ಕರ್ನಾಟಕದ ಪ್ರಕಟಿತ ಶಾಸನಗಳಲ್ಲಿ ನೂರಾರು ಕುಲ-ವಂಶಗಳ ಹೆಸರುಗಳು ಕಂಡು ಬರುತ್ತವೆ. ಹೆಸ್ರಾಂತ ದೊಡ್ಡ ರಾಜ ವಂಶಗಳಲ್ಲದೆ ಅಷ್ಟು ಪ್ರಸಿದ್ಧಿ ಪಡೆಯದ ಸಣ್ಣ ಪುಟ್ಟ ಮನೆತನಗಳೂ ಕುಲಗಳೂ ಶಾಸನಗಳಲ್ಲಿ ದಾಖಲಾಗಿವೆ. ಕನ್ನಡ ನಾಡಿನ ಸಮಾಜೋ – ಧಾರ್ಮಿಕ ಅಧ್ಯಯನಕ್ಕೆ ಪೂರಕ ಸಾಮಗ್ರಿ ಸಹ ಈ ಕುಲಗಳ ಮಾಹಿತಿಯಿಂದ ಹೊರಬೀಳುತ್ತದೆ. ಈ ಬಗೆಯ ಉಪಯುಕ್ತತೆ ಇರುವ ಕಾರಣದಿಂದ ‘ಸಾದಕುಲ’ ಸಂಬಂಧವಾಗಿ ಕೆಲವು ವಿಚಾರಗಳನ್ನು ಈ ಹಂಸಲೇಖನದಲ್ಲಿ ಮಂಡಿಸಲಾಗಿದೆ.

ಸಾದಕುಲವನ್ನು ಕುರಿತು ವಿವರಣೆಗೆ ಭೂಮಿಕೆಯೊಂದನ್ನು ನಿರ್ಮಿಸಿದ ಸಾಲುಗಳು ಇವು : ಜೈನರಲ್ಲಿ ಚತುರ್ಥ, ಬೋಗಾರ, ಸಾದ, ಪಂಚಮ, ವೈಶ್ಯ ಕುಲಗಳಿವೆ. ಉತ್ತರ ಕರ್ನಾಟಕದಲ್ಲಿ ಇಂದಿಗೂ ಈ ಪಂಗಡಗಳು ಚಾಲ್ತಿಯಲ್ಲಿವೆ; ಧಾರವಾಡ ಬೆಳಗಾವಿ ಜಿಲೆಗಳಲ್ಲಿ ಇವು ಪ್ರಬಲವಾಗಿ ಕಂಡು ಬರುತ್ತವೆ; ಜೈನರಲ್ಲೇ ಇರುವ ‘ಸಾದಕುಲ’ ಕುರಿತ ಪ್ರಾಚೀನ ಶಾಸನ ಪ್ರಯೋಗ ಧಾರವಾಡ ಜಿಲ್ಲೆ ರಾಣಿ ಬೆನ್ನೂರ ತಾಲ್ಲೂಕು ತಾಲ್ಲೂಕು ನದಿಹರಳಹಳ್ಳಿ ಶಾಸನದಲ್ಲಿದೆ [ನಾಗರಾಜಯ್ಯ. ಹಂಪ: ನೇರಿಲಗೆಯ ಶಾಸನ -ಕೆಲವು ಟಿಪ್ಪಣಿಗಳು, ‘ಅಭಿಜ್ಞಾನ’ ೧೯೯೫ : ೫೭೦]

