ಸುಂದರ ಮುಖ ಶಾಶ್ವತಸುಖ;
ನಶ್ವರದಲಿ ನಾಕಸಖ!
ಬಾಳ್ಬೇಸರ ಯವನಾಸುರ
ನರಸಿಂಹನ ವ್ಯಾಘ್ರನಖ!
ಹಾಲೌತಣ, ಜೇನೌತಣ,
ಚೆಲುವಿನೌತಣ;
ಎದೆಯೌತಣ, ಉಸಿರೌತಣ,
ಒಲವಿನೌತಣ್!
ಕಂಡನಿತೂ ಕಂಡನಿತೂ
ಕಣ್ ತಣಿಯದೌತಣ;
ಉಂಡನಿತೂ ಉಂಡನಿತೂ
ಮೆಯ್ ದಣಿಯದೌತಣ!
ಸುಂದರ ಮುಖ ಶಾಶ್ವತ ಸುಖ;
ನಶ್ವರದಲಿ ನಾಕಸಖ!

ದನಿ ದನಿ ದನಿ ಹನಿ ಹನಿ ಹನಿ
ಕಿವಿಗೆ ವೀಣೆಯೌತಣ;
ಝಣಝಣಝಣ ನೂಪುರಕ್ವಣ
ಪಂಚಪ್ರಾಣದೌತಣ;
ಹೂವಿನ ಕಣ, ಪರಿಮಳ ರಣ,
ಪ್ರಣಯ ರಸಪ್ರಾಂಗಣ!
ಕಟಿಯಿಂಚರ ತುಟಿಯಿಂಚರ
ಪಂಚಪ್ರಾಣದೌತಣ;
ಸರ್ವೇಂದ್ರಿಯ ರತಿಮಂದಿರ
ಪುಷ್ಪಧನ್ವನೌತಣ!
ಸುಂದರ ಮುಖ ಶಾಶ್ವತ ಸುಖ;
ನಶ್ವರದಲಿ ನಾಕಸಖ!
ಬಾಳ್ ಬೇಸರ ಯವನಾಸುರ
ನರಸಿಂಹನ ವ್ಯಾಘ್ರನಖ!