೧. ನೇರಿಲಗೆ (ನೀರಲ್ಲಿ : ಧಾಜಿ/ಹಾವೇರಿತಾ) ಊರಿನ ಒಂದು ಗಣ್ಯ ಕುಟುಂಬದ ಆಯ್ದು ತಲೆಮಾರಿನ ವಿವರಗಳು ಶಾಸನೋಕ್ತವಾಗಿವೆ.

[ಸೌ.ಇ.ಇ. ೧೬, ೧೫೧.೧೧೪೮]

ಈ ಕುಟುಂಬದ ಚರಿತ್ರೆ ಪ್ರಾರಂಭವಾಗುವುದು ದಡಿಗ – ರೇವಕಬ್ಬೆ ಎಂಬ ದಂಪತಿಗಳಿಂದ. ಆತನ ತರುವಾಯದ ವಂಶವೃಕ್ಷದ ಒಂದು ರೇಖಾಚಿತ್ರವನ್ನು ಹೀಗೆ ತೋರಿಸಬಹುದು.

01_257_CK-KUH

೨. ಈ ಮನೆತನವು ದಾನಗುಣ, ಸಾಹಸ, ಧರ್ಮನಿಷ್ಠೆ, ರಾಜಭಕ್ತಿ ಮೊದಲಾದವು ಗಳಿಂದ ಹೆಸರುವಾಸಿಯಾಗಿತ್ತು. ಈ ಸಂಸಾರದವರ ಸಾಧನೆಗಳನ್ನು ನಾನು ಅನ್ಯತ್ರ ಪರಿಚಯಿಸಿದ್ದೇನೆ. [ನಾಗರಾಜಯ್ಯ, ಹಂಪ : ೧೯೯೫ : ೫೬೬ – ೭೮]. ಅದರಿಂದ ಆ ಪ್ರಕಟಿತ ಸಂಗತಿಗಳ ಪುನರಕ್ತಿ ಅನಗತ್ಯ.

೩. ಈ ಕುಟುಂಬದ ಆದಿಪುರುಷನಾದ ದಡಿಗನನ್ನು ಶಾಸನದಲ್ಲಿ ಮಹಾನುಭಾವನೆಂದು ಹೇಳಿದೆ. ಅತ್ತಿಮಬ್ಬೆಗೆ ಸಮನಾದ ಶೀಲ ಪ್ರಭೆಯಿಂದ ಕೀರ್ತಿಗಳಿಸಿದ ರೇವಕಬ್ಬೆಯು ದಡಿಗನಿಗೆ ಕುಲವಧುವಾಗಿದ್ದಳು.

೪. ಚತುರ್ಥಕುಲವೆಂಬ ಒಂದು ಒಳಪಂಗಡ ಜೈನಮತದಲ್ಲಿ ಇದೆ. ದಡಿಗನು ಈ ಚತುರ್ಥಕುಲಕ್ಕೆ ಸೇರಿದ ಮಹಾಪುರುಷನಾಗಿದ್ದನು. ನಿಷ್ಠೆಯಿಂದ ಜಿನಧರ್ಮ ವನ್ನು ಪಾಲಿಸುತ್ತ, ಜಿನಮುನಿಗಳನ್ನು ಗೌರವಿಸಿತ್ತು ವಿನಯನಿಧಿಯಾದ ನೇರಿಲಗೆಯ ಮಹಾ ಪ್ರಭು ದಡಿಗನನ್ನು ಶಾಸನದ ಒಂದು ವೃತ್ತ ಪದ್ಯಹೀಗೆ ಚಿತ್ರಿಸಿದೆ.

ನುಡಿಕಲ್ಲೊಳ್ ಕಡೆದಕ್ಕರಕ್ಕೆ ಮಱುವಕ್ಕಂ ವಿಕ್ರಮಮಂ ಸಿಂಹಮಂ
ಜಡಿಗುಂ ತನ್ನಯ ದಾನಶಕ್ತಿ ಸುರಭೂಜಾನೀಕದೊಳ್ ಪೂಣ್ದು ಕೋ
ಡಿಡುಗುಂ ಕಂತುಗೆ ಕಿಂತುವಂ ಜನಿಯಿಕುಂ ಸೌಂದರ್ಯ್ಯ ಮೆಂದದುಂ ಪೇಳ್
ದಡಿಗಂಗಾರ್ಪ್ಪಡಿ ಪಾಸಟಿ ಸಮಂ ಪಟ್ಟಾನ್ತರಂ ಮಾನವರ್
||

