ಇಂದು ಕೈಕೊಳ್ಳುವೆವು ನಿಮ್ಮ ಪದತಲದಲ್ಲಿ
ಬ್ರಹ್ಮಚರ್ಯವ್ರತವ, ಗುರುವೆ, ತಾಯಿ.
ಪಶುಮಾನರು ನಾವು; ನಿತ್ಯಮುಕ್ತರು ನೀವು;
ನೋಂಪಿ ಗೆಲುವಂತೆಮ್ಮ ಹರಸಿ, ಕಾಯಿ.

ವಿಹರಿಸಿದೆವಿಂದಿಯಂಗಳ ಇಂದ್ರನಂದನದಿ
ಹತ್ತು ವರುಷಗಳಿಂತು ನಿಮ್ಮ ಕರುಣೆಯಲ್ಲಿ;
ಬಿಡಿಸಿ ನಮ್ಮನು ಮಧುರ ಮಾಯೆಯಿ ಪಾಶದಿಂ;
ಮುಳುಗಲಾ ತೃಷ್ಣೆ ನಿಮ್ಮಡಿಯ ಮಡುವಿನಲಿ.

ನಮ್ಮಹಂಕಾರದಿಂ ನಾವಿದನು ಕೈಗೊಂಡು
ಕಡೆಹಾಯಿಸುವ ಹೆಮ್ಮೆ ನಮ್ಮದಿನಿತಲ್ಲ;
ನಮ್ಮ ಭಕ್ತಿಗೆ ಒಲಿವ ನಿಮ್ಮ ಕೃಪೆ ತಾಂ ಶಕ್ತಿ;
ಅದನುಳಿದರೆಮಗಾವ ಬೇರೆ ಬಲವಿಲ್ಲ.

ನಾವಿಲ್ಲಿ ಕತ್ತಲಲಿ; ನೀವಲ್ಲಿ ಬೆಳಕಿನಲಿ;
ಕನಿಕರಿಸಿ ಕಿರಣಚರಣವನಿತ ನೀಡಿ!
ಬಲ್ವಿಡಿಯುತಾ ಪಾದಪಂಕೇಜಮಂ, ತಾಯಿ,
ಪಂಕದಿಂ ಪಂಕಜಗಳೇಳುವೆವು ಮೂಡಿ,
ಪಾದವನಲಂಕರಿಪ ಪೂಜೆಯಂ ಮಾಡಿ!