ನೀವು ಅಶೋಕ ಚಕ್ರವರ್ತಿಯ ಹೆಸರನ್ನು ಕೇಳೀರುವಿರಲ್ಲವೇ? ಅವನು ವಿಶ್ವ ಶಾಂತಿದೂತ. ಜಗತ್ ಪ್ರಖ್ಯಾತ ಸಾಮ್ರಾಟ. ಭಾರತದ ಇತಿಹಾಸದಲ್ಲಿ ನಿತ್ಯವೂ ಮಿರುಗುವ ವ್ಯಕ್ತಿ. ಅಂತೆಯೇ ಅವನ ಪಿತಾಮಹನಾದ (ತಂದೆಯ ತಂದೆ) ಚಂದ್ರಗುಪ್ತನೂ ಕೂಡ.

ಶ್ರೀಸಾಮಾನ್ಯ

ಚಂದ್ರಗುಪ್ತನು ಶ್ರೀಸಾಮಾನ್ಯನಾಗಿ ಹುಟ್ಟಿ ಬೆಳೆದ. ಆದರೆ ತನ್ನ ಭುಜಬಲದಿಂದ ಭಾರತದ ನೆಲವನ್ನು ಪರಕೀಯರ  ದಾಸ್ಯದಿಂದ ಮುಕ್ತಗೊಳಿಸಿದ: ತುಂಡು ರಾಜ್ಯಗಳ ರಾಜರಿಂದ ತುಂಬಿಹೋಗಿದ್ದ ಭರತ ಭೂಮಿಯನ್ನು ಒಂದಗೂಡಿಸಿದ; ದೇಶಧಲ್ಲಿ ಅತ್ಯುತ್ತಮ ಆಡಳಿತ ವ್ಯವಸ್ಥೆಯನ್ನು ಸ್ಥಾಪಿಸಿದ; ಪ್ರಜಾಕೋಟಿಗೆ ಹಿತ ಸಾಧಿಸಿ, ಶಾಂತಿ-ಸಮೃದ್ಧಿ ನೀಡಿದ.

ಅವನ ಬಾಹುಬಲ, ಕಾರ್ಯಸಾಧನೆ, ದೇಶಭಕ್ತಿ, ಸಂಘಟನಾಶಕ್ತಿ, ಉತ್ತಮಗುಣ- ನಡವಳಿಕೆ ಯಾರನ್ನಾದರೂ ಆಕರ್ಷಿಸುತ್ತವೆ. ಅವನ ಬಗ್ಗೆ ಅಪಾರ ಅಭಿಮಾನ ಹುಟ್ಟಿಸುತ್ತದೆ. ಅವನು ಬದುಕಿ ಬಾಳಿದ್ದು ಸುಮಾರು ೨೩೦೦ ವರ್ಷಗಳ ಹಿಂದೆ.

ಬಾಲ್ಯದ ದೌರ್ಭಾಗ್ಯ

ಚಂದ್ರಗುಪ್ತನ ತಂದೆ “ಮೋರಿಯಾ” ಎಂಬ ಕ್ಷತ್ರೀಯ ಕುಲದ ಮುಖ್ಯಸ್ಥನಾಗಿದ್ದ. ತಂದೆಯನ್ನು ಕಾಣುವ ಭಾಗ್ಯವೇ ಚಂಧ್ರಗುಪ್ತನಿಗೆ ಇಲ್ಲದೆ ಹೋಯಿತು.ಗಡಿನಾಡಿ ಯುದ್ಧದಲ್ಲಿ ಅವನ ತಂದೆ ಮಡಿದ. ಹೀಗಾಗಿ ಕುಟುಂಬದ ಕಣ್ಣು ಕುರುಡಾಯಿತು. ಆ ವೇಳೆ ತುಂಬು ಗರ್ಭವತಿಯಾಗಿದ್ದ ಅವನ ತಾಯಿ ಹುಟ್ಟೂರನ್ನು ಬಿಟ್ಟು ಪಾಟಲಿಪುತ್ರಕ್ಕೆ ತೆರಳಿದಳು. ಇಲ್ಲಿಯೇ ಭಾರತದ ಭಾವಿ ಸಾಮ್ರಾಟ ಚಂದ್ರಗುಪ್ತನ ಜನನವಾಯಿತು.

ಚಂದ್ರಗುಪ್ತನ ದೌರ್ಭಾಗ್ಯ ಇನೂ ಮುಗಿದಿರಲಿಲ್ಲ. ಕೆಲ ಕಾಲದಲ್ಲಿಯೇ ಆತನ ತಾಯಿಯೂ ತೀರಿಕೊಂಡಳು. ಚಂದ್ರಗುಪ್ತ ಈಗ ಪೂರ್ಣವಾಗಿ ತಬ್ಬಲಿಯಾದ. ಮುಂದೆ ಅವು ಗೋಪಾಲೊಬ್ಬ ಮನೆಯಲ್ಲಿ ವಾಸಿಸಬೇಕಾಯಿತು.  ಆ ಗೋಪಾಲನಾದರೋ ಚಂದ್ರಗುಪ್ತನನ್ನು ಬೇಟೆಗಾರನೊಬ್ಬನಿಗೆ ಮಾರಿಬಿಟ್ಟ.

ಆ ಬೇಟೆಗಾರ ಚಂದ್ರಗುಪ್ತನ್ನು ಆಕಳು ಮೇಯಿಸುವ ಕೆಲಸಕ್ಕೆ ಹಚ್ಚಿದ. ಇದು ಗ್ರಾಮೀಣ ಪ್ರದೇಶದ ಬಾಲಕರಿಗೆ ಹೆಚ್ಚಾಗಿ ಕೊಡುವ ಕೆಲಸವಾಗಿತ್ತು.

ಗೋಪರ ಅರಸ

ಇತರ ಗೋಪರಿಗೆ ಚಂದ್ರಗುಪ್ತನೆಂದರೆ ಪ್ರೀತಿ,ಆದರ ಗೌರವ, ಅವರೆಲ್ಲರಿಗೂ ಅವನು ರಾಜನೂ ಹೌದು! ಚಂದ್ರಗುಪ್ತನು ರಾಜನಾದುದರಿಂದ ತನ್ನ ಆಸ್ಥಾನವನ್ನು ನಡೆಸುತ್ತಿದ್ದ.  ತನ್ನ ಪ್ರಜೆಗಳಿಗೆ ನ್ಯಾಯವನ್ನು ನೀಡುತ್ತಿದ್ದ!

ಒಮ್ಮೆ ಚಂದ್ರಗುಪ್ತ ನ್ಯಾಯವನ್ನು ನೀಡುತ್ತಿರುವ ಸನ್ನಿವೇಶ. ರಾಜ ಸ್ವಲ್ಪ ಎತ್ತರದ ದಿನ್ನೆಯ ಮೇಲೆ ಕುಳಿತ್ತಿದ್ದ.  ಪ್ರಜೆಗಳು ರಾಜನ ಆಜ್ಞೆಗಳನ್ನು ಆಲಿಸುತ್ತಾ ನೆಲದ ಮೇಲೆ ಕುಳಿತ್ತಿದ್ದರು.

ಇದೇ ವೇಳೆ ಬ್ರಾಹ್ಮಣನೊಬ್ಬನು ಆ ಕಡೆಯಿಂದ ಹೋಗುತ್ತಿದ್ದ. ಬಾಲಕರ ಗುಂಪನ್ನು ಕಂಡು ಅವರ ಕಡೆ ಗಮನ ಹರಿಸಿದ. ಅವನ ದೃಷ್ಟಿ ಚಂದ್ರಗುಪ್ತನ ಮೇಲೆ ಬಿತ್ತು. ಬಾಲಕ ಆಕರ್ಷಕನಾಗಿದ್ದ. ಗಂಭೀರನಾಗಿದ್ದ. ಸುಮಾರು ಎಂಟು ಅಥವಾ ಒಂಬತ್ತರ ವಯಸ್ಸು, ದೃಢವಾದ ಮೈಕಟ್ಟು.

‘ಇವನೇ’

ಚಂದ್ರಗುಪ್ತನೂ ಆ ಬ್ರಾಹ್ಮಣನನ್ನು ದಿಟ್ಟಿಸಿದ. ಆತ ಅಷ್ಟು ಸುಂದರನಾಗಿರಲಿಲ್ಲ. ಕುರುಪಿಯೆಂದೇ ಹೇಳಬಹುದು. ಆದರೆ ಅವನ ಕಣ್ಣುಗಳು ಬೀರುವ ದೃಷ್ಟಿ ವಿಲಕ್ಷಣವಾಗಿತ್ತು.  ಆ ನೋಟದಲ್ಲಿ ನಿರ್ಧಾರವಿತ್ತು.  ಪ್ರತಿಕಾರದ ಅಗ್ನಿಯಿತ್ತು. ಆತನು ಸಾಮಾನ್ಯ ಬ್ರಾಹ್ಮಣನಾಗಿರಲಿಲ್ಲ.

ಚಾಣಕ್ಯ, ಹುಡುಗ ಚಂದ್ರಗುಪ್ತನ್ನೇ ದಿಟ್ಟಿಸಿ ನೋಡಿದ.

ಆವನ ಹೆಸರು ಚಾಣಕ್ಯ. ಆತ ರಾಜನೀತಿ, ಅರ್ಥ ಶಾಸ್ತ್ರ,  ನೈಪುಣ್ಯ, ಸಾಹಸಗಳನ್ನು ಎರಕ ಹೊಯ್ದ ಮೂರ್ತಿ.

ಬಾಲಕನ್ನು ಕಂಡ ಚಾಕ್ಯನ ಮನಸ್ಸು ಆತನಿಗೆ ಹೇಳತೊಡಿತು.

“ಇವೇ ನೀನು ಅರಸುತ್ತಿರುವ ವ್ಯಕ್ತಿ.  ಇವನಿಂದಲೇ ನಿನ್ನ ಕಾರ್ಯ, ಪ್ರತಿಜ್ಞೆಯು ಪೂರ್ತಿಯಾದೀತು.  ಭಾರತದ ಸಾಮ್ರಾಟನಾಗುವ ಅಸಮಾನ್ಯ ಲಕ್ಷಣಗಳಿವೆ ಇವನಲ್ಲಿ”.

ಚಾಣಕ್ಯ ನುಡಿದ :

“ಬಾಲಕರೇ, ನಿಮ್ಮ ಆಟ ಮುಗಿಯಿತು ತಾನೇ?”

ಚಂದ್ರಗುಪ್ತ ಆ ಬ್ರಾಹ್ಮನಿಗೆ ವಂದಿಸಿ,

“ಹೌದು ಪೂಜ್ಯರೆ”.

“ಸರಿ ಹಾಗಾದರೆ,ನಿನ್ನ ಮನೆಯ ಕಡೆಗೆ ಹೊರಡೋಣ”.

ಇಬ್ಬರು  ಹೊರಟರು.

‘ನನ್ನನೊಡನೆ ಕಳಿಸು’

ಚಂದ್ರಗುಪ್ತನ ಸಾಕುತಂದೆ ಚಾಣಕ್ಯನನ್ನು ಆದರದಿಂದ ಬರಮಾಡಿಕೊಂಡ.
ಚಾಣಕ್ಯ ಆತನಿಗೆ,
“ನೋಡಪ್ಪ, ಈ ಬಾಲಕ ತುಂಬಾ ಪ್ರತಿಭಾವಂತನಂತೆ ತೋರುತ್ತಾನೆ. ಈತನಿಗೆ ಉತ್ತಮಸಂಸ್ಕಾರ, ವಿದ್ಯೆ ದೊರೆಯಬೇಕಾಗಿದೆ. ಇವನನ್ನು  ನನ್ನೊಡನೆ ಕಳಿಸು. ತಕ್ಷ ಶಿಲೆಯ ವಿಶ್ವವಿದ್ಯಾಲಯದಲ್ಲಿ ಈತನಿಗೆ ಶಿಕ್ಷಣವನ್ನು ಕೊಡುವುದರಲ್ಲಿ ನಿನ್ನ ಆಕ್ಷೆಪವಿಲ್ಲ ತಾನೇ?” ಎಂದ.

“ತಾವು ತಿಳಿದವರು. ತಮ್ಮ  ಇಚ್ಛೆಯಂತಾಗಲಿ, ಗುರುಗಳೆ!”

ಚಾಣಕ್ಯ ತನ್ನೊಡನೆ ಇದ್ದ ಒಂದು ಸಾವಿರ  ನಾಣ್ಯಗಳನ್ನುಬೇಡನಿಗೆ ನೀಡಿದ.