ನದಿಹರಳ ಹಳ್ಳಿಯ ಶಾಸನವು [ಸೌ. ಇ.ಇ. ೧೮, ೧೮೦.೧೧೬೮. ಪು. ೨೪೬ – ೪೯] ಕಳಚುರ್ಯ್ಯವಕ್ರವರ್ತಿ ವೀರಬಿಜ್ಜಣದೇವನ ಆಳ್ವಿಕೆಗೆ ಸೇರಿದ್ದು. ೭೦ ಸಾಲುಗಳಿರುವ ಈ ಶಾಸನ ತುಂಬ ಸಮೆದು ಹೋಗಿದೆ. ಅಲ್ಲಲ್ಲಿ ಮುಕ್ಕಾಗಿದೆ. ಶಾಸನದ ಅರೆಪಾಲು ಅಳಿಸಿ ಹೋಗಿದ್ದರೂ ಉಳಿದಿರುವಷ್ಟರಲ್ಲಿ ಸಿಗುವುದು ಸಾದಕುಲದ ಹಿರಿಯರ ಹಿರಿಮೆಗರಿಗಳ ಬಿಚ್ಚಳಿಕೆ. ಸಾದಕುಳ ಪ್ರದೀಪನಾದ ನಾಗಗಾವುಂಡ – ಅರಸಿಗಾವುಂಡಿಯರು ಗೊಟ್ಟಗಡಿಯ ವೃಷಭ ಜಿನೇಂದ್ರ ಭವನವನ್ನು ಸುಕವಿ ಶಾಂತಿರನು ವಿರಚಿಸಿದ ಈ ಸುದೀರ್ಘ (ತುಟಿತ) ಶಾಸನ ವರ್ಣಿಸಿದೆ. ಅದರ ಒಂದು ಸಂಕ್ಷಿಪ್ತ ಚಿತ್ರಣ ಹೀಗಿದೆ:

ಭರತ ಮಹೀಕಾಂತೆಗೆ ಕುಂತಳವೆನಲೆಸೆವ ಕುಂತಳ ವಿಷಯ ಮಧ್ಯದೊಳು ಸೊಗಯಿಸುಗುಂ

            ದೊರೆವೆತ್ತ ತುಂಗಭದ್ರೆಯ
ವರದೆಯ ಮಧ್ಯ ಪ್ರದೇಶದೊಳ್ಸೊಗಯಿಸುಗುಂ
ಸಿರಿಯ ತವರ್ಮ್ಮನೆ ಸೌಖ್ಯಾ
ಕರಮೆನೆ ಬನವಾಸೆ ದೇಶವತುಳ ವಿಳಾಸಂ
ವನರುಹ ವನದಿಂ ವನರುಗ
ವನಮಧು ಮುದಿತಾಳಿಮಾಳೆಯಿಂದಳಿಮಾಳಾ
ಧ್ವನಿ ಹೃದ್ಯೋದ್ಯಾನದಿನಾ
ಜನಪದವೊಡರಿಸುದಖಿಳವನ ಸುಖಪದಮಂ
||
ಪಿಕರವದಿಂ ತಂಬೆಲರಿಂ
ಶಕುಶತಸಾರು ಪ್ರಕರದಿಂದೆಳೆನೀರ ಸತ
…. ವನರುಹವನದಿಂ
ಸಕಳೇಂದ್ರಿಯ ತೃಪ್ತಿಚತುರವಿಷಯ ವಿಷಯಂ
||
ಕೂಡೆ ಸೊಗಯಿಸುವ ಬನವಸೆ
ನಾಡೊಳ್ಕಣ್ಗೆಸೆವ ಕಂಪಣಂ ವನಲಕ್ಷ್ಮಿನಿಂದ
(ಬಾಡಮೆ) ರೂಢಿಯ ನೂಱುಂ
ಬಾಡಂ ಭೂಯುವತಿ ನೂತ್ನ ರತ್ನಾ ಪೀಡಂ
||
ಅದನಾಳ್ವಂ ಭೂಪೋತ್ತಮನುತ್ತಮ ಪುರುಷ ಪಾಂಡ್ಯ ಮಹಿಪಂ……
ನಂದನವನದಿಂ ಕರಮೆಸೆವುದು ಗೊಟ್ಟಿಗಡಿ…….

