ಓ ನನ್ನ ಶ್ರದ್ಧೆ,
ಓ ಪ್ರಾಣಕಾಂತೆ! —

ಬಗೆಯ ಬಾನಿನಲ್ಲಿ ಕವಿಯುತಿತು ತಮದ ನಿದ್ದೆ;
ಕೃಪೆಯ ಕೈಯ ಕದಿರ ಸನ್ನೆಗಿದಿರುನೋಡುತಿದ್ದೆ;
ಚುಕ್ಕಿಚುಕ್ಕಿ ಮಿರುಗುತ್ತಿತ್ತು ಬುದ್ಧಿ ಶಾಸ್ತ್ರವಿದ್ಯೆ;
ಓ ನನ್ನ ಶ್ರದ್ಧೆ!

ಕೊರಗುತಿತ್ತು ಹೃಚ್ಚಕೋರ ಚಂದ್ರಚಾರು ಚಿಂತೆ;
ಹಾಲುಬೆಳಕು ಹೊಳೆಯ ಹರಿಸಿ ಬಂದು ಮುಂದೆ ನಿಂತೆ
ರೋಮರೋಮದಲ್ಲಿ ರಸದ ಮಿಂಚು ಹರಿಯುವಂತೆ,
ಓ ಪ್ರಾಣಕಾಂತೆ!