Categories
ವಿಜ್ಞಾನ

ಚಂದ್ರನ ನೀರು

ಅಮೆರಿಕದ ಜತೆ ಉತ್ತಮ ಬಾಂಧವ್ಯ ಬೆಳೆಸಿ­ಕೊಂಡರೆ ಭಾರತವೂ ಮಹಾನ್ (ಗ್ರೇಟ್) ದೇಶ­ವಾಗಲು ಸಾಧ್ಯ ಎಂದು ಮೂರು ವರ್ಷಗಳ ಹಿಂದೆ ಅಲ್ಲಿನ ವಿದೇಶಾಂಗ ಕಾರ್ಯದರ್ಶಿ ಕಾಂಡೊಲಿಸಾ ರೈಸ್ ದಿಲ್ಲಿಯಲ್ಲಿ ಹೇಳಿದ್ದರು. ನಿಮ್ಮ ದೇಶವನ್ನು ನಾವೇ ‘ಗ್ರೇಟ್’ ಮಾಡುತ್ತೇವೆ ಎಂಬ ಆ ಮಾತಿನಲ್ಲಿ ಏನೆಲ್ಲ ಅರ್ಥಗಳಿದ್ದವು. ಕೆಲವರಿಗೆ ಆ ಮಾತಿನಿಂದ ಎದೆಯುಬ್ಬಿತು. ಮತ್ತನೇಕರು ಅದರಲ್ಲಿ ಅವಹೇಳನದ ಎಳೆಗಳನ್ನೇ ಕಂಡರು.ಅದಾದ ನಂತರ ನಮ್ಮ ದೇಶವನ್ನು ಗ್ರೇಟ್ ಮಾಡಲು ಅಮೆರಿಕ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ತನಗೇ ದುಬಾರಿ ಹಾಗೂ ಅಪಾಯ­ಕಾರಿ ಎನಿಸಿದ ಪರಮಾಣು ತಂತ್ರಜ್ಞಾನ­ವನ್ನು ನಮ್ಮಲ್ಲಿ ತಂದು ಸುರಿಯಲು ಧಾರಾಳ ನೆರವು ನೀಡುತ್ತಿದೆ. ಸುರಕ್ಷಿತ, ಕಡಿಮೆ ವೆಚ್ಚದ, ನೈಸರ್ಗಿಕ ಅನಿಲವನ್ನು ನಾವು ಇರಾನ್‌ನಿಂದ ಕೊಳವೆ ಮೂಲಕ ತರಲಾಗದಂತೆ ನಿರ್ಬಂಧ ಒಡ್ಡಿದೆ. ಅಸ್ಸಾಂ ಪಕ್ಕದ ಮಯನ್ಮಾರ್ ಭೂತಲ­ದಲ್ಲಿರುವ ಪೆಟ್ರೋಲಿಯಂ ಮತ್ತು ಅನಿಲ ಖಜಾನೆಗೆ ನಾವು ಕೈಯಿಕ್ಕದಂತೆ ಮಾಡಿ ನಮಗೆ ಶಹಭಾಸ್ ಎಂದಿದೆ. ನಮ್ಮನ್ನು ಹೀಗೆ ಗ್ರೇಟ್ ಮಾಡುವ ಸರಣಿಯಲ್ಲಿ ತೀರ ಈಚಿನ ಉದಾಹರಣೆ ಎಂದರೆ ಚಂದ್ರನ ನೀರು.
