ನಿನಗೆ ಕಡಮೆ, ನನಗೆ ಹೆಚ್ಚು!
ಅವನ ಹುಚ್ಚಿಗೆ
ಇದಿರೆ ಹೇಳು ನಮ್ಮ ಕೆಚ್ಚು,
ದೇವರಿಚ್ಛೆಗೆ?

ನಿನ್ನ ತೃಷ್ಣೆಗೊಂದೆ ಸಾಕು
ಕಿರಿ ತರಂಗ.
ನನ್ನ ತೃಷ್ಣೆಗೆತ್ತ ಸಾಕು
ಉದಧಿರಂಗ?
ಅಂಗ ಮಾತ್ರವಲ್ಲ, ಬೇಕು
ನಿನ್ನ ಸಂಗ;
ಸಂಗ ಮಾತ್ರವಲ್ಲ, ಬೇಕು
ಅಂತರಂಗ!

ಕ್ಷಮಿಸು, ಪ್ರಿಯೆ! ತೋರು ದಯೆ!
ಹೃದಯ ಹಸಿದಿದೆ!
ಅನ್ನವೂಡಿ ಸಲಹು, ಪ್ರಿಯೆ,
ಬಾಳು ಕುಸಿದಿದೆ!
ಒಡಲು ಉಸಿರೊಳಗ್ನಿಮಯೆ
ನಗ್ನೆ ಕುಣಿವಳುರ್ವಸಿಯೆ!
ಏನೊ ಏನೊ ಏನೊ ಏನೊ
ಏನೊ ಮಸೆದಿದೆ!
ಹೃದಯ ಹಸಿದಿದೆ!

ಅಮೃತ ಕಲಶ ತೀರ್ಥ ಜಲದ
ಮಧುರ ವಕ್ಷ ಮೃದುಸ್ಥಲದಿ
ಮಲಗಿಸೆನ್ನ ಮುದ್ದಿಸು,
ರಸೋನಿದ್ರೆಗದ್ದಿಸು!
ಚಂದ್ರ ಕಿರಣ ಸದೃಶ ಚರಣ
ಮಧು ಮೋಹನ ಸುಧಾತಲದಿ
ಚುಂಬಿಸೆನ್ನ ಮುದ್ದಿಸು,
ಭೋಗಸುಪ್ತಿಗದ್ದಿಸು!
ಆತನುಮಂಚದಿಕ್ಷು ಬಿಲದ
ಪುಲಕ ಚಂಚರೀಕ ಕುಲದ
ಅತುಲ ನೀಲ ರಸಸ್ಥಲದಿ
ಆಲಿಂಗಿಸು, ಮುದ್ದಿಸು,
ಕ್ಷೀರಮೂರ್ಛೆಗದ್ದಿಸು!