ಅನಂತ ನೀಂ: ಮನಮನಕೆ ಮನದನ್ನೇ!
ಮನೆಮನೆಗೆ ಕಣ್ಣಾಗಿ ಬರುವ ಕನ್ಯೆ,
ಕೆನ್ನೆಯೊಳೆ ಬೈಗುಬೆಳಗಾಗಿಸುವ ನೀನೆ ಧನ್ಯೆ!

ಎಲ್ಲ ಲೋಕಗಳೆಲ್ಲ ಸೌಂದರ್ಯವೀವೊಂದೆ
ಸುಂದರ ಶರೀರದಲಿ ನಯನರಮ್ಯ;
ಎಲ್ಲ ಲೋಕಗಳೆಲ್ಲ ಸಂತೋಷವೀವೊಂದೆ
ವದನದ ಗವಾಕ್ಷದಲಿ ಹೃದಯಗಮ್ಯ;
ಎಲ್ಲ ಲೋಕಗಳೆಲ್ಲ ಪ್ರೇಮರಸವೀವೊಂದೆ
ಚೆಂದುಟಿಯ ಹೊಂದಳಿಗೆಯಲಿ ಸಮಾಕೀರ್ಣ;
ಎಲ್ಲ ತೃಷ್ಣೆಗಳೆಲ್ಲ ಸಂತೃಪ್ತಿಯೀವೊಂದೆ
ಹೊಂಗಳಸದಾಲಿಂಗನದಿ ಸುಧಾಪೂರ್ಣ!

ಅನಂತವೀ ಸಾಂತದಲಿ ನಿತ್ಯಮವತರಿಸಿ ನಿಂತು
ಸಿರಿಸೊದೆಯನೆರೆಯುತಿದೆ ಬಾಳ ನೀರಡಿಕೆಗಿಂತು:
ತನತನಗೆ ತಾನೆ ತಾನೊಲಿದ ಪೆಣ್ಣೊಡಲನಾಂತು
ಮನೆಮನೆಗೆ ಮಗಮಗಿಸಿ ನಗೆಯ ಕೈಸೊಡರು ಬಂತು!
ಹೇ ದೇವಿ, ನೀನನಂತೆ;
ಕೃಪೆಯಿಂದೆ ಮನೆಮನೆಯೊಳಾದೆ ಸಾಂತೆ,
ಮತ್ತೆ ಮನಮನದೊಳಂತೆ ನಿಂತೆ; —
ಓ ಅಮೃತ ಶಾಂತೆ,
ಸಚ್ಚಿದಾನಂದ ವಿಶ್ರಾಂತೆ,
ಎದೆಯೆದೆಗೆ ಇಳಿದು ಬಾ ಎದೆಯನ್ನೆಯಂತೆ!