೧. ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಗ್ರಾಮವಾದ ಸುಳಗೋಡು ಸೋಮವಾರವು ಒಂಬೈನೂರು ವರ್ಷಗಳ ಹಿಂದೆ (ಜೈನ) ಯಾಪನೀಯ ಸಂಘಕ್ಕೆ ಸೇರಿದ ಒಂದು ಕೇಂದ್ರವಾಗಿತ್ತೆಂದು ಶಾಸನಗಳಿಂದ ತಿಳಿದು ಬರುತ್ತದೆ.

೧.೧ ಸುಳಿಗೋಡು ಸೋಮವಾರದಲ್ಲಿ ಒಟ್ಟು ಒಂಬತ್ತು ಶಾಸನಗಳು ಸಿಕ್ಕಿವೆ, ಅಚ್ಚಾಗಿವೆ. ಎ.ಕ. ೮ (ಪ.) ಹಾಗೂ ೧೩೩ ರಿಂದ ೧೪೧, ಪು. ೧೮೬-೯೧ ಇವುಗಳಲ್ಲಿ ಎರಡು ಶಾಸನಗಳು ಮಾತ್ರ ಅಜೈನ ಶಾಸನಗಳು [ಅದೇ, ಅಗೂ ೧೩೪ ಮತ್ತು ೧೩೫] ಉಳಿದ ಏಳು ಜೈನ ಶಾಸನಗಳು.

೧.೨ ಈ ಹಳ್ಳಿಯ ಪ್ರಾಚೀನವಾದ ಹೆಸರು ಸುಳ್ಳಿಗೋಡು [ಅದೇ, ಅಗೂ ೧೩೪.೧೧೮೯. ಪು. ೧೮೮. ಸಾಲು : ೨೭] ಎಂದು ಒಂದು ಶಾಸನದಲ್ಲಿದೆ. ಆದರೆ ಅರಕಲಗೂಡು ೧೩೩ ನೆಯ (ಕಾಲ. ೧೦೭೯-೮೦) ಶಾಸನದಲ್ಲಿ ಬರುವ ‘ಒಱಿಯೂರು’ ಎಂಬುದೇ ಪ್ರಾಚೀನತಮಗೊಳಿಸಬೇಕು.

೧.೨.೧ ಸುಳಗೋಡು ಮತ್ತು ಸುತ್ತ ಮುತ್ತಲಿನ ಪ್ರದೇಶ ಕ್ರಿ.ಶ. ೧೦, ೧೧, ೧೨, ೧೩ ನೆಯ ಶತಮಾನಗಳಲ್ಲಿ ಮಾಂಡಲಿಕರಾದ ಕೊಂಗಾಳ್ವರ ಆಳಿಕೆಗೆ ಒಳಪಟ್ಟಿತ್ತು. ಸುಳಗೋಡು ಕೊಂಗಾಳ್ವರ ನೆಲೆವೀಡುಗಳಲ್ಲಿ ಒಂದೆನಿಸಿ ಪ್ರಮುಖ ಪಟ್ಟಣವಾಗಿತ್ತು.

೨. ಕೊಂಗಾಳ್ವರು ಜೈನಧರ್ಮಪಾಲಕರು, ಪೋಷಕರು; ತಮ್ಮ ಜಿನಧರ್ಮದ ಬಸದಿಗಳನ್ನು ಮಾಡಿಸಿದರು. ಗುರುಗಳನ್ನು ಗೌರವಿಸಿದರು.

೨.೧ ಕೊಂಗಾಳ್ವದ ಜೈನಧರ್ಮನಿಷ್ಠೆಗೆ ಅನ್ಯಾನ್ಯ ಶಾಸನಗಳ ಆಧಾರಗಳಿವೆ. ಪ್ರಸ್ತುತ ಸುಳಗೋಡು ಶಾಸನಗಳ ಸಹ ಈ ನಿರ್ಧಾರಕ್ಕೆ ಸಹಕಾರಿಯಾಗಿವೆ. ಕೊಂಗಾಳ್ವರ ಪಟ್ಟದ ಜಿನಾಲಯವು ಈ ಸುಳಗೋಡಿನಲ್ಲಿತ್ತು. ಅದನ್ನು ‘ಕೊಂಗಾಳ್ವ ಜೈನ ಗೃಹ’ ಎಂದೂ ‘ಅದಟರಾದಿತ್ಯ ಚೈತ್ಯಾಲಯ’ ಎಂದೂ ಕರೆಯುತ್ತಿದ್ದರು. [ಅದೇ,. ಅಗೂ. ೧೩೩ (೫ ಅಗೂ ೯೯) ೧೦೭೯-೮೦ ಪು. ೧೮೬. ಸಾಲು : ೯,೧೨]

