಮಧ್ಯದೇಶಾಧಿಪತಿ ಅಯ್ಯಣಚಂದರಸನ ಮಗಳಾದ ಗಾವಬ್ಬರಸಿಯು, ಗಂಗರ ಅರುಮುಳಿದೇವನ ಹೆಂಡತಿಯಾಗಿದ್ದಳು. ಈಕೆಯ ಮಗಳೇ ಹೊಂಬುಜದಲ್ಲಿ ೧೦೭೭ ರಲ್ಲಿ ಪಂಚಕೂಟ ಬಸದಿಯನ್ನು ಮಾಡಿಸಿದ ಚಟ್ಟಲದೇವಿ [ನಾಗರಾಜಯ್ಯ, ಹಂಪ. ಸಾಂತರರು – ಒಂದು ಅಧ್ಯಯನ, ೧೯೯೭]

ಕಳಚುರ್ಯರು ಆರಂಭದಿಂದಲೂ ಜೈನ ಧರ್ಮವನ್ನು ವಿಶೇಷವಾಗಿ ಪುರಸ್ಕರಿಸಿದ್ದಾರೆ; ಈ ಹೇಳಿಕೆಗೆ ಶಾಸನಗಳೇ ಆಧಾರ: Inscriptions from Solapur District (1988), ಶಾಸನ ಸಂಪುಟದಲ್ಲಿ ೧. ಸಂಖ್ಯೆ ೧೩. ೧೦೮೦. ಎಳ್ಳನಿಂಬರಗಿ (ದಕ್ಷಿಣ ಸೊಲ್ಲಾಪುರ ತಾ) ಪು. ೨೯-೩೨; ೩. ಸಂಖ್ಯೆ. ೧೮.೧೨ ಶ ಕಂದಲಗಾಂವ್ (ದಕ್ಷಿಣ ಸೊಲ್ಲಾಪುರ ತಾ) ಪು. ೩೨-೩೩- ಈ ಮೂರು ಶಾಸನಗಳು : ಎಆರ್‌ಎಸ್‍ಐಇ ೧೯೯೩-೩೪, ನ೦. ೧೨೦.೧೧೬೦. ಕನ್ನಡಿಗೆ (ಬಿಜಾಪುರ ಜಿಲ್ಲೆ); ಸೌ.ಇ.ಇ. ೧೫, ೧೧೯.೧೧೭೩ ಲಕ್ಕುಂಡಿ (ಧಾಜಿ, ಗದಗ ತಾ); ಅದೇ; ೧೨೮.೧೧೭೪; ಕ.ಇ. ೫, ೩೮; ಸೌ.ಇ.ಇ. ೧೮. ನಂ. ೧೮೦.೧೧೬೮. ಪು. ೨೪೬-೪೯: ಅದೇ ೧೮೭.೧೧೬೧; ಸೌ.ಇ.ಇ. ೧೫, ೧೦೮.೧೧೬೭. ಅರಸಿಬೀದಿ (ಬಿಜಾಪುರ ಜಿ ಹುನಗುಂದ ತಾ) ಪು. ೧೩೮; ಎಆರ್‌ಎಸ್‍ಐಇ ೧೯೪೭-೪೮ ಮಂತಗಿ (ಧಾಜಿ ಹಾನಗಲ್ಲು ತಾ) ಮೊದಲಾದ ಶಾಸನಗಳು. ಅದರಿಂದ ಕಾಳಾಂಜ ಪುರವರರಾದ ಕಳಚೂರ್ಯರು ಜೈನ – ಅಜೈನರು ಎನ್ನದೆ ಸರ್ವ ಧರ್ಮಸಮನ್ವಯ ರಾಗಿ ನಡೆದುಕೊಂಡವರು. ಕಳಚೂರ್ಯರು ಜೈನಪರ ದಾನದತ್ತಿ ಧೋರಣೆಯು ಪ್ರೇರಣೆಯಾಗಿ ಧರಣಿ ಪಂಡಿತಾದಿ ಕೆಲವು ಜೈನ ಕವಿಗಳು ಬಿಜ್ಜಳ(ಣ)ನನ್ನು ಜೈನ ರಾಜನೆಂದು ಚಿತ್ರಿಸಿದರು. ಕರ್ನಾಟಕದಲ್ಲಿ ಕಲಚೂರಿಯ ಅರಸರಿಂದಲೂ ಜೈನ ಧರ್ಮದ ಬೆಳವಣಿಗೆಗೆ ಎಷ್ಟೋ ನೆರವಾಗಿದೆ. “ಈ ಮನೆತನದ ಬಿಜ್ಜಳ, ರಾಯ ಮುರಾರಿ ಸೋಯಿದೇವ, ಸಂಕಮ ಮೊದಲಾದವರು ಜೈನ ಅರಸರಾಗಿದ್ದರು” [ಮಿರ್ಜಿ ಅಣ್ಣಾರಾಯ, ‘ಜೈನ ಧರ್ಮ’, (ಪ್ರ.ಮು.೧೯೫೨), (ದ್ವಿ.ಮು.೧೯೬೯) ಪು. ೧೧೬]

ಕಾಳಾಂಜಪುರ ಮೂಲನಿವಾಸಿಗಳಾಗಿ ಬಂದ, ಪ್ರಾಯಃ ಸಗರಕುಲ ಜ್ಞಾತಿಗಳೂ ಆದ ಕಳಚುರ್ಯರು ಶುದ್ಧಾಂಗವಾಗಿ ಜೈನರೆಂದು ಹೇಳುವುದಕ್ಕೆ ಇನ್ನಷ್ಟು ಆಧಾರಗಳು ಬೇಕು. ಸಗರ ಮಣಲೆಯರು ಸಂಪೂರ್ಣ ಜೈನರಾಗಿ ಒಂದು ತುದಿಯಲ್ಲೂ, ಸಗರ ಅಹಿಹಯ (ಹೈಹಯ)ರು ಅಜೈನರಾಗಿ ಇನ್ನೊಂದು ಧ್ರುವದಲ್ಲೂ, ಸಗರ ಕಳಚುರ್ಯರ ಮಧ್ಯವರ್ತಿ ಬಿಂದುವಿನಲ್ಲೂ ನಿಲ್ಲುತ್ತಾರೆ. ಬಹುಶಃ ಚೇದಿ ಮನೆತನವನ್ನೂ ಕಳಚುರ್ಯರ ಭೂಮಿಕೆಗೆ ಸಮೀಪವಾಗಿ ಪರಿಗಣಿಸಬಹುದು. ಸರಯೂ (ಗೋರಖ) ಪುರದ, ರತ್ನಪುರದ (ಟುಮ್ಮಾನಿನ), ರಾಯ(ರತ್ನ) ಪುರದ ಕಲಚೂರಿಗಳು ಕರ್ನಾಟಕಕ್ಕೆ ಬರಲಿಲ್ಲ; ಕೇವಲ ಮಾಹಿಷ್ಮತಿಯ ಕಲಚೂರಿಗಳಷ್ಟೇ ಇಲ್ಲಿಗೆ ಗುಳೆ ಬಂದರು. ಹೈಹಯನು ಈ ಶಾಖಾಪುರುಷನಾಗಿ ಆದ್ಯನಾಗಿದ್ದುದರಿಂದ ಮಾಹಿಷ್ಮತೀಪುರವರಾಧೀಶ್ವರರ ಈ ಮನೆತನಕ್ಕೆ ಹೈಹಯರೆಂಬ ಅಭಿಧಾನ ನಿಂತಿತು. ಏಳನೆಯ ಶತಮಾನಾಂತ್ಯದ ವೇಳೆಗೆ, ಸರಿಸುಮಾರು ಮಣಲೆರರ ಸಮಕಾಲಿಕವಾಗಿಯೇ ಈ ಕಲಚೂರಿಯರ ಕುರುಹುಗಳೂ ಕಾಣಿಸುತ್ತವೆ. ಆದರೆ ಇವರು ವಿಜೃಂಭಿಸಿ, ಆವಿಯಂತೆ ಕರಗಿ ಹೋದದ್ದು ಹನ್ನೆರಡನೆಯ ಶತಮಾನದ ಉತ್ತರಾರ್ಧದ ಕಾಲಘಟ್ಟದಲ್ಲಿ. ಇವರ ತೋಳತೆಕ್ಕೆಯಲ್ಲೇ ಆತುಕೊಂಡು ಬಂದ ಮತ್ತೊಂದು ಎಳೆ ವಿಂಧ್ಯ ಪ್ರದೇಶದ ಜಬ್ಬಲಪುರ ಪರಿಸರದ, ದಹಲ ಮಂಡಲವೆನಿಸಿದ್ದ ತ್ರಿಪುರಿ(ತೇವರ್) ಮೂಲದಿಂದ ಬಂದವರು ಚೇದಿಯ ಕಲಚೂರಿಯರು, ಕಲಚೂರಿಯರ ಐತಿಹಾಸಿಕ ಸಾಧನೆಯೆಂದರೆ ಕಲ್ಯಾಣ ಚಾಳುಕ್ಯರ ಪತನಕ್ಕೆ ಹೆದ್ದಾರಿ ನಿರ್ಮಿಸಿದ್ದು.