ಅಲ್ಲಿ ನಿರ್ಮಲ ಜೈನ ಧರ್ಮಪರರು, ಸಂಯಮ ನಿರತರು ಇದ್ದು, ಅವರ ನಟ್ಟ ನಡುವೆ ಕೇತಗಾವುಂಡನೂ ಅವನ ವಧುವೂ ಪೆಸರ್ವಡೆದರು. ಅವರ ಮಗ ಬರ್ಮಗಾವುಂಡನೂ ಆತನ ಸತಿ ಗುಣವತಿ ವನಿತೆಯರೊಳಗರಸಿಯೆಂಬ ಪೆಸರೆಸೆವಿನಂ ಭೂತಳದೊಳ್ಮಿಗಿಲೆನಿಪ್ಪ ಪೆರ್ಮ್ಮೆ ಹೊಂದಿದ್ದರು. ಅವರ ಮಗ ಸಾಮನ್ತಂ ನಾಗಗಾವುಂಡಂ ಸದಮಾಳ ಜಿನಪೂಜೆ ಜಿನವಂದನೆಗಳಿಂದ, ಚಾರು ಚರಿತದ ಪೆಂಪಿಂದ, ಜೈನ ಬ್ರತಾಶಂಸನನಗಿ ಇಳೆಯೊಳ್ ಖ್ಯಾತನಾಮನಾಗಿದ್ದನು. ಮಂಗಳಾನಕರವಮ್ ಜೈನಾಭಿಷೇಕ ಅರ್ಚನಾದಿ ಸ್ತೋತ್ರಾವಳಿಯಲ್ಲಿ ಈ ನಾಗಗಾವುಂಡನು ಜಿನ ಭಕ್ತ ಪ್ರಕರದ ಸ್ತುತಿಪಾತ್ರನಾಗಿದ್ದನು.

ನಾಗುಗಾವುಂಡನು ’ಸಾದವಂಶ ಕುಮುದ’ ನಾಗಿದ್ದನು. ಇಂಥ ನಾಗ ಗಾವುಂಡನಿಗೆ ಅರ್ಹತ್ ಸಿದ್ಧಾಚಾರ್ಯ ಉಪಧ್ಯಾಯ ಸರ್ವ ಸಾಧುಗಳು -ಈಗೆ- ಐಶ್ವರ್ಯಮನ್ ಎಂದು ಸಾದಕುಲದವರು ಹಾರೈಸಿದರು. ಮೂಲ ಸಂಘ ಸೂರಸ್ಥಗಣ ಚಿತ್ರ ಕೂಟಾನ್ವಯದ ವಾಸುಪೂಜ್ಯ ಮುನೀಂದ್ರ ಜೈನ ಸಿದ್ಧಾಂತ ಚಕ್ರವರ್ತಿಯೆಂದು ಜಗದ್ದವಳಿತ ಕೀರ್ತಿ ಪಾತ್ರವಾಗಿದ್ದನು. ಆತನ ಶಿಷ್ಯನಾಗಿ ನೆಗಳ್ದ ರಾವಣಂದಿ ಮುನೀಂದ್ರನು ಅನವದ್ಯನೂ ಅನಘನೂ ಶಾಂತಮನನೂ ಆಗಿದ್ದನು. ಈತನ ಶಿಷ್ಯರು ಕೇತಗಾವುಂಡ ಮತ್ತು ಕೇತನ ಸತಿ. ಇವರ ಮಗನಾದ ನಾಗ ಗಾವುಂಡನು ಉದಾತ್ತ ವಿಶದ ಕೀರ್ತಿಲತೆಗೆ ಅಡರ್ಪ್ಪಾಯ್ತೆನೆ ಗೊಟ್ಟ ಗಡಿಯೊಳೆ ವೃಷಭನಾಥ (ಆದಿದೇವ) ಜಿನ ಭವನವನ್ನು (ಬಸದಿ) ಮಾಡಿಸಿದನು.

