ಪರ್ವತ ವಧೂ ಹೃದಯೇಶ್ವರ
ವರನಾದಾ ಅನಂತರ
ಸುರಶುಭಕಾ ಶಿವಶಿವೆಯರ
ಒಸಗೆಯಾಯ್ತೊ ಜಗಚ್ಚರ!

ಹರನೆಂದನು ಆಲಿಂಗಿಸಿ
ಸತಿಯ ಚುಂಬಿಸಿ:
“ನೀನು ಸುರ ಸರೋವರ,
ನಾನು ದೇವಕುಂಜರ!”

ಶಿವನ ಇಚ್ಛೆ ಮಿಥ್ಯೆಯಹುದೆ
ಶಕ್ತಿಯೊಡನಿರೆ?
ಅವನಿಚ್ಛ್ಯೆ ಸೃಷ್ಟಿಯಲ್ತೆ
ಅವಳೆ ಬಳಿಯಿರೆ?
ಶಿವನಾದನು ಸುರಕುಂಜರ;
ಶಿವೆಯಾದಳು ಸರೋವರ!
ಜುಮ್ಮೆಂದುದು ದೇವಾಸುರ,
ರೊಮಾಂಚಿಸೆ ಚರಾಚರ!

ಕ್ಷೀರವಾರ್ಧಿ ಕುಗ್ಗಿತೊ ಎನೆ
ಹಿಗ್ಗಿತಾ ಸರೋವರ;
ಸ್ಪರ್ಧಿಸಿತೆನೆ ಗಿರಿ ಮಂದರ
ವರ್ಧಿಸಿತ್ತು ಕುಂಜರ!
ಸರೋವರಕೆ ಅಂಚು ಕಟ್ಟಿ
ಸೊಗಸಿತು ಸುರನಂದನ;

ಅಪ್ಸರಿಯರ ಚಂದ್ರಗಾನ,
ವೃಂದವಿಹಗ ಕೂಜನ
ತಾನತಾನವುಕ್ಕುತಾಯ್ತು
ಸ್ವರಾಕ್ಷತಾ ಗುಂಜನ!

ಗಂಧರ್ವರ ಕೊರಳಿಂಚರ
ಕೊಂಚೆಯಂಚೆ ಕೊಳರ್ವಕ್ಕಿಯ
ರೂಹುವೆತ್ತು ಇಳಿತರೆ,
ನೋಳ್ಪ ಸುರರ ಕಣ್ಗಳರಳಿ
ಮೂಡಿತು ಮಹಾ ಕೊಳದ ಮೆಯ್ಗೆ
ನೂರು ಕೋಟಿ ತಾವರೆ!

ಸರೋ ನೀವಿ ಕೆದರಿ ಸೂಸೆ
ದುಮುಕಿತು ಐರಾವತ;
ಕೈಗೂಡಿತು ನೀರ್ ನಿರಿಯೊಳೆ
ಅಗ್ನಿಯ ಸಮನೋರಥ!
ಸತನುವಾದನತನು ರತಿಗೆ:
ಯೋಗೀಶ್ವರ ತ್ಯಾಗೀಶ್ವರ
ಹರನಾದನು ಗಿರಿಜಾತೆಗೆ
ಭೋಗೇಶ್ವರ ಮನ್ಮಥ!

ಹಗಲಾಯಿತು, ಇರುಳಾಯಿತು,
ದಿನ ಮೂಡಿತು, ದಿನ ಮುಳುಗಿತು;
ಪಕ್ಷವಾಯ್ತು, ಮಾಸವಾಯ್ತು,
ವರುಷ ವರುಷ ವರುಷ ಹೋಯ್ತು;
ಯುಗ ಬಂದಿತು; ಯುಗ ಸಂದಿತು;
ಬತ್ತದಾ ಸರೋವರ;
ಸೋಲದು ಸುರಕುಂಜರ!


ಹರನೆಂದನು ಆಲಿಂಗಿಸಿ
ಸತಿಯ ಚುಂಬಿಸಿ:
“ನೀ ಬಸಂತ ಬನಸಿರಿ!”
ಉಮೆಯೆಂದಳು ಮಂದ ಹಸಿತೆ
“ನೀವಾಗಿರಿ ವಿಹಂಗಮ
ನಿತ್ಯ ಜಂಗಮ!
ನೀವಾಗಿರಿ ಮಧುಕರ
ಮಧುರ ಝೇಂಕರ!
ನೀವಾಗಿರಿ ಪರ್ವತ
ಮಲಯ ಮಾರುತ!
ನಾಟ್ಯವಾಡಿ ನಲಿದು ಬನ್ನಿ
ಕಂಪ ಬೀರುತ!
ಸರ್ವಜೀವ ಜಡಗಳಲ್ಲಿ
ನೀವೆ ಗಂಡು; ನಾನೆ ಹೆಣ್ಣು.
ಸಕಲ ಸೃಷ್ಟಿಮೂಲದಲ್ಲಿ
ಪುರುಷ ಪ್ರಕೃತಿ ಎರಡು ಕಣ್ಣು.
ಶಿವ, ಶಕ್ತಿ; ಶಕ್ತಿ, ಶಿವ;
ಮಿಲನದಾಟವದುವೆ ಭವ!
ಭೋಗಲೀಲೆ ಸಾಗಿದೆ;
ನಾನು ನೀನು ಆಗಿದೆ!”


ಶಿವನೆಂದನು ಆಲಿಂಗಿಸಿ
ಸತಿಯ ಚುಂಬಿಸಿ: —
“ನಾ ಕುವೆಂಪು! ನೀನೆ ಹೇಮಿ!”
ಸತಿಗೆಂದನೋ ಶಿವಸ್ವಾಮಿ!! —
ಆ ಶಿವನ ಆ ಶಿವೆಯ
ಆಟದೊಂದು ಅಂಗ
ನನ್ನ ನಿನ್ನ ಸಂಗ!

ಹಿಂದೆ ಇದ್ದುದಿಂದು ಇಹುದು
ಮುಂದೆ ಬರುವುದೆಲ್ಲ
ಶಿವನ ಶಿವೆಯ ಆಟದೊಳಗು;
ಹೊರಗು ಎಂಬುದಿಲ್ಲ:

ಆನಂದದ ಅಂಶವಲ್ತೆ
ನಮ್ಮನೋವೂ?
ಅಮೃತತ್ವದ ಅಂಗವಲ್ತೆ
ನಮ್ಮ ಸಾವೂ?

ಶಿವ ಶಿವಾಣಿಯಾಟ
ನನ್ನ ನಿನ್ನ ಬೇಟ!