ದೇವನಿತ್ತ ಧರಾಸ್ವರ್ಗ
ನನಗೆ ನಿನ್ನ ಮೆಯ್!
“ಪಂಚಭೂತ, ಬರಿ ನಿಸರ್ಗ!”
ಎಂಬರೇನಯ್?
ವಿದ್ಯುದಣುಗಳೊಂದು ಸಂಧಿ
ಎಂದ ಮಾತ್ರಕೆ
ಭಂಗ ಬಹುದೆ, ಹೇಳು, ಮಧುವ
ಮಧುರಪಾತ್ರಕೆ?

ಅಲರ ಕಂಪು, ಎಲರ ತಂಪು,
ತಳಿರ ಸೊಂಪು;
ಏಕಾಂತದ ವೀಣೆಯಂತೆ
ಪ್ರಾಣದಿಂಪು:
ದೇವನಿತ್ತ ಧರಾಸ್ವರ್ಗ
ನನಗೆ ನಿನ್ನ ಮೆಯ್!
“ಪಂಚಭೂತ, ಬರಿ ನಿಸರ್ಗ!”
ಎಂಬರೇನಯ್?