ನೀನಂದು ತಂದೆತಾಯಂದಿರನು ಬೀಳ್ಕೊಂಡು
ಕಾಡಿಗೆಯ್ದಿದ ಧೃತಿಯೊಳೊಂದಿನಿತನೆನಗೆ
ಕರುಣಿಸಾಶೀರ್ವದಿಸು,ಓ ತಂದೆ ದಾಶರಥಿ:
ಏಕಾಂಗಿ ನಾನಿಂದು ದುಃಖದೀನ!

ದಶಶಿರನ ಕೈತವಕೆ ನೀನು ಸೆರೆಯಾದಂದು
ತೋರ್ದ ಶ್ರದ್ಧಾಧೃತಿಯೊಳೊಂದಿನಿತನೆನಗೆ
ಕರುಣಿಸಾಶೀರ್ವದಿಸು, ಓ ತಾಯಿ ಮೈಥಿಲಿಯೆ:
ಏಕಾಂಗಿ ನಾನಿಂದು ಶೋಕಲೀನ!

ಕಪಿಬಲಕೆ ಕಳೆದುಸಿರು ಮರಳ್ವಂತೆ, ನೀನಂದು
ಕಡಲ ನೆಗೆದಾ ಧೃತಿಯೊಳೊಂದಿನಿತನೆನಗೆ
ಕರುಣಿಸಾಶೀರ್ವದಿಸು, ಓ ವೀರಮಾರುತಿಯೆ:
ಏಕಾಂಗಿ ನಾನಿಂದು ಹೃದಯಹೀನ!

ನವವಧೂ ಊರ್ಮಿಳೆಯನಗಲಿ ಸೇವಾತಪದಿ
ನಿಂದ ನಿನ್ನಾ ಧೃತಿಯೊಳೊಂದಿನಿತನೆನಗೆ
ಕರುಣಿಸಾಶೀರ್ವದಿಸು, ಓ ಧೀರ ಸೌಮಿತ್ರಿ:
ಏಕಾಂಗಿ ನಾನಿಂದು ಬಂಧುಲೂನ!