ಬೇಡನಿಗೆ ಧನ ಲಾಭವಾಯಿತು: ಚಾಣಕ್ಯನ ಲಾಭ ಇನ್ನೂ ಹಿರಿದಾಗಿತ್ತು. ಆದರೆ ಭಾರತ ಮಾತೆಯ ಲಾಭ ಎಣಿಕೆಯಿಲ್ಲದಷ್ಟಾಯಿತು. ಇದನ್ನೇ ಮುಂದಿನ ಇತಿಹಾಸ ನಮಗೆ ಹೇಳುತ್ತದೆ.

(ಚಾಣಕ್ಯ ಚಂದ್ರಗುಪ್ತ ತಾಯಿಯಿಂದಲೇಬಾಲಕನನ್ನು ಪಡೆದ ಎಂದೂ ಖೆಲವು ಚರಿತ್ರಾಕಾರರು ಹೇಳುತ್ತಾರೆ).

ಚಂದ್ರಗುಪ್ತನ ಜೀವನದಲ್ಲಿ ಚಾಣಕ್ಯನ ಭೇಟಿ ಒಂದು ಹೊಸ ಅಧ್ಯಾಯವನ್ನೇ ಪ್ರಾರಂಭಿಸಿದಂತಾಯಿತು. ಆಕಳುಗಳನ್ನು ಮೇಯಿಸುವ ಅವನ ಜೀವನ ಕೊನೆ ಗೊಂಡಿತು. ಕೊನೆಯವರೆಗೂ ನಿರಕ್ಷಕರ ಕುಕ್ಷಿಯಾಗಿ ಇರಬೇಕಾಗಿದ್ದ ಪ್ರಮೆಯ ತಪ್ಪಿ ಹೋಯಿತು.  ಉತ್ತಮ, ಸಂಸ್ಕಾರ, ವಿದ್ಯಾಭ್ಯಾಸ ಅವನ ಪಾಲಿಗೆ ದೊರಕುವಂತಾಯಿತು. ಅದಕ್ಕಿಂತಲೂ ಹೆಚ್ಚಾಗಿ ಅತ್ಯುಚ್ಚ ರಾಷ್ಟ್ರೀಯ ಆದರ್ಶಗಳು ಅವನ ಅಂತಃಕರಣವನ್ನು ತುಂಬುವಂತಾಯಿತು.

ಸಾಕುತಂದೆಗೆ ನಮಿಸಿ ಚಂದ್ರಗುಪ್ತ ತಕ್ಷಶಿಲೆಯ ಕಡೆಗೆ ಪಯಣ ಬೆಳೆಸಿದ.

ತಕ್ಷಶಿಲೆಯಲ್ಲಿ

ತಕ್ಷಶಿಲೆ ವಿಶ್ವವಿದ್ಯಾಲಯವು ಈಗಿನ ಪಂಜಾಬಿನಲ್ಲಿತ್ತು. ಬಹು ದೊಡ್ಡ ವಿದ್ಯಾಭ್ಯಾಸ ಕೇಂದ್ರವದು. ಅಲ್ಲಿಯ ವಿದ್ಯಾರ್ಥಿಗಳ ಸಂಖ್ಯೆ ಹತ್ತುಸಾವಿರವನ್ನೂ ಮೀರುತ್ತಿತ್ತು. ಅಂದಿನರಾಜ-ಮಹಾರಾಜರುಗಳು ತಮ್ಮ  ಪುತ್ರರನ್ನು ಹೆಚ್ಚಿನ ಶಿಕ್ಷಣಕ್ಕಾಗಿ ಅಲ್ಲಿಗೆ ಕಳುಹಿಸುತ್ತಿದ್ದರು.  ಜಗದ್ವೀಖ್ಯಾತರಾದ ಗುರುಗಳು ಅಲ್ಲಿದ್ದರು.  ಅಲ್ಲಿ ವೇದಗಳನ್ನೂ , ಹದಿನೆಂಟು ವಿದ್ಯೆಗಳನ್ನೂ ಕಲಿಸಲಾಗುತ್ತಿತ್ತು. ಇವುಗಳಲ್ಲಿ ಧನುರ್ವಿಧ್ಯೆ, ಬೇಟೆಗಾರಿಕೆ ಮತ್ತು ಗಜಶಾಸ್ತ್ರ ಸೇರಿದ್ದವು. ರಾಜಕುಮಾರರಿಗೆ ಬೇಕಾಗುವ ವಿದ್ಯೆಗಳಿವು. ನ್ಯಾಯ , ವೈದ್ಯ ಮತ್ತು ಯುದ್ಧ ಶಾಸ್ತ್ರಗಳಿಗಂತೂ ಹೆಸರುವಾಸಿಯಾದ ವಿದ್ಯಾ ಕೇಂದ್ರವಾಗಿತ್ತು ತಕ್ಷ ಶಿಲೆ.

ಇಂಥ ಕೇಂದ್ರದಲ್ಲಿ ಚಂದ್ರಗುಪ್ತನ ವಿದ್ಯಾಭ್ಯಾಸ ಎಂಟು ವರ್ಷಗಳ ಕಾಲ ನಡೆಯಿತು. ಇತರ ರಾಜಕುಮಾರರೇ ಆಗ ಆತನ ಸಂಗಡಿಗರು. ಚಂದ್ರಗುಪ್ತನ ಸುಪ್ತ ಪ್ರತಿಭೆ ಅರಳುವಂತಾಯಿತು.

ಚಂದ್ರಗುಪ್ತ ತೃಪ್ತಿಕರವಾಗಿ ವಿಧ್ಯಾಭ್ಯಾಸ ಮುಗಿಸಿದ. ಯುದ್ಧ ಶಾಸ್ತ್ರದಲ್ಲಿ ಪ್ರಾವಿಣ್ಯ ಪಡೆದ ವಿದ್ಯಾರ್ಥಿಗೆ ಆತನ ಗುರು ನಾಲ್ಕು ವಸ್ತುಗಳನ್ನು ಪ್ರಮಾಣ ಪತ್ರದ ರೂಪದಲ್ಲಿ ಕೊಡುವ ಸಂಪ್ರದಾಯವಿತ್ತು. ಯುದ್ಧ, ಕತ್ತಿ, ಬಿಲ್ಲು- ಬಾಣ, ಫಲಕ ಹಾಗೂ ವಜ್ರ- ಇವೇ ಆ ನಾಲ್ಕು ವಸ್ತುಗಳು.

ಇವುಗಳನ್ನು ಪಡೆದ ಚಂದ್ರಗುಪ್ತ ನೇರವಾಗಿ ಚಾಣಕ್ಯನ ಬಳಿ ಬಂದು ಪಾದದ ಮೇಲೆ ತಲೆ ಇಟ್ಟು ವಂದಿಸಿ,

“ಗುರುಗಳೇ, ಇಂದಿಗೆ ನನ್ನ ವಿದ್ಯಾಭ್ಯಾಸ ಮುಗಿದಂತಾಯಿತು. ಮುಂದೇನು ಮಾಡಬೇಕೆಂದು ಅಪ್ಪಣೆಯಾಗಬೇಕು”.

“ನನ್ನ ಸಂಗಡ ನಡೆ” ಎಂದ ಚಾಣಕ್ಯ.

‘ಬುದ್ಧಿಬಲವೂ ಬೇಕು’

ಇಬ್ಬರೂ ಮೌನವಾಗಿಯೇ ರಭಸವಾಗಿ ನಡೆಯುತ್ತಾ ಸಮೀಪದ ಮೈದಾನದವನ್ನು ಸೇರಿದರು. ಆಗ ಸಂಜೆ ಯಾಗಿತ್ತು. ಇಬ್ಬರೂ ಕುಳಿತರು. ಮೌನವನ್ನು ಮುರಿದು ಗಂಭೀರ ಸ್ವರದಲ್ಲಿ ಚಾಣಕ್ಯನೆಂದ,

“ಚಂದ್ರಗುಪ್ತ ! ಭರತ ವರ್ಷಕ್ಕೀಗ ಯಾವ ಪಿಡುಗು ತಟ್ಟಿದೆಯೆಂದು ಹೇಳಬಲ್ಲೇಯಾ?

“ನಮ್ಮ ಜನ್ಮ ಭೂಮಿಯ ಮೇಲಿನ ಯವನರ (ಗ್ರೀಕರ) ಆಕ್ರಮಣ , ದುರಾಚಾರ”.

ಚಾಣಕ್ಯ ಹೇಳಿದ.  “ಗ್ರೀಕರ ಆಕ್ರಮಣ ಇನ್ನೂ ಹೆಚ್ಚು ಕಾಲ ಮುಂದುವರಿಯದು. ಅವರು ಹೋದರೂ ದೇಶ ನೆಮ್ಮದಿಯಾಗಿರುತ್ತದೆ ಎನ್ನುವಂತಿಲ್ಲ”.

“ಏಕೆ ಗುರುಗಳೇ! ಏಕೆ?”

“ಮಗಧದ ನಂದರಾಜನ ಪ್ರಜಾಕಂಟಕ, ಕುಖ್ಯಾತ ದುರಾಡಳಿತವನ್ನು ಕೊನೆಗಾಣಿಸಬೇಕು. ಶ್ರೇಷ್ಠ ರಾಜನೊಬ್ಬ ಭರತವರ್ಷದ ಸಿಂಹಾಸನವನ್ನು ಅಲಂಕರಿಸಬೇಕು. ನಂದ ವಂಶದ ನಿರ್ಮೂಲನವೇ ನನ್ನ ಮುಂದಿನ ಗುರಿ!. ನಂದರಾಜ ನನಗೆ ಅಪಮಾನ ಮಾಡಿದ್ದಾನೆ. ಅದಕ್ಕೆ ಸರಿಯಾದ ಪ್ರತಿಕಾರವ್ನು ಮಾಡಲು ನಾನು ಅತ್ಯಾತುರನಾಗಿದ್ದೇನೆ”.

ಮುಂದುವರೆದು ಚಾಣಕ್ಯನೆಂದ:

“ಅದಿರಲಿ, ದೇಶವನ್ನೀಗ  ಈ ಎರಡು ವಿಪತ್ತುಗಳಿಂದ ತಪ್ಪಿಸುವುದಾದರೂ ಹೇಗೆಂದು ನಿನಗೆ ಹೊಳೆಯುತ್ತದೆಯೇ?”

“ಭುಜಬಲದಿಂದ!” ಥಟ್ಟನೆ ಚಂದ್ರಗುಪ್ತನೆಂದ.

“ತಾಳು ! ಭುಜಬಲದೊಂದಿಗೆ ಬುದ್ಧಿಬಲವೂ ಸೇರಬೇಕು, ಚಂದ್ರಗುಪ್ತ. ನಾವೀಗ ಕ್ರೀಯಾಶೀಲರಾಗುವ ಸಮಯ ಬಂದಿದೆ”.

ಮೊದಲು ವಿಪತ್ತು

ಸುಮಾರು ೨೩೦೦ ವರ್ಷಗಳ ಹಿಂದೆ ಭಾರತವನ್ನು ಜಯಿಸಲು ಒಬ್ಬ ಬಂದಿದ್ದ. ಅವನೇ ಅಲೆಕ್ಸಾಂಡರ್ ಯೂರೋಪ ಖಂಡದ ಮೆಸೆಡೋನಿಯಾ ಎಂಬ ಪ್ರದೆಶದವನು. ಇಡೀ ಜಗತ್ತನ್ನು ಗೆಲ್ಲುವುದೇ ಅವನ ಉದ್ದೇಶ.

ಈ ವೇಳೆ ಭಾರತದಲ್ಲಿ ದೊಡ್ಡ ಸಾಮ್ರಾಜ್ಯ ವೆಂಧರೆ ಮಗಧ ಸಾಮ್ರಾಜ್ಯ. ಇದು ಬಲಿಷ್ಠವಾಗಿದ್ದರೂ ದುರ್ಬಲನಾಧ ನಂದರಾಜನ ವಶದಲ್ಲಿತ್ತು. ಭಾರತದ ಹೆಬ್ಬಾಗಿಲಿನಂತಿದ್ದ ಪಂಜಾಬಿನಲ್ಲಿ ಅನೇಕ ಚಿಕ್ಕಪುಟ್ಟ ರಾಜ್ಯಗಳಿದ್ದವು.

ಆಲೆಗ್ಸಾಂಡರನು ಭಾರತಕ್ಕೆ ಆಕ್ರಮಣ ಮಾಡುವ ಸುದ್ಧಿಯನ್ನು ಕೇಳೀದಾಕ್ಷಣವೇ ತಕ್ಷಶಿಲೆಯ ದೊರೆ ಅಂಭಿಕ (ಅಂಭಿ) ಆತನೊಡನೆ ಯುದ್ಧ ಹೂಡದೇ ಶರಣಾಗತನಾದ. ಅಂಬಿಕನು ದೇಶದ್ರೋಹಿಗಳ ಸಾಲಿನಲ್ಲಿ ಪ್ರಥಮನೆಂದು ಇತಿಹಾಸಕಾರರು  ಹೇಳುತ್ತಾರೆ.