ನಿಜ, ಅನೇಕ ವರ್ಷಗಳ ನಂತರ ನಮ್ಮ ವಿಜ್ಞಾನಿಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿ ಮಾಡಿದ್ದಾರೆ. ಚಂದ್ರನಲ್ಲಿ ನೀರಿನ ಅಂಶವನ್ನು ಪತ್ತೆ ಮಾಡಿದ ನಮ್ಮ ‘ಇಸ್ರೊ’ ತಜ್ಞರ ಯಶಸ್ಸನ್ನು ಅಮೆರಿಕದ ಮಾಧ್ಯಮಗಳು ಎದ್ದು ಕಾಣುವಂತೆ ಪ್ರಕಟಿಸಿವೆ. ಚಂದ್ರನ ಮೇಲಿನ ಬಂಡೆಗಳಲ್ಲಿ ಹಾಗೂ ನಯವಾದ ದೂಳು ಪುಡಿಯಲ್ಲಿ ನೀರಿನ ಅಂಶ ಇದೆ ಎಂದು ನಲ್ವತ್ತು ವರ್ಷಗಳ ಹಿಂದೆಯೇ ಅಮೆರಿಕದ ಗಗನಯಾತ್ರಿಗಳು ತಂದ ಸ್ಯಾಂಪಲ್‌ಗಳಲ್ಲಿ ಪತ್ತೆ­ಯಾಗಿತ್ತು. ಆದರೆ ಅಮೆರಿಕಕ್ಕೆ ಆಗ ಅದ­ರಲ್ಲಿ ಆಸಕ್ತಿ ಇರಲಿಲ್ಲ. ಏಕೆಂದರೆ ಸೋವಿಯತ್ ರಷ್ಯದ ಜತೆಗಿನ ಪೈಪೋಟಿಯಲ್ಲಿ ತಾನು ಮೇಲುಗೈ ಸಾಧಿಸಿದ್ದಾಗಿತ್ತು. ಆರು ಬಾರಿ ಅಲ್ಲಿಗೆ ಹೋಗಿ 12 ಜನರನ್ನು ಇಳಿಸಿ, ಮರಳಿ ಕರೆತಂದ ಮೇಲೆ ಸಹಜವಾಗಿ ಅತ್ತ ಆಸಕ್ತಿ ಕಡಿಮೆಯಾಗಿತ್ತು.
‘ನೀರಿನ ಅಂಶ ಎಂಥದ್ದೂ ಇಲ್ಲ. ಗಗನಯಾತ್ರಿಗಳು ಅಲ್ಲಿನ ಕಲ್ಲುಮಣ್ಣಿನ ಪುಡಿಯನ್ನು ಪ್ಯಾಕ್ ಮಾಡುವಾಗ ಅಥವಾ ಬಿಚ್ಚುವಾಗ ಎಲ್ಲೋ ತುಸು ತೇವಾಂಶ ಸೇರಿದೆ’ ಎಂದು ಹೇಳಿ ನಾಸಾ ಅಧಿಕಾರಿಗಳು ಕೈ ತೊಳೆದುಕೊಂಡಿದ್ದರು.
ಈಗ ಪತ್ತೆಯಾಗಿರುವ ನೀರೂ ಅಷ್ಟೆ; ತೀರಾ ತೀರಾ ಅಲ್ಪ ಪ್ರಮಾಣದಲ್ಲಿ ಅದೂ ಅಗೋಚರ ರೂಪದಲ್ಲಿ ಇದೆ. ಚಂದ್ರನ ಕೆಲವು ಬಗೆಯ ಶಿಲೆಗಳಲ್ಲಿ ಆಮ್ಲಜನಕ ಮತ್ತು ಜಲಜನಕದ ಪರಮಾಣುಗಳು ಅರೆಬಂಧಿತ ರೂಪದಲ್ಲಿ ಇವೆ. ‘ಎಚ್2ಓ’ ಬದಲಿಗೆ ‘ಓಎಚ್’ ರೂಪದಲ್ಲಿ ಇವೆ. ಅವಕ್ಕೆ ನೀರಿನ ಲಕ್ಷಣ ಇಲ್ಲ. ನಮ್ಮ ಹೊಳೆ­ನರಸೀ­ಪುರ ಮತ್ತು ಚನ್ನರಾಯಪಟ್ಟಣ­ಗಳ ಸುತ್ತ­ಮುತ್ತ ಅಂಥ ಕಲ್ಲುಗಳು ಇವೆ. ಅಲ್ಲಿನ ಒಣ ಕಲ್ಲನ್ನು ತಂದು ಪುಡಿ ಮಾಡಿ ಅದಕ್ಕೆ ತುಸು ಜಲ­ಜನಕ ಅನಿಲವನ್ನು ಸೇರಿಸಿದರೆ ನೀರಿನ ಬಿಂದು­ಗಳನ್ನು ಹೊಮ್ಮಿಸಬಹುದು. ಹೊರಗಿನಿಂದ ತುಸು ಜಲಜನಕ ಸೇರಬೇಕಷ್ಟೆ.
