ಏಳು, ರಮಣಿ, ಏಳು! ಅದೋ
ಪೂರ್ವದಿಶಾದೇವಿಯಾರ್ಯ
ಮೂಡುತಿಹನು ಉದಯಸೂರ್ಯ;
ಕೈಮುಗಿದು ಮಣಿ!
ಜಗತ್ ಪ್ರಾಣ ಶಕ್ತಿ ಸಿಂಧು,
ಜಗಜ್ಜೀವ ಹೃದಯ ಬಂಧು,
ದೇವ ದಿನಮಣಿ!

ಓಪನೊಡನೆ ಸರಸಗೆಯೈ,
ಹೆರಳು ಬಿಚ್ಚಿ, ಮುಡಿಯಿನುದುರಿ
ಚುಕ್ಕಿಯರಳು ಬೀಳೆ ಕೆದರಿ,
ಕಿಕ್ಕಿರಿದುದೊ ನೀಲಶಯ್ಯೆ!
ತಿಂಗಳಿನಿಯನದನು ನೋಡಿ
ತೆಳು ಬೆಳ್‌ಮುಗಿಲುಡೆಯನಿಳ್ದು
ಚೆಲ್ವುಮೆಯ್ಯ ಸೊಗದೊಳಳ್ದು
ನಗೆಬೇಳಗಿದನಣಕವಾಡಿ!

ಗಗನಗೃಹದೊಳಿರುಳೆಲ್ಲಂ
ಶಶಿ ನಿಶೆಯರ್ ದಂಪತಿಗಳ್
ಮೆಯ್ ಮರೆತಿರೆ ರಸಸುಖದೊಳ್
ಪಗಲಿಣುಕಿತ್ತದೊ ಮೆಲ್ಲಂ!

ನೆಲಬಾನ್ಗಳ್ ಕೂಡುವಲ್ಲಿ
ಎಳನೇಸರ್ ಮೂಡುವಲ್ಲಿ
ಮಲೆನೆತ್ತಿಯ ಕೋಡಿನಲ್ಲಿ
ತೋರಿದಳದೊ ಬಂದಳು!
ಆರ್ ಅನಿಮಿಷೆ? ಸುಂದರಿ ಉಷೆ!
ಏರಿದಳದೊ ನಿಂದಳು!
ಹಳದಿಗೆಂಪೆ ಬಣ್ನಸೀರೆ:
ಒಸಗೆಯೋಕುಳಿ!
ಉದಯರವಿಗೆ ರಾಗವೇರೆ
ಭೋಗಮುಖದಲಿ
ಮೈಯ್ಯಲಿ ರತಿ, ಕೈಲಾರತಿ,
ಮೂಲೋಕದ ಅವಲೋಕದ
ಗುರಿಯೆನಲಲ್ಕೆ ಸಿರಿಯೆನಲ್ಕೆ
ಬಂದನಿಮಿಷ ನಿಂದಳೊ ಉಷೆ
ಓ ದಿಗಂತದಿ! —
ಎನುತೆ ಬಾನಿನುಪ್ಪರಿಗೆಯ
ಮೇಲುಹಂತದಿ
ಚಂದ್ರನ ತತಿ ನಿಶಾಯುವತಿ
‘ಏಳಿ! ಬಿಡಿ!’ ಎಂದು ನಾಚಿ
ತಲೆಯ ಕತ್ತಲೆಯನು ಬಾಚಿ;
ಬಿಚ್ಚಿದುಡೆಯ ಸೋರುಮುಡಿಯ
ಕೆದರಿದರಿಲ್ಗಳಲರ್ವುಡಿಯ
ಸುತ್ತಿ, ಕಟ್ಟಿ ಕೂಡೆವೊಟ್ಟಿ,
ಓಡಿವೋದಳು!
ಅಯ್ಯೊ, ಶಶಿಯ ಮುಖ ಮರೀಚಿ
ಬತ್ತಿ ಬಾಡಿ ಬೆಳ್ಳಗೇರೆ
ಕರುಣಣೆಯಿಲ್ಲದಿರುಳ ನೀರೆ
ಹಗಲಾಣ್ಮಗೆ ಹೆದರಿ ನಾಚಿ
ಮಾಯವಾದಳು!

ಕಂಪುವೆತ್ತು ತಂಪುಗಾಳಿ
ಪುಷ್ಪಧೂಳಿಗಳನು ಸೂಸಿ
ವೃಕ್ಷಗಳನೆ ಚವರಿವೀಸಿ
ನವೋದಯವ ಸಾರಿ ಹೇಳಿ
ಸುಯ್ಯತಿರುವುದೊಯ್ಯನೆ;

ಉಷಾಮೌನ ವೀಣೆತಂತಿ
ಸ್ವರತರಂಗ ತತಿಯನೆಸೆಯೆ,
ಸೊಬಗಿಗಿಂಪು ಸಾಣೆಮಸೆಯೆ,
ವೃಕ್ಷಗಳಲಿ ಪಕ್ಷಿ ಪಂಕ್ತಿ
ಉಲಿಯುತಿಹುದು ರಯ್ಯನೆ!

ನಿದ್ದೆ ಸಾಕು, ಏಳು , ರಮಣಿ:
ಮೂಡಿ ಬಂದನದೋ ಖಮಣಿ!
ಕೈಮುಗಿದು ಮಣಿ!
ನಮ್ಮ ಬಾಳ್ಗೆ ಬೆಳಕೆ ಕಣ್ಣು:
ಪ್ರಾಣಕಮೃತ ರಸದ ಹಣ್ಣು
ದೇವ ದಿನಮಣಿ!