ಮುಂದೆ ರಾಜಾ ಪರ್ವತಕನು (ಪೋರಸ) ಝೀಲಂ ನದಿಯ ತೀರದಲ್ಲಿ ಅಲೆಗ್ಸಾಂಡರನನ್ನು ಎದುರಾದನು. ಘನಗೋರ ಯುದ್ಧವಾಯಿತು.  ಪರ್ವತಕನು ತನ್ನ ಶಕ್ತಿ ಮೀರಿ ಯುದ್ಧ ಮಾಡಿದರೂ ಸೋಲನ್ನು ಒಪ್ಪಬೇಕಾಯಿತು.

ನೆರೆಹೊರೆಯ ರಾಜರು ಅವನೊಡನೆ ಕೂಡಿ ಒಂದಾಗಿ  ಕಾದಾಡಲಿಲ್ಲ. ಒಬ್ಬೊಬ್ಬರಾಗಿ ಯುದ್ಧ ಮಾಡಿದರೆ ಹೊರತು ಒಗ್ಗಟ್ಟಾಗಿ ವೈರಿಗಳನ್ನು ಪ್ರತಿಭಟಿಸಲಿಲ್ಲ. ಇದೇ ಅಂದಿನ ಭಾರತದ ದುರಂತವಾಗಿತ್ತು. ವೈರಿಯ ವಿಜಯಕ್ಕೆ ಇದೇ ಕಾರಣವಾಗಿತ್ತು.

ಜಯ ಪಡೆದ ವೈರಿ ಸೈನಿಕರು  ಗ್ರಾಮ ಗ್ರಾಮಗಳಲ್ಲಿ ಅತ್ಯಾಚಾರವೆಸಗಿದರು. ಹಳ್ಳಿಗಾಡುಗಳಿಗೆ ಬೆಂಕಿ ಇಟ್ಟು ಸುಟ್ಟರು. ಊರುರುಗಳು ಸೊರೆ ಹೋದವು.

ಭಾರತದ ಬಲಿಷ್ಠ ರಾಜ್ಯವಾಧ ಮಗಧವನ್ನು ಸೋಲಿಸುವುದೇ ಅಲೆಗ್ಸಾಂಡರನ ಮುಂದಿನ ಯೋಜನೆಯಾಗಿತ್ತು.

‘ಅಲೆಗ್ಸಾಂಡರ್, ಭಾರತದಿಂದ ತೊಲಗು’

ಚಂದ್ರಗುಪ್ತನಿಗೆ ಗ್ರೀಕರ ದುರಾಕ್ರಮಣದ ಸುದ್ಧಿ ತಿಳಿಯುತ್ತಲೇ ಇತ್ತು. ಯಾವ ರೀತಿಯಲ್ಲಿ ಈ ಮಹಾ ವಿಪತ್ತನ್ನು ಎದುರಿಸಬಹುದು ಎಂದೆಲ್ಲಾ ಹಗಲುರಾತ್ರಿ ಚಿಂತಿಸುತ್ತಿದ್ದ. ಹಂಚಿಕೆ ಹಾಕುತ್ತಿದ್ದ.

ಅಲೆಗ್ಸಾಂಡರನ್ನು ಒಮ್ಮೆ ಮುಖತಃ ಭೇಟಿಯಾಗಬೇಕೆಂದು ಚಂದ್ರಗುಪ್ತನಿಗೆ ಯೋಚನೆಯೊಂದು ಹೊಳೆಯಿತು. ಇದರಿಂದ ಅಲೆಗ್ಸಾಂಡರನ ವ್ಯಕ್ತಿತ್ವವನ್ನು ನೋಡಿಕೊಂಡು ಅವನ ಕುಂದು ಕೊರತೆಗಳನ್ನು ಅರಿಯಬಹುದೆಂದುಕೊಂಡ. ಅದಕ್ಕಾಗಿ ಸಂಜೆಯಾಗುತ್ತಲೇ ಅಲೆಗ್ಸಾಂಡರನ  ಶಿಬಿರವನ್ನು ಸೇರಿಯೇ ಬಿಟ್ಟ.

ಆಗ ಅಲೆಗ್ಸಾಂಡರನು ಮಧ್ಯವನ್ನು ಸೇವಿಸಿ ಹಾಶಿಗೆಯ ಮೇಲೆ ಒರಗಿದ್ದ. ಆಕರ್ಷಕನಾಗಿದ್ದ ಭಾರತೀಯ ತರುಣನನ್ನು ಕಂಡು ಅಲೆಗ್ಸಾಂಡರ್ ಮಾತನಾಢಿಸಿದ. ಇಬ್ಬರೊಳಗೆ ಮಾತಿಗೆ ಮಾತು ಬೆಳೆಯಿತು.

“ಅಲೆಗ್ಸಾಂಡರ್ ! ಮಗಧವನ್ನು ಗೆಲ್ಲುವ ನಿನ್ನ ಕನಸನ್ನು ಬಿಟ್ಟು ಬಿಡು! ಭಾರತದಿಂದ ಶೀಘ್ರ ತೊಲಗು!”

ರೇಗಿದ ಅಲೆಗ್ಸಾಂಡರ್, “ಈ  ಕುನ್ನಿಯನ್ನು ತಕ್ಷಣ  ಕೊಲ್ಲಿರಿ! ಎಂದು ಆರ್ಭಟಿಸಿದ.

ಆದರೆ ಚಂದ್ರಗುಪ್ತ ಸಿಗಬೇಕೇ? ಕಗ್ಗತ್ತಲಲ್ಲಿ ಆತನು ಮಂಗಮಾಯವಾಗಿದ್ದ.

ಎರಡು ಹಂಚಿಕೆಗಳು

ಮಗಧ ಉಳಿಯಬೇಕಾಧರೆ ಪಂಜಾಬಿನಿಂದಲೇ ಯವನರನ್ನು ಬಡಿದೋಡಿಸಬೇಕು. ಅಲ್ಲದೆ, ಅಲೆಗ್ಸಾಂಡರನನ್ನು ಭಾರತದಿಂದಟ್ಟುವುದರಲ್ಲಿ ಬಲಿಷ್ಠ ಮಗಧವೇ ಮುಂದಾಳುತನ ವಹಿಸಬೇಕಾಗಿದೆ. ಅದಕ್ಕಾಗಿ ನಂದ ರಾಜನಿಗೆ ಸಮಯೋಚಿತ ಸಲಹೆ ನೀಡಬೇಕಾಗಿದೆ. ನಂದರಾಜ ಸರಿಯಾದ ಪೂರ್ವ ಸಿದ್ಧತೆ ನಡಸಿ ಯುದ್ಧಕ್ಕೆ ತಯ್ಯಾರಾಗಬೇಕಾಗಿದೆ.

ಇದಕ್ಕಾಗಿ ಚಾಣಕ್ಯ ಎರಡು ಹಂಚಿಕೆಗಳನ್ನು ಹಾಕಿಕೊಂಡ. ಮೊದಲನೆಯದು-ಚಂದ್ರಗುಪ್ತನನ್ನು ಪಂಜಾಬಿಗೆ ಕಳೂಹಿಸಿ ಅಲ್ಲಿಯ ಜನರನ್ನು ಒಂದುಗೂಡಿಸುವುದು. ಎರಡನೆಯದು-ತಾನು ಪಾಟಲಿಪುತ್ರಕ್ಕೆ ಹೋಗಿ ನಂದರಾಜನಿಗೆ ಮುನ್ನೆಚ್ಚರಿಕೆ ನೀಡಿ ಯುದ್ಧ ಕ್ಕೆ ಸಿದ್ಧನಾಗಲು ಪ್ರೇರೇಪಿಸುವುದು.

ಈ ಹಂಚಿಕೆಗಳಿಗೆ ಚಂಧ್ರಗುಪ್ತನು ಒಪ್ಪಿದ. ತಡಮಾಡದೇ ಚಂದ್ರಗುಪ್ತ ಪಂಜಾಗಿಬೆ ಅಂದೇ ಹೊರಟ. ಚಾಣಕ್ಯ ಪಾಟಲಿಪುತ್ರದ ಕಡೆಗೆ ಹೊರಟ.

ಪಂಜಾಬಿಗೆ ಹೋದ ಚಂಧ್ರಗುಪ್ತ ಅಲ್ಲಿ ಊರೂರು ಸುತ್ತಿದ. ರಾಜರು ಹಾಗೂ ಅವರ ಸೇನಾಪತಿಗಳೊಡನೆ ಮಾತುಕತೆ ನಡೆಸಿದ.  ತನ್ನ ಯೋಜನೆಯನ್ನು ಅನೇಕ ಗಣ ರಾಜ್ಯಗಳ ಪ್ರತಿನಿಧಿಗಳ ಮುಂದಿರಿಸಿದ. ಅವರಿಗೆ ದೇಶದ ಗಂಡಾಂತರದ ನಿಜ ಸ್ಥಿತಿಯನ್ನು ಮನದಟ್ಟು ಮಾಡಿದ. ಅವರಲ್ಲಿ ದೆಶಪ್ರೇಮ ತುಂಬಿದ.

ಪಂಜಾಬಿನ ಜನರು ಯುದ್ಧ ಕುಶಲರಾಗಿದ್ದರು. ಅವರಲ್ಲಿ ಉತ್ಸಾಹವಿತ್ತು. ಯವನರ ಬಗ್ಗೆ ದ್ವೇಷ, ತಾತ್ಸಾರಭಾವವಿತ್ತು.  ತಮ್ಮ ಅಪಜಯದ ಬಗ್ಗೆ ನಾಚಿಕೆ ಯಿತ್ತು.ಸ್ವಾಭಿಮಾನವೂ ಸಾಕಷ್ಟು ಇತ್ತು. ಆದರೆ ಅವರಲ್ಲಿ ಮುಖ್ಯವಾಗಿ ಒಗ್ಗಟ್ಟಿರಲಿಲ್ಲ. ಈ ಕೊರತೆಯಿಂದಲೇ ಅಲೆಗ್ಸಾಂಡರನ ಕಾರ್ಯವು ಸುಲಭವಾಗಿತ್ತು. ಪಂಜಾಬಿನವರು ಒಂದಾಗಿ ಯುದ್ಧ ಮಾಡಿದರೆ ಅಲೆಗ್ಸಾಂಡರ್ ಎಂದೋ ಅಲ್ಲಿಂದ ಕಾಲು ಕೀಳಬೇಕಾಗಿತ್ತು.

ಚಂದ್ರಗುಪ್ತನಿಗೆ  ಈ ಎಲ್ಲಾ ವಿಚಾರಗಳು ಪಂಜಾಬಿನ ಪ್ರವಾಸದಿಂದ ತಿಳಿದವು. ಹೀಗೆ ಚಂದ್ರಗುಪ್ತನು ಪಂಜಾಬಿನವರನ್ನು ಒಂದುಗೂಡಿಸಿಲುಮಾಡಿದ ಪ್ರಯತ್ನ ಇತ್ತ ಫಲ ನೀಡುವುದರಲ್ಲಿತ್ತು.

ಅತ್ತ ಚಾಣಕ್ಯ ತಕ್ಷಶಿಲೆಯಿಂದ ಹೊರಟು ಪಾಟಲಿ ಪುತ್ರವನ್ನು ಕಾಲುನಡಿಗೆಯಿಂದಲೇ ಸೇರಿದ.

ನಂದರಾಜನ ಮಂತ್ರಿ (ಅವನ ಹೆಸರುರಾಕ್ಷಸ) ಯನ್ನು ಕಂಡ. ತಾನು ಬಂದ ಉದ್ದೇಶವನ್ನು ಚಾಣಕ್ಯ ತಿಳಿಸಿ, “ದೇಶವನ್ನು ಯವನರಿಂದ ಪಾರು ಮಾಡುವ ಸತ್ಕಾರ್ಯ ಮಗಧದಿಂದಲೇ ಆಗಬೇಕಾಗಿದೆ” ಎಂದ.

ಅಮಾತ್ಯ ರಾಕ್ಷಸ ನಂದರಾಜನಲ್ಲಿ ಹೋದಾಗ ಕಂಡುದಾದರೂ ಏನು? ನರ್ತಕಿಯರ ಗುಂಪು ಅವನನ್ನು ಸುತ್ತುವರಿದು ನಿಂತಿತ್ತು. ಬಳಿಯಲ್ಲಿಯೇ ಮದಿರೆ ತುಂಬಿದ ಪಾತ್ರೆಗಳು! ರಾಕ್ಷಸ ಅವನಿಗೆ  ಎಚ್ಚರಿಕೆಯ ಮಾತನ್ನು ಹೇಳಿದ.