ದಡಿಗನು ಆಡಿದ ಮಾತು ಎಂದರೆ ಅದು ಶಿಲಾಲಿಪಿ. ಹೆಚ್ಚು ಕಡಿಮೆ ಆಗದು. ಕೊಟ್ಟ ಮಾತು ಬದಲಾಗುವುದಿಲ್ಲ. ಶತ್ರು ಪಕ್ಷಕ್ಕೆ ಮಣಿಯದ ಸಾಹಸಿ. ಸಿಂಹವನ್ನು ಕೂಡ ಹೆದರಿಸುತ್ತಾನೆ. ತನ್ನ ದಾನ ಸಮೃದ್ಧಿಯಿಂದ ಕಲ್ಪವೃಕ್ಷವನ್ನು ಮೀರಿಸಿದ್ದಾನೆ. ಚೆಲುವಿಕೆಯಲ್ಲಿ ಮದನನಿಗೂ ಮಾತ್ಸರ್ಯ ಮೂಡಿಸುವ ಮಾಟವಿದೆ. ಇಂತಹ ದಡಿಗ ನಂತಹವರು ಇಲ್ಲ ಎಂಬ ಹಾಗೆ ಅನನ್ಯವೆನಿಸಿದ್ದನು.

೫. ನೇರಿಲಗೆಯ ಮಹಾ ಪ್ರಭುವಾದ ದಡಿಗನ ಹೆಸರು ಚಾಳುಕ್ಯ ರಾಜ್ಯದಲ್ಲಿ ಹಬ್ಬಿ ದಾಂಗುಡಿಯಿಟ್ಟು ಚಕ್ರವರ್ತಿಗೂ ಮುಟ್ಟಿತು. ಆಗ ಆಳುತ್ತಿದ್ದವನು ತ್ರೈಲೋಕ್ಯಮಲ್ಲ ಸೋಮೇಶ್ವರನು, ನೇಱೆಲಗೆಯ ಪ್ರಭು ದಡಿಗನಿಗೆ ನಾನಾ ಕೊಡುಗೆಗಳನ್ನಿತ್ತು ಸನ್ಮಾನಿಸಿದನು:

ಬಲ್ಲಹನೆನೆ ನೆಗರ್ದಾಹವ
ಮಲ್ಲಂ ಕೊಡೆಯಡಪ ಮಂದಳಂ ಸೀಗುರಿಯೆಂ
ಬೆಲ್ಲಾ ಚಿಹ್ನಮನದಟರ
ಮಲ್ಲಂ ದಡಿಗಂಗೆ ಕೊಟ್ಟನನ್ದಾದರದಿಂ
||

ಚಕ್ರವರ್ತಿಯಿತ್ತ ಮರ್ಯಾದೆಯ ಈ ಕೊಡುಗೆಗಳಿಂದಾಗಿ ನೇಱೆಲಗೆ ಊರಿಗೆ ‘ದಡಿಗನ ನೇಱೆಲಗೆ’ ಎಂದು ಹೆಸರಾಯಿತು.