ಸೂರ್ಯನಿಂದ ಸೂಸಿ ಬರುವ ಬಿಸಿಲಿನ ಜತೆ ‘ಸೌರಗಾಳಿ’ ಕೂಡ ಮೆಲ್ಲಗೆ ಸಾಗಿ ಬರುತ್ತಿ­ರುತ್ತದೆ. ಇದರಲ್ಲಿ ಜಲಜನಕದ ಬೀಜಕಣಗಳೂ ಇರುತ್ತವೆ. ಇವು ಚಂದ್ರನ ಮೇಲಿನ ಕಲ್ಲುದೂಳಿನ ಪುಡಿಯನ್ನು ಸ್ಪರ್ಶಿಸಿದಾಗ ಅಲ್ಲಿ ತಾತ್ಕಾಲಿಕವಾಗಿ ತುಸು ತೇವಾಂಶ ರೂಪುಗೊಳ್ಳುತ್ತದೆ. ವಿಶೇಷ ಸ್ಕ್ಯಾನರ್ ಮೂಲಕ ಆ ಕಲ್ಲು-ದೂಳಿನ ಚಿತ್ರವನ್ನು ಸೆರೆಹಿಡಿದರೆ, ಅದರಲ್ಲಿ ಕಾಣುವ ರೋಹಿತದಲ್ಲಿ ನೀರಿನ ಪಸೆಯನ್ನು ಕೆಮಿಸ್ಟ್ರಿ ತಜ್ಞರು ಗುರುತಿಸ­ಬಹುದು. ಚಂದ್ರಲೋಕದ ಬೆಳಗಿನ ಒಂದೆರಡು ಗಂಟೆಗಳ ಕಾಲ ಹೀಗೆ ಶೇಖರವಾದ ಅತ್ಯಲ್ಪ ತೇವಾಂಶ ಮತ್ತೆ ಬಿಸಿಲು ಏರಿದಂತೆ ಆವಿಯಾಗಿ ಆರಿ ಹೋಗುತ್ತದೆ; ಮರುದಿನ ಮತ್ತೆ ಎಳೆ­ಬಿಸಿಲಲ್ಲಿ ನೀರಿನ ಸೂಕ್ಷ್ಮ ಹನಿಗಳು ದೂಳಿನ ಪದರದ ಮೇಲೆ ಕೂರುತ್ತವೆ. ಒಂದರ್ಥದಲ್ಲಿ ಚಂದ್ರ ಮೆಲ್ಲಗೆ ಬೆವರುತ್ತಾನೆ.
ಇದು ಹೊಸ ಸಂಗತಿಯೇನೂ ಅಲ್ಲ. ಗಗನ­ಯಾತ್ರಿಗಳು ತಂದ ಚಂದ್ರಪುಡಿಯಲ್ಲಿ ನೀರಿದ್ದ ಅಂಶವನ್ನು ನಾವು ಮರೆತಿರಬಹುದು. ಆದರೆ ಹತ್ತು ವರ್ಷಗಳ ಹಿಂದೆ 1999ರಲ್ಲಿ ಶನಿಯತ್ತ ಹೊರಟ ‘ಕಾಸಿನಿ’ ನೌಕೆ ನಮ್ಮ ಚಂದ್ರ­ನನ್ನು ಆಗಸ್ಟ್ 19ರಂದು ಪ್ರದಕ್ಷಿಣೆ ಹಾಕಿ ಹೋಗು­ವಾಗ ಇಂಥದ್ದೇ ಚಿತ್ರವನ್ನು ರವಾನಿಸಿತ್ತು.