ಆದರೆ ನಂದರಾಜನಿಗೆ ಈ ಸಮಯೋಚಿತ ಸಲಹೆ ಬೇಕಾಗಿರಲಿಲ್ಲ.

ಅಮಾತ್ಯ ರಾಕ್ಷಸನಿಗೆ ಏನೊಂದು ತೋಚಲಿಲ್ಲ.ಅಲ್ಲಿ ಒಂದು ಕ್ಷಣವೂ ನಿಲ್ಲದೆ ಹೊರಟ. ನಡೆದುದನ್ನೆಲ್ಲ ಚಾಣಕ್ಯನಿಗೆ ಹೇಳಿದ.

ಚಾಣಕ್ಯ, “ಅಮಾತ್ಯ, ನಿನ್ನ ಹೃದಯದಲ್ಲಿ ದೇಶಭಕ್ತಿಯಿದೆ. ಇಂದು ದೇಶಕ್ಕೆ ಯವನರ ಆಕ್ರಮಣವೇ ಎಲ್ಲಕ್ಕಿಂತ ದೊಡ್ಡ ಆಪತ್ತಾಗಿದೆ. ನಂದರಾಜನಾಧರೂ ದುರ್ವ್ಯಸನಿ. ಆದರೆ ನಿನಗಂತೂ ಕರ್ತವ್ಯದ ಅರಿವಿದೆ. ನೀನೇ ಸೈನ್ಯದೊಡನೆ ಹೊರಡು. ಶತ್ರುಗಳನ್ನು ಭಾರತದಿಂದ ಬಡಿದದು ಓಡಿಸೋಣ!” ಎಂದ. ಆದರೆ ಅಮಾತ್ಯ ರಾಕ್ಷಸ ಒಪ್ಪಲಿಲ್ಲ.

ಚಾಣಕ್ಯನ ಹಿರಿದಾಸೆಗಳೆಲ್ಲವೂ ಕುಸಿದವು.

ಚಾಣಕ್ಯ ಮಗಧದಿಂದ ನೇರವಾಗಿ ತಕ್ಷಶಿಲೆಗೆ ಹೊರಟ. ತಕ್ಷಶಿಲೆಯಲ್ಲಿ ಚಾಣಕ್ಯನನ್ನು ಕಂಡ ಚಂದ್ರಗುಪ್ತನೆಂದ.

“ಗುರುಗಳೇ ! ಪಾಕ ಸಿದ್ಧವಾಗಿದೆ. ಪರಿಸ್ಥಿತಿ ನಮಗೆ ಅನುಕೂಲವಾಗಿದೆ. ಕೊನೆಯ ಏಟು ಕೊಡಲು ಸೂಕ್ತ ಸಮಯಕ್ಕೆ ಕಾಯಬೇಕಾಗಿದೆ”.

ಅನಂರ ತಾನು ಮಾಡಿದ ಕಾರ್ಯದ ಪೂರ್ಣ ವಿವರ ನೀಡಿದ.

“ನಂದರಿಂದ ಒಂದು ಚಿಕ್ಕ ಕಾಸಿನ ಸಹಾಯವೂ ದೊರಕದು” ಎಂದ ಚಾಣಕ್ಯ. ಮುಂದಿನ ಯುಕ್ತಿಯ ಕುರಿತು ಇಬ್ಬರೂ ಯೋಚಿಸತೊಡಗಿದರು.

ಸೆಲ್ಯೂಕಸ್ ನು ಚಂದ್ರಗುಪ್ತನ ಷರತ್ತುಗಳನ್ನೆಲ್ಲ ಒಪ್ಪಬೇಕಾಯಿತು.

ಅಲೆಗ್ಸಾಂಡರ್ ಹಿಂದಿರುಗಿದ,. ಆದರೆ

ಇತ್ತ ಅಲೆಗ್ಸಾಂಡರನ ಶಿಬಿರದಲ್ಲಿ ದೊಡ್ಡ ಕೋಲಾಹಲವೇ ನಡೆದಿತ್ತು. ಸ್ವದೇಶಕ್ಕೆ ಮರಳಬೇಕೆಂದು ಅವನ ಸೈನಿಕರು ಹಟ ತೊಟ್ಟರು. ಅವರಿಗೆ ಧೈರ್ಯ ಹೇಳೀದ. ಗದರಿಕಸಿದ, ಹೆದರಿಸಿದ.ಯಾವುದೂ ಸಫಲವಾಗಲಿಲ್ಲ. ಕಟ್ಟ ಕಡೆಗೆ ತನ್ನ ದೇಶಕ್ಕೆ ಮರು ಪ್ರಯಣ ಮಾಡಲು ನಿಶ್ಚಯಿಸಿದ.

ಆಲೆಗ್ಸಾಂಡರ್ ಬಹು ಕಷ್ಟದಿಂದ ಬೇಬಿಲಾನ್ ಸೇರಿದ.  ಆ ವೇಳೆಗೆ ಎದೆಯ ವ್ರಣ ತೀವ್ರಗೊಂಡಿತು. ಅದರಿಂದ ಊರು ಸೇರುವ ಮೊದಲೇ ಪ್ರಾಣ ನೀಗಿದ.

ಆದರೆ ಸಾಯುವ ಮೊದಲು ಸೇನಾಪತಿ ಸೆಲ್ಯೂಕಸ್ನ ಕರೆದ, ಆತನಿಂದ ಭಾರತವನ್ನು ಗೆಲ್ಲುವ ತನ್ನ ಹಿರಿದಾಶೆಯನ್ನು ಪೂರೈಸಬೇಕೆಂಧು ಪ್ರತಿಜ್ಞೆ ಮಾಡಿಸಿಕೊಂಡ.

ಅಲೆಗ್ಸಾಂಡರನು ಹಿಂತಿರುಗಿದ ಸುದ್ಧಿ ದೇಶದಲ್ಲೆಲ್ಲಾ ಹಬ್ಬಿತು. ಇಡೀ ದೇಶದ ಜನತೆ ಸಂತಸದಿಂದ ಉಸಿರಾಡುತ್ತಿತ್ತು. ಆದರೆ ಚಂದ್ರಗುಪ್ತ, ಚಾಣಕ್ಯರ ಮನಸ್ಸಿಗೆ ಇನ್ನೂ ಶಾಂತಿ , ಸಮಾಧಾನಗಳು ಸಿಕ್ಕಿರಲಿಲ್ಲ.

ಎರಡು ಮುಳ್ಳುಗಳು

ಯವನರ ಭಯ ಸಧ್ಯಕ್ಕೆ ದೂರವಾಯಿತೇನೋ ನಿಜ. ಆದರೆ ಇದರಿಂದ ಭಾರತ ಬಲಿಷ್ಠವಾಯಿತೆಂದು ಹೇಳುವಂತಿರಲಿಲ್ಲ. ಅಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಭಾರತದ ನೆಲವನ್ನು ಒಂದೇ ಆಡಳೀತದ ಕೆಳಗೆ ತರುವುದಕ್ಕೆ ಅಡಚಣೆಗಳಿದ್ದವು. ಅವೇ ಮಗದ ನಂದರಾಜ ಮತ್ತು ಪರ್ವತಕ.

ಪರ್ವತಕನಿಗೆ ಭಾರತದ ಚಕ್ರವರ್ತಿಯಾಗುವ ಹೆಬ್ಬಯಕೆ. ತನ್ನ ಆಸೆಯ ಪೂರ್ತಿಗಾಗಿ ಸೆಲ್ಯುಕಸ್‌ನ ಸಹಾಯ ಪಡೆಯಲು ಪ್ರಯತ್ನಿಸುತ್ತಿದ್ದ. ಪರಕೀಯನನ್ನು ನೆರವಿಗೆ  ಕರೆಯುವುದೆಂದರೆ ಬೀದಿಯ ಮಾರಿಯನ್ನು ಮನೆಗೆ ಕರೆದಂತೆ ಎಂಬುವುದು ಅವನಿಗೆ ಅರಿವಾಗದೇ ಹೋಯಿತು.

ಈ ಎರಡು ಮುಳ್ಳುಗಳನ್ನು ಕೀಳುವುದಕ್ಕಾಗಿ ಚಾಣಕ್ಯ- ಚಂದ್ರಗುಪ್ರು ಹಂಚಿಕೆ ಹಾಕತೊಡಗಿದರು.

“ಹಾಗಾದರೆ ಮೊದಲ ಯುದ್ಧ ಪರ್ವತಕನ ಜೊತೆಗೆ ನಡೆದು ಹೋಗಲಿ” ಎಂದು ಆವೇಶದಿಂದ ಚಂದ್ರಗುಪ್ತನೆಂದ.

“ಹಾಗಲ್ಲ ಚಂದ್ರಗುಪ್ತ! ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು. ಪರ್ವತಕನ ಮಗಧದ ಮೇಲೆ ಆಕ್ರಮಣ ಮಾಢುವಂತೆ ಅವನನ್ನು ಪುಸಲಾಯಿಸೋಣ. ನಂದನನ್ನು ಅವನು ಸೋಲಿಸಿಯೇ ತೀರುತ್ತಾನೆ. ಆದರೆ ಅವನ ಆಡಳೀತ ಮಗಧದಲ್ಲಿ ತಳವೂರುವ ಮೊದಲೇ ನೀನು ಮಗಧದ ಬಂಧುವಿನಂತೆ ಮೇಲೆ ಬಂದು ಪರ್ವತಕನೊಡನೆ ಯುದ್ಧಕ್ಕೆ ಸಿದ್ಧನಾಗಬೇಕು. ಯುದ್ಧದಲ್ಲೋ ಅಥವಾ ಇನ್ನಾವುದಾದರೂ ಒಳಸಂಚಿನಿಂದಲೋ ಪರ್ವತಕನನ್ನು ಮುಗಿಸಬೇಕು. ಆಗ ಮಗಧದ ಜನತೆ ನಿನ್ನನ್ನು ತಮ್ಮ ಪಾಲಿನ ದೇವರೆಂದು ತಿಳಿದು ಪಟ್ಟಕ್ಕೆ ಏರಿಸುತ್ತಾರೆ. ಅದಕ್ಕಗಿಕ ನಾನೀಗಲೇ ಹೋಗಿ ನಂದನ ವಿರುದ್ಧ ಜನರನ್ನು ರೊಚ್ಚಿಗೆಬ್ಬಿಸಿ ಸಂಘಟಿಸುತ್ತೇನೆ. ನೀನು ಪರ್ವತಕನನ್ನು ಸಂಧಿಸಿ ಮಗಧದ ಆಕ್ರಮಣದ ಸಿದ್ಧತೆ ನಡೆಸು” ಎಂದು  ಉಪದೇಶ ನೀಡಿದ ಚಾಣಕ್ಯ.

“ಗುರುಗಳೇ! ಪರ್ವತಕನಿಗೆ ಹೀಗೆ ಎರಡು ಬಗೆಯುವುದು ಎಷ್ಟರಮಟ್ಟಿಗೆ ಯೋಗ್ಯ? ನನ್ನ ಜಾಗದಲ್ಲಿ ಅವನೇ ಭಾಋತದ ಚಕ್ರವರ್ತಿ ಆಗಲಿ ಬಿಡಿ! ನನಗೆ ಬೇಕಾಗಿರುವುದು ಭಾರತವೆಲ್ಲ ಒಂದಾಗಿ ಒಗ್ಗಟ್ಟಿನಿಂದಿರಲಿ ಎಂದಷ್ಟೇ!  ಇನ್ನು ಚಕ್ರವರ್ತಿ ಯಾದರೇನೆಂತೆ?”

“ಅದೇ ತಪ್ಪು ಚಂದ್ರಗುಪ್ತ! ಇನ್ನೂ ಸ್ವಲ್ಪ ಅನುಭವ ಬೇಕು ನಿನಗೆ. ನೀನು ಚಕ್ರವರ್ತಿಯಾಗಲಿರುವುದು ನಿನಗಾಗಿ ಅಲ್ಲ, ಭಾರತಕ್ಕಾಗಿ. ಪರ್ವಕತನು ದುರಾಸೆಯವನು,. ಅವನು ಎಷ್ಟೇ ವೀರನಾದರೂ ಸರಿಯೇ, ಸಾಮ್ರಾಟನಾಗಲು ಯೋಗ್ಯನಲ್ಲ. ಭಾರತದ ಸಾಮ್ರಾಟ ಪಟ್ಟಕ್ಕೆ ಸ್ವಾರ್ಥ ತ್ಯಾಗಿಯಾಧ, ಸಂಯಮಿಯಾದ, ದೃಢತೆಯಿಂದ ಕೂಡಿದ, ಜನಸೇವೆಗೆ ಉತ್ಸುಕರಾಗಿರುವ ವ್ಯಕ್ತಿಯೇ ಬೇಕು. ಆ ಗುಣಗಳನ್ನು ದೇವರು ನಿನಗೆ ಇತ್ತೀದ್ದಾನೆ. ನಾಳೆ ಭಿಕ್ಷಕುಕನಾಗಬೇಕಾಗಿ ಬಂದರೆ ಅದಕ್ಕೂ ಸಿದ್ಧನಿರಬೇಕು”.

