ನಿಶೆಯ ಸೀರೆಗೆ ಅಂಚು
ಕಟ್ಟಿತ್ತುಷೆಯ ಕೆಂಚು:
ಚಿನ್ನದೋಕುಳಿ ಚೆಲ್ಲಿ
ಮಂಚಪರದೆಯ ಬೆಳ್ಳಿ
ಮಿಂಚುಗೆರೆಯಾಂತು
ಹೊನ್ನಾಯ್ತು ತಂತು! —
ಬೆಳಗಾದುದಂತೂ!!

ಎಚ್ಚತ್ತು ಕಣ್ದೆರೆದೆ:
ಏನಚ್ಚರಿ!
ಪವಡಿಸಿಹುದೊತ್ತಿನೊಳೆ
ಚಿತ್ತಜಶ್ರೀ!
ಅಮರೆಯಿಂದೈತಂದು
ನೆಲವ ಕೈಹಿಡಿದೊಂದು
ತಟಿದಪ್ಸರಿ! —

ನನ್ನ ನೀಡಿದ ತೋಳೆ
ಹೊನ್ನ ತಲೆಗಿಂಬಾಗೆ
ಮುದ್ದಾಗಿ ಮಲಗಿರ್ದ
ಪದುಮಿನಿಯೊಳಿರ್ದೆರಡು
ಕಂಗೊಳಿಪ ಕೊಳಗಳಲಿ
ನೀರಾಡಿದೆ!
ತುಂಬಿಯಾಗುತೆ ಹಾಡಿ
ಎಸಳೆಸಳ ನಿರಿಯಾಡಿ
ಕೇಸರಂಗಳ ಕಾಡಿ
ಹಾರಾಡಿದೆ!
ಮಧುರರಸದ ಮಡುವಿನಲಿ
ಮುಳುಗಾಡಿದೆ! —

ಚಕ್ರವಾಕವನೊತ್ತಿ
ಶೈವಾಲಗಳನೆತ್ತಿ
ಬೀಸಾಡಿದೆ!
ತೆರೆಮರೆಯ ಸವಿ ಹೀರಿ
ಹೊಮ್ಮಳಲ ನಡುವೇರಿ
ಈಸಾಡಿದೆ!
ಕಟಿಗೆ ಬಂಧನವಾಗಿ
ತುಟಿಗೆ ಚಂದನವಾಗಿ
ಓಲಾಡಿದೆ!
ಜೇನಾಗಿ ಮೀನಾಗಿ
ನಾನಾಗಿ ತಾನಾಗಿ
ತೇಲಾಡಿದೆ!
ಹಾಲಾಡಿದೆ! —

ಮಂಚವಾಯಿತೊ ಮದನ
ಸುರನಂದನ;
ಪ್ರೇಮಾಂಗಿನಿಯ ವದನ
ಶಚಿಯ ಸದನ:
ಕ್ಷೀರಸಾಗರ ಮಥನ
ಕಥನವಾಗಲು ಮಿಥುನ
ರದನ ಕದನ,
ಮಿಲನ ಬೃಂದಾವನದ
ನಿಧುವನ ನಿಕುಂಜದಲಿ
ಭೋಗನರಹರಿ ನಖದ
ಮುಖದೊಳಾದುದೊ ಸುಖದ
ಅಂಮೃತನಿಧನ!