ಸುಂದರವಾಗಿರು: ಈ ಸೌಂದರ್ಯ,
ನಿನಗದೆ ಬಾಳಿನ ಸರ್ವೊತ್ತಮ ಕಾರ್ಯ!
ಸೌಂದರ್ಯವೆ ಶಿವಕರ್ತವ್ಯ;
ಸೌಂದರ್ಯವೆ ಸರ್ವೊತ್ತಮ ಗಂತವ್ಯ!
ಸೌಂದರ್ಯವೆ ಸತ್,
ಸೌಂದರ್ಯವೆ ಚಿತ್,
ಸೌಂದರ್ಯವೆ ಆನಂದ:
ಆ ಸಾಧನೆಗಾಗಿಯೆ ಈ ಸೃಷ್ಟಿಯ ಬಂಧ,
ಆ ಸಿದ್ಧಿಗೆ ಮೀಸಲು ಮುಕ್ತಿಯ ನಿತ್ಯಾನಂದ!

ಸುಂದರವಾಗಿರು: ಈ ಸೌಂದರ್ಯ,
ಇಂದ್ರಿಯ ಸೌಂದರ್ಯ,
ಪ್ರಾಣದ ಸೌಂದರ್ಯ,
ಚಿತ್ತದ ಸೌಂದರ್ಯ,
ಆತ್ಮದ ಸೌಂದರ್ಯ,
ಈ ಸೌಂದರ್ಯವೆ ಜೀವನಪುರುಷಾರ್ಥದ ಶಿವಕರ್ತವ್ಯ;
ಈ ಸೌಂದರ್ಯವೆ ಆ ಪುರುಷೋತ್ತಮ ಚಿರಗಂತವ್ಯ!

ಸುಂದರವಾಗಿರು:
ಸೌಂದರ್ಯದ ಸೇವೆಯ ನೀ ಮಾಡುವ ಮಹದುಪಕಾರ!
ಸುಂದರವಾಗಿರು:
ಸೌಂದರ್ಯದಿ ಸಿದ್ಧಿಪುದಾ ಭಗವತ್ ಸಾಕ್ಷಾತ್ಕಾರ!