ಈ ನಾಗವರ್ಮನಿಂದ ವಿಭು ಮಾಡಿಸಿದ ಜಿನರಾಜಗೇಹವು ಸುಚರಿತ್ರ ಸಂಸ್ತವನ ಶಾಸನ ಶೈಳವೆನಿಪ್ಪ ಪೆರ್ಮೆಗಾಸ್ಪದವಾಗಿತ್ತು. ಪ್ರಭಾನಿರ್ಭರ ಶೋಭಾ ಭೋಗಾದಿಂ ಶೋಭಿಸಿ ಸಕಳ ಜಗದ್ಭವ್ಯ ಲಕ್ಷ್ಮೀಕಂ ರುಂದ್ರ ಜೈನೇಂದ್ರ ಗೇಹಂ ಆ ಸಾಧುಕುಳ ಪ್ರದೀಪನ ಧರ್ಮಾನುರಾಗ ಮಣಿ ಮುಕುರವಾಗಿತ್ತು. ಬುಧಜನಸ್ತುತ ನಾಗಗೌಂಡನ ಈ ಪ್ರಶಸ್ತಿ ಶಾಸನವನ್ನು ಸುಕವಿ ಶಾಂತಿರನು ವಿರಚಿಸಿದನು. ಕಳಚುಯ್ಯರ ಪ್ರತಾಪ ಚಕ್ರವರ್ತಿಯ ಸಾಮಂತನಾದ ನಾಗಗಾವುಂಡನೂ ಅರಸಿ ಗಾವುಂಡಿಯೂ ತಂಮ ಮಾಡಿಸಿದ ಜಿನಾಲಯಕ್ಕೆ ಬಿಟ್ಟ ಧರ್ಮ್ಮಮೆಂತೆಂದೆಡೆ ರಿಷಿಯರಯ್ವರಾಹಾರದಾನಕ್ಕಂ ಅಜ್ಜಿಯರಾಹಾರಬಾನಕ್ಕಂ ಖಣ್ಡಸ್ಫುಟಿತ ಜೀರ್ನ್ನೋ ದ್ಧಾರಕ್ಕಂ ಬಿಟ್ಟ ತೋಂಟ ಹಿರಿಯ ಕೆಱಿಯ ಕೆಳಗೆ ತುಂಬಿದ ಮೊದಲಲು ತೋಂಟ ಅಡಕೆಯ ಮರ ನಾಲೂಱು ಸಿಡಿಲಗೆಱೆಯ ಕೆಳಗೆ ತುಂಬಿದ ಕೆಳಗೆ ಗದ್ದೆ ಮತ್ತರೊಂದು ಊರಿಂದಂ ಬಡಗಲೋಣಿಯಿಂದ ಹಡವಲು ಎರೆಯಕೆಯಿ ಮತ್ತರು ಮೂಱು ಸಿಡಿಲಗೆಱೆಯ ತೆಂಕಣ ಕೋಡಿಯ ಕೆಳಗೆ ಹಾಳ ಕೆಯಿ ಮತ್ತರೊಂದು ಮೂಲೆವೆತ್ತ ಹೇಱು ಬಳ್ಳವೊಂದು ಹೆಜ್ಜುಂಕದ ನಾಗಣದೇವ ದೇವರ ನಂದಾದೀವಿಗೆಗೆ ತಿಂಗಳಿಂಗೆ ಬಿಟ್ಟ ಪಣವೊಂದು ದೇವಗೊಳಗ ಧರ್ಮ್ಮಗೊಳಗವಂ ಸಲಿಸುವರಿಂತೀ ಧರ್ಮ್ಮವ ನಾಡ ಮೇಲಾಳ್ಕೆಯರಸುಗಳುಂ ಮೋಲಾಳ್ಕೆಯ ಮನ್ನೆಯರುಂ ಗೌಂಡನುಂ ಪ್ರಜೆಗಳುಂ ಸ್ವಧರ್ಮದಿಂ ನಡೆಸಿದವರು.