೨.೨ ಕೊಂಗಾಳ್ವ ಜೈನ ಗೃಹವನ್ನು, ಮಹಾ ಮಂಡಲೇಶ್ವರನಾದ ರಾಜೇಂದ್ರ ಪೃಥುವೀ ಕೊಂಗಾಳ್ವನು ಮಾಡಿಸಿದನು; ‘ಮೂಲ ಸಂಘದ ಕಾಣೂರ್ಗ್ಗಣದ ತಗರಿಗಲ್ಗಚ್ಛದ ಗಣ್ಡವಿಮುಕ್ತ ಸಿದ್ದಾಂತದೇವರ್ಗ್ಗೆ ಬಸದಿಯಂ ಮಾಡಿಸಿ’ ದ್ದಾಗಿ ತಿಳಿದು ಬರುತ್ತದೆ [ಅದೇ, ಪು. ೧೮೬-೮೭, ಸಾಲು : ೨೫-೨೭] ಪ್ರಭಾ ಚಂದ್ರ ಸಿದ್ಧಾಂತವೇವನೇ ಈ (ಸಿದ್ಧಾಂತಿಕ) ಗಣ್ಡ ವಿಮುಕ್ತ ಸಿದ್ಧಾಂತದೇವನೆಂದು ಇದೇ ಶಾಸನದ ಪಾಠದಿಂದ ಸ್ಪಷ್ಟವಾಗಿತ್ತದೆ. ಈ ಆಚಾರ್ಯ್ಯನು ಕಾಣೂರು ಗಣದ ತಗರಿಗಲ್ ಗಚ್ಛಕ್ಕೆ ಸೇರಿದ್ದನು.

೨.೩ ಕಾಣೂರುಗಣವೂ ಸೂರಸ್ತಗಣವೂ ಯಾಪನೀಯ ಸಂಘಕ್ಕೆ ಸೇರಿದ ಪ್ರಮುಖ ಗಣಗಳು [ನಾಗರಾಜಯ್ಯ, ಹಂಪ, ಕಾ(ನೂ)ಣೂರ್ಗಣ; ‘ಹರತಿಸಿರಿ’ (೧೯೮೭) (ಸಂ.) ಲಕ್ಷ್ಮಣ್ ತೆಲಗಾವಿ ೩೪೯-೫೨]

೩. ಕ್ರಿ.ಶ. ೧೦೯೫ ರಲ್ಲಿ ಇಲ್ಲಿ ‘ಶ್ರೀಮತ್ ಸೂರಸ್ತಗಣದ ಕಲ್ನೆಲೆಯ ರಾಮಚಂದ್ರ ದೇವರ ಶಿಷ್ಯನ್ತಿಯರಪ್ಪ ಅರಸವ್ವೆಗನ್ತಿಯರ್ ಅವರ ಶಿಷ್ಯನಿಯರ್ ಶ್ರೀಮತ್ ಮಾಕವ್ವೆ ಗನ್ತಿಯರ್ – ಚುತುರ್ವ್ವಿಧ -ಆಹಾರ ಶರೀರ ನಿವೃತ್ತಿಯಿಂ ಸಮಾಧಿ ಮರಣದಿಂ ಮುಡಿಪಿ ಮುಕ್ತಿಯನೆಯ್ದಿದರ್’ [ಅದೇ, ಅಗೂ. ೧೩೬. ೧೦೯೫ ಪು. ೧೮೯ ಸಾಲು : ೯-೧೪, ೨೨-೩೧]