ಕಾರ್ಯಾರಂಭ

ಪಾಟಲಿಪುತ್ರಕ್ಕೆ ಕಾಲಿಟ್ಟುದ್ದೇ ತಡ, ಚಾಣಕ್ಯ ರಾಜಯಂತ್ರವನ್ನು ಕೊರೆಯುವ ಕೆಲಸ ಶುರುಮಾಡಿದ.  ನಂದನ ವಿರುದ್ಧ ಜನರಲ್ಲಿ ಅಸಂತಗೋಷ ಹುದುಗಿತ್ತು. ಅದನ್ನು ಚಾಣಕ್ಯ ಪೂರ್ತಿಯಾಗಿ ತನ್ನ ಅನುಕೂಳಕ್ಕೆ ಬಳಸಿಕೊಂಡನು. ಸೇನಾಧಿಪತಿಯನ್ನು ತನ್ನ ಕಡೆಗೆ ಎಳೆದುಕೊಂಡನು.

ಅತ್ತ ಚಂದ್ರಗುಪ್ತನು ತನ್ನಪಾಲಿನ ಕೆಲಸವನ್ನು ಸುವ್ಯವಸ್ಥಿತವಾಗಿ ಮಾಡಿದ. ಅಲೆಗ್ಸಾಂಡರನು ಹೋದ ಬಳೀಕ ವಾಯುವ್ಯ ಗಡಿನಾಡು, ಸಿಂಧು ಮತ್ತು ಈಗಿನ ರಾಜಸ್ಥಾನದ ಸಣ್ಣ ಪುಟ್ಟ ರಾಜ್ಯಗಳಲ್ಲಿ ತನ್ನ ಪ್ರಭಾವ ಬೀರಿದ. ಈವರೆಗೂ ಯವನರ ಗುಲಾಮರಾಗಿದ್ದ ಜನರಲ್ಲಿ ಸ್ವಾತಂತ್ಯ್ರದ ಕಹಳೆ ಮೊಳಗಿಸಿದ.  ಅವರಲ್ಲಿ ಹೊಸ ಹುರುಪು ಹುಟ್ಟಿಸಿದ.  ಅವರೆಲ್ಲರಿಗೂ ಈಗ ಚಂದ್ರಗುಪ್ತನೇ ನಾಯಕ.

ಅನಂತರ ಚಂದ್ರಗುಪ್ತನು ಪರ್ವಕತನನ್ನು ಕಂಡು ಮಾತುಕತೆ ನಡೆಸಿದ. ಮಗಧದ ಅಕ್ರಮಣಕ್ಕೆ ಪರ್ವತಕನು ಒಪ್ಪಿ ಸಿದ್ಧನಾದ. ಭಾರತದ ಭಾವಿ ಸಾಮ್ರಾಟನಾಗುವ ಕನಸು ಕಂಡ. ಮುಂದಿನ ತಿಂಗಳು ನಡೆಯುವ ರಾಜಕುಮಾರನ ಯುವರಾಜ್ಯಭಿಷೇಕದಂದು ಮಗಧವನ್ನು ಆಕ್ರಮಣ ಮಾಡಬೇಕೆಂದು ಚಾಣಕ್ಯನು ಸಂದೇಶವನ್ನು ಚಂದ್ರಗುಪ್ತನಿಗೆ ಗೂಢಚಾರನೊಬ್ಬನ ಮೂಲಕ ಕಳೂಹಿಸಿದ.

ಕೊನೆಯ ದಿನ

ಮಗಧ ರಾಜಭವನದಲ್ಲಿ ಸಂಭ್ರಮವೇ ಸಂಭ್ರಮ. ಈ ವೈಭವ ಇಡೀ ಪಾಟಲಿಪುತ್ರವನ್ನು ವ್ಯಾಪಿಸಿತು.

ಇವೆಲ್ಲದರ ನಡುವೆ ಚಾಣಕ್ಯನಿಗೂ ಬಿಡುವಿಲ್ಲದಷ್ಟು ಕೆಲಸ.

ಪಟ್ಟಾಭಿಷೇಕದ ಮುಹೂರ್ತ ಸಮಿಪಿಸಿತು. ರಾಜ ಮಹಲಿನಿಂದ ಮಹಾರಾಜ, ಯುವರಾಜ, ಅಮಾತ್ಯ ಹಾಗೂ ಸಕಲ ಸಭಾಸದರ ಉತ್ಸವ ಹೊರಟಿತು. ಜಯ ಘೋಷ ದಶದಿಕ್ಕುಗಳನ್ನು ಹರಡಿತು.

ಅಷ್ಟರಲ್ಲಿ ದೂತನೊಬ್ಬನು ಕೆಟ್ಟ ವಾರ್ತೆಯೊಂದನ್ನು ತಂದ-

“ಸರ್ವನಾಶವಾಯಿತು ಅಮಾತ್ಯರೇ! ಪಾಟಲಿಪುತ್ರಕ್ಕೆ ಶತ್ರುಗಳು ಮುತ್ತಿಗೆ ಹಾಕಿದ್ದಾರೆ”.

ಅಮಾತ್ಯ ಕಂಗಾಲಾದ. ಅದರೂ ಕ್ಷಣ ಮಾತ್ರದಲ್ಲಿ ಅವನು ಚೇತರಿಸಿಕೊಂಡ. ಮೆರವಣಿಗೆಯನ್ನು  ತಕ್ಷಣ ನಿಲ್ಲಿಸಲು ಆಜ್ಞೇಯಾಯಿತು.  ಮಹಾರಾಜನಂದನಿಗೆ ಇದೊಂದು ಅರ್ಥವಾಗಲಿಲ್ಲ. ಅಭಿಷೇಕವನ್ನು ಇನ್ನೇಂದಾದರೂ ಮಾಡೋಣವೆಂದು ಅಮಾತ್ಯ ರಾಜನನ್ನುಬೇಡಿಕೊಂಡ. ಆದರೆ ರಾಜನೆಲ್ಲಿ ಅದಕ್ಕೆ ಒಪ್ಪಬೇಕು?

ಅದೇ ಕ್ಷಣ ಝನರ ಗುಂಪಿನಿಂದ ಥಳತಳಿಸುವ ಭರ್ಜಿಯೊಂದು ನೇರವಾಗಿ ಹೋಗಿ ಮಹಾರಾಜನ ನಂದನ ಎದೆಗೆ ನಾಟಿಕೊಂಡಿತು.  ಆತನ ಜೀವ ಅಲ್ಲಿಯೇ ಹಾರಿ ಹೋಯಿತು.

ಒಮ್ಮಿಂದೊಮ್ಮೆಗೆ ಮಹಾರಾಜ ಚಂದ್ರಗುಪ್ತನಿಗೆ ಜಯವಾಗಲಿ:” ಎಂಬ ಘೊಷಣೆ ಮೊಳಗಿತು.

ಚಂದ್ರಗುಪ್ತನೇ ಆ ಕ್ರಾಂತಿಯ  ಮುಖ್ಯಸ್ಥನಿಗೆ ರಾಕ್ಷಸನಿಗೆ ಅರಿವಾಯಿತು.

ಕೂಡಲೇ ರಾಕ್ಷನು ತನ್ನ ಸೇನಾಪತಿಯನ್ನು ಕರೆದ. ಆದರೆ ಆ ವೇಳೆಗೆ ಸೇನಾಪತಿ ಅಲ್ಲಿಂದ ಮಾಯವಾಗಿದ್ದ!

ಹೀಗೆ ಸೈನ್ಯದ ನೆರವಿನ ಆಸೆ ಮಣ್ಣುಗೂಡಿತು. ಅಮಾತ್ಯನ ಕಣ್ಣಿಗೆ ಕತ್ತಲು ಕವಿಯಿತು. ಆದರೂ ಅವನು ಸುಮ್ಮನೆ ಕೂಡಲಿಲ್ಲ. ರಾಜನ ಅಂಗರಕ್ಷಕರು ಮತ್ತು ಖಾಸಗಿ ಸೇನೆಯನ್ನು ಒಟ್ಟಗೂಡಿಸಿದ. ವೀರಾವೇಶದಿಂದ ಹೋರಾಡಿದ. ಅದರೆ ಅದೆಲ್ಲ ವ್ಯರ್ಥವಾಯಿತು. ಯುದ್ಧದಲ್ಲಿ ಯುದ್ಧದಲ್ಲಿ ಯವರಾಜನ ದೇಹ ತುಂಡು ತುಂಡಾಯಿತು. ನಂದ ಕುಲ ಪೂರ್ಣನಾಶವಾಯಿತು. ಚಾಣಕ್ಯನ  ಪ್ರತಿಜ್ಞೆ ನೆರವೇರಿತು ! ಒಂದು ಮುಳ್ಳನ್ನು ಕಿತ್ತಂತಾಯಿತು!

ಚಂದ್ರಗುಪ್ತ ಮಹಾರಾಜ

ಆಸೆಬುರುಕ ಪರ್ವತಕನು ಮಗಧ ಸಾಮ್ರಾಟನಾಗಲು ಉತ್ಸಾಹದಿಂದ ಬಂದಿದ್ದ. ಆದರೆ ಚಂದ್ರಗುಪ್ತನ ಹೆಸರಿನಲ್ಲಿ ಜಯಘೋಷ ಕೇಳುತ್ತಲೇ ಅವನು ಆಶ್ಚರ್ಯ ಚಕಿತನಾದ. ಅವನ ಸಹಕಾರಿಗಳಾಗಿದ್ದ ಸಮಸ್ತ ರಾಜರೂ ಚಂದ್ರಗುಪ್ತನ ಪಕ್ಷವನ್ನೇ ವಹಿಸಿದ್ದರು.  ಅವರೆಲ್ಲರಿಗಿಂತಲೂ ಹೆಚ್ಚಾಗಿ ಮಗಧದ ಸೈನ್ಯ ಹಾಗೂ ನಾಗರಿಕರು ಚಂದ್ರಗುಪ್ತನನ್ನೇ ಅತ್ಯುತ್ಸಾಹದಿಂದ ಸ್ವಾಗತಿಸುತ್ತಿದ್ದರು. ತನ್ನ ಸಹಾಯಕ್ಕೆ ಬರುವವರು ಯಾರು? ತಾನು ಒಬ್ಬಂಟಿಗನಾದೆನಲ್ಲ? ಎಂದು ಪರ್ವತಕನ ಚಿಂತಿಸಿದ.

ಮರುಕ್ಷಣವೇ ಅವನಿಗೊಂದು ಉಪಾಯ ಹೊಳೆಯಿತು. -ಅಲೆಗ್ಸಾಂಡರನ ಸೇನಾಧಿಪತಿ ಸೆಲ್ಯೂಕಸ್ನ ನೆನಪಾಯಿತು. ಮಗಧವನ್ನು ಆಕ್ರಮಿಸಲು ಆತನನ್ನು ಕರೆದರೆ ಹೇಗೆ?

ಪರ್ವತಕ ತಡಮಾಡಲಿಲ್ಲ. ಭಾರತದ ಮೇಲೆ ಆಕ್ರಮಣ ಮಾಡಬೇಕೆಂದು ಅವನು ಸೆಲ್ಯೂಕಸ್ ನಿಗೆ ಕೂಡಲೇ ಕರೆಯೋಲೆ ಕಳೂಹಿಸಿದ.  ಅವನ ಉತ್ತರಕ್ಕಾಗಿ ಕಾಯುತ್ತ ನಿಂತ.

ಚಾಣಕ್ಯ ಗೂಢಚಾರರು ಎಲ್ಲೆಲ್ಲೂ ಇದ್ದರು. ಪರ್ವತಕನ ಒಳಸಂಚು ಚಾಣಕ್ಯನಿಗೆ ತಿಳಿಯಿತು. ಈ ಸಂದರ್ಭದಲ್ಲಿ ಸುಮ್ಮನಿದರೆ ಪಾಪವೇ ಸರಿ ಎಂದು ಭಾವಿಸಿದ. ಈಗಂತೂ ಪರ್ವತಕನು ದೇಶದ್ರೋಹಿ ಬೇರೆ ಆಗಿದ್ದ. ಆದುದರಿಂದ ಅವನನ್ನು ಕೊಲ್ಲುವ ಒಂದು ಉಪಾಯ ಮಾಡಿದ.

