ಹೊರಳುತಿಹೆನೀ
ಸಕ್ಕರೆಯ ಕೆಸರಿನಲ್ಲಿ;
ಸಿಕ್ಕಿರುವೆನೀ
ಜೇನುಸುಬಿನಲ್ಲಿ:
ನಿನ್ನ ಬೇವಿನ ಕಯ್ಯ
ರಕ್ಷೆಯಂ ನೀಡಯ್ಯ;
ನಿನ್ನ ನಖಕೃಪೆಯಿಂದ
ಎತ್ತಿ ಪೊರೆಯಯ್ಯ!

ಅತ್ತ ಬೆಳಕಿದೆ ಬಲ್ಲೆನಾದರೂ
ಕತ್ತಲೆಯ ಸವಿಯುನುಳಿಯಲೊಲ್ಲೆ.
ಹೆಳವನೆಂತೇರುವನೊ ಆ ಮೇರುಗಿರಿಗೆ?
ತಿಳಿದು ಕೃಪೆದೋರಿಳಿದು ಬಾ ಈ ದೀನಧರೆಗೆ!

ಇರುವುದು ಕಸಿದುಕೊಳ್ಳುವೆ ಎಂಬ ಭೀತಿ;
ನೀ ತರುವ ಆ ಬರುವುದರ ಮೇಲೆ ಪ್ರೀತಿ!
ನನ್ನ ಭಕ್ತಿಯೊ? ಬಣಜಿಗನ ತಕ್ಕಡಿಯ ರೀತಿ!
ಕೃಪೆದೋರಿ ಪೊರೆಯಲೆನ್ನನು ನಿನ್ನ ದಿವ್ಯನೀತಿ!