ಮಡದಿ ಅಪ್ಸರಿ!
ಮನೆಯೆ ನಂದನ!
ಮುಕ್ತಿಯೈಸಿರಿ
ಪ್ರೇಮಬಂಧನ!
ಗೃಹಿಣಿ ಅಪ್ಸರಿ!
ಗೃಹವೆ ನಂದನ!
ಮೋಕ್ಷದೈಸಿರಿ
ಮೋಹ ಬಂಧನ!
ಅತ್ತ ಜೀನಿಯಾ ಇತ್ತ ಡಾಲಿಯಾ
ಕೆಂಪು ಹಳದಿ ನೀಲಿಯಾ!
ಅಲ್ಲಿ ಚೆಂಡುಹೂ ಇಲ್ಲಿ ಚುಕ್ಕಿಹೂ
ಹವಳ ಮುತ್ತು ಹೊನ್ನಿನಾ!
ನೂರು ಕಣ್ಣ ನೋಟದಿ
ಇಂದ್ರನಾಗಿ ಬೇಟದಿ
ನಲಿಯೆ ಮನೆಯ ತೋಟದಿ
ನಾನು ಕುಸುಮ ಕೂಟದಿ,
ನೀನು ತೇಲಿ ಬಂದರೆ
ನೋಡುತೆನ್ನ ನಿಂದಿರೆ,
ನನ್ನ ಮೋಹಮಂದಿರೆ
ಓ ಪ್ರಾಣಮಂದಿರೆ,
ನೀನೆ ಅಪ್ಸರಿ!
ನಾನೆ ನಂದನ!
ಸ್ವರ್ಗದೈಸಿರಿ
ಹೇಮ ಬಂಧನ!
ನೋಟವಪ್ಸರಿ!
ಕೂಟ ನಂದನ!
ಮುಕ್ತಿಯೈಸಿರಿ
ಬಾಹುಬಂಧನ!