೩.೧ ಸೂರಸ್ತಗಣವು ಯಾಪನೀಯ ಸಂಘಕ್ಕೆ ಸೇರಿದ ಮುಖ್ಯವಾದ ಒಂದು ಗಣವೆಂದು ಮೇಲೆ ಹೇಳಿದೆ. ಈ ಗಣಕ್ಕೆ ಸೇರಿದ ಕಲ್ನೆಲೆಯ ರಾಮಚಂದ್ರ ದೇವ ಎಂಬ ಮುನಿಯಿದ್ದನು. ಕಲ್ನೆಲೆ ಎಂಬುದು ಜೈನ ಪಾರಿಭಾಷಿಕ ಶಬ್ದ; ಬೇಸಗೆಯ ಕಾಲದಲ್ಲಿ ಕಲ್ಲಿನ ಮೇಲೆ ನಿಂತು ಮಾಡುವ ತಪ್ಪಸ್ಸಿಗೆ ಕಲ್ನೆಲೆ ಎಂದು ಹೆಸರು; ಕಲ್ನೆಲೆ ದೇವ ಏಳಾಚಾರ್ಯ್ಯರನ್ನೂ [ಎ.ಕ. ೧೪, ಎಡತೊ. ೮೪.೯೧೦] ರವಿಕೀರ್ತಿ, ಕಲ್ನೆಲೆ ದೇವನನ್ನೂ [ಎ.ಕ. ೬, ಮೂಡಿಗೆರೆ. ೮೪.೧೦೪೦] ಶಾಸನಗಳು ನಮೂದಿಸಿವೆ.

೩.೧.೧ ಸೂರಸ್ತಗಣದ ಕಲ್ನೆಲೆ ರಾಮಚಂದ್ರ ದೇವನ ಶಿಷ್ಯೆ ಅರಸವ್ವೆಗನ್ತಿ, ಅವರ ಶಿಷ್ಯೆ ಮಾಕವ್ವೆಗನ್ತಿಯು ನಾಲ್ಕು ವಿಧವಾದ ಆಹಾರವನ್ನು ತೊರೆದನು [ಅನ್ನ ಪಾನ ಖಾದ್ಯ ಲೇಹ್ಯ – ತತ್ತ್ವರತ್ನ ಪ್ರದೀಪಿಕೆ, ೭-೨೭೭]; ಸಮಾಧಿ ಮರಣದಿಂದ ಮುಡಿಪಿಸಿದರು. ಅವರ ಶಿಷ್ಯನಾದ ಮಾಚಿಮಯ್ಯನು ಪರೋಕ್ಷವಿನಯವಾಗಿ ಈ ಶಾಸನ ಮಾಡಿಸಿದನು.

೪. ಈ ಎರಡು ಶಾಸನಗಳು ಸ್ಪಷ್ಟವಾಗಿ ಸಾರುವ ಅಂಶಗಳು:

ಅ. ಚಂಗಾಳ್ವರು ನಿಷ್ಠಾವಂತ ಜೈನರು, ಅವರ ಪಟ್ಟದ ಜಿನಾಲಯವಿತ್ತು.

ಆ. ಚಂಗಾಳ್ವರು ಯಾಪನೀಯ ಗುರುಗಳ ಶಿಷ್ಯರಾಗಿದ್ದರು.

ಇ. ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಈಗಿನ ಸುಳಗೋಡು ಸೋಮವಾರ ಗ್ರಾಮವು (ಒಱೆಯೂರು – ಸುಳಿಗೋಡು) ಯಾಪನೀಯ ಸಂಘದ ಸ್ಥಳವಾಗಿತ್ತು; ಯಾಪನೀಯ ಸಂಘದ ಕಾಣೂರು ಮತ್ತು ಸೂರಸ್ತಗಣಗಳಿಗೆ ಸೇರಿದ ಗುರುಗಳು ಇಲ್ಲಿದ್ದರು.

ಈ. ಸೂರಸ್ತಗಣದ ಕಂತಿಯರೂ ಸಹ ಇಲ್ಲಿದ್ದರು; ಕಂತಿಯರ ಶಿಷ್ಯರೂ ಇದ್ದರು.