ಹೀಗೆ ಸಗರಮಣಲೆಯರ, ಸಗರ ಅಹಿಹಯ(ಹೈಹಯ)ರ, ಕಲಚೂರ್ಯರ ಮತ್ತು ಚೇದಿಯರ ಮೂಲ ನೆಲೆಗಳನ್ನು, ಅನಂತರದ ಪ್ರಸ್ಥಾನಗಳನ್ನೂ ಶಾಸನದ ಆಧಾರ ಹಿಡಿದು ಗುರುತಿಸಿ ರೇಖಿಸಿದರೆ, ಆಯಾ ಮನೆತನದ ಇತಿಹಾಸದ ಗಾಥೆ ಕಾಣಿಸುತ್ತದೆ; ಅವರು ಎಲ್ಲಿ ಕೂಡುತ್ತಾರೆ ಮತ್ತು ಎಲ್ಲಿ ಬಿಡುತ್ತಾರೆ ಎಂಬುದು ನಿಚ್ಚಳವಾಗುತ್ತದೆ. ಮಾಹಿಷ್ಮತೀ (ಓಂಕಾಲ ಮಾಂಧಾತ) ಹೈಹಯರೂ, ಕಳ(ಟ) ಚೂರ್ಯರೂ ಕೊಂಕಣ, ಗುಜರಾತು, ಮಹಾರಾಷ್ಟ್ರ, ಮಾಳವ, ವಿದರ್ಭ ಪ್ರದೇಶಗಳ ಪ್ರಮುಖರು. ಇವರೆಲ್ಲ ಪರಮ ಮಾಹೇಶ್ವರರು, ಅಂದರೆ ಪಾಶುಪತ ಶೈವ ಪರಂಪರೆಯವರು; ಕರ್ನಾಟಕದಲ್ಲಿ ಪ್ರಾಚೀನ ಪರಂಪರೆ ಪಡೆದವರು. ಕೃಷ್ಣರಾಜನ ಮಗ ಶಂಕರಗಣ, ಶಂಕರಗಣನ ಮಗನಾದ ಬುದ್ಧರಾಜನನ್ನು ಬಾದಾಮಿ ಚಾಳುಕ್ಯರ ಮಂಗಳೇಶನು ಕ್ರಿ.ಶ. ೬೦೧ ರಲ್ಲಿ ಪರಾಜಿತಗೊಳಿಸಿದನು. ಈ ಬುಧರಾಜನ ಪೀಳಿಗೆಯಲ್ಲಿ ಮುಂದೆ ಬಂದ ವಾಮರಾಜನು ಕಾಳಂಜರ ಕೋಟೆಯನ್ನು ಗೆದ್ದು ತ್ರಿಪುರಿ (ತೇವಾರ : ಜಬ್ಬಲಪುರ ಸಮೀಪ) ನಗರವನ್ನು ವಿಜಯ ಸ್ಕಂಧಾವಾರವಾಗಿಸಿದನು; ಕಲಚುರಿ – ಕಳಚೂರಿ ಎಂಬ ಹೆಸರು ಬಳಕೆಗೆ ಬಂದಿತು. ಅವರ ಆಳ್ವಿಕೆಯ ಚೇದಿ ಮಂಡಲ (ಡಾಹಲಮಂಡಲ) ಮೂಲದ ಕಳಚೂರ್ಯರೂ ಮತ್ತು ಕಾಳಂಜರ (ಅಲಹಾಬಾದು ಸಮೀಪ) ಕಳಚುರ್ಯರೂ ಜ್ಞಾತಿಗಳು ಹೈಹಯ ಮನೆತನದ ಲೋಕಮಹಾದೇವಿ ಮತ್ತು ತೈಲೋಕ್ಯ ಮಹಾದೇವಿಯರು ಬಾದಾಮಿ ಚಾಳುಕ್ಯರ ಇಮ್ಮಡಿ ವಿಕ್ರಮಾದಿತ್ಯ (೭೩೩-೪೪) ರಾಜನ ಮಹಿಷಿಯರು; ಇವರಿಬ್ಬರೂ ಪಟ್ಟದ ಕಲ್ಲು ದೇವಾಲಯ ನಿರ್ಮಾತೃಗಳು. ರಾಷ್ಟ್ರಕೂಟರ ಇಮ್ಮಡಿ ಕೃಷ್ಣ ಚಕ್ರಿಯು (೮೭೭-೯೧೪), ಚೇದಿಯರ ಒಂದನೆಯ ಕೊಕಲ್ಲನ ಮಗಳನ್ನು ಮದುವೆಯಾಗಿದ್ದನು. ಕೃಷ್ಣನ ಮಗ ಜಗತ್ತುಂಗನು ಕಳಚುರಿಯರ ಶಂಕರಗಣನ ಮಗಳುದಿರಾದ ಲಕ್ಷ್ಮೀ ಮತ್ತು ಗೋವಿಂದಾಂಬಾ ಇವರನ್ನು ವರಿಸಿದ್ದನು. ಜಗತ್ತುಂಗನ ಮಗ ಮುಮ್ಮಡಿ ಇಂದ್ರನ (೯೧೪-೨೮) ಮಡದಿ ವಿಜಾಂಬಾ ಸಹ ಕಳಚೂರಿ ವಂಶಜಳು. ಮುಮ್ಮಡಿ ಅಮೋಘವರ್ಷನ (೯೩೭-೯೬೫) ಪಿರಿಯರಸಿ ಯರೂ ಇದೇ ಕಳಚುರಿ ಕುಲಜೆಯರು. ಇದೇ ಪರಂಪರೆಯಲ್ಲಿಯೇ ಇಮ್ಮಡಿ ತೈಲಪನು (೯೭೩-೯೯೭) ಚೇದಿ (ಚೈದ್ಯ) ರಾಜಕುಮಾರಿಯಾದ ಬೊಂತಾದೇವಿಯ ಮಗ. ಕಾಳಂಜಪುರವರಾಧೀಶ್ವರ ಬಿಜ್ಜರಸನು ಚಾಳುಕ್ಯರ ತ್ರೈಳೋಕ್ಯಮಲ್ಲ ಸೋಮೇಶ್ವರನ ಮಹಾಮಂಡಲೇಶ್ವರನಾಗಿದ್ದುದಕ್ಕೆ ಶಾಸನಗಳೇ ಸಾಕ್ಷಿ [ಸೌ.ಇ.ಇ. ೨೦, ೩೭.೧೦೫೭. ಚಡಚಣ (ಬಿಜಾಪುರ ಜಿಲ್ಲೆ, ಇಂಡಿ ತಾಲ್ಲೂಕು) ಪು ೪೦-೪೧]. ಈ ಶಾಸನಾಧಾರಗಳಿಂದ ಪ್ರತೀತವಾಗುವುದಿಷ್ಟು : ಸಗರ ಮಣಲೆಯ ರಂತೆಯೇ ಸಗರ ಹೈಹಯರೂ, ಚೇದಿಯರೂ, ಕಾಳಾಂಜರೂ, ಕಳಚ(ಚೂ)ರಿಯರೂ ಕ್ರಿ.ಶ. ೭ ನೆಯ ಶತಮಾನದಿಂದ ಕರ್ನಾಟಕದ ದೊಡ್ಡ ಅರಸು ಕುಲಗಳೊಂದಿಗೆ ವೈವಾಹಿಕಾದಿ ಸಂಬಂಧವನ್ನು ಸ್ಥಾಪಿಸಿಕೊಂಡಿದ್ದರು. ಬಾದಾಮಿ ಚಾಳುಕ್ಯರು, ರಾಷ್ಟ್ರಕೂಟರು, ತರುವಾಯ ಕಲ್ಯಾಣಿ ಚಾಳುಕ್ಯರು – ಈ ಮೂರೂ ಚಕ್ರಾಧಿಪತ್ಯಗಳಲ್ಲಿ ಇವರು ಅಧೀನ ಅಧಿಕಾರಗಳಾಗಿದ್ದರು.