ಈಚೆಗೆ ಜೂನ್ 2ರಿಂದ 9ರವರೆಗೆ ನಾಸಾದ ‘ಡೀಪ್ ಇಂಪಾಕ್ಟ್’ ಹೆಸರಿನ ನೌಕೆಯೊಂದು ಚಂದ್ರನ ಉತ್ತರ ಧ್ರುವದ ಚಿತ್ರಣಗಳನ್ನು ರವಾನಿಸಿತ್ತು. ಅದು ಕೂಡ ಚಂದ್ರನಲ್ಲಿ ತೇವಾಂಶ ಇರುವುದನ್ನು ವರದಿ ಮಾಡಿತ್ತು. ಅದಾದ ಮೇಲೆ ನಮ್ಮದೇ ‘ಚಂದ್ರಯಾನ-1’ ಹೆಸರಿನ ಯಂತ್ರ ಭೂಕಕ್ಷೆಯನ್ನು ದಾಟಿ ಚಂದ್ರನನ್ನು ಸುತ್ತಲು ತೊಡಗಿ ಒಂದು ಪುಟ್ಟ ಶೋಧದಂಡ­ವನ್ನು ಚಂದ್ರನ ನೆತ್ತಿಯ ಮೇಲೆ ಬೀಳಿಸಿತ್ತು. ಅದರಲ್ಲೂ ನೀರಿನ ಅಂಶ ಪತ್ತೆಯಾಗಿತ್ತು (ಎಂದು ಈಗ ನಮ್ಮವರು ಹೇಳುತ್ತಿದ್ದಾರೆ). ಅದಾದ ಹನ್ನೊಂದನೆಯ ದಿನ, ಅಂದರೆ ಕಳೆದ ವರ್ಷ ನವೆಂಬರ್ 19ರಂದು ನಮ್ಮದೇ ಚಂದ್ರನೌಕೆಯಲ್ಲಿ ಕೂತಿದ್ದ ನಾಸಾದ ಎಮ್3 ಉಪಕರಣದಿಂದ ಹೊಮ್ಮಿದ ಚಿತ್ರಣಗಳು ನಾಸಾಕ್ಕೆ ಲಭಿಸಿದ್ದವು. ಬ್ರೌನ್ ವಿವಿಯ ಕಾರ್ಲಿ ಪೀಟರ್ಸ್ ಮತ್ತು ಮೇರಿಲ್ಯಾಂಡ್ ವಿವಿಯ ಜೆಸ್ಸಿಕಾ ಸನ್‌ಶೈನ್ (!) ಎಂಬಿಬ್ಬರು ಮಹಿಳಾ ವಿಜ್ಞಾನಿಗಳು ಅದರಲ್ಲಿನ ನೀರಿನ ಅಂಶಗಳನ್ನು ವಿಶ್ಲೇಷಿಸಿ ಟಿಪ್ಪಣಿ ಬರೆದರು. ಅಮೆರಿಕದ ‘ಸೈನ್ಸ್’ ಪತ್ರಿಕೆಗೆ ರವಾನಿಸಿದರು.
ಆದರೂ ಯಾರೂ ಅದಕ್ಕೆ ಮಹತ್ವ ನೀಡಿರಲಿಲ್ಲ. ಈಚೆಗೆ ನಮ್ಮ ಚಂದ್ರನೌಕೆ ಇದ್ದಕ್ಕಿದ್ದಂತೆ ಸಿಗ್ನಲ್ ಕಳಿಸುವುದನ್ನು ನಿಲ್ಲಿಸಿ ಅವಧಿಗೆ ಮೊದಲೆ ಇತಿಶ್ರೀ ಹಾಡಿದಾಗ ಇಸ್ರೊ ತಜ್ಞರು ಸೂತಕದ ಕಳೆ ಹೊತ್ತು ಕೂತಿದ್ದರು. ಚಂದ್ರನತ್ತ ಎರಡನೆಯ ಪಯಣಕ್ಕೆ ಸಿದ್ಧವಾಗು­ತ್ತಿದ್ದ ‘ಚಂದ್ರಯಾನ-2’ ಹೆಸರಿನ ನೌಕೆಯ ನೆಗೆತವನ್ನು ಮುಂದೂಡಿದರೆ ಹೇಗೆ ಎಂದು ಚಿಂತೆಯಲ್ಲಿದ್ದರು.
