(ಗೌರಿಹಬ್ಬಕ್ಕೆ ಕಬ್ಬಗಾಣಿಕೆ)

ನಮ್ಮ ಬಾಳಿಗೆ
ಸಾಕ್ಷಿ ಹೋಳಿಗೆ!
ನಾನು ಕಣಕ, ನೀನು ಹೂರ್ಣ:
ನಿನ್ನನಪ್ಪೆ ನಾನು ಪೂರ್ಣ!
ನಾನಿಲ್ಲದೆ ನೀನು ಚೂರ್ಣ;
ನೀನಿಲ್ಲದೆ ನಾನು ಶೀರ್ಣ!
ಎರಡು ಹೆಸರು, ಒಂದೆ ಉಸಿರು;
ನಾನು ಪತಿ, ನೀನು ಸತಿ
ಒಂದೆ ದಂಪತಿ!

ನಿನ್ನ ವಿನಾ ನಾನು ಶೂನ್ಯ;
ತೊರೆಯೆ ನೀನು ನಾ ಜಘನ್ಯ.
ನಿನ್ನ ತಪ್ಪಿ ನಾನು ರಿಕ್ತ;
ನಿನ್ನನೊಪ್ಪಿ ನಾ ಸುಶಕ್ತ.
ನೀ ಬಂಧಿಸೆ ನಾ ವಿಮುಕ್ತ;
ಆಲಿಂಗಿಸೆ ಯೋಗಯುಕ್ತ!
ಎರಡು ಹೆಸರಿಗೊಂದೆ ಉಸಿರು:
ನಾನು ಪತಿ, ನೀನು ಸತಿ,
ಒಂದೆ ದಂಪತಿ!