ಮೇಲ್ಕಂಡ ನದಿಹರಳಹಳ್ಳಿಯ ಶಾಸನದಿಂದ ತಿಳಿದು ಬರುವಂತೆ ಈ ಸಾದಕುಲವು ಅಂದಿನ ದಿಗಳಲ್ಲಿಯೇ ಪ್ರತಿಷ್ಠಿತ ಕುಲವಾಗಿತ್ತು. ರಾಜರ ಮತ್ತು ಪ್ರಜೆಗಳ ಗೌರವ ವಿಶ್ವಾಸ ಗಳಿಸಿತ್ತು. ಸಾದಕುಲದ ಧಾರ್ಮಿಕ ಪ್ರವೃತ್ತಿಯ ಪ್ರತೀಕವಾಗಿರುವ ಈ ಶಾಸನದಲ್ಲಿ ಅವರ ಒಂದು ಕುಟುಂಬದ ಮೂರು ತಲೆಮಾರಿನವರ ವಿವರ, ಕಟ್ಟಿಸಿದ ಬಸದಿಯ ವಿಚಾರ, ಅದಕ್ಕೆ ಬಿಟ್ಟು ಕೊಟ್ಟ ದೊಡ್ಡ ಮೊತ್ತದ ದತ್ತಿಗಳು – ಇಷ್ಟೂ ಸಂಗತಿಗಳು ಪರಿಣಾಮಕಾರಿಯಾಗಿ ದಾಖಲಾಗಿವೆ ಶಾಸನದ ನಷ್ಟ ಭಾಗದಲ್ಲಿ ಸಾದಕುಲ ಸಂಬಂಧವಾದ ಇನ್ನಷ್ಟು ಮಾಹಿತಿ ಮರೆಯಾಗಿ ಹೋಗಿದೆ.

ಸಾದಕುಲ ಸಂಬಂಧವಾದ ಮಾಹಿತಿಗಳು ಇನ್ನೂ ಕೆಲವು ಶಾಸನಗಳಲ್ಲಿ ಸಿಗುತ್ತದೆ. ಧಾರವಾಡ ಜಿಲ್ಲೆ ಹಾವೇರಿ ತಾಲೂಕು ಗುತ್ತಲಿನ ಶಾಸನದಲ್ಲಿ [ಸೌ.ಇ.ಇ. ೧೮, ೨೯೩.೧೧೬೨. ಪು. ೦೩೭೬-೭೮] ಹೀಗಿದೆ :

ಸ್ವಸ್ತಿ ಸಮಸ್ತಗುಣ ಸಂಪನ್ನ ನುಡಿದು ಮತ್ತೆನ್ನ ಗೋತ್ರ ಪವಿತ್ರ…. ಸಾಹ ಸೋತ್ತುಂಗ ಸೊಂದೆ ವಂಸ ಲಲಾಮನಭಿಮಾನರಾಮ ಜಿನಸಮಯ ಸಮುದ್ಧರಣ…..ಚೂಡಾಮಣಿ ಇತ್ಯಾದಿ ನಾಮಾವಳೀ ವಿರಾಜಿತನಪ್ಪ ಶ್ರೀಮತು ಬಡ್ಡಬ್ಯವಹಾರಿ ಕೇತಿ ಸೆಟ್ಟಿಯು ಪಾರ್ಶ್ವದೇವರ ಪ್ರತಿಷ್ಠೆಯಂ ಮಾಡಿಸಿದಡೆ……[ಅದೇ, ಪು. ೩೭೭]