ಆ ಸಂದರ್ಭದಲ್ಲೇ ತುಸು ಅನಿರೀಕ್ಷಿತ ಎಂಬಂತೆ ಸೆಪ್ಟೆಂಬರ್ 24ರಂದು ಅಮೆರಿಕದ ನಾಸಾದಿಂದ ಬೆಂಗಳೂರಿನ ಇಸ್ರೊ ಮುಖ್ಯಸ್ಥರಿಗೆ ಸಿಗ್ನಲ್ ಬಂತು. ಸರಸರ ಮಾಧ್ಯಮ ಗೋಷ್ಠಿ ಏರ್ಪಾಟಾ­ಯಿತು. ಚಂದ್ರಜಲದ ಸುದ್ದಿ ವಿವರ, ಗ್ರಾಫಿಕ್ ಚಿತ್ರ, ಛಾಯಾಚಿತ್ರ ಎಲ್ಲವೂ ಏಕಕಾಲದಲ್ಲಿ ನಾಸಾ ಮೂಲಕ ಜಾಗತಿಕ ಮಾಧ್ಯಮಗಳಿಗೆ ಹಾಗೂ ಇಸ್ರೊ ಮೂಲಕ ನಮ್ಮ ಬಾತ್ಮೀದಾರ­ರಿಗೆ ಲಭಿಸಿದವು. ಮರುದಿನ ‘ಚಂದ್ರನಲ್ಲಿ ನೀರುಪತ್ತೆ, ಭಾರತದ ವಿಜ್ಞಾನಿಗಳಿಗೆ ಭೋ­ಪರಾಕ್’ ಎಂಬ ಉದ್ಘೋಷ! ತಲಕಾವೇರಿಯಲ್ಲಿ ತೀರ್ಥೋದ್ಭವ ಆಯ್ತೆಂದು ಭಕ್ತರೆಲ್ಲ ಸಂಭ್ರಮಿಸಿ ಕೊಳಕ್ಕೆ ಜಂಪ್ ಮಾಡುವ ಹಾಗೆ ದೇಶ­ವಿದೇಶಗಳ ಎಲ್ಲ ಮಾಧ್ಯಮಗಳಲ್ಲೂ ಏಕಕಾಲಕ್ಕೆ ಜಲಭೇರಿ ಬಾರಿಸಿತು.
ಅಳುತ್ತಿದ್ದ ಬಾಲ ಶ್ರೀರಾಮಚಂದ್ರನ ಕೈಗೆ ಕನ್ನಡಿಯ ಚಂದ್ರಬಿಂಬ ಕಂಡಂತೆ ‘ಇಸ್ರೊ’ ಅಧ್ಯಕ್ಷ ಮಾಧವನ್ ನಾಯರ್ ಜಿಗಿದೆದ್ದು ಎರಡೂ ಕೈಎತ್ತಿ ಇಡೀ ರಾಷ್ಟ್ರಕ್ಕೆ ಹರ್ಷದ ಬಾವುಟ ಬೀಸಿದರು.
ಎಲ್ಲೆಡೆ ಇಸ್ರೊಕ್ಕೇ ಶಹಭಾಸ್‌ಗಿರಿ.
ಇದು ಏಕಾಯಿತು? ಇಸ್ರೊ ತಜ್ಞರು ಚಂದ್ರ­ನೌಕೆಯ ಮೇಲೆ ಅಮೆರಿಕದ ಎಮ್3ಯನ್ನು ಕೂರಿಸಿದ್ದನ್ನು ಬಿಟ್ಟರೆ ಚಂದ್ರಜಲದ ಪತ್ತೆಗೆ ಏನನ್ನೂ ಮಾಡಲಿಲ್ಲ. ಎಮ್3ರಿಂದ ಬಂದ ಸಂಕೇತಗಳ ವಿಶ್ಲೇಷಣೆ ಮಾಡಲಿಲ್ಲ. ಚಂದ್ರನ ಮೇಲೆ ಕೆಡವಿದ ಶೋಧದಂಡದಲ್ಲಿ ನೀರಿನ ಅಂಶ ಕಂಡಿದ್ದರೂ ಖಚಿತ ಏನೂ ಹೇಳಿರಲಿಲ್ಲ.
