ನನ್ನ ಅಕ್ಕರೆ
ಜೇನುವುಕ್ಕಿರೆ
ನೀನು ನಕ್ಕರೆ
ಹಾಲು ಸಕ್ಕರೆ:
ಹಾಲಿನಲ್ಲಿ ಸಕ್ಕರೆ
ನಿನ್ನೊಳೆನ್ನ ಅಕ್ಕರೆ!
ಅಮರವೃಕ್ಷ ಮುಖದಲಿ
ಅಧರಮಧುವನೀಂಟುವೆ;
ಅಮೃತವೃಕ್ಷ ಸುಖದಲಿ
ಆನಂದವೀಣೆ ಮೀಂಟುವೆ;
ಮರ್ತ್ಯದಾ ಕ್ಷಣಿಕದಲಿ
ದಿವೌಕಸಕ್ಕೆ ದಾಂಟುವೆ!
ನನ್ನ ಅಕ್ಕರೆ. . . .
ಇಂದ್ರಿಯಂಗಳೆ
ಇಂದ್ರನಂದನ!
ನಾಲ್ಕು ನೋಟದಾ
ಏಕ ಕೂಟದಾ
ಸೋತ ಕಂಗಳೆ
ಸೇತು ಬಂಧನ:
ಭಾವಭೂಮಿಗೇರುವೆ;
ದೇವತ್ವಕೆ ಹಾರುವೆ.
ನನ್ನ ನಿನ್ನ ಸೇರುವೆ
ನಾನು ನೀನು ಮೀರುವೆ:
ನಶ್ವರದಾ ಕ್ಷಣದಲಿ
ಶಾಶ್ವತವನೆ ಹೀರುವೆ!
ನನ್ನ ಅಕ್ಕರೆ. . . .