ಆವ ಮುಖದದಾವ ಸುಖದದಾವ ದುಃಖಕೆ
ಇಂದುಕಲಾ ಬಂದಿಹೆ ನೀನಿಂದು ಪೃಥಿವಿಗೆ?
ಹೆಗೆತನದಾ ನೆತ್ತರಿಂದ ನಾಂದ ಪೃಥಿವಿಗೆ?
ಸ್ವಾಮ್ಯ ದಾಸ್ಯದಿರ್ಕುಳದಲಿ ನೊಂದ ಪೃಥಿವಿಗೆ?

ಆಷಾಡದ ನಿಶೆ ಮೋಡದ ಮುಡಿಯ ಕಟ್ಟಿರೆ
ಕರಿಯ ತಿಂಗಳಾಯು ಚೈತಿಗಡಿಯ ಮುಟ್ಟಿರೆ
ಹಗಲು ಸದ್ದನಿರುಳು ಗೆದ್ದು ಗುಡಿಯ ನಟ್ಟಿರೆ
ಕೇಳಿ ಬಂದುದಿಂಪಿನ ಕರೆ: ನೀನು ಹುಟ್ಟಿರೆ!

ಏನದ್ಭುತಮೇನಚ್ಚರಿ ಜನ್ಮಧಾರಣೆ!
ಸಾವನುಳಿದು ಆ ಪವಾಡಕೆಣೆಗಳಿಹವೆ ಹೇಳ್?
ಅತಿಪರಿಚಯದಿಂದವಜ್ಞೆಯೆಂಬುದಿರದಿರೆ
ಅಚ್ಚರಿಗಳ ನಡುವೆ ಹರಿವ ಬದುಕು ಅಚ್ಚರಿ!