ಜೀವನಾ! ಸಂಜೀವನಾ!
ನನ್ನ ಜೀವಕೆ ನೀನೆ
ಜೀವನಾ! ಸಂಜೀವನಾ!
ನೀನುಳಿಯೆ ನಾನು ನೀರುಳಿದ ಮೀನು;
ನೀನೆ ಜೀವನ ಜೀವನಾ ಸಂಜೀವನಾ!

ತಂಪಲಾ! ಜೇನಿಂಪಲಾ!
ನನ್ನ ಉಸಿರಿಗೆ ನೀನೆ
ತಂಪಲಾ! ಜೇನಿಂಪಲಾ!
ನೀನು ಮುನಿದರೆ ಬಿಸಿಲ್;
ನೀನೊಲಿಯೆ ತಣ್ಣಿಳಲ್;
ನನ್ನ ಬಾಳಿಗೆ ತಂಪಲಾ ನೀ ಜೇನಿಂಪಲಾ!

ಕಂಪಲಾ! ಸವಿಸೊಂಪಲಾ!
ಪದ್ಮ ಹೃದಯಕೆ ನೀನೆ
ಕಂಪಲಾ! ಸವಿಸೊಂಪಲಾ!
ನೀನಪ್ಪಲಾನ್ ಅಮೃತ;
ನೀ ತಪ್ಪಿದರೆ ನಾ ಮೃತ!
ನನ್ನೆದೆಯ ಕಮಲದ ಕಂಪಲಾ ನೀ ಸವಿಸೊಂಪಲಾ
ಜೀವನಾ! ಸಂಜೀವನಾ!
ನನ್ನ ಜೀವಕೆ ನೀನೆ
ಜೀವನಾ! ಸಂಜೀವನಾ!