ನಮಸ್ಕರಿಸಿ ನಮಸ್ಕರಿಸಿ
ನನ್ನನಮರಗೈದಿಹೆ:

ರವಿಚುಂಬನ ಲಜ್ಜೆಯಿಂದೆ
ಕೆಂಪೇರ್ದುಷೆ ಮೂಡುವಂದೆ,
ಕವಿಚುಂಬನ ಲಜ್ಜೆಯಿಂದೆ
ಸಜ್ಜೆಮಂಚವಿಳಿವ ಮುಂದೆ
ನನ್ನ ಪಾದಗಳೆಗೆ, ಚಿನ್ನ,
ನಮಿಸಿ ನಮಿಸಿ ನೀನು ನನ್ನ
ದೇವಗೈದಿಹೆ!

ಒಡಲ ಉಸಿರ ಸರ್ವಾಂಗಕೆ
ಜೀವತ್ವದ ಸರ್ವಸ್ವಕೆ
ದೇವತ್ವವನಾಹ್ವಾನಿಸಿ
ದಿವ್ಯನದಿಯ ವಾರಿಯಲ್ಲಿ
ಅನುದಿನವೂ ದಿನದನವೂ
ಮೀಹಗೈದಿಹೆ!

ನನ್ನ ದನುಜತನದ ಕೊಲೆಗೆ
ನಮನವೊಂದು ಕೈದುವಾಗೆ,
ದೇವರಡಿಗಳಿಳಿವ ಕಲೆಗೆ
ಮುಡಿಯ ಮಣಿಹ ಸೂತುವಾಗೆ,
ಒಂದೊಂದೆಯ ನಮನದಿಂದೆ
ನನ್ನಲ್ಪವನೆಲ್ಲ ಕೊಂದೆ;
ಧಮನಿಧಮನಿಯಲ್ಲಿ ಹರಿವ
ನೆತ್ತರೆಲ್ಲ ಅಮೃತವಾಗೆ
ಮನುಜತನವನಳಿಸಿಹೆ;
ದಿವಿಜತನವಳಿಸಿಹೆ;
ನನ್ನನಳಿಸಿ ಉಳಿಸಿಹೆ!
ಸತಿಗೆ ಪತಿಯ ದೇವರೆಂಬ
ನುಡಿಗೆ ಗುಡಿಯ ಕಟ್ಟಿಹೆ!
ಮಣಿದೆ ಮಣಿದೆ ಮರ್ತ್ಯನನೂ
ಅಮರ ಪದವಿಗಟ್ಟಿಹೆ!