ಪರ್ವತಕ ವೀರನು ಸೇರಿ. ಆದರೆ ಅವನು ವಿಷಯಾಸಕ್ತನಾಗಿದ್ದನು. ಈ ದೌರ್ಬಲ್ಯದ ಲಾಭವನ್ನು ಚಾಣಕ್ಯನು ಉಪಯೋಗಿಸಿಕೊಂಡ. ಒಂದು ದಿನ ಸುಂದರ ವಿಷಕನ್ಯೆಯೊಬ್ಬಳನ್ನು ಪರ್ವತಕನ ಬಳಿ  ಕಳೂಹಿಸಿದ. ಮರುದಿನವೇ ಪರ್ವತಕ ಸತ್ತು ಹೆಣವಾಗಿ ಬಿದ್ದಿದ್ದ!

ಅಂತೂ ಮುಳ್ಳಿನಿಂದಲೇ ಮುಳ್ಳನ್ನು ತೆಗೆದಂತಾಯಿತು.

ಇಡೀ ಉತ್ತರ ಭಾರತದ ರಾಜಮಹಾರಾಜರು ಮತ್ತು ಗಣ ರಾಜ್ಯಗಳ ಅಧಿಕಾರಿಗಳು ಆಗ ಮಗಧದಲ್ಲಿ ಇದ್ದರು. ತಡವಿಲ್ಲದೆ, ಚಂದ್ರಗುಪ್ತನ ರಾಜ್ಯಾಭಿಷೇಕವು ವಿಜೃಂಬಣೆಯಿಂದ ನೆರವೇರಿತು.

ಆದರೆ ಭಾರತವಿನ್ನೂ ಸರ್ವಸ್ವತಂತ್ರವಾಗಿದೆಯೆಂದು ಹೇಳುವಂತಿಲ್ಲ.

ಇತ್ತ ಸೆಲ್ಯೂಕಸ್ನಿಗೆ ಪರ್ವತಕ ಪತ್ರ ಕೈಸೇರಿತು. ಅವನಿಗೆ ಅದೃಷ್ಟವೇ ಬಂದು ಬಾಗಿಲನ್ನು ತಟ್ಟಿದಂತಾಯಿತು. ಪರ್ವತಕನ ಸಹಾಯದಿಂದ ಮಗಧವನ್ನು ಮೊದಲು ಗೆಲ್ಲುವುದು, ಬಳಿ ಪರ್ವತಕನ ಕೈಬಿಡುವುದು ಇದೇ ಸೆಲ್ಯೂಕಸ್ನ ಹಂಚಿಕೆ.

ಸೆಲ್ಯೂಕಸ್ನ ದಾಳಿ

ಸೆಲ್ಯೂಕಸ್ನು ತನ್ನೆಲ್ಲ ಸಮರ ಶೂರರಲ್ಲಿ ಉತ್ಸಾಹ ತುಂಬಿದ. ಭಾರತದಲ್ಲಿ ಅದೆಷ್ಟು ಅಪಾರ ಧನರಾಶಿ ದೊರೆಯುವುದೆಂದು ವರ್ಣಿಸಿದ. ಸೇನಾಧಿಪತಿಗಳ ಬಾಯಲ್ಲಿ ನೀರೂರಿತು. ಸರಿ, ಯುದ್ಧದ ಘೋಷಣೆ ಆಗಿಯೇ ಹೋಯಿತು.

ಯವನರ ಸೇನಾಸಾಗರ ಭಾರತದತ್ತ ಹರಿಯಿತು. ಪರ್ವತಕನ ಮತ್ತು ಅಮಾತ್ಯ ರಾಕ್ಷರು ಭಾರತದಲ್ಲಿ ತಮ್ಮ ಸ್ವಾಗತಕ್ಕೆ ಕಾದು ನಿಂತಿರುತ್ತಾರೆಂದು ಅವರೆಲ್ಲರೂ ಭಾವಿಸಿದ್ದರು.

ಸೆಲ್ಯೂಕಸ್ ನು ಸಿಂಧು ನದಿಯ ದಡದಲ್ಲಿ ತಂಗಿದ್ದ ಸುದ್ಧಿಯು ಗೂಢಚಾರರ ಮುಖಾಂತರ ಚಂದ್ರಗುಪ್ತನಿಗೆ ತಲುಪಿತು. ಯವನರು ಮಗಧದವರೆಗೆ ಬರಲು ಚಂಧ್ರಗುಪ್ತ ಅವಕಾಶ ನೀಡಲಿಲ್ಲ. ತನ್ನ ಸೇನೆಯನ್ನು ಸಿಂಧುವಿನಲ್ಲಿ ಎದುರು ಬದಿಯಲ್ಲಿ ನಿಲ್ಲಿಸಿದ. ಭಾರತದೊಳಗೆ ಯವನರ ಮೊದಲ ಹೆಜ್ಜೆಗೆ ಸುಸಂಘಟಿತ ಪ್ರತಿಭಟನೆ!

ಸೆಲ್ಯೂಕಸ್ ನು ಸಿಂಧುವನ್ನು ಕತ್ತಲೆಯ ಮರೆಯಲ್ಲಿ ಕಪಟದಿಂದ ದಾಟಲು ಪ್ರಯತ್ನಿಸಿದ. ಇದೇ ತಂತ್ರ ಹಿಂದೆ ಅಲೆಗ್ಸಾಂಡರನು ಹೂಡಿದ್ದ. ಆಧರೆ ಮೊದಲಿಗೆ ಅನುಭವದಿಂದ ಪಾಟ ಕಲಿಯದಿದ್ದವರು ಈಗ ಭಾರತದಲ್ಲಿ ಯಾರೂ ಇರಲಿಲ್ಲ.

ಚಂದ್ರಗುಪ್ತನು ಮಹಾಪರಾಕ್ರಮಿ ಯೋಧ ಮಾತ್ರವಲ್ಲದೇ ಕುಶಲ ಸೇನಾ ಸಂಚಾಲಕನೂ ಆಗಿದ್ದ.

ಸೆಲ್ಯೂಕಸ್ನ ಯುದ್ಧ ತಂತ್ರಕ್ಕೆ ಪ್ರತಿಯಾಗಿ ಚಂದ್ರ ಗುಪ್ತನು ಒಂದು ತಂತ್ರ ಹೂಡಿದ. ಒಂದು ಪಡೆಯನ್ನು ನದಿಯ ಮೇಲುಭಾಗಕ್ಕೂ ಇನ್ನೊಂದು ಪಡೆಯನ್ನು ಕೆಳಭಾಗಕ್ಕೂ ಮೊದಲೇ ಕಳೂಹಿಸಿದ್ದ. ನದಿಯನ್ನು ದಾಟಲು ಇಬ್ಬದಿಗಳಿಂದಲೂ ಶತ್ರು ಸೈನ್ಯವನ್ನು ಮುತ್ತಲು ಅನು ತನ್ನವರಿಗೆ ಆಜ್ಞಾಪಿಸಿದ. ಆರಿಸಿದ ಬಿಲ್ಲುಗಾರರನ್ನು ನದಿಯ ಉತ್ತರದಲ್ಲಿ ಮರಗಿಡಗಳ ಹಿಂದೆ ಅಡಗಿಸಿ ನಿಲ್ಲಿಸಿದ.

ಸಿಂಧು ನದಿಯ ನಡುವೆ ಒಂದು ದೊಡ್ಡ ನಡುಗಡ್ಡೆ ಇತ್ತು. ಅದೇ ಭಾಘದಲ್ಲಿ ಸೆಲ್ಯೂಕಸ್ ನದಿ ದಾಟಲು ನಿರ್ಧರಿಸಿದ.

ಯವನರ ದೋಣಿಗಳು ಒಂದೊಂದಾಗಿ ದ್ವೀಪದ ದಡ ಮುಟ್ಟುತ್ತಿದ್ದವು. ಸೈನಿಕರು ಒಬ್ಬೊಬ್ಬರಾಗಿ ಕೆಳಗೆ ಇಳಿಯುತ್ತಿದ್ದರು. ಅವರಿಗೆ ತಮ್ಮ ಯಶಸ್ಸಿನಲ್ಲಿ ಪೂರಾ ಭರವಸೆಯುಂಟಾಯಿತು.

ಸೋರತ ಸೆಲ್ಯೂಕಸ್

ಅಷ್ಟರಲ್ಲಿ “ಸೊಯ್” ಎಂದು ಕತ್ತಲಲ್ಲಿ ಒಂದು ಬಾಣ ಬಂದು ಅಂಬಿಗನ ಎದೆಯನ್ನು ಹೊಕ್ಕು ಬೆನ್ನಿನಲ್ಲಿ ಬಂತು. ಅಂಬಿಗನು ಚೀರುತ್ತಾ ನೀರಿನಲ್ಲಿ ಬಿದ್ದ. ನಡು ನೀರಿನಲ್ಲಿ ಕೂಗೆದ್ದಿತು. ಈಗನೂರಾರು ಬಾಣಗಳು ಸುರಿಮಳೆ ಪ್ರಾರಂಭವಾಯಿತು. ಏನಾಗುತ್ತಿದೆಯೆಂದು ಗೊತ್ತಾಗುವ ಮೊದಲೇಶತ್ರು ಸೈನಿಕರು ಸತ್ತು ಕೆಳಗೆ ಉರುಳತೊಡಗಿದರು. ಯವನರ ಸೇನೆಯಲ್ಲಿ ಹಾಹಾಕಾರ ಹರಡಿತು. ಬಾಣಗಳು ಎಲ್ಲಿಂದ, ಯಾರಿಂದ ಬರುತ್ತಿವೆ ಎಂಬುವುದು ಅವರಿಗೆ ಗೊತ್ತಾಗಲಿಲ್ಲ.

ಚಂದ್ರಗುಪ್ತನ ಯೋಧರು ಶಬ್ದವೇದಿ ಬಾಣಗಳನ್ನು ಪ್ರಯೋಗಿಸುತ್ತಿದ್ದರು. ಕತ್ತಲಿನಲ್ಲಿಯೂ ಬಾಣಗಳನ್ನು ಗುರಿಮುಟ್ಟಿಸುವ ನೈಪುಣ್ಯ, ಕೈಚಳಕ ಅವರಲ್ಲಿತ್ತು. ಸಿಂಧೂ ಜಲ ರಕ್ತದಿಂದ ಕೆಂಪಾಗತೊಡಗಿತು.

ಯವನ ಸೇನೆಗೆ ಹಿಂದಿರುಗುವಂತೆ ಆಜ್ಞೆಯಾಯಿತು. ಆದರೆ ಬಾಣಗಳ ಸುರಿಮಳೆ ನಿಲ್ಲಲಿಲ್ಲ. ದಡ ಸೇರಿಕೊಳ್ಳುವಷ್ಟರಲ್ಲಿಯೇ ಎದುರಿನಿಂದ ದಾಳಿ ಪ್ರಾರಂಭವಾಯಿತು. ಚಂದ್ರಗುಪ್ತನ ಸೇನೆ ನದಿಯನ್ನು ದಾಟಿ ಹೋಗಿ ಅತ್ತಕಡೆ ನಿಂತಿತ್ತು. ಸೆಲ್ಯೂಕಸ್ ನಿಗೆ ಗಾಬರಿಯಾಯಿತು.  ನಾಲ್ಕು ಕಡೆಗಳಿಂದಲೂ ಯವನ ಸೇನೆಗೆ ಹೊಡೆತ ಬೀಳತೊಡಗಿತು. ಸೆಲ್ಯೂಕಸನ ಸೈನ್ಯ ಕಂಗೆಟ್ಟು ಓಡತೊಡಗಿತು.

ಸೂರ್ಯೊದಯವಾದಾಗ ಪೂರ್ವ ಮತ್ತು ಪಶ್ಚಿಮ ತಟಗಳೆರಡೂ ರಕ್ತಮಯವಾಗಿದ್ದವು!

ಬೆಳಕು ಮೂಡುವುದರೊಳಗೆ ಅರ್ಧ ಶತ್ರು ಸೈನ್ಯ ನಷ್ಟಹೊಂದಿತ್ತು. ಅನಂತರ ಇಡೀ ದಿನ ಯುದ್ಧ ಘೋರವಾಗಿಯೇ ಮುಂದುವರೆಯಿತು. ಆಧರೆ ಯವನ ಸೈನಿಕರ ಆಸೆ, ಭರವಸೆಗಳೆಲ್ಲವೂ ಹಾರಿಹೋಗಿದ್ದವು. ಸಂಧಿಯ ಪ್ರಸ್ತಾಪ ಮಾಡುವುದೇ ತನಗೆ ಹಿತವೆಂದು ಸೆಲ್ಯೂಕಸ್ ನು ನಿರ್ಧರಿಸಿದನು.

