ಅಯ್ಯಾ ಚಂದ್ರ, ಈಗ ನೀನೊಂದು ಸವೆದ ಖೋಟಾ ನಾಣ್ಯ ;
ನಿನ್ನ ಆ ಪುರಾಣ ಪ್ರಾಪ್ತ ಸಂಪತ್ತು
ಷೋಡಷ ಕಲೆಯ ಮಹತ್ತು
ಇನ್ನು ನೀನೊಂದು ಉಸಿರಿರದ, ಹಸಿರಿರದ, ಬಂಜೆ ಬಯಲೆಂಬ ಸತ್ಯಾಂಶ
ಹೊರಬಿದ್ದ ಮೇಲೆ ಸಲ್ಲುವುದಿಲ್ಲ.

ಯಾವ ಕವಿಯೂ ಇನ್ನು ನಿನ್ನನ್ನು ನಲ್ಲೆಯ ಮುಖಕ್ಕೆ ಹೋಲಿಸಿ
ಸುಖವಾಗಿ ಬದುಕಲಾರ.
ಈ ಮುಂದೆ ಬರುವ ಕಂದಮ್ಮಗಳು ನಿನ್ನನ್ನು ಚಂದಮಾಮಾ
ಎಂದು ಕರೆಯುವುದು ಸಂದೇಹವೇ.

ಇದುವರೆಗು ಕಂಡ ಮೃಗಲಾಂಛನದ ಜತೆಗೆ, ಅಮೆರಿಕದ
ಬೂಡ್ಸಿನ ಗುರುತು ನಿನ್ನ ಕೆನ್ನೆಯ ಮೇಲೆ ಕಾಣಿಸುವಾಗ,
ಶಿವನ ಜಡೆ ಮುಡಿಯಿಂದ ಭಕ್ತರಿಳಿಸುತ್ತಾರೆ ನಿನ್ನನ್ನು ಕೆಳಗೆ,
ಪುರೋಹಿತರು ನವಗ್ರಹ ಪೂಜೆಯ ವೇಳೆ ದಬ್ಬುತ್ತಾರೆ ಹೊರಗೆ.

ಆದರೂ, ನನಗೆ ನಿನ್ನನ್ನು ಕುರಿತ ಗೌರವವೀಗ ಎರಡರಷ್ಟಾಯ್ತು ;
ಒಂದು, ಬೆಂದ ನಮ್ಮೆದೆಗಳಿಗೆ ನೀಸುರಿವ ಬೆಳುದಿಂಗಳಿನ ಸಂತೋಷಕ್ಕೆ
ಇದೆಲ್ಲದರಿಂದ ಇಲ್ಲ ಏನೂ ಧಕ್ಕೆ ;
ಎರಡು, ಏನಾದರೂ ನಿನಗಿಂತ ನಮ್ಮ ಈ ನೆಲವೇ ಚೆಲುವೆಂಬ
ಅನುಭವವನ್ನು ಕೊಟ್ಟುದಕ್ಕೆ.