ಎತ್ತ ತಿರುಗಲಿ ಕಣ್ಣು, ನಿನ್ನ ಕಾಣುವಾಸೆ;
ಏನ ನೆನೆಯಲಿ ಚಿತ್ತ, ನಿನ್ನ ಚಿಂತಿಪಾಸೆ;
ನುಡಿವ ನಾಲಗೆಗೊಂದೆ ನಿನ್ನ ಹೆಸರಿನಾಸೆ;
ಮಣಿವ ಹಣೆಗಿಹುದೊಂದೆ ನಿನ್ನ ಚರಣದಾಸೆ!

ಮುತ್ತಿಡುವ ತುಟಿಗೊಂದೆ ನಿನ್ನ ಕೆನ್ನೆಯಾಸೆ;
ಆಲಿಂಗಿಸುವ ತೋಳ್ಗೆ ನಿನ್ನ ವಕ್ಷದಾಸೆ.
ಮೊಲ್ಲೆ ಮಲ್ಲಿಗೆ ರಾಶಿ: ಮೆಯ್ಯನಪ್ಪುವಾಸೆ;
ಜೀವದುಂಬಿಗೆ ಮೂಸಿ ತಣಿವನೊಪ್ಪದಾಸೆ!

ಉಸಿರು ಉಸಿರೊಳು ನಿನ್ನನೊಳಗೆ ಕೊಳ್ಳುವಾಸೆ;
ಉಸಿರು ಉಸಿರೂ ನಿನ್ನೊಳೈಕ್ಯವಾಗುವಾಸೆ.
ಹೀರಿದನಿತೂ ಹೀರಿ, ಸೇರಿಹೋಗುವಾಸೆ;
ಸೇರಿದನಿತೂ ಸೇರಿ, ಬೇರೆಯಾದದಾಸೆ!