“ಹೆಣ್ಣು ಕೊರಳಿಗೆ ಬಿಗಿವ
ಕಲ್ಲು ಗುಂಡು!”
ಎನಬೇಡ; ಕೇಳೆನ್ನ,
ಮದುವೆಗಂಡು:

ಸಂಸಾರ ಸಾಗರದಿ
ಹೆಣ್ಣು ಗಂಡು
ಕುತ್ತಿಗೆಗೆ ಗುಂಡಲ್ಲ,
ಬೆನ್ಗೆ ಬೆಂಡು!

ಈಜಿ ಕೈ ಸೋತಂದು
ರೇಜಿಗೆಯು ಹಿಡಿದಂದು
ಮುಳುಗಲೀಯದೆ ನಿಂದು
ಹೊರೆವುದಯ್ಯ!

ಬಾಳು ಹುಣ್ಣಾದಂದು
ಬಳಲಿ ಬೆಂಡಾದಂದು
ಹೆಣ್ಣೆ ಹರಣವ ತಂದು
ಹೊರೆವಳಯ್ಯ!