ಷೋಡಶೀ, ಷೋಡಶೀ,
ಮೂಡಿ ಬಾ, ಷೋಡಶೀ!
ಬಾಳ ಕವಿಯೆ ಕಾಳ ನಿಶಿ
ಮೂಡುವೋಲು ಪೂರ್ಣಶಶಿ,
ಚಿನ್ಮಯಿ, ಹೃನ್ಮಯಿ,
ಮೂಡಿ ಬಾ, ಷೋಡಶೀ!

ಕತ್ತಲೇ ಅತ್ತಲೇ
ಓಡುವಂತೆ, ಷೋಡಶೀ,
ಚಂದ್ರಿಕಾ ಚಕೋರಿಯಾಗಿ
ಸೌಂದರ್ಯ ಸಾಂದ್ರೆಯಾಗಿ,
ಪ್ರೇಯಸೀ, ಪ್ರೇಯಸೀ,
ಮೂಡಿ ಬಾ, ಷೋಡಶೀ!

ಗಿರಿರಿಯಾ ಶಿರಶಿರದಾ
ಶಿಲಾತಲದಿ ಕ್ರೀಡಿಸಿ,
ಮರಮರದಲಿ ಮರ್ಮರಿಸಿ
ಅಲೆವ ಎಲರ ಒಲವರಸಿ,
ಷೋಡಶೀ, ಷೋಡಶೀ,
ಮೂಡಿ ಬಾ, ಷೋಡಶೀ!

ಷೋಡಶೀ, ಷೋಡಶೀ,
ಪ್ರಣಯನಾಕದುರ್ವಶೀ,
ಅನಿಂದಿತೇ, ಅಚುಂಬಿತೇ,
ಅನವರತಪ್ರಾಣರತೇ,
ಪ್ರೇಯಸಿ, ಪ್ರೇಯಸೀ,
ಮೂಡಿ ಬಾ, ಷೋಡಶೀ!

ಷೋಡಶೀ, ಷೋಡಶಿ,
ರಸಋಷಿಯಾ ಪ್ರೇಯಸೀ,
ನಿತ್ಯ ನಿರ್ದಿಗಂತಿನೀ
ಸಾಂತದೊಳೂ ಅನಂತೆ ನೀ!
ಪ್ರೇಯಸೀ, ಷೋಡಶೀ,
ಮೂಡಿ ಬಾ, ಷೋಡಶೀ!