ಈ ಯಾವ ಅಂಶಗಳೂ ನಮ್ಮ ‘ಇಸ್ರೊ’ ಸಂಸ್ಥೆಯ ಸಾಧನೆಗೆ ಕುಂದು ತರುವುದಿಲ್ಲ ನಿಜ. ಇವರು ನಿರ್ಮಿಸಿದ ನೌಕೆಯೊಂದು ಚಂದ್ರನ ಪ್ರದಕ್ಷಿಣೆ ಹಾಕಿದ್ದು, ಚಂದ್ರನ ನೆತ್ತಿಯ ಮೇಲೆ ಒಂದು ಶೋಧ ದಂಡವನ್ನು ಬೀಳಿಸಿ ದೂಳು ಚಿಮ್ಮುವಂತೆ ಮಾಡಿದ್ದು ಇವೆಲ್ಲ ಗ್ರೇಟ್ ನಿಜ. ಶೋಧ ದಂಡದ ಜತೆ ಭಾರತದ ಧ್ವಜವನ್ನೂ ಅಲ್ಲಿ ಇಳಿಸಿ, ಹಾಗೆ ಧ್ವಜ ಊರಿದ ನಾಲ್ಕನೆಯ ದೇಶವೆನಿಸಿದ್ದು ಎಲ್ಲವೂ ಕೊಂಡಾಡಲು ಯೋಗ್ಯವೇ ಹೌದು. ವಿಜ್ಞಾನದ ಕಡೆ ಎಳೆಯ­ರನ್ನು ಮತ್ತೆ ಆಕರ್ಷಿಸುವಂತೆ ಮಾಡಲು, ಇಸ್ರೊ ವಿಜ್ಞಾನಿಗಳಲ್ಲಿ ಮತ್ತೆ ಉತ್ಸಾಹ ಚಿಮ್ಮುವಂತೆ ಮಾಡಲು ಇಂಥದೊಂದು ಜಯಭೇರಿ ಬೇಕಿತ್ತು ನಿಜ. ಆದರೆ ಈ ಮಧ್ಯೆ ಕಾಂಡೊಲಿಸಾ ರೈಸ್ ನೆನಪು ಮತ್ತೆ ಯಾಕೆ ಬರುತ್ತದೆ?
ಏಕೆಂದರೆ, ನಮ್ಮವರ ಸಾಧನೆ ತುಂಬಾ ದೊಡ್ಡ­ದೆಂದು ತೋರಿಸುವಲ್ಲಿ ಅಮೆರಿಕದ ನಾಸಾದ ಹಿತಾಸಕ್ತಿ ಇದೆ. ತಾನೇ ಸ್ವತಃ ಚಂದ್ರ­ನಿದ್ದಲ್ಲಿಗೆ ಹೋಗಬೇಕೆಂಬ ತುಡಿತ ಅದಕ್ಕೆ ಈಚೀಚೆಗೆ ಹೆಚ್ಚುತ್ತಿದೆ. ಆದರೆ ಅಮೆರಿಕ ಸರ್ಕಾರಕ್ಕೆ ಈಗಲೂ ಆಸಕ್ತಿ ಇಲ್ಲ. ಇಂದಿನ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಅದು ಭಾರೀ ವೆಚ್ಚದ್ದೆಂಬ ದೃಷ್ಟಿಯೇ ಬಲವಾಗಿದೆ. ಮೇಲಾಗಿ ಯಂತ್ರಗಳೇ ಮನುಷ್ಯನ ಎಲ್ಲ ಕೆಲಸವನ್ನೂ ನಿಭಾಯಿ­ಸುವಂತಿರುವಾಗ (ಅವಕ್ಕೆ ನೀರು, ಆಮ್ಲಜನಕ ಕೂಡ ಬೇಕಾಗಿಲ್ಲ.
