ನೀನಿರೆ ಬೆಂಬಲ, ಹಗುರ ಹಿಮಾಚಲ;
ನೀ ಹೋದರೆ ದೂರ
ಅರಳೆಯೆ ಗಿರಿಭಾರ!
ನೀನೊಡನಿರೆ ನಾ ರಸಸಂಗಿ;
ದಿಟ ನೀನರ್ಧಾಂಗಿ!

ಇದನೆಂಬರೆ ತಿರೆ, ನೀ ಕಣ್ ಮುಂದಿರೆ?
ನೀನಿರೆ ಸಂಸಾರ
ತಾನಿಕ್ಷುಕ್ಷೀರ
ನೀ ನೀರೆ,
ನಾ ನೀರ;
ಈ ಪಾರ,
ಆ ಪಾರ,
ತೋಳ್ ತಬ್ಬಿದ ನಾವಿಬ್ಬರೆ
ರಸಕೆರಡೇ ತೀರ!