ನೋಡಿ ಕಣ್ ಸಾರ್ಥಕ!
ಕೇಳಿ ಕಿವಿ ಸಾರ್ಥಕ!
ಸೋಂಕಿ ಮೆಯ ಸಾರ್ಥಕ!
ಅಪ್ಪಿ ಬಾಳ್ ಸಾರ್ಥಕ!

ಚೆಲುವಿಗಿರಲು ಒಡಲ ಮನೆ
ಒಲವುಗಡಲಿಗಿಹುದೆ ಕೊನೆ?
ನಾನೆ ಪಯಿರು, ನೀನೆ ತೆನೆ;
ಬಾಳ ಬಾಳೆಗಿನಿಯೆ ಗೊನೆ!
ರಸವೆ ತೆನೆ, ರಸವೆ ಕೊನೆ;
ನೆನೆ, ನೆನೆ, ತೂಗಿ ತೊನೆ!

ಹರಿಯುತಿಹುದನಂಗ ನದಿ
ಅಂಗ ಅಂಗ ಅಂಗದಿ;
ವಿರಹ ಮಿಲನ ನರಕ ನಾಕ
ದುಃಖ ಸುಖ ತರಂಗದಿ
ಪಾತ್ರವಾಡುತಿಹುದು ನನ್ನ
ಹೃದಯಮೀನನೇತ್ರ ನಿನ್ನ
ಪ್ರೇಮಹೇಮ ರಂಗದಿ!