1. Cunningham A.A.S.R.Vol.VII.P.VI.

2. Mirashi V.V.; TheEpochoftheKalachuri -ChediEra, EI.XXXIV.14.pp.116-23

3. Dr.Kielhorn; TheEpoch of the Kalschuri or chedi era, IA.XVII.pp.215ff.]

4. Thosar, H.S., The Abhirs in Indian History procedings of the Indian History congress, 51st session, calcutta (1990-91)0pp.56-65.

ಇನ್ನು ಸಗರರು – ಮಣಲೆಯರು ಎಂಬ ಶಬ್ದರೂಪ ಮತ್ತು ಶಬ್ದಾರ್ಥ ಕುರಿತು, ನಿಷ್ಪತ್ತಿ ಶಾಸ್ತ್ರ ಹಾಗೂ ನಿಘಂಟುಶಾಸ್ತ್ರ ಆಧಾರದಿಂದ ಕೆಲವು ಚಿಂತನೆಗಳನ್ನು ಸಹ ಚರಿತ್ರಕಾರರ ಉಡಿಗೆ ಹಾಕುತ್ತೇನೆ. ಲಕ್ಷ್ಮೇಶ್ವರದ ಒಂದು ಶಾಸನದದಲ್ಲಿ [ಸೌ.ಇ.ಇ. ೨೦.೧೦೭. ೧೧೩೮. ಸಾಲು : ೩೦-೩೧] ಸಾಗರ ಕೀರ್ತಿ ಗಂಗಾಕೀರ್ತಿ ಭಗೀರಥಿಯೆಂಬ ಮಹಿಮೆಯಂ ತಾಳ್ದಿದಾ ವಂಶದೊಳು ಜಯಕೇಸಿ ದೇವನ ಮಹಾಪ್ರಭಾವವನ್ನು ಹೇಳಿದೆ. ಆದರೆ ಇದು ವಾಸ್ತವವಾಗಿರದೆ ಕೇವಲ ಕಾಲ್ಪನಿಕ ವಿವರಣೆಯೆಂಬುದು ಸ್ವಯಂ ಸ್ಪಷ್ಟವಿದೆ. ಹನ್ನೆರಡನೆಯ ಶತಮಾನದ ನಿರೂಪಣೆಯ ವೇಳೆಗಾಗಲೇನೆ, ಮುನ್ನೂರು, ವರ್ಷಗಳ ಇತಿಹಾಸ ಈ ಮನೆತನಕ್ಕಿತ್ತು. ಅವುಗಳಲ್ಲಿ ಸೂರ್ಯವಂಶದ ಪ್ರಸ್ತಾಪವಿಲ್ಲ. ಸೂರ್ಯವಂಶ, ಚಂದ್ರವಂಶ ಎಂದು ಹೇಳುವುದು ಉತ್ಪ್ರೇಕ್ಷೆಯ ಒಂದು ಕವಿ ಸಮಯದ ರೂಢಿ; ಆ ತೆರನಾದ ಸಂಪ್ರದಾಯ ಶೈಲಿಯಲ್ಲಿ ಈ ಮಾತು ಬಂದಿದೆ.

ಸಗರಮಾರ್ತಣ್ಡ ಜಯಕೇಸಿದೇವರಸನನ್ನು ಸೂರ್ಯವಂಶಾಬರದ್ಯುಮಣಿ ಎಂದು ಕರೆದಿರುವ ಹಾಗೆಯೇ, ‘ಕ್ಷತ್ರಿಯ ಪವಿತ್ರಃ’ ಎಂದೂ ಪರಿಚಯಿಸಲಾಗಿದೆ. [ಅದೇ: ಪು. ೧೩೬. ಸಾಲು : ೪೧]. ಅದುವರೆಗಿನ ಈ ವಂಶದ ವಿವರಗಳನ್ನು ಒಳಗೊಂಡಿರುವ ಹತ್ತಾರು ಶಾಸನಗಳಲ್ಲಿ ಕ್ಷತ್ರಿಯರೆಂಬ ವಿಶೇಷಣ ಮಣಲೆರ(ಸಗರ) ಕುಲಜರಿಗೆ ಕಾಣುವುದಿಲ್ಲ. ಆದರೆ ಅವರ ಪ್ರಮುಖರೆಲ್ಲ ಅದ್ಭುತವೆಂಬಂಥ ರಣೋತ್ಸಾಹ ಮತ್ತು ಯುದ್ಧಸಾಹಸಗಳಿಂದ ರಾಷ್ಟ್ರಕೂಟರ ಮತ್ತು ಚಾಳುಕ್ಯರ ಚಕ್ರವರ್ತಿಗಳಿಂದ ಪ್ರಶಸ್ತಿಗಳನ್ನು ಹೊಂದಿ ಪ್ರಭುಮನ್ನಣೆಗೆ ಪಾತ್ರರಾಗಿದ್ದಾರೆ. ಇಱೆವ ಬೆಡಂಗ, ಕದನ ತ್ರಿಣೇತ್ರ, ಕದನೈಕ ಸೂದ್ರಕ ಮುಂತಾದ ಬಿರುದುಗಳೆಲ್ಲ ಅವರು ಯುದ್ಧಗಳಲ್ಲಿ ಮೆರೆದ ಪರಾಕ್ರಮದ ಪಡೆನುಡಿಗಳಾಗಿವೆ.

