“ನಾನು ನಿಮ್ಮ ಶ್ರೀಮತಿ;
ನೀವು ನನ್ನ ಶ್ರೀಪತಿ!”
“ನನ್ನವಳೆ? ನನ್ನವಳೆ?
ನೀನು ನನ್ನವಳೆ?”
“ನಿಮ್ಮವಳೆ! ನಿಮ್ಮವಳೆ!
ನಾನು ನಿಮ್ಮವಳೆ!
ಇಂದಿಗೂ ಎಂದಿಗೂ
ನಾನು ನಿಮ್ಮವಳೆ!”
“ನನ್ನವಳು! ನನ್ನವಳು!
ನೀನು ನನ್ನ ಹೆಂಡತಿ!
ನಾವಿಬ್ಬರು ಎಂದೆಂದೂ
ಕೂಡಿ ಒಂದು ದಂಪತಿ! —
ನೀನು ನನ್ನ ಹೆಂಡತಿ! —
ಸಾಮಾನ್ಯವೆ ಈ ಸಂಗತಿ?
ನನ್ನವಳು! ನನ್ನವಳು!
ಆಃ! ನನ್ನ ಹೆಂಡತಿ!
ಏನದ್ಭುತ! ಏನಚ್ಚರಿ!
ಸಾಮಾನ್ಯವೆ ಸಂಗತಿ?
ಬ್ರಹ್ಮಾಂಡದ ಪತ್ರಿಕೆಗೂ
ಅತ್ಯದ್ಭುತ ಸಂಗತಿ!
ಸ್ವರ್ಣಕ್ಷರ ಸಂಗತಿ!”

“ಬಿತ್ತಿದವರು ಶಿವಪಾರ್ವತಿ;
ಬೆಳೆಸುತಿಹರು ಅಜ ಸರಸತಿ;
ಈ ಒಲವಿನ ಇನಿಜೇನನು
ಸವಿಯಿತಿಹರ್ ಅನಂಗ ರತಿ! —
ನಾನು ನಿಮ್ಮ ಶ್ರೀಮತಿ!
ನೀವು ನನ್ನ ಶ್ರೀಪತಿ!”