ನಡು ಹಗಲು; ನಿಡು ಹಗಲು;
ನೀರಸತೆ; ಬೇಸರಿಕೆ:
ದಹಿಸುವುದು ಬೇಗೆ.
ನೀನಿಲ್ಲದಿವನು ನಾ
ಸಹಿಸುವುದು ಹೇಗೆ?

ಸೂರ್ಯನಾತಪ ತಾಪ
ತಾನುರಿವ ಕೂಪ,
ಭಾರ್ಯ ವಿರಹತಾಪ
ಮಿಗಿಲಗ್ನಿ ತಾಪ!

ತೂಕಡಿಪ ನಿಮಿಷಗಳೊ
ಕಾಲನಾಕಳಿಕೆ;
ತತ್ತರಿಪ ಗಂಟೆಗಳೊ
ಮಿತ್ತು ಬೊಬ್ಬುಳಿಕೆ!

ದಹಿಸೆ ಬಿಸಿಲಿನ ಬೇಗೆ,
ಕಾಗೆ ಕರ್ರನೆ ಕೂಗೆ,
ಹಾಳ್ ಹಗಲೆ ತಾನಾಗೆ
ಆಕಳಿಪ ಗೂಗೆ,
ನೀನಿಲ್ಲದಿವನು ನಾ
ಸಹಿಸುವುದು ಹೇಗೆ?