ಸಗರ ಮತ್ತು ಮಣಲೆರ ಎಂಬ ಜೋಡಿ ಹೆಸರುಗಳನ್ನು ಈ ಕುಲದವರಿಗೆ ಮೊದಲಿನಿಂದಲೂ ಅನ್ವಯಿಸಲಾಗಿದೆ. ಈ ಎರಡು ಹೆಸರುಗಳಲ್ಲಿ ಮಣಲೆರ ಎಂಬುದು ಮೊದಲನೆಯದು ಮತ್ತು ಹಳೆಯ ರೂಪ. ಮಣಲ, ಮನಲೆರ, ಮಣಲೇರ, ಮಣಲೆಯರ ಎಂಬ ಶಬ್ದಗಳೆಲ್ಲ ಒಂದೇ ಮೂಲ ಆಕೃತಿಮಕ್ಕೆ ಸೇರಿದ ಉಪಾಕೃತಿಗಳು. ಈ ಎಲ್ಲ ಶಬ್ದಗಳ ಮೂಲ ರೂಪ ‘ಮಣಲ್’ ಎಂಬುದು: ಮಣಲ್, ಮರಲ್, ಮಲರ್, ಮಲಲ್, ಮಳಲ್ – ಎಂಬುವೆಲ್ಲ ಒಂದೇ ಪ್ರಕೃತಿರೂಪ ಮೂಲದ ಜ್ಞಾತಿ ರೂಪಗಳು. ತಮಿಳು- ಮಲೆಯಾಳಂ ಮಣಲ್, ಕೊಡಗು, ಮಣ, ಕೋತ, ಮನ, ಪರ್ಜಿ, ಮನ್ – ಇವೆಲ್ಲದರ ಅರ್ಥ ಮರಳು ಎಂಬುದು. ಇವು ದ್ರಾವಿಡ ಶಬ್ದಗಳು, ಅಚ್ಚಗನ್ನಡದ ಮಾತುಗಳು. ಈ ಶಬ್ದಗಳಲ್ಲಿ ವರ್ಣ ಪಲ್ಲಟದಿಂದಾಗಿ ಬೇರೆ ಬೇರೆ ರೂಪಗಳು ಏರ್ಪಟ್ಟಿವೆ. ಮಣಲಹಳ್ಳ [ಎ.ಕ. ೨ (೧೯೭೩) ೫೬೯ (ಎಕ ೫ ಪ ೧೪೯) ೧೧೨೪ ಚಲ್ಯ. ಪು. ೩೫೪. ಸಾಲು ೪೦].

ಮಣಲವಾಡಿ [ಎ.ಕ. ೭. ೧೬೧ (ರಿ ೧೯೨೬-೧೦೭) ೧೩೧೪, ತಿಬ್ಬನಹಳ್ಳಿ (ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕು) ಪು. ೧೬೨] ಮುಂತಾದ ಶಾಸನ ಪ್ರಯೋಗಗಳು ಮರಳಿಗೆ ಸಂಬಂಧಿಸಿದ ನಾಮರೂಪಗಳನ್ನು ಒಳಗೊಂಡಿವೆ. ಮಣಲೆಯರು ಮೂಲತಃ ಕನ್ನಡದವರು, ದ್ರಾವಿಡರು: ಅವರು ಕಡಕೆಕಿನಾರೆಯ ಅಥವಾ ನದಿಗಳ ತೀರಗಳ ಕಡೆಯಿಂದ ಬಂದವರಾಗಿರಬಹುದು ಅಥವಾ ಮರಳು ವ್ಯಾಪಾರಿಗಳಾಗಿರಲೂ ಬಹುದು. ಅಂತೂ ಮರಳಿನ ಸಂಬಂಧ ಹೊಂದಿದವರೆಂಬುದು ಖಚಿತ. ಇದು ದ್ರಾವಿಡ ಮೂಲದ ಅಚ್ಚಕನ್ನಡ ರೂಪವಾಗಿರುಇವ ಕಾರಣದಿಂದಾಗಿ, ಮಣಲೆಯರು ಉತ್ತರದಿಂದ ಬಂದವರೆಂಬ ವಾದಕ್ಕಿಂತಲೂ, ಅವರು ಇಲ್ಲಿಯವರು ಮತ್ತು ಕನ್ನಡ ಮೂಲದ ಸ್ಥಳವಂದಿಗರು ಎಂಬ ವಾದಕ್ಕೆ ಹೆಚ್ಚು ಬಲಬರುತ್ತದೆ. ಮಣಲೆಯರೆಂಬ ದೇಸಿಗರಿಗೂ, ಹೊರಗಿನಿಂದ ಬಂದ ಸಗರರಿಗೂ, ಜಾತಿ-ವೃತ್ತಿ ಸಮಾನತೆಯಿಂದ ಅವರಲ್ಲಿ ಬೆಸುಗೆ ಏರ್ಪಟ್ಟಿರುವ ಇನ್ನೊಂದು ಸಾಧ್ಯತೆಯನ್ನು ಪರಿಭಾವಿಸಬೇಕು. ಈ ಅರ್ಥ ಮತ್ತು ರೂಪ ನಿಷ್ಪತ್ತಿಯಲ್ಲಿ ಎಷ್ಟು ಹುರುಳಿದೆ ಎಂಬುದನ್ನು ಅಂತಿಮವಾಗಿ ಚರಿತ್ರಕಾರರು ನಿರ್ಧರಿಸಿ ಹೇಳಬೇಕು.

ಮಣಲೆರರಿಗೆ ಸಗರರು ಎಂಬ ಹೆಸರು ಬರಲು ಕಾರಣ ಮಣಲೆರ ಎಂಬ ಶಬ್ದಾರ್ಥವೇ ಆಗಿದೆ. ಮಣಲಂ ಮರಳು ನೀರಿಗೆ ಸಂಬಂಧಿಸಿದ್ದಾದ್ದರಿಂದ, ನೀರಿಗೆ ಆಕರ – ಆಸರೆ ಆಗಿರುವ ಕಡಲನ್ನು ಗಮನಿಸಿ ಮಣಲೆರರಿಗೆ ‘ಸಗರರು’ ಎಂದು ಸಂಬೋಧಿಸಲಾಗಿದೆ. ಅಂದರೆ ಸಗರವೆಂಬ ಶಬ್ದ ‘ಸಾಗರ’ಕ್ಕೆ ಸೇರಿದ್ದು. ಇದು ಸಂಸ್ಕೃತ ರೂಪ. ಮಣಲ್ (ಮಣಲೆಯರ, ಮಣಲೇರ, ಮನಲೆರ) ಎಂಬ ಕನ್ನಡ ರೂಪವನ್ನು ಸಂಸ್ಕೃತಗೊಳಿಸಿದ್ದರ ಫಲವೇ ‘ಸಗರರು’ ಎಂಬ ಹೊಸ ರೂಪ ಹುಟ್ಟಲು ಕಾರಣ. ಹಾಡುವಳ್ಳಿ, ಆಕಳಹಳ್ಳಿ, ಬೆಳ್ಗೊಳ ಮುಂತಾದ ಅಚ್ಚಗನ್ನಡ ಸ್ಥಳವಾಚಿಗಳನ್ನು ಸಂಸ್ಕೃತೀಕರಿಸಿ ಸಂಗೀತಪುರ, ಸುರಧೇನುಪುರ, ಶ್ವೇತತಟಾಕ (ಧವಳ ಸರಸ್) ಎಂದು ಮಾಡಿದ್ದಕ್ಕೆ ಆಧಾರಗಳಿವೆ; ಮಣಲೆಯರು ಸಗರರಾದದ್ದೂ ಹೀಗೆಯೇ. ಇಲ್ಲವಾದಲ್ಲಿ ಅವರೂ ಅಹಿಹಯ – ಹೈಹಯರಾಗಿಯೇ ಸಂಬೋಧಿತ ರಾಗುತ್ತಿದ್ದರು.