ಸಾದ ಕುಲದಲ್ಲಿ ಜೈನ ಪರಂಪರೆಗೆ ಸೇರಿದವರು ಇರುವಂತೆ ಶೈವ ಸಂಪ್ರದಾಯದವರೂ ಇದ್ದರೆಂದು ಶಾಸನಗಳಿಂದ ಗೊತ್ತಾಗುತ್ತದೆ. ಲಕ್ಷ್ಮೇಶ್ವರದ ಒಂದು ಶಾಸನದಲ್ಲಿ [ಸೌ.ಇ.ಇ. ೨೦, ೭೮.೧೧೧೮] ನೆಗರ್ದ ಸಾದವೆರ್ಗ್ಗಡೆ ಸೋವರಸನ ಪರಿಚಯವಿದೆ. ಈತ ಶೈವನೆಂದು ಹೇಳಬಹುದು. ಹಾಗಿದ್ದರೆ ಕ್ರಿ.ಶ. ೧೧೧೮ ರ ವೇಳೆಗೆನೆ ಸಾದಕುಲದಲ್ಲಿ ಜೈನ ಶೈವ ಎಂದು ಇಬ್ಭಾಗವಾಗಿತ್ತೆನ್ನಬಹುದಾಗಿದೆ. ಇನ್ನೊಂದು ಇದೇ ಧಾರವಾಡ ಜಿಲ್ಲೆಯ ರಾಣಿ ಬೆನ್ನೂರು [ಬೆಣ್ಣೆಯೂರ್ ಪನ್ನೆರಡು] ತಾಲ್ಲೂಕಿನ ಮೂಕನೂರು ಶಾಸನದಲ್ಲಿ [ಸೌ.ಇ.ಇ. ೧೮, ೧೪೯.೧೧೪೪] “ಮುಸುವಡಿಯ ಸಾಂದಗುಲದೊಳ್ ಪೆಸರೆನಿಸಿದ ಬಾಲಿವಂಶದೊಳ್ ಪುಟ್ಟಿದ ಮಾಕನೂರು ಬೊಪ್ಪಣನು ಬೊಪ್ಪಣೇಶ್ವರ ದೇವರನ್ನು ಮಾಡಿಸಿ ತನ್ನ ಮೂವರು ಸೋದರ ರೊಂದಿಗೆ ನೆಲದಾನ ವಿತ್ತ” ವಿವರ ವಿದೆ; ಇದು ಜೈನ ಶಾಸನವಾದರೊ ಪರಮತ ಸಹಿಷ್ಣುತೆಯನ್ನು ತೋರಿದ ರೀತಿಗೆ ಉದಾಹರಣೆಯಾಗಿದೆ.

ಸಾದರು, ಸಾದಕುಲ, ಸಾದವಂಶ, ಸಾಧುಕುಳ, ಸಾದ ಕುಳ, ಸೊಂದೆವಂಶ ಎಂಬ ನಾನಾ ರೂಪಗಲೆಲ್ಲ ‘ಸಾದಕುಲ’ ವನ್ನು ಸೂಚಿಸುತ್ತವೆ. ಮಂಗರಾಜ ನಿಘಂಟಿನಲ್ಲಿ (೧೧೦-೬) ಸಾದಂ ವೃಷಲನಱೆ ಕುಂಚಡಿಗನವದ್ಯಂ ಗಾವಣಿಗನಂತ್ಯನಱೆಯೆ ಗಂಗಡಿಕಾಱನಕ್ರಮನಭೀರನೆಂದೆನೆ ಮಹಾ ಶೂದ್ರನಕ್ಕುಂ – ಎಂದಿದೆ. ಚಂದ್ರ ಸಾಗರ ವರ್ಣಿಯೆಂಬ (೧೭೬೦-೧೮೩೫) ಕವಿಯು ಜೈನ ಸಮಾಜದಿಂದ ಸಾದರು ಹೇಗೆ ಬೇರೆಯಾದರೆಂಬುದನ್ನು ಸೂಚಿಸಿದ್ದಾನೆ.

ಸಾದರನ್ನು ಕುರಿತು ಇನ್ನೂ ವ್ಯಾಪಕವೂ, ವ್ಯವಸ್ಥಿತವೂ, ಕ್ಷೇತ್ರ ಕಾರ್ಯ ಆಧಾರಿತವೂ ಆದ ಅಧ್ಯಯನ ಇನ್ನೂ ಆಗಬೇಕಾಗಿದೆ; ಅದು ಒಂದು ಪಿ.ಎಚ್.ಡಿ. ಮಹಾಪ್ರ್ರಬಂಧದ ವಸ್ತು.