೬. ಆಹವಮಲ್ಲ ತ್ರೈಲೋಕ್ಯಮಲ್ಲ ಚಕ್ರವರ್ತಿ ನೀಡಿದ ಕೊಡುಗೆಗಳು : ಕೊಡೆ, ಅಡಪ, ಮಂದಳ, ಸೀಗುರು – ಎಂಬ ನಾಲ್ಕು ವಸ್ತುಗಳು. ಕೊಡೆ ಗಾಳಿ ಮಳೆ ಬಿಸಿಲುಗಳಿಗೆ ಮರೆಯಾಗಿ ಹಿಡಿಯುವ ಸಾಧನ ಮಾತ್ರವಲ್ಲ. ಅದು ಮರ್ಯಾದೆಯನ್ನು ತೋರುವ ವಸ್ತುವೂ ಹೌದು. ಕನ್ನಡ ಕಾವ್ಯಗಳಲ್ಲೂ ಶಾಸನಗಳಲ್ಲೂ ಇದನ್ನು ಸಾರುವ ನೂರಾರು ಪ್ರಯೋಗಗಳಿವೆ. ಬಲ್ಲಹನು (ವಲ್ಲಭ) ಅಹವಮಲ್ಲನೂ (ಯುದ್ಧವೀರ) ಆದ ತ್ರೈಳೋಕ್ಯಮಲ್ಲನು ದಡಿಗನಿಗೆ ಕೊಟ್ಟ ಎರಡನೆಯ ವಸ್ತು ಅಡಪ. ಇದು ಅದಕೆಲೆಯ ಚೀಲ. ಅಡೆಪ (ಸೌ.ಇ.ಎ. ೧೯೩೨. ೪೮. ೯೬೦), ಹಡಪ (ಎ.ಕ. ೧೪. ಕೃಷ್ಣರಾ. ೮೪.೧೩೦೩) ಎಂಬ ರೂಪಗಳೂ ಉಂಟು. ಇದು ತಾಂಬೂಲ ಮರ್ಯಾದೆಯ ಸಂಕೇತ.

7. ದಡಿಗನಿಗೆ ನೀಡಿದ ಇನ್ನೊಂದು ಪದಾರ್ಥ ಮಂದಳ. ಇದು ನಿವೇಶನ. ಮನೆ ಕಟ್ಟುವ ಸ್ಥಳಕ್ಕೆ ಮಂದಳ, ಮನೆದಳ ಎಂದು ಹೆಸರುಗಳಿವೆ. ಶಾಸನಗಳಲ್ಲಿ ಇದರ ಪ್ರಯೋಗವಿದೆ (ಮೈ.ಆ.ರಿ. ೧೯೨೮. ೮೨.೧೭೬೮) ಮನೆದಾಣ (ಎ.ಇ. ೨೧.೧೭೮. ೮ ಶ) ಮನೆತಾಣ [ಎ.ಕ. ೭ (ಪ) ನಾಮಂ ೧೪೯. ೭೭೬] ಎಂಬ ರೂಪಗಳೂ ಬಳಕೆಯಾಗಿವೆ. ಈ ರೀತಿಯಾಗಿ ಉಚಿತ ನಿವೇಶನವನ್ನು ಕೊಡುವುದು ಒಂದು ವಿಶಿಷ್ಟ ಗೌರವ ತೋರುವ ಪರಿ.