ಜೈನರಲ್ಲಿ ಇಂದಿಗೂ ಸಗರೇರು (ಸಗರಿ), ಜಗರೇರು ಎಂಬ ವಂಶದವರು ಇದ್ದಾರೆ. ಈ ಎರಡೂ ವಂಶಸ್ಥರು ತಮ್ಮ ಹೆಸರುಗಳೊಂದಿಗೆ ಸಗರೆ (ಸಗರಿ) ಜಗರೆ ಎಂದೂ ಮನೆತನವನ್ನು ಸೂಚಿಸುವ ಸಲುವಾಗಿ ಸೇರಿಸಿಕೊಳ್ಳುವರು. ಪ್ರಸ್ತುತ ಇದುವರೆಗೂ ಈ ಸಂಪ್ರಬಂಧೋಪನ್ಯಾಸದಲ್ಲಿ ಚರ್ಚಿಸಲಾದ ಸಗರ ವಂಶಕ್ಕೂ, ಈ ಸಗರೆ ಜಗರೆ ಕುಲಗಳಿಗೂ ಏನಾದರೂ ಸಂಬಂಧವಿದ್ದೀತು. ಭಾಷಾವಿಜ್ಞಾನ ದೃಷ್ಟಿಯಿಂದ ಸಗರೆ, ಸಗರ, ಜಗರೆ ಎಂಬ ಶಬ್ದರೂಪಗಳನ್ನು ಸಮಾನ ಮೂಲ ನಿಷ್ಪನ್ನ ಜ್ಞಾತಿ ರೂಪಗಳೆಂದು ತಿಳಿಯಲು ಅವಕಾಶವಿದೆ. ಈ ವಿಚಾರವಾಗಿಯೂ ಇತಿಹಾಸಕಾರರು ಮನನ ಮಾಡಬೇಕು.

ಉಪಲಬ್ಧವಾಗಿರುವ ಶಾಸನಗಳ ಸಹಾಯದಿಂದ ಮಣಲೆರ ಮನೆತನದ ಇತಿಹಾಸಕ್ಕೆ ಸಂಬಂಧಿಸಿದಂತೆ ನಾವು ಕೈಗೊಳ್ಳಬಹುದಾದ ಕೆಲವು ಮುಖ್ಯ ನಿರ್ಣಯಗಳು :

೧. ಮಣಲೆರ ವಂಶಕ್ಕೆ ಪ್ರಾಚೀನವೂ ಸುದೀರ್ಘವೂ ಆದ ಹಿನ್ನೆಲೆ ಮತ್ತು ಇತಿಹಾಸವಿದೆ. ಒಟ್ಟು ಐನೂರು ವರ್ಷಗಳ ನಿರಂತರ ದಾಖಲೆಗಳು ಉಪಲಬ್ಧವಾಗಿವೆ.

೨. ಮೊದಲಿಗೆ ಈ ವಂಶವು ಮಂಡ್ಯ ಜಿಲ್ಲೆಯ ನಾಗಮಂಗಲ, ಮಳವಳ್ಳಿ, ಮದ್ದೂರು ಎಂಬ ಮೂರು ತಾಲ್ಲೂಕುಗಳಲ್ಲಿಯೂ, ಮತ್ತು ಮೈಸೂರು ಜಿಲ್ಲೆಯ ತಿ. ನರಸೀಪುರ ಪರಿಸರದಲ್ಲಿಯೂ ಇದ್ದುದು ಕಂಡುಬರುತ್ತದೆ. ಕುಣಿ(೦)ಗಲು ಇವರ ತೌರುಮನೆಯಾಗಿರಬಹುದು. ಇದರ ಜತೆಗೆ ಇವರು ಮೈಸೂರು ಜಿಲ್ಲೆಯ ತಿರುಮಲ ಕೂಡಲು ನರಸೀಪುರ ತಾಲ್ಲೂಕಿನ ವ್ಯಾಪಕ ಪ್ರದೇಶವನ್ನೂ ಆಳುತ್ತಿದ್ದರು. ಕೇವಲ ಸುಮಾರು ಒಂದು ನೂರು ಕಿ.ಮೀ. ಉದ್ದದೊಳಗೆ, ಒಂದಕ್ಕೊಂದು ತಾಗಿಕೊಂಡಿ ರುವ ನಾಗಮಂಗಲ ಮದ್ದೂರು ಮಳವಳ್ಳಿ ತಿರುಮಕೂಡಲು ನರಸೀಪುರಗಳು ಕಾವೇರಿ ನದಿಯ ಮತ್ತು ಶಿಂಷಾ, ಕಣ್ವ ಉಪನದಿಗಳ ದಂಡೆಯಲ್ಲಿದೆ. ಕೆ(ಕಿ) ಳಲೆ ನಾಡ ವಿಷಯ ಕೆ(ಕಿ) ಳಲೆ ಸಹಸ್ರ ಎಂಬ ಪ್ರದೇಶ ಇದ್ದುದು ಈ ಪರಿಸರದಲ್ಲಿಯೇ.

೩. ಮಣಲೆರ ವಂಶವು ಮೂಲತಃ ವಾಣಿಜ್ಯ ಹಾಗೂ ಒಕ್ಕಲು ಹಿನ್ನಲೆಯ ಮನೆತನವಾಗಿದ್ದಿರವಹುದೇ? ಅಥವಾ ಕೇವಲ ಕ್ಷತ್ರಿಯ ಕುಲವೆ ಎಂಬುದು ವಿಚಾರಣೀಯವಾಗಿ ಕಾಣುತ್ತದೆ.

೪. ಮಣಲೆರ ಎಂಬುದು ಮೂಲರೂಪವಾಗಿದ್ದು ಇದು ಅಚ್ಚಗನ್ನಡ ಮಾತಾಗಿದೆ. ಸಗರ ಎಂಬುದು ಮಣಲೆರ ಎಂಬುದರ ಶಬ್ದಾರ್ಥವನ್ನು ಸಂಸ್ಕೃತಕ್ಕೆ ಪರಿವರ್ತಿಸಿದ್ಧರ ಫಲವಾಗಿ ಬಳಕೆಯಾಗಿದೆ. ಆದರೆ ಸಂಸ್ಕೃತರೂಪ(ಸಗರ) ಮತ್ತು ಕನ್ನಡ ರೂಪ(ಮಣಲೆರ) ಎರಡೂ ಸಹ ಎಂಟನೆಯ ಶತಮಾನದ ವೇಳೆಗೇನೆ ಒಟ್ಟಿಗೆ ಬಳಕೆಯಾಗಿವೆ.

೫. ಮಣಲೆರ ಮನೆತನವು ಮೊದಲಿನಿಂದಲೂ ಹಲವು ಶ್ರೇಷ್ಠರಾದ ಯುದ್ಧವೀರರ ಪರಂಪರೆಯನ್ನು ಹೊಂದಿದ್ದಿತು.

೬. ಆತುಕೂರು ಶಾಸನದ ವೇಳೆಗಾಗಲೆ ಈ ವಂಶದ ಕೆಲವು ಶೂರರ ಗಾಥೆಗಳು ಪ್ರಚಲಿತವಾಗಿದ್ದುವು.

೭. ಮೊದಲಿಗೆ ವಳಭೀಪುರವರೇಶ್ವರರಾಗಿದ್ದವರು ಅನಂತರದ ಪುರಿಕರಪುರವರೇಶ್ವರದಾರರು.

