ಏಕೀ ಆಶಾಂತಿ? ಹಾತೊರೆಯುತಿಹುದೀ ಪ್ರಾಣಿ
ಸತಿಯ ಸಂಗಕೆ ಕಾತರಿಸಿ! ಪುಸಿಯೆ ಪೇಳ್ ಶಾಂತಿ?
ಬರಿಯ ಇಂದ್ರಿಯ ತೃಪ್ತಿಜನ್ಯ ನರವಿಶ್ರಾಂತಿ? —
ಕರುಣಿಸಯ್, ಓ ಗುರುವೆ: ನಿಮ್ಮ ಪಾದದ ದೋಣಿ
ತೃಷ್ಣೆಯಗ್ನಿಯ ಘೋರ ಶರಧಿಯಿ ತೀರಕ್ಕೆ
ತೇಲಿ ಬರಲೀ ನನ್ನ ದಡಕೆ. ಪಶುಸಂಭ್ರಾಂತಿ
ಶಾಂತಿಯೆಂಬಾ ಭ್ರಾಂತಿಯಂ ತವಿಸಿ, ನಿಜಶಾಂತಿ
ಹೃದಯ ಸುಸ್ಥಿತಮಪ್ಪವೋಲ್ ನಿಮ್ಮ ದಯೆಯಕ್ಕೆ!

“ಪೆಂಡಿತಿ ತವರ್ಮನೆಗೆ ಪೋಗೆ, ಕಾಣರೋ ಕಾಣಿ,
ನಿಮ್ಮ ರಸಋಷಿ, ಮಹಾಕವಿ ಮೇಣ್ ಕಲಾಯೋಗಿ
ಕೆಸರೊಳೊದ್ದಾಡುತಿದೆ ನೀರು ತಪ್ಪಿದ ಮೀನಿನೋಲ್!
ಮರ್ಯಾದೆಗೇಡಿ ಕಾಣ್ ಗಾಂಭೀರ್ಯವೂ ನಿರ್ವಾಣಿ!
ಸಾಲ್ಗುಮಿ ಹಮ್ಮುಬಿಂಕಂ. ಏಳು, ತವರಿಗೆ ಹೋಗಿ
ಕರೆದು ತಾ: ನಿನಗಿರ್ಪುದಯ್ ಶಾಂತಿ ನಿನ್ನಾಕೆಯೋಲ್!”