ಚಂದ್ರನಲ್ಲಿ ವಸತಿ ಸಮುಚ್ಚಯ ನಿರ್ಮಿಸುವ ಅವಸರ ಈಗೇಕೆ ಎಂಬ ಧೋರಣೆ ಒಬಾಮಾ ಸರ್ಕಾರದ್ದು. ಆದರೆ ಹೋಗಲೇ ಬೇಕೆಂಬ ತುಡಿತ ನಾಸಾವನ್ನು ಬೆಂಬಲಿಸುವ ಔದ್ಯಮಿಕ ಕೂಟದ್ದು. ಅದಕ್ಕೇ ‘ನೋಡ್ರೀ, ಭಾರತದಂಥ ದೇಶವೂ ಹನುಮ­ಲಂಘನಕ್ಕೆ ಹೊರಟಿದೆ; ಮೊದಲ ಹಂತವನ್ನು ಯಶಸ್ವಿಯಾಗಿ ಪೂರೈಸಿದೆ; ಚೀನಾ, ಜಪಾನ್, ಇಂಡಿಯಾ ಹೀಗೆ ಏಷ್ಯದ ಮೂವರೂ ಹೊರ­ಟಿರು­ವಾಗ ನಾವು ಹಿಂದುಳಿಯುವುದು ನಾಚಿಕೆಗೇಡು’ ಎಂಬ ಅಭಿಪ್ರಾಯವನ್ನು ಅಲ್ಲಿನ ಜನಮನದಲ್ಲಿ ಬಿತ್ತಿ ಸರ್ಕಾರವನ್ನು ಎಬ್ಬಿಸಿ ಮೇಲೇಳಬೇಕಾಗಿದೆ. ‘ಇದುವರೆಗೆ ಪಾಶ್ಚಿಮಾತ್ಯ­ರಿಗಿದ್ದ ಖ್ಯಾತಿಯನ್ನು ಈ ಏಷ್ಯದ ರಾಷ್ಟ್ರಗಳು ಕಿತ್ತುಕೊಳ್ಳಲಿವೆ’ ಎಂದು ಒತ್ತಿ ಹೇಳಬೇಕಾಗಿದೆ. ಬೊಕ್ಕಸದಿಂದ ದೊಡ್ಡದೊಂದು ಪಾಲು ಧನರಾಶಿ ನಾಸಾಕ್ಕೆ ಸಿಕ್ಕರೆ ಸಾಕು, ಅಲ್ಲಿನ ಎಷ್ಟೋ ಉದ್ಯಮಗಳು ಮೇಲೇಳುತ್ತವೆ.
ಅದಕ್ಕೇ ನಾಳೆ (ಅಕ್ಟೊಬರ್ 9ರಂದು) ಚಂದ್ರನ ನೆತ್ತಿಯ ಮೇಲಿನ ಆಳವಾದ ಗುಳಿಯಲ್ಲಿ ನೀರಿದೆಯೆ ಎಂಬುದರ ಪತ್ತೆಗೆಂದೇ ‘ಎಲ್­ಕ್ರಾಸ್’ ಹೆಸರಿನ ಶೋಧಯಂತ್ರವೊಂದು ಅಲ್ಲಿ ಇಳಿಯ­ಲಿದೆಯಾದರೂ ಅವಸರದಲ್ಲಿ ಹನ್ನೆರಡು ದಿನಗಳ ಮೊದಲೇ ಭಾರತಕ್ಕೆ ಕೀರ್ತಿ ಪತಾಕೆಯನ್ನು ಸಿಕ್ಕಿಸಲಾಗಿದೆ.
ಸಾವಿರ ಸಮಸ್ಯೆಗಳನ್ನು ಹೊತ್ತ, ಮೂಳೆ ಚಕ್ಕಳದ ಐರಾವತದ ಜುಟ್ಟಿಗೆ ಚಂದ್ರಜಲ ಕೀರ್ತಿ ಪತಾಕೆಯನ್ನು ಸಿಕ್ಕಿಸಬೇಕು. ಬಡ ಐರಾವತ ಮತ್ತೆ ಎದೆಯುಬ್ಬಿಸಿ ಚಂದ್ರನತ್ತ ಇನ್ನೊಮ್ಮೆ ನೆಗೆಯುವಂತೆ ಮಾಡಬೇಕು. ಅದರ ನೂಕು­ಬಲದ ಮೇಲೆ ತಾನು ಚಿಮ್ಮಿಹೋಗಿ ಚಂದ್ರನ ಮೇಲೆ ಮತ್ತೆ ಕಾಲೂರಬೇಕು. ಇದು ನಾಸಾದ ವಿಚಾರ. ಅದಕ್ಕೇ ಭಾರತವನ್ನು ಗ್ರೇಟ್ ಮಾಡುವ ಹುನ್ನಾರ.