ಯೋಗವನು ಕಾಲ್ವಿಡಿದು ಭೋಗಮಾರ್ಗದಿ ನಡೆದು
ತ್ಯಾಗವನು ಸಾಧಿಪುದು ನಮ್ಮ ದಾರಿ.
ಮೊದಲು ಕಾಲುವೆ ನೆಗೆದು, ಮೇಲೆ ಕಡಲನು ನೆಗೆವ
ಸಾಹಸವೆ ನೀತಿ, ಓ ನನ್ನ ನಾರಿ!

ಜನುಮ ಜನುಮಾಂತರದ ಸಂಸ್ಕಾರ ಸಂಗವನು
ತೆಕ್ಕನೆ ವಿಸರ್ಜಿಸುದೆಮ್ಮ ಅಳವೆ?
ತನ್ನ ಸಮಯಕೆ ಮೂಡುವಲರ ನೀ ಮುನ್ನಮೆಯೆ
ಗಿಡದ ಗಬ್ಬದಿನೆಂತು ಹೊರಗೆ ಎಳೆವೆ?

ಸಾಧನೆಯ ಕಣದಿ ಗೆಲ್ಲುವೆವು ಗುರುಕೃಪೆಯಿಂದ
ಹಜ್ಜೆ ಹಜ್ಜೆಗೆ ಹೋರಿ ಕೆಡೆದು ಸೋತು.
ಸೋಲಿನ ಕಮಾನುಗಳೆ ಸಾಲ್ಗಟ್ಟಿ ನಿಲೆ, ಹುಟ್ಟಿ
ಬಟ್ಟೆವರಿವುದು ನಮ್ಮ ವಿಜಯಸೇತು!