ನಿನ್ನ ಮಂತ್ರಕೆ ಎಲ್ಲಿ ಓ ಇರುವುದೆಲ್ಲೆ?
ಹೇಳೆನ್ನ ನಲ್ಲೆ!

ಎನಿತು ದುಗುಡವೆ ಇರಲಿ
ಎನಿತು ಬಳಲಿಕೆ ಇರಲಿ
ಒಂದೆ ಚರಣದಲಿ ನೀನು
ಪರಿಹರಿಸ ಬಲ್ಲೆ,
ಓ ನನ್ನ ನಲ್ಲೆ!

ಎನಿತು ಉಲ್ಲಸವಿರಲಿ
ಎನಿತು ಸಿರಿಸೊಗ ಬರಲಿ
ಒಂದೆ ಚರಣದಲಿ ಎಲ್ಲ
ಸಂಹರಿಸಬಲ್ಲೆ,
ಓ ನನ್ನ ನಲ್ಲೆ!

ನರಕದಲಿ ನಾಕವನೆ
ನೀ ಸೃಜಿಸಬಲ್ಲೆ;
ನಾಕವನು ನಿಂತಲ್ಲೆ
ನರಕವಾಗಿಸಬಲ್ಲೆ,
ಓ ನನ್ನ ನಲ್ಲೆ!

ನಿನ್ನ ಮಂತ್ರಕೆ ಎಲ್ಲಿ ಓ ಇರುವುದೆಲ್ಲೆ?
ಹೇಳೆನ್ನ ನಲ್ಲೆ!