ಆದರೆ  ನಿಜಕ್ಕೂ ಕರಾರಿನ ಪ್ರಶ್ನೆ ಇರಲಿಲ್ಲ. ವಿಜಯ ಚಂದ್ರಗುಪ್ತನದಾಗಿತ್ತು. ಅವನು ಹೇಳಿದುದಕ್ಕೆಲ್ಲಾ ಸೆಲ್ಯೂಕಸ್ ನು  ಒಪ್ಪಲೇಬಾಕಾಯಿತು.

ಚಾಣಕ್ಯನೇ ಒಪ್ಪಂದದ ಷರತ್ತುಗಳನ್ನು ನಿಶ್ಚಯಿಸಿದನು. ಅದಕ್ಕನುಸಾರವಾಗಿ ಭಾರತದ ಮೇಲೆ ಮತ್ತೆಂದೂ ಆಕ್ರಮಣ ಮಾಡುವುದಿಲ್ಲವೆಂದು ಸೆಲ್ಯೂಕಸ್ ನು ಪ್ರತಿಜ್ಞೆ ಮಾಡಿದನು. ತನ್ನ ರಾಜ್ಯದ ನಾಲ್ಕು ಪ್ರಾಂತಗಳನ್ನು ಚಂದ್ರಗುಪ್ತನಿಗೆ  ಬಿಟ್ಟುಕೊಟ್ಟನು.  ತನ್ನ ಮಗಳನ್ನು ಚಂದ್ರಗುಪ್ತನಿಗೆ ಕೊಟ್ಟು ಮದುವೆ ಮಾಡಿದನು. ಮೇಗಸ್ತನೀಸ್ ಎಂಬುವನನ್ನು ಗ್ರೀಕ್ ರಾಯಭಾರಿಯಾಗಿ ಚಂದ್ರಗುಪ್ತನ ಆಸ್ಥಾನಕ್ಕೆ ಕಳೂಹಿಸಿದನು. ಭಾರತದ ಐದು ನೂರು ಯದ್ಧದ ಆನೆಗಳನ್ನು ಯವನರಿಗೆ ಚಂದ್ರಗುಪ್ತನು ಉಡುಗೊರೆಯಾಗಿ ನೀಡಿದನು.

ಭಾರತವೂ ಒಗ್ಗೂಡಿ, ಶಕ್ತಿ ಗಳಿಸಿ,ನಿಂತೆ ಏನೆಲ್ಲ ಸಾಧಿಸಬಹುದೆಂದು ಈ ಯುದ್ಧ ತೋರಿಸಿಕೊಟ್ಟಿತು.

ಇದಾದ ಬಳಿಕ ಚಂದ್ರಗುಪ್ತನು ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ಉತ್ತರ ಕರ್ನಾಟಕಗಳನ್ನು ಗೆದ್ದನು. ಇಡೀ ಭಾರತವನ್ನು ಒಂದೇ ಸೂತ್ರದಲ್ಲಿ ಜೋಡಿಸುವುದೇ ಅವನ ಉದ್ದೇಶವಾಗಿತ್ತು. ಕೆವಲ ಹನ್ನೆರಡು ವರ್ಷಗಳೊಳಗೆ ಅಷ್ಟೆಲ್ಲವನ್ನೂ ಪೂರೈಸಿದ ಮಹಾಸಾಧನೆ ಅವನದು.

ಉತ್ತಮ ರಾಜ್ಯಭಾರ

ಮಹಾರಾಜ ಚಂದ್ರಗುಪ್ತನು ಉತ್ತಮ ಆಡಳಿತಗಾರನೂ ಆಗಿದ್ದನು. ಆತನ ಸಾಮ್ರಾಜ್ಯವು ಇಡೀ ಉತ್ತರ ಭಾರತವನ್ನು ಚಾಚಿತ್ತು. ವಾಯುವ್ಯ ಭಾಗದಲ್ಲಿ ಮಧ್ಯ ಏಷ್ಯಾದವರೆಗೂ ಹರಡಿತ್ತು. ದಕ್ಷಿಣದಲ್ಲಿ ಮಹಾರಾಷ್ಟ್ರ, ಆಂದ್ರಪ್ರದೇಶ ಹಾಗೂ ಕರ್ನಾಟಕದ ಉತ್ತರ ಭಾಗವನ್ನು ಒಳಗೊಂಡಿತು.

ಇಷ್ಟು ಬೃಹರತ್ ಸಾಮ್ರಾಜ್ಯವನ್ನು ಅಂದಿನ ಕಾದಲ್ಲಿ ಆಳುವುದು ಸುಲಭವಾಗಿರಲಿಲ್ಲ. ಇಂದಿನಂತೆ ರೈಲು, ವಿಮಾನ, ದೂರವಾಣಿ ಮುಂತಾದ ಸಾರಿಗೆ ಸಂಪರ್ಕ ಸಾಧನಗಳು ಇರಲೇ ಇಲ್ಲ. ಆದರೂ ಚಂದ್ರಗುಪ್ತನು ಈ ಸಮಸ್ಯೆಯನ್ನು ತನ್ನ ಸಂಘಟನಾ ಸಾಮರ್ಥ್ಯದಿಂದ ಪರಿಹರಿಸಿದನು.

ವಿಶಾಲವಾದ ಸಾಮ್ರಾಜ್ಯದಲ್ಲಿ ಚಕ್ರವರ್ತಿಯೇ ಎಲ್ಲ ಅಧಿಕಾರವನ್ನೂ ತನ್ನ ಕೈಯಲ್ಲಿಟ್ಟುಕೊಂಡರೆ ಆಡಳಿತ ಸಾಗಲಾರದು. ಒಳ್ಳೆಯ ಆಡಳೀತಾಧಿಕಾರಿಗಳನ್ನು ಆರಿಸುವುದು, ಅವರಿಗೆ ಹೊಣೆಯನ್ನು ವಹಿಸಿಕೊಡುವುದು, ಆ  ಹೊಣೆಯನ್ನು ನಿರ್ವಹಿಸಲು ಅಗತ್ಯವಾದ ಅಧಿಕಾರವನ್ನು ಕೊಡುವುದು, ಚಂದ್ರಗುಪ್ತ ಆಡಳಿತಕ್ಕೆ ಅನುಕೂಲವಾಗುವಂತೆ ತನ್ನ ಸಾಮ್ರಾಜ್ಯವನ್ನು ಪ್ರಾಂತಗಳನ್ನಾಗಿ ವಿಭಜಿಸಿದ. ಆ ಪ್ರಾಂತಗಳ ಆಡಳಿತಕ್ಕಾಗಿ ತಾನು ಆಯ್ಕೆ ಮಾಡಿದ ಪ್ರಾಂತಾಧಿಕಾರಿಗಳನ್ನು ನೇಮಿಸಿದ.  ಈ ಬಗೆಯ ವಿಕೇಂದ್ರೀಕೃತ ಆಡಳಿತ ಕ್ರಮವನ್ನು ಪ್ರಪ್ರಥಮವಾಗಿ ಭಾರತದಲ್ಲಿ ಬಳಕೆಗೆ ತಂದ ಕೀರ್ತಿ ಚಂದ್ರಗುಪ್ತನಿಗೆ ಸಲ್ಲುತ್ತದೆ. ಆನಂತರದ ಸಾಮ್ರಾಜ್ಯಗಳಿಗೆ ಚಂದ್ರಗುಪ್ತನ ಆಡಳೀತ ವ್ಯವಸ್ಥೆಯ ಆಸ್ಥಿಭಾರವಾಯಿತು.

ಚಂದ್ರಗುಪ್ತನಿಗೆ ಪ್ರಜೆಗಳ ಹಿತಕ್ಕಾಗಿ ಕಷ್ಟ ಪಟ್ಟು ದುಡಿಯುತ್ತಿದ್ದ. ಹಗಲ್ಲೆಲ್ಲಾ ಆಸ್ಥಾನದಲ್ಲಿರುತ್ತಿದ್ದ. ನ್ಯಾಯ ನೀಡುವುದು ಹಾಗೂ ದೇಶದ ಪ್ರಜೆಗಳ ಕಾರ್ಯ, ಸಮಸ್ಯೆಗಳ ಕುರಿತು ಸಮಾಲೋಚನೆ ನಡೆಸುತಿತದ್ದ. ಹಗಲಂತೂ ನಿದ್ರೆ ಮಾಡುವ ಅಭ್ಯಾಸವನ್ನೇ ಅವನು ಇಟ್ಟುಕೊಂಡಿರಲಿಲ್ಲ. ಸೇವಕರು ಅವನ ತಲೆ ಬಾಚುವ, ಉಡುಪು-  ತೋಡಪುಗಳನ್ನು ತೊಡಿಸುವ ವೇಳೆಯನ್ನೂ ಹಾಳುಮಾಡುತ್ತಿರಲಿಲ್ಲ. ಆ ಸಮಯದಲ್ಲಿ ರಾಯಭಾರಿಗಳನ್ನು ಕಂಡು ಚಿಂತನೆ ನಡೆಸುತ್ತಿದ್ದ. ಎಂಥ ಕಾರ್ಯಶೀಲತೆ, ಕರ್ತವ್ಯನಿಷ್ಠೆ. ಅಲ್ಲವೇ?

ಚಂದ್ರಗುಪ್ತನು ಗೂಢಚಾರರನ್ನು ನೇಮಿಸಿದ. ಆಡಳಿತ ದೃಷ್ಟಿಯಿಂದ ದೇಶದ ರಕ್ಷಣೆಯ ದೃಷ್ಟಿಯಿಂದ ಇದು ಅತ್ಯಗತ್ಯವಾಗಿತ್ತು. ಗೂಢಚಾರರು ದೇಶದಲ್ಲಿ, ಸೈನ್ಯದಲ್ಲಿ ನಡೆಯುವ ಘಟನೆ, ವಿಚಾರಗಳನ್ನು ಮಹಾರಾಜನಿಗೆ ತಿಳಿಸುತ್ತಿದ್ದರು. ಅತ್ಯಂತ ಸಮರ್ಥ ಹಾಗೂ ನಂಬಿಕೆಗೆ ಯೋಗ್ಯರಾದ ವ್ಯಕ್ತಿಗಳನ್ನು ಮಾತ್ರ ಈ ಸ್ಥಾನಕ್ಕೆ ನೇಮಿಸುತ್ತಿದ್ದರು.

ಚಂದ್ರಗುಪ್ತನು ಬೃಹರ್ತ ಸೈನ್ಯದಲ್ಲಿ ಆರು ಲಕ್ಷ ಮಂದಿ ಸುಸಜ್ಜಿತರಾದ ಸೈನಿಕರಿದ್ದರು. ಕೃಷಿಕರನ್ನು ಬಿಟ್ಟರೆ, ಸಮಾಜದಲ್ಲಿ ಸೈನಕರಿಗೆ ಹೆಚ್ಚು ಗೌರವ. ಅವರಿಗೆ ಸಮಯಕ್ಕೆ ಸರಿಯಾಗಿ ಸಂಬಳ ಸಿಗುತ್ತಿತ್ತು.

ಪಾಟಲಿಪುತ್ರ, ಅರಮನೆ

ಪಾಟಲಿಪುತ್ರವೇ (ಈಗಿನ ಬಿಹಾರ ರಾಜ್ಯದ ರಾಜಧಾನಿಯಾದ ಪಾಟ್ನಾ) ಚಂದ್ರಗುಪ್ತನ ರಾಜಧಾನಿ. ಇದರ ಉದ್ದ ಸುಮಾರುಹತ್ತು ಮೈಲಿಗಳೂ, ಅಗಲ ಎರಡು ಮೈಲಿಗಳು, ಸುಮಾರು ಇನ್ನೂರು ಗಜ ಅಗಲದ ನೀರಿನ ಕಂದಕವು ಪಾಟಲಿಪುತ್ರದ ಸುತ್ತಲೂ ಅವರಿಸಿತು. ಈ ಕಂದಕವು ಅರವತ್ತೂ ಅಡಿ ಆಳವಿತ್ತು. ಇದರಿಂದಾಗಿ ನಗರವು ವೈರಿಗಳಿಂದ ಸುರಕ್ಷಿತವಾಗಿತ್ತು.

