ಗೃಹವೆ, ಬರುವಳೆಂದು ಗೃಹಿಣಿ,
ಹೇಳು, ನನ್ನ ಸಹಧರ್ಮಿಣಿ?
ತವರಿಗಂದು ತೆರಳೆ ತರುಣಿ
ಅಸ್ತವಾದನೆನ್ನ ದ್ಯುಮಣಿ.
ಚೆಂಡುಹೂವು, ಜಿನಿಯ ಹೂವು,
ಚುಕ್ಕಿಚುಕ್ಕಿ ರಾಸಿ ಹೂವು,
ಕಾಶಿತುಂಬೆ, ಏನನೆಂಬೆ!
ತೋಟ ತುಂಬಿ, ನೋಟ ತುಂಬಿ,
ಮೆರೆಯುತಿಹವು ಮೋಹವರಳಿ
ಸಂಗದಾಸೆಯುರಿಯ ಕೆರಳಿ!
ಎಂದು ಬಹಳು ನನ್ನ ಪ್ರೇಮಿ?
ಹೇಳು, ಗೃಹವೆ! ಸಂಗಕಾಮಿ
ಅಂಗಲಾಚಿ ನಾಚಿ ನಾಚಿ
ಯಾಚಿಸಿಹನು ಕವಿಸ್ವಾಮಿ!
ಏನು ಬರಿಯ ಗೃಹವೆ ನೀನು?
ಗೃಹದೇವತೆ! ಬಲ್ಲೆ ನಾನು!
ಮೃಣ್ಮಯದಲಿ ನೀ ಸೌಧ,
ಚಿನ್ಮಯದಲಿ ಗುರುಪಾದ!
ಹೇಳು, ಹೇಳು: ನಿನ್ನ ಮಗಳು
ಎಂದು ಬಹಳು ನನ್ನವಳು?