೮. ದಡಿಗನಿಗೆ ಕೊಡಲಾದ ಮತ್ತೊಂದು ವಸ್ತು ಸೀಗುರಿ. ಈ ಶಬ್ದದ ಸಾಮಾನ್ಯರ್ಥ ಚಾಮರ ಎಂಬುದು. ಚಾಮರ ಬೀಸಿ ಸೇವೆ ಮಾಡುವವರು ಸೀಗುರಿಯವರು. ದೇವರಿಗೂ ರಾಜರಿಗೂ ಸೀಗುರು ಚಾಮರ ಹಿಡಿಯುವುದುಂಟು. ಆದರೆ ದಡಿಗನಿಗೆ ನೀಡಿದ ಈ ‘ಸೀಗುರಿ’ ಕೊಡುಗೆ ಚಾಮರವಲ್ಲ. ಇದೂ ಕೂಡ ಒಂದು ನಗೆಯ ಕೊಡೆ. ನವಿಲುಗರಿಯ ಕಣ್ಣಗಳಿಂದ ಮಾಡಿದ ಹಾಗೂ ರತ್ನ ಖಚಿತ ಕಲಶದಂಡಗಳಿರುವ ಕೊಡೆಯೇ ಸೀಗುರಿ [ನರಸಿಂಹಚಾರ್, ಡಿ.ಲ್. : ೧೯೭೬ : ೧೧೪] ತಳ್ತು ಪಿಡಿದ ಕನಕ ಪದ್ಮದ ಸೀಗುರಿಗಳ ನೆಱನೆಡೆವಱೆಯದೆ ಬರೆ [ಪಂಪಭಾರತ ೩-೪೮ ವ] ಎಂಬುದು ಪಂಪನ ಪ್ರಯೋಗ. ಈ ಸೀಗುರಿಗೆ ಸಾಗಿರಿ, ಸಾಗರಿ, ಸೀಗುರಿ ಎಂಬ ಮೂರು ರೂಪಗಳು ಪ್ರಯೋಗವಾಗಿವೆ. [ನರಸಿಂಹಾಚಾರ್, ಡಿ.ಎಲ್. : ೧೯೭೧ : ೮೮೯] ಆದುದರಿಂದ ಸೀಗುರಿ ಎಂಬುದು ಚಾಮರವಲ್ಲ, ಇದೊಂದು ಬೆಲೆಯುಳ್ಳ, ಗೌರವದ ಸಂಕೇತವಾದ ಕೊಡೆ. ಪಿಂಛ ಚ್ಛತ್ರವೆಂಬುದೂ ಸಹ ಈ ಸೀಗುರಿಯೇ ಆಗಿದೆ: ಪಿಂಛಚ್ಛತ್ರಮಿದಂ ಪ್ರಾಹಸ್ಸೂಗುರೀತಿ ವಿಚಕ್ಷಣಾ: (ಅಭಿಲಷಿತಾರ್ಥಚಿಂತಾಮಣಿ) ಕೊಡೆಯ ಭೋಗವೆಂಬುದೊಂದುಂಟು; ಸಂಸ್ಕೃತ ದಲ್ಲಿ ಇದನ್ನು ಛತ್ರ ಭೋಗವೆಂದು ಹೇಳಿದೆ. ಸೋಮೇಶ್ವರನ ಅಭಿಲಷಿತಾರ್ಥ ಚಿಂತಾಮಣಿಯಲ್ಲಿ ‘ಛತ್ರಭೋಗ’ ಎಂಬ ಹೆಸರಿನ ಒಂದು ಅಧ್ಯಾಯವೇ ಇದೆ. ಅದರಲ್ಲಿ ನಾನಾ ಬಗೆಯ ಕೊಡೆಗಳ ಸ್ವರೂಪವನ್ನು ತಿಳಿಸಿವೆ.

ಮದನಾವತಾರ [ರನ್ನ, ಅಜಿತ ಪುರಾಣ, ೧೨-೪೦; ಮೈ.ಆ.ರಿ. ೧೯೨೧, ೯೬೩. ಪು. ೧೨, ೨೧.೨೫; IWG ೧೯೮೪ : ೪೧೧-೩೨] ಸಿತಚ್ಛತ್ರ (ಬೆಳ್ಗೊಡೆ, ಧವಳಾತ ಪತ್ರ, ಶ್ವೇತ್ರ ಚ್ಛತ್ರ, ಸಿತಾತಪತ್ರ) ಮೇಘಡಂಬರ, ಸೀಗುರಿ – ಮೊದಲಾದುವು ಈ ಬಗೆಯವು.

ಆಧಾರ ಸಾಹಿತ್ಯ:

೧೯೭೧ ನರಸಿಂಹಾಚಾರ್, ಡಿ.ಎಲ್. ‘ಪೀಠಿಕೆಗಳು, ಲೇಖನಗಳು’.
೧೯೭೨ ನರಸಿಂಹಾಚಾರ್, ಡಿ.ಎಲ್., ‘ಪಂಪಭಾರತ ದೀಪಿಕೆ’
೧೯೯೫ ನಾಗರಾಜಯ್ಯ, ‘ಹಂಪ’, ನೇರಿಲಗೆಯ ಶಾಸನ : ಕೆಲವು ಟಿಪ್ಪಣಿಗಳು, ಅಭಿಜ್ಞಾನ’ ಪು. ೫೬೬-೭೮
ಸೌ.ಇ.ಇ. ೧೮, ೧೫೧.೧೧೪೮ ನೇರಿಲಗೆ (ಧಾಜಿ./ಹಾವೇರಿ ತಾ.)
ಎ.ಇ. ೨೧, ೧೭೮. ೮ಶ; ಎ.ಕ. ೭ (ಪ.) ನಾಮಂ ೧೪೯.೭೭೬
ಮೈ.ಆ.ರಿ. ೧೯೨೧, ೮-೧೬, ೨೧, ೨೫, ಕ್ರಿ.ಶ. ೯೬೨. ೬೩ ಕೂಡಲೂರು : ೧೯೮೪ Inscriptions of Western Gangas (ed) Ramesh, K.V.No. 138