ನಾನು ಮೊದಲು ಮರುಳಾದದ್ದು ನಿನ್ನ ಆ
ಮುದ್ದು ಮುಖಕ್ಕೆ ;
ಆಮೇಲೆ ದಿನದಿಂದ ದಿನಕ್ಕೆ
ನಿನ್ನದೇ ಹಂಬಲಿಕೆ.

ನಿನಗಾಗಿ ಸೊರಗೀ ಸೊರಗೀ
ಒಣಕಲು ಕಡ್ಡಿಯಾಗಿ, ಜಟೆ ಗಡ್ಡಗಳ ಬಿಟ್ಟು
ಸ್ವಾಹಾಪತಿಗೆ ಹವಿಸ್ಸನ್ನರ್ಪಿಸುತ್ತಾ
ನಿನ್ನನ್ನು ಕುರಿತು ಮಂತ್ರಘೋಷಗಳಲ್ಲಿ ಕೊರಗಿದೆ.
ನನ್ನೊಳಗೆ ನಿನ್ನನು ಕುರಿತು ಅತ್ತದ್ದರ ಕೈಗೆಲ್ಲ
ಕನ್ನಡಿ ಕೊಟ್ಟು, ಅದರೊಳಗೆ ನಿನ್ನನ್ನು ತೋರಿಸುತ್ತಾ
ತೊಟ್ಟಿಲು ತೂಗಿದೆ ;
ಶತಮಾನಗಳ ಕಾಲ ನಿನ್ನನ್ನು ಅದಕ್ಕೆ ಇದಕ್ಕೆ
ಕಂಡ ಕಂಡದ್ದಕ್ಕೆ ಹೋಲಿಸುತ್ತಾ
ಪದ್ಯ ಗೀಚಿ ಬಿಸಾಕಿದೆ.

ಇಷ್ಟು ಮಾಡಿದರು ನೀನೋ ಇವತ್ತಿದ್ದಂತೆ
ನಾಳೆ ಇಲ್ಲ; ನಾಳೆ ಇರುವಂತೆ ಇವತ್ತಿಲ್ಲ :
ಕೆಲವು ದಿನ ನನಗಾಗಿ ಕೊರಗಿ
ಕೃಶಾಂಗಿಯಾದಂತೆ ತೋರುತ್ತ,
ಮತ್ತೆರಡು ದಿನಕ್ಕೇ ನಿಶ್ಚಿಂತಳಂತೆ ಪ್ರಮದೆಯಾಗಿ
ಆಕಾಶದಗಲ ನಗುತ್ತ
ನನ್ನನ್ನು ನಿನ್ನ ತಾಳಕ್ಕೆ ತಕ್ಕಂತೆ ಕುಣಿಸಿದೆ.

ಅವರಿವರು ಹೇಳಿದರು, ನಿನ್ನದು ಬರೀ
ಎರವಲು ಥಳಕು.
ಆದರೂ ನನಗೆ ನಿನ್ನದೆ ಹುಚ್ಚು.
ಇಲ್ಲ, ನಾ ಬಿಡುವುದಿಲ್ಲ ನಿನ್ನನ್ನು,
ಹೀಗೇ ಕಾಡಿಸುವ ಈ ನಿನ್ನನ್ನು,
ಒಂದಲ್ಲ ಒಂದು ದಿನ ಬಂದು ಅಪ್ಪುತ್ತೇನೆ
ಎಂದೆ.
ನಿನಗಾಗಿ ನೂರು ಸಲ ಹುಟ್ಟಿ, ನೂರು ಸಲ ಸತ್ತು
ಬೆಂದೆ.
ನನ್ನ ಹೊಸ ತಂತ್ರಾಲಯದೊಳಗೆ ನುಗ್ಗಿ ಹೊರಬಂದು
ನನ್ನ ಕೋರಿಕೆಯ ಕ್ಷಿಪಣಿಗಳನ್ನೆಸೆದೆ
ನಿನ್ನ ಹೃದಯದ ವರ್ತುಲದೆಡೆಗೆ.
ನೀನೋ ಕೊಂಕು ನಗೆ ನಕ್ಕು ಸದ್ದಿರದೆ ತಿರುಗಿದೆ.
ಕಡೆಗೆ ನಿನ್ನನು ಕುರಿತ ಹೊಟ್ಟೆಕಿಚ್ಚಿನ ಇವಳ
ಸೆಳೆತವನ್ನುಳಿದು,
ಗಾಳಿ-ಬಯಲುಗಳನ್ನೆ ಸೀಳುತ್ತ ನಿನ್ನ ಕಡೆ ಧಾವಿಸಿದೆ,
ನಿನ್ನ ಮುಖಮಂಡಲದ ಸೆಳೆತದೊಳಕ್ಕೆ
ಹೇಗೋ ನುಗ್ಗಿದೆ.
ನುಗ್ಗಿದರೆ ನಾನು ಕಂಡದ್ದೇನು !-
ದೂರದಿಂದಲೇ ನನ್ನನ್ನು ತಾರಮ್ಮಯ್ಯ ಆಡಿಸಿದ ಈ ನೀನು
ಒಂದು ಮಹಾ ಮರುಭೂಮಿ,
ನಾನಿಳಿದರೆ ನಿನ್ನಲ್ಲಿ, ಇಲ್ಲ ನನಗೆ ಉಸಿರಾಡಲೂ ಗಾಳಿ.
ನೀನು, ನನ್ನನ್ನು ಹೀಗೆ ಕಾಡಿಸಿ ಪೀಡಿಸಿದೆ ಈ ನೀನು
ಕೊಲೆಪಾತಕಿ.

ಇಲ್ಲ, ನೀನು ಬದುಕಿಸಲಾರೆ ; ಹುಟ್ಟಿಸಲಾರೆ ;
ಏನನ್ನೂ ಮಾಡಲಾರೆ.
ಬೇಡ, ಬೇಡ ನಿನ್ನಾಸೆ ನನಗೆ,
ಹೋಗುತ್ತೇನೆ ಹಿಂದಕ್ಕೆ
ಆ ಅವಳ ಸೆಳೆತಕ್ಕೆ ; ಹಸಿರು ಸೆರಗಿನ ಮೇಲೆ
ತಣ್ಣಗೆ ಸಾಯುವುದಕ್ಕೆ,
ಎಲೆಲೇ ಏ ಚಂದ್ರಮುಖೀ
ನಿನಗೆ ನಮಸ್ಕಾರ – ಹೋಗಿ ಬರುತ್ತೇನೆ ;
ನಾನು ಇದ್ದಲ್ಲೇ ಪರಮ ಸುಖಿ.