ಹಕ್ಕಿರದುಸಿರಿಗೆ ಹಕ್ಕಾದೆ;
ದಿಕ್ಕಿರದುಸಿರಿಗೆ ದಿಕ್ಕಾದೆ.
ಮನೆಬಿಟ್ಟವನಿಗೆ ಮನೆಯಾದೆ;
ಕಣ್ ಗೆಟ್ಟವನಿಗೆ ಕಣ್ಣಾದೆ;
ಒಲುಮೆಯ ಹೆಣ್ಣಾದೆ!
ಸಾವಿನ ಸರಸಕೆ ಬಲಿವೋದರಸಗೆ
ಅಮೃತದ ಹಣ್ಣಾದೆ!

ತೋಳ್ ತುಂಬಿದೆ ನಾ
ಹಸುಳೆಯವೊಲೆ ನಿನ್ನನು ನಂಬಿ;
ಬಾಳ್ ತುಂಬಿದೆ ನೀ
ತಾಯಿಯವೊಲೆ ನನ್ನಸು-ಚುಂಬಿ!
ಪ್ರೇಮದ ಸತಿಯಾದೆ; ಜೀವನ ರತಿಯಾದೆ;
ಜೀವಗೆಳತಿಯಾದೆ,
ಜೀವಕೆ ಗತಿಯಾದೆ!
ಶ್ರೀಮತಿ… ಯಾದೆ!