೮. ಮೊದಲಿಗೆ ದಕ್ಷಿಣ ಕರ್ನಾಟಕದಲ್ಲಿ ಕಾವೇರಿ ನದಿಯ ತೀರ ಪ್ರದೇಶದಲ್ಲಿ ಕೆ(ಕಿ) ಳಲೆ ನಾಡಲ್ಲಿ ನೆಲಸಿದ್ದ ಇವರು, ಹತ್ತನೆಯ ಶತಮಾನದ ತರುವಾಯ ತುಂಗಭದ್ರಾನದಿಯ ಉತ್ತರಕ್ಕೆ, ಈಗಿನ ಲಕ್ಷ್ಮೇಶ್ವರ ಹೋಗಿ ನೆಲಸಿದರು.

೯. ಇವರು ಗಂಗರೊಟ್ಟಿಗೇನೆ ಉತ್ತರದಿಂದ ವಲಸೆ ಬಂದವರಿರಬಹುದೆ ಎಂಬ ಪ್ರಶ್ನೆಗೂ ಅವಕಾಶವಿದೆ.

೧೦. ಈ ವಂಶದವರು ಮಹಾದಾನಿಗಳೂ ಆಗಿದ್ದರು. ಇವರು ದಾನ ದತ್ತಿಗಳನ್ನು ನೀಡಿದ ದಾಖಲೆಗಳೂ ದೊರೆತಿವೆ.

೧೧. ಗಂಗರಿಗೆ ಸಾಮಂತರಾಗಿದ್ದ ನೊಳಂಬರೊಂದಿಗೆ ಮಣಲೆರರಿಗೆ ಎಂಟು ಮತ್ತು ಒಂಬತ್ತನೆಯ ಶತಮಾನಗಳಲ್ಲಿ ಗಳಸ್ಯ – ಕಂಠಸ್ಯ ಸಖ್ಯವಿದ್ದಿತ್ತು. ಹೆಬ್ಬಾಳು ಶಾಸನದೊಂದಿಗೆ ಇವರಿಗೆ ನೊಳಂಬರೊಂದಿಗೆ ಇದ್ದ ಸ್ನೇಹ ಸಾಬೀತುಗೊಳ್ಳುತ್ತದೆ.

೧೨. ಈ ವಂಶಕ್ಕೆ ಗಂಗರ ಸಂಪರ್ಕವು ಎಂಟನೆಯ ಶತಮಾನದ ಆರಂಭದಲ್ಲಿಯೇ ಏರ್ಪಟ್ಟಂತೆ ಕಾಣುತ್ತದೆ. ಏಕೆಂದರೆ ಕ್ರಿ.ಶ. ೭೭೬ ರ ವೇಳೆಗೇನೆ ಗಂಗರ ಯಜಮಾನ್ಯದಲ್ಲಿ ಇವರು ಕುದುರಿದ್ದುದು ಸ್ಪಷ್ಟವಾಗಿ ಕಾಣಿಸುತ್ತದೆ. ಇವರಲ್ಲಿ ಮದುವೆಯ ನೆಂಟಸ್ತಿಕೆಯೂ ನಡೆಯಿತು.

೧೩. ಗಂಗರ ಮಹಾ ಮಂಡಲೇಶ್ವರ ಇಮ್ಮಡಿ ಬೂತುಗ ಪೆರ್ಮ್ಮಾನಡಿಯ ದೆಸೆಯಿಂದಾಗಿ ಮಣಲೆರರ ಕಾರ್ಯಕ್ಷೇತ್ರ ಪುಲಿಗೆರೆಯ ಪ್ರದೇಶಕ್ಕೆ ಸ್ಥಳಾಂತರವಾಯಿತು. ಆ ಭಾಗದಲ್ಲಿ ಮಣಲೇರರೇ ಗಂಗರ ಉತ್ತರಾಧಿಕಾರಿಗಳೆನಿಸಿದರು.

೧೪. ಮಣಲೆರರೂ ಗಂಗರ ಸಾಮಂತರಾಗಿದ್ದು, ಗಂಗರೊಂದಿಗೆ ಸೇರಿ ರಾಷ್ಟ್ರಕೂಟರಿಗೆ ನೆರವಾದರು, ಗಂಗರು ಮತ್ತು ರಾಷ್ಟ್ರಕೂಟರ ಪತನಾಂತರ ಮಣಲೆರರೂ ಸಹ ನೊಳಂಬರಂತೆಯೇ ಚಾಳುಕ್ಯರಿಗೆ ಅಧೀನರಾದರು.

೧೫. ಮಣಲೆರ ಕುಲದವರು ಆದಿಯಿಂದಲೂ ಅಪ್ಪಟ ಜೈನಧರ್ಮೀಯರು. ಸಮ್ಯಕ್ವ ಚೂಡಾಮಣಿಗಳು, ಸಮ್ಯಕ್ತ್ವ ರತ್ನಾಕರರು. ನಿಷ್ಠಾವಂತ ಜೈನರಾಗಿದ್ದು ಹಲವು ಬಸದಿಗಳನ್ನು ಕಟ್ಟಿಸಿದರು, ಪ್ರಾಚೀನ ಗಂಗರ ಬಸದಿಗಳನ್ನು ಜೀರ್ಣೋದ್ಧರಿಸಿದರು. ದಾನದತ್ತಿಗಳಿಂದ ಜಿನಧರ್ಮದ ಪ್ರಭಾವನೆ ಮಾಡಿದರು. ಇವರು ಮಾಡಿಸಿದ ಶ್ರೀಪುರದ ಲೋಕತಿಲಕ ಜಿನಾಲಯ, ಕನಕಗಿರಿ ತೀರ್ಥ್ಥದ ಬಸದಿ – ಇವು ೮ ಮತ್ತು ೯ ನೆಯ ಶತಮಾನಕ್ಕೆ ಸೇರಿದ ಪ್ರಾಚೀನ ಬಸದಿಗಳು.

೧೬. ಮಣಲೆರರು ಜೈನ ಮತೀಯರಾಗಿದ್ದರೂ ಅವರ ಧಾರ್ಮಿಕ ಉದಾರತೆಯು ಅನುಕರಣೀಯ ಯೋಗ್ಯವಾಗಿತ್ತು. ಅನ್ಯಧರ್ಮಗಳ ವಿಚಾರದಲ್ಲಿ ಅವರಿಗೆ ಯಾವ ಅಸಹನೆಯೂ ಇರಲಿಲ್ಲ. ಸಮನ್ವಯ ದೃಷ್ಟಿಯುಳ್ಳವರಾಗಿ ಚತುಸ್ಸಮಯ ಸಮುದ್ಧರಣರಾಗಿದ್ದರು.

೧೭. ಕ್ರಿ.ಶ. ಎಂಟರಿಂದ ಹನ್ನೆರಡನೆಯ ಶತಮಾನದವರೆಗೆ ಈ ವಂಶಜರ ಮಾಹಿತಿಗಳು ಉಪಲಬ್ಧವಿದೆ. ಹದಿಮೂರನೆಯ ಶತಮಾನದಿಂದ ಇವರ ಮಾಹಿತಿಗಳು ಮರೆಯಾಗಿವೆ.

೧೭. ಮಣಲೆರರ ಆಶ್ರಯದಲ್ಲಿ ಇದ್ದ ಯಾವುದೇ ಕವಿ ಅಥವಾ ಕಾವ್ಯ ತಿಳಿದು ಬಂದಿಲ್ಲ.