ಸುಮಾರು ಆರು ಶತಮಾನಗಳ ಬಳಿಕ ಪಾಟಲಿಪುತ್ರವನ್ನು ಫಾ-ಯಿಯಾನ್ ಎಂಬ ಚೀನಾ ದೇಶದ ಯಾತ್ರಿಕನು ಕಂಡಿದ್ದನು. ಕಂಡು ಅತ್ಯಾಶ್ಚರ್ಯ ಪಟ್ಟನು. ಪಾಟಲಿಪುತ್ರದ ದ್ವಾರ, ಗೋಡೆ, ಮನೋಹರವಾದ ಕೆತ್ತನೆಯ ಕೆಲಸಗಳು ಮಾನವ ನಿರ್ಮಿತವಲ್ಲ, ದೈವ ನಿರ್ಮಿತವೆಂದು ಅವನು ಬರೆದಿದ್ದಾನೆ.

ಗ್ರೀಕ್ ಲೇಖಕರು ಪಾಟಲಿಪುತ್ರದ ಅರಮನೆಯನ್ನು ಮನತುಂಬಿ  ಹೊಗಳಿ ವರ್ಣಿಸಿದ್ದಾರೆ. ಅರಮನೆಯ ಕಂಬಗಳ ಸುತ್ತಲೂ ಬಂಗಾರದ ಬಳ್ಳಿಗಳ ಕೆತ್ತನೆ ಕೆಲಸ: ಬಳ್ಳಿಗಲ್ಲಿ ಬೆಳ್ಳಿಯ ಹಕ್ಕಿಗಳು! ಅರಮನೆಯಾದರೋ ವಿಸ್ತಾರವಾದ ಉದ್ಯಾನವನ ನಡುವೆ ಇತ್ತು. ಅಲ್ಲಿ ನೆರಳು ನೀಡುವ, ಸದಾಕಾಲ ಹಸಿರಾಗಿರುವ, ದೇಶ-ವಿದೇಶಗಳ ಮರಬಳ್ಳಿಗಳು, ಅಲ್ಲಲ್ಲಿ ಕೃತಕವಾಗಿ ನಿರ್ಮಿಸಿದ ಕೊಳಗಳು: ಅವುಗಳಲ್ಲಿ ದೊಡ್ಡ ದೊಡ್ಡ ಮೀನುಗಳು: ವಿಹಾರಕ್ಕಾಗಿ ದೋಣಿಗಳು. ಇತರೆ ದೇಶಗಳ ಯಾವ ಅರಮನೆಯೂ ಚಂದ್ರಗುಪ್ತನ ಅರಮನೆಗೆ ಸರಿಸಾಟಿಯಾಗಿರಲಿಲ್ಲವೆಂತೆ. ಹಬ್ಬದ ದಿನ ಪಾಟಲಿಪುತ್ರದ ಪ್ರಜೆಗಳೀಗೆ ಸಡಗರವೇ ಸಡಗರ. ರಾಜಬೀದಿಗಳಲ್ಲಿ ಅಂದು ಚಕ್ರವರ್ತಿ ಚಂದ್ರಗುಪ್ತನ ಮೆರವಣಿಗೆಯನ್ನು ಕಾಣುವ ಅತ್ಯಾತುರ.

ಮೆರವಣಿಗೆಯಲ್ಲಿ  ನಿಧಾನವಾಗಿ ಚಲಿಸುವ, ಬೆಳ್ಳಿ ಬಂಗಾರಗಳಿಂದ ಅಲಂಕೃತವಾದ ಹಿರಿದಾದ ಆನೆಗಳು: ನಾಲ್ಕು ಅಶ್ವಗಳಿಂದ ಎಳೆದಯಲ್ಪಡುವ ಸುಂದರ ರಥಗಳು: ಎಮ್ಮೆ, ಚಿರತೆ, ಪಳಗಿಸಿದ ಸಿಂಹ, ನಾನಾ ವಿಧದ ಹಕ್ಕಿ ಹೂಗಾ ಅನೇಕ ಬಗೆಯ ಕ್ರೂರ ಪ್ರಾಣಿಗಳು, ಬೆಳ್ಳಿ ಬಂಗಾರದ ಪಾತ್ರೆಗಳನ್ನು ಹೊತ್ತ ಅನೇಕಾನೇಕ ಸೇವಕರು ಹಾಗೂ ಮಂಗಳ ವಾದ್ಯ ನುಡಿಸುವವರು.

ಈ ಮೆರವಣಿಗೆ ಕೇಂದ್ರಬಿಂದುವಿನಂತೆ ಚಂದ್ರಗುಪ್ತ ಮೌರ್ಯ ಬಂಗಾರದ ಪಲ್ಲಕ್ಕಿಯಲ್ಲಿ ಕುಳಿತ್ತಿರುತ್ತಿದ್ದ. ಅವನ ರಕ್ಷಣೆಗೆ ಸುತ್ತುವರಿದ ಇಪ್ಪತ್ತನಾಲ್ಕು ಬಲಿಷ್ಠ ಆನೆಗಳೂ.

ಮೆರವಣಿಗೆಯಲ್ಲಿ ಕಾಣುತ್ತಿದ್ದ ಇನ್ನೊಂದು ಕುತೂಹಲ ದೃಶ್ಯವೆಂದರೆ ತರಬೇತಾದ, ರಂಗುರಂಗಿನ ಗಿಳಿಗಳು ಮಹಾರಾಜನ ಸುತ್ತ ಪ್ರದಕ್ಷಿಣೆ ಮಾಡುತ್ತಿದ್ದವು.

ಪ್ರಾಣಿಗಳಲ್ಲಿ ಒಲವು

ಆ ಕಾಲದಲ್ಲಿ ಇನ್ನೊಂದು ಉತ್ಸವಿ ವಿಧಿಯಿತ್ತು. ಅದೇನೆಂದರೆ ಮಹಾರಾಜನ ತಲೆಗೂದಲನ್ನು ವರ್ಷಕ್ಕೊಮ್ಮೆ ತೊಳೆದು ಶುದ್ಧಿ ಮಾಡುವ ವಿಧಿ. ಈ ಸಂದರ್ಭದಲ್ಲಿ ಮಹಾರಾಜನು ದಾನಗಳನ್ನು ಮಾಡುತ್ತಿದ್ದ. ರಾಜನಿಗೆ ಮೃಗ-ಪಕ್ಷಿಗಳ ಸಂಗ್ರಹ, ಸಾಕುವಿಕೆಯ ಬಗ್ಗೆ ವಿಶೇಷ ಒಲವು.  ಆದುದರಿಂದ ಪ್ರಜೆಗಳೂ ಅವನಿಗೆ ಜಿಂಕೆ, ಖಡ್ಗಮೃಗ, ಪಳಗಿಸಿದ ಹುಲಿ, ಚಿರತೆ ,ಎತ್ತು ,ಚಮರೀಮೃಗ, ಬೇಟೆ ನಾಯಿ, ಮಂಗ, ಕೊಕ್ಕರೆ, ಬಾತುಕೋಳಿ, ಹಂಸಪಕ್ಷಿ, ಪಾರಿವಾಳಗಳೇ ಮುಂತಾದ ಪ್ರಾಣಿ- ಪಕ್ಷಿಗಳನ್ನು ಭಕ್ತಿಪೂರ್ವವಾಗಿ ನೀಡುತ್ತಿದ್ದರು.

ಮೃಗ ಬೇಟೆಯಲ್ಲಿಯೂ ಚಂದ್ರಗುಪ್ತನಿಗೆ ವಿಶೇಷ ಆಸಕ್ತಿ. ಆತ ಸಿಂಹಗಳನ್ನು ಬೇಟೆನಾಯಿಗಳ ಸಹಾಯದಿಂದ ಕೊಲ್ಲುತ್ತಿದ್ದನೆಂದು ಗ್ರೀಕ ಲೇಖಕರು ಬರೆದಿದ್ದಾರೆ. ಮಹಾರಾಜ ಬಿಡುವಿನ ಸಮಯದಲ್ಲಿ ಪ್ರಾಣಿಗಳ ಓಟದ ಪಂದ್ಯವನ್ನು ನೋಡಿ ಆನಂದ ಪಡುತ್ತಿದ್ದ.

ಚಂದ್ರಗುಪ್ತ ಸಲ್ಲೇಖನ ವ್ರತ ಮಾಡಿದ.

ಆಧ್ಯಾತ್ಮದ ಒಲವು

ಜೀವನದ ಸಂಜೆ ಸಮೀಪಿಸುತ್ತಿದ್ದಂತೆಯೇ ಚಂದ್ರಗುಪ್ತನ ಧಾರ್ಮಿಕ, ಅಧ್ಯಾತ್ಮಿಕ, ಒಲವು ಬಲಿಯಿತು. ಅಂತ್ಯದ ವರೆಗೂ ರಾಜ್ಯಭಾರವನ್ನು ಮಾಡಲು ಅವನು ಬಯಸಲಿಲ್ಲ. ವಾನಪ್ರಸ್ಥವನ್ನು ಸ್ವೀಕರಿಸಿದ. ಜೈನಧರ್ಮ, ತತ್ವಕ್ಕೆ ಶರಣಾಗತನಾದ. ಯುವರಾಜ ಬಿಂದುಸಾರನಿಗೆ ಪಟ್ಟ ಕಟ್ಟಿದ.  ತನ್ನ ಜೈನ ಗುರು ಭದ್ರಬಾಹುವಿನೊಡನೆ ದಕ್ಷಿಣಾಭಿಮುಖವಾಗಿ ಹೊರಟ. ಕೊನೆಗೂ ಕರ್ನಾಟಕದ ಶ್ರವಣಬೆಳಗೋಳಕ್ಕೆ ಬಂದು ಕೆಲವು ವರ್ಷಗಳಕಾಲ ಆಧ್ಯಾತ್ಮಿಕ ಸಾಧನೆ ನಡೆಸಿದ.  ಜೈಣರ ಸಂಪ್ರದಾಯದಂತೆ ಸಲ್ಲೇಖನ ವ್ರತ ಆಚರಿಸಿ ಪ್ರಾಣ ನೀಗಿದ.  (ಸಲ್ಲೇಖನ ವ್ರತ ಮಾಡುವವರು ನೀರು ಆಹಾರಗಳನ್ನು ತ್ಯಜಿಸಿ ಧ್ಯಾನದಲ್ಲಿಯೇ ಮಗ್ನರಾಗಿ ಹಾಗೆಯೇ ಪ್ರಾಣ ತ್ಯಜಿಸಬೇಕು. ನಮ್ಮ ಕಾಲದಲ್ಲಿ ಸಲ್ಲೇಖನ ವೃತ ಮಾಡಿ ಅನೇಕ ಜೈನ ಧರ್ಮಾನುಯಾಯಿಗಳು ದೇಹ ತ್ಯಾಗ ಮಾಡಿದ್ದಾರೆ).

ಶ್ರವಣ ಬೆಳಗೋಳದ ಕೆಲವು ಶಿಲಾಶಾಸನಗಳು ಚಂದ್ರಗುಪ್ತನ ವಿಷಯವನ್ನು ತಿಳಿಸುತ್ತವೆ.  ಅವನು ನೆಲೆಸಿದ  ಬೆಟ್ಟವನ್ನು ಚಂದ್ರಗಿರಿಯೆಂದು ಈಗಲೂ ಕರೆಯುತ್ತಾರೆ.  ಅಲ್ಲಿ “ಚಂದ್ರಗುಪ್ತ ಬಸದಿ” ಎಂದು ಇದೆ. ಅದನ್ನು ಚಂದ್ರಗುಪ್ತ ಕಟ್ಟಿಸಿದನೆಂದು ಹೇಳುತ್ತಾರೆ.

ಚಂದ್ರಗುಪ್ತ ಮೌರ್ಯನು ಭಾರತದ ಇತಿಹಾಸ ನಿರ್ಮಾಪಕರ ಉಜ್ವಲ ಸಾಲಿಗೆ ಸೇರುವ ವ್ಯಕ್ತಿ.  ಕಾರ್ಯಶೀಲತೆ, ಸತತ ಸಾಧನಾಶೀಲತೆ ಹಾಗೂ ವಿಲಕ್ಷಣ ಬುದ್ಧಿ ಶಕ್ತಿಗಳೇ ಅವನ ಯಶಸ್ಸಿಗೆ ಕಾರಣ. ಅಸಾಧಾರಣ ಶೌರ್ಯ ಹಾಗೂ ಸಾಹಸ ಪ್ರವತ್ತಿ ಆವನಲ್ಲಿತ್ತು. ಅವನ ನಿಸ್ವಾರ್ಥ ದೇಶಭಕ್ತಿಯೇ ಅವನು ಗಳಿಸಿದ ಅಪಾರ ಜನಪ್ರೀಯತೆಗೆ ಕಾರಣ.