೧೮. ಮಣಲೆರರರು ಸಿಂಘಲಾಂಛನ, ಗಜಾರಿ ಧ್ವಜ. ಹೊಂಬುಜದ ಸಾಂತರರ ಮತ್ತು ಕಡೂರಿನ ಸೇನವಾರ ಧ್ವಜವೂ ಸಿಂಹ ಧ್ವಜವಾಗಿತ್ತು.

೧೯. ಬಾಗಡಗೆಯ ಸಿಂದರಲ್ಲಿ, ಕ್ರಿ.ಶ.೯೫೦ ರಲ್ಲಿದ್ದ ಕಮ್ಮಯ್ಯರಸನ ಹೆಂಡತಿ ಹೆಸರು ಸಗರಬ್ಬರಸಿ; ಈಕೆಯೂ ಸಗರ ಕುಲಜೆ, ಗುಣಾಭರಣೆ.

ನಾಱ್ಗೂಮುಂಡತನದಿಂದ ಮಹಾಸಾಮಂತರಾಗಿ, ಮಹಾಮಂಡಲೇಶ್ವರಾಗಿ ಏರೇರಿಕೆಯ ಹಿರಿಮೆಯನ್ನು ಗಳಿಸಿ ಬೆಳಗಿದ ಮಣಲೆರ – ಸಗರ ವಂಶದ ಪೀಳಿಗೆ ಮತ್ತು ಸ್ಥೂಲ ವಂಶ ವಲ್ಲರಿಯನ್ನು, ಶಾಸನಗಳ ಸಹಾಯದಿಂದ, ಕೆಳಕಂಡತೆ ಕಲ್ಪಿಸಿಕೊಳ್ಳುವುದಕ್ಕೆ ಸಾಧ್ಯವಾಗಿದೆ:

ಸಗರ -ಮಣಲೆರಾನ್ವಯ ಪೀಳಿಗೆಯ ಸ್ಥೂಲ ನಕ್ಷೆ
*
ವಿನೋದಿ ಮಣಲೆರ : ಸು. ೭೫೦
ಎ.ಕ.೩ (೧೯೭೪) ಗುಂಡ್ಲುಪೇಟೆ ೪೩. ತಗ್ಗಲೂರು
|
ಮರುವರ್ಮ (ಪತ್ನಿ : ಪಲ್ಲವಾಧಿರಾಜ ಪುತ್ರಿ) : ಸು. ೭೫೦
(ಮಗಳು) ಕುಂದಾಚ್ಚಿ (ಪತಿ : ಪರಮಗೊಳ ನಿರ್ಗುಂದರಾಜ)
ಕ್ರಿ.ಶ. ೭೭೬ – ೭೭ : ಎ.ಕ. ೭ (‘೭೯) ೧೪೯. ದೇವರಹಳ್ಳಿ
|
ಮಣಲೆರ ಕುಣಿಙ್ಗಿಲಾಚಾರ : ೮ ಶ
ಎ.ಕ. ೭, ೩೬. ಹೆಬ್ಬಾಳು
|
ಮಣಲೆಯರಸ, ಶೌಚಮಣಲೆಯರ, ನನ್ನಿಮಣಲೆಯರ
೯. ಶ : ಎ.ಕ. ೫, ೧೪೬. ವಿಜಯಪುರ
|
ಮಣಲೆಯರ ಕ್ರಿ.ಶ. ೯೧೬-೧೭
ಎ.ಕ. ೭, ೧೦೦.ಕೂಲಿಗೆರೆ
|
ಮಣಲೆಯರ ಕ್ರಿ.ಶ. ೯೦೭
ಎ.ಕ. ೭, ಮದ್ದೂರು ೫೬. ತಾಯಲೂರು
|
ಮಣಲೆರ ಕುಣಿಙ್ಗಿಲವೊರ : ೧೦ ಶ
ಎ.ಕ. ೭, ೧೪೧. ಕಲ್ಕುಣಿ
|
ಆತುಕೂರು ಮಣಲೆರ : ೯೪೯-೫೦
ಎ.ಕ. ೭, ಪು. ೫೪, ಆತುಕೂರು
|
ಮಣಲೆರ ಗಾಡಿಗ : ೯೭೨
ಕ.ಇ. ೧, ೧೪. ಶಿಗ್ಗಾಂವಿ ಮತ್ತು ಅದೇ : ೧೩ ಶಿಗ್ಗಾಂವಿ

ಇಱೆವಬೆಡಂಗ ಮಾಸಸಿಂಗದೇವ |
ಎ.ಕ. ೧೬, ೧೦೩೮. ಪು. ೩೩೩

ಜಯಕೇಸಿನ್ | : ೧೦೫೮
(ಪತ್ನಿ : ಚಂಡಿಕಬ್ಬರಸಿ)

ಸೌ.ಇ.ಇ. ೨೦, ೩೮. ಕುಯಿಬಾಳ; ಸೌ.ಇ.ಇ. ೧೭, ೬೮.೧೦೬೨ ಯರಗುಪ್ಪಿ
(ಅಣ) ಜಯಕೇಸಿನ್ || ೧೦೬೦, ೧೦೭೪, (ತಮ್ಮ) ಮಾರಸಿಂಗ || : ಸು. ೧೧೦೦
೧೦೭೭, ಮತ್ತು ೧೦೮೨ ರ ಶಾಸನಗಳು ಸೌ.ಇ.ಇ. ೧೧-೨, ೨೦೧ ಗದಗ
ಎ.ಇ.೧೬, ೨೪. ೧೦೭೭
ಇಂದ್ರಕೇಸಿನ್ || ಗದಗ ಶಾಸನ
(ಅಣ್ಣ) ಜಯಕೇಸಿನ್ ||
ಕ.ಇ. ೧, ೨೧. ಶಿಗ್ಗಾಂವಿ. ಪು. ೩೧
ಒಬ್ಬಮಗ ವಜ್ರದಂತ (ಪತ್ನಿ : ಕದಂಬಕುಲಕನ್ಯೆ) ಮಾದಲದೇವಿ
|
ಜಯಕೇಸಿನ್ ||
೧೧೨೮, ೧೧೩೮, ೧೧೪೭, ೧೧೫೩ ೦ ರ ಶಾಸನಗಳು
ಸೌ.ಇ.ಇ.೧೦, ೧೦೭. ೧೧೩೮. ಲಕ್ಷ್ಮೇಶ್ವರ

ಸಗರ ಮಣಲೆಯರ ವಂಶಕ್ಕೆ ಸಂಬಂಧಿಸಿದ ಶಾಸನಗಳು

೧. ಎ.ಕ. ೭(೧೯೭೯). ೧೪೯(೪ ನಾ ಮಂ). ೭೭೬-೭೭ ದೇವರಹಳ್ಳಿ (ಮಂಡ್ಯ ಜಿಲ್ಲೆ, ನಾಮಂ ತಾಲ್ಲೂಕು) ಪು. ೧೪೪-೪೭

೨. ಅದೇ : ಮದ್ದೂರು ೪೨. (೩ ಮಂ ೪೧) ೯೪೯-೫೦. ಆತುಕೂರು (ಮಂಡ್ಯ ಜಿಲ್ಲೆ, ಮದ್ದೂರು ತಾಲ್ಲೂಕು) ಪು. ೨೭೬-೭೭

೩. ಅದೇ : ಮದ್ದೂರು. ೫೬ (೩ ಮಂವ ೧೪) ೯೦೭ ತಾಯಲೂರು (ಮಂಡ್ಯ ಜಿಲ್ಲೆ, ಮದ್ದೂರು ತಾಲ್ಲೂಕು) . ಪು. ೨೮೪-೮೫

೪. ಅದೇ : ಮದ್ದೂರು ೧೦೦ (೩ ಮಂ ೩೦). ೯೧೬-೧೭. ಕೂಲಿಗೆರೆ (ಮಂಡ್ಯ ಜಿಲ್ಲೆ, ಮದ್ದೂರು ತಾಲ್ಲೂಕು) ಪು. ೩೧೨-೧೩

೫. ಅದೇ : ಮಳವಳ್ಳಿ ೧೪೧. ೧೦ಶ (ಮಂಡ್ಯ ಜಿಲ್ಲೆ, ಮಳವಳ್ಳಿ ತಾಲ್ಲೂಕು) ಪು. ೪೪೧

೬. ಅದೇ : ಮದ್ದೂರು ೩೬ (೩ ಮಂ ೪೫) ೮ ಶ. ಹೆಬ್ಬಾಳು (ಮಂಡ್ಯ ಜಿಲ್ಲೆ, ಮದ್ದೂರು ತಾಲ್ಲೂಕು) ಪು. ೨೭೪ ಅದೇ: ಮಂಡ್ಯ ೮೧ (೩ ಮಂ ೧೦೭) ೯೭೭-೭೮. ಕೊತ್ತತ್ತಿ (ಮಂಡ್ಯ ಜಿಲ್ಲೆ) ಪು. ೨೫೦-೫೧

೭. ಎ.ಕ. ೫(೧೯೭೬) ತಿನ ೩೯ (೩ ತಿನ ೧೦೨) ೯-೧೦ ಶ. ಮುತ್ತತ್ತಿ (ಮೈಜಿ, ತಿನ ತಾ) ಪು. ೪೩೯

೮. ಅದೇ : ತಿನ ೧೪೫ (೧೬ ತಿನ ೨೫೨) ೯ ಶ. ಮುತ್ತತ್ತಿ (ಮೈಜಿ. ತಿನ ತಾ) ಪು. ೫೫೪

೯. ಅದೇ : ತಿನ ೧೪೬ (೧೪ ತಿನ ೨೫೩) ೯ ಶ. ವಿಜಯಪುರ (ಮೈಜಿ. ತಿನ ತಾ) ಪು. ೫೫೪

೧೦. ಕ.ಇ. ೧೪. ಅತೇದಿ. (ಧಾಜಿ, ಶಿಗ್ಗಾಂವಿ ತಾ) ಪು. ೩೦. ಬ. ಆ. ಇ. ೪೨. ೧೯೪೩-೪೪. ಅದೇ : ೨೧. ಸು. ೧೧೦೦ ಶಿಗ್ಗಾಂವಿ, ಪು. ೩೧. ಅದೇ : ಸು. ೧೦ ಶ. (ಸು. ೯೮೦) ಶಿಗ್ಗಾಂವಿ, ಪು. ೧೫

೧೧. ಎ.ಇ.೨.ಪು. ೧೧೧-೭೨

೧೨. ಅದೇ : ೬.೯೪೯. ಪು. ೫೪

೧೩. ಅದೇ : ೧೬. ೨೪. ೧೦೩೮ ಪು. ೩೩೩. ಹಲಗೂರು

೧೪. ಅದೇ : ೧೦೭೭ ಪು. ೨೨೯

೧೫. ಅದೇ : ಪು. ೪೪.೧೧೪೭. ಲಕ್ಷ್ಮೇಶ್ವರ, ಪು. ೪೮-೪೯

೧೬. ಸೌ.ಇ.ಇ. ೧೧-೨. ೨೦೧. ಅತೇದಿ ಶಾಸನ (ಸು.೧೧೦೦) : ಗದಗ (ಧಾಜಿ) ಪು. ೨೫೬

೧೭. ಅದೇ : ೨೦.೩೮.೧೦೫೮.೦ ಕುಯಿಬಾಳ (ಧಾಜಿ, ಕುಂದಗೊಳ ತಾ) ಪು. ೪೨-೪೩

೧೮. ಅದೇ : ೪೭.೧೦೭೪. ಲಕ್ಷ್ಮೇಶ್ವರ, (ಧಾಜಿ, ಶಿರಹಟ್ಟಿ ತಾ) ಪು. ೫೩-೫೫

೧೯. ಅದೇ : ೫೫.೧೦೮೨. ಲಕ್ಷ್ಮೇಶ್ವರ, ಪು. ೬೭-೬೯

೨೦. ಅದೇ : ೯೯.೧೦೨೮. ಲಕ್ಷ್ಮೇಶ್ವರ, ಪು. ೧೨೫

೨೧. ಅದ್ : ೧೦೭.೧೧೩೮. ಲಕ್ಷ್ಮೇಶ್ವರ, ಪು. ೧೩೪-೩೭

೨೨. ಅದೇ : ೧೧೭-೧೧೪೭ ಲಕ್ಷ್ಮೇಶ್ವರ, ಪು. ೧೫೫

೨೩. ಅದೇ : ೧೧೮.೧೧೪೮. ಕುಯಿಬಾಳ, ಪು. ೧೫೬

೨೪. ಅದೇ : ೧೨೨,೧೧೫೩. ಲಕ್ಷ್ಮೇಶ್ವರ, ಪು. ೧೬೦-೬೧

೨೫. ಎ.ಕ.೩ (೧೯೭೪) ಗುಂಡ್ಲುಪೇಟೆ ೪೩. ಸು. ೭೫೦. ತಗ್ಗಲೂರು (ಮೈಜಿ, ಗುಂಡ್ಲುಪೇಟೆ ತಾ) ಪು. ೩೮

೨೬. ಸೌ.ಇ.ಇ. ೧೮. ೬೮. ೧೦೬೨. ಯರಗುಪ್ಪಿ (ಧಾಜಿ, ಹುಬ್ಬಳ್ಳಿ ತಾ) ಪು. ೫೯-೬೦ ಅದೇ: ೨೭೪. ೧೩೯೬. ಸಂಗೂರು (ಚಂದಾಪುರ) (ಧಾಜಿ, ಹಾವೇರಿ ತಾ), ಪು. ೩೫೪-೫೫

೨೭. ಎ.ಇ. ೩೪ ಪು. ೫೯ff. ೯೭೨. ಖೊಟ್ಟಿಗನ ಹುಲಗೂರು ಶಾಸನ

೨೮. ಎಆರ್‌ಐಇ ೧೯೩೫-೩೬. E-೨೯.೧೦೭೪

೨೯. ಅದೇ : ನಂ. ೧೨.೧೦೮೨

೩೦. ಅದೇ : ನಂ. ಎ.ಇ. ೧೧೩೮

೩೧. ಅದೇ : ನಂ ೪೬.೧೧೫೩

೩೨. ಅದೇ : ನಂ. ೩.೧೧೨೮

೩೩. ಎ.ಇ. ೩೫. ೧೦ ಪು. ೮೫-೮೮.೯ಶ.?

೩೪. IWG : ೧೯೮೪ : ನಂ. ೧೪೬ : ೯೭೬-೭೭ : ಪು. ೪೬೧-೬೨

೩೫. ಅದೇ, ನಂ. ೪೩ : ಪು. ೧೬೫

೩೬. ಅದೇ, ನಂ, ೭೧ : ಪು. ೨೫೪. : ಮೈ.ಅ.ರಿ. ೧೯೨೦. ೮ ಶ. ಪು. ೨೩.

೩೭. ಎ.ಕ. ೬ ಮೂಡಿಗೆರೆ. ೩೬.೭೫೦-೫೧. ಚಾವಳಿ (ಚಿಕ್ಕಮಜಿ/ಮೂಡ್ಗೆರೆ ತಾ) ಪು. ೧೫೧-೫೨